ಯೂಜೆನ್ ಡಲಕ್ರವ್ (1798-1863). ಪ್ರಖ್ಯಾತ ಫ್ರೆಂಚ್ ವರ್ಣಚಿತ್ರಗಾರ. 19ನೆಯ ಶತಮಾನದ ರೊಮ್ಯಾಂಟಿಕ್ ಕಲಾವಿದರಲ್ಲೇ ಅಗ್ರಗಣ್ಯ.

ಹುಟ್ಟಿದ್ದು ಪ್ಯಾರಿಸ್ ಬಳಿಯಿರುವ ಷರಾಂಟೊನ್ ಸೇಂಟ್ ಮಾರಸ್‍ನಲ್ಲಿ ಇಂಪೀರಿಯಲ್ ಲೀಸಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು 1861ರಲ್ಲಿ ಇಕೊಲ್ ಡ ಬೊ ಆಟ್ರ್ಸ್‍ನಲ್ಲಿ ಕಲಾವ್ಯಾಸಂಗ ಆರಂಭಿಸಿದ. ಪೀರ್‍ಗಾರೆನ್ನನ ಮಾರ್ಗದರ್ಶನದಲ್ಲಿ ನಿಯೋಕ್ಲಾಸಿಕಲ್ ಕಲಾಪರಂಪರೆಯ ಹಿನ್ನೆಲೆಯಲ್ಲಿ ವರ್ಣಚಿತ್ರಕಲಾ ತರಬೇತಿ ಪಡೆದ. ಈತನ ವ್ಯಕ್ತಿತ್ವ ಹಾಗೂ ಕಲೆಯ ಸಂಕೀರ್ಣತೆಗೂ ಆ ಕಾಲದ ರಾಜಕೀಯ ಹಾಗೂ ಮತೀಯ ಪರಿಸರಕ್ಕೂ ನಿಕಟ ಸಂಬಂಧವಿದೆ. ವ್ಯವಸ್ಥಿತ ಸಾಂಪ್ರದಾಯಿಕ ಸಾಮ್ರಾಜ್ಯಗಳು ಅಂದು ಅಳಿದುಹೋಗಿದ್ದವು. ಚರ್ಚುಗಳ ಪ್ರಭುತ್ವ ಪ್ರಧಾನವಾಗಿದ್ದ ಹೊಸಯುಗ ಆರಂಭವಾಗಿತ್ತು. ಅಲ್ಲದೆ ಶೀಘ್ರಪ್ರಗತಿ ಹಾಗೂ ಕ್ರಾಂತಿಯ ಮುನ್ಸೂಚನೆಗಳು ಕಾಣತೊಡಗಿದ್ದವು. ಈತನ ತಂದೆ ಫ್ರಾನ್ಸಿನ ಮಹಾ ಕ್ರಾಂತಿಯಲ್ಲಿ ಸಕ್ರಿಯ ಪಾತ್ರವಹಿಸಿದ್ದನೆಂಬುದೂ ಗಮನಾರ್ಹ.

ಸಾಮಾನ್ಯವಾಗಿ ಫ್ರೆಂಚ್ ಸಂಪ್ರದಾಯದಲ್ಲಿ ಎದ್ದುಕಾಣುವಂಥ ವ್ಯವಸ್ಥೆ ಹಾಗೂ ಸ್ಪಷ್ಟತೆ ಡಲಕ್ರವ್‍ನ ಕೃತಿಗಳಲ್ಲೂ ಪಡಿಮೂಡಿವೆ. ಪುರಾತನ ಕಲಾಕೃತಿಗಳನ್ನು ಅನುಕರಿಸುವುದರ ಮೂಲಕ ಈತನ ಕಲಾಸಾಧನೆ ಆರಂಭವಾಯಿತು. ರೂಬೆಂಜ್ó, ವೇರೊ ನೇ ಸೊ ಮುಂತಾದ ಪ್ರಾಚೀನ ಕಲಾವಿದರಿಂದ ಈತ ಆಕರ್ಷಿತನಾಗಿದ್ದನಲ್ಲದೆ ಲೂವರ್‍ನಲ್ಲಿ ಖ್ಯಾತಕಲಾವಿದನಾದ ಬೋನಿಂಗ್ಟನ್‍ನನ್ನು ಭೇಟಿಯಾಗಿ ಆತನಿಂದ ಇಂಗ್ಲಿಷ್ ಜಲವರ್ಣವಿಧಾನವನ್ನು ಪರಿಚಯ ಮಾಡಿಕೊಂಡಿದ್ದ. ಇಂಗ್ಲೆಂಡಿನ ಪ್ರಸಿದ್ಧ ಕಲಾವಿದನಾದ ಕಾನ್ಸ್ಟೇಬಲ್‍ನ ಹೇ ವೀನ್ ಎಂಬ ಕೃತಿ ಈತನ ಕಲೆಯ ಮೇಲೆ ವಿಶೇಷ ಪ್ರಭಾವ ಬೀರಿದ್ದುಂಟು. 1825ರಲ್ಲಿ ಈತ ಇಂಗ್ಲೆಂಡಿಗೆ ಹೋಗಿ ಅಲ್ಲಿನ ವರ್ಣಚಿತ್ರ ಶೈಲಿಯಲ್ಲಿ ಅಭ್ಯಸಿಸಿದ.

ಡಲಕ್ರವ್ ರಚಸಿದ ಪ್ರಾರಂಭದ ಕೆಲವು ಕಲಾಕೃತಿಗಳು 1822ರಲ್ಲಿ ಮೊದಲ ಬಾರಿಗೆ ಪ್ರದರ್ಶಿತವಾದವು. ಇವುಗಳಲ್ಲಿ ಡಾಂಟೆ ಅಂಡ್ ವರ್ಜಿಲ್ ಇನ್ ಹೆವನ್ ಅಥವಾ ಡಾಂಟೆ ಎಂಡ್ ವರ್ಜಿಲ್ ಇನ್ ಇನ್ಫರ್ನಲ್ ರೀಜನ್ಸ್ ಎಂಬ ಕೃತಿ ಆ ಕಾಲದ ರೊಮ್ಯಾಂಟಿಕ್ ಕಲಾಕ್ಷೇತ್ರದಲ್ಲೇ ಅದ್ಭುತವಾದ್ದು; ವರ್ಣಸಂಯೋಜನೆ, ಭಾವುಕತೆ ಹಾಗೂ ಭಾವೋದ್ರೇಕಗೊಳಿಸುವ ಭೀಕರತೆ ಮೊದಲಾದ ಗುಣಗಳು ಬಹುಮಾರ್ಮಿಕವಾಗಿ ಇದರಲ್ಲಿ ಮೂಡಿವೆ. ಈ ಕಲಾಕೃತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಲ್ಲಿ ಇದು ಮೈಕಲ್ಯಾಂಜೆಲೋನಿಂದಲೂ ಪ್ರಭಾವಿತವಾಗಿದೆ ಎಂಬುದು ತಿಳಿದೀತು. 1823-1827ರ ಸುಮಾರಿಗೆ ಈತ ರಚಿಸಿದ ಇತರ ಕೃತಿಗಳಲ್ಲಿ ದಿ ಮ್ಯಾಸಕರ್ ಎಟ್ ಕೀಯಾಸಸ ಹಾಗೂ ಡೆತ್ ಆಫ್ ಸಾಡ್ರ್ನ ಪೇಲಸ್ ಮುಖ್ಯವಾಗಿವೆ. ಈ ಕಲಾಕೃತಿಗಳಿಗಾಗಿ ಆರಿಸಿಕೊಂಡ ವಸ್ತುಗಳಿಗೂ ಸಮಕಾಲೀನ ರೋಮ್ಯಾಂಟಿಕ್ ಕವಿತೆಗಳಿಗೂ ಅನ್ಯೋನ್ಯ ಸಂಬಂಧವಿದೆ. ಡಾಂಟೆ, ಷೇಕ್ಸ್‍ಪಿಯರ್ ಮೊದಲಾದ ಪ್ರಸಿದ್ಧ ಕವಿಗಳೂ ಸಾಹಿತಿಗಳೂ ವರ್ಣಿಸಿರುವ ದೃಶ್ಯಗಳನ್ನೂ ಮಧ್ಯಕಾಲೀನ ಇತಿಹಾಸದಲ್ಲಿ ನಿರೂಪಿತವಾಗಿ ಐತಿಹಾಸಿಕ ಘಟನೆಗಳನ್ನೂ ಯಥಾವತ್ತಾಗಿ ಚಿತ್ರಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ತುರ್ಕಿಯ ವಿರುದ್ಧ ನಡೆಸಿದ ಗ್ರೀಕರ ದಾಳಿಯ ಹಿನ್ನೆಲೆಯಲ್ಲಿ ರಚಿಸಿದ ದಿ ಮ್ಯಾಸಕರ್ ಎಟ್ ಕೀಯಾಸ್ ಎಂಬ ಅದ್ಭುತಕೃತಿ ಅರ್ಥಪೂರ್ಣವಾಗಿದೆ. ಇದರಲ್ಲಿನ ಸ್ವಂತಿಕೆ ಹಾಗೂ ಕೋರೈಸುವ ಬಣ್ಣಗಳ ಸಮರ್ಥ ಪ್ರಯೋಗ ಮೆಚ್ಚುವಂಥದ್ದು ಗ್ರೀಕ್ ಸ್ವಾತಂತ್ರ್ಯ ಸಮರದಂಥ ಕೃತಿಗಳು ವಿರಳವೆಂದರೂ ತಪ್ಪಲ್ಲ. ಅಂತೆಯೇ ಈ ಕೃತಿಯನ್ನು ಫ್ರೆಂಚ್ ಸರ್ಕಾರ ಕೊಂಡುಕೊಂಡಿತು.

1827ರಲ್ಲಿ ಡಲಕ್ರವ್‍ನ 12 ಕೃತಿಗಳು ಪ್ರದರ್ಶಿತವಾದವು. ಬೈರನ್ನನ ಕವಿತೆಯೊಂದನ್ನು ಆಧರಿಸಿ ರಚಿಸಿದ ಕೃತಿ-ಡೆತ್ ಆಫ್ ಸಾಡ್ರ್ನಪೇಲಸ್ ಕಲಾಪ್ರೇಮಿ ಜನರ ಮೆಚ್ಚಿಗೆ ಪಡೆಯಲಿಲ್ಲ. ಅಷ್ಟೇ ಅಲ್ಲ ಅದು ಕಲಾವಿಮರ್ಶಕರ ಕಟುಟೀಕೆಗೊಳಗಾಯಿತು. ಆದರೂ ಫ್ರಾನ್ಸಿನ ರೊಮ್ಯಾಂಟಿಕ್ ಕಲಾಪಂಥದ ಬೆಳೆವಣಿಗೆಯಲ್ಲಿ ಇದು ಗಣನೀಯವಾದ ಕೃತಿಯಾಗಿದೆ. ಅನಂತರ ಡಲಕ್ರವ್ ರೋಮಾಂಚಕ ಐತಿಹಾಸಿಕ ಚಿತ್ರಗಳನ್ನು ರಚಿಸಿದ. ದಿ ಬ್ಯಾಟ್ಸ್ ಆಫ್ ನನ್ಸಿ, ಅಸ್ಯಾಸಿನೇಷನ್ ಆಫ್ ದಿ ಬಿಷಪ್ ಆಫ್ ಲೀಜ್ ಎಂಬ ಕಲಾಕೃತಿಗಳನ್ನು ಇಲ್ಲಿ ಉದಹರಿಸಬಹುದು. ಜುಲೈ 1830ರ ಫ್ರೆಂಚ್ ಮಹಾಕ್ರಾಂತಿಯ ಅನಂತರ ರಚಿಸಿದ ಅದ್ಭುತವಾದ ಕೃತಿಯನ್ನು ಮುಖ್ಯವಾಗಿ ಗಮನಿಸಬೇಕು. ಲಿಬರ್ಟಿ ಲೀಡಿಂಗ್ ದಿ ಪೀಪಲ್ ಎಂಬ ರೋಮಾಂಚಕ ಕೃತಿಯಲ್ಲಿ ಸ್ವಾತಂತ್ರ್ಯದೇವತೆ ಬಲಗೈಯಲ್ಲಿ ನೀಲಿಧ್ವಜವನ್ನು ಹಿಡಿದು, ಎಡಗೈಯಲ್ಲಿ ಬಂದೂಕನ್ನು ಧರಿಸಿ ಗಂಭೀರವಾಗಿ ಸ್ವಾತಂತ್ರ್ಯ ಸಂದೇಶವನ್ನು ಉದ್ಘೋಷಿಸುತ್ತ ಮುನ್ನುಗ್ಗುತ್ತಿರುವ ಆರ್ಭಟದ ದೃಶ್ಯ ಅತ್ಯಮೋಘವಾಗಿದೆ; ಮೈ ನವಿರೇಳಿಸುವಂತಿದೆ. ನವೀನ ಕಲ್ಪನೆಯ ಈ ಸಮರ್ಥಕೃತಿ ಜನಸಾಮಾನ್ಯರ ಸ್ವಾತಂತ್ರ್ಯಪ್ರಿಯತೆಗೆ ಹಿಡಿದ ಕನ್ನಡಿಯಂತಿದೆ.

1832ರಲ್ಲಿ ಡಲಕ್ರವ್ ಮರಾಕೋ, ಸ್ಪೇನ್, ಆಲ್ಜೀರಿಯ ಮುಂತಾದ ದೇಶಗಳಲ್ಲಿ ಪ್ರವಾಸಮಾಡಿದ. ಇದು ಈತನ ಕಲಾಜೀವನದ ಪ್ರಮುಖ ಘಟನೆಗಳಲ್ಲೊಂದು. ಮರಾಕೋ ಸುಲ್ತಾನನ ಆಸ್ಥಾನದಲ್ಲಿ ನಿಯೋಜಿತ ಸದಸ್ಯನಾಗಿ ಈತ ಆ ಪ್ರದೇಶದ ನಾನಾ ಕಡೆಗಳಲ್ಲಿ ತಿರುಗಾಡಿದ; ಅಲ್ಲಿಯ ವನಸೌಂದರ್ಯ ಜನರ ವರ್ಣಮಯ ಉಡುಗೆ ತೊಡುಗೆಗಳಿಂದ ಆಕರ್ಷಿತನಾದ. ಇವುಗಳ ಬಗೆಗೆ ತನ್ನ ದಿನಚರಿಯಲ್ಲಿ ರೇಖಾಚಿತ್ರಗಳನ್ನು ರಚಿಸಿಕೊಂಡ. ಇವನ್ನು ಆಧರಿಸಿ ಅನೇಕ ವರ್ಣಚಿತ್ರಗಳನ್ನು ರಚಿಸಿದ. ಇವುಗಳಲ್ಲಿ ಆಲ್ಜೀರಿಯನ್ ವಿಮೆನ್ ಇನ್ ದೇರ್ ಹೇರಮ್ (1834) ಎಂಬ ಕೃತಿ ಗಮನಾರ್ಹವಾಗಿದೆ. ಅರೇಬಿಯದ ಸುಂದರ ಸ್ತ್ರೀಯರು ಕೆಂಪು, ಹಸಿರು, ಹಳದಿ, ಮುಂತಾದ ವಿವಿಧ ಬಣ್ಣದ ಉಡುಪುಗಳನ್ನು ಧರಿಸಿರುವುದು. ಪರಸ್ಪರ ಸಂಭಾಷಣೆಯಲ್ಲಿ ಮಗ್ನರಾಗಿರುವುದು, ಸೇವಕಿಯರು ಸೇವೆ ಸಲ್ಲಿಸುತ್ತಿರುವುದು-ಇವೆಲ್ಲವೂ ನೈಜಸುಂದರವಾಗಿ ನಿರೂಪಿತವಾಗಿವೆ; ಸಾಂಪ್ರದಾಯಿಕ ಸೌಂದರ್ಯ ಹಾಗೂ ಮಾನವೀಯ ಸಹಭಾವನೆಗಳು ಸಮಂಜಸವಾಗಿ ಮಿಳಿತವಾಗಿವೆ.

ಲೂಯಿ ಫಿಲಿಪ್‍ನ ಸರ್ಕಾರ ಡಲಕ್ರವ್‍ನನ್ನು ವಾಸ್ತುಶಿಲ್ಪದ ಅಲಂಕರಣೆ ಮಾಡುವಂತೆ ನಿಯೋಜಿಸಿತು. ಅದರಂತೆ ಈತ ಫ್ರಾನ್ಸಿನ ಅನೇಕ ಅರಮನೆ. ವಾಚನಾಲಯ, ಚರ್ಚುಗಳಲ್ಲಿ ಮಾಡಿರುವ ಅಲಂಕರಣದ ಕೆಲಸ ಗಮನಾರ್ಹವಾಗಿದೆ. ಬರೋಕ್ ಶೈಲಿಯಲ್ಲಿ ಅನೇಕ ಬಿತ್ತಿಚಿತ್ರಗಳನ್ನು ಈತ ರಚಿಸಿದ ಧಾರ್ಮಿಕ ನಂಬಿಕೆ, ಐತಿಹ್ಯಗಳನ್ನು ಆಧರಿಸಿದ ಚಿತ್ರಗಳು ಈತನ ಕಲಾಪ್ರೌಢಿಮೆಗೆ ಸಾಕ್ಷಿಗಳಾಗಿವೆ. ದಿ ಜಸ್ಟಿಸ್ ಆಫ್ ದಿ ಟ್ರೌಜರ್ (1840) ಎಂಬ ಕೃತಿಯನ್ನು ಉದಾಹರಿಸಬಹುದು. ಕಣ್ಣುಕೋರೈಸುವ ಗಡಸು ಬಣ್ಣಗಳನ್ನು ಪ್ರಯೋಗಿಸಿದರೂ ವರ್ಣಸಾಮಂಜಸ್ಯ ಇದರಲ್ಲಿ ಸಮರ್ಥವಾಗಿ ಮೂಡಿದೆ. ವಾಸ್ತವವಾಗಿ ವರ್ಣಸಂಯೋಜನೆಯಲ್ಲಿ ಹೊಸಮನ್ವಂತರವನ್ನು ಸ್ಥಾಪಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಫ್ರೆಂಚ್ ಕಲಾಪ್ರಪಂಚದಲ್ಲಿ ಡಲಕ್ರವ್ ಶ್ರೇಷ್ಠ ವರ್ಣಕಲಾವಿದನಾಗಿದ್ದಾನೆ.

ಅನೇಕ ಧಾರ್ಮಿಕ, ಮತೀಯ ಚಿತ್ರಗಳನ್ನು ರಚಿಸಿದ್ದರೂ ಡಲಕ್ರವ್ ಸಾಂಪ್ರದಾಯಿಕ ಕಲಾವಿದನಾಗಿರಲಿಲ್ಲ. ಆದರೆ ಧರ್ಮದ ತಿರುಳನ್ನು ಸೂಚ್ಯವಾಗಿ ಈತ ನಿರೂಪಿಸಿದ್ದಾನೆ. ಶಿಲಾಮುದ್ರಣಕಲೆಯಲ್ಲೂ (ಲಿತೋಗ್ರಫಿ) ಈತ ಗಣನೀಯವಾದ ಪರಿಣತಿ ಪಡೆದಿದ್ದ. ಗಯಟೆಯ ಫೌಸ್ಟ್ (1827), ಷೇಕ್ಸ್‍ಪಿಯರ್‍ನ ಹ್ಯಾಮ್ಲೆಟ್ (1834, 43) ಮುಂತಾದ ಕೃತಿಗಳನ್ನು ಆಧರಿಸಿ ರಚಿಸಿದ ಚಿತ್ರಗಳನ್ನಿಲ್ಲಿ ಹೆಸರಿಸಬಹುದು. ಈತ ಆರಂಭಿಸಿದ (1823) ಜರ್ನಲ್ ಎಂಬ ಪತ್ರಿಕೆ 1854ರವರೆಗೂ ಪ್ರಕಟವಾಯಿತು.

1835ರಲ್ಲಿ ನಡೆದ ಪ್ರಸಿದ್ಧ ಪ್ರದರ್ಶನವೊಂದರಲ್ಲಿ (ಯೂನಿವರ್ಸಲ್ ಎಕ್ಸಿಬಿಷನ್) ಈತನ 35 ಕೃತಿಗಳು ಪ್ರದರ್ಶಿತವಾದುವು. ಆಗ ಈತನನ್ನು ಸನ್ಮಾನ ಮಾಡಿದ್ದಲ್ಲದೆ ಲೀಜನ್ ಆಫ್ ಆನರ್ ಎಂಬ ಪದವಿ ನೀಡಿ ಗೌರವಿಸಲಾಯಿತು. ಸಾಂಪ್ರದಾಯಿಕ, ಭಾವನಾತ್ಮಕ ಶೈಲಿಯಿಂದ ಆರಂಭವಾದ ಡಲಕ್ರವ್‍ನ ವರ್ಣಚಿತ್ರಶೈಲಿಯನ್ನು ಯಾವುದೇ ನಿರ್ದಿಷ್ಟ ಪಂಥಕ್ಕೆ ಸೇರಿಸುವಂತಿಲ್ಲ. ಕಾರಣ ಈತ ಎಲ್ಲ ಶೈಲಿಗಳಲ್ಲೂ ಎಲ್ಲ ಮಾಧ್ಯಮಗಳಲ್ಲೂ ಪ್ರಯೋಗಮಾಡಿದವ. ಆದರೂ ಈತನ ಬಹುತೇಕ ಕೃತಿಗಳಲ್ಲಿ ರೇಖಾವಿನ್ಯಾಸಕ್ಕಿಂತ ವರ್ಣವೈಖರಿ ಎದ್ದು ಕಾಣುತ್ತದೆ. ಈತ ಸುಮಾರು 6000 ಕಲಾಕೃತಿಗಳನ್ನು ಸೃಷ್ಟಿಸಿದನೆಂದು ಹೇಳಲಾಗಿದೆ. ಡಲಕ್ರವ್ ಖ್ಯಾತ ವರ್ಣಚಿತ್ರಗಾರನಾಗಿರುವಂತೆ ಶ್ರೇಷ್ಠ ಸಂಗೀತಪ್ರಿಯನೂ ಹೌದು. ಆಜೀವಪರ್ಯವಂತ ಸಂಗೀತಕ್ಕೆ ಈತ ಮಾರುಹೋಗಿದ್ದನೆನ್ನಲಾಗಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: