ಯಾನ ಎಂದರೆ ಮಾರ್ಗ, ದಾರಿ ಎಂದು ಸಾಮಾನ್ಯ ಅರ್ಥ. ಯಾನ ಪದವನ್ನು ವಾಹನ ಎಂಬ ಅರ್ಥದಲ್ಲೂ ಬೌದ್ಧದರ್ಮದಲ್ಲಿ ಬಳಸಲಾಗಿದೆ. `ಹೀನಯಾನ ಮತ್ತು `ಮಹಾಯಾನಗಳು ಬೌದ್ಧ ಧರ್ಮದ ಎರಡು ಪ್ರಸಿದ್ಧ ಶಾಖೆಗಳು.

ಈ ಪದ ಉಪನಿಷತ್ತುಗಳಷ್ಟೇ ಪ್ರಾಚೀನವಾದುದು. ಮರಣಾನಂತರ ಏನು ಎಂಬ ಪ್ರಶ್ನೆಗೆ ಬಹಳ ಗಂಭೀರವಾದುದು. ಜೀವಾತ್ಮ ದೇಹವನ್ನು ತ್ಯಜಿಸುವುದನ್ನೇ ಮರಣ ಎನ್ನಬಹುದು. ಹಾಗೆ ದೇಹವನ್ನು ತ್ಯಜಿಸಿದ ಮೇಲೆ ಜೀವಾತ್ಮನ ಗತಿ ಏನು ಎಂಬ ಪ್ರಶ್ನೆಗೆ ಉಪನಿಷತ್ತುಗಳು ಪಿತೃಯಾನ ಮತ್ತು ದೇವಯಾನ ಎಂಬ ಎರಡು ಪದಗಳಿಂದ ಉತ್ತರಿಸುತ್ತವೆ.

ಪಿತೃಯಾನ ಎಂದರೆ ಯಾರು ಈ ಜನ್ಮದಲ್ಲಿ ಸಮಾಜ ಸೇವೆಯನ್ನು (ಅಂದರೆ ಬಾವಿ ತೊಡಿಸುವುದು, ದಾನ ಧರ್ಮ ಮಾಡುವುದು ಇತ್ಯಾದಿ) ಮಾಡುವರೋ ಅವರ ಪ್ರಾಣ ಹಾರಿಹೋದ ಮೇಲೆ ಪಿತೃಯಾನ ಮಾರ್ಗವನ್ನು ಅನುಸರಿಸಿ ಮೊದಲು ಹೊಗೆಯನ್ನು ಪ್ರವೇಶಿಸಿ ಅನಂತರ ಕತ್ತಲೆಯನ್ನು ತದನಂತರ ಕೃಷ್ಣ ಪಕ್ಷವನ್ನು ಕೊನೆಗೆ ಚಂದ್ರಲೋಕವನ್ನು ಸೇರುತ್ತದೆ. ತಾವು ಮಾಡಿದ ಪುಣ್ಯ ಕಾರ್ಯಗಳ ಫಲ ತಿರುವ ತನಕ ಅವರು ಚಂದ್ರಲೋಕದಲ್ಲಿದ್ದು ಅನಂತರ ವಾಯು, ಹೊಗೆ, ಇಬ್ಬನಿ, ಮೋಡ, ಮಳೆ, ಆಹಾರ ಮತ್ತು ಬೀಜವಾಗಿ ಮನುಷ್ಯನ ಆಹಾರದಲ್ಲಿ ಸೇರಿ ವೀರ್ಯವಾಗಿ, ತಾಯಿಯ ಗರ್ಭವನ್ನು ಸೇರಿ ಪುನಃ ಜನ್ಮ ಪಡೆಯುತ್ತಾರೆ. ಹೀಗೆ ಪಿತೃಯಾನದ ಪ್ರಕಾರ, ಚಂದ್ರಲೋಕ ಜೀವಾತ್ಮನ ತಂಗು ನಿಲ್ದಾಣವಾಗಿದೆ. ತದನಂತರ ಅದು ಮತ್ತೆ ಭೂಮಿಗೆ ಬರುತ್ತದೆ.

ದೇವಯಾನ ಶ್ರದ್ಧೆ, ತಪಸ್ಸುಗಳಿಗೆ ಸಂಬಂಧಪಟ್ಟದ್ದು, ಶ್ರದ್ಧೆಯಿಂದ ತಪಸ್ಸನ್ನು ಮಾಡುವವರು ಮರಣಾನಂತರ ಅನುಕ್ರಮವಾಗಿ ಹೊಗೆ, ದಿನ, ಶುಕ್ಲಪಕ್ಷ, ಸೂರ್ಯ, ಚಂದ್ರ, ಮಿಂಚುಗಳಾಗಿ ಅಂತಿಮದಲ್ಲಿ ಬ್ರಹ್ಮಸಾಕ್ಷಾತ್ಕಾರವನ್ನು ಪಡೆಯುತ್ತಾರೆ. ಹೀಗೆ ಜೀವಾತ್ಮ ಬ್ರಹಜ್ಞಾನದಿಂದ ದೇವಯಾನದ ಮೂಲಕ ಬ್ರಹ್ಮವನ್ನು ಸೇರುತ್ತಾನೆ ಎನ್ನಲಾಗಿದೆ. ದೇವಯಾನದಿಂದ ಬ್ರಹ್ಮವನ್ನು ಸೇರಿದ ಜೀವಾತ್ಮನಿಗೆ ಪುನರ್ಜನ್ಮವಿಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಯಾನ&oldid=1100358" ಇಂದ ಪಡೆಯಲ್ಪಟ್ಟಿದೆ