ಯಲ್ಲಮ್ಮನ ಆರಾಧನೆ
ಶಕ್ತಿದೇವತೆ ಯಲ್ಲಮ್ಮ ಉತ್ತರ ಕರ್ನಾಟಕದ ಬಹುಜನಪ್ರಿಯ ದೇವತೆ. ದಕ್ಷಿಣ ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಯಲ್ಲಮ್ಮನ ಭಕ್ತರಿದ್ದಾರೆ. ಮಧ್ಯಕಾಲೀನ ಕರ್ನಾಟಕದ ಶೈವ, ವೈಷ್ಣವ ಹಾಗೂ ತಾಂತ್ರಿಕ ಪಂಥಗಳ ಹತ್ತು ಹಲವು ಆರಾಧನೆಗಳ ನಡುವೆಯೂ ತನ್ನದೇ ವಿಶಿಷ್ಟತೆಯಲ್ಲಿ ಒಂದು ಬಲಿಷ್ಟ ಸಂಪ್ರದಾಯವಾಗಿ ಬೆಳೆದ ಯಲ್ಲಮ್ಮನ ಆರಾಧನೆ ಇಂದಿಗೂ ಲಕ್ಷಾಂತರ ಜನರ ಧಾರ್ಮಿಕ ವಿಷಯವೇ ಅಗಿದೆ. ಯಲ್ಲಮ್ಮನ ಮೂಲದಲ್ಲಿ ಸಮೃದ್ದಿ ದೇವತೆಯಿರಬಹುದು ಎಂಬುದು ಹಲವು ವಿದ್ವಾಂಸರ ಆಭಿಪ್ರಾಯ. ಏಕೆಂದರೆ ಯಲ್ಲಮ್ಮನ ಭಕ್ತರು ಹೊರುವ ಕೊಡವಾಗಲೀ, ಜಗವಾಗಲೀ ಸಮೃದ್ದಿಯ ಸಂಕೇತ. ಅಷ್ಟೇ ಅಲ್ಲದೆ ಇವರ ಕುಣಿತ ಕೂಡ ಮಂಡಲಾಕಾರ ವೃತ್ತದಲ್ಲಿರುವುದರಿಂದ ಇದೊಂದು ಸಮೃದ್ದಿ ಆರಾಧನೆಯ ಸಂಕೇತವೇ ಇರಬೇಕೆಂಬುದು ಇವರ ಆಭಿಮತ.
ಇತಿಹಾಸ
ಬದಲಾಯಿಸಿಇಂದು ಯಲ್ಲಮ್ಮನ ಬಗೆಗಿರುವ ಪುರಾಣಗಳಾಗಲೀ, ಈ ಪುರಾಣಗಳ ಜೊತೆಗೆ ದಶಾವತಾರಗಳಲ್ಲಿ ಒಬ್ಬನೆನಸಿದ ಪರುಶುರಾಮನ ಸೇರ್ಪಡೆಯಾಗಲೀ, ಜೋಗಮ್ಮ ಜೋಗಪ್ಪಗಳ ವಿಶಿಷ್ಡಾಚರಣೆಯಾಗಲೀ, ಆಳವಾದ ಅಧ್ಯಯನ ಹಾಗೂ ಸಂಶೋಧನೆ ಬಯಸುವ ಸಂಗತಿಗಳಾಗಿಯೇ ಉಳಿಯುತ್ತವೆ. ಯಲ್ಲಮ್ಮ, ಹುಲಿಗೆಮ್ಮ, ರೇಣುಕಾ ಇತ್ಯಾದಿ ಹೆಸರುಗಳಿಂದ ಉತ್ತರ ಕರ್ನಾಟಕದಾದ್ಯಂತ ಆರಾಧನೆಗೊಳ್ಳುವ ಈ ದೇವತೆಯ ಗುಡಿಗಳು ಹತ್ತಾರು ಕಡೆಗಳಲ್ಲಿ ಕಂಡು ಬರುತ್ತವೆ. ಅವುಗಳಲ್ಲಿ ಪ್ರಮುಖವಾದುದು " ಬೆಳಗಾವಿ ಜಿಲ್ಲೆಯ ಸೌದತ್ತಿ", ಹೊಸಪೇಟೆ ಬಳಿಯ ಹುಲಗಿಯ ಹುಲಿಗೆಮ್ಮ ಹಾಗೂ ಚಂದ್ರಗುತ್ತಿಯ ರೇಣುಕೆ ಕೂಡ ಇಲ್ಲಿ ಉಲ್ಲೇಖಾರ್ಹ ಎಂದು ಹೇಳಬಹುದು.
ಹಿನ್ನಲೆ
ಬದಲಾಯಿಸಿರೇಣುಕ ಎಂಬ ರಾಜನಿಗೆ ಮಕ್ಕಳಿರಲಿಲ್ಲ. ಹಾಗಿರುವಾಗ ಆತ ಶಿವನನ್ನು ಕುರಿತು ತಪಸ್ಸು ಮಾಡಿದಲ್ಲದೆ, ತನ್ನ ಪತ್ನಿ ಲಕ್ಷೀದೇವಿಯೊಂದಿಗೆ ವ್ರತಾಚರಣೆಯನ್ನೂ ಮಾಡಿದ. ಶಿವನ ಕರುಣೆಯಿಂದ ಆತನಿಗೆ ಒಂದು ಹೆಣ್ಣು ಮಗು ಜನಿಸಿತು. ನಾಮಕರಣ ಸಂದರ್ಭಕ್ಕೆ ಜ್ಯೋತಿಷ್ಯರನ್ನು ಕರೆಸಿ ಜ್ಯೋತಿಷ್ಯ ಕೇಳಲಾಯಿತು. ಆಗ ಜ್ಯೋತಿಷ್ಯರು ಆ ಮಗುವಿನ ಜನ್ಮಕುಂಡಲಿಯನ್ನು ನೋಡಿ ಶಿಶುವಿನ ತಂದೆಗೆ ಆರು ತಿಂಗಳೊಳಗೆ ತಾಯಿಗೆ ಹನ್ನರೆಡು ತಿಂಗಳೊಳಗೂ ಮರಣ ಸಂಭವಿಸುತ್ತದೆಂದು ಹೇಳುತ್ತಾರೆ. ಜೋತಿಷ್ಯರ ಭವಿಷ್ಯ ದಿಟವಾಯಿತು. ತಂದೆ ತಾಯಿ ತೀರಿಕೊಂಡರು. ತೀರಿಕೊಂಡ ರೇಣುಕ ಬ್ರಾಹ್ಮಣನಾಗಿದ್ದವನು. ಆ ಕಾಲದಲ್ಲಿ ಬ್ರಾಹ್ಮಣ ಕನ್ಯೆಗೆ ಒಂಬತ್ತು ವರ್ಷದೊಳಗೆ ಮದುವೆಯಾಗಬೇಕಾಗುತ್ತಿತ್ತು. ಆದರೆ ತಂದೆ ತಾಯಿ ಇಲ್ಲದ ಈ ಹೆಣ್ಣಿಗೆ ಲಗ್ನ ನಡೆಯುವ ಸಾಧ್ಯತೆಯೇ ಕಂಡುಬರಲಿಲ್ಲಿ. ಆಕೆಯನ್ನು ಅನಾಥಳೆಂದು ನೆರೆಹೊರೆಯವರು ಕರೆಯತೊಡಗಿದರು. ಇದರಿಂದ ಬೇಸರಗೂಂಡ ಆಕೆ ಒಂದು ಮಂಗಳವಾರ ಅರ್ಧರಾತ್ರಿಯ ಹೊತ್ತಲ್ಲಿ ಮನೆ ಬಿಟ್ಟು ಕಾಡಿನತ್ತ ಹೊರಟುಹೋದಳು. ಹಾಗೆ ಕಾಡಿಗೆ ಹೋದ ಈ ಹೆಣ್ಣು ಮಗುವನ್ನು ಕಾಡುಪ್ರಾಣಿಗಳು ತಿನ್ನಲಿಲ್ಲ, ಗದರಿಸಲಿಲ್ಲ. ಆಕೆ ಗೆಡ್ಡೆಗೆಣಸುಗಳನ್ನು ತಿಂದುಕೊಂಡು ಕಾಡಿನಲ್ಲಿ ವಾಸಿಸತೊಡಗಿದಳು. ಹೀಗಿರುವಾಗ ಒಂದಾನೊಂದು ದಿನ ಕಾರ್ತಿವೀರಾರ್ಜುನನೆಂಬ ರಾಜ ಅಲ್ಲಿಗೆ ಬೇಟೆಯಾಡುವುದಕ್ಕೆ ಬಂದ. ಆತ ಈಕೆಯನ್ನು ಕಂಡು ತನ್ನ ರಾಜಧಾನಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ. ಮೊದಮೊದಲು ಆಕೆ ಒಪ್ಪಲಿಲ್ಲ, ಆಮೇಲೆ ಒತ್ತಾಯಪಡಿಸಿ ಕರೆದುಕೊಂಡು ಹೋದ. ಅಲ್ಲಿ ಎರಡು ವರ್ಷ ಕಳೆದ ನಂತರ ಆಕೆ ಋತುಮತಿಯಾದಳು. ಆ ಬಳಿಕ ಅಲ್ಲಿರಲು ಇಷ್ಟಪಡದೆ ಹೊರ ಹೊರಟಳು. ಮುಂದೆ ಬಂದವಳೇ ತನ್ನ ಹಣೆಯ ಮೇಲಿನ ಭಂಡಾರವನ್ನು ತೆಗೆದು ಭೂಮಿಗೆ ಅಪ್ಪಳಿಸಿದಳು. ಆಗ ಮಾಯದ ಸಮುದ್ರ ಸೃಷ್ಟಿಯಾಯಿತು. ಅದರಲ್ಲಿ ಆಕೆ ಮಿಂದು ಶುಚಿಯಾಗಿ ಮುಂದೆ ಕಲ್ಯಾಣಿಯ ಬಳಿಗೆ ಬಂದಳು. ಅಲ್ಲಿ ಜಮದಗ್ನಿ ಋಷಿ ಆಕೆಯನ್ನು ಮೋಹಿಸಿದ. ಅವರೀರ್ವರು ಲಗ್ನವಾದರು, ಕಾಲಕ್ರಮೇಣ ಆಕೆಗೆ ಒಬ್ಬ ಮಗ ಹುಟ್ಟಿದ, ಅವನೇ ಪರಶುರಾಮ, ಮುಂದೆ ಇಂದ್ರ ಆಕೆಯ ಪತಿವ್ರತ್ಯವನ್ನು ಭಂಗ ಮಾಡುತ್ತಾನೆ. ಆಗ ಆಕೆಯ ಮಗನಾದ ಪರಶುರಾಮನೇ ಆಕೆಯ ತಲೆ ಕಡಿಯುತ್ತಾನೆ. ಆಗ ಕತ್ತರಿಸಿದ ಆಕೆಯ ಶಿರದ ಬದಲಿಗೆ ಸಾವಿರಾರು ಶಿರಗಳು ಉದ್ಬವವಾದವು. ಕಲಿಯುಗದಲ್ಲಿ ಆಕೆ ಹುತ್ತದ ಕೊವೆಯೊಳಗೆ ಸೇರಿದಳು. ಇದೀಗ ಆಕೆ ತನ್ನ ಭಕ್ತರು ತನಗೇ ವಂದಿಸುತ್ತಾರೋ, ನಿಂದಿಸುತ್ತಾರೋ ಎಂದು ನೋಡುವ ಸಲುವಾಗಿ ಜಗವನ್ನೆ ಹೊತ್ತುಕೊಂಡು ಬೀದಿ ಮೇಲೆ ಬರುತ್ತಾಳೆ". ವಯಸ್ಸಾಗಿದ್ದ ಜಮದಗ್ನಿ ಮುನಿ, ಏರುವ್ವನೆಯಾದ ರೇಣುಕೆಯನ್ನು ಮದುವೆಯಾದ. ಅವನ್ನು ಸಿಂಬೆಯನ್ನಾಗಿ ಮಾಡಿಕೊಂಡು, ಮರಳನ್ನು ಕೊಡವನ್ನಾಗಿ ಮಾಡಿಕೊಂಡು ರೇಣುಕ ನೀರು ತರುತ್ತಿದ್ದಳು. ಒಂದುದಿನ ಗಂಡನ ನಿತ್ಯಕರ್ಮ ಅನುಷ್ಟಾನಗಳಿಗೆ ಬೇಕಾದ ನೀರನ್ನು ತರಲು ಹೋದಾಗ, ಸರೋವರದಲ್ಲಿ ಜಲಕ್ರೀಡೆಯಡುತ್ತಿದ್ದ ಚಿತ್ರರಥನೆಂಬ ಗಂಧರ್ವನನ್ನು ಕಂಡು ರೇಣುಕೆಯ ಚಿತ್ತ ಚಂಚಲವಾಗುತ್ತದೆ. ಕ್ಷಣಹೊತ್ತು ಮೈಮರೆತು ಆ ಜಲಕ್ರೀಡೆಯನ್ನು ನೋಡುತ್ತಾ ನಿಲ್ಲುತ್ತಾಳೆ. ಅಂದು ತಡವಾಗಿ ಆಶ್ರಮಕ್ಕೆ ಬಂದಾಗ ಕೋಪಗೊಂಡ ಜಮದಗ್ನಿ ಇವಳ ಪಾವಿತ್ರ್ಯತೆಯವನ್ನು ಶಂಕಿಸಿ ಕುಷ್ಟರೋಗಿಯಾಗೆಂದು ಶಾಪ ಕೊಡುತ್ತಾನೆ. ಈ ಶಾಪದಿಂದ ಕುಷ್ಟರೋಗಿಯಾಗಿ ರೇಣುಕೆ ನರಳುತ್ತಾ ತಿರುಗುತ್ತಾಳೆ. ಅಗ "ಎಕ್ಕಯ್ಯ ಮತ್ತು ಜೋಗಯ್ಯ" ಎಂಬ ಮುನಿಗಳು ಇವಳಿಗೆ ನೀರಿನ ಕುಂಡದಲ್ಲಿ ಸ್ನಾನ ಮಾಡಲು ಹೇಳಿ, ರೋಗವನ್ನು ಗುಣಪಡಿಸುತ್ತಾರೆ. ರೋಗ ಸಂಪೂರ್ಣ ಗುಣವಾದ ನಂತರ ಮತ್ತೆ ರೇಣುಕೆ ಜಮದಗ್ನಿಯ ಆಶ್ರಮಕ್ಕೆ ಬಂದಾಗ, ಇವಳನ್ನು ನೋಡಿದ ಜಮದಗ್ನಿ, ಮಗ ಪರುಶುರಾಮನನ್ನು ಕರೆದು ಇವಳ ಶಿರಚ್ಛೇದನ ಮಾಡಲು ಆಜ್ಞೆ ಮಾಡುತ್ತಾನೆ. ತಂದೆಯ ಆಜ್ಞೆಯಂತೆ ಪರುಶುರಾಮ ತಾಯಿ ರೇಣುಕೆಯ ಶಿರಚ್ಛೇದನ ಮಾಡುತ್ತಾನೆ. ಹೀಗೆ ಶಿರಚ್ಛೇದನವಾದಾಗ ನೆಲಕ್ಕೆ ಬಿದ್ದ ರೇಣುಕೆಯ ಒಂದು ರುಂಡದಿಂದ, ಆನೇಕ ರುಂಡಗಳಾಗಿ ಆದೇ ಗ್ರಾಮದೇವತೆಗಳಾದವೆಂದು ಜನಪದ ಕಥೆ ಹೇಳುತ್ತದೆ. ಇಂದಿಗೂ ಕೂಡ ರುಂಡಗಳಿಗೆ ಪೂಜೆ ಮಾಡುವುದನ್ನ ಕಾಣಬಹುದಾಗಿದೆ. ಯಲ್ಲಮ್ಮನ ಬಗೆಗೆ ದೊರೆಯುವ ಆನೇಕ ಕಥೆಗಳನ್ನು ಗಮನಿಸಿದರೆ ಅಂತಿಮವಾಗಿ ಅದು ಒಂದು ಸಾಮಾಜಿಕ ವ್ಯವಸ್ಥೆಯ ವಿರುದ್ದ ಸ್ತ್ರೀಯೊಬ್ಬಳ ಪ್ರತಿಭಟನೆಯನ್ನು ಚೌಡಿಕೆಯ ತಾರಕ ಸ್ವರದಲ್ಲಿ ಹೇಳುತ್ತಿರುವಂತೆ ಭಾಸವಾಗುತ್ತದೆ. ವಿವಾಹವಾಗದ ಹೆಣ್ಣು ಮಗಳನ್ನು ಕಾಡಿಗೆ ಬಿಡುವ, ಕಠೋರವಾದ ಲೈಂಗಿಕ ನಿಯಮಗಳ, ಭ್ರಷ್ಟಗೊಂಡ ಜಾತಿವ್ಯವಸ್ಥೆಯ ಹಾಗೂ ಪುರುಷ ಪ್ರಾಧಾನ್ಯತೆಯ ವಿರುದ್ದವಾದ ಪ್ರತಿಭಟನೆಯಾಗಿ ಆ ಪಾಠಾಂತರಗಳು ಅರ್ಥ ಸಹಿತವಾಗಿರುತ್ತದೆ.
ಉಲ್ಲೇಖ
ಬದಲಾಯಿಸಿ- ಹಿ. ಚಿ ಬೋರಲಿಂಗಯ್ಯ, ಕರ್ನಾಟಕದ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ. ಹಂಪಿ ವಿದ್ಯಾರಣ್ಯ, ಪುಟ ಸಂಖ್ಯೆ: ೭೭ - ೭೮.