ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕದ ಅಂಚಿನಲ್ಲಿರುವ ಯಡವನಹಳ್ಳಿ ಕ್ರೈಸ್ತ ಧರ್ಮಸಭೆಗೆ ಸುಮಾರು ನೂರೈವತ್ತು ವರ್ಷಗಳ ಇತಿಹಾಸವಿದೆ. ಅಂದು ದೊಡ್ಡಮನೆ ಚಿನ್ನಪ್ಪನವರ ಒಂದೇ ಕುಟುಂಬದಿಂದ ಶುರುವಾಗಿ ಇಂದು ಸುಮಾರು ಅರವತ್ತು ಕುಟುಂಬಗಳಿಂದ ವಿಜೃಂಭಿಸುತ್ತಿರುವ ಈ ಸಮುದಾಯ ಪ್ರಗತಿ ಪಥದಲ್ಲಿ ಸಾಗುತ್ತಾ ಧರ್ಮಸಭೆಗೆ ಯಾಜಕರನ್ನೂ ಸನ್ಯಾಸಿನಿಯರನ್ನೂ ನೀಡಿದೆ. ಮೊದಲಿಗೆ ದೊಡ್ಡಮನೆ ಚಿನ್ನಪ್ಪನವರು ದಾನವಾಗಿ ನೀಡಿದ ಜಮೀನಿನಲ್ಲಿ ಕಟ್ಟಿದ ಸಂತ ಅಂತೋಣಿಯವರ ಪುಟ್ಟ ಗುಡಿಯು ಜಪತಪಧ್ಯಾನಗಳಿಗೆ ಆಸರೆಯಾಗಿತ್ತು. ಆನೆಕಲ್ಲಿನಿಂದ ಇಲ್ಲಿಗೆ ಜೆಸ್ವಿತ್ ಪಾದ್ರಿಗಳು ಬಂದು ಸಮುದಾಯದ ಧಾರ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದರು. ನಂತರದ ದಿನಗಳಲ್ಲಿ ಬೇಗೂರಿನಿಂದ ಫಾದರ್ ಬೆಂಜಮಿನ್ ಡಿಸೋಜ ಸ್ವಾಮಿಯವರು ಬಂದು ಪೂಜೆ ಅರ್ಪಿಸಿ ಒಂದು ದಿನ ಉಳಿಯುತ್ತಿದ್ದರು. ಹೊಸದಾಗಿ ಕೊಳ್ಳಲಾದ ಭೂಮಿಯಲ್ಲಿ ಸುಮಾರು ೭೦೦ ಚದರಅಡಿಗಳ ಕೆಂಪುಹೆಂಚಿನ ಸೂರು ಹೊದ್ದ ದೇವಾಲಯವನ್ನು ಕಟ್ಟಿಸಿದ ಅವರು ಊರ ಜನತೆಗೆ ತುಂಬಾ ಉಪಕಾರ ಮಾಡಿದ್ದಾರೆ. ಆ ಹಳೆಯ ದೇವಾಲಯದಲ್ಲಿಯೇ ಕಳೆದ ಅರುವತ್ತು ವರ್ಷಗಳಿಂದಲೂ ಪೂಜೆ ಪ್ರಾರ್ಥನೆಗಳನ್ನು ಅರ್ಪಿಸಲಾಗುತ್ತಿತ್ತು. ಚೌರಪ್ಪನವರು ಹಲವಾರು ವರ್ಷಗಳ ಕಾಲ ಉಪದೇಶಿಯಾಗಿ ದೈನಂದಿನ ಸ್ವಚ್ಛತೆ, ಪ್ರಾರ್ಥನೆ ಹಾಗೂ ಇತರ ಧಾರ್ಮಿಕ ಅಗತ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ಯಡವನಹಳ್ಳಿ ಚರ್ಚು

ನೆರೆಯ ಆದಿಗೊಂಡನಹಳ್ಳಿಯು ಧರ್ಮಕೇಂದ್ರವಾದ ಸಂದರ್ಭದಲ್ಲಿ ಅಲ್ಲಿಗೆ ಬಂದ ಫಾದರ್ ಜೋಕಿಂ ಡಿಕಾಸ್ಟ, ಫಾದರ್ ಎನ್ ಸಿ ಜೋಸೆಫ್ ಹಾಗೂ ಫಾದರ್ ರೆನಾರ್ಡ್ ಸ್ವಾಮಿಗಳು ಯಡವನಹಳ್ಳಿಗೂ ಬಂದು ಸೇವೆ ಸಲ್ಲಿಸಿದರು. ಅವರ ನಂತರ ಮತ್ತೆ ಜೆಸ್ವಿತ್ ಗುರುಗಳಾದ ಫಾದರ್ ಅಲ್ವಾರೆಸ್, ಫಾದರ್ ದೀಪಕ್ ನಾಯಕ್, ಫಾದರ್ ತೋಮಾಸ್ ಪಿಂಟೊರವರು ಇಲ್ಲಿದ್ದರು. ಎಂಬತ್ತರ ದಶಕದಲ್ಲಿ ಮತ್ತೆ ಈ ಊರನ್ನು ಬೆಂಗಳೂರು ಮಹಾಧರ್ಮಪೀಠವು ಪಾಲನೆಗೆ ತೆಗೆದುಕೊಂಡು ತಾನೇ ಪಾದ್ರಿಗಳನ್ನು ನಿಯುಕ್ತಿಗೊಳಿಸಿತು. ಸ್ವಾಮಿಗಳಾದ ಫಾದರ್ ಫಾತಿರಾಜ್, ಫಾದರ್ ಅಲ್ಫೋನ್ಸ್ ನರೋನ, ಫಾದರ್ ಚೌರಿಮುತ್ತುರವರು ಇಲ್ಲಿ ಸೇವೆ ಸಲ್ಲಿಸಿದ ನಂತರ ಈ ಊರನ್ನು ಹೆಬ್ಬಗೋಡಿಯಲ್ಲಿರುವ ಎಂಎಸ್ಎಫ್ಎಸ್ ಸಂಸ್ಥೆಯವರ ಉಸ್ತುವಾರಿಗೆ ವಹಿಸಲಾಯಿತು. ಫಾದರ್ ಇರುದಯರಾಜರವರ ನೇತೃತ್ವದಲ್ಲಿ ಮುಂದುವರಿದ ಈ ಧರ್ಮಸಭೆ ಮತ್ತೆ ಮಹಾಧರ್ಮಪೀಠದ ಸ್ವಾಮಿಗಳಾದ ಫಾದರ್ ನಿರ್ಮಲ್ ಕುಮಾರ್ ಅವರ ಅಧೀನಕ್ಕೆ ಬಂದಿತು. ಅವರ ನಂತರ ಫಾದರ್ ದೊಮಿನಿಕ್ ಅವರು ಹೊಸದೇವಾಲಯ ಕಟ್ಟಲು ಪ್ರಾರಂಭಿಸಿ ಅರ್ಧಭಾಗ ಕಟ್ಟುವ ವೇಳೆಗೆ ಇಲ್ಲಿಂದ ವರ್ಗವಾದರು. ಆನಂತರ ಫಾದರ್ ಸಂತೋಷ್ ಅವರು ಯಡವನಹಳ್ಳಿಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಾ ಇಲ್ಲಿನ ಕ್ರೈಸ್ತ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಬೆಂಗಳೂರು ಮಹಾಧರ್ಮಪ್ರಾಂತ್ಯದ ಹಾಗೂ ಊರಜನರ ಒಗ್ಗಟ್ಟಿನ ಕಾರ್ಯತತ್ಪರತೆಯಿಂದ ದಿವ್ಯವೂ ಭವ್ಯವೂ ಆದ ದೇವಾಲಯವನ್ನು ಕಟ್ಟಲಾಗಿದೆ. ದಿನಾಂಕ ೨೧ ಆಗಸ್ಟ್ ೨೦೦೫ ರಂದು ಭಾನುವಾರ ಬೆಳಗ್ಗೆ ೧೦:೩೦ರ ಶುಭಗಳಿಗೆಯಲ್ಲಿ ಯಡವನಹಳ್ಳಿಯ ಈ ಹೊಸ ದೇವಾಲಯವನ್ನು ಆರ್ಚ್ ಬಿಷಪ್ ಬೆರ್ನಾರ್ಡ್ ಮೊರಾಸ್ ಅವರು ಮಂತ್ರಿಸಿ ಪೂಜೆಯರ್ಪಿಸಿದರು.

ಹೊಸದೇವಾಲಯವು ಪಶ್ಚಿಮಾಭಿಮುಖವಾಗಿದೆಯಾದರೂ ಊರ ಕಡೆಗೆ ಇರುವ ದಕ್ಷಿಣದ ಬಾಗಿಲು ಎಲ್ಲ ಸಾಮಾನ್ಯ ದಿನಗಳಲ್ಲೂ ತೆರೆದಿದ್ದು ಭಕ್ತರಿಗೆ ಮುಕ್ತ ಪ್ರವೇಶ ಒದಗಿಸಿದೆ. ಹಾಸುಗಲ್ಲಿನ ಬಲಿಪೀಠ, ದಿವ್ಯವಾದ ಪ್ರಸಾದ ಪೆಟ್ಟಿಗೆ, ಕಂಗೊಳಿಸುವ ಹಿನ್ನೆಲೆಯೊಂದಿಗೆ ಪೂಜಾಸ್ಥಾನವು ಸುಂದರವಾಗಿದೆಯಲ್ಲದೆ ಭಕ್ತಿಭಾವವನ್ನು ಮೂಡಿಸುತ್ತದೆ. ಪೀಠಾಭಿಮುಖವಾಗಿ ನಿಂತಾಗ ಎಡಗಡೆ ನೋಡಿದರೆ ಪುಟ್ಟಬಾಲಯೇಸುವನ್ನು ತೋಳಲ್ಲಿ ಹೊತ್ತ ಸಂತ ಅಂತೋಣಿಯವರ ಸುಂದರ ಪ್ರತಿಮೆ ಇದೆ.