ಯಂತ್ರ (ಆಧ್ಯಾತ್ಮಿಕತೆ)
ಯಂತ್ರ ಆಧ್ಯಾತ್ಮಿಕತೆಯಲ್ಲಿ ವಿಶಿಷ್ಟ ಅರ್ಥದ ಶಬ್ದ. ಇದು ತಂತ್ರ ಸಾಧನೆಯ ಮುಖ್ಯ ಸಲಕರಣಾಂಶಗಳಲ್ಲೊಂದಾಗಿದೆ. ಇದು ಯಾಂತ್ರಿಕ ಯುಗ. ಟೆಕ್ನಾಲಜಿಯನ್ನು ತಂತ್ರಜ್ಞಾನ ಎಂದೇ ಕರೆಯಲಾಗುತ್ತಿದೆ. ತಂತ್ರಜ್ಞಾನ ಮಾನವನ ಆರ್ಥಿಕ ಮುನ್ನಡೆಗೆ ಸಾಧಕವಾದರೆ, ಯಂತ್ರ ಆಧ್ಯಾತ್ಮಸಿದ್ಧಿಗೆ ಸಾಧಕವಾಗಿದೆ. ಆಗಮಗಳಲ್ಲಿ ಬರುವ ರಹಸ್ಯಾಚರಣೆಗಳನ್ನು ತಂತ್ರಗಳೆಂದೇ ಕರೆಯುತ್ತಾರೆ. ಆರಾಧಕ ಮತ್ತು ಆರಾಧ್ಯದೈವದ ನಡುವೆ ಸಂಪರ್ಕ ಕಲ್ಪಿಸುವ ಸೂತ್ರವೇ ತಂತ್ರ. ಯಂತ್ರವನ್ನು ತಂತ್ರ ಸಾಧನೆಯಲ್ಲಿ ಉಪಾಸನೆಯ ವಸ್ತುವೆಂದು ನಿರ್ಣಯಿಸಲಾಗಿದೆ.
ತಂತ್ರ ರಹಸ್ಯ ಪೂಜಾವಿಧಾನವನ್ನು ಹೇಳುತ್ತದೆ. ಇದು ಮಾನವನನ್ನು ಸಂರಕ್ಷಿಸುವುದೆಂದೇ ಪ್ರತೀತಿ. ಪ್ರತಿಜ್ಞಾ ಪೂರ್ವಕವಾದ, ಗೂಢ ಆಚರಣೆಗಳಿಂದ ದೈವ ಸಾಕ್ಷಾತ್ಕಾರ ಸಾಧ್ಯ ಮಾಡುವ ಸಾಧನೋಪಾಯಗಳೇ ತಂತ್ರ, ಮಂತ್ರ ಹಾಗೂ ಯಂತ್ರಗಳು. ಇಲ್ಲಿ ಸಾಧಕ ಅತ್ಯಂತ ಸಂಯಮಶೀಲನಾಗಿರಬೇಕು. ಏಕೆಂದರೆ ಪಂಚಮಕಾರಯುಕ್ತವಾದ ಈ ಆರಾಧನಾ ಕ್ರಮ ಅತ್ಯಂತ ಕ್ಲಿಷ್ಟ ಹಾಗೂ ಅಪಾಯಕಾರಿ. ಸಾಧನೆಯ ದಾರಿ ಕತ್ತಿಯ ಅಲಗಿನ ಮೇಲಿನ ನಡೆ ಇದ್ದಂತೆ.
ಮಾನವನಲ್ಲಿರುವ ಭೋಗದ ಬಯಕೆಯನ್ನು ಅರ್ಥಪೂರ್ಣ ಉದ್ದೇಶದಡಿ ಜೀರ್ಣೀಸಿಕೊಂಡು ಮಾನವನ ಉತ್ಕರ್ಷಕ್ಕೆ ಬಳಸಿಕೊಳ್ಳುವುದೇ ತಂತ್ರದ ಉದ್ದೇಶ. `ಭೋಗೋಯೋಗಯತೆ ಎನ್ನುವುದೇ ತಂತ್ರದ ಆದರ್ಶ. ಭೋಗ - ತ್ಯಾಗಗಳ ಸಮನ್ವಯವೇ ಇಲ್ಲಿನ ಜೀವಾಳ. ಈ ಸಾಧನೆಯಲ್ಲಿ ಮಂತ್ರ ಹಾಗೂ ಯಂತ್ರಗಳ ಪ್ರಭಾವ ಅಪಾರ.
`ಮಂತ್ರಾರಂತ್ರಾಯತೇ ಇತಿಮಂತ್ರಃ' ಎಂಬುದೇ ಮಂತ್ರದ ಬಗಗೆ ಭಾರತೀಯ ದಾರ್ಶನಿಕರ ವ್ಯಾಖ್ಯೆ. ಅರ್ಥಾತ್ ಇದನ್ನು ಕುರಿತು ಆಲೋಚಿಸುವವರನ್ನು ಜಪಿಸುವವರನ್ನು ರಕ್ಷಿಸುವುದೇ ಮಂತ್ರ. ತಂತ್ರ, ಮಂತ್ರ ಹಾಗೂ ಯಂತ್ರಗಳ ಮೂಲಬಿಂದು ಅತೀಂದ್ರೀಯ ಶಕ್ತಿಗಳಲ್ಲಿನ ನಂಬಿಕೆ ಹಾಗೂ ಶ್ರದ್ಧೆ. ಮಾನವ ತನ್ನ ಬಯಕೆಗಳ ಪೂರೈಕೆಗಾಗಿ ಅವುಗಳನ್ನು ವಶಪಡಿಸಿಕೊಳ್ಳುವ ನಿರಂತರ ಯತ್ನಕ್ಕೆ ತಂತ್ರ, ಮಂತ್ರ ಹಾಗೂ ಯಂತ್ರಗಳೂ ಪರಿಪೋಷಕ. ಮಂತ್ರವಿದ್ಯೆಯು ಒಂದು ಬಗೆಯಲ್ಲಿ ತಂತ್ರವೇ ಹೌದು. ಅಪ್ರಾಕೃತ ಶಕ್ತಿಗಳನ್ನು ತನ್ನ ಅಧೀನವಾಗಿರಿಸಿಕೊಳ್ಳುವ ವಾಂಛೆಯೇ ಇಲ್ಲಿನ ವೈಶಿಷ್ಟ್ಯ. ಅವುಗಳು ಒಳ್ಳೆಯದರ ಜೊತೆಗೆ ಕೆಡಕನ್ನೂ ಉಂಟುಮಾಡಬಲ್ಲವು ಎಂಬ ಪರಿಭಾವನೆಯ ನೆಲೆಯಲ್ಲಿಯೇ ತಂತ್ರ, ಮಂತ್ರ ಹಾಗೂ ಯಂತ್ರಗಳೂ ಸೃಷ್ಟಿಗೊಂಡಿವೆ. ನಾಗರಿಕ ಎಂದು ಕರೆಯಲ್ಪಡುವ ಸಮಾಜಗಳಲ್ಲಿಯೂ ಜನರು ಕೆಡುಕಿನಿಂದ ಮುಕ್ತವಾಗುವ ನಂಬಿಕೆಯಿಂದ ಯಂತ್ರ ರಕ್ಷೆ ಇತ್ಯಾದಿಗಳನ್ನೂ ಧರಿಸುವುದನ್ನು ಕಾಣಬಹುದು. ಭವಿಷ್ಯ ಹೇಳುವುದು, ಮಡಿ - ಮೈಲಿಗೆ, ವಿಧಿ - ನಿಷೇಧಗಳ ಜೊತೆಗೆ ಕಲ್ಲು - ಲೋಹ ಉಂಗುರಗಳಲ್ಲಿ ಮಂತ್ರ ಶಕ್ತಿಯ ಆಕೃತಿಯನ್ನು ಕೊರೆದು ಅದನ್ನು ಧರಿಸುವುದು ವಾಡಿಕೆ. ಈ ಬಗೆಯ ಧರಿಸುವ ವಸ್ತುಗಳಲ್ಲಿ ಒಂದು ಅತಿಶಯವಾದ ಶಕ್ತಿಯ ಸಮಾವೇಶವಿದೆ. ಇವುಗಳನ್ನು ಧರಿಸುವುದರಿಂದ ತಮಗೆ ಶುಭವಾಗುತ್ತದೆಂಬ ನಂಬಿಕೆ ಧರಿಸುವ ವ್ಯಕ್ತಿಗಳಲ್ಲಿರುತ್ತದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿಯೇ ಯಂತ್ರದ ಪರಿಕಲ್ಪನೆ ರೂಪುಗೊಂಡಿದೆ ಎನ್ನುವುದು ಸ್ಪಷ್ಟ.
ಸಾಧನೆಯಲ್ಲಿ ಸಾಧಕನ ಉಪಾಸನಾ ದೈವದ ರೇಖಾಕೃತಿಯೇ ಯಂತ್ರವೆಂದು ಹೇಳಲಾಗಿದೆ. ದೈವ ಶಕ್ತಿಯನ್ನು ಅದರಲ್ಲಿ ನಿಯಂತ್ರಣ ಮಾಡುವುದರಿಂದಲೇ ಅದಕ್ಕೆ ಯಂತ್ರ ಎಂದು ಹೆಸರಿಡಲಾಗಿದೆ. ಸಾಧಕನಾದವನು ಮಂತ್ರ ಹಾಗೂ ಉಪಾಸನೆಗಳಿಂದ ನೈಜ ಶಕ್ತಿಯನ್ನು ಯಂತ್ರದಲ್ಲಿ ತುಂಬಿದಾಗ ಯಂತ್ರದಲ್ಲಿ ದೇವಿಯ ಆವಿರ್ಭಾವ ಸಾಧ್ಯವಾಗುತ್ತದೆ. ತಂತ್ರ ಸಾಧನೆಯಲ್ಲಿ ವಸ್ತುವೇ (ಬಾಹ್ಯವಸ್ತು) ಯಂತ್ರ. ದೇವರ ಮೂರ್ತಿಗಳು, ದೇವರ ಸ್ಪರ್ಶವೇದ್ಯವೆನಿಸಿಕೊಂಡ ನೈಜ ಪ್ರತಿನಿಧಿಗಳೆನಿಸಿವೆ. ಎಲ್ಲ ಮಂತ್ರಗಳನ್ನೂ ರೇಖೆ, ಬಿಂದುಗಳಿಂದ ನೇರವಾಗಿ ಮತ್ತು ಅಂಕುಡೊಂಕಾಗಿ ಚಿತ್ರಿಸುವುದು ಇಲ್ಲಿ ವಿಶೇಷ. ಅಲ್ಲದೆ, ತಗಡುಗಳ ಮೇಲೂ ಕೆತ್ತುವ ಪದ್ಧತಿಯಿದೆ. ಅಂದರೆ ಯಂತ್ರ ದೇವರ ಅಸ್ತಿತ್ವವನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ ಎಂದು ಹೇಳಬಹುದು. ಶಕ್ತಿ ಸ್ವರೂಪಿಣಿ ಎನಿಸಿಕೊಂಡಿರುವ ದೇವಿ ಮಾನವ ಶರೀರದಲ್ಲಿ ಎಲ್ಲಿ ಯಾವ ರೀತಿಯಲ್ಲಿ ಯಾವ ರೂಪದಲ್ಲಿ ನೆಲೆಸಿದ್ದಾಳೆ ಎಂಬುದನ್ನು ಸಾಂಕೇತಿಕವಾಗಿ ಸೂಚಿಸುವುದೇ ಯಂತ್ರ. `ಶ್ರೀಚಕ್ರಯಂತ್ರ ಯಂತ್ರಗಳಲ್ಲೆಲ್ಲ ಅತ್ಯಂತ ಪ್ರಾಮುಖ್ಯ, ಪಾವಿತ್ರ್ಯ ಹಾಗೂ ಪ್ರಖ್ಯಾತಿಯನ್ನು ಹೊಂದಿದೆ. ಶ್ರೀಚಕ್ರ ಜಗನ್ಮಾತೆಯ ಸಾಕ್ಷಾತ್ ಸ್ವರೂಪ ಎಂದೇ ವರ್ಣನೆಗೊಂಡಿರುವುದು ಗಮನಾರ್ಹ (ಚಕ್ರಸ್ಯಾಪಿ ಮಹೇಶ್ಯಾನ ಭೇದಲೇಶೋಪಿ ಭಾವ್ಯತೇವಿಬುಧೈಃ). ಯಂತ್ರ ಜಗನ್ಮಾತೆಯ ರೇಖೆಗಳ ಮೂಲಕವೇ ಆದ ಪ್ರಕಟೀಕರಣವೆಂಬ ಗಾಢ ನಂಬಿಕೆ, ಯಂತ್ರ ಹಾಗೂ ಜಗನ್ಮಾತೆಗೂ ಸಾನ್ನಿಧ್ಯದಲ್ಲಿ ಅಂತರವೇನೂ ಇಲ್ಲವೆಂಬ ವಿಶ್ವಾಸಕ್ಕೆ ಬುನಾದಿಯಾಗಿದೆ. `ಮಹಾಕಾಳಿ, `ಮಹಾಲಕ್ಷ್ಮೀ, `ಮಹಾಸರಸ್ವತೀ, `ಮಹೇಶ್ವರಿ', `ತ್ರಿಪುರಸುಂದರಿ', `ಲಲಿತಾಂಬಿಕಾ ಇವೇ ಮುಂತಾದ ಜಗನ್ಮಾತೆಯ (ಶ್ರೀದೇವಿ) ವಿವಿಧ ಶಕ್ತಿಸ್ವರೂಪಗಳನ್ನು ಸಾಧಕ ಉಪಾಸನೆ ಮಾಡುತ್ತ ಅಂತಿಮವಾಗಿ ಜಗನ್ಮಾತೆಯಲ್ಲಿ ಐಕ್ಯವಾಗಲು ಯಂತ್ರಗಳ ಸಹಾಯ ಅತ್ಯಗತ್ಯ. ಅಂದರೆ ತಂತ್ರ ಸಾಧನೆಯಲ್ಲಿ ಯಂತ್ರ ಹಾಗೂ ಮಂತ್ರಗಳ ಉದ್ದೇಶ ಮಾನವ ತನ್ನ ಅಜ್ಞಾನದ ಪೊರೆಯನ್ನು ಕಳಚಿಕೊಂಡು ಜಗನ್ಮಾತೆಯ ದಿವ್ಯಾನಂದವನ್ನು ಪಡೆಯುವುದು.
ಸರ್ವವಸ್ತುವಿನಲ್ಲಿಯೂ ಅಂತರ್ಯಾಮಿಯಾಗಿರುವ ಜಗನ್ಮಾತೆ ಪಿಂಡಾಂಡದಲ್ಲಿಯೂ ಇರುವಳು. ಜಗನ್ಮಾತೆ ಪಿಂಡಾಂಡವಾಗಿರುವ ಮಾನವ ದೇಹದಲ್ಲಿ ಆರು ಚಕ್ರಗಳಲ್ಲಿ ಆರು ಯೋಗಿನಿಯಾಗಿ, ಆರು ಶಕ್ತಿ ಸ್ವರೂಪಿಣಿಯಾಗಿ ಇರುವಳು. ಶ್ರೀದೇವಿ ಎನಿಸಿರುವ ಆಕೆ ಮಾನವ ದೇಹದಮೂಲಾಧಾರ ಸ್ಥಳದಲ್ಲಿ ನಿದ್ರಿಸುತ್ತಿರುವಳು. ಸಾಧಕ ತನ್ನ ಸಾಧನಾ ಬಲದಿಂದ ಕುಂಡಲಿನಿಯನ್ನು ಜಾಗ್ರತಗೊಳಿಸುವುದರ ಮೂಲಕದೇಹದ ಅನೇಕ ಭಾಗಗಳಲ್ಲಿರುವ ಆರು ಚಕ್ರಗಳ ಮೂಲಕ ಹರಿಯಿಸಿ ಸಹಸ್ರಾರದಲ್ಲಿ ಐಕ್ಯಗೊಳಿಸಬೇಕು. ಆಗ ಸಾಧಕ ಪರಿಪೂರ್ಣ ಸತ್ಯದೊಡನೆ ತನ್ಮಯತೆ ಹೊಂದುವನು. ಈ ಬಗೆಯ ಅನುಭವಕ್ಕೆ ಯಂತ್ರ ಹಾಗೂ ಮಂತ್ರಗಳು ನೆರವಾಗುತ್ತವೆ. ಈ ದಾರಿಯಲ್ಲಿ ಮಾನವನ ಶಾರೀರಿಕ ಹಾಗೂ ಮಾನಸಿಕ ಪ್ರವೃತ್ತಿಗಳನ್ನು ಉದಾತ್ತೀಕರಿಸಲಾಗಿದೆ. ಹೀಗೆ ಮಾನವ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಅಪ್ರಾಕೃತ ಶಕ್ತಿಯೊಡನೆ ಹೊಂದುವ ಸಂಬಂಧ ಅಥವಾ ಆ ದಿಕ್ಕಿನಲ್ಲಿ ಅದನ್ನು ಬಳಸಿಕೊಳ್ಳುವ ವಾಂಛೆಗೆ ಯಂತ್ರ ಸಾಧನೋಪಾಯವಾಗಿ ಮಹತ್ತ್ವದ ಸ್ಥಾನ ಪಡೆದಿದೆ.