ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮುಂತಾದ ಕ್ಷೇತ್ರಗಳಲ್ಲಿ ಮೌಲ್ಯವನ್ನು ಗುರುತಿಸುವಂತೆ ಅರ್ಥಶಾಸ್ತ್ರದಲ್ಲಿ ಮೌಲ್ಯವನ್ನು ಒಂದು ಮೂಲಭೂತ ಸಿದ್ಧಾಂತವಾಗಿ ಗುರುತಿಸಲಾಗಿದೆ. ಇಲ್ಲಿ ಮೌಲ್ಯವನ್ನು ಎರಡು ಅರ್ಥದಲ್ಲಿ ಗ್ರಹಿಸಲಾಗುತ್ತದೆ. ಮೊದಲನೆಯದು ವಸ್ತುವಿನ ಉಪಯುಕ್ತತಾ ಮೌಲ್ಯ, ಎರಡನೆಯದು ವಸ್ತುವಿನ ವಿನಿಮಯ ಮೌಲ್ಯ. ಉಪಯುಕ್ತತಾ ಮೌಲ್ಯವೆಂದರೆ, ಒಬ್ಬ ವ್ಯಕ್ತಿ ಒಂದು ವಸ್ತುವಿಗೆ ವ್ಯಕ್ತಿಗತವಾಗಿ ಎಷ್ಟು ಪ್ರಾಮುಖ್ಯ ಕೊಡುತ್ತಾನೆ ಎಂಬುದು. ಈ ಪ್ರಾಮುಖ್ಯ ಅವನಿಗೆ ಆ ವಸ್ತುವಿನಿಂದ ದೊರೆಯುವ ಉಪಯುಕ್ತತೆ ಹಾಗೂ ಸಂತೃಪ್ತತೆ ಮೇಲೆ, ವಸ್ತುವಿನ ತುಷ್ಟಿಗುಣವನ್ನು ಅವಲಂಬಿಸಿರುತ್ತದೆ. ವಿನಿಮಯ ಮೌಲ್ಯವೆಂದರೆ ಒಂದು ವಸ್ತುವಿಗೆ ಇತರ ವಸ್ತುಗಳನ್ನು ವಿನಿಮಯವಾಗಿ ಪಡೆಯಲು ಇರುವ ಶಕ್ತಿ. ಅಂದರೆ ಒಂದು ವಸ್ತುವನ್ನು ಕೊಟ್ಟು ಒಬ್ಬ ವ್ಯಕ್ತಿ ಎಷ್ಟು ಪ್ರಮಾಣದ ಇತರ ವಸ್ತುಗಳನ್ನು ವಿನಿಮಯವಾಗಿ ಪಡೆಯಬಹುದು ಎಂಬುದು. ಹಣದ ಮಾಧ್ಯಮದ ಮೂಲಕ ವಸ್ತುವಿನ ಕೊಡುಕೊಳ್ಳುವಿಕೆಗಳು ನಡೆದರೆ, ಆ ಸರಕಿನ ಮೌಲ್ಯವನ್ನು ಬೆಲೆಯ ರೂಪದಲ್ಲಿ ಪರಿಗಣಿಸುತ್ತೇವೆ.[]

ಒಂದು ವಸ್ತುವಿನ ಮೌಲ್ಯ ಹೇಗೆ ನಿರ್ಧರಿತವಾಗುತ್ತದೆ ಎಂಬುದರ ಬಗ್ಗೆ ಅನೇಕ ಸಿದ್ಧಾಂತಗಳನ್ನು ಮಂಡಿಸಲಾಗಿದೆ. ಪ್ರಥಮವಾಗಿ ಆಡಂ ಸ್ಮಿತ್ ಶ್ರಮ ಹಾಗೂ ಸಮಯ ಆಧಾರಿತ ಮೌಲ್ಯ ಸಿದ್ಧಾಂತವನ್ನು ಅಭಿವೃದ್ಧಿ ಪಡಿಸಿದ. ಇವನದೇ ಉದಾಹರಣೆ ಗಮನಿಸಿ. ಇಬ್ಬರು ಬೇಟೆಗಾರರು ಬೇಟೆಗೆ ಹೋಗಿ ಒಬ್ಬ ಒಂದು ಜಿಂಕೆಯನ್ನು ಒಂದು ಗಂಟೆಯಲ್ಲಿ ಬೇಟೆಯಾಡುವ. ಮತ್ತೊಬ್ಬ ಅದೇ ಸಮಯದಲ್ಲಿ ಎರಡು ಬೀವರ್ ಪ್ರಾಣಿಗಳನ್ನು ಬೇಟೆಯಾಡಿ ಪರಸ್ಪರ ವಿನಿಮಯ ಮಾಡಿಕೊಂಡಾಗ ಎರಡು ಬೀವರ್ ಪ್ರಾಣಿಗಳಿಗೆ ಒಂದು ಜಿಂಕೆ ಸಮವೆಂದು ಪರಿಗಣಿಸಿದಂತಾಗುತ್ತದೆ. ಈ ಸಿದ್ಧಾಂತವನ್ನು ರಿಕಾರ್ಡೋ, ಜೆ. ಎಸ್. ಮಿಲ್, ಅಭಿವೃದ್ಧಿಸಿದ್ದಾರೆ. ಇವರ ಪ್ರಕಾರ ಒಂದು ವಸ್ತುವಿನ ಮೌಲ್ಯ ಅದರ ಉತ್ಪಾದನ ವೆಚ್ಚವನ್ನೂ ಅವಲಂಬಿಸುತ್ತದೆ.

ಈ ಪ್ರಾರಂಭಿಕ ಸಿದ್ಧಾಂತಗಳಲ್ಲಿ ವಸ್ತುವಿನ ಬೇಡಿಕೆಯ ಕಡೆ ಗಮನ ನೀಡಿಲ್ಲ. ಹೀಗಾಗಿ ಸೀಮಾಂತ ತುಷ್ಟಿಗುಣ ಪಂಥದವರು, ಒಂದು ವಸ್ತುವಿನ ಮೌಲ್ಯ ಅದರ ತುಷ್ಟಿಗುಣವನ್ನಾಧರಿಸಿರುತ್ತದೆ ಎಂದು ವಾದಿಸುತ್ತಾರೆ. ಅವರ ಪ್ರಕಾರ ವಸ್ತುವಿನ ಮೌಲ್ಯ ಆ ವಸ್ತುವಿಗೆ ಜನರ ಬಯಕೆಯನ್ನು ತೃಪ್ತಿಪಡಿಸಲು ಇರುವ ಶಕ್ತಿ ಹಾಗೂ ಅದಕ್ಕೆ ಇರುವ ಬೇಡಿಕೆಯನ್ನು ಅವಲಂಬಿಸಿರುತ್ತದೆ. ಮೌಲ್ಯ ವಸ್ತುನಿಷ್ಠವೆಂದು ಸ್ಮಿತ್ ಭಾವಿಸಿದ್ದರೆ, ಬೇರೆಯವರು ಅದು ವ್ಯಕ್ತಿನಿಷ್ಠವೆಂದು ಪರಿಗಣಿಸುತ್ತಾರೆ.

ಮಾರ್ಷಲ್ ಮೌಲ್ಯದ ಬಗ್ಗೆ ಸುಸಂಬದ್ಧವಾದ ಸಿದ್ಧಾಂತವನ್ನು ಮಂಡಿಸಿದ್ದಾನೆ. ಇವನ ಪ್ರಕಾರ ಒಂದು ವಸ್ತುವಿನ ಮೌಲ್ಯ ಅದರ ಬೇಡಿಕೆ ಮತ್ತು ನೀಡಿಕೆಗಳೆರಡರಿಂದಲೂ ನಿಗದಿಯಾಗುತ್ತವೆ. ಅಲ್ಪಾವಧಿಯಲ್ಲಿ ವಸ್ತುವಿನ ಮೌಲ್ಯವನ್ನು ಬೇಡಿಕೆಯೇ ಪ್ರಭಾವಿಸುವುದು ಸಾಧ್ಯ. ಆದರೆ ದೀರ್ಘಾವಧಿಯಲ್ಲಿ ಯಾವುದೇ ವಸ್ತುವಿನ ಮೌಲ್ಯ ಅದರ ಬೇಡಿಕೆ ಮತ್ತು ನೀಡಿಕೆಗಳೆರಡರಿಂದಲೂ ನಿಗದಿಯಾಗುತ್ತವೆ. ಈ ಮೌಲ್ಯ ಸಿದ್ಧಾಂತವನ್ನು ಇಂದು ಅತ್ಯಂತ ಸಾರ್ವತ್ರಿಕ ಸಿದ್ಧಾಂತವೆಂದು ಪರಿಗಣಿಸಲಾಗಿದೆ.

ಹಾಗೆಯೇ ಒಂದು ವಸ್ತುವಿಗೆ ರೂಪ ಬದಲಾವಣೆಯಿಂದ ಮೌಲ್ಯ ಒದಗುತ್ತದೆ. ಉದಾಹರಣೆಗೆ ಕಾಡಿನ ಮರದ ತುಂಡುಗಳನ್ನು ಉಪಯುಕ್ತ ಕುರ್ಚಿ, ಮೇಜು ಮುಂತಾದವುಗಳನ್ನಾಗಿ ಪರಿವರ್ತಿಸಿದಾಗ, ಸ್ಥಳ ಬದಲಾವಣೆಯಿಂದ - ನದಿದಡದಲ್ಲಿ ಅಥವಾ ಸಮುದ್ರ ದಂಡೆಯಲ್ಲಿ ಬಿದ್ದಿರುವ ಅಪಾರವಾದ ಮರಳುರಾಶಿಯನ್ನು ನಗರ ಮಧ್ಯಕ್ಕೆ ಸಾಗಿಸಿದಾಗ ಅದಕ್ಕೆ ಮೌಲ್ಯ ಕಟ್ಟುತ್ತಾರೆ. ಹಾಗೇ ವಸ್ತುವಿನ ವಿರಳತೆಯ ಮೇಲೂ ಮೌಲ್ಯ ನಿರ್ಧಾರವಾಗುತ್ತದೆ. ಇಂದು ಈ ಮೌಲ್ಯ ಸಿದ್ಧಾಂತ ನಾಗರಿಕ ಜೀವನದ ಎಲ್ಲ ಕ್ಷೇತ್ರವನ್ನೂ ಆವರಿಸಿಕೊಂಡಿದೆಯೆನ್ನಬಹುದು.

ಉಲ್ಲೇಖಗಳು

ಬದಲಾಯಿಸಿ
  1. Steve Keen Debunking Economics, New York, Zed Books (2001) p. 271, ISBN 1-86403-070-4, OCLC 45804669


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೌಲ್ಯ&oldid=959108" ಇಂದ ಪಡೆಯಲ್ಪಟ್ಟಿದೆ