ಕನ್ನಡ ಚಲನಚಿತ್ರ "ಮೈಲಾರ ಲಿಂಗ" ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.

ಮೈಲಾರ ಲಿಂಗ ಹಿಂದೂ ದೇವತೆ ಶಿವನ ಸ್ವರೂಪ. ಶಿವನು ಮಲ್ಲಾಸುರನನ್ನು ಸ೦ಹರಿಸಲು ಮೈಲಾರ ಲಿಂಗನಾಗಿ ಹುಟ್ಟಿದನೆಂದು ಪ್ರತೀತಿಯಿದೆ. ಉತ್ತರ ಕರ್ನಾಟಕದಲ್ಲಿ ಬಹಳ ಜನರ ಮನೆ ದೇವರು. ಹಾವೇರಿಗೆ ಸಮೀಪದಲ್ಲಿ ತುಂಗಭದ್ರ ನದಿ ದಡದಲ್ಲಿ ಮೈಲಾರ ಗ್ರಾಮ ಎ೦ಬ ಪ್ರಸಿಧ್ದ ಸ್ಥಳವಿದ್ದು, ಅಲ್ಲೊ೦ದು ಮೈಲಾರಲಿ೦ಗ ದೇವರ ಪ್ರಸಿದ್ಧ ದೇವಸ್ಥಾನವಿದೆ

ಪುಣ್ಯಕ್ಷೇತ್ರವಾಗಿ ಮೈಲಾರಲಿಂಗ

ಮೈಲಾರಲಿಂಗ ಪುಣ್ಯಕ್ಷೇತ್ರ. ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಬಳಿಯಿರುವ ದೇವರಗುಡ್ಡದ ಮೇಲೆ ಮೈಲಾರಲಿಂಗ ದೇವಸ್ಥಾನವಿದೆ. ಪ್ರತಿವರ್ಷವೂ ಇಲ್ಲಿ ನಡೆಯುವ ಜಾತ್ರೆಗೆ ಪ್ರಾಮುಖ್ಯ ಇದೆ. ಸಾವಿರಾರು ಮಂದಿ ಭಕ್ತರು ಇಲ್ಲಿ ಕಲೆಯುತ್ತಾರೆ. ವರ್ಷದಲ್ಲಿ ಎರಡು ದಿವಸ ಜಾತ್ರೆ ವಿಶೇಷ ರೀತಿಯಿಂದ ನಡೆಯುತ್ತದೆ. ಜಾತ್ರಾ ಸಮಯದಲ್ಲಿ ಬಡಬಗ್ಗರಿಗೆ ಅನ್ನ ಸಂತರ್ಪಣೆ ಇರುತ್ತದೆ.

ಸ್ಥಳಪುರಾಣ

ಪ್ರಸ್ತುತ ಕ್ಷೇತ್ರದ ಸ್ಥಳಪುರಾಣದಂತೆ ಜನಗಳಿಗೆ ತೊಂದರೆ ಕೊಡುತ್ತಿದ್ದ ಮಣಿಮಲ್ಲಾಪುರ ಎಂಬ ರಾಕ್ಷಸನನ್ನು ಈಶ್ವರ ಗೊರವನ ವೇಷದಲ್ಲಿ ಬಂದು ಸಂಹರಿಸಿದನೆಂದು ಕಥೆ ಇದೆ. ಈ ರಾಕ್ಷಸ ಬ್ರಹ್ಮನನ್ನು ಪ್ರಾರ್ಥಿಸಿ ಯಾರಿಂದಲೂ ಸಾವು ಬಾರದೆ ಇರುವಂತೆ ವರ ಬೇಡುತ್ತಾನೆ. ಆದರೆ ಬ್ರಹ್ಮ ಇದಕ್ಕೆ ಕಿವಿಗೊಡದಿರಲು ಆತ ಪರಮೇಶ್ವರನನ್ನೇ ಕುರಿತು ಬೇಡುತ್ತಾನೆ. ಪರಮೇಶ್ವರ ಇದರಿಂದ ಕುಪಿತನಾಗಿ ತಲೆ ಕೊಡವುತ್ತಾನೆ. ಈಶ್ವರನ ತಲೆಯಿಂದ ತುಪ್ಪದ ಮಾಳಮ್ಮ ಎಂಬ ಹೆಣ್ಣು ಜನಿಸಿ ರಾಕ್ಷಸನನ್ನು ಕೊಲ್ಲಲು ಉದ್ಯುಕ್ತಳಾಗುತ್ತಾಳೆ. ಆಕೆಯಿಂದಲೂ ರಾಕ್ಷಸನನ್ನು ಕೊಲ್ಲಲು ಸಾಧ್ಯವಾಗದೆ ಹೋದಾಗ, ಪರಮೇಶ್ವರನೇ ಗೊರವರ ವೇಷದಲ್ಲಿ ಬಂದು ರಾಕ್ಷಸನನ್ನು ಕೊಂದು, ತುಪ್ಪದ ಮಾಳಮ್ಮನನ್ನು ಮದುವೆಯಾಗುತ್ತಾನೆ.

ಪವಾಡಗಳು

ಈ ಕ್ಷೇತ್ರದ ಪವಾಡಗಳಿಗೆ ಸಂಬಂಧಿಸಿದಂತೆಯೂ ಒಂದು ಕಥೆ ಇದೆ. ಗಂಗೆ ಮಾಳಮ್ಮ ಎಂಬಾಕೆ ತನ್ನ ಏಳು ಮಂದಿ ಅಣ್ಣ ತಮ್ಮಂದಿರಿಗೂ ಊಟ ಹೊತ್ತು ಹೋಗುತ್ತಿರುವಾಗ, ಈಶ್ವರ ಗೊರವನ ವೇಷದಲ್ಲಿ ಬಂದು ಅವಳ ಬಳಿ ನಿಲ್ಲುತ್ತಾನೆ. ಇದನ್ನು ನೋಡಿದ ಅವಳ ಎಳು ಮಂದಿ ಅಣ್ಣತಮ್ಮಂದಿರೂ ತಮ್ಮ ಎರಡು ನಾಯಿಗಳನ್ನೂ ಅವನ ಕಡೆಗೆ ಅಟ್ಟುತ್ತಾರೆ. ಆದರೆ ಆ ನಾಯಿಗಳು ಅವನನ್ನು ಏನೂ ಮಾಡದೇ ಸುಮ್ಮನೆ ನಿಲ್ಲುತ್ತವೆ. ಆಗ ಆ ಏಳು ಮಂದಿ ಅಣ್ಣತಮ್ಮಂದಿರೇ ಅವನ ಬಳಿಗೆ ಹೋಗುತ್ತಾರೆ. ಆಗಗೊರವನ ರೂಪದಲ್ಲಿದ್ದ ಪರಮೇಶ್ವರ ಗಂಗೆ ಮಾಳಮ್ಮನನ್ನು ಮದುವೆಮಾಡಿಕೊಡುವಂತೆ ಕೇಳುತ್ತಾನೆ. ಐದು ಪವಾಡಗಳನ್ನು ಮಾಡಿತೋರಿಸಿದರೆ ಮದುವೆ ಮಾಡಿಕೊಡುವುದಾಗಿ ಅವರು ಹೇಳುತ್ತಾರೆ. ಆಗ ಪರಮೇಶ್ವರ ಸರಪಳಿ ಪವಾಡ, ಶೂಲದ ಪವಾಡ, ಗೋವದ ಪವಾಡ, ಅಲಗು ಪವಾಡ, ಸಿರ್ಸಿ ಪವಾಡ ಎಂಬ ಐದು ಪವಾಡಗಳನ್ನು ಮಾಡಿ ತೋರಿಸುತ್ತಾನೆ. ಈಗಲೂ ಮೈಲಾರಲಿಂಗನ ಭಕ್ತರು ಅನೇಕ ಬಗೆಯ ಪವಾಡಗಳನ್ನು ಮಾಡುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿಯ ಪ್ರಮುಖ ಆಕರ್ಷಣೆಯೂ ಇವೇ ಆಗಿವೆ. ಇವು ಅತ್ಯಂತ ರೋಮಾಂಚನಕಾರಿಯಾಗಿರುತ್ತವೆ. ಮೈಲಾರಲಿಂಗನ ಭಕ್ತರು ಪವಾಡಗಳನ್ನು ಮಾಡುವುದಾಗಿ ಹರಸಿಕೊಂಡಿರುತ್ತಾರೆ.

ಗೊರವರು

ಗೊರವರು ಎಂಬ ವೃತ್ತಿಗಾಯಕರು ಈ ಮೈಲಾರಲಿಂಗ ಕ್ಷೇತ್ರಕ್ಕೆ ಸಂಬಂಧಪಟ್ಟವರು. ಇವರ ವೇಷಭೂಷಣಗಳಿಂದ ಇವರನ್ನು ಸುಲಭವಾಗಿ ಗುರುತಿಸಬಹುದಾಗಿದೆ. ತಲೆಗೆ ಕರಡಿಯ ಚರ್ಮವನ್ನು ಟೋಪಿಯಾಗಿ ಧರಿಸುತ್ತಾರೆ. ಕೈಯಲ್ಲಿ ಡಮರುಗ, ಪಿಳ್ಳಂಗೋವಿ, ರುದ್ರಾಕ್ಷಿಮಣಿ ಹಾರ, ಎಲೆಯ ಸಂಚಿ, ದೋಣಿ (ಭಿಕ್ಷಾಪಾತ್ರೆ), ಹೊಕ್ಕಳಿನವರೆಗೂ ಹುಲಿಚರ್ಮ, ರಟ್ಟೆಗೆ ಬಳೆ, ಕಾಲಿಗೆ ಗೆಜ್ಜೆ, ಕೊರಳಿಗೆ ಕವಡೆ ಇವುಗಳಿಂದ ಶೃಂಗರಿಸಿಕೊಳ್ಳುತ್ತಾರೆ.

ಮೈಲಾರಲಿಂಗನ ಕೃಥಾಪರಂಪರೆಯನ್ನು ಇವರು ಉಳಿಸಿಕೊಂಡು ಬಂದಿದ್ದಾರೆ. ಕಥಾಪರಂಪರೆಗಿಂತ ರೋಮಾಂಚಕಾರಿ ಪವಾಡಗಳನ್ನು ಮಾಡುವಲ್ಲಿ ಇವರು ಹೆಸರಾದವರು. ಇವರ ನೃತ್ಯವೂ (ಗೊರವರ ಕುಣಿತ) ಬಹಳ ವೈವಿಧ್ಯಪೂರ್ಣವಾದುದೆನಿಸಿದೆ.

ಇತರ ಮೈಲಾರಲಿಂಗ ಕ್ಷೇತ್ರಗಳು

ಕರ್ನಾಟಕದ ಉಳಿದ ಕಡೆಗಳಲ್ಲೂ ಮೈಲಾರ ಲಿಂಗ ಕ್ಷೇತ್ರಗಳಿವೆ. ಹಿರೇ ಮೈಲಾರ, ಗುಟ್ಟೂರು ಮೈಲಾರ, ರೆಕ್ಕಾಲ್ ಗೊಂಡಾ ಮೈಲಾರ, ಯಾದಗಿರಿ ಮೈಲಾರ, ಕೊಂಗಳ್ಳಿ ಮೈಲಾರ, ಸೂಜಿಕಲ್ಲು ಮೈಲಾರ, ಲನ್ನಾಗರದ ಮೈಲಾರ, ಮುಡುಕುತೊರೆ ಮೈಲಾರ, ನಾಗಮಂಡಲ ತಾಲ್ಲೂಕಿನ ಮೈಲಾರ, ಶ್ರೀಶೈಲ ಕ್ಷೇತ್ರ ಮೈಲಾರ. ಇವುಗಳಿಗೆ ಸಂಬಂಧಿಸಿದ ಸ್ಥಳ ಕಥೆಗಳೂ ಇವೆ.

ವಿಶೇಷ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: