ಮೈಥಿಲಿ ಸಾಹಿತ್ಯ
ಮೈಥಿಲೀ ಭಾಷಾಸಾಹಿತ್ಯಗಳಿಗೆ ಬಿಹಾರ ಪ್ರಾಂತ್ಯ ತವರು. ಸ್ವಾತಂತ್ರ್ಯಾನಂತರ ಕಾರಣಾಂತರಗಳಿಂದ ಮೈಥಿಲೀ ಭಾಷೆಗೆ ನಿರೀಕ್ಷಿಸದಷ್ಟು ಮಾನ್ಯತೆ ದೊರಕದೆಹೋದ ನಿಮಿತ್ತ ಇದು ಅನೇಕ ಎಡರು ತೊಡರುಗಳನ್ನು ಎದುರಿಸಬೇಕಾಯಿತು. ಕೇಂದ ಸಾಹಿತ್ಯ ಅಕಾಡೆಮಿಯ ಮೈಥಿಲೀಯನ್ನು 1965ರಲ್ಲಿ ಭಾರತದ ಹದಿನೇಳನೆಯ ಸ್ವತಂತ್ರ ಸಾಹಿತ್ಯ ಭಾಷೆಯೆಂದು ಅಂಗೀಕರಿಸಿದ್ದರೂ ಈ ತನಕ ಇದಕ್ಕೆ ಭಾರತೀಯ ಸಂವಿಧಾನದಲ್ಲಿ ಮನ್ನಣೆ ದೊರೆತಿಲ್ಲ. ಹಾಗಾಗಿ ಆಡಳಿತ ಭಾಷೆಯಾಗಿ ಮತ್ತು ಅಧಿಕೃತ ಶೈಕ್ಷಣಿಕ ಭಾಷೆಯಾಗಿ ವಿಕಾಸಗೊಳ್ಳಲು ಇದಕ್ಕೆ ಹೆಚ್ಚಿನ ಅವಕಾಶ ದೊರೆತಿಲ್ಲ. ಬಿಹಾರ ಮತ್ತು ಪಾಟ್ನಾ ವಿಶ್ವವಿದ್ಯಾಲಯಗಳಲಲ್ಲಿ ಸ್ನಾತಕೋತ್ತರ ಹಾಗೂ ಸಂಶೋಧನ ಮಟ್ಟದಲ್ಲಿ ಮೈಥಿಲೀ ಭಾಷಾಸಾಹಿತ್ಯಗಳ ಅಧ್ಯಯನಕ್ಕೆ ಅವಕಾಶಗಳಿವೆ.
ಈ ಸಾಹಿತ್ಯವನ್ನು ಕಾಲದ ದೃಷ್ಟಿಯಿಂದ ಆದಿಕಾಲ (1000-1600) ಮಧ್ಯಕಾಲ (1600-1860) ಮತ್ತು ಆಧುನಿಕ ಕಾಲ (1860-ರಿಂದ ಈಚೆಗೆ) ಎಂಬುದಾಗಿ ವರ್ಗೀಕರಿಸಲಾಗಿದೆ.
ಆದಿಕಾಲ
ಬದಲಾಯಿಸಿಈ ಸಾಹಿತ್ಯದ ಪ್ರಾಚೀನ ರೂಪವನ್ನು ಮೈಥಿಲಿಯೆಂದೇ ಗುರುತಿಸುವುದು ಕಷ್ಟ. ಕೆಲವು ಪ್ರಾಚೀನ ರೂಪಗಳು, ಬೌದ್ಧ ತಾಂತ್ರಿಕರ ಅಪಭ್ರಂಶ ದೋಹೆಗಳಲ್ಲಿ ಮತ್ತು ಭಾಷಾ ಗೀತೆಗಳಲ್ಲಿ ಕಂಡುಬರುತ್ತವೆ. ಇವುಗಳ ಭಾಷೆ ಮಿಥಿಲಾ ಪ್ರದೇಶದ ಪೂರ್ವಭಾಗದ ಆಡುನುಡಿಯ ಹಳೆಯ ರೂಪವಾಗಿದ್ದು ಬಂಗಾಲಿ, ಒರಿಯ ಹಾಗೂ ಅಸ್ಸಾಮಿ ಸಾಹಿತಿಗಳು ಇದನ್ನೇ ತಮ್ಮ ತಮ್ಮ ಸಾಹಿತ್ಯದ ಮೊದಲ ರೂಪವೆಂದು ಪ್ರತಿಪಾದಿಸುತ್ತಾರೆ. ಮಿಥಿಲಾ ಪ್ರದೇಶದಲ್ಲಿ ಕ್ರಿ. ಪೂ. 500-350 ರಿಂದ ಮೊದಲುಗೊಂಡು 20ನೆಯ ಶತಮಾನದ ಮೊದಲ ಭಾಗದತನಕ ದೊರೆತ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಯುಕ್ತವಾಗಿ ವರ್ಗೀಕರಿಸಿ ಸುಮಾರು 1927ರಲ್ಲಿಯೇ ಹನ್ನೊಂದು ಭಾಗಗಳಲ್ಲಿ ಪ್ರಕಾಶಪಡಿಸಲಾಯಿತು. 1933ರಲ್ಲಿ ಇದೇ ಬಗೆಯ ಇನ್ನೂ ಕೆಲವು ಹಸ್ತಪ್ರತಿಗಳು ಬೆಳಕಿಗೆ ಬಂದವು. ಈ ಪೈಕಿ ಸಂಸ್ಕೃತ, ಪ್ರಾಕೃತ ಹಾಗೂ ಸ್ಥಳೀಯ ಭಾಷೆಯ ಕೃತಿಗಳು ಸೇರಿವೆ.
ಸುಮಾರು ಹತ್ತನೆಯ ಶತಮಾನದ ಹೊತ್ತಿಗೆ ಮಿಥಿಲೆಯಲ್ಲಿ ಕರ್ನಾಟಕದ ರಾಜರ ಪ್ರಾಬಲ್ಯ ಹೆಚ್ಚಾಯಿತು. ಅವರು ಮೈಥಿಲೀ ಸಂಗೀತ ಪರಂಪರೆಗೂ ನಾಂದಿ ಹಾಡಿದರು. ಈ ವಂಶದ ಹರಸಿಂಹ ದೇವನ ಕಾಲ (ಸು. 1324) ಸ್ವರ್ಣಯುಗ ಎನಿಸಿಕೊಂಡಿತು. ಆತನ ಸಮಕಾಲೀನನಾಗಿದ್ದ ಜ್ಯೋತಿರೀಶ್ವರ ಠಾಕುರನ ವರ್ಣರತ್ನಾಕರ ಎಂಬ ಗದ್ಯಕಾವ್ಯ ಹೆಚ್ಚು ಪ್ರಸಿದ್ಧಿ ಪಡೆಯಿತು. ಈಚೆಗೆ ಇದೇ ಕವಿಯ ಧೂರ್ತಸಮಾಗಮ ಎಂಬ ನಾಟಕ ಹಾಗೂ ಮೈಥಿಲೀ ಗೀತೆಗಳು ದೊರಕಿವೆ.
ಜ್ಯೋತಿರೀಶ್ವರನ ತರುವಾಯ ಖ್ಯಾತಿವೆತ್ತ ಕವಿಯೆಂದರೆ ವಿದ್ಯಾಪತಿ ಠಾಕುರ. 1350-1450ರ ಅವಧಿಯನ್ನು ವಿದ್ಯಾಪತಿ ಕಾಲವೆಂದೇ ಕರೆಯುವುದುಂಟು. ಈ ಕಾಲದಲ್ಲಿ ಮಿಥಿಲೆಯಲ್ಲಿ ಓಯಿನಿವಾರ್ ವಂಶ ರಾಜ್ಯವಾಳುತ್ತಿತ್ತು. ಬಂಗಾಲದ ಜಯದೇವನ ಕೃಷ್ಣಪ್ರೇಮದ ಸಂಗೀತ ಪರಂಪರೆಯನ್ನೇ ಅನುಸರಿಸಿ ಮೈಥಿಲ ಕೋಕಿಲವೆಂದು ಹೆಸರು ಪಡೆದ ವಿದ್ಯಾಪತಿ ತನ್ನ ಸಾವಿರಾರು ಗೀತೆಗಳ ಮೂಲಕ ಮೈಥಿಲೀ ಗೀತಕಾವ್ಯಕ್ಕೆ ಒಂದು ವಿಶಿಷ್ಟ ಪರಂಪರೆಯನ್ನು ಹಾಕಿಕೊಟ್ಟ. ಈ ಬುನಾದಿಯ ಮೇಲೆ ಪುಷ್ಟಿಗೊಂಡ ಮೈಥಿಲೀ ಅನಂತರದ ಮೂರು ಶತಮಾನಗಳ ತನಕ ಪೂರ್ವಭಾರತದಲ್ಲಿ ತುಂಬ ಜನಪ್ರಿಯವಾಯಿತು. ವಿದ್ಯಾಪತಿಯ ಹೆಸರು ಬಂಗಾಲ, ಒರಿಸ್ಸ ಹಾಗೂ ಅಸ್ಸಾಮ್ ಪ್ರದೇಶಗಳಲ್ಲೂ ಜನಜನಿತವಾಗಿ ಅಲ್ಲಿಯ ಜನ ಅವನನ್ನು ವೈಷ್ಣವನೆಂದು ಭಾವಿಸಿದರು. ಆತನ ಧಾಟಿಯಲ್ಲೇ ಅನೇಕ ಕವಿಗಳು ಮೈಥಿಲೀ ಪದಾವಳಿಗಳನ್ನು ರಚಿಸಿದರು. ಈ ಪರಂಪರೆ ಈಚಿನತನಕವೂ ನಡೆದು ಬಂದು ವಿಶ್ವಕವಿ ರವೀಂದ್ರರೂ ಭಾನುಸಿಂಹೇರ್ ಪದಾವಲೀ ಎಂಬುದಾಗಿ ಅನೇಕ ಸುಂದರ ಬ್ರಜಬುಲೀ ಪದಗಳನ್ನು ಬರೆದರು.
ಮಿಥಿಲೆಯಲ್ಲಿ ವಿದ್ಯಾಪತಿಯ ಪರಂಪರೆಯ ಅಂಗವಾಗಿ ರಾಧಾಕೃಷ್ಣರನ್ನು ಕುರಿತ ಶೃಂಗಾರ ಗೀತೆಗಳೇ ಅಲ್ಲದೆ ಗೋಸಾಉನಿಶ ಎಂಬ ಶಕ್ತಿವಿಷಯಕ ಹಾಗೂ ನಚಾರಿ ಎಂಬ ಶಿವವಿಷಯಕ ಕವಿತೆಗಳೂ ರಚನೆಗೊಂಡವು. ವಿದ್ಯಾಪತಿಯ ಸಮಕಾಲೀನರ ಪೈಕಿ ಅಮೃತಕರ, ಚಂದ್ರಕಲಾ, ಭಾನು, ವಶಾವಧಾನ, ವಿಷ್ಣುಪುರಿ, ಕವಿಶೇಖರ, ಯಶೋಧರ, ಚತುರ್ಭುಜ ಹಾಗೂ ಭೀಷ್ಮಕವಿ ಉಲ್ಲೇಖಾಹ್ರು. ಮಹಾರಾಜ ಕಂಸನಾರಾಯಣನ (ಸು. 1527) ಆಸ್ಥಾನ ಕವಿಗಳೂ ಮುಖ್ಯರು. ಇವರ ಪೈಕಿ ಜನಪ್ರಿಯನಾದ ಗೋವಿಂದನ ಕಂಸನಾರಾಯಣ ಪದಾವಲಿ ಹೆಸರಾಂತ ಕೃತಿ. ಇತರ ಪ್ರಮುಖ ಕವಿಗಳಲ್ಲಿ ವಹಿನಾಥ ಠಾಕೂರ್, ಲೋಚನ ಝಾ, ಗೋವಿಂದದಾಸ ಝಾ, ರಾಮದಾಸ ಝಾ, ಉಮಾಪತಿ ಉಪಾಧ್ಯಾಯರು ಭಾನುನಾಥ ಝಾ, ಹರ್ಷನಾಥ ಝಾ ಹಾಗೂ ಚಂದಾ ಝಾ ಹೆಸರಿಸಬೇಕಾದವರು. ಅಲ್ಲದೆ ಸಿಂಹನರಸಿಂಹ, ಭೂಪತೀಂದ್ರ ಮಲ್ಲ ಮತ್ತು ಜಗತ್ ಪ್ರಕಾಶ ಮಲ್ಲ ಇವರು ವಿದ್ಯಾಪತಿಯ ಶಿವ ಮತ್ತು ಶಕ್ತಿ ಸಂಬಂಧವಾದ ಪದಗಳನ್ನು ಅನುಕರಿಸಿದವರಲ್ಲಿ ಮುಖ್ಯರು.
ಮಧ್ಯಕಾಲ
ಬದಲಾಯಿಸಿಈ ಅವಧಿಯಲ್ಲಿ ಮುಸಲ್ಮಾನರ ಆಕ್ರಮಣದಿಂದಾಗಿ ಉಂಟಾದ ರಾಜಕೀಯ ಅಲ್ಲೋಲಕಲ್ಲೋಲಗಳು ಸಾಹಿತ್ಯದ ಮೇಲೂ ಪ್ರಭಾವ ಬೀರಿದವು. ಓಯಿನಿವಾರ್ ವಂಶ ಅಳಿದ ಮೇಲೆ ಕವಿಗಳು, ವಿದ್ವಾಂಸರು ಮತ್ತು ಸಂಗೀತ ತಜ್ಞರು ನೇಪಾಲರ ರಾಜಾಸ್ಥಾನಗಳಲ್ಲಿ ಆಶ್ರಯ ಪಡೆದರು. ನೇಪಾಲದ ಮಲ್ಲರಾಜರಿಗೆ ಒಳ್ಳೆಯ ಸಾಹಿತ್ಯಾಭಿರುಚಿ ಇತ್ತು. ಹಾಗಾಗಿ ಈ ಕಾಲದ ಮೈಥಿಲೀ ಸಾಹಿತ್ಯಕ್ಕೆ ನೇಪಾಲವೇ ನೆಲೆವೀಡಾಯಿತು.
ನೇಪಾಲದಲ್ಲಿ ರಚನೆಗೊಂಡ ಮೈಥಿಲೀ ಸಾಹಿತ್ಯದಲ್ಲಿ ನಾಟಕಗಳದ್ದೇ ಸಿಂಹಪಾಲು. ಮೊದಲಿಗೆ ಸಂಸ್ಕೃತ ನಾಟಕಗಳಲ್ಲಿ ಮೈಥಿಲೀ ಹಾಡುಗಳು ಸೇರತೊಡಗಿದವು. ಕ್ರಮೇಣ ಸಂಸ್ಕೃತ ಪ್ರಾಕೃತಗಳ ಬಳಕೆ ಕಡಿಮೆಯಾಗಿ ಮೈಥಿಲೀಯಲ್ಲೇ ನಾಟಕದ ರಚನೆಯಾಗತೊಡಗಿತು. ಮುಂದೆ ಸಂಸ್ಕೃತ ನಾಟಕಗಳ ರೂಪುರೇಷೆಗಳನ್ನು ಕೈಬಿಟ್ಟು ಹೊಸ ಗೀತನಾಟ್ಯ ಪರಂಪರೆ ಪ್ರಾರಂಭವಾಯಿತು. ಇದರಲ್ಲಿ ಸಂಗೀತ ಪ್ರಧಾನವಾಗಿದ್ದು ಗದ್ಯ ಕಡಿಮೆಯಿತ್ತು. ಕಥಾಭಾಗ ಸಂಕೇತಗಳ ಮೂಲಕ ನಡೆಯುತ್ತಿತ್ತು. ರಾಜಾಸ್ಥಾನಗಳಲ್ಲಿ ಬೆಳಗಿನ ಹೊತ್ತು ಇವು ನಡೆಯುತ್ತಿದ್ದವು. ಹೊಸಕಥಾವಸ್ತುಗಳನ್ನು ಬಳಸಿಕೊಳ್ಳದೇ ಪೌರಾಣಿಕ ಕಥೆಗಳಿಗೆ ಗೀತನಾಟ್ಯದ ಲೇಪನ ಕೊಡುತ್ತಿದ್ದರು. ಮಾತಗಾಂವ, ಕಾಠ್ಮಂಡು ಹಾಗೂ ಪಾಟನ್ ಈ ನಾಟಕದ ಕೇಂದ್ರಗಳಾಗಿದ್ದು ಜಗಜ್ಯೋತಿರ್ಮಲ್ಲ, ಜಗತ್‍ಪ್ರಕಾಶಮಲ್ಲ, ಜಿತಾಮಿತ್ರಮಲ್ಲ, ಭೂಪತೀಂದ್ರಮಲ್ಲ, ರಣಜಿತ್‍ಮಲ್ಲ, ವಂಶಮಣಿ ಮತ್ತು ಸಿದ್ಧನರಸಿಂಹದೇವ ಪ್ರಮುಖ ನಾಟಕಕಾರರೆನಿಸಿಕೊಂಡರು. 1768ರ ವೇಳೆಗೆ ನೇಪಾಲಿ ನಾಟಕ ಪರಂಪರೆ ಕೊನೆಗೊಂಡಿತು. ಮಹಾರಾಜ ಪೃಥ್ವೀನಾರಾಯಣ ಶಾಹ್ ಅಲ್ಲಿಯ ಮಲ್ಲರಾಜರನ್ನು ಸೋಲಿಸಿ ಗೂರ್ಖಗಳ ರಾಜ್ಯವನ್ನು ಸ್ಥಾಪಿಸಿದಾಗಿನಿಂದ ಸಾಹಿತ್ಯ ಅವನತಿಗೊಳ್ಳತೊಡಗಿತು.
1600ರಿಂದ ಅರವತ್ತು ವರ್ಷಗಳ ಕಾಲ ಮಿಥಿಲೆಯಲ್ಲಿ ಕೀರ್ತನಿಯ ಎಂಬ ಗೀತನಾಟಕ ಪರಂಪರೆ ಬೆಳೆದುಬಂತು. ಶಿವ ಅಥವಾ ಕೃಷ್ಣನ ಕೀರ್ತನೆಯಿಂದ ಪ್ರಾರಂಭವಾದರೂ ಇವು ಧಾರ್ಮಿಕ ನಾಟಕಗಳಾಗಿರಲಿಲ್ಲ. ಸಂಜೆಯವೇಳೆ ಅಭಿನಯಗೊಳ್ಳುತ್ತಿದ್ದ ಇವಕ್ಕೆ ನಾದಿ ಎಂಬ ವಿಶಿಷ್ಟ ಸಂಗೀತವಿತ್ತು. ಮೊದಲು ಮೈಥಿಲೀ ಹಾಡುಗಳು ಸೇರುತ್ತಿದ್ದು ಕ್ರಮೇಣ ಇಡೀ ನಾಟಕ ಮೈಥಿಲೀಯಾಯಿತು. ವಿದ್ಯಾಪತಿಯ ಗೋರಕ್ಷವಿಜಯ, ಗೋವಿಂದಕವಿಯ ನಳಚರಿತ ನಾಟಕ, ರಾಮದಾಸನ ಆನಂದವಿಜಯ, ದೇವಾನಂದನ ಉಷಾಹರಣ, ಉಮಾಪತಿಯ ಪಾರಿಜಾತ ಹರಣ, ರಮಾಪತಿಯ ರುಕ್ಮಿಣೀ ಪರಿಣಯ ಈ ನಿಟ್ಟಿನಲ್ಲಿ ಮುಖ್ಯ ಕೃತಿಗಳು. ಇವೇ ಅಲ್ಲದೇ ಲಾಲಕವಿಯ ಗೌರಿಸ್ವಯಂವರ, ಹರ್ಷನಾಥನ ಉಷಾಹರಣ ಹಾಗೂ ಮಾಧವಾನಂದ ಉಲ್ಲೇಖಿಸಬೇಕಾದ ಕೃತಿಗಳು. ವಿಶ್ವನಾಥ ಝಾ, ಬಾಲಾಜೀ ಚಂದಾ ಝಾ, ರಾಜಪಂಡಿತ ಬಂದೇವಮಿಶ್ರ ಇತರ ಗಮನಾರ್ಹ ನಾಟಕಕಾರರು. 16-17ನೆಯ ಶತಮಾನದಲ್ಲಿ ಅಸ್ಸಾಮಿನಲ್ಲಿ ಸುಖನ್ ಅಥವಾ ಆಂಕಿಯಾ ನಾಟಕ ಪ್ರಾರಂಭವಾಯಿತು. ಈ ನಾಟಕಗಳು ಗದ್ಯಮಯ. ಸೂತ್ರಧಾರ ನಾಟಕದ ಉದ್ದಕ್ಕೂ ಅಭಿನಯಿಸುತ್ತಿದ್ದ. ಅಭಿನಯಕ್ಕಿಂತ ವರ್ಣನೆ ಹಾಗೂ ಪಾಠನಿರ್ವಹಣೆಗಳ ಬಗ್ಗೆ ಗಮನ ಹೆಚ್ಚಾಗಿತ್ತು. ಮನರಂಜನೆ ಮಾತ್ರವಲ್ಲದೇ ವೈಷ್ಣವಧರ್ಮ ಪ್ರಚಾರವೂ ಮುಖ್ಯ ಉದ್ದೇಶವಾಗಿತ್ತು. ಒಂದಕ್ಕಿಂತ ಹೆಚ್ಚು ಅಂಕಗಳಿರುತ್ತಿರಲಿಲ್ಲ. ಶಂಕರದೇವ, ಮಾಧವದೇವ ಮತ್ತು ಗೋಪಾಲದೇವ ಉಲ್ಲೇಖಾರ್ಹ ಆಂಕಿಯಾ ನಾಟಕಕಾರರು. ಶಂಕರದೇವನ ರುಕ್ಮಿಣೀಹರಣ ಅಸ್ಸಾಮಿನಲ್ಲಿ ತುಂಬ ಜನಪ್ರಿಯವಾಗಿತ್ತು.
17-18ನೆಯ ಶತಮಾನದಲ್ಲಿ ಮೈಥಿಲೀ ಗದ್ಯ ಮತ್ತು ಸಾಹಿತ್ಯ ರೂಪಕಗಳು ಪ್ರಾಚೀನ ದಾನಪತ್ರಗಳು ಹಾಗೂ ಇತರ ದಾಖಲೆಗಳಲ್ಲಿ ಕಂಡುಬರುತ್ತವೆ. ಗದ್ಯದ ಬೆಳವಣಿಗೆ ಕ್ರಮೇಣ ಸ್ವತಂತ್ರವಾಗಿ ಪ್ರಾರಂಭವಾಯಿತು. ಈ ಎರಡು ಶತಮಾನಗಳ ಗೀತಕಾವ್ಯಕಾರರ ಪೈಕಿ ಭಜ್ಜನಕವಿ, ಕರ್ಣಶ್ಯಾಮ, ರಾಮದಾಸ, ಮನಭೋಧ, ನಂದಾಪತಿ, ರತಿಪತಿ ಮುಂತಾದವರು ಹೆಸರಿಸಬೇಕಾದವರು. ಪದ್ಯ ಕ್ರಮೇಣ ದೀರ್ಘಕಾವ್ಯ, ಮಹಾಕಾವ್ಯ, ಚರಿತಕಾವ್ಯ ಮುಂತಾದ ರೂಪಗಳಲ್ಲಿ ವಿಕಾಸಗೊಂಡಿತು.
ಆಧುನಿಕ ಕಾಲ
ಬದಲಾಯಿಸಿಉಳಿದೆಲ್ಲ ಭಾರತೀಯ ಸಾಹಿತ್ಯಗಳಂತೆ ಈ ಸಾಹಿತ್ಯವೂ ಇಂಗ್ಲಿಷ್ ವಿದ್ಯಾಭ್ಯಾಸ ಹಾಗೂ ಸಾಹಿತ್ಯಗಳ ಪ್ರಭಾವಕ್ಕೆ ಒಳಗಾಗಿ ಹೊಸ ಬಗೆಯಲ್ಲಿ ಬೆಳೆದುಬಂತು. ಹೊಸಕಾಲದ ಹರಿಕಾರರಲ್ಲಿಕವೀಶ್ವರ ಚಂದಾ ಝಾ (ನಿಧನ 1907) ಪ್ರಮುಖರಾದವರು. ಇವರ ರಾಮಾಯಣ ಎಂಬ ಮಹಾಕಾವ್ಯ ಹೊಸ ಮೈಥಿಲೀ ಸಾಹಿತ್ಯಕ್ಕೆ ಕೀರ್ತಿಕಲಶವಾಯಿತು.
ಆಧುನಿಕ ಕಾಲ ಪ್ರಧಾನವಾಗಿ ಗದ್ಯದ ಕಾಲ. ವೃತ್ತಪತ್ರಿಕೆಗಳೂ ನಿಯತಕಾಲಿಕೆಗಳೂ ಈ ದಿಸೆಯಲ್ಲಿ ಸಲ್ಲಿಸಿದ ಸೇವೆ ಅಪಾರ. ಮೈಥಿಲಹಿತಸಾಧನ, ಮಿಥಿಲಾಮಿಹಿರ, ಮಿಥಿಲಾ, ವೈದೇಹಿ, ಸೋನಾಮಾಟಿ, ಮಿಥಿಲಾ ಜ್ಯೋತಿ ಮುಂತಾದವನ್ನು ಹೆಸರಿಸಬಹುದು. ಮೈಥಿಲೀ ಗದ್ಯಶೈಲಿಯನ್ನು ಸ್ಫುಟಗೊಳಿಸಿದವರಲ್ಲಿ ಉಮೇಶಮಿತ್ರ, ರಮಾನಾಥ ಝಾ, ದೀನಬಂಧು ಝಾ ಮೊದಲಾದವರು ಉಲ್ಲೇಖಾರ್ಹರು.
ಆಧುನಿಕ ಮೈಥಿಲೀ ಸಾಹಿತ್ಯದ ಒಂದು ದೊಡ್ಡ ಭಾಗ ಕತೆಕಾದಂಬರಿಗಳದ್ದು. ಇಲ್ಲೂ ಮೊದಲಿಗೆ ಭಾಷಾಂತರಗಳದ್ದೇ ಹಿರಿಯ ಪಾತ್ರ. ಪರಮೇಶ್ವರ ಝಾ, ರಾಸಬಿಹಾರಿಲಾಲದಾಸ್, ಜನಾರ್ಧನ ಝಾ ಬೋಲಾ ಝಾ, ಪುಣ್ಯಾನಂದ ಝಾ ಕತೆಕಾದಂಬರಿಕಾರರಲ್ಲಿ ಉಲ್ಲೇಖಾರ್ಹರು. ಅನಂತರ ಬಂದ ಹರಿಮೋಹನ ಝಾ ಅವರ ಕನ್ಯಾದಾನ ಮತ್ತು ದ್ವಿರಾಗಮನ ಕಾದಂಬರಿಗಳು ಮೈಥಿಲೀ ಸಾಹಿತ್ಯದ ಜೀವಂತಿಕೆಯನ್ನು ಎತ್ತಿಹಿಡಿದವು. ಯಾತ್ರೀ ಅವರ ಪಾರೋ ಹಾಗೂ ಮನೀಂದ್ರನಾಥ ಚೌಧರಿ ರಾಜಕಮಲರ ಆದಿಕಥಾ ಹೆಸರಾಂತ ಕೃತಿಗಳು. ಸಮಕಾಲೀನ ಕತೆಕಾದಂಬರಿಕಾರರ ಪೈಕಿ ಮಾಯಾನಂದ, ಧೀರೇಂದ್ರ, ಲಲಿತ್, ರಮಾನಂದ ರೇಣು, ಅಮರ, ಗೌರಿಮಿತ್ರ, ವಿದಿತಾ, ಸುಧಾಂಶು ಶೇಖರ ಚೌಧರಿ, ಯೋಗಾನಂದ, ಜೀವಕಾಂತ ಪ್ರಭಾಸ್ ಕುಮಾರ ಚೌಧರಿ, ಉಪೇಂದ್ರನಾಥ ಝಾ ವ್ಯಾಸ, ಶೈಲೇಂದ್ರ ಮೋಹನ ಝಾ, ಹಂಸರಾಜ್, ಗಣೇಶಗುಂಜನ್ ಪ್ರಮುಖರಾಗಿದ್ದಾರೆ. ಸಾಮಾಜಿಕ ಸಮಸ್ಯೆಗಳು, ಮಾನಸಿಕ ತೊಳಲಾಟ, ಹದಿಮನಸ್ಸಿನ ಆಕಾಂಕ್ಷೆಗಳು, ದಲಿತ ಸಮಸ್ಯೆಗಳು, ನಾಗರಿಕ ಬದುಕಿನ ಜಂಜಾಟ, ವ್ಯಕ್ತಿವೈಶಿಷ್ಟ್ಯ ಇಂಥ ಯಾವುದೇ ಚಿತ್ರಣದಲ್ಲೂ ಮೈಥಿಲೀ ಕತೆ ಕಾದಂಬರಿಗಳು ಹಿಂದುಳಿದಿಲ್ಲ.
ಗದ್ಯ ಮತು ಪ್ರಬಂಧ ಕ್ಷೇತ್ರದಲ್ಲಿ ಗಂಗಾನಂದ ಸಿಂಹ, ಭುವನ್, ಉಮೇಶ ಮಿಶ್ರ, ಮನಮೋಹನ್, ನಗೇಂದ್ರಕುಮಾರ್, ಉಮಾನಾಥ ಝಾ, ಉಪೇಂದ್ರನಾಥ ಝಾ ಮುಂತಾದವರು ಪ್ರಮುಖರು. ಇವರೆಲ್ಲ ಉತ್ತಮ ಕತೆಗಾರರು. ಭಾಷಾಸಾಹಿತ್ಯಗಳನ್ನು ಕುರಿತು ಕೆಲಸ ಮಾಡಿದವರಲ್ಲಿ ದೀನಬಂಧು ಝಾ, ಸುಭದ್ರಾ ಝಾ, ಗಂಗಾಪತಿಸಿಂಹ, ಬಲದೇವ ಮಿಶ್ರ, ರಾಜೇಶ್ವರ ಝಾ, ನರೇಂದ್ರನಾಥ ಝಾ ಪ್ರಮುಖರು. ದಾರ್ಶನಿಕ ಗದ್ಯ ಲೇಖಕರಲ್ಲಿ ಕ್ಷೇಮಾಧಾರಿ ಸಿಂಹ, ಸರ್ ಗಂಗಾನಾಥ ಝಾ ಹೆಸರಿಸಬೇಕಾದವರು.
ಆಧುನಿಕ ಮೈಥಿಲೀ ನಾಟಕಗಳ ಮುಖ್ಯ ವಸ್ತು ಸಾಮಾಜಿಕ ಸಮಸ್ಯೆಗಳು. ಬಂಗಾಲಿಯಿಂದ ಅನುವಾದಗಳ ರೂಪದಲ್ಲಿ ನಾಟಕಗಳ ಮಹಾಪೂರ ಮೈಥಿಲೀಯತ್ತ ಹರಿಯುತ್ತಿದೆ. ಜೀವನ ಝಾ ಹೊಸ ನಾಟಕಗಳಿಗೆ ಅಡಿಪಾಯ ಹಾಕಿದರು. ಆನಂದ ಝಾ, ಈಶನಾಥ ಝಾ, ತೃಪ್ತಿ ನಾರಾಯಣಲಾಲ, ಗುಣನಾಥ ಝಾ, ಮಹೇಂದ್ರ ಝಾ, ಗೋವಿಂದ ಝಾ, ಬಾಬೂ ಸಾಹೇಬ ಚೌಧರಿ ಖ್ಯಾತ ನಾಟಕಕಾರರು. ಈಚೆಗೆ ಬಂಗಾಲಿ ಸಂಸರ್ಗದಿಂದಾಗಿ ಮೈಥಿಲೀ ನಾಟಕಗಳಿಗೆ ಹೊಸ ಹುರುಪು ಮೂಡುತ್ತಿದೆ. ನಾಟಕಗಳ ಭಾಷಾಂತರಕಾರರ ಪೈಕಿ ಸೀತಾರಾಮ ಚೌಧರಿ ಮತ್ತು ರಾಜಾನಂದನಲಾಲದಾಸ ಉಲ್ಲೇಖಾರ್ಹರು. ಮಣಿಪದ್ಮ, ಲಲಿತೇಶ್ವರ ಝಾ, ರಾಜೇಶ್ವರ ಝಾ ಹೆಸರಾಂತ ಐತಿಹಾಸಿಕ ನಾಟಕಕಾರರು. ಸ್ವಾತಂತ್ರ್ಯಾ ನಂತರ ಏಕಾಂಕ ನಾಟಕಗಳು ಮೈಥಿಲೀಯಲ್ಲಿ ಜನಪ್ರಿಯವಾಗುತ್ತಿವೆ.
ಮೈಥಿಲೀ ಗದ್ಯ ಸಾಹಿತ್ಯದಲ್ಲಿ ಮಹಾಕಾವ್ಯ, ಖಂಡಕಾವ್ಯ, ಗೀತಕಾವ್ಯ, ಮುಕ್ತಕಾವ್ಯ ಮುಂತಾದ ಪ್ರಕಾರಗಳಿವೆ. ಸಂಪ್ರದಾಯದಿಂದ ದೂರವಾದ ಮತ್ತು ವಾಸ್ತವತೆಯ ನೆಲೆಗಟ್ಟಿನ ಮೇಲೆ ನಿಂತ ರಚನೆಗಳೂ ಕಂಡುಬರುತ್ತವೆ. ಸೀತಾರಾಮ ಝಾ ಅವರ ಅಂಬಾಚರಿತ, ಲಕ್ಷ್ಮಣ ಝಾ ಅವರ ಗಂಗಾ ಮಧುಪ ಅವರ ರಾಧಾವಿರಹ, ದೀನಾನಾಥ ಝಾ ಅವರ ಚಾಣಕ್ಯ, ವಿದು ಅವರ ಸೀತಾಯಣ ಕೆಲವು ಹೆಸರಾಂತ ಮಹಾಕಾವ್ಯಗಳು. ಕೇದಾರನಾಥಲಾಭ, ಗಣೇಶ ಗುಂಜನ, ಉಪೇಂದ್ರನಾಥ ಝಾ ಇವರು ಖಂಡಕಾವ್ಯಗಳನ್ನು ಬರೆದಿದ್ದಾರೆ. ರಾಘವಾಚಾರ್ಯರ ದೇಶಭಕ್ತಿ ಗೀತೆಗಳು ತುಂಬ ಜನಪ್ರಿಯವಾಗಿವೆ. ಯಾತ್ರಿ, ಸುರೇಂದ್ರ ಝಾ ಸಮನ್, ಮಧುಪ್ ಮುಂತಾದವರು ಭಾವಗೀತೆಗಳ ಕ್ಷೇತ್ರದಲ್ಲಿ ಪ್ರಮುಖರು. ಮೈಥಿಲೀ ನವ್ಯಕಾವ್ಯ ಪ್ರವರ್ತಕರೆನಿಸಿದವರು ಮಣೀಂದ್ರ ರಾಜಕಮಲ್ ಚೌಧರಿ. ಪಾಶ್ಚಾತ್ಯ ಸಾಹಿತ್ಯದಿಂದ ಪ್ರಭಾವಗೊಂಡರೂ ಮಣ್ಣಿನ ವಾಸನೆಯಿಂದ ದೂರವಾಗದ ಇವರ ರಚನೆಗಳಲ್ಲಿ ನೈಜ ಜೀವನಚಿತ್ರಣ ಹಾಗೂ ಮುಕ್ತ ಪ್ರಾಮಾಣಿಕತೆ ಎದ್ದು ಕಾಣುತ್ತದೆ. ಈ ಪರಂಪರೆಯನ್ನು ಮುಂದುವರಿಸುತ್ತಿರುವವರಲ್ಲಿ ಪ್ರಮುಖರೆಂದರೆ ರಾಮಕೃಷ್ಣ ಝಾ ಕಿಸುನ್, ಮಾಯನಂದಮಿಶ್ರ, ಸೋಮದೇವ, ರಮಾನಂದ ರೇಣು, ಕೀರ್ತಿನಾರಾಯಣ ಮಿಶ್ರ, ಜೀವಕಾಂತ, ಭೀಮನಾಥ ಝಾ, ಯುವಕವಿಗಳ ಪೈಕಿ ಹಂಸರಾಜ, ಧೀರೇಂದ್ರ, ಧೂಮಕೇತು, ಮಧುಕರ, ತಾರಾಕಾಂತ ಪ್ರಕಾಶ, ರಾಮಾನುಗ್ರಹ ಝಾ, ನಚಿಕೇತ, ಹೇತುಕರ ಝಾ ಮೊದಲಾದವರನ್ನು ಹೆಸರಿಸಬಹುದು.