ಮೃಗಶಿರಾ
ಮೃಗಶಿರಾ - ಒರೈಯನ್ (ಮಹಾವ್ಯಾಧ) ನಕ್ಷತ್ರಪುಂಜದ ಒಂದು ನಕ್ಷತ್ರ (ಲ್ಯಾಮ್ಡ ಒರೈಯನ್). ಲ್ಯಾಮ್ಡ ಹೆಕ್ ಪರ್ಯಾಯನಾಮ. ವಿಷುವದಂಶ 5 ಗಂ.33 ಮಿ.38ಸೆ., ಘಂಟಾವೃತ್ತಾಂಶ 9º 23 33” ದಕ್ಷಿಣ. ನಿರಪೇಕ್ಷಕಾಂತಿಮಾನ-5.11; ಪ್ರರೂಪವರ್ಗ ಔ8; ಸೂರ್ಯನಿಂದ 1,800 ಬೆಳಕು ವರ್ಷಗಳ ದೂರದಲ್ಲಿದೆ. ಅಶ್ವಿನ್ಯಾದಿ ಇಪ್ಪತ್ತೇಳು ನಿತ್ಯನಕ್ಷತ್ರಗಳ ಪೈಕಿ ಐದನೆಯದು.
ಪ್ರಾಚೀನ ಮಾನವನ ಕಲ್ಪನೆಗೆ ಅನುಗುಣವಾಗಿ ಮಹಾವ್ಯಾಧ-ವೃಷಭ (ಒರೈಯನ್-ಟಾರಸ್) ಹೋರಾಟದ ಪ್ರಸಂಗವನ್ನು ಆಕಾಶದ ಚಿತ್ರಪಟದಲ್ಲಿ ಮೂಡಿಸುವಾಗ ಮಹಾವ್ಯಾಧನ (ಬೇಟೆಗಾರ) ಕತ್ತಿನ ಬಳಿಯಲ್ಲಿ ಇರುವಂತೆ ಈ ನಕ್ಷತ್ರವನ್ನು ಚಿತ್ರಿಸುವುದಿದೆ. ಕಾಲ್ಪನಿಕ ಮೃಗದ ಶಿರದ ಸ್ಥಾನದಲ್ಲಿರುವ ಬದಲಿಗೆ ವ್ಯಾಧಶಿರದ ಬಳಿಯಲ್ಲಿ ಇದ್ದು ಮೃಗಶಿರಾ ಎಂಬ ಹೆಸರನ್ನು ಈ ನಕ್ಷತ್ರ ತಾಳಿರುವುದು ಒಂದು ವಿಪರ್ಯಾಸ. ಡಿಸೆಂಬರ್ ತಿಂಗಳಿನಲ್ಲಿ ಮಹಾವ್ಯಾಧ ನಕ್ಷತ್ರ ಪುಂಜದ ವ್ಯಾಧಭುಜ (ಬೆಲ್ಲಾಟ್ರಿಕ್) ಮತ್ತು ಆರ್ದ್ರಾ (ಬೆಟಲ್‍ಜ್ಯೂಸ್) ನಕ್ಷತ್ರಗಳನ್ನು ಕೂಡಿಸುವ ಕಾಲ್ಪನಿಕ ರೇಖೆಯ ಸನ್ನಿಹಿತ ನಡುಬಿಂದುವಿನ ಉತ್ತರಕ್ಕೆ ಆಕಾಶದಲ್ಲಿ ಕಾಣಿಸಿಕೊಳ್ಳುವ ಮೂರು ನಕ್ಷತ್ರಗಳ ಪೈಕಿ ಅಧಿಕ ಕಾಂತಿಯುತವಾದುದೇ ಮೃಗಶಿರಾ ನಕ್ಷತ್ರ.