ಮೂಕಾಭಿನಯ ಮಾತಿಗೆ ಬದಲಾಗಿ (ಅಥವಾ ಮಾತಿಗೆ ಪೂರಕವಾಗಿ) ದೇಹದ ವಿವಿಧ ಅಂಗಗಳ ಸೂಕ್ತ ಚಲನೆಯನ್ನೂ ಮುಖಭಾವವನ್ನೂ ಅವಲಂಬಿಸುವ ನಾಟಕೀಯ ಅಭಿವ್ಯಕ್ತಿ (ಮೈಮ್). ಮಾನವನ ನಾಟಕೀಯ ಅಭಿವ್ಯಕ್ತಿಗಳಲ್ಲಿ ಅತ್ಯಂತ ಪ್ರಾಚೀನವಾದ ರೂಪ ನಮ್ಮಲ್ಲಿ 'ಮೂಕಾಭಿನಯ ಎನ್ನುವ ಪದ ಪಾಶ್ಚಾತ್ಯ ರಂಗಸಂಸ್ಕøತಿಯ 'ಮೈಮ್ ಪದಕ್ಕೆ ಸಂವಾದಿಯಾಗಿ ಬಳಕೆಯಾಗುತ್ತಿದೆ. ರಂಗಭೂಮಿಯ ಅತಿಮುಖ್ಯ ಅಂಗವೆನಿಸುವ ನಟನ ಭಾವಾಭಿನಯಕ್ಕೆ ಒಂದು ಸವಾಲಾಗಿರುವಂತೆಯೇ ಮಾತನ್ನು ಆಶ್ರಯಿಸುವ ನಾಟಕಗಳನ್ನೂ ಮೀರಿಸುವ ಪರಿಣಾಮ ಸಾಧ್ಯತೆಯನ್ನು ಮೂಕಾಭಿನಯ ಪಡೆದಿದೆ.

ಇತಿಹಾಸ ಬದಲಾಯಿಸಿ

ಐರೋಪ್ಯ ದೇಶದಲ್ಲಿ ಬಹಳ ಹಿಂದಿನಿಂದಲೂ 'ಮೈಮ್ ನಾಟಕ ಪ್ರಕಾರ ಇತ್ತೆಂದು ತಿಳಿದುಬರುತ್ತದೆ. ನಮಗೆ ಇಂದು ಪರಿಚಯವಿರುವ ಪ್ರೌಢಮಟ್ಟದ ನಾಟಕ ಕೆಲವೇ ಲಕ್ಷಣಗಳನ್ನು ಮೂಲರೂಪದ ಮೈಮ್‍ನಲ್ಲಿ ಗುರುತಿಸಬಹುದು. ಪ್ರಾಚೀನ ಜಗತ್ತಿನ ಎಲ್ಲೆಡೆಯೂ ಗಾರುಡಿಗರು, ಲಾವಣಿಕಾರರು, ದೊಂಬರಾಟದವರು-ಮುಂತಾದ ಅಲೆಮಾರಿಗಳು ಸಂತೆಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ, ಖಾಸಗಿ ಮನೆಗಳಲ್ಲಿ ಜನರನ್ನು ಮೂಕಾಭಿನಯದಿಂದ ಬಗೆಬಗೆಯಾಗಿ ರಂಜಿಸುತ್ತಿದ್ದರು. ಇದರ ಪ್ರದರ್ಶನ ಬಹು ಸರಳ ಸ್ವರೂಪದ್ದಾಗಿತ್ತು. ಇವರಿಗೆ ಸಮಾಜದಲ್ಲಿ ಗೌರವದ ಸ್ಥಾನವೇನೂ ಇರಲಿಲ್ಲ. ತೀರ ಇತ್ತೀಚಿನವರೆಗೂ ಈ ಭಾವನೆಯೇ ಪ್ರಧಾನವಾಗಿತ್ತು; ಆದರೆ ಈಗ ಇದಕ್ಕೆ ಒಂದು ಕಲಾಪ್ರಕಾರವಾಗಿಯೇ ಗಣ್ಯ ಸ್ಥಾನಮಾನಗಳೂ ಲಭ್ಯವಾಗಿವೆ.

ಪುರಾತನ ಗ್ರೀಕ್ ರಂಗಭೂಮಿಯ ಕಾಲಕ್ಕೇ ಮೂಕಾಭಿನಯ ಒಂದು ಕಲಾಮಾಧ್ಯಮವಾಗಿ ಬೆಳೆಯಿತು. ಕ್ರಿ. ಪೊ. 6ನೆಯ ಶತಮಾನದಲ್ಲೇ ಗ್ರೀಸಿನಲ್ಲಿ ಮೂಕಾಭಿನಯ ಇದ್ದ ಬಗ್ಗೆ ತಿಳಿದುಬರುತ್ತದೆ ಸೋಫ್ರಾನ್ ಸಿರಕ್ಯೂಸ್ ಎಂಬಾತ ಈ ಆಟಕ್ಕೆ ಕಲಾತ್ಮಕ ರೂಪಕೊಟ್ಟ (ಕ್ರಿ. ಪೊ. 5ನೆಯ ಶತಮಾನ). ಈತ ರಚಿಸಿದ ವೈನೋದಿಕಗಳ ಕೆಲವು ತುಣುಕುಗಳು ಮಾತ್ರ ಇಂದು ಲಭ್ಯವಾಗಿವೆ. ಈ ವಿನೋದ ಪ್ರಕಾರದಲ್ಲಿ ಪೌರಾಣಿಕ ವಸ್ತು ಮತ್ತು ವ್ಯಕ್ತಿಗಳ ವಿಡಂಬನೆ ಮಾಡಲಾಗುತ್ತಿತ್ತು. ಮುಂದೆ ಬೆಳೆದ ಗ್ರೀಕ್ ವೈನೋದಿಕ ನಾಟಕಗಳ ಸ್ವರೂಪದ ಮೇಲೆ ಈ ರಚನೆಗಳು ಪ್ರಭಾವ ಬೀರಿದವು. ಪ್ಲೇಟೋನ ನಾಟಕೀಯ ಸಂಭಾಷಣೆಗಳೂ ಈ ರಚನೆಗಳಿಂದ ಪ್ರಭಾವಿತವಾದವು ಎಂದು ಹೇಳಲಾಗಿದೆ.

ಕ್ರಿ. ಪೊ. 3ನೆಯ ಶತಮಾನದಲ್ಲಿ ರೋಮನ್ನರು ಈ ಪ್ರಕಾರವನ್ನು ಗ್ರೀಕರಿಂದ ಪಡೆದರು. ಕ್ರಿ. ಪೊ. 211ರಲ್ಲಿ ರೋಮಿನಲ್ಲಿ ಮೂಕಾಭಿನಯವಿದ್ದ ಬಗ್ಗೆ ತಿಳಿದು ಬರುತ್ತದೆ. ಸಮಕಾಲೀನ ವ್ಯಕ್ತಿಗಳನ್ನು ಮತ್ತು ವಿಷಯಗಳನ್ನು ವಿಡಂಬಿಸುವ, ಹಾಸ್ಯ ಮಾಡುವ ಚಿಕ್ಕಚಿಕ್ಕ ಪ್ರಹಸನಗಳ ರೂಪದಲ್ಲಿದ್ದ ಮೂಕಾಭಿನಯ ಅಲೆಮಾರಿ ತಂಡಗಳಿಂದ ತಾತ್ಕಾಲಿಕವಾಗಿ ಕಟ್ಟಿದ ಅಟ್ಟಣೆಯ (ಸ್ಟೇಜ್) ಮೇಲೆ ಪ್ರಯೋಗವಾಗುತ್ತಿತ್ತು. ಪ್ರಥಮ ಹಂತದಲ್ಲಿ ಇವು ಆಶುನಾಟಕಗಳಾಗಿದ್ದವು. ಸ್ತ್ರೀ ಪಾತ್ರಗಳಲ್ಲಿ ಸ್ತ್ರೀಯರೇ ರಂಗಕ್ಕೆ ಬಂದುದು ಮೂಕಾಭಿನಯದ ಜನಪ್ರಿಯತೆಯನ್ನು ಹೆಚ್ಚಿಸಿತು. ನಟಿಯರನ್ನು ಮೊದಲ ಬಾರಿಗೆ ರಂಗಕ್ಕೆ ತಂದ ಹಿರಿಮೆಯೂ ಈ ಪ್ರಕಾರಕ್ಕೆ ಸಲ್ಲುತ್ತದೆ.

ಸೀಸರನ ಕಾಲದಲ್ಲಿ ರೋಮಿನಲ್ಲಿ ಮೂಕಾಭಿನಯ ಸಾಹಿತ್ಯರೂಪ ಪಡೆಯಿತು. ಡೆಸಿಮಸ್ ಲ್ಯಾಬೇರಿಯಸ್ (ಕ್ರಿ. ಪೂ. 106-43) ಇದಕ್ಕೆ ಸಾಹಿತ್ಯರೂಪ ನೀಡಿದ ಮೊದಲ ಲ್ಯಾಟಿನ್ ನಾಟಕಕಾರ. ಈತ ರಚಿಸಿದ 43 ಕೃತಿಗಳ ಹೆಸರುಗಳೂ ಸುಮಾರು 140 ಬಿಡಿ ಸಾಲುಗಳೂ ದೊರಕಿವೆ. ವ್ಯಭಿಚಾರ ಮತ್ತು ಅಸ್ವಾಭಾವಿಕ ವರ್ತನೆಗಳನ್ನು ಇವನ ನಾಟಕಗಳು ಚಿತ್ರಿಸುತ್ತಿದ್ದವೆಂದು ಈ ಲಭ್ಯ ಭಾಗಗಳಿಂದ ಊಹಿಸಬಹುದು. ಸಿರಿಯಾ ದೇಶದವನಾದ ಪ್ಯೂಬ್ಲಿಲಿಯಸ್ ಸೈರಸ್ ತನ್ನ ಆಶುರಚನೆಗಳಿಂದ ಲ್ಯಾಬೇರಿಯಸ್ ಹಾಗೂ ಇತರರನ್ನು ಸೋಲಿಸಿದನೆಂದು ತಿಳಿದು ಬರುತ್ತದೆ. ಆದರೆ ಇವನ ಆಶುರಚನೆಗಳು ನಮಗಿಂದು ಅಲಭ್ಯ. ಜೋರಾಗಿ ಪಠಿಸಲೆಂದೇ ರಚಿಸಿದ ಮೂಕನಾಟಕಗಳನ್ನು ರೋಮನ್ ಸಾಮ್ರಾಜ್ಯದಲ್ಲಿ ಕಾಣಬಹುದು. ಆಶುರಚನೆಯಾದ ಇವು ಹೆಚ್ಚಿನ ಜನಪ್ರಿಯತೆ ಪಡೆದಿದ್ದವು. ಆದರೆ ಸಾಹಿತ್ಯದ ಮಟ್ಟಕ್ಕೆ ಏರಿರಲಿಲ್ಲ.

ಕ್ರಿಸ್ತಶಕದ ಪ್ರಾರಂಭದ ಕಾಲಕ್ಕೆ ಈ ಕಲೆಯ ಅಸಭ್ಯತೆ ಅತಿರೇಕಕ್ಕೆ ಮುಟ್ಟಿತು. ವ್ಯಭಿಚಾರ ಮುಖ್ಯ ವಸ್ತುವಾಗಿದ್ದ ಈ ಬಗೆಯ ಪ್ರಸಂಗಗಳನ್ನು ಚಕ್ರವರ್ತಿ ಹೀಲಿಯೋಗ್ಯಾಬಲಸ್ ಎಂಬಾತ ರಂಗದಲ್ಲಿ ಪ್ರದರ್ಶಿಸುವಂತೆ ಆಜ್ಞಾಪಿಸಿದ್ದನಂತೆ. ಆಗತಾನೇ ಪ್ರಬಲವಾಗುತ್ತಿದ್ದ ಕ್ರಿಶ್ಚಿಯನ್ ಧರ್ಮ ಈ ಕಲೆಯನ್ನು ವಿರೋಧಿಸಲು ಈ ಬಗೆಯ ಅತಿರೇಕಗಳೇ ಮುಖ್ಯ ಕಾರಣವಾದವು. ಚರ್ಚಿನ ಆಗ್ರಹಕ್ಕೆ ಪ್ರತೀಕಾರವೆಂಬಂತೆ ಅಲೆಮಾರಿಗಳು ಚರ್ಚಿನ ಆಗ್ರಹಕ್ಕೆ ಪ್ರತೀಕಾರವೆಂಬಂತೆ ಅಲೆಮಾರಿಗಳು ಚರ್ಚಿನ ಧಾರ್ಮಿಕ ವಿಧಿಗಳನ್ನೇ ಗೇಲಿಮಾಡತೊಡಗಿದರು. ಇವರನ್ನು ನಿಗ್ರಹಗೊಳಿಸಲು ಆಗಿಂದಾಗ್ಗೆ ಮಸೂದೆಗಳು ಜಾರಿಗೆ ಬಂದವು. ಅಲೆಮಾರಿಗಳನ್ನು ಹತೋಟಿಯಲ್ಲಿ ತರುವ ಉದ್ದೇಶದಿಂದಲೇ ಒಂದು ಘಟ್ಟದಲ್ಲಿ ರಂಗದ ಮೇಲೆ ಸಂಭಾಷಣೆಯನ್ನು ನಿಷೇಧಿಸಲಾಯಿತು. ಇದರಿಂದಾಗಿ ಆಂಗಿಕಾಭಿನಯ, ಸಂಜ್ಞೆ-ಸಂಕೇತಗಳ ಭಾಷೆ ಶ್ರೀಮಂತವಾಗಿ ಬೆಳೆಯಲು ಅವಕಾಶ ಸಿಕ್ಕಿತು. 5ನೆಯ ಶತಮಾನದಲ್ಲಿ ಮೂಕಾಭಿನಯ ಕಲಾವಿದರಿಗೆ ಚರ್ಚ್ ಬಹಿಷ್ಕಾರ ಹಾಕಿತು. 6ನೆಯ ಶತಮಾನದಲ್ಲಿ ಎಲ್ಲ ರಂಗಚಟುವಟಿಕೆಗಳನ್ನೂ ಸ್ತಬ್ಧಗೊಳಿಸುವಂತಹ ಸುಗ್ರೀವಾಜ್ಞೆ ಹೊರಬಿತ್ತು. ಮುಂದಿನ ನಾಲ್ಕೈದು ಶತಮಾನಗಳು ಐರೋಪ್ಯ ರಂಗಭೂಮಿಯ ಅಂಧಯುಗವೆನ್ನಬಹುದು. ಕಾಲ ಬದಲಾದಂತೆ ಆಲೋಚನೆಗಳೂ ವಿಕಾಸಗೊಂಡವು. ಮುಂದೆ ಇದೇ ಕ್ರಿಶ್ಚಿಯನ್ ಧರ್ಮ ಈ ಕಲೆಯ ಬೆಳವಣಿಗೆಗೂ ಕಾರಣವಾಯಿತು. ಚರ್ಚಿನ ಧಾರ್ಮಿಕ ವಿಧಿಗಳ ಭಾಷೆಯಾದ ಲ್ಯಾಟಿನ್ ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಈ ಕೊರತೆಯನ್ನು ತುಂಬಲು ಮೂಕಾಭಿನಯದ ಸಂಕೇತಭಾಷೆ ಸಹಾಯಮಾಡಿತು. ಧಾರ್ಮಿಕ ಉದ್ದೇಶವನ್ನೇ ಹೊಂದಿದ್ದ ಮಧ್ಯಯುಗದ ಮಿಸ್ಟರಿ, ಮಿರಾಕಲ್ ನಾಟಕ ಪ್ರಕಾರಗಳು ಕೂಡ ಜನರನ್ನು ನೇರವಾಗಿ ಮುಟ್ಟಬಲ್ಲಮೂಕಾಭಿನಯವನ್ನು ಮಾಧ್ಯಮವಾಗಿ ಬಳಸಿಕೊಂಡವು.

ಮೂಕಾಭಿನಯ ಕಲೆಯ ಜನಾನುರಾಗದ ಉತ್ತುಂಗತೆಯನ್ನು 16ನೆಯ ಶತಮಾನದ 'ಕಾಮೆಡಿಯಾ ಡೆಲ್ ಆರ್ಟೆ ಪ್ರಕಾರದಲ್ಲಿ ನೋಡಬಹುದು. ಇಟಲಿಯ ಈ ವಿನೋದ ಆಶುನಾಟಕಗಳನ್ನು ಅಲೆಮಾರಿ ತಂಡಗಳು ಪ್ರದರ್ಶಿಸುತ್ತಿದ್ದವು. ಇವು ಬಹು ಜನಪ್ರಿಯ ಕಾರ್ಯಕ್ರಮಗಳಾಗಿದ್ದು ಮುಂದಿನ ರಂಗಭೂಮಿಯ ಬೆಳವಣಿಗೆಯ ಮೇಲೆ ದಟ್ಟ ಪ್ರಭಾವ ಬೀರಿದವು. ಈ ನಾಟಕಗಳಲ್ಲಿ ನಟರು ಮುಖವಾಡ ಧರಿಸುತ್ತಿದ್ದು, ಸಂಭಾಷಣೆಯ ಜೊತೆ ಜೊತೆಗೆ ಸಂಜ್ಞೆ, ಸಂಕೇತಗಳ ಭಾಷೆಯನ್ನು ಧಾರಾಳವಾಗಿ ಬಳಸುತ್ತಿದ್ದರು. ಈ ವಿನೋದ ನಾಟಕಗಳ ಮೂಲಕ ಎಲ್ಲರಿಗೂ ಚಿರಪರಿಚಿತವಾದ ಕೆಲವು ನಿಶ್ವಿತ ರೂಪದ ಪಾತ್ರಗಳು ಇಂದಿಗೂ ನಾಟಕಗಳಲ್ಲಿ ಮತ್ತೆಮತ್ತೆ ಕಾಣಿಸಿಕೊಳ್ಳುತ್ತವೆ. ಈ ಕಲೆಯಲ್ಲಿ ಇಂದಿಗೂ ಬಳಸುವ ಅನೇಕ ಸಾಂಪ್ರದಾಯಿಕ ಸಂಜ್ಞೆ ಸಂಕೇತಗಳಿಗೆ ಕಾಮೆಡಿಯಾ ಪ್ರಕಾರವೇ ಮೂಲವಾಗಿದೆ.

16-17ನೆಯ ಶತಮಾನಗಳಲ್ಲಿ ಕಾಮೆಡಿಯಾ ಪ್ರಕಾರ ಫ್ರಾನ್ಸ್ ಹಾಗೂ ಇತರ ಯೂರೊಪಿಯನ್ ದೇಶಗಳಿಗೆ ಹರಡಿತು. ಜೊತೆಗೆ ಮೂಕಾಭಿನಯ ಕಲೆಯ ಪ್ರವೇಶವೂ ಆಯಿತು. ಇಟಲಿಯ ಈ ಪ್ರಕಾರದಲ್ಲಿ ದೇಹದ ಅಂಗಾಂಗಗಳ ಚಲನೆಗೆ ಹೆಚ್ಚು ಪ್ರಾಶಸ್ತ್ಯವಿದ್ದು ಒಟ್ಟು ಕಾರ್ಯಕ್ರಮ ಆರ್ಭಟದಿಂದ ಕೂಡಿರುತ್ತಿತ್ತು. ಫ್ರಾನ್ಸ್‍ನಲ್ಲಿ ಬೆಳೆದ ಈ ಕಲೆಯಲ್ಲಿ ಅಭಿನಯಕ್ಕೆ ಒತ್ತು ನೀಡಲಾಯಿತು. ಫ್ರೆಂಚ್ ಸಂಪ್ರದಾಯದ ಕಲಾವಿದರು ಮುಖಭಾವದ ಬಳಕೆಯಿಂದ ರಸಾನುಭವ ನೀಡಿದರೆ, ಇಟಾಲಿಯನ್ನರು ಇಡೀ ದೇಹದ ಅಭಿ ವ್ಯಕ್ತಿಯನ್ನು ಆಶ್ರಯಿಸುತ್ತಿದ್ದರು.

18ನೆಯ ಶತಮಾನದ ಹೊತ್ತಿಗೆ ಈ ಕಲೆಯ ಭಾಷೆ ಸಾಕಷ್ಟು ಶ್ರೀಮಂತವಾಗಿ ಬೆಳೆಯಿತು. ಬ್ಯಾಲೆ ಈ ಕಲೆಯನ್ನು ಅಳವಡಿಸಿಕೊಂಡಿತು. ಬ್ಯಾಲೆಗಳಲ್ಲಿ ಕಥಾಭಾಗವೂ ನೃತ್ಯಪ್ರಧಾನ ಭಾಗಗಳೂ ಇದ್ದು, ಕಥಾಭಾಗದ ಅಭಿವ್ಯಕ್ತಿಗೆ ಮೂಕಾಭಿನಯ ತಂತ್ರಗಳನ್ನೇ ಹೆಚ್ಚಾಗಿ ಬಳಸುತ್ತಿದ್ದರು.

19ನೆಯ ಶತಮಾನದಿಂದೀಚೆಗೆ ವಿಶೇಷ ಪ್ರತಿಭೆಯ ಮೂಕಾಭಿನಯ ಕಲಾವಿದರು ವಿಶ್ವಖ್ಯಾತಿಗಳಿಸಿದರು. ಇವರಲ್ಲಿ ಪ್ರತಿಯೊಬ್ಬರೂ ಈ ಕಲೆಗೆ ತಮ್ಮ ಸ್ವಂತ ಪ್ರತಿಭೆಯನ್ನು ಧಾರೆಯೆರೆದು ವಿಶಿಷ್ಟ ತಂತ್ರಗಳನ್ನು ಸೃಜಿಸಿ, ಆಧುನಿಕ ಮೂಕಾಭಿನಯ ಪ್ರಕಾರವನ್ನು ರೂಪಿಸಿದರು. ಇಂತಹ ಅಪೂರ್ವ ಪ್ರತಿಭೆಯ ಕಲಾವಿದರ ಸರಣಿಯಲ್ಲಿ ಮೊದಲಿಗ ಜಾನ್ ಗ್ಯಾಸ್ಪಾರ್ಡ್ ಬ್ಯಾಟಿಸ್‍ಡೆ ಬೋರಾ. 19ನೆಯ ಶತಮಾನದ ಪೂರ್ವಾರ್ಧದಲ್ಲಿ ಫ್ರಾನ್ಸ್ ದೇಶದಲ್ಲಿದ್ದ ಈತ ದೊಂಬರಾಟದಂತಿದ್ದ ಮೂಕಾಭಿನಯ ಒಂದು ಗಂಭೀರ ರಂಗಕಲೆಯಾಗಿ ಪರಿವರ್ತನೆಗೊಳ್ಳಲು ಕಾರಣನಾದ. ಕಾಮೆಡಿಯಾದ ಒಂದು ಜನಪ್ರಿಯ ಪಾತ್ರವಾದ ಪಿಯೊರೋ ಈತನಿಂದ ನೂತನ ಅರ್ಥದೊಂದಿಗೆ ಪುನಃಸೃಷ್ಟಿ ಪಡೆಯಿತು. ಡೆಬೋರಾ ವಾಸ್ತವಿಕ ದೃಶ್ಯಗಳನ್ನೂ ನೈಜ ಪಾತ್ರಗಳನ್ನೂ ಹೊಂದಿದ್ದ ಕಥಾನಕಗಳನ್ನು ಪ್ರದರ್ಶಿಸಿದ. ಈತ ಅಚ್ಚ ಬಿಳಿಯ ಉಡುಗೆಯನ್ನೂ ಮುಖವರ್ಣಿಕೆಯನ್ನೂ ಬಳಸಿ ಮೂಕಾಭಿನಯ ರಂಗದ ಅಧಿಪತಿಯಾಗಿ ಶೋಭಿಸಿದ. ಇವನ ಜೀವನವನ್ನು ಆಧರಿಸಿ ಒಂದು ಚಲನಚಿತ್ರವನ್ನೂ ಮಾಡಲಾಗಿದೆ. ಈ ಚಿತ್ರದಲ್ಲಿ ಲೂಯಿ ಬ್ಯಾರೋ ಎಂಬ ಪ್ರತಿಭಾವಂತ ನಟನೊಬ್ಬ ಡೆಬೋರಾ ಪಾತ್ರ ನಿರ್ವಹಿಸಿದ್ದಾನೆ.

ಲಂಡನ್ ನಗರದಲ್ಲಿ ಮೂಕಾಭಿನಯ ವಿದೂಪಕನಾಗಿ ಹೆಸರುಗಳಿಸಿದವನೆಂದರೆ ಜೋಸೆಫ್ ಜೋಯಿ ಗ್ರಿಮಾಲ್ಡಿ (1778-1837). ಈತ ಇಂಗ್ಲೆಂಡಿನ ಜನತೆ ಹಿಂದೆ ಕಂಡರಿಯದ ನೈಪುಣ್ಯವನ್ನು ಪ್ರದರ್ಶಿಸಿದ. ಈತ ಬರೆದ ಅನುಭವಗಳ ಹೊತ್ತಿಗೆಯನ್ನು ರಂಗಭೂಮಿಯ ಪ್ರೇಮಿಯಾಗಿದ್ದ ಖ್ಯಾತ ಕಾದಂಬರಿಕಾರ ಚಾಲ್ರ್ಸ್ ಡಿಕನ್ಸ್ ಸಂಪಾದಿಸಿ ಆ ಮೂಲಕ ತನ್ನ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.

ಡೆಬೋರಾನ ಜೀವನವನ್ನಾಧರಿಸಿದ ಚಲನಚಿತ್ರದಲ್ಲಿ ಡೆಬೋರಾನ ತಂದೆಯ ಪಾತ್ರ. ವಹಿಸಿದ್ದ ಎಟ್ಯೆನ್ ಡೆಕ್ರೋ ಮೂಕಾಭಿನಯದ ಬೆಳವಣಿಗೆಯನ್ನು ನಿರ್ದೇಶಿಸಿದ ಮತ್ತೊಬ್ಬ ಪ್ರತಿಭಾವಂತ. ಈತ ಈ ಕಲೆಗೆ ಸಂಬಂಧಿಸಿದಂತೆ ಸಿದ್ಧಾಂತಗಳನ್ನೂ ಅಭ್ಯಾಸ ಕ್ರಮಗಳನ್ನೂ ನಿರ್ದಿಷ್ಟ ಪ್ರಸಂಗಗಳನ್ನೂ ರೂಪಿಸಿ, ಅದರ ಆಧಾರದ ಮೇಲೆ ಶಿಷ್ಯರನ್ನು ತರಬೇತುಗೊಳಿಸಿದ. ಈ ಕಲೆಯ ತಂತ್ರಗಳ ಬೆಳವಣಿಗೆಗೆ ಇವನ ಸಾಧನೆಗಳು ಸಹಕಾರಿಯಾದವು.

ಚಾರ್ಲಿ ಚಾಪ್ಲಿನ್ ಜಗತ್ತಿನ ಅತ್ಯಂತ ಜನಪ್ರಿಯ ಮೂಕಾಭಿನಯ ಕಲಾವಿದ. ಈತ ಮೂಕಿ ಸಿನೆಮಾದ ನಿಮಿತ್ತವಾಗಿ ಬೆಳಕಿಗೆ ಬಂದ. ಕಾಮೆಡಿಯಾ ಪ್ರಕಾರದ ಅಂತಃಸತ್ತ್ವವನ್ನೂ ಉಲ್ಲಾಸಗಳನ್ನೂ ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಿ ಸಂಪೂರ್ಣವಾಗಿ ಮೂಕಾಭಿನಯ ಭಾಷೆಯಲ್ಲೇ ವಿವಿಧ ಭಾವಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ಈತ ಅದ್ವಿತೀಯನೆನಿಸಿದ.

ಡೆಕ್ರೋನ ಶಿಷ್ಯರಲ್ಲಿ ಒಬ್ಬನಾದ ಮಾರ್ಸೆಲ್ ಮಾರ್ಸೋ (1923-) ಅಪಾರ ಖ್ಯಾತಿಗಳಿಸಿ. ವಿಶ್ವದಾದ್ಯಂತ ಈ ಕಲೆಗೆ ಜನಪ್ರಿಯತೆ ಗಳಿಸಿಕೊಟ್ಟ, ರಂಗದ ಮೇಲೆ ಬಿಳಿಮುಖದ ಒಂಟಿ ಪಾತ್ರವಾಗಿ ಕಾಣಿಸಿಕೊಳ್ಳುವ ಮಾರ್ಸೋ ಜಗತ್ತಿನ ಎಲ್ಲೆಡೆಯೂ ಪ್ರದರ್ಶನ ನೀಡಿದ್ದಾನೆ. ಸೃಷ್ಟಿ ವಿಕಾಸ, ನ್ಯಾಯ ಮುಂತಾದ ವಿಷಯಗಳನ್ನು ಈತ ಸಾಂಕೇತಿಕವಾಗಿ ಪ್ರದರ್ಶಿಸುತ್ತಾನೆ. ತನ್ನ ಸೃಷ್ಟಿಯಾದ ಬಿಪ್ ಎಂಬ ಪಾತ್ರದ ಮೂಲಕ ಜಗತ್ತಿನಲ್ಲಿ ಮಾನವನ ಶೋಚನೀಯ ಸ್ಥಿತಿಯನ್ನೂ ಅಸಹಾಯಕತೆಯನ್ನೂ ಚಿತ್ರಿಸುತ್ತಾನೆ. ಬಿಪ್ ಒಬ್ಬ ಶ್ರೀಸಾಮಾನ್ಯ. ಇವನು ಎದುರಿಸುವುದು ಮಹತ್ತ್ವದ ದುರಂತ ಪ್ರಸಂಗಗಳನ್ನೆಲ್ಲ; ದಿನನಿತ್ಯದ ಜಂಜಾಟಗಳನ್ನು, ಬಿಗಿಯಾಗಿ ಕಟ್ಟಿಕೊಂಡ ಕಿಟಕಿ, ತೆರೆಯಲು ಬಾರದ ಬಾಗಿಲು, ಸಮಸ್ಯೆಯಾದ ಕುರ್ಚಿ-ಇಂತಹ ಪ್ರಸಂಗಗಳಲ್ಲಿ ಹೋರಾಡುವ ಬಿಪ್ ಪಾತ್ರದ ಮೂಲಕ ಮನುಷ್ಯಸ್ಥಿತಿಯ ಅಸಹಾಯಕತೆಯನ್ನು ಮಾರ್ಸೋ ಚಿತ್ರಿಸುತ್ತಾನೆ. ಹಲವಾರು ವಿಭಿನ್ನ ಪಾತ್ರಗಳಿರುವ ಸಂಕೀರ್ಣ ಸನ್ನಿವೇಶವನ್ನು ಈತ ಒಂಟಿಯಾಗಿ ನಿರ್ಮಿಸುವುದೂ ಉಂಟು.

ಹಿಂದಿನ ಕಾಮೆಡಿಯಾ ನಟನಂತೆಯೇ ಇಂದಿನ ಮೂಕಾಭಿನಯ ಕಲಾವಿದನೂ ಅಲೆಮಾರಿ ಜೀವನವನ್ನೇ ನಡೆಸುತ್ತಾನೆ. ಇದಕ್ಕೆ ಒಂದು ಅಪವಾದವೆಂದರೆ ಕೋಪನ್‍ಹೇಗನ್‍ನ ಟೆವೊಲಿ ಗಾರ್ಡನ್ಸ್‍ನಲ್ಲಿಯ ಪ್ಯಾಂಟೊಮೈಮ್ ಥಿಯೇಟರ್ 1843ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಪ್ರತಿ ಬೇಸಗೆಯಲ್ಲಿಯೂ ಒಂದೇ ರಂಗ ಮಂದಿರದಲ್ಲಿ ಪ್ರದರ್ಶನ ನೀಡುತ್ತ ಬಂದಿದೆ.

1950ರ ದಶಕದಲ್ಲಿ ಎರಡು ಮೂಕಾಭಿನಯ ತಂಡಗಳು ಸ್ಥಾಪಿಸಲ್ಪಟ್ಟವು-ಚೆಕೋಸ್ಲೊವೇಕಿಯದ ನೃತ್ಯ ಹಾಗೂ ಮೂಕಾಭಿನಯ ಕಲಾವಿದ ಲ್ಯಾಡಿಸ್ಲಾವ್ ಫಿಯಾಲ್ಕ ಸ್ಥಾಪಿಸಿದ ಸಂಸ್ಥೆ ಫಿಯಾಲ್ಕ ಮೈಮ್ ಗ್ರೂಪ್ ಮತ್ತು ಹೈನ್ರಿಕ್‍ಟೊಮಾಸ್ಯೂಸ್ಕಿ ಸ್ಥಾಪಿಸಿದ ಪೋಲಿಷ್ ಮೈಮ್ ಥಿಯೇಟರ್. ಈ ತಂಡಗಳ ಸ್ಥಾಪಕರಿಬ್ಬರೂ ಬ್ಯಾಲೆ ಅಭ್ಯಾಸಮಾಡಿದ್ದು, ಮೂಕಾಭಿನಯ ಕಲೆ ಹೊಂದಿರುವ ಹೆಚ್ಚಿನ ಅಭಿವ್ಯಕ್ತಿ ಸಾಧ್ಯತೆಯನ್ನು ಗುರುತಿಸಿದರು. ಬ್ಯಾಲೆ, ಆಧುನಿಕ ನೃತ್ಯ ಹಾಗೂ ನಾಟಕಗಳ ಸುಯೋಗದಿಂದ ತಮ್ಮ ಕಲಾಪ್ರಕಾರವನ್ನು ರೂಪಿಸಿಕೊಂಡರು. ಇವರಿಬ್ಬರೂ ಬಳೆಸುವ ಮೂಲ ಸಾಮಗ್ರಿಗಳಲ್ಲಿ ಹೋಲಿಕೆಗಳಿವೆ. ಈ ಎರಡು ತಂಡಗಳಲ್ಲಿ ಆಧುನಿಕ ರಂಗಸಾಧ್ಯತೆಗಳನ್ನು. ರಂಗ ತಂತ್ರಗಳನ್ನು ಸಂಪೂರ್ಣವಾಗಿ ಬಳಸಲಾಗುತ್ತದೆ. ಆಳವಾದ ಅಭಿವ್ಯಕ್ತಿ ಹಾಗೂ ಪ್ರಾಮಾಣಿಕವಾದ ತಾತ್ತ್ವಿಕ ವಿಶ್ಲೇಷಣೆಯ ಸಾಧ್ಯತೆಯಿರುವ ಒಂದು ಗಂಭೀರ ರಂಗ ಪ್ರಕಾರವೆಂದು ಇವರು ಈ ಕಲೆಯನ್ನು ಗೌರವಿಸುತ್ತಾರೆ. ಫಿಯಾಲ್ಕನ ತಂಡದಲ್ಲಿ ಆತನೇ ಪ್ರಮುಖ ಕಲಾವಿದನಾಗಿದ್ದು, ಸಂವೇದನಾಶೀಲ ವಸ್ತುವುಳ್ಳ ಕಥನಗಳನ್ನು ಪ್ರದರ್ಶಿಸಲಾಗುತ್ತದೆ. ವಾಸ್ತವಿಕ ಪಾತ್ರಗಳನ್ನು ಚಿತ್ರಿಸುವ ಪೋಲಿಷ್ ಮೈಮ್ ಥಿಯೇಟರ್‍ನ ಪ್ರಯೋಗಗಳಲ್ಲಿ ನೃತ್ಯ ಲಯಗಳ ಪ್ರಭಾವ ಎದ್ದು ತೋರುತ್ತದೆ. ಈ ಹೊಸತಂಡಗಳು ಹಾಗೂ ವಾರ್ಷಿಕ ಉತ್ಸವಗಳಿಂದಾಗಿ ಮೂಕಾಭಿನಯದ ಜನಪ್ರಿಯತೆ ಹೆಚ್ಚುತ್ತಸಾಗಿದೆ: ಸೀಮಿತ ಪ್ರೇಕ್ಷಕ ರಂಜನೆಯಾಗಿ ಉಳಿಯದೆ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ.

ಸ್ವಿಟ್‍ಜóರ್‍ಲೆಂಡಿನ ಮಮ್ಮೆನ್‍ಷಾನ್ಜ್ ಎನ್ನುವ ಮೂವರು ನಟರ ತಂಡ ಅಮೆರಿಕದ ಬ್ರಾಡ್‍ವೇನಲ್ಲಿ ಹಲವಾರು ವರ್ಷಗಳ ಕಾಲ ನಿರಂತರವಾಗಿ ಮೂಕಾಭಿನಯ ಪ್ರದರ್ಶನ ನೀಡಿತು. ಪ್ರೇಕ್ಷಕರೊಡನೆ ಆಪ್ತ ಸಂಬಂಧಕ್ಕೆ ಆಸ್ಪದ ಇರುವ ಬೀಜೌ ಥಿಯೇಟರ್‍ನಲ್ಲಿ ಪ್ರದರ್ಶನ ನಡೆಸಿದ ಈ ತಂಡ ಅಮೆರಿಕದಲ್ಲಿ ಅತಿ ದೀರ್ಘ ಕಾಲ ಪ್ರಯೋಗ ನಡೆಸಿದ ಯಶಸ್ಸುಗಳಿಸಿದೆ. ಈ ತಂಡದ ಕಲಾವಿದರು ದೊಂಬರಾಟದವರಂತೆ ದೇಹವನ್ನು ಬಳಸಿಕೊಳ್ಳುತ್ತಾರೆ. ವಿವಿಧ ರೀತಿಯ ಮುಖವಾಡಗಳನ್ನು ಬಳಸಿ ಮುಖವನ್ನು ಮರೆಸಿಕೊಳ್ಳುತ್ತಾರೆ. ಮೆದುವಾದ ಜೇಡಿಮಣ್ಣನ್ನು ಬಳಸಿ ನಿರ್ದಿಷ್ಟ ಮುಖಭಾವವನ್ನೊ ವಿನ್ಯಾಸವನ್ನೊ ಬಿಂಬಿಸುವುದೂ ಉಂಟು. ರಂಗಪರಿಕರಗಳನ್ನೂ ಬೆಳಕು ಹಾಗೂ ಧ್ವನಿ ಪರಿಣಾಮಗಳನ್ನೂ ಸಮರ್ಥವಾಗಿ ಬಳಸಿಕೊಳ್ಳುತ್ತಾರೆ.

ಅಮೆರಿಕದ ಸಮಾಜದಲ್ಲಿ ಈ ಕಲೆಯ ಬಗ್ಗೆ ಅಪಾರ ಆಸಕ್ತಿ ಹುಟ್ಟಲು ಕಾರಣವೆಂದರೆ, ಯೂರೊಪಿನ ಬೀದಿನಾಟಕ ಚಳವಳಿಯ ಕಲಾವಿದರಂತೆಯೇ ಆಧುನಿಕ ಮೂಕಾಭಿನಯ ಕಲಾವಿದರೂ ತಮ್ಮ ಪ್ರತಿಭೆಯಿಂದ ಬೀದಿಹೋಕರನ್ನು ಆಕರ್ಷಿಸತೊಡಗಿದ್ದು. ಪ್ರೇಕ್ಷಕರಾಗಿ ಬಂದವರನ್ನು ಈ ಕಲೆಯ ಮೋಡಿ ಕೆಲವೊಮ್ಮೆ ಕಲಾವಿದರನ್ನಾಗಿಯೂ ಮಾರ್ಪಡಿಸಿಬಿಡುತ್ತಿತ್ತು. ಬೀದಿನಾಟಕ ಪ್ರಕಾರದಂತೆಯೇ ಈ ಕಲಾಪ್ರಕಾರ ಕೂಡ ವಿವಿಧ ವಿಷಯಗಳ ಬಗ್ಗೆ ಸಾಮಾಜಿಕ ಪ್ರಜ್ಞೆ ಬೆಳೆಸಲು ಕಾರಣವಾಯಿತು. ರಾಜಕೀಯ ಧೋರಣೆಗಳನ್ನು ಪ್ರಕಟಿಸಲು ಇಂತಹ ಪ್ರಯೋಗಗಳನ್ನು ಬಳಸಲಾಗುತ್ತಿದೆ. ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುವುದಕ್ಕಾಗಿಯೂ ಈ ಬಗೆಯ ನಾಟಕಗಳನ್ನು ಬಳಸಲಾಗುತ್ತಿದೆ. ಮೂಕಾಭಿನಯ ಕಲಾವಿದರಿಗೂ ಪ್ರೇಕ್ಷಕರಿಗೂ ನಡುವೆ ಏರ್ಪಡುವ ಬಾಂಧವ್ಯ ಈ ಕಲೆಯ ಪರಿಣಾಮವನ್ನು ತೀವ್ರಗೊಳಿಸುತ್ತದೆ. ಅಂಗವಿಕಲ ಮಕ್ಕಳಿಗೆ ಮೂಕಾಭಿನಯ ಒಂದು ರೀತಿಯ ಶುಶ್ರೂಷೆಯಾಗಿ ಕೂಡ ಬಳಸಲ್ಪಡುತ್ತಿದೆ.

ಇಂದು ರೂಢಿಯಲ್ಲಿರುವ ಮೈಮ್ ಸಂಪೂರ್ಣ ಮೌನವಾದ, ಮಾತಿಲ್ಲದ ಅಭಿವ್ಯಕ್ತಿಯಾಗಿದೆ. ಮುಖಭಾವ, ಅಂಗ-ಸಂಜ್ಞೆ, ಸಂಕೇತಗಳನ್ನೇ ಪೂರ್ಣವಾಗಿ ಅವಲಂಬಿಸಿ, ಎಲ್ಲ ರೀತಿಯ ಸನ್ನಿವೇಶಗಳನ್ನೂ ನಾನಾ ಭಾವ ಸೂಕ್ಷ್ಮತೆಗಳನ್ನೂ ಬಿಂಬಿಸಲಾಗುತ್ತದೆ. ಮುಕಾಭಿನಯ ಕಾರ್ಯಕ್ರಮದಲ್ಲಿ ಹಿನ್ನೆಲೆಯಾಗಿ ಸಂಗೀತವನ್ನೂ ಧ್ವನಿಪ್ರಭಾವಗಳನ್ನೂ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಸಾಧಾರಣ ರಂಗನಾಟಕದ ಪಾತ್ರೋಚಿತ ವೇಷಭೂಷಣಗಳಾಗಲೀ ಪ್ರಸಾಧನವಾಗಲೀ ಇಲ್ಲಿ ಕಂಡುಬರುವುದಿಲ್ಲ. ಇಡೀ ದೇಹದ ಸಂಪೂರ್ಣ ಚಲನೆಗೆ ಅವಕಾಶ ನೀಡುವಂತೆ, ಆದರೆ ಅಂಗಾಂಗಗಳ ಮಾಟ ಸ್ಪಷ್ಟವಾಗಿ ಗೋಚರಿಸುವಂತೆ ಮೂಕಾಭಿನಯ ಕಲಾವಿದನ ವೇಷಭೂಷಣಗಳು ಸಂಯೋಜಿತವಾಗಿರುತ್ತವೆ. ಮುಖಾಲಂಕಾರದಲ್ಲಿ ಮುಖಭಾವದ ಸ್ಪಷ್ಟತೆಗೆ ಪ್ರಾತಿನಿಧ್ಯ, ರಂಗಸಜ್ಜಿಕೆ, ರಂಗಪರಿಕರಗಳು ಇಲ್ಲವೇ ಇಲ್ಲ ಎನ್ನಬಹುದು. ಮೂಕಾಭಿನಯ ಹಾಗೂ ಹಾಸ್ಯಗಳಿಗೆ ನಂಟು ಹಿಂದಿನಂತೆ ಈಗಲೂ ಉಳಿದುಬಂದಿದೆ. ಸಾಧಾರಣವಾಗಿ ಒಂದು ಕಾರ್ಯಕ್ರಮವು ಹಾಸ್ಯ ಉಂಟುಮಾಡುವ ಅಥವಾ ಸ್ವಭಾವ ವೈಚಿತ್ರ್ಯ ಚಿತ್ರಿಸುವ ಹಲವು ಚಿಕ್ಕ ಪ್ರಸಂಗಗಳ ಸರಣಿಯಂತಿರುತ್ತದೆ. ಸಂಭಾಷಣೆಯುಳ್ಳ ನಾಟಕಗಳಲ್ಲಿಯೂ ಮೂಕಾಭಿನಯ ತಂತ್ರಗಳ ಬಳಕೆ ಆಧುನಿಕ ರಂಗಭೂಮಿಯಲ್ಲಿ ಕಂಡುಬರುತ್ತದೆ. ರಂಗನಾಟಕಗಳಲ್ಲಿ ರಂಗಪರಿಕರಗಳನ್ನು ಬಿಟ್ಟುಕೊಟ್ಟು, ನಟರ ಅಭಿನಯದ ಸಂಪೂರ್ಣ ಉಪಯೋಗ ಪಡೆದುಕೊಳ್ಳುವ ಅಭ್ಯಾಸ ಬೆಳೆದುಬಂದಿದೆ. ನಟರ ತರಬೇತಿಯಲ್ಲಿ ಮೂಕಾಭಿನಯದ ಉಪಯುಕ್ತತೆಯನ್ನು ಗುರುತಿಸಲಾಗಿದೆ.

ಭಾರತದಲ್ಲಿ ಬದಲಾಯಿಸಿ

ಭಾರತದ ಸಾಂಪ್ರದಾಯಿಕ ರಂಗಭೂಮಿಯಲ್ಲಿ ಮೂಕಾಭಿನಯ ಲಕ್ಷಣಗಳನ್ನು ಹೊಂದಿದ ಯಾವುದೇ ನಿರ್ದಿಷ್ಟ ರಂಗಪ್ರಕಾರ ಕಂಡಬರುವುದಿಲ್ಲ. ಆದರೆ ಹಿಂದಿನಿಂದಲೂ ಆಂಗಿಕಾಭಿನಯಕ್ಕೆ ಪ್ರಾಶಸ್ತ್ಯ ಸಿಕ್ಕಿದೆ. ಆಧುನಿಕ ಭಾರತೀಯ ರಂಗಭೂವಿಯ ಇತಿಹಾಸದ ಉದ್ದಕ್ಕೂ ಮೂಕಾಭಿನಯ ಒಂದು ಪ್ರಮುಖ ರಂಗತಂತ್ರವಾಗಿ ಬಳಕೆಯಲ್ಲಿದೆ. ಸಂಸ್ಕøತ ರಂಗಭೂಮಿಯಲ್ಲಿ ರಂಗಸಜ್ಜಿಕೆ, ರಂಗಪರಿಕರಗಳನ್ನು ಅತಿ ಕಡಿಮೆ ಬಳಸುತ್ತ, ನಟರ ಅಭಿನಯ ಸಾಮರ್ಥ್ಯದ ಮಿತಿಗಳನ್ನು ಶೋಧಿಸಲಾಗುತ್ತಿತ್ತು. ಸಂಜ್ಞೆ, ಸಂಕೇತಗಳಿಂದ ಕೂಡಿದ ಶೈಲೀಕೃತ ಅಭಿನಯ ಸಂಸ್ಕøತ ರಂಗಭೂವಿಯ ಒಂದು ಪ್ರಮುಖ ಭಾಷೆ ಎನ್ನಬಹುದು. ಪಾತ್ರಗಳ ಅಂತಸ್ತು, ಪರಸ್ಪರ ಸಂಬಂಧಗಳಿಗನುಗುಣವಾಗಿ ಅವು ರಂಗಸ್ಥಳವನ್ನು ಪ್ರವೇಶಿಸುವ ಸರದಿ ನಿಶ್ಚಿತವಾಗಿತ್ತು. ನಿರ್ದಿಷ್ಟ ಕ್ರಿಯೆಗಳನ್ನು ಸೂಚಿಸುವ ಹಲವಾರು ಚೌರಿ, ಮಂಡಲಗಳನ್ನು ಭರತನ ನಾಟ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಸಂಸ್ಕøತ ರಂಗಭೂಮಿಯ ಪ್ರಭಾವ ದಟ್ಟವಾಗಿರುವ ಇಂದಿನ ಜನಪದ ನಾಟಕಪ್ರಕಾರಗಳಲ್ಲೂ ಸಾಂಪ್ರದಾಯಿಕ ನೃತ್ಯಗಳಲ್ಲೂ ಮೂಕಾಭಿನಯದ ಧಾರಾಳ ಬಳಕೆ ಕಂಡುಬರುತ್ತದೆ. ಚೀನ, ಜಪಾನ್ ಮುಂತಾದ ದೇಶಗಳೂ ಸಾಂಪ್ರದಾಯಿಕ ರಂಗಭೂಮಿಗಳನ್ನು ಹೊಂದಿದ್ದು, ಮೂಕಾಭಿನಯ ತಂತ್ರಗಳನ್ನು ಬಳಕೆಮಾಡಿಕೊಳ್ಳುತ್ತಿವೆ.

ಪಾಶ್ಚಾತ್ಯ ರಂಗಭೂಮಿಯ ಪ್ರಭಾವದಿಂದಾಗಿ ಮೂಕಾಭಿನಯ ಭಾರತದಲ್ಲೂ ಬೆಳೆದಿದೆ. ನಿರಂಜನ ಗೋಸ್ವಾಮಿ ಖ್ಯಾತ ಮೂಕಾಭಿನಯ ಕಲಾವಿದರಲ್ಲೊಬ್ಬರು. ರಂಗಪ್ರಕಾರಕ್ಕೆಂದೇ ಬರೆದ ಕೆಲವು ಮೂಕ ನಾಟಕಗಳೂ ಕನ್ನಡದಲ್ಲಿ ಪ್ರಕಟವಾಗಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: