ಮುಪ್ಪಿನ ಷಡಕ್ಷರಿ
ಮುಪ್ಪಿನ ಷಡಕ್ಷರಿಯು ಸು. 1500. ಕನ್ನಡದಲ್ಲಿ ಹಾಡುಗಬ್ಬಗಳನ್ನು ರಚಿಸಿದ ಶರಣಕವಿ. ನಿಜಗುಣ ಶಿವಯೋಗಿಯ ಅನಂತರ ಕೈವಲ್ಯ ಪದ್ಧತಿಯ ಹಾಡುಗಳನ್ನು ರಚಿಸಿದ ಪರಂಪರೆಯಲ್ಲಿ ಈತ ಎರಡನೆಯವ.
ಋಷಿಕವಿ
ಬದಲಾಯಿಸಿಧರೆಯ ಭೋಗಭಾಗ್ಯವನ್ನೆಲ್ಲ ತೊರೆದು, ಹಲವು ಭವಭೀತಿಯ ಚಿಂತೆಯಿಲ್ಲದೆ, ಕಂತುಹರ ಶಿವಷಡಕ್ಷರಿಯ ಶಿವಲಿಂಗವನ್ನು ತನ್ನೊಳಗೆ ನಿಶ್ಚಿತವಾಗಿಟ್ಟುಕೊಂಡು ಸಹಜಾನಂದದಲ್ಲಿ ಮಿಡಿಯುತ್ತಿರುವ ಈ ಋಷಿಕವಿ ಭಕ್ತಿಯಿಂದ ಉಕ್ಕೇರುವ ಅನೇಕ ಹಾಡುಗಳನ್ನು ವಿವಿಧ ತಾನಗಳಲ್ಲಿ ರಚಿಸಿದ್ದಾನೆ. ಈತನ ಸಮಗ್ರ ಜೀವನಚರಿತ್ರೆ ಲಭ್ಯವಿಲ್ಲ. ಆದರೆ ಈತನ ಹಾಡುಗಳಲ್ಲಿ ಈತನ ವ್ಯಕ್ತಿತ್ವದ ಉನ್ನತ ಸ್ವರೂಪ ಪ್ರಕಟವಾಗುತ್ತದೆ. ಈತನ ಊರು ಉಪ್ಪಿನಹಳ್ಳಿ ಇಲ್ಲವೆ ಉಕ್ಷಪುರ (ನಂದಿಪುರ) ಆಗಿರಬಹುದು. ನಿಜಗುಣಶಿವಯೋಗಿಯ ಶಂಭುಲಿಂಗನಬೆಟ್ಟದಲ್ಲಿ ತಪಸ್ಸು ಮಾಡಿದ ಈತನ ಗವಿಯನ್ನು ಇಂದಿಗೂ ತೋರಿಸುತ್ತಾರೆ. ಕೊಳ್ಳೇಗಾಲ ತಾಲ್ಲೂಕಿನ ಎರೆಗಂಬಳಿಮಠದ ಸಿದ್ಧಲಿಂಗಸ್ವಾಮಿಗಳು ಈತನಿಗೆ ಶಿವಶಾಸ್ತ್ರದ ಅನುಭವವನ್ನು ಅರುಹಿದ ದೀಕ್ಷಾ ಗುರುಗಳೆಂದು ಈತನ ಒಂದು ಹಾಡಿನಿಂದ ತಿಳಿದುಬರುತ್ತದೆ.
ಕೃತಿಗಳು
ಬದಲಾಯಿಸಿ- ಸುಬೋಧಸಾರ ಎಂಬ ಹೆಸರಿನಲ್ಲಿ ಈತನ ಒಂದು ಹಾಡಿನಿಂದ ತಿಳಿದುಬರುತ್ತದೆ. ಸುಬೋಧಸಾರ ಎಂಬ ಹೆಸರಿನಲ್ಲಿ ಈತನ ಹಾಡುಗಳು ಸಂಗ್ರಹಗೊಂಡಿವೆ. ಈ ಕವಿ 74 ಕೈವಲ್ಯ ಪದ್ಯಗಳನ್ನೂ ಶಿವಪೂಜಾಷ್ಟಕ. ಶಿವಯೋಗಾಷ್ಟಕ ಎಂಬ ಕೃತಿಗಳನ್ನೂ ಬರೆದಿದ್ದಾನೆ.
- ಧರೆಯ ಸುಖದ ಭೋಗವೆನಗೆ ಹರಿದುಹೋಗಲಿ; ಕಾಡಲೇಕೆ ನರರುಗಳನು. ಬೇಡಿ ಬಳಲಲೇಕೆ ಮನವೆ-ಇವೇ ಮುಂತಾದ ಹಾಡುಗಳಲ್ಲಿ ಈತನ ವೀರವಿರತಿ ವ್ಯಕ್ತಗೊಂಡಿದೆ. "ಎನ್ನಕರದೊಳಗಿರ್ದು ಎನ್ನೊಳೇತಕೆ ನುಡಿಯೆ ಇನ್ನೆನಗೆ ಭಯವುಂಟೆ; ಎನ್ನಸರ್ವಾಂಗಮನು ನಿನನ್ ಪರಿಣಾಮಕ್ಕೆ ಚೆನ್ನಾಗಿ ಸಲಿಸುವೆನು ಎಲೆ ಲಿಂಗವೆ-ಈ ಮುಂತಾದ ಹಾಡುಗಳು ಕವಿಯ ಪರಿಶುದ್ಧ ಹೃದಯದ ಆಕಾಂಕ್ಷೆಯನ್ನು ಹೊರಹೊಮ್ಮಿಸಿವೆ.
- ಅವರವರ ದರುಶನಕೆ, ಅವರವರ ವೇಷದಲಿ, ಅವರವರಿಗೆಲ್ಲ ಗುರು ನೀನೊಬ್ಬನೆ, ಅವರವರ ಭಾವಕ್ಕೆ ಅವರವರ ಪೂಜೆಗಂ. ಅವರವರಿಗೆಲ್ಲ ದೇವ ನೀನೊಬ್ಬನೆ ಎಂಬ ಹಾಡಿನಲ್ಲಿ ಉದಾತ್ತಭಾವದ, ವಿಶಾಲಹೃದಯದ ದರ್ಶನ ವಿಶುದ್ಧಿಯಿದೆ.
- ಈತನ ಹಾಡುಗಳ ಭಾಷೆ ಅತ್ಯಂತ ಸರಳ; ಅವುಗಳಲ್ಲಿ ಮೂಡಿರುವ ಭಾವ ಅತ್ಯಂತ ಆತ್ಮೀಯ; ಭಾವರೂಪಕಗಳ ಸೊಗಸು ಅವರ್ಣನೀಯ. ಅನುಭಾವದ ತನಿವೆಳಗು ಹದಗೊಂಡ ಶೈಲಿಯಲ್ಲಿ ಹೃದಯಂಗಮವಾದ ಧಾಟಿಯಲ್ಲಿ ಹೊರಹೊಮ್ಮಿದೆ.
- ಸಿರಿಯು ಕನಸಿನಂತೆ ಎಂದು ಸೂಚಿಸುವ ತಿರುಕನ ಕನಸು ಎಂಬ ಈತನ ಪ್ರಸಿದ್ಧ ಹಾಡು ಭೋಗ ಷಟ್ಪದಿಯಲ್ಲಿದೆ. ಕುಸುಮ ಮತ್ತು ಭೋಗ ಷಟ್ಪದಿಗಳನ್ನೇ ಈತ ಹೆಚ್ಚಾಗಿ ಹಾಡುಗಳಿಗೆ ಬಳಸಿಕೊಂಡಿದ್ದರೂ ಭಾಮಿನಿ. ವಾರ್ಧಕ ಷಟ್ಪದಿಗಳಲ್ಲೂ ಹಾಡುಗಳನ್ನು ರಚಿಸಿದ್ದಾನೆ. ಶಿವಯೋಗಾಷ್ಟಕ ಹಾಗೂ ಶಿವಪೂಜಾಷ್ಟಕ ಕಂದ ಪದ್ಯಗಳಲ್ಲಿವೆ.(ಸಿ.ಕೆ.ಎ.)[೧]
ವಾಸ
ಬದಲಾಯಿಸಿ- ಮುಪ್ಪಿನ ಷಡಕ್ಷರಿ* ಅವರು ಕ್ರಿ.ಶ. ೧೫೦೦ರ ಸುಮಾರಿಗೆ ಜೀವಿಸಿದ್ದರು ಎಂದು ಹೇಳಲಾಗಿದೆ. ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಎಂಬ ಗ್ರಾಮದ ಬಳಿಯಿರುವ ಶಂಭುಲಿಂಗನ ಬೆಟ್ಟದಲ್ಲಿ ತಪಸ್ಸು ಮಾಡಿದ್ದಾಗಿ ಸ್ಥಳೀಯ ಜನರು ನುಡಿಯುತ್ತಾರೆ. ಇವರು ಕೊಳ್ಳೇಗಾಲ ತಾಲೋಕಿನ ಚಿಲಕವಾಡಿ (ಕುಂತೂರು ಗ್ರಾಮದ ಪಕ್ಕದ ಗ್ರಾಮ) ಗ್ರಾಮದಲ್ಲಿರುವ ನಿಜಗುಣ ಶಿವಯೋಗಿಗಳ ಸಮಕಾಲೀನರಾಗಿದ್ದರು ಎಂದು ಸ್ಥಳೀಯ ಇತಿಹಾಸ ತಜ್ಞರು ಹೇಳುತ್ತಾರೆ. ಇವರು ತಮ್ಮ ಪದ್ಯಗಳನ್ನು ಸ್ವರವಚನಗಳ ಮಾದರಿಯಲ್ಲಿ ರಚಿಸುತ್ತಿದ್ದರು ಎಂದು ಹೇಳಲಾಗಿದೆ. ಅನೇಕ ತತ್ವಪದಗಳನ್ನು ರಚಿಸಿದ್ದು. "ಸುಬೋಧಸಾರ" ಕೃತಿಯಲ್ಲಿ ಅನೇಕ ಹಾಡುಗಳಿವೆ. ಕನ್ನಡ ಸಾಹಿತ್ಯಲೋಕದಲ್ಲಿ ಮುಪ್ಪಿನ ಷಡಕ್ಷರಿಯ 'ತಿರುಕನ ಕನಸು" ಹಾಗೂ ಪಂಜೆಯವರ 'ಹಾವಿನ ಹಾಡು" ಗೀತೆಗಳ ಕೇಳದವರಾರು? ಮೇಲ್ನೋಟಕ್ಕೆ ಮಕ್ಕಳ ಗೀತೆಗಳ ಲಯ ಹೊಂದಿರುವ ಈ ಹಾಡುಗಳ ಗರ್ಭದಲ್ಲಿ ಅಗೆದಷ್ಟೂ ಅರ್ಥವಂತಿಕೆ ಉಂಟು. ಇಂದಿನ ಮಕ್ಕಳಿಗೆ ಅಂದಿನ ಎರಡು ಹಾಡುಗಳು."ತಿರುಕನ ಕನಸು" ಎಂಬುದು ಈತನ ತುಂಬ ಜನಪ್ರಿಯವಾದ ತತ್ವಪದವಾಗಿದೆ.
ಗೀತೆಗಳು
ಬದಲಾಯಿಸಿಸಕಲಕೆಲ್ಲಕೆ ನೀನೇ ಅಕಳಂಕ ಗುರು
ಬದಲಾಯಿಸಿಸಕಲಕೆಲ್ಲಕೆ ನೀನೇ ಅಕಳಂಕ ಗುರುವೆಂದು
ನಿಖಿಲ ಶಾಸ್ತ್ರವು ಪೇಳುತಿರಲರಿದೆನು.
ಅವರವರ ದರುಶನಕೆ ಅವರವರ ದೇಶದಲಿ
ಅವರವರಿಗೆಲ್ಲ ಗುರು ನೀನೊಬ್ಬನೇ
ಅವರವರ ಭಾವಕ್ಕೆ ಅವರವರ ಅರ್ಚನೆಗೆ
ಅವರವರಿಗೆ ದೇವ ನೀನೊಬ್ಬನೇ.!
"ಹೋರಾಟವಿಕ್ಕಿಸಲು ಬೇರಾದೆಯಲ್ಲದೆ
ಬೇರುಂಟೆ ಜಗದೊಳಗೆ ಎಲೆ ದೇವನೇ
ಆರೂ ಅರಿಯರು ನೀನು ಬೇರಾದ ಪರಿಗಳನು
ಮಾರಾರಿ ಶಿವ ಷಡಕ್ಷರಲಿಂಗವೆ"!.
- ಸಾಹಿತ್ಯ: ಮುಪ್ಪಿನ ಷಡಕ್ಷರಿ
ತಿರುಕನ ಕನಸು
ಬದಲಾಯಿಸಿ"ತಿರುಕನೊರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ
ಪುರದ ರಾಜ ಸತ್ತನವಗೆ
ವರಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು.!
"ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು" !.
"ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟಿನಿಗಳ ಕೂಡಿ ನಲ್ಲ
ನಿಷ್ಟಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ".!
"ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ, ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ".!
"ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ
ಗಾಢವಾಗೆ ಸಂಭ್ರಮಗಳು
ಮಾಡುತ್ತಿದ್ದ ಮದುವೆಗಳನು
ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ".!
"ಧನದ ಮದವು ರಾಜ್ಯ ಮದವು
ತನುಜಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣುತಿರ್ದು ಹೆದರಿ ಕಣ್ಣ ತೆರೆದನು"!.[೨]
- ಸಾಹಿತ್ಯ: ಮುಪ್ಪಿನ ಷಡಕ್ಷರಿ
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮುಪ್ಪಿನ ಷಡಕ್ಷರಿ
- ↑ "ಸುಬೋಧಸಾರ" ಕೃತಿ