ಮುಕ್ತ ತಂತ್ರಾಂಶ ಅಥವಾ ಮುಕ್ತ ಆಕರ ತಂತ್ರಾಂಶ ಎಂಬುದು ಕಂಪ್ಯೂಟರ್ ತಂತ್ರಾಂಶಗಳು ಲಭ್ಯವಾಗಬಹುದಾದ ಒಂದು ರೀತಿಯ ಪರವಾನಗಿ. ಈ ರೀತಿಯ ಪರವಾನಿಗೆಯ ಅಡಿ ಲಭ್ಯವಾಗಿರುವ ತಂತ್ರಾಂಶಗಳಲ್ಲಿನ ಸಾಮಾನ್ಯ ಗುಣಗಳೆಂದರೆ

  • ತಂತ್ರಾಂಶದ ಮೂಲ ಆಕರವನ್ನು ತಂತ್ರಾಂಶದೊಂದಿಗೆ ಲಭ್ಯಗೊಳಿಸಲಾಗುವುದು
  • ಗ್ರಾಹಕರು ಈ ಮೂಲ ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಪಡೆದಿರುತ್ತಾರೆ (ಕೆಲವೊಮ್ಮೆ ಸಣ್ಣ ನಿರ್ಬಂಧನೆಗಳು ಇರಬಹುದು)

ಯಾವುದೇ ಮುಕ್ತ ತಂತ್ರಾಂಶ ಉಚಿತವಾಗಿ ಲಭ್ಯವಾಗಬೇಕೆಂಬ ನಿಯಮವೇನಿಲ್ಲ; ಆದರೂ ಬಹುಪಾಲು ಮುಕ್ತ ತಂತ್ರಾಂಶಗಳು ಉಚಿತವಾಗಿ ಲಭ್ಯವಾಗಿವೆ.

ಅನೇಕ ಬಾರಿ ಆಕರ ಲಭ್ಯವಾಗಿರುವ ತಂತ್ರಾಂಶಗಳೆಲ್ಲಕ್ಕೂ ಮುಕ್ತ ತಂತ್ರಾಂಶ ಎಂದು ಕರೆಯಲಾಗುತ್ತದೆ - ನಿಜವಾಗಿ ಈ ತಂತ್ರಾಂಶಗಳು "ಪ್ರಕಟಿತ ಆಕರ ತಂತ್ರಾಂಶಗಳು" (disclosed source software). ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಗ್ರಾಹಕರಿಗೆ ನೀಡಿದಲ್ಲಿ ಮಾತ್ರ ಅದು ಮುಕ್ತ ತಂತ್ರಾಂಶವಾಗುತ್ತದೆ.

ಮುಕ್ತ ತಂತ್ರಾಂಶ ಪರವಾನಗಿಗಳಲ್ಲಿ ಅತ್ಯಂತ ಜನಪ್ರಿಯ ಪರವಾನಗಿಗಳಲ್ಲಿ ಒಂದು ಜಿಎನ್‍ಯು ಸಾಮಾನ್ಯ ಸಾರ್ವಜನಿಕ ಪರವಾನಗಿ (GNU General Public License).

ಮುಕ್ತ ಆಕರ ತಂತ್ರಾಂಶ - ಚರ್ಚೆ

ಬದಲಾಯಿಸಿ

ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಗ್ರಾಹಕರು ಅನೇಕರು ಮುಕ್ತ ತಂತ್ರಾಂಶಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಪಂಥದ ಮುಖ್ಯ ನಂಬಿಕೆಗಳೆಂದರೆ:

  • ಅನೇಕ ಜನರ ಪ್ರಯತ್ನಗಳಿಂದ ವೃದ್ಧಿಯಾದ ತಂತ್ರಾಂಶದ ಗುಣಮಟ್ಟ ಹೆಚ್ಚಾಗಿರುತ್ತದೆ
  • ತಂತ್ರಾಂಶದ ಸ್ಥಿರತೆ ಮತ್ತು ಸುರಕ್ಷತೆ ಮೊದಲಾದವು ಮುಕ್ತವಾಗಿ ವೃದ್ಧಿಯಾದ ತಂತ್ರಾಂಶದಲ್ಲಿ ಹೆಚ್ಚಾಗಿರುತ್ತದೆ
  • ಇವು ನಿಜವಲ್ಲದ ಸ೦ದರ್ಭದಲ್ಲೂ, ಆಕರವನ್ನು ಬದಲಾಯಿಸಲು ಇರುವ "ಸ್ವಾತಂತ್ರ್ಯ" ತಾತ್ವಿಕವಾಗಿ ಮುಖ್ಯವಾದದ್ದು

ಮುಕ್ತ ತಂತ್ರಾಂಶ ತತ್ವದ ವಿರೋಧಿಗಳ ಮುಖ್ಯ ವಾದ ಬೌದ್ಧಿಕ ಆಸ್ತಿ ಹಕ್ಕುಗಳನ್ನು (intellectual property rights) ಕುರಿತದ್ದು. ಅನೇಕ ಸಂಸ್ಥೆಗಳ ತಂತ್ರಾಂಶ ಆ ಸಂಸ್ಥೆಯ ಹೆಸರಿನಲ್ಲಿ ಕೃತಿಸ್ವಾಮ್ಯವನ್ನು ಹೊಂದಿರುತ್ತದೆ. ಈ ತಂತ್ರಾಂಶದ ಕೃತಿಸ್ವಾಮ್ಯದ ಮೂಲಕ ಬರುವ ಆದಾಯವೇ ಅನೇಕ ಸಂಸ್ಥೆಗಳ ಮುಖ್ಯ ಆದಾಯ. ಮೂಲ ಆಕರವನ್ನು ಪ್ರಕಟಗೊಳಿಸಿ ಬದಲಾಯಿಸುವ ಹಕ್ಕು ನೀಡಿದಲ್ಲಿ ಇಂಥ ಸಂಸ್ಥೆಗಳ ಮುಖ್ಯ ಆದಾಯವೇ ಇಲ್ಲವಾದಂತಾಗುತ್ತದೆ ಎಂಬ ವಾದವಿದೆ.

ಮುಕ್ತ ತಂತ್ರಾಂಶದ ವಿರುದ್ಧ ಇರುವ ಇನ್ನೊಂದು ವಾದವೆಂದರೆ ಸಂಸ್ಥೆಗಳಲ್ಲಿ ವೃದ್ಧಿಗೊಳಿಸಲ್ಪಟ್ಟ ತಂತ್ರಾಂಶಗಳಲ್ಲಿ ಅಂತಿಮ ಉತ್ಪಾದನೆಯ ಮೇಲೆ ಹೆಚ್ಚಿನ ನಿಯಂತ್ರಣವಿರುತ್ತದೆ. ಇದರ ಹಿಂದಿನ ವಿಚಾರವೆಂದರೆ ಮುಕ್ತ ತಂತ್ರಾಂಶಗಳು ಹೆಚ್ಚಾಗಿ ಸ್ವಯಂಸೇವಾ ಮನೋಭಾವದಿ೦ದ ಕೆಲಸ ಮಾಡುವವರಿ೦ದ ವೃದ್ಧಿಯಾಗಿರುತ್ತವೆಯೇ ಹೊರತು ಅವುಗಳಿಗಾಗಿಯೇ ಕೆಲಸ ಮಾಡುವ ಸಂಬಳದಾರಿ ಕೆಲಸಗಾರರಿಂದಲ್ಲ. ಸಂಸ್ಥೆಗಳಲ್ಲಿ ತಂತ್ರಾಂಶದ ವೃದ್ಧಿಗೆ ಹಣದ ಅವಕಾಶ ಮತ್ತು ಸಮಯ ಹೆಚ್ಚಿರುತ್ತದೆ ಎಂಬುದು ಈ ವಾದದ ಮುಖ್ಯ ಆಲೋಚನೆ.

ಮುಕ್ತ ತಂತ್ರಾಂಶಗಳಲ್ಲಿ ಹಲವು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಗಳು ಇವೆ.

  1. ಉಬುಂಟು ಕಾರ್ಯಾಚರಣ ವ್ಯವಸ್ಥೆ

ಹಾಗೆಯೇ ವಿಕಿಪೀಡಿಯ ಸಹ ಮುಕ್ತ ತಂತ್ರಾಂಶ ಪರವಾನಗಿಯ ಅಡಿಯಲಿಯೇ ಅಸ್ತಿತ್ವದಲ್ಲಿದೆ.