ಮಿಮಿಕ್ರಿ ಪಕ್ಷಿ ಲೈರ್

ಗಿಳಿಯೊಂದೇ ಅಲ್ಲ,ಅದರಂತೆ ಸುಮಧುರವಾಗಿ ಕೂಗುವ,ಹಾಡುವ ಅನೇಕ ಪಕ್ಷಿಗಳು ಜೀವಸಂಕುಲದಲ್ಲಿವೆ.ಮನುಷ್ಯನ ಧ್ವನಿಯನ್ನಷ್ಟೇ ಅಲ್ಲ ಅನೇಕ ಧ್ವನಿಗಳನ್ನು ಅನುಕರಣೆ ಮಾಡುವ ಹಕ್ಕಿಯೊಂದು ನಮ್ಮ ನಡುವೆ ಇದೆ. ಅದರ ಹೆಸರು "ಲೈರ್".ಈ ಲೈರ್ ಆಸ್ಟ್ರೇಲಿಯಾ ಮೂಲದ್ದು. ಮಿಮಿಕ್ರಿ ಮಾಡುವುದರಿಂದಲೇ ಪ್ರಸಿದ್ಧಗೊಂಡಿರುವ ಈ ಪಕ್ಷಿ ತಾನು ವಾಸಿಸುವ ಪ್ರದೇಶದಲ್ಲಿ ಕಂಡು ಬರುವ ಇತರ ಪ್ರಾಣಿ-ಪಕ್ಷಿಗಳ ಶಬ್ದವನ್ನು ಸಲೀಸಾಗಿ ಅನುಕರಣೆ ಮಾಡುತ್ತದೆ. ಆ ಅನುಕರಣೆ ಎಷ್ಟು ಸ್ಪಷ್ಟವಾಗಿರುತ್ತದೆಂದರೆ, ಖುದ್ದು ಆ ಪ್ರಾಣಿ,ಪಕ್ಷಿಗಳೇ ಕೂಗಿದಂತಿರುತ್ತದೆ!ಇದರ ಮಿಮಿಕ್ರಿ ಶಕ್ತಿ ಎಷ್ಟಿದೆಯೆಂದರೆ,ಇದು ತಾನು ಆಲಿಸುವ ಪ್ರತೀ ಶಬ್ದವನ್ನೂ ತಕ್ಷಣವೇ ಮಿಮಿಕ್ರಿ ಮಾಡತೊಡಗುತ್ತದೆ. ಉದಾಹರಣೆಗೆ, ಬಟ್ಟೆ ಗಿರಣಿ ಹೋಮ್ಮಿಸುವ ಶಬ್ದ,ಕಾರ್ ಇಂಜಿನ್ ಶಬ್ದ,ಕಾರಿನ ಹಾರ್ನ್,ಫೈರ್ ಇಂಜಿನ್ನಿನ ಸೈರನ್, ಪಿಸ್ತೂಲಿನಿಂದ ಗುಂಡು ಹೊಡೆದಾಗ ಬರುವ ಶಬ್ದ,ನಾಯಿ ಬೊಗಳುವ ಶಬ್ದ, ಚಿಕ್ಕ ಮಕ್ಕಳ ಅಳು! ಅಷ್ಟೇ ಏಕೆ ನೀವು ಮಾತನಾಡಿದ್ದನ್ನೂ ಕೇಳಿದರೆ, ಮರುಕ್ಷಣವೇ ನೀವು ಮಾತನಾಡಿದಂತೆ ಮಾತನಾಡುವ ಸಮರ್ಥ್ಯವನ್ನೂ ಈ ಪಕ್ಷಿ ಹೊಂದಿದೆ. ಲೈರ್ ಗಂಡು-ಹೆಣ್ಣು ಎರಡೂ ಹಕ್ಕಿಗಳಲ್ಲೂ ’ಮಿಮಿಕ್ರಿ’ ಮಾಡುವ ಸಾಮರ್ಥ್ಯ ಇದೆಯಾದರೂ ಇದರಲ್ಲಿ ಜಾಸ್ತಿ ಕೇಳಿ ಬರವುದು ಗಂಡು ಹಕ್ಕಿಯ ಕೂಗೇ!ಉಳಿದ ಹಕ್ಕಿಗಳಿಗೆ ಇಲ್ಲದ ಈ ವಿಶಿಷ್ಟ ಸಾಮರ್ಥ್ಯವನ್ನು ಲೈರ್ ಹಕ್ಕಿಗಳು ಪಡೆದಿದ್ದಾದರು ಹೇಗೆ? ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ತಜ್ಞರು ನಿರಂತರ ಪ್ರಯತ್ನ ನಡೆಸಿದರು. ಕೊನೆಗೆ ಅದರಲ್ಲಿ ಯಶಸ್ವಿಯೂ ಆದರು. ನಮಗೆ ಧ್ವನಿ ಪೆಟ್ಟಿಗೆ ಇದೆ ತಾನೆ? ಹಾಗೆಯೇ ಪಕ್ಷಿಗಳಲ್ಲಿ "ಸಿರಿಂಕ್ಸ್" ಎಂಬ ತಂತುಗಳಿಂದ ರಚಿತವಾದ ಭಾಗವಿದೆ. "ಸಿರಿಂಕ್ಸ್" ರಚನೆ ಮತ್ತು ಅದು ಪಕ್ಷಿಗಳಲ್ಲಿ ಇರುವ ಸ್ಥಾನದಿಂದಾಗಿ ಪಕ್ಷಿಗಳು ಸುಮಧುರ ಧ್ವನಿ ಹೊರಡಿಸಲು ಸಾಧ್ಯವಾಗುತ್ತದೆ. "ಲೈರ್" ಪಕ್ಷಿಗಳಲ್ಲಿ ಇರುವ "ಸಿರಿಂಕ್ಸ್" ಅತೀ ಸಂಕೀರ್ಣವಾಗಿ ಸ್ನಾಯುಗಳಿಂದ ಕೂಡಿದೆ. ಹೀಗಾಗಿ ಇದು ಇತರ ಪಕ್ಷಿಗಳಲ್ಲಿರುವ ಸಿರಿಂಕ್ಸ್ ಗಿಂತ ಭಿನ್ನವಾಗಿದೆ. ಪ್ರಾಣಿ,ಪಕ್ಷಿಗಳು ತೋರುವ ಈ ವಿಶೇಷ ಅವುಗಳ ಬದುಕಿನ ಸಂಗತಿ. ಈ ರೀತಿಯ ಅನುಕರಣೆಯಿಂದಾಗಿ ಅವು ಶತ್ರುಗಳಿಂದ ಸುಲಭವಾಗಿ ಪಾರಾಗಬಲ್ಲವು.ಲೈರ್ ಪಕ್ಷಿಗಳಲ್ಲಿ ಇನ್ನೊಂದು ವಿಶಿಷ್ಟ ಲಕ್ಷಣವಿದೆ. ಗಂಡು ಹಕ್ಕಿ, ತನ್ನ ಸಂಗಾತಿಯನ್ನು ಸೆಳೆಯಲು ನವಿಲಿನಂತೆಯೇ ಉದ್ದವಾದ ಬಾಲದ ಗರಿಯನ್ನು ಬಿಚ್ಚಿ ಪ್ರದರ್ಶನಕ್ಕೆ ನಿಂತು ಬಿಡುತ್ತದೆ. ಈ ರೀತಿ ಪ್ರದರ್ಶನಕ್ಕೆ ನಿಂತಾಗ ಲೈರ್ ಹಕ್ಕಿ ನೋಡಲು ಸುಂದರವಾಗಿ, ಅದ್ಬುತವಾಗಿ ಕಾಣುತ್ತದೆ. ಹೀಗಾಗಿ ಅನೇಕ ಚಿತ್ರ ಕಲಾವಿದರನ್ನೂ ಈ ಲೈರ್ ಆಕರ್ಷಿಸಿದೆ.