ಮಾನ್‌ಸಿಂಗ್ ಆರ್. ರಜಪೂತ್
ಮಾನ್‌ಸಿಂಗ್ ಆರ್. ರಜಪೂತ್ (೧೨.೦೧.೧೯೭೧)
ಚಿತ್ರಕಲೆಯಲ್ಲಿ ಪ್ರಖ್ಯಾತರಾಗಿರುವ ಮಾನ್‌ಸಿಂಗ್ ಆರ್. ರಜಪೂತ್‌ರವರು ಹುಟ್ಟಿದ್ದು ಗುಲಬರ್ಗಾ ಜಿಲ್ಲೆಯ ಅಳಂದ ತಾಲ್ಲೂಕಿನ ಕೋತನ ಹಿಪ್ಪರಗಾ. ತಂದೆ ರೂಪಸಿಂಗ್, ತಾಯಿ ಕಸ್ತೂರಬಾಯಿ. ಸಾಮಾನ್ಯ ಶಿಕ್ಷಣ ಪಡೆದದ್ದು ಗಾಣಗಾಪುರದಲ್ಲಿ. ಕಲಾ ಶಿಕ್ಷಣಕ್ಕೆ ಸೇರಿದ್ದು ಎಂ.ಎಂ.ಕೆ. ಕಾಲೇಜ್ ಆಫ್ ಆರ್ಟ್ಸ್‌ನಿಂದ ಪಡೆದ ಡ್ರಾಯಿಂಗ್ ಮಾಸ್ಟರ್ ಕೋರ್ಸ್ ನಂತರ ಚಿತ್ರಕಲೆಯಲ್ಲಿ ಪಡೆದ ಸ್ನಾತಕೋತ್ತರ ಪದವಿ.
ಉದ್ಯೋಗಕ್ಕಾಗಿ ಸೇರಿದ್ದು ಕೆ.ಜಿ.ಎಫ್‌ನ ಹ್ಯಾಪಿ ಹೋಂ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನಲ್ಲಿ ಐದು ವರ್ಷ ಸೇವೆ. ಇದೀಗ ಹವ್ಯಾಸಿಯಾಗಿ ಚಿತ್ರರಚನೆ.
ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಚಿತ್ರಕಲೆಯತ್ತ ಬೆಳೆದ ಒಲವು. ಅಥಣಿ ಸರಕಾರಿ ಆಯುರ್ವೇದ ವೈದ್ಯಾಧಿಕಾರಿಗಳಾಗಿದ್ದ ಡಿ.ಸಿ.ಎ. ಗಲಗಲಿಯವರಿಂದ ದೊರೆತ ಪ್ರೋತ್ಸಾಹ. ಕರ್ನಾಟಕ ಲಲಿತ ಕಲಾ ಅಕಾಡಮಿ ಬೆಂಗಳೂರು ಮತ್ತು ದೆಹಲಿಯ ರಾಷ್ಟ್ರೀಯ ವಿದ್ಯಾರ್ಥಿ ವೇತನಗಳು.
ಹಲವಾರು ಸಾಂಘಿಕ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗಿ. ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ; ಕರ್ನಾಟಕ ಲಲಿತ ಕಲಾ ಅಕಾಡಮಿ; ವೀರೇಂದ್ರ ಪಾಟೀಲ ಕಲೆ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು; ಕೋಲ್ಕತ್ತಾದ ಬಿರ್ಲಾ ಅಕಾಡಮಿ ಆಫ್ ಆರ್ಟ್ ಅಂಡ್ ಕಲ್ಚರ್ ಪ್ರಮುಖವಾದುವುಗಳು.
ಏಕವ್ಯಕ್ತಿ ಪ್ರದರ್ಶನಗಳೂ ಹಲವಾರು. ಗುಲಬರ್ಗಾದ ಕಲಾ ಮಹೋತ್ಸವ, ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಲಾಮೇಳ, ಕೋಲ್ಕತ್ತಾದ ಬಿರ್ಲಾ ಅಕಾಡಮಿ, ಗುಲಬರ್ಗಾದ ಯುವಜನೋತ್ಸವ, ರಾಷ್ಟ್ರೀಯ ಕಲಾಮೇಳ ಗುಲಬರ್ಗಾ, ಮೈಸೂರು ದಸರಾ, ಮುಂಬಯಿಯ ಜೆ.ಜೆ. ಕಲಾಶಾಲೆ, ವಿಶಾಖ ಪಟ್ಟಣದ ವಿ.ಎಸ್.ಎನ್. ಆರ್ಟ್ ಗ್ಯಾಲರಿ ಮುಂತಾದುವು.
ದೊರೆತ ಪ್ರಶಸ್ತಿಗಳು. ಕಲಾ ಮಹೋತ್ಸವ ಗುಲಬರ್ಗಾ, ಮದರ್ ಥೆರೇಸಾ, ಕುವೆಂಪು ಚಿತ್ರಗಳಿಗೆ, ವಿ.ಜಿ. ಅಂದಾನಿ ೫೦ನೇ ಹುಟ್ಟುಹಬ್ಬದ ಕಲಾಪ್ರದರ್ಶನ, ಕನ್ನಡ ಸಾಹಿತ್ಯ ಸಂಘ ಕಲಬುರ್ಗಿ, ಮುಂತಾದೆಡೆಗಳಿಂದ ಗೌರವ ಸನ್ಮಾನ, ಗುಲಬರ್ಗಾ, ದಾವಣಗೆರೆ, ದೆಹಲಿಯಲ್ಲಿ ಇವರ ಸಂಗ್ರಹಗಳು.
ಲೇಖಕರು: ವೈ.ಎನ್. ಗುಂಡೂರಾವ್