ಇದು ಸಾಂಸ್ಕೃತಿಕ ಮಾನವ ಶಾಸ್ತ್ರದ ಒಂದು ಪ್ರಮುಖ ಭಾಗವಾಗಿದೆ. ಈ ಶಾಶ್ತ್ರವು ಕೂಡಾ ಬುಡಕಟ್ಟು ಸಂಸ್ಕೃತಿಯನ್ನು ಆಧರಿಸಿ ಬೆಳೆದ ಅಧ್ಯಯನ ಶಿಸ್ತಾಗಿ ಜನಪ್ರಿಯವಾಗಿದೆ. ಈ ಶಾಸ್ತ್ರವು ಬುಡಕಟ್ಟು ಸಂಸ್ಕೃತಿಯನ್ನು ಚಾರಿತ್ರಿಕವಾಗಿ ಮತ್ತು ತೌಲನಿಕವಾಗಿ ಅಭ್ಯಸಿಸಲು ಬೇಕಾದ ವಿಧಾನಗಳನ್ನು ರೂಪಿಸಿಕೊಂಡಿದೆ.ಹೀಗಾಗಿ ಒಟ್ಟಾರೆಯಾಗಿ ಮಾನವ ಸಂಸ್ಕೃತಿಯ ಬಗೆಗೆ ಮಾನವ ಕುಲ ವಿಜ್ಞಾನಿಗಳಿಗೆ ತುಂಬಾ ಮಹತ್ವದ್ದಾದ ಮಾತುಗಳನ್ನು ಹೇಳಲು ಸಾಧ್ಯವಾಗಿದೆ. ಮಾನವ ಸಂಸ್ಕೃತಿಯು ಕಾಲಕಾಲಕ್ಕೆ ವಿಕಾಸಿಸುತ್ತಾ ಬಂದಿದೆ ಎಂದು ಈ ಪಂಥದ ವಿಜ್ಞಾನಿಗಳು ಬಲವಾಗಿ ಪ್ರತಿಪಾದಿಸುತ್ತಾರೆ. ವಿಕಾಸವಾದೀ ನೆಲೆಯಿಂದ ಹೊರಟು ಇವರು ಪ್ರತಿಪಾದಿಸಿದ ಅನೇಕ ಅಂಶಗಳು ಈಗ ಮರುಚಿಂತನೆಗೆ ಒಳಗಾಗುತ್ತಿದೆ. ಉದಾಹರಣೆಗೆ ಆದಿವಾಸಿಗರ ಸಂಸ್ಕೃತಿಯು ಬಹು ಸರಳವಾಗಿತ್ತು. ಅಧುನಿಕ ಸಂಸ್ಕೃತಿ ಬಹು ಸಂಕೀರ್ಣವಾಗಿದೆ. ಕಾರಣ ಸಂಸ್ಕೃತಿಯ ವಿಕಾಸಕ್ರಮವು ಸರಳತೆಯಿಂದ ಸಂಕೀರ್ನತೆಯತ್ತ ಎಂಬ ವಾದವನ್ನು ಈಚಿನ ಮಾನವಕುಲ ವಿಜ್ಞಾನಿಗಳು ಒಪ್ಪುತ್ತಿಲ್ಲ. ಜಾನಪದ ವಿದ್ಯಾರ್ತಿಗಳು ಇವರ ಬರವಣಿಗೆಯಿಂದ ಸಾಕಷ್ಟು ಪ್ರೇರಣೆ ಪಡೆಯಬಹುದಾಗಿದೆ.