ಜಲೋದರ

(ಮಹೋದರ ಇಂದ ಪುನರ್ನಿರ್ದೇಶಿತ)

ವೈದ್ಯಶಾಸ್ತ್ರದಲ್ಲಿ (ಜಠರ ಕರುಳು ವಿಜ್ಞಾನ), ಜಲೋದರವು (ಕರುಳುಪದರ ಕುಳಿಯ ದ್ರವ, ಕರುಳುಪದರ ದ್ರವದ ಹೆಚ್ಚುವರಿ, ಅಥವಾ ಬಹುಹಿಂದಿನ ಹೆಸರಾದ ಉದರದ ಬಾವು ಎಂದೂ ಪರಿಚಿತವಾದ) ಕರುಳುಪದರ ಕುಳಿಯಲ್ಲಿ ದ್ರವದ ಶೇಖರಣೆ. ಇದು ಹೆಚ್ಚು ಸಾಮಾನ್ಯವಾಗಿ ಸಿರೋಸಿಸ್ ಮತ್ತು ತೀವ್ರ ಯಕೃತ್ತು ರೋಗದ ಕಾರಣದಿಂದ ಆಗುವುದಾದರೂ, ಇದರ ಇರುವಿಕೆಯು ಇತರ ದೊಡ್ಡ ವೈದ್ಯಕೀಯ ಸಮಸ್ಯೆಗಳ ಬಗ್ಗೆ ಮುನ್ಸೂಚನೆ ಕೊಡಬಲ್ಲದು. ಕಾರಣದ ರೋಗನಿದಾನವು ಸಾಮಾನ್ಯವಾಗಿ ರಕ್ತಪರೀಕ್ಷೆಗಳು, ಉದರದ ಅಲ್ಟ್ರಾಸೌಂಡ್ ಸ್ಕ್ಯಾನ್, ಮತ್ತು ಸೂಜಿ ಅಥವಾ ಪ್ಯಾರಸೆಂಟೀಸಿಸ್‌ನಿಂದ ದ್ರವದ ನೇರ ತೆಗೆಯುವಿಕೆಯ (ಇದು ಚಿಕಿತ್ಸಕವೂ ಇರಬಹುದು) ಮೂಲಕ ಮಾಡಲಾಗುತ್ತದೆ.

ಜಲೋದರ
Classification and external resources
ಜಲೋದರ ಕಾಯಿಲೆಯಿಂದ ನರಳುತ್ತಿರುವ ರೋಗಿಯ ಹೊಟ್ಟೆ
ICD-10R18
ICD-9789.5
DiseasesDB943
MedlinePlus000286
eMedicineped/2927 med/173
MeSHD001201


ಜಲೋದರ - ಹೊಟ್ಟೆಯಲ್ಲಿ ನೀರಿನಂಥ ದ್ರವದ ಶೇಖರಣೆಯಿಂದ ಉಂಟಾದ ನೋವಿಲ್ಲದ ಹೊಟ್ಟೆ ಉಬ್ಬರದ ಸ್ಥಿತಿ. (ಅಸೈಟಿಸ್).

ಸಾಮಾನ್ಯವಾಗಿ ಈ ದ್ರವದ ಸಾಂದ್ರತೆ ಕಡಿಮೆ; ಅಲ್ಲದೆ ಇದರಲ್ಲಿ ಜೀವಕೋಶಗಳು ಬಲು ವಿರಳವಾಗಿವೆ. ಜಲೋದರ ಸ್ವತಃ ಒಂದು ರೋಗವಲ್ಲ. ಆದರೆ ಬೇರೆ ರೋಗಗಳ ಒಂದು ಲಕ್ಷಣವಾಗಿ ಇದು ಕಂಡುಬರುತ್ತದೆ. ಇದರ ಕಾರಣಗಳು ಬೇರೆ ಬೇರೆ. ಯಕೃತ್ತಿನೊಳಹೊಗುವ ಫೆÇೀರ್ಟಲ್ ಅಭಿಧಮನಿಯಲ್ಲಿ ಯಾವ ಕಾರಣದಿಂದಾದರೂ ರಕ್ತ ಚಲನೆಗೆ ಅಡಚಣೆಯಾದರೆ ಅದರಿಂದ ಜಲೋದರ ಉದ್ಭವಿಸುತ್ತದೆ. ಜಲೋದರಕ್ಕೆ ಇದೇ ಮುಖ್ಯ ಕಾರಣ. ಅಲ್ಲದೆ ಕ್ಷಯ ಮತ್ತು ಏಡಿಗಂತಿಗಳಿಂದ ಬರುವ ಉದರ ಪರಿವೇಷ್ಟನಪಟಲದ (ಪೆರಿಟೋನಿಯಮ್) ರೋಗ ಅಂದರೆ ಪೆರಿಟೋನೈಟಿಸ್, ಮೂತ್ರಜನಕಾಂಗಗಳ ವ್ಯಾಧಿ. ಗುಂಡಿಗೆ ಶಕ್ತಿಗುಂದುವಿಕೆ, ರಕ್ತಪುಷ್ಟಿಹೀನತೆ, ಗುಲ್ಮವೃದ್ಧಿ ಇವೆಲ್ಲವೂ ಜಲೋದರವನ್ನು ಉಂಟುಮಾಡಬಹುದು. ಹೊಟ್ಟೆಯ ಪಕ್ಕೆಗಳು ತುಂಬಿರುವಿಕೆ, ನಾಭಿಯ ಒಳಹೊರಗಾಗುವಿಕೆ (ಇವರ್ಷನ್) ರೋಗಿಯ ಸ್ಥಳ ಬದಲಾವಣೆಯೊಡನೆ ಉದರದ ಮಾರ್ದನಿಗೊಡುವ ಸ್ಥಳ ಬದಲಾವಣೆಯಾಗುವಿಕೆ ಇವುಗಳಿಂದ ಜಲೋದರವನ್ನು ಕಂಡುಹಿಡಿಯಬಹುದು.

ಲಕ್ಷಣಗಳು

ಬದಲಾಯಿಸಿ

ಕ್ಷಯದಿಂದ ಬರುವ ಜಲೋದರ ಸಾಮಾನ್ಯವಾಗಿ ತಾರುಣ್ಯದಲ್ಲೆ ಕಂಡುಬರುವುದು. ಏಕೆಂದರೆ ಚಿಕ್ಕವಯಸ್ಸಿನಲ್ಲಿ ಉದರಕ್ಷಯ ಸಾಮಾನ್ಯ. ಸಂಜೆಯಜ್ವರ, ಅಗ್ನಿಮಾಂದ್ಯ, ತೂಕ ಕಡಿಮೆಯಾಗುವುದು, ದೇಹದ ಇತರ ಭಾಗಗಳಲ್ಲಿ ಕ್ಷಯದ ಚಿಹ್ನೆಗಳಿರುವುದು ಇತ್ಯಾದಿಗಳಿಂದ ಉದರಕ್ಷಯವನ್ನು ಗುರುತಿಸಬಹುದು. ಏಡಿಗಂತಿಯಿಂದ ಬರುವ ಜಲೋದರದಲ್ಲಿ ಜನನೇಂದ್ರಿಯಗಳು, ಕರುಳು ಮೊದಲಾದ ದೇಹದ ಇತರ ಭಾಗಗಳಲ್ಲಿ ಆ ವ್ಯಾಧಿಯ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಸಿರ್ಹೋಸಿಸ್ ಎಂಬ ಯಕೃತ್ತಿನ ರೋಗದಲ್ಲಿ ಜಲೋದರ ಮುಂಚೆಯೇ ಪ್ರಕಟವಾಗುತ್ತದೆ. ಕಾಮಾಲೆ ಕೂಡ ಇರಬಹುದು. ಇದೇ ರೀತಿ ಯಕೃತ್ತಿನಲ್ಲಿ ಏಡಿಗಂತಿ, ಜಠರ ಮುಂಗುರುಳು ಮೇದೋಜಿರಕಾಂಗಗಳ ಏಡಿಗಂತಿ ಇವುಗಳಲ್ಲಿ ಪೆÇೀರ್ಟಲ್ ಅಭಿಧಮನಿಯಲ್ಲಿ ರಕ್ತಪರಿಚಲನೆಗೆ ಅಡಚಣೆ ಉಂಟಾಗಿ ಪ್ರಥಮವಾಗಿ ಜಲೋದರ ತೋರ್ಪಡುವುದು. ಕೆಲಕಾಲ ಕಳೆದ ಬಳಿಕ ಕಾಲಿನಿಂದ ಬರುವ ಅಭಿಧಮನಿಗಳ ಮೇಲೆ ಒತ್ತಡ ಉಂಟಾಗಿ ಕಾಲುಬಾವು ತಲೆದೋರುತ್ತದೆ. ಮೂತ್ರಜನಕಾಂಗಗಳ ರೋಗದಲ್ಲಿ ಮೂತ್ರದಲ್ಲಿ ಕಾಯಿಲೆಯ ವಿಶಿಷ್ಟ ಬದಲಾವಣೆಗಳು ಕಂಡುಬರುತ್ತವೆ. ದೇಹದ ಎಲ್ಲ ಭಾಗಗಳೂ ಊತಗೊಳ್ಳುವುದರ ಜೊತೆಗೆ ಜಲೋದರವೂ ಉಂಟಾಗುತ್ತದೆ. ಪ್ರಾರಂಭದಲ್ಲಿ ಬೆಳಿಗ್ಗೆ ಎದ್ದಾಗ ಮುಖಕಣ್ಣುಗಳು ದದ್ದರಿಸಿಕೊಂಡಿರುವುದು ಸಾಮಾನ್ಯ. ರಕ್ತಬಲಹೀನತೆಯಿಂದ ಮತ್ತು ಆಹಾರದಲ್ಲಿ ಸಸಾರಜನಕದ ಕೊರತೆಯಿಂದ ತಲೆದೋರುವ ಜಲೋದರ ದೇಹದ ಎಲ್ಲ ಭಾಗಗಳ ಊತದ ಜೊತೆಗೆ ಕಾಣಿಸಿಕೊಳ್ಳುವುದು. ಗುಂಡಿಗೆಯ ಶಕ್ತಿಗುಂದಿಕೆಯಿಂದ ಉಂಟಾಗುವ ಜಲೋದರವಾದರೋ ಕಾಲುಗಳು ಊದಿಕೊಂಡ ಬಳಿಕವೇ ವೇದ್ಯವಾಗುತ್ತದೆ. ಅದಕ್ಕೆ ಮೊದಲು ಇರುವುದಿಲ್ಲ. ಅಲ್ಲದೆ ಈ ಸ್ಥಿತಿಯಲ್ಲಿ ಗುಂಡಿಗೆ ಹೊಡೆದುಕೊಳ್ಳುವುದು, ಉಸಿರುಹತ್ತಿ ಬರುವುದು, ಕೆಮ್ಮು ಇತ್ಯಾದಿ ಇರುತ್ತವೆ.

ಚಿಕಿತ್ಸೆ

ಬದಲಾಯಿಸಿ

ಸಸಾರಜನಕ ವಸ್ತುಗಳನ್ನು ಹೆಚ್ಚಾಗಿಯೂ ಉಪ್ಪನ್ನು ಕಡಿಮೆಯಾಗಿಯೂ ತೆಗೆದುಕೊಳ್ಳುವುದರಿಂದ ಜಲೋದರವನ್ನು ಕಡಿಮೆಮಾಡಬಹುದು. ಇದಲ್ಲದೆ ಮೂತ್ರಸ್ರಾವೋತ್ತೇಜಕ ಔಷಧಿಗಳನ್ನು (ಡೈಯೂರಿಟಿಕ್) ಜಲೋದರ ಕಡಿಮೆ ಮಾಡಲು ಉಪಯೋಗಿಸಬಹುದು. ಊಟ ಮತ್ತು ಔಷಧಿ ಇವೆರಡರಿಂದ ಕಡಿಮೆ ಆಗದ ಮತ್ತು ರೋಗಿಗೆ ಹೆಚ್ಚು ತೊಂದರೆ ಕೊಡುವ ಸಂದರ್ಭಗಳಲ್ಲಿ ಉದರದಲ್ಲಿ ಕೂಡಿರುವ ದ್ರವವನ್ನು ಕಂಡಿಮಾಡಿ ಹೊರಬಿಡುವ (ಪ್ಯಾರಾಸೆಂಟಿಸಿಸ್ ಅಥವಾ ಟ್ಯಾಪಿಂಗ್) ಶಸ್ತ್ರಚಿಕಿತ್ಸೆ ಮಾಡಬಹುದು. ಇವುಗಳ ಜೊತೆಗೆ ರೋಗಕ್ಕೆ ಮೂಲ ಕಾರಣಗಳಾದ ಯಕೃತ್ತಿನ ರೋಗ, ಕ್ಷಯ ಇತ್ಯಾದಿಗಳ ನಿವಾರಣೆಗಳನ್ನೂ ಕೈಗೊಳ್ಳಬೇಕಾಗುತ್ತದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಲೋದರ&oldid=1069758" ಇಂದ ಪಡೆಯಲ್ಪಟ್ಟಿದೆ