ಮಹಾಶರಣೆ ಶ್ರೀ ದಾನಮ್ಮ ದೇವಿ
ಲಿಂಗಮ್ಮ ಎಂದು ಕರೆಯಲ್ಪಡುತ್ತಿದ್ದ ಮಹಾ ಮಹಿಮೆ ದಾನಮ್ಮ ದೇವಿ ಹುಟ್ಟಿದ್ದು ಈಗಿನ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಎಂಬ ಸಣ್ಣ ಗ್ರಾಮದಲ್ಲಿ. ಈಗಿನ ಕರ್ನಾಟಕದ ವಿಜಯಪುರದಿಂದ ಉತ್ತರಕ್ಕೆ ೨೦ ಮೈಲಿ ದೂರವಿರುವ ಈ ಸ್ಥಳ ಹನ್ನೆರಡನೆ ಶತಮಾನದ ಆಸು ಪಾಸಿಗೆ ಕನ್ನಡ ಭಾಷಿಗರಿಂದ ಕೂಡಿತ್ತು. ಇಂತಹ ಕನ್ನಡ ಭಾಷಿಗ ರೈತಾಪಿ ವರ್ಗಕ್ಕೆ ಸೇರಿದ ಅನಂತರಾಯ ಮತ್ತು ಶಿರಸಮ್ಮ ದಂಪತಿಗಳಿಗೆ ಜನಿಸಿದ ಮಗಳೇ ಲಿಂಗಮ್ಮ. ಈಕೆ ವಚನ ಪಿತಾಮಹ, ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರ ಸಮ ಕಾಲೀನಳು. ಹಾಗಾಗಿ ಈಕೆಯು ಜೀವಿಸಿದ್ದ ಕಾಲವೂ ಹನ್ನೆರಡನೆ ಶತಮಾನ.
ಕೃಷಿ ಮತ್ತು ಹೈನುಗಾರಿಕೆಯೇ ಆಧಾರವಾಗಿದ್ದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಲಿಂಗಮ್ಮ ಉತ್ತಮ ಬಾಲ್ಯ ದಿನಗಳನ್ನು ಕಂಡರೂ ತನ್ನ ಸುತ್ತ ಜಾತಿ, ಧರ್ಮ, ಲಿಂಗ, ಸಿರಿವಂತಿಕೆಯೇ ಮೊದಲಾದ ವಿಚಾರಗಳಲ್ಲಿ ಭೇದಗಳಿದ್ದು ಅವುಗಳಿಂದ ಸಾಮಾನ್ಯ ಜನರು ಭಾಧೆಗೊಳಗಾಗಿರುವುದನ್ನು ಕಂಡು ಮರುಗಿದ್ದಳು. ಹುಟ್ಟುವುದಕ್ಕೆ ಮುಂಚೆ ಮತ್ತು ಸತ್ತ ಮೇಲೆ ಎಲ್ಲರ ಮೂಲವೂ ಒಂದೇ ಆಗಿದ್ದು ಹುಟ್ಟಿಗೂ ಸಾವಿಗೂ ಮದ್ಯೆ ಬದುಕುವ ದಿನಗಳಲ್ಲಿ ಕ್ಷುಲ್ಲಕ ವಿಚಾರಗಳಿಗೆ ಮನುಷ್ಯ ಮನುಷ್ಯರೇ ಬಡಿದಾಡಿ ಕೊಳ್ಳುವುದು ಮನುಷ್ಯ ಧರ್ಮವೇ ಅಲ್ಲ ವೆಂದು ಸತ್ಯದ ಅರಿವು ಮಾಡಿಕೊಂಡಿದ್ದಳು. ಸಮಾಜದಲ್ಲಿ ಸಮಾನತೆ ಎನ್ನುವುದು ಇಲ್ಲವಾಗಿ ಅಸಮಾನತೆ ತಾಂಡವ ವಾಡುತ್ತಿದ್ದಾಗ ಲಿಂಗಮ್ಮಳನ್ನು ಬಹಳವಾಗಿ ಸೆಳೆದಿದ್ದು ಬಸವಣ್ಣ ನವರ ಅನುಭವ ಮಂಟಪ. ಸ್ತ್ರೀ ಸಮಾನತೆ, ಲಿಂಗಭೇಧ ನಿಷೇದ, ಅಹಿಂಸೆ ಮುಂತಾದ ವಿಚಾರಗಳಲ್ಲಿ ಆಗಿನ ಸಾಂಪ್ರದಾಯಿಕ ನಿಲುವುಗಳನ್ನು, ಕಟ್ಟಲೆಗಳನ್ನು ಪಕ್ಕಕ್ಕೆ ಸರಿಸಿ ಹೊಸ ಬಗೆಯ ಯೋಚನೆಗಳನ್ನು ಜಾರಿಗೆ ತರುತ್ತಿದ್ದ ಅನುಭವ ಮಂಟಪ ಲಿಂಗಮ್ಮನಂತಹ ಅದೆಷ್ಟೋ ಶರಣರಿಗೆ ತಮ್ಮ ನಿಲುವುಗಳನ್ನು ಸಮಾಜಕ್ಕೆ ತಿಳಿ ಹೇಳಲು ಒಂದು ಸೂಕ್ತ ವೇದಿಕೆಯಾಯಿತು.
ಲಿಂಗಮ್ಮನ ಜನನ
ಬದಲಾಯಿಸಿಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತೆ ಉಮರಾಣಿಯ ಅನಂತರಾಯ ಮತ್ತು ಶಿರಸಮ್ಮ ದಂಪತಿಗಳಿಗೆ ಬಹಳ ಕಾಲ ಮಕ್ಕಳಿರಲಿಲ್ಲ.ಈ ಕುರಿತಾಗಿ ದಂಪತಿಗಳು ವೀರಮಲ್ಲಯ್ಯನ ದೇವಸ್ಥಾನಕ್ಕೆ ಹೋಗಿ ಶ್ರದ್ಧಾ ಭಕ್ತಿಗಳಿಂದ ಹರಕೆ ಮಾಡಿಕೊಳ್ಳುತ್ತಾರೆ. ಅದೇ ದಿನ ರಾತ್ರಿ ಶಿರಸಮ್ಮನವರ ಕನಸಿನಲ್ಲಿ ಕಾಣಿಸಿಕೊಂಡ ವೀರ ಮಲ್ಲಯ್ಯ 'ಸಾಕ್ಷಾತ್ ಪಾರ್ವತಿಗೆ ನೀನು ಜನ್ಮ ನೀಡುವೆ, ಆ ಮಗು ಸಾಮಾನ್ಯ ಮಕ್ಕಳಂತೆ ಅಳುವುದಿಲ್ಲ ಹಾಗು ಲಿಂಗಧಾರಣೆಯಾಗುವವರೆವಿಗೂ ಹಾಲನ್ನಾಗಲಿ, ನೀರನ್ನಾಗಲಿ ಸೇವಿಸುವುದಿಲ್ಲ'ಎಂದು ಹೇಳಿದಂತೆ ಭಾಸವಾಗುತ್ತದೆ. ಅದಾಗಿ ಕೆಲವು ಮಾಸಗಳಲ್ಲಿ ಶಿರಸಮ್ಮ ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಆಗ ಸಾಕ್ಷಾತ್ ವೀರಮಲ್ಲಯ್ಯನೇ ಜಂಗಮರಂತೆ ವೇಷ ಧರಿಸಿ ಅನಂತರಾಯನ ಮನೆಗೆ ಬಂದು ಮಗುವಿಗೆ ಲಿಂಗ ಧಾರಣೆ ಮಾಡುತ್ತಾರೆ ಹಾಗು ಲಿಂಗಮ್ಮನೆಂದು ನಾಮಕರಣವನ್ನು ಮಾಡುತ್ತಾರೆ. ಹೆಸರಿಗೆ ತಕ್ಕಂತೆ ಇಷ್ಟ ಲಿಂಗ ಪೂಜೆಯನ್ನು ಶ್ರದ್ಧಾ ಭಕ್ತಿಗಳಿಂದ ಮಾಡುತ್ತಿದ್ದ ಲಿಂಗಮ್ಮ ಶ್ರೀಶೈಲ ಮಲ್ಲಿಕಾರ್ಜುನನ ಅನನ್ಯ ಭಕ್ತೆಯಾಗಿರುತ್ತಾಳೆ. ತನ್ನ ಮಾತಾ ಪಿತೃಗಳ ಅಪ್ಪಣೆ ಪಡೆದು ಕಾಲ್ನಡಿಗೆಯಲ್ಲೇ ಶ್ರೀಶೈಲ ಯಾತ್ರೆ ಮಾಡಿ, ಮಲ್ಲಿಕಾರ್ಜುನನ ಆರಾಧನೆಯನ್ನು ಕೈಗೊಳ್ಳುತ್ತಾಳೆ.
ಬಸವ ತತ್ವದಿಂದ ಪ್ರಭಾವಿತಳಾಗಿದ್ದು
ಬದಲಾಯಿಸಿಬಾಲ್ಯದಲ್ಲಿ ತನ್ನ ಗುರುಗಳಿಂದ ದೃಷ್ಟಿಯೋಗದ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಲಿಂಗಮ್ಮ ‘ದೃಷ್ಟಿಯೋಗವನ್ನು ಕಲಿಸಿ ಕೊಡಬಲ್ಲ ಗುರುಗಳು ಯಾರು?’ ಎಂದು ತನ್ನ ಗುರುಗಳನ್ನು ಕೇಳುತ್ತಾಳೆ. ಆಗ ಅವರು ದೃಷ್ಟಿ ಯೋಗದಲ್ಲಿ ಅದಾಗಲೇ ಪರಿಣತರಾಗಿದ್ದ ಸಿದ್ಧರಾಮರ ಹೆಸರನ್ನು ಉಲ್ಲೇಖಿಸುತ್ತಾರೆ ಹಾಗು ಸಿದ್ಧರಾಮರನ್ನು ಲಿಂಗಮ್ಮಳಿಗೆ ಭೇಟಿ ಮಾಡಿಸುತ್ತಾರೆ ಕೂಡ. ದೃಷ್ಟಿಯೋಗ ಎನ್ನುವುದು ಯೋಗದ ಐದನೇ ಅಂಗ 'ಪ್ರತ್ಯಾಹಾರ' ಕ್ಕೆ ಸೇರಿದ್ದಾಗಿದ್ದು ಇಂದ್ರೀಯ ಶಕ್ತಿಗಳನ್ನು ಹಿಂತೆಗೆಯುವುದನ್ನು ಒಳಗೊಂಡಿದೆ ಹಾಗು ಯೋಗದ ಆರನೇ ಅಂಗವಾದ 'ಧಾರಣ' ಎಂಬ ಏಕಾಗ್ರತೆಗೆ ಸಂಬಂಧಪಟ್ಟ ಅಂಶಗಳನ್ನು ಒಳಗೊಂಡಿದೆ. ಸಿದ್ಧರಾಮರಲ್ಲಿ ದೃಷ್ಟಿಯೋಗದ ಬಗ್ಗೆ ವಿಚಾರಿಸಿದಾಗ ಅವರು ‘ವಿದ್ಯೆಗಳನ್ನು ಕಲಿತ ಮೇಲೆ ಅದನ್ನು ಒಳ್ಳೆ ಕಾರ್ಯಕ್ಕಿಂತ ಕೆಟ್ಟ ಕಾರ್ಯಗಳಿಗೆ ಬಳಸುವರ ಸಂಖ್ಯೆಯೇ ಹೆಚ್ಚು’ ಎಂದು ಆತಂಕ ಪಡುತ್ತಾರೆ. ಸಿದ್ಧರಾಮರಿಗೆ ತಾನು ಹೇಳಿಕೊಟ್ಟ ವಿದ್ಯೆ ಜನರ ಉದ್ಧಾರಕ್ಕಾಗಿ ಇರಬೇಕೆ ಹೊರತು ಇನ್ಯಾವುದಕ್ಕೂ ಅಲ್ಲ ಎಂಬ ಅಭಿಲಾಷೆಯಿರುತ್ತದೆ. ಲಿಂಗಮ್ಮಳು ಈ ವಿಚಾರದಲ್ಲಿ ತನ್ನಲ್ಲಿ ಭರವಸೆ ಇಡುವಂತೆ ಬೇಡಿಕೊಳ್ಳುತ್ತಾಳೆ, ಹಾಗು ತಾನು ಕಲಿತ ಎಲ್ಲ ವಿದ್ಯೆಗಳನ್ನು ಕೇವಲ ರಚನಾತ್ಮಕ ಕಾರ್ಯಗಳಲ್ಲಿ ಮಾತ್ರ ಬಳಸಿಕೊಳ್ಳುವುದಾಗಿ ಭರವಸೆ ನೀಡುತ್ತಾಳೆ. ಇದರಿಂದ ಸಂತುಷ್ಟರಾದ ಗುರು ಸಿದ್ಧರಾಮರು ಲಿಂಗಮ್ಮಳಿಗೆ ದೃಷ್ಟಿಯೋಗ ವಿದ್ಯೆಯನ್ನು ಹೇಳಿಕೊಡುತ್ತಾರೆ. ಅದರ ಜೊತೆಗೆ ಅವರಿಗೂ ಕಲ್ಯಾಣದ ಬಸವಣ್ಣನವರ ಅನುಭವ ಮಂಟಪದೊಂದಿಗೆ ಇರುವ ಬಾಂಧವ್ಯವನ್ನು, ಅನುಭವವನ್ನು, ಹಾಗು ಅಲ್ಲಿನ ವಿಚಾರಗಳನ್ನು ಲಿಂಗಮ್ಮಳೊಂದಿಗೆ ಹಂಚಿ ಕೊಳ್ಳುತ್ತಾರೆ. ಇದರಿಂದ ಪ್ರಭಾವಿತಳಾದ ಲಿಂಗಮ್ಮ ತಾನು ಬಸವಣ್ಣನವರನ್ನು ಹಾಗು ಅನುಭವ ಮಂಟಪದ ಇತರ ಶರಣರನ್ನು ಕಾಣಲು ಉತ್ಸುಕಳಾಗುತ್ತಾಳೆ ಮತ್ತು ಕಲ್ಯಾಣಕ್ಕೆ ಹೊರಟು ನಿಲ್ಲುತ್ತಾಳೆ.
ಉಮರಾಣಿಯಿಂದ ಕಲ್ಯಾಣಕ್ಕೆ
ಬದಲಾಯಿಸಿತನ್ನ ಸ್ವಗ್ರಾಮ ಉಮರಾಣಿ ಇಂದ ಹೊರಟು ಲಿಂಗಮ್ಮ ಕಲ್ಯಾಣವನ್ನು ತಲುಪುವ ಮಾರ್ಗ ಮಧ್ಯೆ ಗುಡಿಸಲೊಂದು ಸಿಗುತ್ತದೆ. ಅಲ್ಲಿ ಒಬ್ಬ ಹೆಂಗಸು ನಿರ್ಗತಿಕಳಂತೆ, ರೋಗಗ್ರಸ್ತಳಾಗಿ ಬಿದ್ದು ಕೊಂಡಿ ರುತ್ತಾಳೆ. ಗುಡಿಸಲಿನ ಒಳಹೊಕ್ಕ ಲಿಂಗಮ್ಮ ಆ ಹೆಂಗಸಿನ ಸ್ಥಿತಿ ಕಂಡು ಮರುಗುತ್ತಾಳೆ ಮತ್ತು ಅಲ್ಲಿಯೇ ಸೇವೆಗೆ ನಿಲ್ಲುತ್ತಾಳೆ. ಮೊದಲಿಗೆ ಮಹಿಳೆಯ ರೋಗವನ್ನು ಗುಣ ಪಡಿಸಿ ನಂತರ ಆ ಮನೋರೋಗಕ್ಕೆ ಕಾರಣವನ್ನು ತಿಳಿದುಕೊಳ್ಳುತ್ತಾಳೆ. ಮದುವೆಯಾದ ಗಂಡ ತನ್ನನ್ನು ಬಿಟ್ಟು ಹೋಗಿದ್ದೆ ಕಾರಣವೆಂದು ಆ ಹೆಂಗಸು ತಿಳಿಸುತ್ತಾಳೆ. ಲಿಂಗಮ್ಮ ಆಕೆಯ ಗಂಡನನ್ನು ಹುಡುಕಿ ಕರೆತಂದು ಮುರಿದಿದ್ದ ಸಂಸಾರವನ್ನು ಒಂದು ಮಾಡುತ್ತಾಳೆ. ಆಗ ಆ ದಂಪತಿಗಳು ಲಿಂಗಮ್ಮಳನ್ನು ಕೆಲವು ದಿನಗಳ ಕಾಲ ಅಲ್ಲೇ ನೆಲೆಯಾಗುವಂತೆ ಕೇಳಿಕೊಳ್ಳುತ್ತಾರೆ. ದಂಪತಿಗಳ ಕೋರಿಕೆ ಮನ್ನಿಸಿ ಲಿಂಗಮ್ಮ ಅಲ್ಲಿಯೇ ಉಳಿಯುತ್ತಾಳೆ ಹಾಗು ಅಲ್ಲಿನ ಜನಗಳ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾಳೆ. ಆಕೆಯ ನಿಷ್ಕಳಂಕ ಮನೋಭಾವನೆ, ಫಲಾಪೇಕ್ಷೆ ಬಯಸದೆ ಸೇವೆ ಮಾಡುವ ರೀತಿ ಎಲ್ಲವೂ ಅಲ್ಪ ಕಾಲದಲ್ಲಿಯೇ ಜನರಿಂದ ಮೆಚ್ಚುಗೆಗೆ ಪಾತ್ರವಾಗುತ್ತವೆ. ಎಷ್ಟರ ಮಟ್ಟಿಗೆ ಎಂದರೆ ಅನುಭವ ಮಂಟಪದ ಪ್ರಮುಖ ಶರಣರಾದ ಸೌದೆ ಕಾಯಕದ 'ಮೋಳಿಗೆ ಮಾರಯ್ಯ' ನವರು ಒಮ್ಮೆ ಮರದ ಹಿಂದೆ ನಿಂತುಕೊಂಡು ಲಿಂಗಮ್ಮನ ಸೇವೆಯನ್ನು ನೋಡಿ, ತನ್ನ ಸೇವೆಯೂ ಈಕೆಗೆ ದೊರೆಯಬೇಕು ಎಂದು ರಾತ್ರಿ ಲಿಂಗಮ್ಮ ಮಲಗಿದ ಮೇಲೆ ಯಾರಿಗೂ ತಿಳಿಯದಂತೆ ಕಾಡಿನಿಂದ ಸೌದೆ ಸಂಗ್ರಹಿಸಿ ತಂದು ಲಿಂಗಮ್ಮಳ ಸೌದೆ ಸಂಗ್ರಾಹಕದಲ್ಲಿ ಪೇರಿಸಿ ಬಿಡುತ್ತಿದ್ದರು. ಬೆಳಗಾಗುವಷ್ಟರಲ್ಲಿ ಸೌದೆ ತಾನಾಗೆ ಬಂದು ಸೌದೆ ಸಂಗ್ರಾಹಕದಲ್ಲಿರುವುದನ್ನು ಕಾಣುತ್ತಿದ್ದ ಲಿಂಗಮ್ಮ ಇದು 'ಮೋಳಿಗೆ ಮಾರಯ್ಯ' ನವರ ಕಾಯಕವೇ ಎಂದು ಸುಲಭವಾಗಿ ಗ್ರಹಿಸಿ ಬಿಡುತ್ತಾಳೆ. ಇದು ಲಿಂಗಮ್ಮನಲ್ಲಿ ಶರಣ ತತ್ವ ಎಷ್ಟರ ಮಟ್ಟಿಗೆ ಪ್ರವಹಿಸಿತ್ತು ಎಂಬುದಕ್ಕೆ ಒಂದು ಚಿಕ್ಕ ಉದಾಹರಣೆ.
ಮಾರಯ್ಯನವರ ಸೌದೆ ಕಾಯಕ ಹೀಗೇ ಮುಂದುವರೆದಿರಲು ಒಮ್ಮೆ ಲಿಂಗಮ್ಮ ಮಾರಯ್ಯನವರನ್ನು ಖುದ್ದು ಮುಖಾ ಮುಖಿ ಭೇಟಿಯಾಗಿ ಆ ಕಾಯಕ ಮಾರಯ್ಯನವರದ್ದೇ ಎಂಬ ಅರಿವು ತನಗೆ ಹಿಂದಿನಿಂದಲೂ ಇದ್ದುದ್ದಾಗಿ ಹೇಳಿಕೊಳ್ಳುತ್ತಾಳೆ. ಲಿಂಗಮ್ಮನ ಸೇವೆಗೆ ಅದಾಗಲೇ ಬೆರಗಾಗಿದ್ದ ಮಾರಯ್ಯನವರು ಈ ವಿಚಾರವನ್ನು ಅನುಭವ ಮಂಟಪದಲ್ಲಿ ಬಸವಣ್ಣನವರಿಗೂ ತಿಳಿಸಿರುತ್ತಾರೆ. ಲಿಂಗಮ್ಮನ ಸೇವಾ ಮನೋಭಾವನೆಗೆ ಮಾರು ಹೋದ ಶ್ರೀ ಜಗಜ್ಜ್ಯೋತಿ ಬಸವೇಶ್ವರರು ಲಿಂಗಮ್ಮಳನ್ನು ಕಾಣಲು ಸ್ವತಹ ಧಾವಿಸುತ್ತಾರೆ. ಲಿಂಗಮ್ಮಳ ಸೇವೆಯನ್ನು ನೇರವಾಗಿ ನೋಡುವ ಅವಕಾಶ ದೊರಕಿದ್ದೇ ತನ್ನ ಮಹಾ ಭಾಗ್ಯವೆಂದು ಭಾವಿಸುತ್ತಾರೆ. ಸೇವೆಗೆ ಭಾಜನರಾದ ಜನರು ಕಾಣಿಕೆಯಾಗಿ ಏನು ಕೊಟ್ಟರು ಲಿಂಗಮ್ಮ ಅದನ್ನು ತನ್ನಲ್ಲಿ ಇರಿಸಿಕೊಳ್ಳದೆ ದಾನ ಮಾಡುತ್ತಿರುತ್ತಾಳೆ. ಆ ದಾನ ಎಷ್ಟರ ಮಟ್ಟಿಗೆ ಇರುತ್ತಿತ್ತೆಂದರೆ ತುಂಬಿದ ಜೋಳಿಗೆಯಿಂದ ಲಿಂಗಮ್ಮ ತಾನು ಕೊಡುತ್ತಿರುವುದು ಏನು ಎಂದು ನೋಡದೆ ದಾನ ಮಾಡಿಬಿಡುತ್ತಿದ್ದಳು, ಅದು ಹೊನ್ನಾಗಿರಬಹುದು, ಕಲ್ಲಾಗಿರಬಹುದು, ಧವಸ ಧಾನ್ಯಾದಿಯಾಗಿ ಏನೇ ಆದರೂ ತನ್ನ ಕಣ್ಣಾರೆ ಅದೇನೆಂದು ವಿಚಾರ ಮಾಡುತ್ತಿರಲಿಲ್ಲ. ಸಿರಿವಂತರು, ಧನವಂತರು, ರಾಜಾದಿರಾಜರಾದಿಯಾಗಿ ಯಾವ ಚಕ್ರವರ್ತಿಗಳು ಇಂತಹ ದಾನ ಮಾಡಿರುವ ಉಲ್ಲೇಖ ಸಿಗುವುದು ವಿಪರೀತ ಕಡಿಮೆ, ಅಂತಹುದರಲ್ಲಿಯೂ ಒಬ್ಬ ಸಾಮಾನ್ಯ ಹಳ್ಳಿಗಾಡಿನ ರೈತಾಪಿ ಹೆಣ್ಣು ಮಗಳು ಈ ಪರಿಯ ದಾನ ನಿಷ್ಠೆಯಲ್ಲಿ ಮಗ್ನಳಾಗಿರುವುದನ್ನು ಕಂಡ ಬಸವೇಶ್ವರರು ಮೂಕ ವಿಸ್ಮಿತರಾಗುತ್ತಾರೆ, ಅಷ್ಟೇ ಅಲ್ಲದೆ ಆಕೆಗೆ 'ದಾನಮ್ಮ' ಎಂಬ ಬಿರುದು ಕೊಟ್ಟು ಆಕೆಯು ಇನ್ನು ಮುಂದೆ ಅದೇ ಹೆಸರಿನಿಂದ ವಿಶ್ವ ವಿಖ್ಯಾತಳಾಗುವಂತೆ ಆಶೀರ್ವದಿಸುತ್ತಾರೆ. ಇನ್ನು ಮುಂದುವರಿದ ಬಸವೇಶ್ವರರು ಇಂತಹ ಶರಣರ ಅವಶ್ಯಕತೆ ಕಲ್ಯಾಣಕ್ಕೆ ಇದೆಯೆಂದು ಆಕೆಯನ್ನು ಕಲ್ಯಾಣಕ್ಕೆ ಆಹ್ವಾನಿಸುತ್ತಾರೆ.
ಕಲ್ಯಾಣದಲ್ಲಿ ಶರಣರೊಂದಿಗೆ
ಬದಲಾಯಿಸಿಕಲ್ಯಾಣದ ಭೇಟಿಗಾಗಿ ಹಾಗು ಬಸವೇಶ್ವರರ ದರ್ಶನಕ್ಕಾಗಿಯೇ ಹೊರಟುಬಂದಿದ್ದ ದಾನಮ್ಮನಿಗೆ ಬಸವೇಶ್ವರರೇ ಖುದ್ದಾಗಿ ಬಂದು ಆಹ್ವಾನಿಸಿದ್ದು ಸಂತೋಷಕ್ಕೆ ಪಾರವೇ ಇಲ್ಲವಾಯಿತು. ಆಗ ದಾನಮ್ಮ ಆದ ಲಿಂಗಮ್ಮ ಕಲ್ಯಾಣ ಕಡೆ ಪ್ರಯಾಣ ಬೆಳೆಸಿದಳು. ಕಲ್ಯಾಣದ ಅನುಭವ ಮಂಟಪ ವಿಶೇಷವಾದ ಸಾಮಾಜಿಕ ಬದಲಾವಣೆಗಳನ್ನು ತರಲು ಹೊರಟಿದ್ದ ಶರಣ ಸಂಪನ್ನವಾದ ಒಂದು ಅದ್ಭುತ ಸ್ಥಳ. ಅನುಭವ ಮಂಟಪದ ಮೇಲ್ವಿಚಾರಣೆ, ಅಲ್ಲಿ ನಡೆಯುವ ಪರಸ್ಪರ ಅಭಿಪ್ರಾಯ, ಅನುಭವಗಳನ್ನ ಹಂಚಿಕೊಳ್ಳುವ ಕಾರ್ಯಕ್ರಮಗಳಿಗೆ ಮುಂದಾಳು ಶೂನ್ಯ ಪೀಠದ ಮೇಲೆ ಆಸೀನರಾದ ಶೂನ್ಯ ಪೀಠ ದ ಅಧ್ಯಕ್ಷರು. ದಾನಮ್ಮ 'ಅಲ್ಲಮ ಪ್ರಭು'ಗಳು ಪೀಠಾಧ್ಯಕ್ಷರಾಗಿ ಅನುಭವ ಮಂಟಪದ ಶೂನ್ಯ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದಾಗ ಅನುಭವ ಮಂಟಪ ಪ್ರವೇಶಿಸುತ್ತಾಳೆ. ಜಗಜ್ಜ್ಯೋತಿ ಬಸವೇಶ್ವರ, ಚೆನ್ನ ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ, ನಾಗಲಾಂಬಿಕೆ, ಮೋಳಿಗೆ ಮಾರಯ್ಯರೇ ಮೊದಲಾಗಿ ಅನೇಕ ಶರಣರನ್ನು ಸಂಧಿಸುವ ದಾನಮ್ಮ ಸಾಮಾಜಿಕ ಕಳಕಳಿಯ ವಿಚಾರವಾಗಿ ತನಗಿದ್ದ ಎಲ್ಲ ಅನುಮಾನಗಳನ್ನು ಅನುಭವ ಮಂಟಪದ ಸಭೆಯಲ್ಲಿ ಚರ್ಚಿಸಿ ಮಹಾ ಶರಣರಿಂದ ಸೂಕ್ತ ಉತ್ತರಗಳನ್ನು ಪಡೆಯುತ್ತಾಳೆ. ಧರ್ಮ, ಜಾತಿ, ಲಿಂಗ ಭೇದಗಳಿಗೆ ಇತಿ ಶ್ರೀ ಹಾಡಲು ಅವಶ್ಯಕವಾದ್ದು ಕ್ರಾಂತಿ ಮಾರ್ಗವೋ ? ಇಲ್ಲ ಶಾಂತಿ ಮಾರ್ಗವೋ ?, ಸಾಮಾಜಿಕ ಬದಲಾವಣೆಗಳನ್ನು ಉಂಟು ಮಾಡುವ ಹರಿಕಾರನಾಗ ಬಯಸುವನಿಗೆ ವಿವಾಹ ತೊಡಕಾಗಬಹುದೇ?, 'ಅಹಿಂಸಾ ಪರಮೋ ಧರ್ಮಃ' ಆದರೆ ಎಲ್ಲ ಧಾರ್ಮಿಕ ಸಂಕೋಲೆಗಳಿಗೂ ಅಹಿಂಸೆ ಉತ್ತರವೀಯಬಲ್ಲುದೆ? ಹೀಗೇ ಇನ್ನು ಮುಂತಾಗಿ ದಾನಮ್ಮ ಅನುಭವ ಮಂಟಪದಲ್ಲಿ ಪ್ರಶ್ನೆಗಳ ಸುರಿಮಳೆಗರೆಯುತ್ತಿದ್ದರೆ, ಬಸವಾದಿ ಶರಣರು ಅಷ್ಟೇ ವಿನಮ್ರರಾಗಿ ಉತ್ತರಿಸಿ ದಾನಮ್ಮನನ್ನು ತೃಪ್ತಿ ಪಡಿಸುತ್ತಿದ್ದರು. ಎಲ್ಲಕ್ಕೂ ಮಿಗಿಲಾಗಿ ಇಷ್ಟು ಚಿಕ್ಕ ವಯಸ್ಸಿಗೆ ಆಕೆಯ ಮನಸ್ಸಿನಲ್ಲಿ ಆವಿರ್ಭವಿಸಿರುವ ಪ್ರಶ್ನಾವಳಿಗಳು ಸಮಾಜದ ಉದ್ಧಾರಕ್ಕೆ ಅನುಕೂಲಿತವಾದವು ಹಾಗೂ ಪಂಡಿತ, ವಿದ್ವಾಂಸರುಗಳಿಗೇ ಉತ್ತರಿಸಲು ಕಷ್ಟದಾಯಕವಾಗಿರುವಂತಹವು, ಎಂದು ಬಸವಾದಿ ಪ್ರಮಥರು ಆಶ್ಚರ್ಯಚಕಿತರಾಗುತ್ತಾರೆ.
ತಾನೂ ವಚನಗಳ ರಚನೆಯಲ್ಲಿ ತೊಡಗುವಂತೆ ಅಲ್ಲಮ ಪ್ರಭುಗಳಿಂದ ಬಂದ ಸಲಹೆಯನ್ನು ನಯವಾಗಿ ತಿರಸ್ಕರಿಸುವ ದಾನಮ್ಮ, ಎಲ್ಲ ಶರಣರೂ ವಚನ ರಚನೆಯಲ್ಲೇ ತೊಡಗಿಕೊಂಡರೆ ವಚನಗಳ ಕಂಪನ್ನು ದೇಶದಾದ್ಯಂತ ಹರಡಲು ಯಾರು ಬೇಡವೇ? ಎಂದು ಪ್ರಶ್ನಿಸುತ್ತಾಳೆ. ಅಲ್ಲಿಯ ವರೆವಿಗೂ ಅನುಭವ ಮಂಟಪದಲ್ಲಿ ಅಂತಹ ಯೋಚನೆಯೇ ಬಂದಿರುವುದಿಲ್ಲ, ಹೀಗಾಗಿ ದಾನಮ್ಮ ವಚನ ಮತ್ತು ಶಿವಭಕ್ತಿಯನ್ನು ನಾಡಿನಾದ್ಯಂತ ಪ್ರಸಾರ ಮಾಡುವುದೇ ಇನ್ನು ಮುಂದೆ ತನ್ನ ಕಾಯಕವೆಂದು ತನಗೆ ತಾನೇ ಕಾಯಕ ವಹಿಸಿಕೊಂಡು ಅನುಭವ ಮಂಟಪದ ಶರಣರುಗಳಿಂದ ಶ್ಲಾಘನೆಗೆ ಪಾತ್ರಳಾಗುತ್ತಾಳೆ.
ಸಾಮಾಜಿಕ ಕಾರ್ಯಗಳನ್ನು ಹೊರತು ಪಡಿಸಿದರೆ, ವಯಕ್ತಿಕವಾಗಿ ದಾನಮ್ಮ ಹತ್ತಿರವಾಗಿದ್ದು ಅಕ್ಕ ಮಹಾದೇವಿಗೆ. ವಯಸ್ಸಿಗೆ ಬರುವ ಮುನ್ನವೇ ಮದುವೆಯಾಗಿ ಗಂಡನ ಮನೆ ಸೇರಬೇಕು ಎಂಬಂತಹ ಅವೈಜ್ಞಾನಿಕ ಧೋರಣೆಗಳು ಬಲವಾಗಿದ್ದ ಕಾಲದಲ್ಲೇ ಸಮಾಜದ ಆಡು ನುಡಿಗಳನ್ನು ಧಿಕ್ಕರಿಸಿ ಶ್ರೀಶೈಲದ ಮಲ್ಲಿಕಾರ್ಜುನನೇ ತನ್ನ ಪತಿ ಎಂದು ಭಾವಿಸಿ, ವಿವಾಹವನ್ನೇ ಆಗದೆ ವಚನಕಾರ್ತಿಯಾಗಿ ಉಳಿದುಕೊಂಡಿದ್ದ ಅಕ್ಕ ಮಹಾದೇವಿ ದಾನಮ್ಮಳಿಗೆ ಒಂದು ಸ್ಪೂರ್ತಿಯ ಸೆಲೆಯಾಗಿ ಗೋಚರಿಸುತ್ತಾಳೆ. ಆದರಿಂದಲೇ ತನ್ನ ವಿವಾಹದ ಬಗೆಗಿದ್ದ ಅನುಮಾನಗಳನ್ನು ದಾನಮ್ಮ 'ಅಕ್ಕ'ನಲ್ಲಿ ಪರಿಹರಿಸಿಕೊಳ್ಳುತ್ತಾಳೆ. ಸಾಮಾಜಿಕ ಸೇವೆಗಳೇ ಯಾವೊಬ್ಬನ ಧ್ಯೇಯವಾದರೆ ವಿವಾಹವೆನ್ನುವುದು ಅವನಿಗೆ ಅಡ್ಡಗಾಲು ಆಗಲಾರದು, ಬದಲಾಗಿ ಸಾಂಸಾರಿಕ ಜೀವನವನ್ನು ಅನುಭವ ಮುಖೇನ ಅರ್ಥ ಮಾಡಿಕೊಳ್ಳುವ ಹಾಗು ಅದರಲ್ಲಿರುವ ಲೋಪ ದೋಷಗಳ ಅಂಶ ತಿಳಿಯುವುದು ಸ್ವತಹ ತಾವು ವಿವಾಹವಾದಾಗ ಮಾತ್ರ ಎಂದು ಅಕ್ಕ ತನ್ನ ವಾದವನ್ನು ಮಂಡಿಸುತ್ತಾಳೆ. ಇದಕ್ಕೆ ಸಮ್ಮತಿಯಿತ್ತ ದಾನಮ್ಮ ತಾನು ವಿವಾಹವಾಗುವುದಾಗಿ ತಿಳಿಸುತ್ತಾಳೆ, ಅಷ್ಟೇ ಅಲ್ಲದೆ ವಿವಾಹ ನಂತರ ತನ್ನ ದಾನ, ಲಿಂಗ ಪೂಜೆ ಮುಂತಾದ ವ್ರತಾಚರಣೆಯ ಕಟ್ಟುಪಾಡುಗಳನ್ನು ಬದಿಗೊತ್ತುವುದಿಲ್ಲ ಎಂದು ವಚನ ನೀಡುತ್ತಾಳೆ.
ವೈವಾಹಿಕ ಜೀವನ
ಬದಲಾಯಿಸಿಕಲ್ಯಾಣದಿಂದ ಹೊರಟು ಉಮರಾಣಿಗೆ ಬರುವ ದಾನಮ್ಮ ತಾನು ಮದುವೆಯಾಗುವುದಾಗಿ ತನ್ನ ಪೋಷಕರಲ್ಲಿ ತಿಳಿಸುತ್ತಾಳೆ. ಆಗ ಉಮರಾರಾಣಿಯಿಂದ ೧೨ ಮೈಲು ಉತ್ತರ ದಿಕ್ಕಿಗಿರುವ ಸುಂಗ ಎಂಬ ಊರಿನ ಪರಮ ಶಿವಭಕ್ತ ಸಂಗಮನಾಥನಿಗೆ ಕೊಟ್ಟು ದಾನಮ್ಮಳ ವಿವಾಹ ನೆರವೇರಿಸಲಾಗುತ್ತದೆ. ಸಂಗಮನಾಥನು ಮಹಾ ಶಿವ ಭಕ್ತನಾಗಿದ್ದು, ದಾಸೋಹ, ಕಾರ್ಯನಿಷ್ಠೆ, ಅತಿಥಿ ಸತ್ಕಾರವೇ ಮೊದಲಾಗಿ ಸದ್ಗುಣ ಸಂಪನ್ನನಾಗಿರುತ್ತಾನೆ. ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಹಾಗೂ ಗೌರವ ದಿಂದ ಕಾಣುತ್ತಿದ್ದ ಸಂಗಮನಾಥನು ಪತ್ನಿಯ ಎಲ್ಲ ಕಾರ್ಯ ಗಳಲ್ಲೂ ವಿನಮ್ರನಾಗಿ ಕೈಜೋಡಿಸುತ್ತಾನೆ. ಇದಾಗಿ ಮುಂದೆ ಕಲ್ಯಾಣದಲ್ಲಿ ಕ್ರಾಂತಿಯಾಗಿ ಬಸವೇಶ್ವರರು ಕೂಡಲಸಂಗಮದಲ್ಲಿ ಐಕ್ಯರಾಗುತ್ತಾರೆ, ಆಗ ಕಲ್ಯಾಣದ ಶರಣರೆಲ್ಲ ಕಲ್ಯಾಣವನ್ನು ತೊರೆದು ದೇಶದ ವಿವಿಧ ಭಾಗಗಳಲ್ಲಿ ಚದುರಿಹೋಗುತ್ತಾರೆ. ಶರಣ ಕುಲಕ್ಕೆ ಬಂದೊದಗಿದ ಈ ಆಪತ್ತನ್ನು ಕಂಡು ದಾನಮ್ಮ ದಿಗ್ಭ್ರಾಂತಳಾಗುತ್ತಾಳೆ. ತಾನು ಮನೆ ಮಠ ತೊರೆದು ವಚನ ಸಾಹಿತ್ಯದ ಕಂಪು ಹರಡಲು ಹಾಗು ಶಿವಭಕ್ತಿ ಪ್ರಸಾರ ಕಾರ್ಯದಲ್ಲಿ ತೊಡಗಲು ಟೊಂಕ ಕಟ್ಟಿ ನಿಲ್ಲುತ್ತಾಳೆ. ಈ ಎಲ್ಲಾ ಕಾರ್ಯಗಳಲ್ಲೂ ಪತಿ ಸಂಗಮನಾಥನು ದಾನಮ್ಮಳ ಬೆನ್ನೆಲುಬಾಗಿ ನಿಲ್ಲುತ್ತಾನೆ. ದಾನಮ್ಮ ಮನೆ ಮಠ ತೊರೆಯುವ ನಿರ್ಧಾರ ಪ್ರಕಟಿಸಿದ ಆರಂಭದಲ್ಲಿ ಆಕೆಯ ಅತ್ತೆ ಮಾವ ಅಡ್ಡಿಪಡಿಸಿದರೂ ಕ್ರಮೇಣ ದಾನಮ್ಮಳಿಗೆ ಇದ್ದ ದೂರ ದೃಷ್ಟಿಗೆ ಮೆಚ್ಚಿ, ಒಪ್ಪಿಗೆ ಕೊಡುತ್ತಾರೆ. ಆಗಲೇ ದಾನಮ್ಮ ತನ್ನ ಪತಿಯೊಡನೆ ಗುಡ್ಡಾಪುರಕ್ಕೆ ಬರುತ್ತಾಳೆ.
ಜನ ಸೇವೆ
ಬದಲಾಯಿಸಿಗುಡ್ಡಾಪುರಕ್ಕೆ ಬಂದ ದಾನಮ್ಮ ಗುಡ್ಡಾಪುರದ ಶ್ರೀ ಸೋಮೆಶ್ವರನಾಥ ದೇವಸ್ಥಾನದಲ್ಲಿ ತನ್ನ ದಿನ ನಿತ್ಯದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತಾ, ಅಲ್ಲಿಯೇ ಬಂದ ಭಕ್ತರಿಗೆ ದಾನಗಳನ್ನೂ, ಸಹಾಯಗಳನ್ನೂ ಮಾಡುತ್ತಾ ಜನಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿ ಕೊಳ್ಳುತ್ತಾಳೆ. ಒಮ್ಮೆ ಅಂಟು ರೋಗವೊಂದು ಹರಡುತ್ತದೆ. ಅದರಿಂದ ತತ್ತರಿಸಿದ ಜನರೆಲ್ಲರೂ ನಿತ್ರಾಣರಾಗಿ ಹೋಗುತ್ತಾರೆ. ದಾನಮ್ಮ ಅವರನ್ನೆಲ್ಲಾ ತನ್ನಲ್ಲಿಗೆ ಕರೆತಂದು ಉಪಚರಿಸುತ್ತಾಳೆ. ಆ ರೋಗ ಗುಣಮುಖವಾಗುವವರೆಗೂ ಇಡೀ ಊರಿನ ಜನರನ್ನೆಲ್ಲ ತನ್ನಲ್ಲೇ ಇರಿಸಿಕೊಂಡು, ಅದಾದ ನಂತರ ಅವರಿಗೆ ತಕ್ಷಣಕ್ಕೆ ಬೇಕಾದ ಆಹಾರ ಪದಾರ್ಥಗಳನ್ನೆಲ್ಲ ಮನೆಗೆ ಕೊಟ್ಟು ಕಳುಹಿಸುತ್ತಾಳೆ. ದಕ್ಷಿಣ ದೇಶದಲ್ಲಿ ತುಂಗಭದ್ರಾ ತೀರದಲ್ಲಿದ್ದ ಶಿವನ ದೇಗುಲವೊಂದಕ್ಕೆ ಲಗ್ಗೆ ಇಟ್ಟ ವೈಷ್ಣವರು ಅಲ್ಲಿದ್ದ ಶಿವಲಿಂಗವನ್ನು ಕಿತ್ತು ನದಿಯಲ್ಲಿ ಎಸೆದು ಅದೇ ದೇವಸ್ಥಾನದಲ್ಲಿ ವಿಷ್ಣುವಿನ ವಿಗ್ರಹ ಇಟ್ಟುಕೊಂಡು ಪೂಜಿಸುತ್ತಿರುತ್ತಾರೆ. ಅಲ್ಲಿನ ಶಿವ ದೇವಸ್ಥಾನದ ಅರ್ಚಕರು ಈ ಸಮಸ್ಯೆಗೆ ಪರಿಹಾರಕ್ಕಾಗಿ ದಾನಮ್ಮನ ಬಳಿಗೆ ಬರುತ್ತಾರೆ.ಈ ವಿಷಯ ತಿಳಿದ ಕೂಡಲೇ ಪತಿಯೊಂದಿಗೆ ದಕ್ಷಿಣ ದೇಶಕ್ಕೆ ದಾನಮ್ಮ ಹೊರಟು ಬರುತ್ತಾಳೆ. ಅಲ್ಲಿದ್ದ ವೈಷ್ಣವರು 'ಈ ಸಾಮಾನ್ಯ ಹೆಂಗಸಿನಿಂದ ಏನು ಮಾಡಲು ಸಾಧ್ಯ?' ಎಂದು ಅಪಹಾಸ್ಯ ಮಾಡುತ್ತಾರೆ. ಕೂಡಲೇ ನದಿಯ ದಂಡೆಗೆ ಬಂದು ನಿಲ್ಲುವ ದಾನಮ್ಮ ಕೈಮುಗಿದು ಪ್ರಾರ್ಥಿಸಲು ಶುರು ಮಾಡುತ್ತಾಳೆ, ಇದನ್ನು ಕಂಡು ವೈಷ್ಣವರು ಒಳಗೊಳಗೇ ನಗುತ್ತಿರುತ್ತಾರೆ ಕೂಡ. ದಾನಮ್ಮನ ಪ್ರಾರ್ಥನೆ ಮನ್ನಿಸಿದಂತೆ ಅವರು ಕಿತ್ತು ಬಿಸಾಡಿದ್ದ ಆ ಶಿವಲಿಂಗ ನದಿಯಲ್ಲೇ ತೇಲಿಕೊಂಡು ದಡಕ್ಕೆ ಬಂದು ನಿಲ್ಲುತ್ತದೆ. ಇದನ್ನೆಲ್ಲಾ ನೋಡಿ ಅಲ್ಲಿದ್ದವರೆಲ್ಲಾ ಮೂಕ ವಿಸ್ಮಿತರಾಗುತ್ತಾರೆ. ಹಾಗು ವೈಷ್ಣವರು ತಮ್ಮ ತಪ್ಪನ್ನು ಮನ್ನಿಸುವಂತೆ ಕೇಳಿಕೊಳ್ಳುತ್ತಾರೆ.
ಜನಗಳಲ್ಲಿ ದಾನಮ್ಮ ಯಾವಗಲೂ ಗುರು-ಲಿಂಗ-ಜಂಗಮಗಳನ್ನೂ ಅನುಸರಿಸುವಂತೆ ಹಾಗು ಅದೇ ಜೀವನದ ಉತ್ತುಂಗಕ್ಕೆ ಎಲ್ಲರನ್ನು ಒಯ್ಯಬಲ್ಲುದು ಎಂಬ ಮಾತುಗಳನ್ನು ಹೇಳುತ್ತಿರುತ್ತಾಳೆ. ಶಿವ ಭಕ್ತಿಯನ್ನು ಪ್ರಸಾರ ಮಾಡುವ ಸಲುವಾಗಿ ತನ್ನ ಅಸಂಖ್ಯಾತ ಭಕ್ತರಿಗೆ ಲಿಂಗ ದೀಕ್ಷೆಯನ್ನು ಕೊಟ್ಟು 'ಓಂ ನಮಃ ಶಿವಾಯ' ಎಂಬ ಶಿವ ಮಂತ್ರವನ್ನು ಜಪಿಸುವಂತೆ ಪ್ರೇರಿಪಿಸುತ್ತಾಳೆ ಹಾಗು ಶಾಂತಿಯುತ ಜೀವನ ಮತ್ತು ಆತ್ಮದ ಸನ್ಮಾರ್ಗಕ್ಕೆ ಇದು ಬಹಳ ಅವಶ್ಯಕವೆಂದು ಅರಿವು ಮಾಡಿಸುತ್ತಾಳೆ. ದಾನದಲ್ಲಿ ಹೆಸರಾದ ದಾನಮ್ಮ ಭಕ್ತರಿಂದ 'ವರದಾನಿ ದಾನಮ್ಮ' ಎಂದೇ ಕರೆಸಿಕೊಂಡು ಅಸಂಖ್ಯಾತ ಭಕ್ತರಿಂದ ಆರಾಧಿಸಲ್ಪಡುತ್ತಿದ್ದಾಳೆ.
ಇನ್ನೂ ಮುಂದುವರೆದು ದಾನಮ್ಮ ತನ್ನ ಪತಿಯೊಂದಿಗೆ ರಾಮೇಶ್ವರದ ಕಡೆಗೆ ಸಾಗುತ್ತಾಳೆ. ಬಸವಣ್ಣನವರ ಹಾಗು ಇತರ ಶರಣರ ವಚನಗಳನ್ನು ಜನರಿಗೆ ತಿಳಿಸುತ್ತಾ ತಾನು ಅನುಭವ ಮಂಟಪದಲ್ಲಿ ಕೊಟ್ಟ ಮಾತಿನನಂತೆ ಶಿವ ಭಕ್ತಿ ಪ್ರಸಾರದಲ್ಲಿ ತೊಡಗಿಕೊಳ್ಳುತ್ತಾಳೆ. ಕಾಂಬೆ ನಗರಕ್ಕೆ ದಾನಮ್ಮ ಬಂದಾಗ ಅದಾಗಲೇ ದಾನಮ್ಮನ ಬಗ್ಗೆ ಕೇಳಿ ತಿಳಿದಿದ್ದ ಚೋಳ ರಾಜರ ಮಾನ್ದಲೀಕ ದಾನಮ್ಮನನ್ನು ಗೌರವಾದರದಿಂದ ಬರ ಮಾಡಿಕೊಂಡು ಲಿಂಗ ದೀಕ್ಷೆ ಪಡೆಯುತ್ತಾನೆ.
ಮಹಾ ಐಕ್ಯ
ಬದಲಾಯಿಸಿಕಾಂಬೆಯಿಂದ ಕೂಡಲಸಂಗಮಕ್ಕೆ ಹಿಂದಿರುಗುವ ದಾನಮ್ಮ ಅಲ್ಲಿ ತನ್ನ ಮಾತಾ - ಪಿತೃಗಳು ಇಹಲೋಕ ಯಾತ್ರೆ ಮುಗಿಸಿದ ವಿಷಯ ಕೇಳುತ್ತಾಳೆ. ಕೂಡಲೇ ಗುಡ್ಡಾಪುರಕ್ಕೆ ಬಂದು ಯಥಾವತ್ತಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ಹೀಗೆ ದಿನಗಳು ಸಾಗುತ್ತಿದ್ದಾಗ ಒಮ್ಮೆ ದಾನಮ್ಮ ತನ್ನ ಶಿವ ಪೂಜೆ ಮುಗಿದ ನಂತರ ಯಾವುದೋ ಒಂದು ಅಂತರ್ಶಕ್ತಿಯ ಕರೆಯನ್ನು ಆಲಿಸಿ, ತಾನು ಇಲ್ಲಿಗೆ ಬಂದ ಕಾರ್ಯ ಮುಗಿಯಿತು ಎಂದು ಹೇಳಿ ಸಮಾಧಿ ಸಿದ್ಧಪಡಿಸುವಂತೆ ಸೂಚಿಸುತ್ತಾಳೆ. ತನ್ನ ಅಪಾರ ಭಕ್ತ ಸಂಕುಲವನ್ನು ಬಿಟ್ಟು ದಾನಮ್ಮ ಅಂದೇ ಸಮಾಧಿಯಾಗುತ್ತಾಳೆ.
ಯಾದವ ವಂಶದ ಮಹಾದೇವರಾಜ ಅರಸು ಸಾಯಿನಾಥ ಮಾಂಡಲೀಕ ದಾನಮ್ಮ ದೇವಿಯ ಸಮಾಧಿ ಮಂದಿರಕ್ಕೆ ದೇವಸ್ಥಾನ ನಿರ್ಮಾಣ ಮಾಡಿಸಿದ ಎನ್ನುತ್ತದೆ ಇತಿಹಾಸ. ದಾನಮ್ಮ ಬದುಕಿನಲ್ಲಿ ಸವೆಸಿದ ಹಾದಿ ಭಕ್ತಿ, ನಿಷ್ಠೆ, ಕಾಯಕಗಳಿಂದ ತುಂಬಿ ಪರಿಶುದ್ಧವಾಗಿತ್ತು. ಆದ ಕಾರಣ ಇಂದಿಗೂ ದಾನಮ್ಮ ದೇವಿಯ ಸನ್ನಿಧಾನದಲ್ಲಿ ಅಚ್ಚುಕಟ್ಟಾದ ಹಾಗು ವಿಧಿವತ್ತಾದ ಪೂಜಾ ವಿಧಾನಗಳನ್ನು ಆಚರಿಸಲಾಗುತ್ತದೆ. ಪ್ರತೀ ವರ್ಷವೂ ಛಟ್ಟೀ ಅಮಾವಾಸ್ಯೆಯ ದಿನ ದಾನಮ್ಮ ದೇವಿಯ ಜಾತ್ರೆ ನಡೆಯುತ್ತದೆ. ದಾಖಲೆಯ ಸಂಖ್ಯೆಯಲ್ಲಿ ಜನ ಸೇರುವ ಈ ಜಾತ್ರೆ ಭಾರತದ ಹೆಚ್ಚು ಜನ ಸೇರುವ ಜಾತ್ರೆಗಳಲ್ಲೊಂದು. ವಿಶೇಷ ಸೇವೆಗಳನ್ನು ನೆರವೇರಿಸುವ ಭಕ್ತರಲ್ಲಿ ಸರ್ವೇ ಸಾಮಾನ್ಯವಾದ ಸೇವೆಯೆಂದರೆ 'ಹೋಳಿಗೆ' ಸೇವೆ. ವಿವಿಧ ರೀತಿಯ ಹೋಳಿಗೆಯನ್ನು ಮಾಡಿ ದೇವಿಗೆ ಸಮರ್ಪಿಸಿ ಅನಂತರ ತಾವು ಹಂಚಿ ತಿನ್ನುವುದು ಇಲ್ಲಿನ ವಿಶೇಷತೆ. ಇನ್ನುಳಿದಂತೆ ದೇವಸ್ಥಾನದಲ್ಲಿ ನಿರಂತರ ದಾಸೋಹ ವ್ಯವಸ್ಥೆಯಿದೆ, ದೂರದಿಂದ ಬರುವ ಭಕ್ತರ ಅನುಕೂಲಕ್ಕಾಗಿ ಈ ದಾಸೋಹದ ಏರ್ಪಾಟು ಮಾಡಲಾಗಿದೆ.
ಪವಾಡಗಳು
ಬದಲಾಯಿಸಿದಾನಮ್ಮ ದೇವಿಯ ಅನೇಕ ಪವಾಡಗಳು ಭಕ್ತರಿಗೆ ಅನುಭವಗಳಾಗಿರುವ ಬೇಕಾದಷ್ಟು ಉದಾಹರಣೆಗಳಿವೆ. ದಾನಮ್ಮ ಸಮಾಧಿಯಾದಾಗ ಊರಿನಲ್ಲಿ ಇರದಿದ್ದ ದಾನಮ್ಮನ ಪರಮ ಭಕ್ತನೊಬ್ಬ ದಾನಮ್ಮ ದೇವಿಯ ಐಕ್ಯದ ವಿಷಯ ತಿಳಿದು ರೋದಿಸುತ್ತಾ ಬಂದು ಸಮಾಧಿಯ ಬಳಿ ನಿಂತಾಗ ದಾನಮ್ಮ ಮತ್ತೆ ದರ್ಶನ ಕೊಟ್ಟು, ಹುಟ್ಟು ಕುರುಡನಾಗಿದ್ದ ಅವನಿಗೆ ದೃಷ್ಟಿ ಬರುವಂತೆ ಅನುಗ್ರಹಿಸುತ್ತಾಳೆ. ಇದಿಷ್ಟೇ ಅಲ್ಲದೆ ಇನ್ನೂ ಅನೇಕ ಪವಾಡಗಳನ್ನು ತಾವು ಕಂಡಿರುವುದಾಗಿ ಭಕ್ತ ಕೋಟಿ ತಿಳಿಸಿದ್ದಾರೆ.
ದಾನಮ್ಮನ ಎಲ್ಲ ಪವಾಡಗಳನ್ನು ೧೦೮ ನಾಮಾವಳಿಗಳಲ್ಲಿ ಸ್ತುತಿಸಲಾಗಿದೆ.