ಮಹಾಲಯ ನಮ್ಮ ಹಿಂದೂ ಸಂಪ್ರದಾಯ ಪ್ರಕಾರ ಪಿತೃಗಳಿಗೆ ಯಾ ಪೂರ್ವಜರಿಗೆ ಗೌರವಪೂರ್ವಕವಾಗಿ ನೆನಪಿಸಿ ಅವರಿಗೆ ಪಿಂಡಪ್ರದಾನ ಮತ್ತು ತರ್ಪಣ ಕೊಡುವ ಪಕ್ಷಕ್ಕೆ ಪಿತೃ ಪಕ್ಷ ಯಾ ಮಹಾಲಯ ಎನ್ನುತ್ತಾರೆ. ಇದನ್ನೇ ಬೇರೆಬೇರೆ ಕಡೆಗಳಲ್ಲಿ ಪಿತ್ರಿ ಪೊಕ್ಖೊ, ಹದಿನಾರು ಶ್ರಾದ್ಧಗಳು, ಕನಗತ, ಜಿತಿಯಾ, ಮಹಾಲಯ ಪಕ್ಷ ಮತ್ತು ಅಪರ ಪಕ್ಷವೆಂದೂ ಕರೆಯುತ್ತಾರೆ. ಪಿತೃ ಪಕ್ಷ ಯಾ ಮಹಾಲಯವು ಮರಣಹೊಂದಿರುವ ಪೂರ್ವಜರಿಗೆ (ಪಿತೃಗಳಿಗೆ ಯಾ ಹಿರಿಯರಿಗೆ) ಶ್ರಾದ್ಧ ಮತ್ತು ತರ್ಪಣ ಕೊಡುವ ಪಕ್ಷವಾಗಿರುವ ಕಾರಣ ಬೇರೆ ಯಾವ ಶುಭ ಸಮಾರಂಭಗಳು ಮದುವೆ, ಉಪನಯನ, ಜಾತಕವನ್ನು ಹೊರಗೆ ತೆಗೆಯುವುದು (ಹೆಣ್ಣಿಗೆ ಗಂಡು ಹುಡುಕಲು ಪ್ರಾರಂಭಿಸುವುದು), ಮದುವೆಯ ದಿನವನ್ನು ಇತ್ಯರ್ಥಗೊಳಿಸುವುದು ಇವುಗಳಿಗೆ ಅಶುಭ. ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಈ ಪಿತೃ ಪಕ್ಷವು ಗಣೇಶ ಚೌತಿಯು ಆದ ನಂತರ ಬರುವ ಹುಣ್ಣಿಮೆಯಿಂದ ಅಮವಾಸ್ಯೆ ವರೆಗೆ ಅಂದರೆ ಹಿಂದೂ ಚಾಂದ್ರಮಾನ ತಿಂಗಳಾದ ಭಾದ್ರಪದ ಹುಣ್ಣಿಮೆಯಿಂದ ಅಮವಾಸ್ಯೆಯ ವರೆಗೆ, ಆಂಗ್ಲ ತಿಂಗಳ ಪ್ರಕಾರ ಸೆಪ್ಟೆಂಬರ-ಅಕ್ಟೋಬರ ತಿಂಗಳಲ್ಲಿ ಬರುತ್ತದೆ. ಉತರ ಭಾರತ ಮತ್ತು ನೇಪಾಳದಲ್ಲಿ ಈ ಪಕ್ಷವು ಆಶ್ಚೀಜ ಯಾ ಆಶ್ವೀನ ತಿಂಗಳ ಹುಣ್ಣಿಮೆಯಿಂದ ಅಮವಾಸ್ಯೆ ವರೆಗೆ ಬರುತ್ತದೆ.

ಪುರಾಣ ಕಥೆ

ಬದಲಾಯಿಸಿ

ಹಿಂದೂ ಪುರಾಣದ ಪ್ರಕಾರ ಒಬ್ಬರ ಮೂರು ತಲೆಮಾರು ವರೆಗಿನ ಹಿರಿಯರು ಯಾ ಪೂರ್ವಜರು ಯಾ ಪಿತೃಗಳ ಆತ್ಮವು ಪಿತೃಲೋಕದಲ್ಲಿ ಅಂದರೆ ಭೂಮಿ ಮತ್ತು ಸ್ವರ್ಗಲೋಕದ ನಡುವಿನ ಪ್ರದೇಶದಲ್ಲಿ ವಾಸಮಾಡಿಕೊಂಡಿರುತ್ತಾರೆ ಎಂಬ ನಂಬಿಕೆ ಇದೆ. ಮರಣ ದೇವರಾದ ಯಮ ಭೂಮಿಯಲ್ಲಿ ಮರಣಹೊಂದಿದವರ ಆತ್ಮವನ್ನು ಈ ಲೋಕಕ್ಕೆ ಬರಮಾಡಿಕೊಳ್ಳುವಾಗ ಅಲ್ಲಿರುವ ಈ ಅತ್ಮದ ಪೂರ್ವಜರ ಪೈಕಿ ಮೊದಲಿನವರ ಆತ್ಮವನ್ನು ಸ್ವರ್ಗಕ್ಕೆ ರವಾನಿಸುತ್ತಾರೆ ಮತ್ತು ಅದು ದೇವರೊಟ್ಟಿಗೆ ಐಕ್ಯವಾಗುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ- ಪಿತೃಲೋಕದಲ್ಲಿ ಮೂರು ತಲೆಮಾರಿನ ಹಿರಿಯರ ಆತ್ಮಗಳು ಮಾತ್ರ ಇರುತ್ತವೆ. ನಾವು ಶ್ರಾದ್ಧ ಮಾಡುವಾಗ ಈ ಲೋಕದಲ್ಲಿರುವ ಮೂರು ತಲೆಮಾರಿನ ಪೂರ್ವಜರಿಗೆ ಮಾತ್ರ ಪಿಂಡಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹಿಂದೂ ಜನರ ಪವಿತ್ರ ಇತಿಹಾಸ ಕಾವ್ಯಗಳಲ್ಲಿರುವ ಕಥೆಗಳ ಪ್ರಕಾರ ಪಿತೃ ಪಕ್ಷದ ಪ್ರಾರಂಭದಲ್ಲಿ ಸೂರ್ಯನು ಕನ್ಯಾರಾಶಿಯನ್ನು ಪ್ರವೇಶಿಸುವಲ್ಲಿಂದ ನಂತರದ ರಾಶಿಗೆ ಹೋಗುವ ವರೆಗಿನ ಸಮಯದಲ್ಲಿ ಪಿತೃಗಳ ಆತ್ಮವು ಪಿತೃಲೋಕವನ್ನು ತ್ಯಜಿಸಿ ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ವಾಸಿಸುತ್ತಾರೆ ಎಂಬ ಒಂದು ನಂಬಿಕೆ. ಆದ್ದರಿಂದ ಈ ತಿಂಗಳ ಮೊದಲಿನ ಹದಿನೈದು ಕತ್ತಲೆಯ ದಿನಗಳಲ್ಲಿ ಅಂದರೆ ಹುಣ್ಣಿಮೆಯಿಂದ ಅಮವಾಸ್ಯೆಯ ವರೆಗೆ- ಪೂರ್ವಜರ ಗೌರವಾರ್ಥವಾಗಿ ಅವರನ್ನು ಆರಾಧಿಸುತ್ತಾರೆ. ಮಹಾಭಾರತದ ಯುದ್ಧದಲ್ಲಿ ಮರಣ ಹೊಂದಿದ ದಾನಶೂರ ಕರ್ಣ ಸ್ವರ್ಗಕ್ಕೆ ಹೋದಾಗ ಅವನಿಗೆ ಅಲ್ಲಿ ತಿನ್ನಲು ಬಂಗಾರದ ನಗಗಳನ್ನು ತಿಂಡಿಯಾಗಿ ಕೊಟ್ಟರು. ಆಗ ಕರ್ಣನು ಸ್ವರ್ಗದ ಅಧಿದೇವತೆಯಾದ ಇಂದ್ರನಲ್ಲಿ ತಿನ್ನುವಂತಹ ತಿಂಡಿ ಬೇಕೆಂದು ಕೇಳಿ, ಈ ಬಂಗಾರದ ನಗಗಳನ್ನು ಕೊಡಲು ಕಾರಣ ಕೇಳಿದ. ಇಂದ್ರನು ಕರ್ಣನಿಗೆ ಹೇಳಿದ "ನೀನು ನಿನ್ನ ಜೀವತದ ಅವಧಿಯಲ್ಲಿ ನಿನ್ನ ಹತ್ತಿರ ಬೇಡಿದವರಿಗೆ ಅವರು ಬೇಡಿದ ನಗನಾಣ್ಯ, ಬಂಗಾರ ಎಲ್ಲಾ ಕೊಟ್ಟೆ. ಆದರೆ ನಿನ್ನ ಪೂರ್ವಜರಿಗೆ ಶ್ರಾದ್ಧ ಮಾಡಿ ಅವರಿಗೆ ಆಹಾರವನ್ನು ಕೊಡಲಿಲ್ಲಾ. ಆದ್ದರಿಂದ ನಿನಗೆ ಊಟತಿಂಡಿಯ ಬದಲು ಬಂಗಾರದ ನಗಗಳನ್ನು ತಿನ್ನಲು ಕೊಟ್ಟಿದೆ" ಅಂದನು. ಆಗ ಕರ್ಣನು "ನನಗೆ ನನ್ನ ಪೂರ್ವಜರ ವಿಷಯದ ಬಗ್ಗೆ ತಿಳುವಳಿಕೆ ಇಲ್ಲದ ಕಾರಣ ನಾನು ಆಹಾರ ಕೊಟ್ಟಿಲ್ಲಾ" ಅಂದನು. ಇದನ್ನು ಸರಿಪಡಿಸಲು ಅಂದರೆ ಪೂರ್ವಜರ ನೆನಪು ಮಾಡಿ, ಅವರನ್ನು ಆರಾಧಿಸಿ, ಅವರಿಗೆ ಶ್ರಾದ್ಧ ಮತ್ತು ಊಟತಿಂಡಿ, ನೀರನ್ನು ಕೊಡುವುದಕ್ಕಾಗಿ ಕರ್ಣನಿಗೆ ಹದಿನೈದು ದಿವಸ ಭೂಮಿ ಮೇಲೆ ಪುನಃ ಹೋಗಲು ಅನುಮತಿಯನ್ನು ಕೊಟ್ಟನು. ಅದೇ ಹದಿನೈದು ದಿವಸಗಳು ಮಹಾಲಯ ಯಾ ಪಿತೃ ಪಕ್ಷ ಹಾಗೆಂದು ಹೇಳುತ್ತಾರೆ. ಕೆಲವು ಪುರಾಣಗಳಲ್ಲಿ ಇಂದ್ರನು ಯಮನನ್ನು ಬದಲಾಯಿಸಿದಾಗಿ ಹೇಳುತ್ತಾರೆ.

ಪ್ರಾಮುಖ್ಯತೆ

ಬದಲಾಯಿಸಿ

ಅನ್ನದಾನ ಯಾ ಹಸಿವಿನಿಂದ ಇದ್ದವರಿಗೆ ಊಟತಿಂಡಿ ಕೊಡುವುದು ಈ ಹದಿನೈದು (ಹುಣ್ಣಿಮೆಯಿಂದ ಸುರುವಾದರೆ ಹದಿನಾರು) ದಿವಸಗಳ ಆಚರಣೆಯಲ್ಲಿ ಮುಖ್ಯ ಮತ್ತು ಪ್ರಮುಖ ಯಾ ಪ್ರಾಮುಖ್ಯತೆಯ ವಿಷಯ ಆಗಿರುತ್ತದೆ. ಈ ದಿವಸಗಳಲ್ಲಿ ಊಟತಿಂಡಿ ಕೊಡುವುದು ನಮ್ಮ ಮರಣಹೊಂದಿರುವ ಪೂರ್ವಜರಿಗೆ ಮಾತ್ರವಲ್ಲಾ, ಹೆಸರು ಗೊತ್ತಿಲ್ಲದ ಮತ್ತು ನಮ್ಮ ತಿಳುವಳಿಕೆಗೆ ಬಾರದೇ ಅವಘಡಗಳಲ್ಲಿ, ಪ್ರಾಣಿಗಳು ತಿಂದು ಮರಣ ಹೊಂದಿದವರಿಗೂ ಕೊಡಲಿಕ್ಕಿದೆ. ಈ ದಿವಸಗಳಲ್ಲಿ ತರ್ಪಣ, ಶ್ರಾದ್ಧ ಮತ್ತು ಪಿಂಡಪ್ರದಾನ ಕ್ರಮಪ್ರಕಾರ ಪುರೋಹಿತರ ಮಾರ್ಗದರ್ಶನದಲ್ಲಿ ಮಾಡಬೇಕು. ಈ ಪಕ್ಷದಲ್ಲಿ ದಿನಾಲೂ ಈ ರೀತಿರಿವಾಜನ್ನು ಆಚರಣೆ ಮಾಡಬೇಕಾದರೂ ಕೊನೆಯ ದಿವಸ ಆಗಿರುವ ಅಮವಾಸ್ಯೆಗೆ - ಮಹಾಲಯ ಅಮವಾಸ್ಯೆ ಯಾ ಸರ್ವಪಿತೃ ಅಮವಾಸ್ಯೆ- ಮಾಡಿದರೆ ಶ್ರೇಷ್ಠ ಮತ್ತು ಪವಿತ್ರ. ಹಿಂದೂ ಜನರಲ್ಲಿ ಪೂರ್ವಜರ ಆತ್ಮ ಸ್ವರ್ಗಕ್ಕೆ ಹೋಗಬೇಕಾದರೆ ಈ ಪಿತೃಪಕ್ಷದಲ್ಲಿ ಮಗನು ಶ್ರಾದ್ಧ ಮಾಡುವುದು ಕಡ್ಡಾಯದ ಯಾ ತಪ್ಪದೇ ಮಾಡಬೇಕಾದ ಕೆಲಸ. ಈ ವಿಷಯದಲ್ಲಿ ಗರುಡಪುರಾಣ ಗ್ರಂಥದಲ್ಲಿ ‘ಮಗನಿಲ್ಲದ ಮನುಷ್ಯನಿಗೆ ಮೋಕ್ಷ ಇಲ್ಲಾ’ ಹಾಗೆಂದು ಹೇಳಿದೆ. ಮನೆಯ ಯಜಮಾನನು ತಮ್ಮ ಪೂರ್ವಜರಿಗೆ, ದೇವರಿಗೆ, ದೈವಗಳಿಗೆ ಮತ್ತು ಅತಿಥಿಗಳಿಗೆ ಅವರ ಅನುಗ್ರಹ ಸಿಗಬೇಕಾದರೆ ಆರಾಧನೆ ಮಾಡಬೇಕೆಂದು ಈ ಧರ್ಮಗ್ರಂಥದಲ್ಲಿ ಹೇಳಿದೆ. ಪೂರ್ವಜರಿಗೆ ಶ್ರಾದ್ಧ ಕ್ರಮಪ್ರಕಾರ ಮಾಡಿದರೆ ಅವರು ಮಾಡಿದವರಿಗೆ ಆರೋಗ್ಯ, ಐಶ್ವರ್ಯ, ವಿದ್ಯೆ ಮತ್ತು ದೀರ್ಘಾಯುಷ್ಯ ಸಿಗಲಿ ಹಾಗೆಂದು ಆಶೀರ್ವಾದ ಮಾಡುತ್ತಾರೆ ಮತ್ತು ಕೊನೆಗೆ ಸ್ವರ್ಗ ಮತ್ತು ಮೋಕ್ಷ ಪ್ರಾಪ್ತು ಆಗುತ್ತದೆ ಹಾಗೆಂದು ಮಾರ್ಕಂಡೇಯ ಪುರಾಣಗ್ರಂಥದಲ್ಲಿ ಹೇಳಿದೆ. ಸರ್ವಪಿತೃ ಅಮವಾಸ್ಯೆಯ ಆಚರಣೆಯಲ್ಲಿ ಪ್ರತಿವರ್ಷ ಮಾಡುವ ಶ್ರಾದ್ಧವನ್ನು ಮರೆತು ಯಾ ನಿರ್ಲಕ್ಷದಿಂದ ಆಚರಿಸದೇ ಇದ್ದರೆ ಅದನ್ನು ಮಾಡಿ ಸರಿದೂಗಿಸುವ ಅವಕಾಶವಿದೆ. ಶ್ರಾದ್ಧ ಮಾಡುವುದು ಅಂದರೆ ನಮ್ಮ ವಂಶದ ಯಾ ಗೋತ್ರದ ಪೂರ್ವಜರಿಗೆ ಮೂರು ತಲೆಮಾರಿನ ವರೆಗೆ ಅವರ ಹೆಸರು ಹೇಳಿ ಪಿಂಡಪ್ರದಾನ ಮಾಡುವುದೂ ಸೇರಿ ಇದೆ. ಸಾಧಾರಣವಾಗಿ ಒಬ್ಬ ಮನುಷ್ಯನಿಗೆ ಆರು ತಲೆಮಾರಿನವರ ಹೆಸರು ಗೊತ್ತಿರುತ್ತದೆ. ತನ್ನ ಇಬ್ಬರು ಹಿರಿಯರ ಮತ್ತು ಇಬ್ಬರು ಕಿರಿಯರ - ಅಂದರೆ ಹಿರಿಯರು ತಂದೆ ಮತ್ತು ಆಜ್ಜ ಮತ್ತು ಕಿರಿಯರು ಮಗ ಮತ್ತು ಮೊಮ್ಮಗ. ಈ ಪಿತೃಪಕ್ಷದ ಮಹತ್ವ ಪ್ರಕಾರ ನಮ್ಮ ಪೂರ್ವಜ, ನಾವು ಮತ್ತು ಇದರ ನಂತರ ಜನ್ಮಕ್ಕೆ ಬರುವ ಪೀಳಿಗೆ ಇವರ ರಕ್ತಸಂಬಂಧದ ಸಂಪರ್ಕ ಇದೆ ಎಂಬುದಾಗಿ ತಿಳಿದುಬರುತ್ತದೆ. ಈಗಿನ ಪೀಳಿಗೆ ಈ ಪಿತೃಪಕ್ಷದಲ್ಲಿ ಅವರ ಹಿರಿಯರ ಋಣವನ್ನು ತೀರಿಸುತ್ತಾರೆ. ಈ ಋಣವು ತುಂಬಾ ಮಹತ್ವದಾಗಿದ್ದು ಇದು ಹೆತ್ತವರ ಮತ್ತು ಗುರುಗಳ ಋಣಕ್ಕೆ ಸಮಾನವಾಗಿರುತ್ತದೆ.

ಶ್ರಾದ್ಧದ ನಿಯಮಗಳು

ಬದಲಾಯಿಸಿ

ಯಾವಾಗ ಮತ್ತು ಎಲ್ಲಿ

ಬದಲಾಯಿಸಿ

ಯಾವಾಗ ಪೂರ್ವಜರು ಅಂದರೆ ನಮಗೆ ಜನ್ಮ ಕೊಟ್ಟವರು ಯಾ ತಂದೆಯ ತಂದೆ ಅಜ್ಜ ಮರಣಹೊಂದಿದಾಗ ಅವರ ಶ್ರಾದ್ಧವನ್ನು ಅವರು ಮರಣ ಹೊಂದಿದ ತಿಥಿಗೆ ಸರಿಯಾಗಿ ಮಹಾಲಯದಲ್ಲಿ ಮಾಡುತ್ತಾರೆ. ಈ ತಿಥಿ ವಿಷಯದಲ್ಲಿ ಕೆಲವು ಅಪವಾದಗಳೂ ಇವೆ. ಅವು ಯಾವುದೆಂದರೆ ಕಳೆದ ವರ್ಷ ಮರಣ ಹೊಂದಿದ ಜನರಿಗೆ ಅವರ ಮರಣಹೊಂದಿದ ನಮೂನೆ ಪ್ರಕಾರ ಅವರಿಗೆ ಚತುರ್ಥಿ ಮತ್ತು ಪಂಚಮಿಯಲ್ಲಿ ಈ ಶ್ರಾದ್ಧ ಮಾಡಬೇಕು. ಹಾಗೆಯೇ ನವಮಿಯಲ್ಲಿ(ಇದಕ್ಕೆ ಅವಿಧವಾ ನವಮಿ ಹಾಗೆಂದು ಹೇಳುತ್ತಾರೆ) ಗಂಡ ಇದ್ದು ಮರಣಹೊಂದಿರುವ ಸುಮಂಗಲಿಯರಿಗೆ. ಇಲ್ಲಿ ಮರಣಹೊಂದಿರುವ ಮಹಿಳೆಯ ಪತಿ ಸುಮಂಗಲಿಯರನ್ನು ಅತಿಥಿಗಳಾಗಿ ಕರೆಯುತ್ತಾರೆ. ಈ ಪಕ್ಷದ ಹದಿನೆರಡನೇಯ ದಿವಸ ಮಕ್ಕಳಿಗೆ ಮತ್ತು ಸರ್ವಸಂಗ ಪರಿತ್ಯಾಗ ಮಾಡಿ ಸಂನ್ಯಾಸಿಯಾದವರಿಗೆ. ಹದಿನಾಲ್ಕನೇಯ ದಿವಸ ಯುದ್ಧದಲ್ಲಿ ಆಯುಧಗಳಿಂದ ಯಾ ಹಿಂಸೆಯಲ್ಲಿ ಮರಣಹೊಂದಿದವರಿಗೆ. ಈ ದಿವಸಕ್ಕೆ ಘಾತ ಚತುರ್ದಶಿ ಯಾ ಘಾಯಲ ಚತುರ್ದಶಿ ಎನ್ನುತ್ತಾರೆ. ಸರ್ವಪಿತೃ ಅಮವಾಸ್ಯೆ (‘ಎಲ್ಲರ ತಂದೆ’ ಅಮವಾಸ್ಯೆ) ಯು ಪೂರ್ವಜರ ಮರಣಹೊಂದಿದ ತಿಥೀ ನೋಡದೇ ಮರಣಹೊಂದಿರುವ ಎಲ್ಲಾ ಪೂರ್ವಜರಿಗೆ ಸಂಬಂಧಪಟ್ಟಿರುತ್ತದೆ. ಈ ದಿವಸವು (ಅಮವಾಸ್ಯೆ) ಪಿತೃಪಕ್ಷದಲ್ಲಿ ಮಹತ್ವದ ದಿವಸವಾಗಿರುತ್ತದೆ. ಶ್ರಾದ್ಧ ಮಾಡಲು ಮರೆತವರಿಗೆ ಈ ದಿವಸ ಶ್ರಾದ್ಧ ಮಾಡಬಹುದು. ಈ ದಿವಸ ಮಾಡಿದ ಶ್ರಾದ್ಧಕ್ಕೆ ಪವಿತ್ರ ಸ್ಥಳವಾದ ಗಯಾದಲ್ಲಿ ಮಾಡಿದಷ್ಟೇ ಫಲ ಮತ್ತು ಮಾನ್ಯತೆ ಇದೆ. ಬಂಗಾಳದಲ್ಲಿ ಈ ಮಹಾಲಯದಲ್ಲಿ ದುರ್ಗಾಪೂಜೆ ಸುರುವಾಗುತ್ತದೆ. ಮಹಾಲಯದಲ್ಲಿ ದುರ್ಗಾ ಭೂಮಿಯ ಮೇಲೆ ಅವತಾರ ತೆಗೆದುಕೊಂಡು ಬಂದದ್ದು ಹಾಗೆಂದು ನಂಬಿಕೆ. ಬಂಗಾಳೀ ಜನ ಮಹಾಲಯದಲ್ಲಿ ಬೆಳ್ಳಂಬೆಳಗೆ ದೇವಿಮಹಾತ್ಮೆ(ಚಂಡಿ) ಗ್ರಂಥದಲ್ಲಿರುವ ಶ್ಲೋಕವನ್ನು ವಾಚಿಸುತ್ತಾರೆ. ಪೂರ್ವಜರಿಗೆ ತರ್ಪಣ ಕೊಡುವುದು ಮನೆಯಲ್ಲಿಯೇ ಯಾ ತಾತ್ಕಾಲಿಕವಾಗಿ ಮಾಡಿರುವ ಪೂಜಾಮಂಟಪದಲ್ಲಿ ಮಾಡುತ್ತಾರೆ. ಆಶ್ವೀಜ ಮಾಸದ ಸುರುವಿನ ದಿವಸ ಮರಣಹೊಂದಿರುವ ಮಾತಾಮಹ (ತಾಯಿಯ ತಂದೆ) ಯಾ ಮಗಳ ಮಗ- ಮೊಮ್ಮಗ(ದೌಹಿತ್ರ) ಇವರ ದಿವಸವಾಗಿರುತ್ತದೆ. ===ಯಾರು ಮತ್ತು ಯಾರಿಗೆ=== ಯಾವಾಗಲೂ ಶ್ರಾದ್ಧದ ಕೆಲಸ ಮಗನು ಮಾಡಬೇಕು-ಹೆಚ್ಚಾಗಿ ಹಿರಿಯ ಮಗ- ಯಾ ತಂದೆಯ ಕಡೆಯ ವಂಶದ ಮೂರುತಲೆಮಾರಿನ ಒಳಗಿನ ಗಂಡಸು ಸಂಬಂಧಿಕರು ಮಾಡಬಹುದು. ತಾಯಿಯ ಕಡೆಯ ವಂಶದವರಿಗೆ ಗಂಡು ಸಂತಾನ ಇಲ್ಲದಿದ್ದರೆ ಸರ್ವಪಿತೃ ಅಮವಾಸ್ಯೆ ದಿವಸ ಯಾ ತಾಯಿಯ ತಂದೆ ಯಾ ಮಗಳ ಮಗ ಇವರು ತಾಯಿಯ ಕಡೆಯ ವಂಶದವರಿಗೆ ಶ್ರಾದ್ಧ ಮಾಡಬಹುದು. ಕೆಲವು ಜಾತಿಯ ಜನ ಕೇವಲ ಒಂದು ತಲೆಮಾರಿನ ಹಿರಿಯರಿಗೆ ಮಾತ್ರ ಶ್ರಾದ್ಧ ಮಾಡುತ್ತಾರೆ. ಶ್ರಾದ್ಧ ಮಾಡಬೇಕಾದರೆ ಉಪನಯನವಾಗಬೇಕು. ಈ ಸಮಾರಂಭವು ಮರಣಕ್ಕೆ ಸಂಬಂಧಿಸಿರುವ ಕಾರಣ ಅಪವಿತ್ರವಾಗಿ, ಕಚ್ಛ ಪ್ರಾಂತ್ಯದ ರಾಜನ ವಂಶಜರು ಯಾ ಸಿಂಹಾಸನದ ಉತ್ತರಾಧಿಕಾರಿ ಇವರಿಗೆ ಶ್ರಾದ್ಧ ಕಾರ್ಯ ಮಾಡುವುದು ನಿಷಿದ್ಧ.

ಪೂರ್ವಜರಿಗೆ ಅರ್ಪಿಸುವ ಆಹಾರವನ್ನು ಬೆಳ್ಳಿಯ ಯಾ ತಾಮ್ರದ ಪಾತ್ರೆಗಳಲ್ಲಿ ಬೇಯಿಸಿ, ಒಂದು ಬಾಳೆ ಎಲೆ ವಾ ಒಣಗಿದ ಎಲೆಯಿಂದ ಮಾಡಿದ ಬಟ್ಟಲಿನಲ್ಲಿ ವಿಶಿಷ್ಟವಾಗಿ ಇಡುತ್ತಾರೆ. ಈ ಆಹಾರವಾಗಿ ಪಾಯಸ (ಹಾಲು ಮತ್ತು ಸಿಹಿ ಅಕ್ಕಿಹಾಕಿ ಮಾಡುವ) ಗೋದಿ ಕುಚ್ಚಿನಿಂದ ಮಾಡಿದ ಸಿಹಿ ಅಂಬಲಿ, ಅನ್ನ, ಬೇಳೆ, ತರಕಾರಿ ಮತ್ತು ಸಿಹಿಕುಂಬಳಕಾಯಿ ಉಪಯೋಗಿಸುತ್ತಾರೆ.

ಶ್ರಾದ್ಧ ಕಾರ್ಯಕ್ರಮ

ಬದಲಾಯಿಸಿ

ಪೂಜಾಶ್ರಾದ್ಧ ಮಾಡುವ ಮನುಷ್ಯ ಸುರುವಿಗೆ ಶುದ್ಧವಾಗಿ ಸ್ನಾನ ಮಾಡಿ ದೋತಿ ಉಟ್ಟು ಶ್ರಾದ್ಧದ ಕೆಲಸಕ್ಕೆ ಕೂಡಬೇಕು ಹಾಗೆಂದು ನಿಯಮ. ನಂತರ ದರ್ಭೆಯಿಂದ ತಯಾರಿಸಿದ ಉಂಗುರವನ್ನು ಹಾಕಬೇಕು. ಅದರ ನಂತರ ಆ ಪವಿತ್ರ ಉಂಗುರದಲ್ಲಿ ಪೂರ್ವಜರನ್ನು ಆಹ್ವಾನಿಸಬೇಕು. ಶ್ರಾದ್ಧ ಮಾಡುವಾಗ ಹಲವು ಬಾರಿ ಜನಿವಾರವನ್ನು ಬದಲಾಯಿಸಲು ಇರುವುದರಿಂದ ಎದೆಯ ಭಾಗವನ್ನು ಬಟ್ಟೆಹಾಕದೇ ಬರಿದಾಗಿ ಬಿಡಬೇಕು. ಶ್ರಾದ್ಧದಲ್ಲಿ ಪಿಂಡದಾನ ಮಾಡಲಿಕ್ಕಿದೆ. ಇದು ಪೂರ್ವಜರಿಗೆ ಅರ್ಪಿಸುವ ಆಹಾರ. ಇದನ್ನು ತಯಾರಿಸಲು ಅನ್ನ ಮತ್ತು ಬಾರ್ಲಿಯ ಹಿಟ್ಟು, ತುಪ್ಪ, ಕಪ್ಪು ಎಳ್ಳು ಬೆರಸಿ ಪಿಂಡವನ್ನು ತಯಾರಿಸುವುದು. ಪಿಂಡ ಅರ್ಪಿಸುವಾಗ ನೀರು ಪಿಂಡದ ಮೇಲೆ ಬಿಡಲಿಕ್ಕಿದೆ. ನಂತರ ದೇವರಿಗೆ, ಸಾಲಿಗ್ರಾಮಕ್ಕೆ ಮತ್ತು ಯಮನಿಗೆ ಪೂಜೆ. ಇದರ ನಂತರ ಆಹಾರ ಅರ್ಪಣೆ. ಈ ಸಮಾರಂಭಕ್ಕೆ ಮಾಡಿದ ಆಹಾರವನ್ನು ಮನೆಯ ಮಾಡಿನ ಮೇಲೆ ಇಡುವ ಸಂಪ್ರದಾಯ. ಈ ಆಹಾರ ಕಾಗೆಗಳು ಬಂದು ತಿಂದರೇ ಪೂರ್ವಜರು ಸ್ವೀಕಾರ ಮಾಡಿದರು ಎಂಬುದಾಗಿ ನಂಬಿಕೆ. ಕಾಗೆ ಯಮನ ದೂತ ಯಾ ಪೂರ್ವಜರ ಆತ್ಮ ಎಂಬುದಾಗಿ ನಂಬಿಕೆ. ದನಕ್ಕೆ ಮತ್ತು ನಾಯಿಗೂ ಆಹಾರ ಇಡಲಿಕ್ಕಿದೆ. ಮತ್ತು ಪುರೋಹಿತರಿಗೂ ಬಡಿಸಲಿಕ್ಕಿದೆ. ಪುರೋಹಿತರು ಮತ್ತು ಪೂರ್ವಜರ ಆತ್ಮ (ಕಾಗೆ) ಆಹಾರ ತಿಂದ ನಂತರ ಕುಟುಂಬದ ಉಳಿದ ಜನರು ಆಹಾರವನ್ನು ಸೇವಿಸಲು ಪ್ರಾರಂಭಿಸಬಹುದು.

ಇತರ ಸಂಪ್ರದಾಯಗಳು.

ಬದಲಾಯಿಸಿ

ಕೆಲವು ಮನೆತನದವರು ಈ ಪಕ್ಷದಲ್ಲಿ ಪೂರ್ವಜರ ಸದ್ಗತಿ ಮತ್ತು ಉದ್ಧಾರಕ್ಕಾಗಿ ಭಾಗವತ ಪುರಾಣ ಮತ್ತು ಭಗವದ್ಗೀತಾವನ್ನು ವಾಚಿಸುವ ಸಲುವಾಗಿ ಪುರೋಹಿತರಿಗೆ ಹೇಳಿ ಅವರಿಗೆ ಸೂಕ್ತವಾದ ಧನಧಾನ್ಯ ದಾನ ಮಾಡುತ್ತಾರೆ.


ooo-----

ಈ ಲೇಖನವು https://en.wikipedia.org/wiki/Pitru_Paksha ಇದರ ಕನ್ನಡ ಅನುವಾದ

"https://kn.wikipedia.org/w/index.php?title=ಮಹಾಲಯ&oldid=809857" ಇಂದ ಪಡೆಯಲ್ಪಟ್ಟಿದೆ