ಮಹತೋಭಾರ ಶ್ರೀ ಮಹಿಷಮರ್ದಿನಿ ದೇವಸ್ಥಾನ, ನೀಲಾವರ
ಮಹತೋಭಾರ ಶ್ರೀ ಮಹಿಷಮರ್ದಿನಿ ದೇವಸ್ಥಾನವು ಉಡುಪಿಯಿಂದ ಸುಮಾರು ೧೮ ಕಿ.ಮೀ ದೂರದಲ್ಲಿದ್ದು, ಬ್ರಹ್ಮಾವರ ಸಮೀಪದ ಕುಂಜಾಲು ಎಂಬ ಗ್ರಾಮದ ನೀಲಾವರದಲ್ಲಿದೆ. ಇದು ಸೀತಾ ನದಿ ತೀರದಲ್ಲಿರುವ ಒಂದು ಪುಣ್ಯ ಸ್ಥಳವಾಗಿದೆ.[೧] ಮಹಿಷಮರ್ದಿನಿ ದೇವಾಲಯವು ಬಹಳ ಪ್ರಾಚೀನತೆಯನ್ನು ಹೊಂದಿದೆ. ಈ ದೇವಸ್ಥಾನವು ಕುಂಜಾಲುವಿನಿಂದ ೩ ಕಿಲೋ ಮೀಟರ್ ದೂರದಲ್ಲಿದೆ.[೨]
ಇತಿಹಾಸ
ಬದಲಾಯಿಸಿಆಳುಪ, ಹೊಯ್ಸಳ, ವಿಜಯನಗರ ಮುಂತಾದ ಅನೇಕ ರಾಜ ಮನೆತನಗಳ ಆಡಳಿತಕ್ಕೊಳಪಟ್ಟಿದ್ದ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳಲ್ಲಿ ಉಡುಪಿ ಜಿಲ್ಲೆಯ ನೀಲಾವರವು ಪ್ರಾಮುಖ್ಯತೆ ಪಡೆದಿದೆ. ಆಳುಪ ರಾಜವಂಶ ಇಲ್ಲಿ ದೀರ್ಘಕಾಲ ಆಳಿದ ರಾಜವಂಶ. ಅವರು ಉದ್ಯಾವರವನ್ನು ತಮ್ಮ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡಾಗ, ನೀಲಾವರದಲ್ಲಿನ ದೇವಸ್ಥಾನದ ಬಗ್ಗೆ ಹೆಚ್ಚು ಗಮನ ಹರಿಸಿದ್ದರು. ನೀಲಾವರದ ಪ್ರಮುಖ ದೇವಾಲಯವೆಂದರೆ ಶ್ರೀ ಮಹಿಷಮರ್ದಿನೀ (ದುರ್ಗಾ ಭಗವತಿ) ದೇವಾಲಯ. ಈ ಮಹಿಷಮರ್ದಿನೀ ದೇವಾಲಯವು ಬಹಳ ಪ್ರಾಚೀನವಾದುದು. ಈ ದೇವಸ್ಥಾನದ ಪ್ರಾಚೀನತೆಯನ್ನು ದೃಢಪಡಿಸುವಲ್ಲಿ ಪ್ರತಿಮಾ ಶಾಸ್ತ್ರ ಹಾಗೂ ವಿವಿಧ ಪ್ರಕಾರದ ಶಾಸನಗಳು ಪ್ರಮುಖ ಪಾತ್ರವಹಿಸಿವೆ. ಆಳುಪ ಅರಸ ವೀರಪಾಂಡ್ಯನು ಫೆಬ್ರವರಿ ೨೪ ೧೨೫೮ ರಂದು ಹೊರಡಿಸಿದ ಶಾಸನವು ಈ ಕ್ಷೇತ್ರದ ಬಗ್ಗೆ ಮಾಹಿತಿ ನೀಡುವ ಅತ್ಯಂತ ಪ್ರಾಚೀನ ದಾಖಲೆಯಾಗಿದೆ. ಆಳುಪರ ನಂತರ ಅಧಿಕಾರಕ್ಕೆ ಬಂದ ವಿಜಯನಗರ ಅರಸರ ಕಾಲದಲ್ಲಿಯೂ ನೀಲಾವರ ಒಂದು ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು. ಕ್ರಿ.ಶ.೧೩೮೭ರಲ್ಲಿ ಇಮ್ಮಡಿ ಹರಿಹರನು ಬರೆಯಿಸಿದ ನೀಲಾವರದ ಶಾಸನವು ದೇವಾಲಯದ ಜೀರ್ಣೋದ್ದಾರ ಮಾಡಿದ ಬಗ್ಗೆ ಹಾಗೂ ಅಲ್ಲಿನ ಪೂಜೆಗೆಂದು ದತ್ತಿಬಿಟ್ಟ ವಿಷಯವನ್ನು ತಿಳಿಸುತ್ತದೆ.
ದಂತಕಥೆ ಮತ್ತು ಕಥೆಗಳು
ಬದಲಾಯಿಸಿಬಹಳ ಹಿಂದೆ ನಾಗಲೋಕವನ್ನು ಆಳುತ್ತಿದ್ದ ರಾಜ ಶಂಕಚೂಡ. ಇವರಿಗೆ ದೇವರತಿ, ನಾಗರತಿ, ಚಾರುರತಿ, ಮಂದಾರತಿ, ಮತ್ತು ನೀಲರತಿ ಎಂಬ ಐದು ಜನ ಹೆಣ್ಣು ಮಕ್ಕಳಿದ್ದರು. ಒಮ್ಮೆ ಅವರು ಶಿವನ ಮಗನಾದ ಸುಬ್ರಹ್ಮಣ್ಯ ಸ್ವಾಮಿಯನ್ನು ಮದುವೆಯಾಗುವ ಆಕಾಂಕ್ಷೆಯೊಂದಿಗೆ ಕೈಲಾಸಕ್ಕೆ ಹೋದರು. ಈ ಐದು ರಾಜಕುಮಾರಿಯರನ್ನು ನಂದಿ (ಶಿವ ಭಕ್ತ) ದಾರಿಯಲ್ಲಿ ತಡೆದು ನಿಲ್ಲಿಸಿ ಅವರನ್ನು ಹಾವುಗಳಾಗುವಂತೆ ಶಪಿಸಿದರು. ಶಂಕಚೂಡನ ಐದು ಜನ ಹೆಣ್ಣುಮಕ್ಕಳು ಶಾಪಗ್ರಸ್ತರಾದರು. ಕ್ಷಣಮಾತ್ರದಲ್ಲಿ ಅವರು ಹಾವುಗಳಾಗಿ ಮಾರ್ಪಾಡಾಗಿ ಭೂಮಿಗೆ ಬಿದ್ದರು. ಸಹ್ಯಾದ್ರಿ ಘಟ್ಟಗಳಲ್ಲಿ ಅಲೆದಾಡುತ್ತಿದ್ದ ವ್ಯಾಘ್ರಪಾದ ಮಹರ್ಷಿಗಳು ಕಾಡಿನ ದಹನದಲ್ಲಿ ಸಿಕ್ಕಿಬಿದ್ದ ಈ ಐದು ಹಾವುಗಳನ್ನು ನೋಡಿ ತಮ್ಮ ದಿವ್ಯದೃಷ್ಟಿಯಿಂದ ಅವುಗಳ ಬಗ್ಗೆ ಎಲ್ಲವನ್ನೂ ತಿಳಿದಾಗ ಅವರು ಐದು ರಾಜಕುಮಾರಿಯರಿಗೆ ರಾಜಮನೆತನದ ಒಬ್ಬ ವ್ಯಕ್ತಿಯು ಸರಿಯಾದ ಸಮಯದಲ್ಲಿ ಅವರ ಶಾಪವನ್ನು ತೊಡೆದುಹಾಕುತ್ತಾರೆ ಎಂದು ಹೇಳಿದರು.
ಈ ಮಧ್ಯೆ ಸಹ್ಯಾದ್ರಿ ಪರ್ವತಗಳಲ್ಲಿ ವೇಷ ಧರಿಸಿ ಅಲೆದಾಡುತ್ತಿದ್ದ ಆವಂತಿಯ ಮಹಾರಾಜ ದೇವವರ್ಮನು ಈ ಐದು ಹಾವುಗಳನ್ನು ನೋಡಿ ಅವುಗಳನ್ನು ಉಳಿಸಲು ನಿರ್ಧರಿಸಿದನು. ಅವನು ಹಾವುಗಳನ್ನು ಒಂದು ತುಂಡು ಬಟ್ಟೆಯಿಂದ ಸುತ್ತಿ ಪಶ್ಚಿಮದ ಕಡೆಗೆ ಪ್ರಯಾಣಿಸಲು ಪ್ರಾರಂಭಿಸಿದನು. ಹಾವುಗಳು ಬಟ್ಟೆಯ ಹೊದಿಕೆಯಿಂದ ಜಾರಿ ಪಕ್ಕದ ಗೆದ್ದಲಿನ ಗುಡ್ಡವನ್ನು ತಲುಪಿದವು.ಅವುಗಳಲ್ಲಿ "ನೀಲರತಿ" ಎಂದು ಕರೆಯುವ ಒಂದು ಹಾವು ಕಾಡಿನ ಒಂದು ಭಾಗವನ್ನು ತಲುಪಿತು. ಆ ಸ್ಥಳವು ನಂತರ "ನೀಲಾವರ" ಎಂದು ಕರೆಯಲ್ಪಟ್ಟಿತು.
ದೇವತೆಯ ಬಗ್ಗೆ
ಬದಲಾಯಿಸಿಇಲ್ಲಿನ ಆರಾಧ್ಯ ದೈವ, ಶ್ರೀ ಮಹಿಷಾಸುರಮರ್ದಿನಿ (ಮಹಿಷಮರ್ದಿನಿಯೆಂದೇ ಪ್ರಸಿದ್ಧಿ)ಯು ಚತುರ್ಬಾಹುಯುಕ್ತ ವಿಗ್ರಹವಾಗಿದ್ದು, ದೇವಿಯ ಬಲಗೈಯಲ್ಲಿ ಚಕ್ರ ಹಾಗೂ ಎಡಗೈಯಲ್ಲಿ ಶಂಖವೂ ಇವೆ. ಮತ್ತೊಂದು ಎಡಗೈಯಲ್ಲಿ ಮಹಿಷಾಸುರನನ್ನು ಎತ್ತಿ ಹಿಡಿದಿರುವಂತೆ ಮತ್ತು ಬಲಗೈಯ್ಯಲ್ಲಿ ಹಿಡಿದಿರುವ ತ್ರಿಶೂಲದಿಂದ ಅವನ ಕುತ್ತಿಗೆಯನ್ನು ಇರಿಯುತ್ತಿರುವಂತೆ ದೇವಿಯ ಮೂರ್ತಿಯನ್ನು ರೂಪಿಸಲಾಗಿದೆ. ದೇವಿಯು ತನ್ನ ಬಲಗಾಲಿನಿಂದ ಮಹಿಷಾಸುರನನ್ನು ಮೆಟ್ಟಿ ಹಿಡಿದಿರುವಂತೆ ಬಿಂಬಿಸಲಾಗಿದೆ. ಮಂಗಳವಾರ ಮತ್ತು ಶುಕ್ರವಾರ ದೇವಿಗೆ ವಿಶೇಷ ಪೂಜೆ ನೆಡೆಯುತ್ತದೆ. ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಚೈತ್ರ ಪೌರ್ಣಿಮೆಯ ನಾಲ್ಕು ದಿನಗಳ ನಂತರದಲ್ಲಿ ನೆಡೆಯುತ್ತದೆ. ಚೈತ್ರ ಪೌರ್ಣಿಮೆ ಏಪ್ರಿಲ್ ತಿಂಗಳಲ್ಲಿ ಬರುತ್ತದೆ. ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.
ಯಕ್ಷಗಾನ
ಬದಲಾಯಿಸಿ೨೦೧೦ರಲ್ಲಿ ನೀಲಾವರದ ಮಹಿಷಮರ್ದಿನಿ ದೇವಸ್ಥಾನದ ಕಾರ್ಯನಿರ್ವಾಹಣಾ ಕಛೇರಿಯ ಕಡೆಯಿಂದ " ದಶಾವತಾರ ಯಕ್ಷಗಾನ ಬಯಲಾಟ ಮೇಳ" ಆರಂಭವಾಯಿತು. ಯಕ್ಷಗಾನ ತಂಡದಲ್ಲಿ ೪೦ ಜನ ಕಲಾವಿದರಿದ್ದರು. ಮೇಳವು ನವೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ಆರು ತಿಂಗಳುಗಳ ಕಾಲ ಯಕ್ಷಗಾನ ಪ್ರದರ್ಶನ ನೀಡುತಿತ್ತು. ಮೇಳವು ನೀಲಾವರ ಕ್ಷೇತ್ರ ಮಹಾತ್ಮೆ ಮತ್ತು ವಿವಿಧ ಪ್ರಸಂಗಗಳನ್ನು ಪ್ರದರ್ಶಿಸುತ್ತದೆ.