ಮಲ್ಪೆ ರಾಮದಾಸ ಸಾಮಗ

ಮಲ್ಪೆ ರಾಮದಾಸ ಸಾಮಗ (ಜೂನ್ ೨೦, ೧೯೨೬ - ಏಪ್ರಿಲ್ ೨೭, ೨೦೧೦) ಯಕ್ಷಗಾನ ಲೋಕ ಕಂಡ ಮಹಾನ್ ವಿದ್ವತ್ಪೂರ್ಣ ಕಲಾವಿದರಲ್ಲೊಬ್ಬರೆನಿಸಿದ್ದಾರೆ.

ಮಲ್ಪೆ ರಾಮದಾಸ ಸಾಮಗ
ಜನನಜೂನ್ ೨೦, ೧೯೨೬
ಮಲ್ಪೆ
ಮರಣಏಪ್ರಿಲ್ ೨೭, ೨೦೧೦
ವೃತ್ತಿಯಕ್ಷಗಾನ ವಿದ್ವಾಂಸರು

ಕೌಟುಂಬಿಕ ಹಿನ್ನೆಲೆ

ಬದಲಾಯಿಸಿ

ಇಪ್ಪತ್ತನೇ ಶತಮಾನದ ಯಕ್ಷಗಾನ ಲೋಕ ಇಬ್ಬರು ಹಿರಿಯ ಕಲಾವಿದರನ್ನು ಕಂಡಿದೆ. ಇವರಲ್ಲಿ ದೊಡ್ಡ ಸಾಮಗ ಅಂದರೆ ಮಲ್ಪೆ ಶಂಕರನಾರಾಯಣ ಸಾಮಗ ಮತ್ತೊಬ್ಬರು ಸಣ್ಣ ಸಾಮಗರೆಂದೇ ಖ್ಯಾತರಾದ ಅವರ ತಮ್ಮ ಮಲ್ಪೆ ರಾಮದಾಸ ಸಾಮಗ. ದೊಡ್ಡ ಸಾಮಗರು ಸ್ವಾತಂತ್ರ್ಯ ಹೋರಾಟಗಾರರಾಗಿ, ಕಲಾವಿದರಾಗಿ ಅಸಾಧಾರಣ ಕೊಡುಗೆಯನ್ನಿತ್ತು ಯಕ್ಷರಂಗವನ್ನು ಸುಮಾರು 4 ದಶಕಗಳ ಕಾಲ ಆಳಿ ಹೋದವರು. ಸ್ವತಃ ಶೇಣೀ ಗೋಪಾಲಕೃಷ್ಣ ಭಟ್ಟರೂ ಕೂಡಾ ಅವರನ್ನು ‘ಗುರು’ ಎಂದೇ ಸಂಬೋಧಿಸುತ್ತಿದ್ದರು. ಅವರ ತಮ್ಮ ಸಣ್ಣ ಸಾಮಗರೋ ಶೇಣಿ ಅವರೊಂದಿಗಿನ ತಾಳಮದ್ದಲೆಗಳಿಗೆ ಒಳ್ಳೆಯ ಜೊತೆ. ಈ ಪ್ರತಿಭಾವಂತ ಸಾಮಗ ಸಹೋದರರ ತಂದೆ ಮಲ್ಪೆ ಲಕ್ಷ್ಮೀನಾರಾಯಣ ಸಾಮಗರು, ತಾಯಿ ಲಕ್ಷ್ಮೀ ಅಮ್ಮನವರು.

ಸಣ್ಣ ಸಾಮಗರಾದ ಮಲ್ಪೆ ರಾಮದಾಸ ಸಾಮಗರು ಜೂನ್ ೨೦, ೧೯೨೬ರಂದು ಜನಿಸಿದರು. ಓದಿದ್ದು ಮಲ್ಪೆ ಎಲಿಮೆಂಟರಿ ಶಾಲೆ, ಕೊಡವೂರು ಹಾಯರ್ ಪ್ರೈಮರಿ ಶಾಲೆ. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಶನ್ ಮತ್ತು ನಂತರದಲ್ಲಿ ಉಡುಪಿ ಸಂಸ್ಕ್ರತ ಕಾಲೇಜಿನಲ್ಲಿ ವಿದ್ಯಾರ್ಜನೆ.

ಸಾಮಗವೆಂಬ ಅನ್ವರ್ಥ ಬದುಕು

ಬದಲಾಯಿಸಿ

ಸಣ್ಣ ಸಾಮಗರನ್ನು ಹರಿದಾಸ ಮಲ್ಪೆ ರಾಮದಾಸ ಸಾಮಗರೆಂದು ಸಂಬೋಧಿಸುವುದರಲ್ಲಿ ಹೆಚ್ಚು ಅರ್ಥವಿದೆ. ಹಾಗೇ ನೋಡಿದರೆ, ಸಾಮವೇದದಲ್ಲಿನ ಅಸಾಧಾರಣವಾದ ಜ್ಞಾನವನ್ನು ಕಂಡ ಶೃಂಗೇರಿ ಜಗದ್ಗುರುಗಳು 19ನೇ ಶತಮಾನದಲ್ಲಿ ಇವರ ಕುಟುಂಬಕ್ಕೆ ಇತ್ತ ಬಿರುದು ‘ಸಾಮಗ ‘. ಅದಕ್ಕೆ ತಕ್ಕಂತೆಯೇ ನಡೆದುಕೊಂಡವರು ಈ ಈರ್ವರು ಸಹೋದರರು.

ಯಕ್ಷಗಾನ ಲೋಕದಲ್ಲಿ

ಬದಲಾಯಿಸಿ

ಯಕ್ಷಗಾನ, ಹರಿಕಥೆ, ತಾಳಮದ್ದಳೆ, ಬಯಲಾಟಗಳಲ್ಲಿ ಸುಮಾರು ಐದಾರು ದಶಕಗಳ ಕಾಲ ಮಿಂಚಿ, ಅಪ್ರತಿಮ ಮಾತುಗಾರರಾಗಿ, ಅಪೂರ್ವ ವಿದ್ವತ್ತಿನಿಂದ ಮೆರೆದವರು ಸಣ್ಣ ಸಾಮಗರು. ಅವರು ಚಲಿಸುವ ಜ್ಞಾನಕೋಶ ಎಂದರೆ ತಪ್ಪಾಗಲಾರದು. ತೆಂಕು-ಬಡಗು ತಿಟ್ಟುಗಳ ಕುರಿತ ಅಪೂರ್ವವೆನಿಸುವ ಅರಿವು ಅವರದ್ದು. ಮಾತ್ರವಲ್ಲ ತುಳು ಯಕ್ಷಗಾನ ಲೋಕವನ್ನು ಸುಮಾರು ೨ ದಶಕಗಳ ಕಾಲ ಆಳಿದವರು. ಅವರ ಕಾಂತು ಪೂಂಜನ ಪಾತ್ರವಂತೂ ಮರೆಯಲಸಾಧ್ಯವೆನಿಸಿದ್ದು.

ಯಕ್ಷಗಾನದ ಹಿರಿ-ಕಿರಿಯ ಅದೆಷ್ಟೋ ಕಲಾವಿದರಿಗೆ ಸಮಕಾಲೀನರಾಗಿ ಅವರು ಆದರ್ಶಪ್ರಾಯರೂ ಹೌದು. ಸಂಸ್ಕೃತ, ಕನ್ನಡ, ಸಾಹಿತ್ಯ, ಸಂಗೀತ ಕ್ಷೇತ್ರದ ಆಳ ವಿದ್ವತ್ ಹೊಂದಿದ ಸಾಮಗರು, ತಮ್ಮ ಪಾತ್ರಗಳ, ವಿಶಿಷ್ಟ ಬಗೆಯ ವಾಗ್ವೈರಿಯ ಮೂಲಕ ಯಕ್ಷಗಾನ ಲೋಕಕ್ಕೆ ಕೊಟ್ಟ ಕೊಡುಗೆ ಅವಿಸ್ಮರಣೀಯ.

ಸಂದ ಗೌರವ

ಬದಲಾಯಿಸಿ

ಮಲ್ಪೆ ರಾಮದಾಸ ಸಾಮಗರು ಉಡುಪಿಯ ರಾಜಾಂಗಣದಲ್ಲಿ ೨೦೦೮ರಲ್ಲಿ ನಡೆದ ಮೂರನೆ ಅಖಿಲ ಭಾರತ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಚ್ಚರಿಯೆಂಬಂತೆ ಯಕ್ಷಗಾನದ ‘ಯಕ್ಷದಂಪತಿಗಳು’ ಎಂದೇ ಖ್ಯಾತರಾದ ಸಾಮಗರು ಮತ್ತು ಕೋಳ್ಯೂರು ರಾಮಚಂದ್ರ ರಾಯರಿಗೆ ಜೊತೆಯಾಗಿಯೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಒಲಿದಿತ್ತು.

ಈ ಹಿರಿಯರು ಏಪ್ರಿಲ್ ೨೭, ೨೦೧೦ರಂದು ತಮ್ಮ 84ನೆಯ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. ಅವರು ಉಳಿಸಿ ಹೋದ ಕಲಾಪರಂಪರೆ, ನೀಡಿದ ಕೊಡುಗೆಗಳು ಅವಿಸ್ಮರಣೀಯವಾದದ್ದು.

ಮಾಹಿತಿ ಕೃಪೆ

ಬದಲಾಯಿಸಿ

ನೂಪುರ ಭ್ರಮರಿ.