ಮಮ್ಮಿಗಳು - ಹಲವಾರು ವರ್ಷಗಳ ಕಾಲ ಕ್ಷಯಿಸದಂತೆ ಸಂರಕ್ಷಿಸಿಡಲ್ಪಟ್ಟ ಮನುಷ್ಯ ಅಥವಾ ಪ್ರಾಣಿಯ ದೇಹಗಳು. ಯಾವುದೇ ಮನುಷ್ಯ ಅಥವಾ ಪ್ರಾಣಿಯು ಸಾವನ್ನಪ್ಪಿದ ನಂತರ ಅದರ ದೇಹವು ಕೊಳೆಯಲಾರಂಭಿಸುತ್ತದೆ ಮತ್ತು ಕೆಲವೇ ದಿನಗಳಲ್ಲಿ ದೇಹವು ಸಂಪೂರ್ಣವಾಗಿ ಮಣ್ಣಿಗೆ ಸೇರಲ್ಪಡುತ್ತದೆ. ಆದರೆ, ಮೃತ ದೇಹಗಳನ್ನು ಈ ರೀತಿಯಾಗಿ ನಶಿಸಿಹೋಗಲು ಬಿಡದೆ, ಹಲವು ವರ್ಷಗಳ ಕಾಲ ಅವು ಕ್ಷಯಿಸಿ ಹೋಗದಂತೆ ಸಂರಕ್ಷಿಸಿಡುವ ವಿಶಿಷ್ಟ ಪದ್ಧತಿಯನ್ನು ಪ್ರಾಚೀನ ಈಜಿಫ್ಟ್ ಹಾಗೂ ಇತರ ಕೆಲವು ದೇಶಗಳ ಜನರು ರೂಢಿಸಿ ಕೊಂಡಿದ್ದರು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಮೃತ ವ್ಯಕ್ತಿಗಳ ದೇಹಗಳು ಮಮ್ಮಿಗಳ ರೂಪದಲ್ಲಿ ಇಂದಿಗೂ ಕಾಣಸಿಗುತ್ತವೆ. ಬಹುಪಾಲು ಮಮ್ಮಿಗಳು ಈಜಿಫ್ಟ್ ದೇಶದ 'ಪಿರಮಿಡ್ಡುಗಳಲ್ಲಿ ಕಂಡುಬಂದಿವೆ. ಈಜಿಫ್ಟ್‌ನ ಜೊತೆಗೆ, ಅಮೇರಿಕಾ, ಚೀನಾ ದೇಶಗಳಲ್ಲೂ ಮಮ್ಮಿಗಳು ಸಿಕ್ಕಿದ ಉದಾಹರಣೆಗಳಿವೆ.

ಈಜಿಫ್ಟ್ ನಲ್ಲಿ ಕಂಡುಬಂದ ಒಂದು ಮಮ್ಮಿ
ಮೃತ ದೇಹದ ಅಂಗಾಂಗಗಳನ್ನು ಸಂರಕ್ಷಿಸಿಡಲು ಬಳಸುತ್ತಿದ್ದ ಪ್ರಾಣಿಗಳ ಮುಖವಿರುವ ವಿಶೇಷ ಕನೋಪಿಕ್ ಭರಣಿಗಳು
ಸುಮಾರು ೧೨೫೦ ವರ್ಷಗಳಷ್ಟು ಹಳೆಯದಾದ ಒಂದು ಮಮ್ಮಿ

ಮಮ್ಮಿಗಳನ್ನು ಮಾಡಲು ಕಾರಣ

ಬದಲಾಯಿಸಿ

ಚರಿತ್ರಕಾರರ ಪ್ರಕಾರ ಪ್ರಾಚೀನ ಈಜಿಫ್ಟಿನ ಜನತೆ ಸಾವಿನ ನಂತರವೂ ಒಂದು ಜೀವನವಿರುತ್ತದೆ (Life After Death) ಎಂಬುದಾಗಿ ನಂಬಿದ್ದರು. ಹೀಗಾಗಿ ಮೃತ ವ್ಯಕ್ತಿಯನ್ನು ಆತನ ಮರಣಾ ನಂತರದ ಜಗತ್ತಿಗೆ ಸುರಕ್ಷಿತವಾಗಿ ತಲುಪಿಸಬೇಕು ಎಂಬ ಉದ್ದೇಶದಿಂದ ಮೃತ ದೇಹಗಳನ್ನು ಮಮ್ಮಿಗಳ ರೂಪದಲ್ಲಿ ಸಂರಕ್ಷಿಸಿಡುತ್ತಿದ್ದರು ಎಂದು ತಿಳಿಯಲಾಗಿದೆ.

ಮಮ್ಮಿಗಳನ್ನು ತಯಾರಿಸುತ್ತಿದ್ದ ರೀತಿ

ಬದಲಾಯಿಸಿ

ಮೃತ ದೇಹಗಳನ್ನು ಮಮ್ಮಿಗಳನ್ನಾಗಿಸಲು ಈಜಿಫ್ಟಿಯನ್ನರು ವಿಶಿಷ್ಟವಾದ ಪದ್ಧತಿಯನ್ನು ಅನುಸರಿಸುತ್ತಿದ್ದರು. ಈಜಿಪ್ಟಿನ ಪುರೋಹಿತರ (ಧಾರ್ಮಿಕ ಗುರುಗಳು) ಸಮ್ಮುಖದಲ್ಲಿ ನಡೆಯುತ್ತಿದ್ದ ಈ ಕ್ರಿಯೆ ಸಂಪೂರ್ಣವಾಗಲು ಸುಮಾರು ೭೦ ದಿನಗಳು ಹಿಡಿಯುತ್ತಿದ್ದವು.

  • ಈಜಿಫ್ಟಿಯನ್ನರಿಗೆ ಮನುಷ್ಯನ ಬುಧ್ಧಿವಂತಿಕೆಯ ಕೇಂದ್ರ ಹೃದಯ ಮತ್ತು ಹೃದಯವೇ ಅತಿ ಮುಖ್ಯವಾದ ಅಂಗ ಎಂಬ ನಂಬಿಕೆಯಿತ್ತು. ಹಾಗಾಗಿ ಹೃದಯವೊಂದನ್ನು ಬಿಟ್ಟು ಉಳಿದ ಅಂಗಾಂಗಗಳನ್ನು ಹೊರ ತೆಗೆಯಲಾಗುತ್ತಿತ್ತು.
  • ಅವರ ಪ್ರಕಾರ ಮೆದುಳು ಅಂತಹ ಪ್ರಮುಖವಾದ ಅಂಗವೇನೂ ಆಗಿರಲಿಲ್ಲ, ಹಾಗಾಗಿ ಮೃತ ದೇಹದಿಂದ ಮೆದುಳನ್ನು ಮೂಗಿನ ಮೂಲಕ ಮೊದಲು ಹೊರತೆಗೆಯುತ್ತಿದ್ದರು.
  • ನಂತರ ಹೊಟ್ಟೆಯ ಪಾರ್ಶ್ವದಲ್ಲಿ ಒಂದು ಸೀಳು ಮಾಡು, ಅಲ್ಲಿಂದ ಎದೆಯ ಭಾಗದ ಮತ್ತು ಹೊಟ್ಟೆಯ ಭಾಗದ ಅಂಗಗಳನ್ನೆಲ್ಲ (ಹೃದಯವೊಂದನ್ನು ಬಿಟ್ಟು) ತೆಗೆದು ಹಾಕುತ್ತಿದ್ದರು.
  • ಹೀಗೆ ಹೊರ ತೆಗೆಯಲಾದ ಇತರ ಅಂಗಗಳನ್ನು ಪ್ರತ್ಯೇಕವಾಗಿ ಸಂರಕ್ಷಿಸಲಗುತ್ತಿತ್ತು. ಪ್ರತಿಯೊಂದು ಅಂಗಕ್ಕೂ ಒಂದೊಂದು ಪ್ರಾಣಿಯ ಅಕಾರವುಳ್ಳ ಈಜಿಫ್ಟಿಯನ್ ದೇವತೆಯ ಮುಖವನ್ನು ಹೊಂದಿರುವ ವಿಶೇಷ ಭರಣಿಗಳನ್ನು ಸಿದ್ಧಪಡಿಸಿ ಅದರಲ್ಲಿ ಸಂರಕ್ಷಿಸಲಾಗುತ್ತಿತ್ತು. ಈ ಭರಣಿಗಳನ್ನು ಕನೋಪಿಕ್ ಭರಣಿಗಳು (canopic jars) ಎಂದು ಕರೆಯುತ್ತಾರೆ. ಉದಾಹರಣೆಗೆ - ವಾನರ ಮುಖವನ್ನು ಹೋಲುವ ಹಾಪಿ (HAPY) ಎಂಬ ದೇವತೆಯ ಮುಖವನ್ನು ಹೊಂದಿರುವ ಕನೋಪಿಕ್ ಭರಣಿಯಲ್ಲಿ ಶ್ವಾಸಕೋಶವನ್ನು(Lungs) ಸಂರಕ್ಷಿಸಿಟ್ಟರೆ, ಮನುಷ್ಯರ ಮುಖವನ್ನು ಹೋಲುವಇಂಸತಿ (IMSETY) ಎಂಬ ದೇವತೆಯ ಮುಖವನ್ನು ಹೊಂದಿರುವ ಭರಣಿಯಲ್ಲಿ ಯಕೃತ್ತನ್ನು (ಪಿತ್ತ ಜನಕಾಂಗ/Liver) ರಕ್ಷಿಸಿಡಲಾಗುತ್ತಿತ್ತು.
  • ಇದಾದ ಬಳಿಕ, ದೇಹದಲ್ಲಿರುವ ನೀರಿನ ಅಂಶವನ್ನು ತೆಗೆದು ದೇಹವನ್ನು ಒಣಗಿಸುವ ಸಲುವಾಗಿ, ನ್ಯಾಟ್ರೋನ್ (natron) ಎಂಬ ಲವಣದ ದ್ರಾವಣದಲ್ಲಿ ದೇಹವನ್ನು ಅದ್ದಿ, ನಂತರ ಒಣಗಿಸಲಾಗುತ್ತಿತ್ತು. ಹೀಗೆ ಒಣಗಿಸಲ್ಪಟ್ಟ ದೇಹಕ್ಕೆ ಕೃತಕ ಕಣ್ಣುಗಳನ್ನು ಹಚ್ಚಲಾಗುತ್ತಿತ್ತು.
  • ನಂತರ ಲಿನೆನ್ (linen) ಜಾತಿಯ ದಾರರಿಂದ ತಯಾರಿಸಲ್ಪಟ್ಟ ಪಟ್ಟಿಯಿಂದ ದೇಹವನ್ನು ಸುತ್ತಲಾಗುತ್ತಿತ್ತು. ಮೃತ ವ್ಯಕ್ತ್ಯಿಯ ಮರಣಾನಂತರದ ಲೋಕಕ್ಕೆ ಮಾಡುವ ಪ್ರಯಾಣದ ಸಂಧರ್ಭದಲ್ಲಿ ಅವನಿಗೊದಗಬಹುದಾದ ಎಲ್ಲ ಅನಾಹುತಗಳಿಂದ ಕಾಪಾಡುವ ಸಲುವಾಗಿ ಎಮಲೆಟ್ (amulets) ಗಳೆಂಬ ವಿಶೇಷ ತಾಯತಗಳನ್ನು ಕಟ್ಟಲಾಗುತ್ತಿತ್ತು ಮತ್ತು ಕೆಲವು ಮಂತ್ರಗಳನ್ನು ಈ ಲೆನಿನ್ ದಾರದ ಪಟ್ಟಿಗಳ ಮೇಲೆ ಬರೆಯಲಾಗುತ್ತಿತ್ತು. ಈ ಎಮಲೆಟ್‌ಗಳಲ್ಲಿ ಸ್ಕರಬ್ (scarab) ಎಂಬುದು ಈಜಿಫ್ಟಿಯನ್ನರು ಹೆಚ್ಚಾಗು ಬಳಸುತ್ತಿದ್ದ ಒಂದು ಆಭರಣ.
  • ಹೀಗೆ ಸುತ್ತಿದ ಮೇಲೆ ಇಡೀ ದೇಹವನ್ನು ಒಂದು ಬಟ್ಟೆಯಿಂದ ಸುತ್ತಿ ನಂತರ ಅದನ್ನು ಲಿನೆನ್ ದಾರದಿಂದ ಬಿಗಿಯಾಗಿ ಕಟ್ಟುತ್ತಿದ್ದರು.
  • ಹೀಗೆ ಸಿದ್ಧಪಡಿಸಿದ ಮಮ್ಮಿಗಳನ್ನು ಅವುಗಳಿಗಾಗಿಯೇ ತಯಾರಿಸುವ ವಿಶೇಷವಾದ ಗೋರಿ (ಸಮಾಧಿ) ಗಳಲ್ಲಿ ಧರ್ಮ ಗುರುಗಳು ನಡೆಸುವ ವಿಶೇಷ ಪೂಜೆಗಳೊಂದಿಗೆ ಇಡಲಾಗುತ್ತಿತ್ತು. ಗೋರಿಯಲ್ಲಿ ಮೃತ ವ್ಯಕ್ತಿಯು ಬಳಸುತ್ತಿದ್ದ ಹಲವು ವಸ್ತುಗಳನ್ನೂ, ಒಡವೆಗಳನ್ನೂ, ಆತನ ಚಿತ್ರಗಳನ್ನೂ ಇಡಲಾಗುತ್ತಿತ್ತು.
  • ಈ ಗೋರಿಗಳ ಮೇಲೆ ಪಿರಮಿಡ್ಡು ಗಳನ್ನು ಕಟ್ಟುತ್ತಿದ್ದರು.

ಮಮ್ಮಿಗಳ ತಯಾರಿಕೆ ತುಂಬ ಖರ್ಚಿನದ್ದಾಗಿರುವುದರಿಂದ ಎಲ್ಲ ಜನ ಸಾಮಾನ್ಯರಿಗೂ ಇದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಫೆರೆಯೋ ಗಳೆಂದು ಕರೆಯುವ ಪ್ರಾಚೀನ ಈಜಿಫ್ಟಿನ ರಾಜರನ್ನು ಈ ರೀತಿ ಮಮ್ಮಿಗಳನ್ನಾಗಿ ಸಂರಕ್ಷಿಸಿಡುತ್ತಿದ್ದರು ಎಂದು ನಂಬಲಾಗಿದೆ. ಮನುಷ್ಯರ ಜೊತೆಗೆ ಕೆಲವೊಂದು ಪ್ರಾಣಿಗಳನ್ನು ಸಹಾ ಮಮ್ಮಿಗಳ ರೂಪದಲ್ಲಿ ರಕ್ಷಿಸಿಟ್ಟ ಉದಾಹರಣೆಗಳಿವೆ.

ಮಮ್ಮಿಗಳ ಅಧ್ಯಯನ

ಬದಲಾಯಿಸಿ

ಮಮ್ಮಿಗಳ ಕುರಿತಾದ ಅಧ್ಯಯನ ಬಹಳ ಹಿಂದಿನ ಕಾಲದಿಂದಲೇ ನಡೆದುಕೊಂಡು ಬಂದಿವೆ. ಕ್ರಿ.ಪೂ. ೪೫೦ ರಲ್ಲಿ ಬದುಕಿದ್ದನೆಂದು ತಿಳಿಯಲಾಗಿರುವ ಹಿರೊಡಾಟಸ್ (Herodotus) ನಿಂದ ಹಿಡಿದು ಇಂದಿನವರೆಗೂ ಮಮ್ಮಿಗಳನ್ನು ಮತ್ತು ಪಿರಮಿಡ್ಡುಗಳನ್ನು ಅಭ್ಯಸಿಸುತ್ತಲೇ ಬಂದಿದ್ದಾರೆ. ಈ ಅಧ್ಯಯನಗಳು ಮಮ್ಮಿಗಳ ಬಗ್ಗೆ ಹೊಸ ಹೊಸ ವಿಷಯಗಳು ಬೆಳಕಿಗೆ ಬರಲು ನೆರವಾಗಿವೆ. ಮಮ್ಮಿಗಳನ್ನು ಹೇಗೆ ತಯಾರಿಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ದೊರೆತಿರುವುದೂ ಸಹಾ ಮಮ್ಮಿಗಳ ಮೇಲೆ ಪುರಾತತ್ವ ಅಧ್ಯಯನಕಾರರು ನಡೆಸಿದ ಅಧ್ಯಯನವೇ ಕಾರಣ.

ಉಲ್ಲೇಖ

ಬದಲಾಯಿಸಿ