ಮನ್‍ಚಾವ್ ಸೂಪ್
ಮನ್‍ಚಾವ್ ಸೂಪ್ ಇಂಡೊ - ಚೈನೀಸ್ ಪಾಕಶೈಲಿಯಲ್ಲಿ ಅದರ ಸುಲಭ ತಯಾರಿಕೆ ಮತ್ತು ಖಾರದ ರುಚಿಗಾಗಿ ಜನಪ್ರಿಯವಾಗಿರುವ ಸೂಪ್.[೧] ಇದು ಅನೇಕ ರೆಸ್ಟೊರೆಂಟ್‍ಗಳು ಮತ್ತು ಬೀದಿ ಆಹಾರ ಬಂಡಿಗಳಲ್ಲಿ ಸಮಾನವಾಗಿ ಲಭ್ಯವಿದೆ. ಈ ಸೂಪ್‍ಗೆ ಮಂಚೂರಿಯಾದ ಹೆಸರು ಕೊಡಲಾಗಿದೆಯಾದರೂ, ಇದು ಆ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಪಾಕಶೈಲಿಯ ಯಾವುದೇ ತಯಾರಿಕೆಗಳನ್ನು ಹೋಲುವುದಿಲ್ಲ. ಮೇಘಾಲಯ ಮನ್‍ಚಾವ್ ಸೂಪ್‍ನ ಮೂಲವಾಗಿದೆ.
ಇದು ವಿವಿಧ ತರಕಾರಿಗಳು, ಗೊಂಡೆ ಈರುಳ್ಳಿಗಳು ಮತ್ತು ಕೋಳಿಮಾಂಸದಿಂದ ತಯಾರಿಸಲ್ಪಡುವ ಗಾಢ ಕಂದುಬಣ್ಣದ ಸೂಪ್ ಆಗಿದೆ. ಬ್ರಾತ್ ಮತ್ತು ಮೆಕ್ಕೆಜೋಳದ ಹಿಟ್ಟಿನಿಂದ ಗಟ್ಟಿಯಾಗಿಸಲಾದ ಈ ಸೂಪ್‍ನ್ನು ಸೋಯಾ ಸಾಸ್, ಉಪ್ಪು, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಗಳ ಉದಾರ ಪ್ರಮಾಣದಿಂದ ರುಚಿಗೊಳಿಸಲಾಗುತ್ತದೆ. ಇದು ಸಸ್ಯಾಹಾರಿ ಅಥವಾ ಮಾಂಸಾಹಾರಿ ಎರಡೂ ಆಗಿರಬಹುದು. ಇದನ್ನು ಸಣ್ಣಗೆ ಕತ್ತರಿಸಿದ ಎಳಸು ಈರುಳ್ಳಿಯಿಂದ ಕೂಡ ಅಲಂಕರಿಸಬಹುದು ಮತ್ತು ಗರಿಗರಿಯಾದ ಕರಿದ ನೂಡಲ್‍ಗಳ ಜೊತೆಗೆ ಬಡಿಸಲಾಗುತ್ತದೆ.