ಇವರು ನಮ್ಮಾಳ್ವಾರ್ ಅವರ ಸಮಕಾಲೀನರು. ಅವರಿಗಿಂತ ವಯಸ್ಸಿನಲ್ಲಿ ಹಿರಿಯರು; ಗುರು ಪರಂಧಾಮವನ್ನೈದಿದ ಬಳಿಕವೂ ಕೆಲಕಾಲವಿದ್ದು ಅವರ ಪ್ರಬಂಧಗಳನ್ನು ಅಜ್ಞರಲ್ಲೂ ತಜ್ಞರಲ್ಲೂ ಹರಡುತ್ತ, ಆಳ್ವಾರರ ವೈಭವವನ್ನು ಕೊಂಡಾಡುತ್ತ ಅವರ ಅರ್ಚಾರೂಪವನ್ನು ಪ್ರತಿಷ್ಠಾಪಿಸಿ ಪೂಜೆಗೈಯುತ್ತಿದ್ದರೆಂದು ಗುರುಪರಂಪರಾಪ್ರಭಾವದಿಂದ ತಿಳಿದುಬರುತ್ತದೆ.

ಈ ಆಚಾರ್ಯನಿಷ್ಠರು ಮೇಷ ಮಾಸದ ಚಿತ್ತಾನಕ್ಷತ್ರದಲ್ಲಿ ಪಾಂಡ್ಯ ದೇಶದ ತಿರುಕ್ಕೋಳೂರಿನಲ್ಲಿ ಸಾಮವೇದ ಶಾಖೆಯ ಬ್ರಾಹ್ಮಣ ಕುಲವೊಂದರಲ್ಲಿ ಜನ್ಮತಾಳಿದರು. ವೇದವೇದಾಂಗಗಳಲ್ಲಿ ಪ್ರಾವೀಣ್ಯ ಪಡೆದು ಈ ತತ್ತ್ವಪಿಪಾಸು ಬಹುಕಾಲ ಸತ್ಸಂಗದಲ್ಲೂ ತೀರ್ಥಕ್ಷೇತ್ರಯಾತ್ರೆಗಳಲ್ಲೂ ಕಾಲಕಳೆಯುತ್ತಿದ್ದರು. ಆದರೆ ಮನಸ್ಸು ಮಾತ್ರ ಏತರಿಂದಲೂ ನೆಮ್ಮದಿ ಪಡೆಯದೆ ಸದ್ಗುರುವೊಬ್ಬನನ್ನು ಅರಸುತ್ತಲೇ ಇತ್ತು. ಇವರು ಒಮ್ಮೆ ಅಯೋಧ್ಯೆಯಲ್ಲಿ ಪ್ರವಾಸವಿದ್ದಾಗ ತೆಂಕಣದಿಕ್ಕಿನಲ್ಲಿ ಒಂದು ಜ್ಯೋತಿ ಬಾನಲ್ಲಿ ಬೆಳಗುತ್ತಿದ್ದುದನ್ನು ಕಂಡರು. ಹಿಂದೆಂದೂ ಕಾಣದಿದ್ದ ಆ ಬೆಳಕನ್ನು ಮೂರು ದಿನ ನಿರುಕಿಸಿ ಅದು ನೆಲೆಯಾಗಿದ್ದುದನ್ನು ಕಂಡು, ಅದನ್ನಾರಿಸಿಕೊಂಡು ಆ ನಿಟ್ಟಿನಲ್ಲಿ ಪಯಣಿಸುತ್ತಾ ತಿರುಕುರುಹೊರ್ ಎಂಬಲ್ಲಿಗೆ ಬಂದು ಇಲ್ಲಿನ ಆಶ್ಚರ್ಯವೇನೆಂದು ಕೇಳಲು ಅಲ್ಲಿನವರು ಹುಣಸೆಮರದ ದೊಗರಿನಲ್ಲಿ ಮರುಳರಂತಿದ್ದ ಆ ಮಾರನ್ ಎಂಬುವರನ್ನು ತೋರಿಸಿದರು. ಆ ಬಾಲಯೋಗಿಯ ತೇಜಸ್ಸಿಗೆ ಮರುಳಾಗಿ ಮಧುರಕವಿಗಳು ಉಪಾಯದಿಂದ ಆತ ಬಹಿರ್ಮುಖರಾಗುವಂತೆ ಮಾಡಿದರು. ಒಂದು ಒಗಟಿನ ಪ್ರಶ್ನೆಯನ್ನು ಹಾಕಿ ಸದುತ್ತರವನ್ನು ಪಡೆದು ಅವರ ಮೇಧಾಶಕ್ತಿಯನ್ನರಿತರು. ಈತನೇ ತಕ್ಕ ಗುರುವೆಂದು ಅಲ್ಲಿಂದ ಮುಂದೆ ಅವರನ್ನು ಆಶ್ರಯಿಸಿ ಅವರ ಸೇವೆಗೆ ನಿಂತು ಅವರ ಶ್ರೀಸೂಕ್ತಿಗಳಲ್ಲಿ ಮುಳುಗಿಹೋದರು.

ಕೃತಿಗಳು

ಬದಲಾಯಿಸಿ

ಇವರು ರಚಿಸಿರುವ ಮಿಕ್ಕ ಗೀತೆಗಳ ಪಾಡೇನಾಯಿತೋ ತಿಳಿಯದು. ನಮಗೆ ಇದರಿಂದ ಲಭ್ಯವಾಗಿರುವುದು ಕೇವಲ ಹನ್ನೊಂದು ಬಿಡಿ ಪದ್ಯಗಳು. ಆಚಾರ್ಯಸ್ತೋತ್ರ ರೂಪವಾದವು. ಕುರುಹೂರ್ ನಂಬಿಗಿಂತ ಮತ್ತೊಂದು ದೈವವನ್ನು ನಾನರಿಯೆ. ನಾನು ಕಲಿತ ವೇದ ಶಾಸ್ತ್ರಗಳ ತತ್ತ್ವ ನನ್ನೆದೆಯಲ್ಲಿ ನೆಲೆಸುವಂತೆ ಮಾಡಿದವರು ಇವರು. ಯಾರು ಬೈದರೇನು, ಬೈದಷ್ಟೂ ಇನಿದಾಗುತ್ತದೆ-ನನಗೂ ನನ್ನ ಆಚಾರ್ಯನಿಗೂ ಇರುವ ಮಧುರ ಬಾಂಧವ್ಯ ಎಂದು ಈ ಪದ್ಯದಲ್ಲಿ ತಮ್ಮ ಆಚಾರ್ಯನಿಷ್ಠೆಯ ಪರಾಕಾಷ್ಠೆಯನ್ನು ಪ್ರಕಾಶಗೊಳಿಸಿ ಶ್ರೀವೈಷ್ಣವ ಸಂಪ್ರದಾಯದಲ್ಲಿ ಒಂದು ಹೊಸ ಬಳಿಯನ್ನೇ ತೆರೆದರು, ನಮ್ಮಾಳ್ವಾರರಲ್ಲಿ ಮುಳುಗಿದ ಈ ಆಳ್ವಾರರು.