ಶ್ರೀ ಮಂಗೇಶಿ ದೇವಸ್ಥಾನವು ಗೋವಾದ ಪೋಂಡ ತಾಲ್ಲೂಕಿನ ಪ್ರಿಯೋಲ್ ಬಳಿ ಇರುವ ಮಂಗೇಶಿ ಹಳ್ಳಿಯಲ್ಲಿದೆ.[೧] ಇದು ಗೋವಾ ರಾಜಧಾನಿಯಾದ ಪಣಜಿಯಿಂದ ಸುಮಾರು ೨೧ ಕಿ.ಮೀ ದೂರ,[೧] ಹಾಗೂ ಮಡ‌ಗಾಂವ್‌ನಿಂದ ೨೬ ಕಿ.ಮೀ ದೂರದಲ್ಲಿದೆ.

ಶ್ರೀ ಮಂಗೇಶ್ ಸಂಸ್ಥಾನ್
ಭೂಗೋಳ
ದೇಶಭಾರತ
ರಾಜ್ಯಗೋವಾ
ಜಿಲ್ಲೆಉತ್ತರ ಗೋವಾ
ಸ್ಥಳಮಂಗೇಶಿ, ಪ್ರಿಯೋಲ್

ಇದು ಗೋವಾದ ಅತಿದೊಡ್ಡ ಹಾಗೂ ಹೆಚ್ಚು ಜನರು ಭೇಟಿ ನೀಡುವ ದೇವಸ್ಥಾನಗಳಲ್ಲಿ ಒಂದಾಗಿದೆ.[೨] ಕವಳೆ ಮಠದ ಹೆಚ್.ಹೆಚ್. ಶ್ರೀಮದ್ ಸ್ವಾಮಿಯವರು ಮಂಗೇಶಿ ದೇವಸ್ಥಾನದ ಆಧ್ಯಾತ್ಮಿಕ ಗುರುಗಳಾಗಿದ್ದಾರೆ. ೨೦೧೧ರಲ್ಲಿ ಈ ದೇವಸ್ಥಾನವು ಬೇರೆ ಹಲವು ದೇವಸ್ಥಾನಗಳೊಂದಿಗೆ ಸೇರಿ ಭೇಟಿ ನೀಡುವವರಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿತು.[೩]

ಇತಿಹಾಸ ಬದಲಾಯಿಸಿ

ದೇವಸ್ಥಾನದ ಮೂಲವು ಮುರ್ಗಾಂವ್‍ನಲ್ಲಿರುವ ಕುಶಸ್ಥಳಿಯಲ್ಲಿದೆ. ೧೫೪೩ರಲ್ಲಿ ಪೋರ್ಚುಗೀಸರು ಇದನ್ನು ಆಕ್ರಮಿಸಿ ವಶಪಡಿಸಿಕೊಂಡರು. ೧೫೬೦ರಲ್ಲಿ ಪೋರ್ಚುಗೀಸರು ಕ್ರೈಸ್ತೇತರರಿಗೆ ನೀಡುತ್ತಿದ್ದ ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು, ಕೌಂಡಿನ್ಯ ಮತ್ತು ವತ್ಸ ಗೋತ್ರದ ಸಾರಸ್ವತರು ಮಂಗೇಶ ಲಿಂಗವನ್ನು ಮೂಲವಾದ ಕುಶಸ್ಥಳಿಯಿಂದ ಈಗಿರುವ ಪ್ರಿಯೋಲ್‍ಗೆ ಕೊಂಡೊಯ್ದರು. ಆಗ ಆ ಪ್ರದೇಶವನ್ನು ಪೊಂಡಾದ ಅಂತ್ರೂಜ್ ಮಹಲ್‍ನಲ್ಲಿರುವ ಹಿಂದೂ ಸೊಂದ ರಾಜರ ಅಧಿನದಲ್ಲಿತ್ತು.

ಸ್ಥಳಾಂತರಗೊಂಡಾಗಿನಿಂದ ದೇವಸ್ಥಾನವನ್ನು ಮರಾಠರ ಆಳ್ವಿಕೆಯಡಿಯಲ್ಲಿ ಎರಡು ಬಾರಿ ಹಾಗೂ ೧೮೯೦ರಲ್ಲಿ ಇನ್ನೊಮ್ಮೆ ಜೀರ್ಣೋದ್ಧಾರ ಮಾಡಲಾಯಿತು. ೧೯೭೩ರಲ್ಲಿ ಮುಖ್ಯಗೋಪುರ ಮೇಲೆ ಬಂಗಾರದ ಕಲಶವನ್ನು ಸ್ಥಾಪಿಸುವ ಮೂಲಕ ಕೊನೆಯ ನವೀಕರಣವನ್ನು ಮಾಡಲಾಯಿತು.[೧]

ಮೂಲ ಗುಡಿಯು ಬಹಳ ಸರಳವಾಗಿತ್ತು. ಈಗಿರುವ ದೇವಸ್ಥಾನವನ್ನು ಸ್ಥಳಾಂತರಗೊಂಡು ೧೫೦ ವರ್ಷಗಳಾದ ನಂತರ, ಮರಾಠರ ಆಳ್ವಿಕೆಯಡಿಯಲ್ಲಿ ಕಟ್ಟಲಾಯಿತು. ಪೇಶ್ವಾಗಳು ತಮ್ಮ ಸರದಾರನಾದ, ಶ್ರೀ ಮಂಗೇಶನ ಭಕ್ತನಾದ, ರಾಮಚಂದ್ರ ಮಾಲ್ಹಾರ್ ಸುಖ್ತಾನ್ಕಾರ್ ಅವರ ಸಲಹೆಯ ಮೆರೆಗೆ, ಮಂಗೇಶಿ ಹಳ್ಳಿಯನ್ನು ದೇವಸ್ಥಾನಕ್ಕೆ ದಾನ ಮಾಡಿದರು. ದೇವಸ್ಥಾನ ಕಟ್ಟಿದ ಕೆಲವೇ ವರ್ಷಗಳಲ್ಲಿ, ೧೭೬೩ರಲ್ಲಿ ಈ ಪ್ರದೇಶ ಕೂಡ ಪೋರ್ಚುಗೀಸರ ಆಳ್ವಿಕೆಯಡಿ ಬಂತು.[೪] ಆದರೆ ಇಷ್ಟು ಹೊತ್ತಿಗೆ ಪೋರ್ಚುಗೀಸರು ತಮ್ಮ ಧಾರ್ಮಿಕ ಹುರುಪು ಕಳೆದುಕೊಂಡು, ಇತರ ಕೋಮಿನರೊಂದಿಗೆ ಸಹಿಷ್ಣುತವಾಗಿದ್ದರು. ಆದ್ದರಿಂದ ದೇವಸ್ಥಾನಕ್ಕೆ ಯಾವುದೇ ಹಾನಿ ಉಂಟಾಗಲಿಲ್ಲ.

ದೇವತೆಗಳು ಬದಲಾಯಿಸಿ

ಮುಖ್ಯ ದೇವತೆ ಬದಲಾಯಿಸಿ

 
ಶ್ರೀ ಮಂಗೇಶ

ಮುಖ್ಯ ದೇವಾಲಯವು ಶಿವನ ಅವತಾರವಾದ ಭಗವಾನ್ ಮಂಗೇಶರಿಗೆ ಸಮರ್ಪಿತವಾಗಿದೆ. ಮಂಗೇಶರನ್ನು ಶಿವಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ. ದಂತಕಥೆಯ ಪ್ರಕಾರ ಒಮ್ಮೆ ಶಿವನು ತನ್ನ ಹೆಂಡತಿ ಪಾರ್ವತಿಯನ್ನು ಹೆದರಿಸಲು ಹುಲಿಯ ರೂಪ ತೆಳೆದಿದ್ದನು. ಪಾರ್ವತಿಯು ಹುಲಿಯನ್ನು ನೋಡಿ ಭಯಭೀತಗೊಂಡು, "ತ್ರಾಹಿ ಮಾಮ್ ಗಿರೀಶ!" (ಓಹ್ ಬೆಟ್ಟಗಳ ದೇವರೇ, ನನ್ನನು ಕಾಪಾಡು!) ಎಂದು ಕೂಗುತ್ತ ಶಿವನನ್ನು ಹುಡುಕಲು ಹೋದಳು. ಇದನ್ನು ಕೇಳಿ ಶಿವನು ತನ್ನ ಸಹಜ ರೂಪಕ್ಕೆ ಹಿಂದಿರುಗಿ, "ಮಾಮ್ ಗಿರೀಶ" (ನಾನು ಗಿರೀಶ) ಎಂದು ಹೇಳಿದನು. ಇದರಿಂದಾಗಿ ಮಾಮ್ ಗಿರೀಶ ಎಂಬುದು ಶಿವನಿಗೆ ಸಂಬಂಧಿತ ಪದವಾಯಿತು. ಕಾಲಕ್ರಮೇಣ ಇದೇ ಮಾಂಗಿರೀಶ ಅಥವಾ ಮಂಗೇಶ ಎಂದು ಬದಲಾಯಿತು.[೧] ಮಂಗೇಶನು ಹಲವು ಗೌಡ ಸಾರಸ್ವತ ಬ್ರಾಹ್ಮಣರ ಕುಲದೇವತೆ ಆಗಿದ್ದಾನೆ.[೫]

ಬೇರೆ ದೇವತೆಗಳು ಬದಲಾಯಿಸಿ

ದೇವಸ್ಥಾನದಲ್ಲಿ ಪಾರ್ವತಿ, ಗಣೇಶ, ನಂದಿಕೇಶ್ವರ, ಗಜನ, ಭಗವತಿ ಮತ್ತು ಕೌಂಡಿನ್ಯ ಗೋತ್ರದ ಗ್ರಾಮಪುರುಷ ದೇವಶರ್ಮನ ಮೂರ್ತಿಗಳು ಇವೆ. ದೇವಸ್ಥಾನದ ಆವರಣದಲ್ಲಿ ಮೂಲಕೇಶ್ವರ, ವೀರಭದ್ರ, ಶಾಂತೇರಿ, ಲಕ್ಷ್ಮಿನಾರಾಯಣ, ಸೂರ್ಯನಾರಾಯಣ, ಗರುಡ ಮತ್ತು ಕಾಲಭೈರವರ ಗುಡಿಗಳಿವೆ.

ದಂತಕಥೆ ಬದಲಾಯಿಸಿ

ಮಂಗೇಶ ಲಿಂಗವನ್ನು ಭಾಗೀರಥಿ ನದಿ ದಡದಲ್ಲಿರುವ "ಮಂಗಿರೀಶ" (ಮೊಂಗಿರ್) ಬೆಟ್ಟದಲ್ಲಿ ಬ್ರಹ್ಮನು ಸ್ಥಾಪಿಸಿದನು ಎಂದು ಹೇಳಲಾಗುತ್ತದೆ. ಇದನ್ನು ಸಾರಸ್ವತ ಬ್ರಾಹ್ಮಣರು ಬಿಹಾರದ ತ್ರಿಹೋತ್ರಪುರಕ್ಕೆ ತಂದರು. ನಂತರ ಲಿಂಗವನ್ನು ಗೊಮಂತಕಕ್ಕೆ (ಗೋವಾಕ್ಕೆ) ಹೊತ್ತು ತಂದು, ಮುರ್ಗಾಂವ್‍ನ ಜುವಾರಿ ನದಿ ದಡದಲ್ಲಿರುವ ಕುಶಸ್ಥಳಿಯಲ್ಲಿ (ಆಧಿನಿಕ ಕೋರ್ತಲಿಂ) ದೇವಸ್ಥಾನವನ್ನು ಕಟ್ಟಿದರು.

ದೇವಸ್ಥಾನದ ಆವರಣ ಬದಲಾಯಿಸಿ

ಶಿವನಿಗೆ ಅರ್ಪಿತವಾದ 450 ವರ್ಷಗಳಷ್ಟು ಹಳೆಯದಾದ ಶ್ರೀ ಮಂಗೇಶ ದೇವಾಲಯವು ಅದರ ಸರಳ ಮತ್ತು ಸೊಗಸಾದ ಶಿಲ್ಪಶೈಲಿಯನ್ನು ಹೊಂದಿದೆ. ದೇವಾಲಯದ ವಾಸ್ತುಶಿಲ್ಪವು ಹಲವಾರು ಗುಮ್ಮಟಗಳು, ಪೈಲಸ್ಟರ್‌ಗಳು ಮತ್ತು ಬಲೂಸ್ಟ್ರೇಡ್‌ಗಳನ್ನು ಒಳಗೊಂಡಿದೆ. ದೇವಾಲಯದ ಆವರಣದಲ್ಲಿ ದೊಡ್ಡದಾದ ನಂದಿ ಮತ್ತು ಸುಂದರವಾದ ಏಳು ಅಂತಸ್ತಿನ ದೀಪ ಗೋಪುರವಿದೆ. ಈ ದೇವಾಲಯವು ಒಂದು ಪುಣ್ಯತೀರ್ಥ ಕೆರೆಯನ್ನು ಹೊಂದಿದ್ದು, ಇದು ದೇವಾಲಯದ ಅತ್ಯಂತ ಹಳೆಯ ಭಾಗವಾಗಿದೆ.[೬]

ಸಭಾಗೃಹವು ವಿಶಾಲವಾಗಿದ್ದು, ಐನೂರಕ್ಕೂ ಹೆಚ್ಚು ಜನರಿಗೆ ಸ್ಥಳಾವಕಾಶವನ್ನು ಹೊಂದಿದೆ. ಇಲ್ಲಿ ಹತ್ತೊಂಬತ್ತನೇ ಶತಮಾನದ ತೂಗುಗೊಂಚಲು ದೀಪ (ಚ್ಯಾಂಡೆಲಿಯರ್) ಇದೆ. ಸಭಾಗೃಹದ ನಡುಭಾಗದಿಂದ ಗರ್ಭಗುಡಿಗೆ ದಾರಿ ಇದೆ.

ಸೇವೆಗಳು ಬದಲಾಯಿಸಿ

ನಿತ್ಯಸೇವೆಗಳು ಬದಲಾಯಿಸಿ

ಗೋವಾದ ಬಹುತೇಕ ದೇವಾಲಯಗಳಂತೆ ಮಂಗೇಶಿ ದೇವಾಲಯದಲ್ಲೂ ಹಲವು ನಿತ್ಯಪೂಜೆಗಳು ಇರುತ್ತದೆ. ದಿನ ಬೆಳಿಗ್ಗೆ ಶೋಧಶೋಪಚಾರ ಪೂಜೆಗಳಾದ ಅಭಿಷೇಕ, ಲಘುರುದ್ರ ಮತ್ತು ಮಹಾರುದ್ರ ಪೂಜೆಗಳನ್ನು ಮಾಡಲಾಗುತ್ತದೆ. ಮಧ್ಯಹ್ನ ಮಹಾ ಆರತಿ ಮತ್ತು ರಾತ್ರೆ ಪಂಚೋಪಚಾರ ಪೂಜೆಯನ್ನು ಮಾಡಲಾಗುತ್ತದೆ. ಪ್ರತಿ ಸೋಮವಾರ ಸಂಜೆಯಂದು ಮಂಗೇಶ ಮೂರ್ತಿಯನ್ನು ಆರತಿ ಮತ್ತು ವಾದ್ಯಗಳೊಂದಿಗೆ ದೇವಸ್ಥಾನದ ಸುತ್ತ ಪಲ್ಲಿಕ್ಕಿ ಮೆರವಣಿಗೆ ನಡೆಸಲಾಗುತ್ತದೆ.

ಹಬ್ಬಗಳು ಬದಲಾಯಿಸಿ

ದೇವಸ್ಥಾನದಲ್ಲಿ ನಡೆಯುವ ಮುಖ್ಯ ಹಬ್ಬಗಳೆಂದರೆ ರಾಮ ನವಮಿ, ಅಕ್ಷಯ ತೃತಿಯ, ಅನಂತ ವೃತೋತ್ಸವ, ನವರಾತ್ರಿ, ದಸರ, ದೀಪಾವಳಿ, ಮಾಘ ಪೂರ್ಣಿಮಾ ಹಬ್ಬ (ಜಾತ್ರೋತ್ಸವ) ಹಾಗೂ ಮಹಾಶಿವರಾತ್ರಿ. ಮಾಘ ಪೂರ್ಣಿಮಾ ಹಬ್ಬವು ಮಾಘ ಶುಕ್ಲ ಸಪ್ತಮಿಯಂದು ಶುರುವಾಗಿ, ಮಾಘ ಹುಣ್ಣಿಮೆಯಂದು ಮುಗಿಯುತ್ತದೆ.[೭]

ಚಿತ್ರಸಂಪುಟ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ ೧.೨ ೧.೩ "Department of Tourism, Government of Goa, India - Maguesh Temple, Priol". Archived from the original on 2019-09-11. Retrieved 2021-01-11.
  2. David Abram (2003). Goa. Rough Guides. pp. 107–. ISBN 978-1-84353-081-7.
  3. Goa temple bans entry of foreigners, others impose dress code
  4. Teotonio R. De Souza (1 January 1989). Essays in Goan History. Concept Publishing Company. pp. 20–. ISBN 978-81-7022-263-7.
  5. Baidyanath Saraswati (1984). The Spectrum of the Sacred: Essays on the Religious Traditions of India. Concept Publishing Company. pp. 138–. GGKEY:SPH4CJ0Y60Z.
  6. Amelia Thomas; Amy Karafin (2009). Goa and Mumbai. Lonely Planet. pp. 134–. ISBN 978-1-74104-894-0.
  7. "ಆರ್ಕೈವ್ ನಕಲು". Archived from the original on 2012-10-31. Retrieved 2021-01-11.

ಹೊರಗಿನ ಕೊಂಡಿಗಳು ಬದಲಾಯಿಸಿ