ಮಂಗಳೂರಿನ ಸಂಸ್ಕ್ರತಿ


ಮಂಗಳೂರಿನ ನಿವಾಸಿಯೊಬ್ಬರನ್ನು ತುಳುವಿನಲ್ಲಿ ಕುಡ್ಲದಾರ್ ಎಂದೂ, ಕನ್ನಡದಲ್ಲಿ ಮಂಗಳೂರಿನವರು ಎಂದೂ, ಕಾಥೋಲಿಕ್ ಕೊಂಕಣಿಯಲ್ಲಿ ಕೊಡಿಯಾಲ್ ಘರನೊಎಂದೂ, ಜಿ.ಎಸ್.ಬಿ ಕೊಂಕಣಿಯಲ್ಲಿ ಕೊಡಿಯಾಲ್ಚಿ ಅಥವಾ ಮಂಗ್ಳೂರ್ಚಿ ಎಂದೂ ಆಂಗ್ಲದಲ್ಲಿ ಮ್ಯಾಂಗಲೋರಿಯನ್ ಎಂದೂ ಕರೆಯುತ್ತಾರೆ. ಬಿಜೈ ಸಮೀಪದಲ್ಲಿರುವ ಶ್ರೀಮಂತಿ ಬಾಯಿ ಮ್ಯೂಸಿಯಮ್ ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ.ಮಣ್ಣಗುಡ್ಡದ ಸಮೀಪವಿರುವ ಬಿಬ್ಲಿಯೋಫೈಲ್ಸ್ ಪಾರಡೈಸ್ ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ. ಯಕ್ಷಗಾನವು ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು, ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ.ದಸರಾ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಡೆಯುವ ಹುಲಿವೇಶವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ.ಇದರಂತೆಯೇ ಕರಡಿವೇಶವೂ ದಸರಾ ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ. ಭೂತಕೋಲ ಇಲ್ಲಿ ಪ್ರಚಲಿತವಿರುವ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ. ಜನರ ಮನರಂಜನೆಗಾಗಿ ಇರುವ ಕಂಬಳವು ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ. ಕೋರಿಕಟ್ಟ (ಕೋಳಿ ಅಂಕ) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ. ನಾಗದೇವತೆಯನ್ನು ಪೂಜಿಸುವ ಹಬ್ಬವಾದ ನಾಗಾರಾಧನೆಯೂ ಇಲ್ಲಿ ಪ್ರಚಲಿತದಲ್ಲಿದೆ..

ಪಾಡ್ದನಗಳು ವೇಷಧಾರಿ ಸಮುದಾಯದವರಿಂದ ತುಳುವಿನಲ್ಲಿ ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು. ಇದು ಸಾಮನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ. ಕೋಲ್ಕೈ (ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ), ಉಂಜಲ್ ಪಾಟ್ (ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ), ಮೊಯ್ಲಾಂಜಿ ಪಾಟ್, ಒಪ್ಪುನೆ ಪಾಟ್ (ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ) ಗಳು ಕೆಲವು ಪ್ರಸಿದ್ಧ ಬ್ಯಾರಿ ಹಾಡುಗಳು.

ದಸರಾ, ದೀಪಾವಳಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಕ್ರಿಸ್ ಮಸ್, ಮಹಾ ಶಿವರಾತ್ರಿ, ಈಸ್ಟರ್, ನವರಾತ್ರಿ, ಗುಡ್ ಫ್ರೈಡೆ, ಈದ್, ಮೊಹರಂ ಹಾಗೂ ಮಹಾವೀರ ಜಯಂತಿ ಇಲ್ಲಿನ ಜನಪ್ರಿಯ ಹಬ್ಬಗಳು. ಗಣೇಶ ಚತುರ್ಥಿ ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ. ಈ ಸಮಯದಲ್ಲಿ ಗಣಪತಿ ದೇವರ ಮೂರ್ತಿಗಳನ್ನು ನಿಲ್ಲಿಸಿ, ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ, ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಕೊಡಿಯಾಲ್ ತೇರ್ ಅಥವಾ ಮಂಗಳೂರು ರಥೋತ್ಸವ ಇಲ್ಲಿನ ಜಿ.ಎಸ್.ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು. ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ. ಮೋಂತಿಫೆಸ್ಟ್ ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು.ಜೈನ್ ಮಿಲನ್ ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು 'ಜೈನ್ ಫುಡ್ ಫೆಸ್ಟಿವಲ್' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ. ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಡೆಯುವ ಮೊಸರು ಕುಡಿಕೆ ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ. ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ಆಟಿ ಪರ್ಬ(ಆಟಿ ಹಬ್ಬ)ವನ್ನು ಇಲ್ಲಿ ಕಳಂಜ ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ. ಜುಲೈ-ಆಗಸ್ಟಿನ ಮಳೆಗಾಲದ ಸಮಯದಲ್ಲಿ ಕಳಂಜನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ. ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ಕರಾವಳಿ ಉತ್ಸವ ಹಾಗೂ ಕುಡ್ಲೋತ್ಸವಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ. ೨೦೦೬ರಲ್ಲಿ ತುಳು ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು. ನೀರು ದೋಸೆ. ಇಲ್ಲಿ ಎಲ್ಲಾ ಬ್ರಾಹ್ಮಣರೂ ಮೀನು ತಿನ್ನುತ್ತಾರೆ.

ಮಂಗಳೂರಿನ ಖಾದ್ಯವು ಬಹುಮಟ್ಟಿಗೆ ದಕ್ಷಿಣ ಭಾರತದ ಖಾದ್ಯಗಳಿಂದ ಪ್ರಭಾವಿತಗೊಂಡಿವೆ. ಮಂಗಳೂರಿನ ವ್ಯಂಜನವು ತೆಂಗಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಅಧಿಕವಾಗಿ ಬಳಸಿಕೊಳ್ಳುತ್ತದೆ. ಶುಂಠಿ, ಬೆಳ್ಳುಳ್ಳಿ ಹಾಗೂ ಮೆಣಸನ್ನೂ ಕೂಡಾ ವ್ಯಂಜನದಲ್ಲಿ ಬಳಸಲಾಗುತ್ತದೆ. ಮಂಗಳೂರಿನ ಮೀನಿನ ಕರಿಯು ಕೆನರಾದುದ್ದಕ್ಕೂ ತನ್ನ ರುಚಿಗಾಗಿ ಜನಪ್ರಿಯವಾಗಿದೆ. ಕೋರಿ ರೊಟ್ಟಿ(ಅಕ್ಕಿ ರೊಟ್ಟಿ), ಬಂಗುಡೆ ಪುಳಿಮುಂಚಿ(ಬಂಗುಡೆ ಮೀನಿನ ಒಂದು ಖಾದ್ಯ), ಕಡ್ಲೆ ಮನೋಲಿ ಸುಕ್ಕ, ಬೀಜ-ಮನೋಲಿ ಉಪ್ಪುಕರಿ, ನೀರ್ ದೋಸೆ, ಬೂತಯಿ ಗಸಿ, ಪುಂಡಿ(ಕಡುಬು), ಪತ್ರೊಡೆ ತುಳು ಸಮುದಾಯದ ಕೆಲವು ಜನಪ್ರಿಯ ತಿಂಡಿ ತಿನಿಸುಗಳು. ದಾಲಿ ತೊಯ್, ಬೀಬೆ ಉಪ್ಕರಿ, ವಾಲ್ ವಾಲ್, ಅವ್ನಾಸ್ ಅಂಬೆ ಸಾಸಮ್, ಕಡ್ಗಿ ಚಕ್ಕೋ, ಪಾಗಿಲ ಪೋಡಿ ಹಾಗೂ ಚನ ಗಶಿ ಕೊಂಕಣಿ ಸಮುದಾಯದ ಕೆಲವು ವಿಶೇಷ ತಿನಿಸುಗಳು. ಕಾಥೋಲಿಕ್ಕರ ಸನ್ನ ದುಕ್ರಾ ಮಾಸ್, ಪೋರ್ಕ್ ಬಫತ್ , ಸೊರ್ಪೊಟೆಲ್ ಹಾಗೂ ಮುಸ್ಲಿಮರ ಮಟನ್ ಬಿರಿಯಾನಿ ಇತರ ಜನಜನಿತ ಖಾದ್ಯಗಳು. ಹಪ್ಪಳ, ಸಂಡಿಗೆ ಹಾಗೂ ಪುಳಿ ಮುಂಚಿ ಯಂತ ವಿಶೇಷ ತಿನಿಸುಗಳು ಮಂಗಳೂರಿನ ವಿಶಿಷ್ಟತೆಯಾಗಿದೆ. ತೆಂಗಿನ ಮರದ ಹೂವಿನ ರಸ/ಸತ್ವದಿಂದ ತಯಾರಿಸಲಾಗುವ ಶೇಂದಿ (ತುಳುವಿನಲ್ಲಿ ಕಲಿ) ಮಂಗಳೂರಿನ ಜನಪ್ರಿಯ ಸಾರಾಯಿಯಾಗಿದೆ. ಇಲ್ಲಿನ ಸಸ್ಯಾಹಾರಿ ಖಾದ್ಯವು ಉಡುಪಿ ಖಾದ್ಯದಂತೇ ಇರುತ್ತದೆ. ಮಂಗಳೂರು ಕರಾವಳಿ ನಗರವಾಗಿರುವುದರಿಂದ ಮೀನು ಇಲ್ಲಿನ ಅಧಿಕಾಂಶ ಜನರ ಪ್ರಮುಖ ಆಹಾರವಾಗಿದೆ.