ಮಂಗಳಶ್ರೀ ರಾತ್ರಿಯಲಿ

“ಮಂಗಳಶ್ರೀ ರಾತ್ರಿಯಲಿ” ಎಂಬುದು ಒಂದು ಜನಪ್ರಿಯ ಕ್ರಿಸ್ಮಸ್ ಕ್ಯಾರಲ್ ಆಗಿದೆ. ಜರ್ಮನಿ ಮೂಲದ ಈ ಹಾಡಿನ ಸಾಹಿತ್ಯ ಜರ್ಮನಿಯಲ್ಲಿ ನೆಲೆಸಿದ್ದ ಜೋಸೆಫ್ ಮೋಹ್ರ್ ಎಂಬ ಆಸ್ಟ್ರಿಯನ್ ಪಾದ್ರಿಯೊಬ್ಬರಿಂದ ರಚಿತವಾಯಿತು. ಅವರ ಜೊತೆಗಾರರಾಗಿದ್ದ ಫ್ರಾಂಝ್ ಝೇವೆರ್ ಗ್ರುಬೆರ್ ಎಂಬುವವರು ಈ ಸಾಹಿತ್ಯಕ್ಕೆ ರಾಗಸಂಯೋಜನೆ ಮಾಡಿದರು. ೧೮೧೯ರಲ್ಲಿ ಜಾನ್ ಫ್ರೀಮನ್ ಯಂಗ್ ಎಂಬಾತನು ಈ ಹಾಡನ್ನು ಇಂಗ್ಲಿಶಿಗೆ ತಂದ ಬಳಿಕ ಜಗತ್ತಿನ ೧೪೦ ಭಾಷೆಗಳಿಗೆ [೧] ಅನುವಾದವಾಗಿ ಅಪಾರ ಜನಪ್ರಿಯತೆ ಗಳಿಸಿಕೊಂಡಿದೆ. [೨] ಇಂದು ಹಾಡಲಾಗುವ ಈ ಹಾಡು ಮೂಲ ಗ್ರುಬೆರನ ರಾಗವನ್ನೇ ಹೋಲುವುದಾದರೂ ಕೊನೆಯ ಚರಣ ಮಾತ್ರ ಸ್ವಲ್ಪ ವ್ಯತ್ಯಸ್ತವಾಗಿ ತೋರುವುದುಂಟು. ಅದೇನೆಂದರೆ ಗ್ರುಬೆರನು ಮೂಲದಲ್ಲಿ ಈ ಕೊನೆಯ ಚರಣವನ್ನು ತ್ರಿಪುಟ ತಾಳದಲ್ಲಿ ರಚಿಸಿ ಉತ್ಕರ್ಷ ನೀಡಿದ್ದರೆ ಇಂಗ್ಲಿಶ್ ಸೇರಿದಂತೆ ಉಳಿದ ಭಾಷೆಗಳ ಹಾಡುಗಳಲ್ಲಿ ಕೊನೆಯ ಚರಣವು ಮೊದಲಿನ ಚರಣಗಳಂತೆಯೇ ನಿಧಾನಗತಿಯ ಆಲಾಪನೆಯನ್ನು ಹೊಂದಿದೆ.

ಇತಿಹಾಸ ಬದಲಾಯಿಸಿ

 
ಗ್ರುಬೆರನ ಕೈಬರಹದಲ್ಲಿ ಈ ಹಾಡಿನ ಸ್ವರಪ್ರಸ್ತಾರ

೧೮೧೮ರ ಡಿಸೆಂಬರ್ ೨೪ರ ರಾತ್ರಿ ಆಸ್ಟ್ರಿಯಾದ ಒಬೆರ್ನ್ಡಾರ್ಫ್ ಊರಿನ ಸಂತ ನಿಕೊಲಾಸ್ ಚರ್ಚಿನಲ್ಲಿ ಈ ಹಾಡನ್ನು ಮೊತ್ತಮೊದಲ ಸಲ ಹಾಡಲಾಯಿತು. ಮೋಹ್ರ್ ಈ ಹಾಡನ್ನು ೧೮೧೬ರಲ್ಲಿ ಬರೆದಿದ್ದರೂ ೧೮೧೮ರ ಕ್ರಿಸ್ಮಸ್ ರಾತ್ರಿಯೇ ಅದಕ್ಕೆ ಸಂಗೀತ ಸಂಯೋಜನೆಯ ಯೋಗ ಕೂಡಿಬಂದದ್ದು. [೩] ಹಾಡನ್ನು ರಚಿಸಿದ ಕುರಿತಾದ ಅವರ ಬರವಣಿಗೆಯಲ್ಲಿ ಆತ ಅದರ ಹಿಂದಿನ ಸ್ಫೂರ್ತಿ ಮತ್ತು ಪ್ರೇರಣೆಗಳ ಕುರಿತು ಏನೂ ಹೇಳಿಲ್ಲ. ಆದರೆ ಆಸ್ಟ್ರಿಯಾದ ಸೈಲೆಂಟ್ ನೈಟ್ ಸೊಸೈಟಿಯ ಹೇಳಿಕೆಯ ಪ್ರಕಾರ ಅಂದು ರಾತ್ರಿ ಚರ್ಚಿನ ಆರ್ಗನ್ ಕೆಲಸ ಮಾಡುತ್ತಿರಲಿಲ್ಲವಾಗಿ ಗಿಟಾರಿನ ನಾದಕ್ಕೆ ಸರಿಹೊಂದುವ ಗೀತೆಯನ್ನು ಹಾಡುವ ಅನಿವಾರ್ಯತೆ ಉಂಟಾಗಿತ್ತು ಆದ್ದರಿಂದ ಮೊಹ್ರ್ ಮತ್ತು ಗ್ರುಬೆರ್ ಅವರಿಗೆ ಈ ಧಾಟಿ ಚೆಂದವೆಂದು ತೋರಿರಬೇಕು. ಚರ್ಚಿನ ಮುರಿದ ಆರ್ಗನ್ ಬಗೆಗಿನ ಉಲ್ಲೇಖವು ಅಮೆರಿಕದಿಂದ ಪ್ರಕಟವಾದ ಪುಸ್ತಕವೊಂದರಲ್ಲಿದೆಯೆಂದು ಸೈಲೆಂಟ್ ನೈಟ್ ಇತಿಹಾಸಕಾರ ರೆನೇಟ್ ಎಬೆಲಿಂಗ್ ವಿಂಕ್ಲರ್ ಬೆರೆಂಗುಅರ್ ಹೇಳುತ್ತಾನೆ.

 
ಸೈಲೆಂಟ್ ನೈಟ್ ಸ್ಮಾರಕದ ಪ್ರಾರ್ಥನಾಲಯ ಮತ್ತು ವಸ್ತುಸಂಗ್ರಹಾಲಯ

೧೯೦೦ರಲ್ಲಿನ ಪ್ರವಾಹದ ಪ್ರಕೋಪದಿಂದ ಹಾಳಾದ ಸಂತ ನಿಕೊಲಾಸ್ ಚರ್ಚನ್ನು ನೆಲಸಮ ಮಾಡಿ ದಿಣ್ಣೆಯ ಪ್ರದೇಶದಲ್ಲಿ ಹೊಸ ಚರ್ಚನ್ನು ಕಟ್ಟಲಾಯಿತು. ಮತ್ತು ಈ ಹಳೆಯ ಚರ್ಚ್ ಇದ್ದ ಜಾಗದಲ್ಲಿ ಸೈಲೆಂಟ್ ನೈಟ್ ಸ್ಮಾರಕದ ಪ್ರಾರ್ಥನಾಲಯವನ್ನು ಕಟ್ಟಿ ಸನಿಹದ ಮನೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಇಂದು ಈ ಸ್ಥಳವು ಪ್ರಪಂಚದಾದ್ಯಂತದ ಅನೇಕ ಪ್ರವಾಸಿಗರ ಎಲ್ಲ ಕಾಲದ ಆಕರ್ಷಣೆಯ ಕೇಂದ್ರವಾಗಿದೆ.

ಹಾಡಿನ ಪಠ್ಯ ಬದಲಾಯಿಸಿ

ಮಂಗಳಶ್ರೀ ರಾತ್ರಿಯಲಿ ಬೆತ್ಲೆಹೇಮ್ ಚತ್ರದಿ ವರಕನ್ಯೆಯಲಿ ಜನಿಸಿದ ದೇವಪುತ್ರನಂ ವಂದಿಸುವ ವಂದನೆ ರಕ್ಷಕನೇ ವಂದನೆ ರಕ್ಷಕನೇ

ಮಂಗಳಶ್ರೀ ರಾತ್ರಿಯಲಿ ದೂತರು ಗಾನದಿ ಹಿಂಡುಕಾಯುವ ಕುರುಬರ್ಗೆ ತಂದ ವಾರ್ತೆಯು ಶ್ರೇಷ್ಠವೇ ಸ್ವಾಗತ ರಕ್ಷಕನೇ ಸ್ವಾಗತ ರಕ್ಷಕನೇ

ಪರಾಮರ್ಶನೆ ಬದಲಾಯಿಸಿ

  1. ಸೈಲೆಂಟ್ ನೈಟ್ ಜಾಲತಾಣ
  2. Underwood, Byron Edward, "Bishop John Freeman Young, Translator of 'Stille Nacht,'" The Hymn, v. 8, no. 4, Oct. 1957, pp. 123-132.
  3. ಬಿಬಿಸಿ ಜಾಲತಾಣ