ಭೂಮಿ ಬುಟ್ಟಿ ಚಿತ್ತಾರ

ಭೂಮಿಹುಣ್ಣಿಮೆಯ ಬುಟ್ಟಿ ಹಸೆ ಮಲೆನಾಡಿನ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಆಚರಣೆಯ ಮೂಲದ ಈ ಕರಕುಶಲ ಕಲೆ ದೇಸೀ ಕಲಾಪ್ರಕಾರದ್ದು. ಬಿದಿರಿನ ಬುಟ್ಟಿಗಳ ಮೇಲೆ ಆದಿಮ ರೇಖೆಗಳ ವಿನ್ಯಾಸದ ಚಿತ್ತಾರ ಬರೆಯಲಾಗುವುದು. ಕೃಷಿ, ಪಲವಂತಿಕೆ ಶಾಸ್ತ್ರಕ್ಕೆ ಸಂಬಂಧಿಸಿದ ಚಿತ್ರ ಮೂಡಿಸಲಾಗುತ್ತದೆ. ಆಶ್ವಿಜ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಭೂಮಿ ಹುಣ್ಣಿಮೆ ಪ್ರತಿವರ್ಷ ದೀಪಾವಳಿಗೆ ೧೫ ದಿನ ಮೊದಲು ಬರುತ್ತದೆ. ಅಂದು ಪೂಜೆಗೆ ಈ ಬುಟ್ಟಿ ಚಿತ್ತಾರ ಬಳಸುತ್ತಾರೆ.

ಪ್ರದೇಶ

ಬದಲಾಯಿಸಿ
 

ಮಲೆನಾಡಿನ ಸಾಗರ, ಸೊರಬ, ತೀರ್ಥಹಳ್ಳಿ ,ಸಿದ್ದಾಪುರ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಮಾತ್ರ ಕಂಡು ಬರುವ ಆಚರಣೆ ಮೂಲದ ವಿಶಿಷ್ಟ ಜಾನಪದ ಕರಕುಶಲ ಕಲೆ.[]ಇದು ಹಸೆ ಗೋಡೆ ಚಿತ್ತಾರ ಕಲೆಯೇ ಆಗಿದ್ದು ಬುಟ್ಟಿಗಳಲ್ಲಿ ಚಿತ್ರ್ರಿಸಲಾಗುತ್ತದೆ. ಹೆಚ್ಚು ರೇಖೆಗಳಲ್ಲಿ ಚಿತ್ರಿಸುವ ಹಲವು ಜ್ಯಾ ಮಿತಿಯ ಅಂಶಗಳನ್ನು ಒಳಗೊಂಡ ರೇಖಾ ಚಿತ್ತಾರವಾಗಿದೆ. ಭೂಮಿ ಹುಣ್ಣಿಮೆ ಹಬ್ಬಕ್ಕೆ ಈ ಬುಟ್ಟಿ ಚಿತ್ತಾರವನ್ನು ಕಡ್ಡಾಯವಾಗಿ ಮಲೆನಾಡಿನಲ್ಲಿ ಮಾತ್ರ ವಾಸವಾಗಿರಿವ ಲಕ್ಷಾಂತರ ದೀವರ ಕುಟುಂಬಗಳಲ್ಲಿ ಬರೆಯುವರು .

ತಯಾರಿಯ ಬಗೆ

ಬದಲಾಯಿಸಿ

ಬಹುತೇಕ ದೀವರು ಜನಾಂಗ ಇಂದಿಗೂ ಭೂಮಿ ಹುಣ್ಣಿಮೆಯಂದು ಆಚರಿಸುವ '' ಭೂಮಣ್ಣಿ ಹಬ್ಬಕ್ಕೆ ಎರಡು ಬುಟ್ಟಿಗಳಿಗೆ ಕೆಮ್ಮಣ್ಣು ಮೆತ್ತಿ , ಅಕ್ಕಿ ಹಿಟ್ಟಿನಿಂದ ಮಾಡಿದ ಬಿಳಿ ಬಣ್ಣ ಹಾಗು ಗುರಿಗೆ ಎಳ್ಳಿನಿಂದ ಮಾಡಿದ ಹಳದಿ ಬಣ್ಣದಿಂದ ಬಿಡಿಸುತ್ತಾರೆ. ಇದು ದೇಸೀ ಚಿತ್ರ ಕಲಾ ಪ್ರಕಾರವಾಗಿದ್ದು ಇದರ ಬಗ್ಗೆ ,ಮೂಲದ ಬಗ್ಗೆ ಹೆಚ್ಚು ಅಧ್ಯಯನ ಆಗಬೇಕಿದೆ. ಮಲೆನಾಡಿನ ದೀವರು ಜನಾಂಗದವರು ಆಚರಿಸುವ ಹಬ್ಬಗಳಲ್ಲಿ ಭೂಮಿಹುಣ್ಣಿಮೆ ಹಬ್ಬ ತುಂಬಾ ಶ್ರೇಷ್ಠವಾದುದು ಮತ್ತು ವೈಶಿಷ್ಟ್ಯಪೂರ್ಣವಾದುದು. ಮಹಾನವಮಿ ಆಗಿ ಏಳು ಅಥವಾ ಆರನೇ ದಿವಸ ಬರುವ ಹುಣ್ಣಿಮೆ ಭೂಮಿಹುಣ್ಣಿಮೆ. ಈ ದಿವಸ ಭೂಮಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಇದಕ್ಕೆ ಬಯಕೆ ಹಬ್ಬವೆಂದೂ ಕರೆಯುತ್ತಾರೆ. ಗರ್ಭಿಣಿಯರಾದ ಹೆಣ್ಣುಮಕ್ಕಳಿಗೆ ಸೀಮಂತ ಕಾರ್ಯವನ್ನು ಮಾಡುವಂತೆ ಗರ್ಭಧರಿಸಿ (ಹೊಡೆ) ನಿಂತ ಭತ್ತದ ಸಸಿಗಳಿಗೆ ಸೀಮಂತ ಮಾಡುತ್ತಾರೆ. ಭೂಮಿಯು ಸಹ ‘ಅಮೂಲ್ಯ ಸ್ತ್ರೀ ದೇವತೆ’ ಎಂಬ ದಾರ್ಶನಿಕ ಕಲ್ಪನೆ ಇವರದು. ಈ ಹಬ್ಬದಲ್ಲಿ ಬಿದಿರಿನಿಂದ ತಯಾರಿಸಿದ ಎರಡು ಬುಟ್ಟಿಗಳಿರುತ್ತವೆ. ಒಂದನೆಯದು ಭೂಮಣ್ಣಿಬುಟ್ಟಿ, ಎರಡನೆಯದು ಹಚ್ಚಂಬಲಿ ಬುಟ್ಟಿ. ಭೂಮಣ್ಣಿ ಬುಟ್ಟಿ ದೊಡ್ಡದಾಗಿರುತ್ತದೆ. ಇದು ಒಂದು ಅಡಿ, ಎತ್ತರ ನಾಲ್ಕು ಅಡಿ ಸುತ್ತಳತೆ ಇರುತ್ತದೆ. ಚಿಕ್ಕ ಬುಟ್ಟಿ ಎಂಟು ಇಂಚು, ಎತ್ತರ ಎರಡು ಅಡಿ, ಎಂಟು ಇಂಚು ಸುತ್ತಳತೆ ಇರುತ್ತದೆ. ಮಹಾನವಮಿ ಹಬ್ಬದ ಹಿಂದಿನ ದಿವಸ ಅಟ್ಟದ ಮೇಲಿದ್ದ ಬುಟ್ಟಿಗಳನ್ನು ಇಳಿಸಿ ಸಗಣಿಯಿಂದ ಬಳಿದು ಕೆಮ್ಮಣ್ಣು ಹಚ್ಚುತ್ತಾರೆ. ಮಹಾನವಮಿ ಹಬ್ಬದ ದಿವಸ ಹರಿ ಇಡಕಲು ಕೆಳಗೆ ಇಟ್ಟು ಪೂಜೆ ಮಾಡಿ ನಂತರ ಬುಟ್ಟಿಗಳ ಮೇಲೆ ಚಿತ್ತಾರ ಬರೆಯಲು ಪ್ರಾರಂಭ ಮಾಡುತ್ತಾರೆ. ಅಕ್ಕಿಯಿಂದ ತಯಾರಿಸಿದ ಬಿಳಿಯ ಬಣ್ಣದಿಂದ ಪುಂಡಿನಾರಿನ ಕುಂಚ(ಬ್ರೆಶ್)ದಿಂದ ಬುಟ್ಟಿಯ ಮೇಲೆ ಚಿತ್ರಗಳನ್ನು ಬರೆಯುತ್ತಾರೆ. ಬುಟ್ಟಿ ಚಿತ್ತಾರವನ್ನು ಬರೆಯುವ ಕಲಾವಿದೆಯರು ಎರಡು ರೀತಿಯಲ್ಲಿ ಚಿತ್ರ ಬರೆಯುತ್ತಾರೆ. ಸುತ್ತೆಳೆ ಚಿತ್ತಾರ ಮತ್ತು ಮೂಲೆ ಎಳೆ ಚಿತಾರ. ಸುತ್ತೆಳೆ ಚಿತ್ತಾರದಲ್ಲಿ ಹನ್ನೆರಡು ಎಳೆಗಳಿರುತ್ತವೆ. ಮೂಲೆ ಎಳೆ ಚಿತ್ತಾರದಲ್ಲಿ ಎಂಟು ಎಳೆಗಳಿರುತ್ತವೆ. ದೊಡ್ಡ ಬುಟ್ಟಿಯಲ್ಲಿ ಮಧ್ಯೆ ಎಂಟು ಮನೆಗಳಿರುತ್ತವೆ. ಸಣ್ಣ ಬುಟ್ಟಿಯಲ್ಲಿ ನಾಲ್ಕು ಮನೆಗಳು ಮಾತ್ರ ಇರುತ್ತವೆ. ಬುಟ್ಟಿಯ ಮೇಲೆ ಬರೆಯುವ ಚಿತ್ರಗಳನ್ನು ಎರಡು ಭಾಗವಾಗಿ ಮಾಡಿಕೊಳ್ಳಬಹುದು. ಕೃಷಿ ಚಟುವಟಿಕೆಗೆ ಸಂಬಂಧಿಸಿದ ಚಿತ್ರಗಳು ಮತ್ತು ಬಯಕೆ ಶಾಸ್ತ್ರಕ್ಕೆ ಸಂಬಂಧಿಸಿದ ಚಿತ್ರಗಳು. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಚಿತ್ರಗಳಲ್ಲಿ ಗೊಣಬೆ, ಕರಬಾನದ ಗಡಿಗೆ, ಭತ್ತದ ಸಸಿ, ಏಣಿ, ಗಾಡಿ, ಎತ್ತು, ಕಣಕಪ್ಪಿನ ಹೂವು ಇತ್ಯಾದಿ ಚಿತ್ರಗಳು. ಬಯಕೆಗೆ ಸಂಬಂಧಿಸಿದ ಚಿತ್ರಗಳಲ್ಲಿ ಕೌಳಿಮಟ್ಟಿ, ಸೀತೆ ಮುಡಿ, ಜೋಗಿ ಜಡೆ, ರಂಜಲ ಹೂವಿನದಂಡೆ ಇತ್ಯಾದಿ ಚಿತ್ರಗಳು. ಎಳೆಗಳ ಮಧ್ಯೆ ಜೋಡೆಳೆನಿಲಿ, ಬಾಸಿಂಗದನಿಲಿ ಬರೆದು ಎಳೆಗಳು ಸೇರುವ ಮೂಲೆಗಳಲ್ಲಿ ಪಪ್ಳಿ ಬರೆಯುತ್ತಾರೆ. ದೊಡ್ಡ ಬುಟ್ಟಿಯಲ್ಲಿ ಕರಬಾನದ ಗಡಿಗೆ, ಕೌಳಿಮಟ್ಟಿ, ಸೀತೆಮುಡಿ, ಜೋಗಿಜಡೆ ಮತ್ತು ಬುಟ್ಟಿ ಹೊತ್ತ ಮನುಷ್ಯ ಚಿತ್ರಗಳಿರುತ್ತವೆ. ಹಚ್ಚಂಬಲಿ ಬುಟ್ಟಿಯಲ್ಲೂ ಬರೆಯುತ್ತಾರೆ. ಹುಣ್ಣಿಮೆ ಹಿಂದಿನ ರಾತ್ರಿ ಹಬ್ಬ ‘ಅಡುವ’ ಕೆಲಸ ಪ್ರಾರಂಭಿಸುತ್ತಾರೆ. ಸ್ನಾನ ಮಾಡಿ ಅಡುಗೆಮನೆ ಮತ್ತು ಅಡುಗೆ ಒಲೆ ಇಡಕಲುಗಳನ್ನು ಸಗಣಿಯಿಂದ ಸಾರಿಸಿ ಸ್ವಚ್ಛ ಮಾಡುತ್ತಾರೆ. ಸುಮಾರು ರಾತ್ರಿ 10 ಗಂಟೆಯಿಂದ ಅಡುಗೆ ಮಾಡಲು ಪ್ರಾರಂಭಿಸುತ್ತಾರೆ. ಮೊಟ್ಟ ಮೊದಲು ಅಮಟೆಕಾಯಿ, ಹುಳಿಕಂಚಿಕಾಯಿ, ಸಿಹಿಕಂಚಿಕಾಯಿ ಎಲ್ಲಾ ರೀತಿಯ ತರಕಾರಿಗಳು, ಮನುಷ್ಯರು ತಿನ್ನಬಹುದಾದ ಎಲ್ಲಾ ತರದ ಸೊಪ್ಪುಗಳು, ಎಲ್ಲಾ ರೀತಿಯ ಧಾನ್ಯಗಳನ್ನು ಸೇರಿಸಿ ಉಪ್ಪು ಹಾಕದೆ ಬೇಯಿಸಿ ಚರಗ ತಯಾರಿಸುತ್ತಾರೆ. ನಂತರ ಅಡುಗೆ ಪ್ರಾರಂಭಿಸುತ್ತಾರೆ .ಗದ್ದೆಗಳಿಗೆ ಸೂರ್ಯೋದಯ ಪೂರ್ವದಲ್ಲೇ ಚರಗ ಚೆಲ್ಲಲಾಗುತ್ತದೆ.

 

ಹೆಚ್ಚಿನ ಮಾಹಿತಿಗೆ ಕರ್ನಾಟಕ ದೇಸಿ ಚಿತ್ರ ಕಲೆ ಹಸೆ ಚಿತ್ತಾರ ಸಂಶೋಧನಾ ಕೃತಿ ಓದಿ .

ಮಲೆನಾಡಿನ ಹಸೆ ಚಿತ್ತಾರವು ಸಹ ಇದೆ ಪ್ರಕಾರದ ಚಿತ್ರ ಕಲೆಯಾಗಿದೆ .ಆದರೆ ಇದನ್ನು ನೋವಿದವ್ರು ವರ್ಲಿ ಕಲೆಯೆಂದು ಪರಿಗಣಿಸುತ್ತಿರುವುದು ಕಂಡುಬರುತ್ತಿದೆ. ಆದರೆ ಇದು ಪುರಾತನ ಆಚರಣೆಯ ಭಾಗವಾಗಿ ಈ ಕಲಾ ಪ್ರಕಾರ ನಡೆದುಕೊಂಡು ಬಂದಿದ್ದು ಅಲ್ಲಿನ ವರ್ಲಿ ಕಲೆಗಿಂತ ಕೊಂಚ ಭಿನ್ನವಾಗಿದೆ.ಹಸೆ ಗೋಡೆ ಚಿತ್ತಾರ ಹಾಗು ಭೂಮಿ ಬುಟ್ಟಿ ಚಿತ್ತಾರ ಕುರಿತು ಇನ್ನಷ್ಟು ಅಧ್ಯಯನ ಮಾಡಿ ಕರ್ನಾಟಕದ ವಿಶಿಷ್ಟ ಜಾನಪದ ಚಿತ್ರಕಲೆಯ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ.

ಇದೇ ರೀತಿಯ ಚಿತ್ತಾರ ಹೋಲುವಂತೆ ಕುಣಬಿಯವರು ,ದೀವರು ,ಮದುವೆ ಶಾಸ್ತ್ರಕ್ಕೆ ಹಸೆ ಚಿತ್ತಾರವನ್ನು ಬಿಡಿಸುವುದು ಗಮನಿಸಬೇಕಾದ ಅಂಶವಾಗಿದೆ.ಹಾಗಾಗಿ ವರ್ಲಿ ಕಲೆಗಿಂತ ಇದು ಭಿನ್ನವಾಗಿದೆ.ಅಲ್ಲಿನ ಚಿತ್ತಾರದ ಸಾಂಪ್ರದಾಯಿಕ ಉದ್ದೇಶಗಳು ಬೇರೆ ಬೇರೆ ಇವೆ.[]ಹೆಚ್ಚಿನ ಮಾಹಿತಿಗೆ ಕರ್ನಾಟಕ ದೇಸಿ ಚಿತ್ರ ಕಲೆ ಹಸೆ ಚಿತ್ತಾರ ಸಂಶೋಧನಾ ಕೃತಿ ಓದಿ .

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2018-07-30. Retrieved 2018-08-21.
  2. https://chittaradangala.wordpress.com/