ಭುವನಾಭಿರಾಮ ಉಡುಪ ಯುಗಪುರುಷ ಮಾಸ ಪತ್ರಿಕೆಯ ಸಂಪಾದಕರು. `ಯುಗಪುರುಷ' ಮಾಸ ಪತ್ರಿಕೆಯು ಜನ್ಮ ತಾಳಿದ್ದು ಉಡುಪಿಯಲ್ಲಿ, ೧೯೪೭ ಅಕ್ಟೋಬರ್ ೧೫ರಂದು ಹದಿನೈದರಂದು. ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ವರ್ಷವದು. ಜನಮನದಲ್ಲಿ ಹೊಸ ಉಲ್ಲಾಸ, ನವಚೇತನ ತುಂಬಿದ ಸುಸಂದರ್ಭ. ಬಹುಶಾಃ ಉಡುಪರ ಆ ಉತ್ಸಾಹವೇ `ಯುಗಪುರುಷ'ದ ರೂಪದಲ್ಲಿ ಹೊರಹೊಮ್ಮಿದ್ದಿರಬೇಕು. ಮೂವರ ನೇತೃತ್ವದಲ್ಲಿ ಮೊದಲು ಈ ಪತ್ರಿಕೆ ಕಣ್ಣು ತೆರೆಯಿತು: ಒಬ್ಬರು ಉಡುಪರು, ಇನ್ನೊಬ್ಬರು ಬನ್ನಂಜೆ ರಾಮಾಚಾರ್ಯರು, ಮತ್ತೊಬ್ಬರು ಎಸ್.ಎಲ್.ನಾರಾಯಣ ಭಟ್ಟರು. ಆವಾಗ ಕಲ್ಯಾಣಪುರ ಮುದ್ರಣಾಲಯದಲ್ಲಿ ಮುದ್ರಿತವಾಗುತ್ತಿತ್ತು. ಭಟ್ಟರು ಮತ್ತು ಬನ್ನಂಜೆ ರಾಮಾಚಾರ್ಯರು ಸ್ವಲ್ಪ ಸಮಯದವರೆಗೆ ಮಾತ್ರ ಜೊತೆಗಿದ್ದದ್ದು. ಅನಂತರ ಅವರು ಬೇರೆ ಪತ್ರಿಕೆ ಹೊರತರುವ ವಿಚಾರವನ್ನು ಮಾಡಿದುದರಿಂದ `ಯುಗಪುರುಷ'ದ ಭಾರವನ್ನು ಉಡುಪರ ಹೆಗಲಿಗೇ ಬಿಟ್ಟರು. ಮುಂದೆಲ್ಲ `ಯುಗಪುರುಷ'ದ ಜವಾಬ್ದಾರಿ ಉಡುಪರಿಗೇ ಉಳಿಯಿತು. ಉಡುಪರು ತಮ್ಮ ಪತ್ರಿಕೆಯನ್ನು ತಮ್ಮ `ಮಾನಸಪುತ್ರ' ಎಂದೇ ಬಗೆದರು. ೧೯೪೮ರಲ್ಲಿ `ಯುಗಪುರುಷ'ವನ್ನು ಕಿನ್ನಿಗೋಳಿಗೆ ತಂದರು.

ಉಡುಪರು ಪತ್ರಿಕೆ ನಡೆಸುವುದು ಒಂದು ಉದ್ಯಮ ಎಂದು ಬಗೆದವರಲ್ಲ. ಓದುಗರಲ್ಲಿ ಉತ್ತಮ ಅಭಿರುಚಿ, ಆಸಕ್ತಿ, ಸದ್ಗುಣ ಸಂಸ್ಕಾರಗಳನ್ನು ಒಡಮೂಡಿಸಬೇಕೆಂಬ ಕಳಕಳಿ ಉಡುಪರಿಗೆ ಇತ್ತೇ ಹೊರತು, ಬರಿದೆ ಮನೋರಂಜನೆ ಅವರ ಉದ್ದೇಶವಾಗಿರಲಿಲ್ಲ. ನಾಡಿನ ಹಿರಿಯ ಸಾಹಿತಿಗಳ ಲೇಖನಗಳು, ಕವನಗಳು, ಚಿಂತನೆಗಳೆಲ್ಲವನ್ನು `ಯುಗಪುರುಷ'ವು ತನ್ನ ಓದುಗರಿಗೆ ಒದಗಿಸಿದೆ. `ಯುಗಪುರುಷ'ವನ್ನು ಮುಂದಿಟ್ಟುಕೊಂಡು ಉಡುಪರು ಕಿನ್ನಿಗೋಳಿಯಲ್ಲಿ ಒಂದು ಸಾಂಸ್ಕೃತಿಕ ವೇದಿಕೆಯನ್ನೇ ನಿರ್ಮಾಣ ಮಾಡಿದ್ದು ಅವರ ಬದುಕಿನ ಮಹತ್ವದ ಸಾಧನೆಯೆನ್ನಬಹುದು.

ಈ ಪತ್ರಿಕೆಯ ಮೂಲಕ ಉಡುಪರು ಮಾಡಿದ ಇನ್ನೊಂದು ಅಷ್ತೇ ಮಹತ್ವದ ಕೆಲಸವೆಂದರೆ ಉದಯೋನ್ಮುಖ ಸಾಹಿತಿಗಳನ್ನು ಗಮನಿಸಿದ್ದು, ಪ್ರೋತ್ಸಾಹಿಸಿದ್ದು. ಹೊಸಬರಿಗೆ ಈ ಪತ್ರಿಕೆಯನ್ನು ವೇದಿಕೆಯಾಗಿ ತೆರವು ಮಾಡಿಕೊಟ್ಟರು. ಪತ್ರಿಕೆಯನ್ನು ನಡೆಸುವುದೆಂದರೆ ಸುಲಭದ ಕೆಲಸವೇನಲ್ಲ. `ಯುಗಪುರುಷ' ಮಾತ್ರ ಅನೇಕ ಏಳು-ಬೀಳುಗಳನ್ನು ಕಂಡರೂ ಅಲ್ಲಿಂದ ಇಲ್ಲಿಯತನಕ ಅದು ಪ್ರತಿತಿಂಗಳೂ ತಪ್ಪದೇ ಓದುಗರ ಮುಂದೆ ಹಾಜರಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಇಷ್ಟು ದೀರ್ಘ ಕಾಲ ಬದುಕಿ ಉಳಿದ ಏಕೈಕ ಪತ್ರಿಕೆಯೆಂದರೆ `ಯುಗಪುರುಷ' ಮಾತ್ರ. ಈ ಪತ್ರಿಕೆ ೬೭ ವರ್ಷಗಳಿಂದ ನಿರಂತರವಾಗಿ ಪ್ರಕಟಗೊಳ್ಳುತ್ತಿದೆ.

ಇಂದು ಕಿನ್ನಿಗೋಳಿಗೆ ಹೊರಗಡೆ ಪ್ರಸಿದ್ಧಿ ಇದ್ದುದಾದರೆ ಅದು `ಯುಗಪುರುಷ' ಮತ್ತು ಯುಗಪುರುಷದ ಉಡುಪರಿಂದ. ಪ್ರತಿ ವರ್ಷ ಯುಗಪುರುಷ ಆಶ್ರಯದಲ್ಲಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದರು. ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ, ಗಣರಾಜ್ಯೋತ್ಸವ ದಸರಾ ಮಹೋತ್ಸವ ಇಂಥ ರಾಷ್ಟ್ರೀಯ ಪರ್ವ ದಿನಗಳಂದು ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರು. ನಾಟಕ, ಸಂಗೀತ, ನೃತ್ಯ-ಇಂಥ ಮನೋರಂಜನೆಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. `ಯುಗಪುರುಷ' ಪತ್ರಿಕೆಯ ರಜತ ಮಹೋತ್ಸವ, ತ್ರಿದಶಮಾನೋತ್ಸವ, ಚತುರ್ಥ ದಶಮಾನೋತ್ಸವಗಳನ್ನು ಮೂರು ನಾಲ್ಕು ದಿನಗಳವರೆಗೆ ಹಮ್ಮಿಕೊಂಡು ಸಾಹಿತ್ಯ ಗೋಷ್ಠಿ ಕವಿಗೋಷ್ಠಿಗಳನ್ನು ನಡೆಸುತ್ತಿದ್ದರು. ಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸ ಸಪ್ತಾಹವನ್ನು ಏರ್ಪಡಿಸಿ ರಾಮಾಯಣ, ಮಹಾಭಾರತ, ಭಾಗವತ, ಭಗದ್ಗೀತೆ, ಪುರಾಣ, ಮಹಾಕಾವ್ಯದ ಮೇಲೆ ಪ್ರವಚನ ಕೊಡಿಸುವುದರ ಮೂಲಕ ಸನಾತನ ಧರ್ಮ, ಸಂಸ್ಕೃತಿಯ ಬಗ್ಗೆ ಜಿಜ್ನಾಸೆ ಮೂಡಿಸಿ ಈ ಪ್ರಿಸರದ ಜನತೆಯ ಜ್ಞಾನ ದ್ವಾರವನ್ನು ತೆರೆದವರು ಉಡುಪರು. ಅಷ್ಟೇ ಅಲ್ಲದೇ ಭದ್ರಗಿರಿ ಅಚ್ಯುತ ದಾಸರನ್ನು ಬರ ಮಾಡಿಕೊಂಡು ಹರಿಕಥಾ ಸಪ್ತಾಹವನ್ನು ನಿರಂತರವಾಗಿ ನಡೆಯಿಸಿಕೊಂಡು ಬಂದವರು.

ಈ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಜ್ಞಾನ ದಾಹವನ್ನು ನೀಗಿದ ಉಡುಪರು ಕಾಲವಶರಾದರು. ಆಗ `ಯುಗಪುರುಷ' ನಿಲ್ಲುವುದಿಲ್ಲ. ನಿಲ್ಲಲು ನಾನು ಕೊಡಲಾರೆ ಎಂದು ಮುಂದೆ ಬಂದವರು ಕೊ ಅ ಉಡುಪರ ಮಕ್ಕಳಲ್ಲಿ ಮೂರನೆಯವರಾದ ಭುವನಾಭಿರಾಮ ಉಡುಪ. ತನ್ನ ಉತ್ತಮ ಉದ್ಯೋಗವಾದ ಕರ್ನಾಟಕ ಬ್ಯಾಂಕಿನ ಉದ್ಯೋಗವನ್ನು ಬಿಟ್ಟು `ಯುಗಪುರುಷ' ದ ಉಳಿವಿಗಾಗಿ ಕಟಿಬದ್ಧರಾಗಿ ನಿಂತರು. ಯೋಗ್ಯ ತಂದೆಗೆ ಯೋಗ್ಯ ಮಗನಾಗಿ ತನ್ನ ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ತೋರಿ `ಯುಗಪುರುಷ'ವನ್ನು ಹಿಂದಿಗಿಂತ ಚೆನ್ನಾಗಿ ಪ್ರಕಟಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲ ನಿಸ್ವಾರ್ಥ ಸಮಾಜ ಸೇವಕರಾಗಿ ಜನಮಾನಸದಲ್ಲಿ ನೆಲೆಸಿದ್ದಾರೆ. ಭುವನಾಭಿರಾಮ ಉಡುಪರ ಸಮಜ ಸೇವಾತತ್ಪರತೆಯನ್ನು ಮನಗಂಡು ನೂರಾರು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಪ್ರತಿ ವರ್ಷ ಸಾಧಕರಿಗೆ `ಕೊ. ಅ ಉಡುಪ ಪ್ರಶಸ್ತಿ'ಯನ್ನು ಕೋಡುತ್ತ ಬರುತ್ತಿದ್ದಾರೆ. ಭುವನಾಭಿರಾಮ ಉಡುಪರಿಗೆ ಸಿಕ್ಕ ಪ್ರಶಸ್ತಿಗಳು ಇಂತಿವೆ.

ಪ್ರಶಸ್ತಿಗಳು

ಬದಲಾಯಿಸಿ

ರಾಜ್ಯ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ೨೦೦೩ರಲ್ಲಿ ಜರಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮುಖ್ಯ ಮಂತ್ರಿ ಎಸ್. ಎಮ್. ಕೃಷ್ಣ ಇವರಿಂದ ಕರ್ನಾಟಕದಲ್ಲಿ ಪ್ರಕಟಗೊಳ್ಳುತ್ತಿರುವ ೬೫ ವರ್ಷಗಳಿಂದ ನಿರಂತರವಾಗಿ ಪ್ರಕಟಗೊಂಡು ಪ್ರಥಮ ಸ್ಥಾನದಲ್ಲಿರುವ ಪತ್ರಿಕೆಯ ನೆಲೆಯಲ್ಲಿ ಸನ್ಮಾನ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಿನ್ಜಿಗೋಳಿ ಜನತೆಯಿಂದ ಸನ್ಮಾನ, ದ ಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಕಿನ್ನಿಗೋಳಿ ಯಕ್ಷಲಹರಿಯಿಂದ ಸನ್ಮಾನ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಹೀಗೆ ನೂರಾರು ಸಂಸ್ಥೆಗಳು ಭುವನಾಭಿರಾಮ ಉಡುಪರನ್ನು ಸನ್ಮಾನಿಸಿವೆ.