ಭಾರತೀಯ ಮೋಟಾರು ವಾಹನಗಳ ಕಾಯಿದೆ

ಮೋಟಾರು ವಾಹನಗಳ ಕಾಯ್ದೆ, ೧೯೮೮ ಭಾರತ ಸಂಸತ್ತಿನ ಕಾಯಿದೆಯಾಗಿದ್ದು, ಇದು ರಸ್ತೆ ಸಾರಿಗೆ ವಾಹನಗಳ ಎಲ್ಲಾ ಅಂಶಗಳನ್ನು ನಿಯಂತ್ರಿಸುತ್ತದೆ. ಈ ಕಾಯ್ದೆಯು ಜುಲೈ ೧, ೧೯೮೯ ರಿಂದ ಜಾರಿಗೆ ಬಂದಿತು. ಈ ಕಾಯ್ದೆಯು ೧೯೩೯ ರ ಮೋಟಾರು ವಾಹನಗಳ ಕಾಯ್ದೆಯನ್ನು ಬದಲಾದ ರೂಪವಾಗಿದೆ. ಅದಕ್ಕೂ ಮುನ್ನ, ಮೋಟಾರು ವಾಹನ ಕಾಯ್ದೆ, ೧೯೧೪ ಜಾರಿಯಲ್ಲಿತ್ತು.[೧] ಈ ಕಾಯ್ದೆಯನ್ನು ೨೦೧೯ ರ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯಿಂದ ತಿದ್ದುಪಡಿ ಮಾಡಲಾಗಿದೆ. ಈ ಕಾಯಿದೆಯು ಚಾಲಕರ ಪರವಾನಗಿ, ಮೋಟಾರು ವಾಹನಗಳ ನೋಂದಣಿ, ಪರವಾನಗಿಗಳ ಮೂಲಕ ಮೋಟಾರು ವಾಹನಗಳ ನಿಯಂತ್ರಣ, ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳು, ಸಂಚಾರ ನಿಯಂತ್ರಣ, ವಿಮೆ, ಹೊಣೆಗಾರಿಕೆ, ಅಪರಾಧಗಳು ಮತ್ತು ದಂಡಗಳು ಇತ್ಯಾದಿಗಳಿಗೆ ಸಂಬಂಧಿಸಿದ ಶಾಸಕಾಂಗ ನಿಬಂಧನೆಗಳು ಇತ್ಯಾದಿಗಳ ಬಗ್ಗೆ ವಿಸ್ತಾರವಾದ ವಿವರ ಒದಗಿಸುತ್ತದೆ.[೨]

ವ್ಯಾಖ್ಯಾನ ಬದಲಾಯಿಸಿ

ಕಾಯಿದೆಯ ಪ್ರಮುಖ ವ್ಯಾಖ್ಯಾನವನ್ನು ಕೆಳಗೆ ನೀಡಲಾಗಿದೆ:

ಮೋಟಾರು ವಾಹನ: ಬಾಹ್ಯ ಅಥವಾ ಆಂತರಿಕ ಶಕ್ತಿಯ ಮೂಲದಿಂದ ಮುಂದೂಡುವಿಕೆಯ ಶಕ್ತಿಯು ಉತ್ಪಾದನೆಯಾಗಿ, ರಸ್ತೆಗಳಲ್ಲಿ ಯಾಂತ್ರಿಕವಾಗಿ ಮುಂದೂಡಲು ಬಳಸುವ ಯಾವುದೇ ವಾಹನ.

ಅಪಘಾತ ಹಕ್ಕುಗಳು ಬದಲಾಯಿಸಿ

ಮಾರಣಾಂತಿಕ ವಾಹನ ಅಪಘಾತಗಳಲ್ಲಿ ಬಲಿಯಾದವರ ಕುಟುಂಬಕ್ಕೆ ಮಧ್ಯಂತರ ಪರಿಹಾರವಾಗಿ, ಮೇಲಿನ ಮಿತಿಯಿಲ್ಲದೆ, ₹೫,೦೦,೦೦೦ (ಯುಎಸ್ $ ೭,೨೦೦) ನೀಡಲು ಅವಕಾಶವಿದೆ. ರಸ್ತೆ ಅಪಘಾತ ಪರಿಹಾರದ ಹಕ್ಕುಗಳ ಪ್ರಕರಣಗಳನ್ನು ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿಯಲ್ಲಿ ನಿರ್ಧರಿಸಲಾಗುತ್ತದೆ.[೩]

ಹಿಂದಿನ ಕಾನೂನುಗಳು ಬದಲಾಯಿಸಿ

"ಭಾರತೀಯ ಮೋಟಾರ್ ವಾಹನಗಳ ಕಾಯ್ದೆ, ೧೯೧೪" ಒಂದು ಕೇಂದ್ರ ಶಾಸನವಾಗಿದ್ದು, ಅದು ಬ್ರಿಟಿಷ್ ಭಾರತದಲ್ಲಿ ಅಂಗೀಕರಿಸಲ್ಪಟ್ಟಿತ್ತು ಮತ್ತು ಬ್ರಿಟಿಷ್ ಭಾರತದ ಎಲ್ಲಾ ಪ್ರದೇಶಗಳಿಗೂ ಅನ್ವಯಿಸುತ್ತಿತ್ತು.[೪] ಕೆಲವು ರಾಜಪ್ರಭುತ್ವಗಳು ಸ್ಥಳೀಯ ಮಾರ್ಪಾಡುಗಳೊಂದಿಗೆ ಇದನ್ನು ಅನುಸರಿಸಿದವು.[೫] ೧೯ ನೇ ಶತಮಾನದ ಅಂತ್ಯದ ವೇಳೆಗೆ ಭಾರತದಲ್ಲಿ ಮೋಟಾರು ವಾಹನಗಳನ್ನು ಮೊದಲು ಪರಿಚಯಿಸಲಾಗಿತ್ತು ಮತ್ತು ೧೯೧೪ ರ ಕಾಯಿದೆಯು ಅವುಗಳ ಬಳಕೆಯನ್ನು ನಿಯಂತ್ರಿಸುವ ಮೊದಲ ಶಾಸನವಾಗಿತ್ತು.[೬] ಇದು ೧೮ ವಿಭಾಗಗಳನ್ನು ಹೊಂದಿದ್ದು, ವಾಹನಗಳು ಮತ್ತು ವಾಹನ ಚಾಲಕರನ್ನು ನೋಂದಾಯಿಸುವ ಮತ್ತು ಪರವಾನಗಿ ನೀಡುವ ಮತ್ತು ನಿಯಮಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಸ್ಥಳೀಯ ಸರ್ಕಾರಗಳಿಗೆ ನೀಡಿತು. ೧೯೪೦ ರಲ್ಲಿ ಜಾರಿಗೆ ಬಂದ ಮೋಟಾರು ವಾಹನ ಕಾಯ್ದೆ ೧೯೩೯ ರಲ್ಲಿ ಬದಲಾಯಿಸಲಾಗಿತ್ತು.

ತಿದ್ದುಪಡಿಗಳು ಬದಲಾಯಿಸಿ

ಭಾರತೀಯ ಮೋಟಾರು ವಾಹನ ಕಾಯಿದೆಗಳು, ೧೯೧೪ ರಿಂದ ೨೦೧೬ ಬದಲಾಯಿಸಿ

"ಭಾರತೀಯ ಮೋಟಾರು ವಾಹನಗಳ ಕಾಯ್ದೆ, ೧೯೧೪" ಅನ್ನು ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಅಂಗೀಕರಿಸಿದ "ಭಾರತೀಯ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ ೧೯೨೦" (೧೯೨೦ ರ ಕಾಯ್ದೆ XXVII) ಯಿಂದ ತಿದ್ದುಪಡಿ ಮಾಡಲಾಯಿತು. ೧೯೨೦ ರ ಸೆಪ್ಟೆಂಬರ್ ೨ ರಂದು ಅಂದಿನ ಭಾರತದ ಗವರ್ನರ್ ಜನರಲ್ ಅವರಿಂದ ಒಪ್ಪಿಗೆಯನ್ನು ಪಡೆಯಿತು. ಈ ತಿದ್ದುಪಡಿ ಕಾಯಿದೆಯು, ೧೯೧೪ ರ ಕಾಯಿದೆಯ ೧೧ ಮತ್ತು ೧೮ ನೇ ವಿಭಾಗಗಳನ್ನು ತಿದ್ದುಪಡಿ ಮಾಡಿತು.[೭]

ಈ ಕಾಯ್ದೆಯನ್ನು "ಭಾರತೀಯ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ, ೧೯೨೪" (೧೯೨೪ ರ ಕಾಯಿದೆ ಸಂಖ್ಯೆ XV) ರಿಂದ ಮತ್ತೆ ತಿದ್ದುಪಡಿ ಮಾಡಲಾಗಿದೆ. ಈ ಕಾಯಿದೆಯು ಸೆಪ್ಟೆಂಬರ್ ೧೮, ೧೯೨೪ ರಂದು ಗವರ್ನರ್ ಜನರಲ್‌ನಿಂದ ಒಪ್ಪಿಗೆಯನ್ನು ಪಡೆಯಿತು. ಇದಕ್ಕೆ "ಭಾರತೀಯ ಮೋಟಾರು ವಾಹನಗಳ ಕಾಯ್ದೆ ೧೯೧೪ ಅನ್ನು ಕೆಲವು ಉದ್ದೇಶಗಳಿಗಾಗಿ ಮತ್ತಷ್ಟು ತಿದ್ದುಪಡಿ ಮಾಡಲು ಇನ್ನೊಂದು ಕಾಯಿದೆ" ಎಂಬ ಶೀರ್ಷಿಕೆಯನ್ನು ಹೊಂದಿತ್ತು ಮತ್ತು ೧೯೧೪ ರ ಕಾಯಿದೆಯ ಸೆಕ್ಷನ್ ೧೧ ರ ಪದಗಳನ್ನು ಸೇರಿಸುವ ಮೂಲಕ, ವಿಭಾಗ ೧೧ ರ ಉಪವಿಭಾಗ (೨) ರ ಷರತ್ತು (ಎ) ನಲ್ಲಿ ತಿದ್ದುಪಡಿ ಮಾಡಲಾಗಿದೆ.[೮]

ಮೋಟಾರು ವಾಹನ ಕಾಯ್ದೆಯನ್ನು ಮತ್ತೆ ೨೦೧೬ ರಲ್ಲಿ ತಿದ್ದುಪಡಿ ಮಾಡಲಾಯಿತು.

ಭಾರತೀಯ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ, ೨೦೧೭ ಬದಲಾಯಿಸಿ

ಇದು ಮೋಟಾರು ವಾಹನ ಕಾನೂನುಗಳ ಗಮನಾರ್ಹವಾದ ನವೀಕರಣವಾಗಿದೆ. ಭ್ರಷ್ಟಾಚಾರವನ್ನು ಪರಿಶೀಲಿಸಲು, ಟ್ರಾಫಿಕ್ ಪೊಲೀಸರು ಮತ್ತು ಆರ್‌ಟಿಒ ಅಧಿಕಾರಿಗಳ ಮೇಲೆ ಬಾಡಿ ಕ್ಯಾಮ್‌ಗಳನ್ನು ಅಳವಡಿಸಲು ಇದು ಸೂಚಿಸುತ್ತದೆ. ಮಧ್ಯಪಾನ ಕುಡಿದು ವಾಹನ ಚಲಿಸಿ ನಡೆಯುವ ಸಾವುಗಳಿಗೆ ಇದ್ದ ೨ ವರ್ಷಗಳ ಜೈಲು ಶಿಕ್ಷೆಯ ಬದಲು ಅದನ್ನು ೭ ವರ್ಷಗಳಿಗೆ ವಿಸ್ತರಿಸಲಾಯಿತು. ಎಲ್ಲಾ ವಾಹನಗಳಿಗೆ ವಿಮೆ ಮಾಡುವುದು ಕಡ್ಡಾಯವಾಗಿದೆ ಮತ್ತು ಅಪಘಾತ ಪ್ರಮಾಣವನ್ನು ಕಡಿಮೆ ಮಾಡಲು, ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ದಂಡ ವಿಧಿಸಲು ಇದು ಉದ್ದೇಶಿಸಿದೆ.[೯]

ಆದರೂ, ರಾಜ್ಯಸಭೆಯಲ್ಲಿ ಬರುವ ಅಡೆತಡೆಗಳು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಬೆಂಬಲದ ಕೊರತೆಯಿಂದಾಗಿ, ಮಸೂದೆ ಕಾರ್ಯರೂಪಕ್ಕೆ ಬರಲು ವಿಫಲವಾಯಿತು. ಮಧ್ಯಂತರ ಬಜೆಟ್ ಅಧಿವೇಶನದ ಮುಕ್ತಾಯದ ನಂತರ ಮತ್ತು ಸಾರ್ವತ್ರಿಕ ಚುನಾವಣೆಗಳ ಲೆಕ್ಕದಲ್ಲಿ ಇದು ಕಳೆದುಹೋಯಿತು.[೧೦]

ಭಾರತೀಯ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ, ೨೦೧೯ ಬದಲಾಯಿಸಿ

ಮೋಟಾರು ವಾಹನಗಳ (ತಿದ್ದುಪಡಿ) ಮಸೂದೆ, ೨೦೧೯ ರಾಜ್ಯಗಳ ಸಾರಿಗೆ ಸಚಿವರ ಗುಂಪಿನ ಶಿಫಾರಸುಗಳನ್ನು ಆಧರಿಸಿದೆ.[೧೧] ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ವ್ಯಕ್ತಿಗಳನ್ನು ತಡೆಯಲು ಈ ಕಾಯ್ದೆ ಬಯಸಿದ್ದರಿಂದ, ಇದು ಕುಡಿದು ವಾಹನ ಚಲಾಯಿಸುವುದು, ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು, ಅಪಾಯಕಾರಿ ಚಾಲನೆ, ಅತಿಯಾದ ವೇಗ ಇತ್ಯಾದಿಗಳಿಗೆ ಭಾರಿ ದಂಡ ವಿಧಿಸಿದೆ. ಈ ದಂಡಗಳು ಪ್ರತಿವರ್ಷ ಏಪ್ರಿಲ್ ೦೧ ರಂದು ಶೇಕಡಾ ೧೦ ರಷ್ಟು ಹೆಚ್ಚಾಗಲಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.[೧೨] ಹೊಸ ಕಾಯಿದೆಯು ಚಾಲನಾ ಪರವಾನಗಿಗಳನ್ನು ನವೀಕರಿಸುವ ಅವಧಿಯನ್ನು, ಅವಧಿ ಮುಗಿದ ನಂತರ ಒಂದು ತಿಂಗಳಿಂದ ಒಂದು ವರ್ಷಕ್ಕೆ ವಿಸ್ತರಿಸಿದೆ. ನವೀಕರಣವು ಒಂದು ವರ್ಷಕ್ಕಿಂತ ಹೆಚ್ಚು ವಿಳಂಬವಾದರೆ ಮಾತ್ರ, ಚಾಲಕನು ಸಾಮರ್ಥ್ಯದ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅಪಘಾತಕ್ಕೊಳಗಾದವರಿಗೆ ತುರ್ತು ವೈದ್ಯಕೀಯ ಅಥವಾ ವೈದ್ಯಕೀಯೇತರ ಸಹಾಯವನ್ನು ನೀಡುವ ಜನರನ್ನು, ಯಾವುದೇ ನಾಗರಿಕ ಅಥವಾ ಕ್ರಿಮಿನಲ್ ಹೊಣೆಗಾರಿಕೆಯಿಂದ ರಕ್ಷಿಸಲು, ಈ ಕಾಯಿದೆಯು ಭರವಸೆ ನೀಡುತ್ತದೆ. ಹಿಟ್ ಮತ್ತು ರನ್‌ನಿಂದಾಗಿ ಸಾವಿಗೆ ಅಥವಾ ತೀವ್ರವಾದ ಗಾಯಕ್ಕೆ ಒಳಗಾದವರಿಗೆ ನೀಡುವ ಕನಿಷ್ಠ ಪರಿಹಾರವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.[೧೩]

ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆಯು ೨೦೧೯ ರ ಸೆಪ್ಟೆಂಬರ್ ೧ ರಂದು ಜಾರಿಗೆ ಬಂದಿತು.[೧೪]

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು" (PDF). Archived from the original (PDF) on 2012-04-28. Retrieved 2019-09-18.
  2. "ಆರ್ಕೈವ್ ನಕಲು". Archived from the original on 2012-04-13. Retrieved 2019-09-18.
  3. "ಆರ್ಕೈವ್ ನಕಲು". Archived from the original on 2016-08-16. Retrieved 2019-09-18.
  4. "ಆರ್ಕೈವ್ ನಕಲು". Archived from the original on 2019-09-24. Retrieved 2019-09-18.
  5. "ಆರ್ಕೈವ್ ನಕಲು". Archived from the original on 2018-01-30. Retrieved 2019-09-18.
  6. "ಆರ್ಕೈವ್ ನಕಲು". Archived from the original on 2018-03-10. Retrieved 2019-09-18.
  7. "ಆರ್ಕೈವ್ ನಕಲು" (PDF). Archived from the original (PDF) on 2016-03-03. Retrieved 2019-09-18.
  8. "ಆರ್ಕೈವ್ ನಕಲು" (PDF). Archived from the original (PDF) on 2016-03-04. Retrieved 2019-09-18.
  9. http://economictimes.indiatimes.com/articleshow/62219376.cms
  10. https://www.thehindubusinessline.com/news/amendments-to-motor-vehicle-act-chit-fund-act-among-38-bills-set-to-lapse/article26261050.ece
  11. https://www.thehindubusinessline.com/opinion/columns/slate/all-you-wanted-to-know-about-the-new-motor-vehicles-act/article29376425.ece
  12. "ಆರ್ಕೈವ್ ನಕಲು" (PDF). Archived from the original (PDF) on 2019-10-05. Retrieved 2019-09-18.
  13. https://www.news18.com/news/auto/motor-vehicle-amendment-bill-2019-top-5-things-to-know-2242619.html
  14. https://www.autocarindia.com/car-news/motor-vehicles-amendment-act-2019-comes-into-force-413978