ಉಷ್ಣ ಮತ್ತು ಸಮಶೀತೋಷ್ಣವಲಯಗಳನ್ನು ಬೇರ್ಪಡಿಸುವ ದೇಶದ ಮಧ್ಯಭಾಗದಿಂದ ಹಾದುಹೋಗುತ್ತದಾದರೂ, ಬಹುತೇಕ ಭಾರತದ ವಾಯುಗುಣ ಉಷ್ಣವಲಯದ ಮಾನ್ಸೂನ್ ವಾಯುಗುಣವಾಗಿದೆ. ಭಾರತದ ವಾರ್ಷಿಕ ವಾಯುಗುಣವನ್ನು ನಾಲ್ಕು ಋತುಗಳನ್ನಾಗಿ ವಿಂಗಡಿಸಬಹುದು. ಅವೇನೆಂದರೆ (ಕ)ಚಳಿಗಾಲ (ಖ) ಬೇಸಿಗೆಕಾಲ : (ಗ) ನೈಋತ್ಯ ಮಾನ್ಸೂನ್ ಅಥವಾ ಮಳೆಗಾಲ (ಘ) ಈಶಾನ್ಯ ಮಾನ್ಸೂನ್ ಅಥವಾ ನಿರ್ಗಮನ ಮಾನ್ಸೂನ್ ಕಾಲ. ಕೋಪೆನ್ ಪದ್ಧತಿಯ ಪ್ರಕಾರ ಭಾರತದ ವಾಯುಗುಣವನ್ನು ಆರು ಮುಖ್ಯ ವಲಯಗಳಾಗಿ ವಿಂಗಡಿಸಬಹುದು. ಅವೆಂದರೆ (ಕ) ಉಷ್ಣವಲಯದ ತೇವಾಂಶಭರಿತ ವಾಯುಗುಣ (ಖ) ಉಷ್ಣವಲಯದ ತೇವಾಂಶಭರಿತ ಮತ್ತು ಶುಷ್ಕ ವಾಯುಗುಣ (ಗ) ಉಷ್ಣವಲಯದ ಅರೆ ಶುಷ್ಕ ವಾಯುಗುಣ (ಘ) ಮರುಬೂಮಿ ವಾಯುಗುಣ (ಙ)ಉಪ ಉಷ್ಣವಲಯದ ಮಳೆಬೀಳುವ ವಾಯುಗುಣ (ಚ) ಆಲ್ಪೈನ್ (ಪರ್ವತ ಮಾದರಿ) ವಾಯುಗುಣ.
ಬಹುತೇಕ ಉಷ್ಣವಲಯದ ಪ್ರದೇಶಗಳಂತೆ ಭಾರತದ ವಾಯುಗುಣವೂ ಕೂಡ ಅತ್ಯಂತ ಅಸ್ಠಿರವಾಗಿದ್ದು, ಆಗಾಗ್ಗೆ ಬರ, ಪ್ರವಾಹ, ಚಂಡಮಾರುತದಂಥ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುತ್ತವೆ. ಒಂದು ವ್ಯಾಪಕವಾದ ಒಮ್ಮತಾಭಿಪ್ರಾಯದಂತೆ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಬದಲಾಗುತ್ತಿರುವ ಸಸ್ಯವಲಯಗಳಿಂದಾಗಿ ಪ್ರಾಕೃತಿಕ ವಿಕೋಪಗಳ ಆವರ್ತನ ಬದಲಾಗುತ್ತಿದ್ದು ಅವು ಮತ್ತಷ್ಟು ಹಾನಿಕಾರಕವಾಗುವ ಸಂಭವವಿದೆ.

ವಲಯಗಳು

ಬದಲಾಯಿಸಿ

ಭಾರತವು ವೈವಿಧ್ಯಮಯ ವಾಯುಗುಣಗಳಿಗೆ ನೆಲೆಯಾಗಿದೆ. ಇಲ್ಲಿ ದಕ್ಷಿಣದಲ್ಲಿ ಉಷ್ಣವಲಯದ ವಾಯುಗುಣವಿದ್ದರೆ, ಇನ್ನೊಂದೆಡೆ ಉತ್ತರದಲ್ಲಿ ಆಲ್ಪೈನ್ (ಪರ್ವತ ಮಾದರಿ) ವಾಯುಗುಣ ಕಂಡುಬರುತ್ತದೆ.ಈ ದೇಶದ ವಾಯುಗುಣವು ಹಿಮಾಲಯ ಮತ್ತು ಥಾರ್ ಮರುಭೂಮಿಗಳಿಂದ ಅತ್ಯಂತ ಪ್ರಭಾವಿತವಾಗಿದೆ. ಹಿಮಾಲಯ ಮತ್ತು ಪಾಕಿಸ್ತಾನದಲ್ಲಿನ ಹಿಂದೂ ಕುಶ್ ಪರ್ವತಗಳು ಮಧ್ಯ ಏಷ್ಯಾದಿಂದ ಬೀಸುವ ಶೀತಲ ಮಾರುತುಗಳನ್ನು ತಡೆಯುವದರಿಂದ, ಭಾರತವು ಇದೇ ಅಕ್ಷಾಂಶದಲ್ಲಿರುವ ಇತರೆ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಥಾರ್ ಮರುಭೂಮಿಯು, ಜೂನ್ ನಿಂದ ಸೆಪ್ಟಂಬರ್ ತಿಂಗಳುಗಳಲ್ಲಿ ಉಂಟಾಗುವ ಭಾರತದ ಬಹುಭಾಗ ಮಳೆಗೆ ಕಾರಣವಾದ ತೇವಾಂಶಭರಿತ ನೈಋತ್ಯ ಮಾರುತಗಳನ್ನು ಭಾರತದೆಡೆಗೆ ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಉಷ್ಣವಲಯದ ತೇವಾಂಶಭರಿತ ವಾಯುಗುಣ

ಬದಲಾಯಿಸಿ

ಉಷ್ಣವಲಯದ ಮಳೆಬೀಳುವ ವಾಯುಗುಣದ ಪ್ರದೇಶಗಳು ನಿರಂತರ ಬೆಚ್ಚಗಿದ್ದು, ಸಾಮಾನ್ಯವಾಗಿ ಅಲ್ಲಿನ ಉಷ್ಣಾಂಶ ೧೮°C (೬೪°F) ಗಿಂತ ಕಡಿಮೆಯಾಗುವದಿಲ್ಲ. ಉಷ್ಣವಲಯದ ತೇವಾಂಶಭರಿತ ವಾಯುಗುಣ ಪ್ರದೇಶಗಳು ಅತಿ ಹೆಚ್ಚು ತೇವಾಂಶವನ್ನು ಹೊಂದಿರುತ್ತವೆ. ಮಲಬಾರ್ ತೀರ, ಪಶ್ಚಿಮ ಘಟ್ಟಗಳು, ದಕ್ಷಿಣ ಅಸ್ಸಾಂ ಮತ್ತು ದ್ವೀಪ ಪ್ರದೇಶಗಳಾದ ಲಕ್ಷದ್ವೀಪ ಮತ್ತು ಅಂಡಮಾನ್ - ನಿಕೋಬಾರ್ ಗಳಲ್ಲಿ ಇಂಥಹ ಹವಾಗುಣ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ವಾರ್ಷಿಕ ಸರಾಸರಿ ೨೦೦೦ ಮಿ.ಮೀ ಗಿಂತಲೂ ಹೆಚ್ಚು ಮಳೆಯಗುತ್ತದೆ. ಇಲ್ಲಿ ಬಹು ಅಂಶ ಮಳೆ ಮೇ ಮತ್ತು ನವೆಂಬರ್ ತಿಂಗಳುಗಳ ಮಧ್ಯ ಉಂಟಾದರೂ ಇದು ಇಲ್ಲಿನ ಸಸ್ಯ ವರ್ಗ ವರ್ಷವಿಡೀ ಹಚ್ಚ ಹಸಿರಾಗಿರುವಷ್ಟು ತೇವಾಂಶವನ್ನು ವದಗಿಸುತ್ತದೆ. ವ್ಯಾಪಕವಾಗಿ ಸುರಿಯುವ ಮಾನ್ಸೂನ್ ಮಳೆಯಿಂದಾಗಿ ಇಲ್ಲಿ ಅತ್ಯಧಿಕ ಜೈವಿಕ ವೈವಿಧ್ಯತೆ ಕಂಡುಬರುತ್ತದೆ.

ಉಷ್ಣವಲಯದ ತೇವಾಂಶಭರಿತ ಮತ್ತು ಶುಷ್ಕ ವಾಯುಗುಣ

ಬದಲಾಯಿಸಿ

ಉಷ್ಣವಲಯದ ತೇವಾಂಶಭರಿತ ಪ್ರದೇಶಗಳಿಗಿಂತ ಗಮನಾರ್ಹವಾಗಿ ವಣ ಹವೆ ಹೊಂದಿದ್ದು,ಉಷ್ಣವಲಯದ ತೇವಾಂಶಭರಿತ ಮತ್ತು ಶುಷ್ಕ ವಾಯುಗುಣವು ಪಶ್ಚಿಮ ಘಟ್ಟಗಳ ಮಳೆ ನೆರಳು ಪ್ರದೇಶಗಳನ್ನು ಹೊರತುಪಡಿಸಿ, ಭಾರತದ ಪರ್ಯಾಯ ದ್ವೀಪದ ಬಹುತೇಕ ಭಾಗಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಛಳಿಗಾಲ ಮತ್ತು ಬೇಸಿಗೆ ಕಾಲಗಳು ಅತ್ಯಂತ ವಣ ಹವೆ ಹೊಂದಿದ್ದು, ಬೇಸಿಗೆ ಕಾಲದಲ್ಲಿ ಉಷ್ಣತೆ ಅತ್ಯಂತ ಹೆಚ್ಚಾಗಿರುತ್ತದೆ. ಮೇ ತಿಂಗಳಿನಲ್ಲಿ ಮೈದಾನ ಪ್ರದೇಶಗಳಲ್ಲಿ ಉಷ್ಣತೆ ೫೦°C ಗಿಂತ ಹೆಚ್ಚಾಗುವ ಸಂಭವವಿದ್ದು, ಉಷ್ಣ ಹವೆಯಿಂದಾಗಿ ಹಲವಾರು ಜನರ ಪ್ರಾಣಕ್ಕೆ ಅಪಾಯವುಂಟಾಗುತ್ತದೆ. ಇಲ್ಲಿ ಮಳೆಗಾಲವು ಜೂನ್ ಮತ್ತು ಸೆಪ್ಟಂಬರ್ ತಿಂಗಳುಗಳ ಮಧ್ಯ ಕಂಡುಬರುತ್ತದೆ. ಈ ಕಾಲದಲ್ಲಿ ಈ ಪ್ರದೇಶದಲ್ಲಿ ಸರಾಸರಿ ೭೫೦-೧೫೦೦ ಮಿ.ಮೀ ಮಳೆ ಸಂಭವಿಸುತ್ತದೆ.

ಉಷ್ಣವಲಯದ ಶುಷ್ಕ ವಾಯುಗುಣ

ಬದಲಾಯಿಸಿ

ಉಷ್ಣವಲಯದ ಶುಷ್ಕ ವಾಯುಗುಣವು ಮಳೆಯಿಂದ ದೊರಕುವ ತೇವಾಂಶಕ್ಕಿಂತ ಬಾಷ್ಪೀಕರಣದಿಂದ ಕಳೆದು ಹೋಗುವ ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ; ಇದನ್ನು ಮೂರು ಉಪ ವಾಯುಗುಣಗಳನ್ನಾಗಗಿ ವಿಂಗಡಿಸಬಹುದು. ಮೊದಲನೆಯದಾಗಿ ಉಷ್ಣವಲಯದ ಅರೆ ಶುಷ್ಕ ವಾಯುಗುಣ; ಇದು ಪಶ್ಚಿಮ ಘಟ್ಟಗಳ ಮಳೆ ನೆರಳು ಪ್ರದೇಶಗಳಲ್ಲಿ ಕಂಡುಬರುತ್ತದೆ, ಇಲ್ಲಿ ೪೦೦-೭೦೦ ಮಿ.ಮೀ ಮಳೆ ಉಂಟಾಗುತ್ತದೆ. ಇದು ಕರ್ನಾಟಕದ ಬಯಲು ಪ್ರದೇಶ, ತಮಿಳುನಾಡಿನ ಒಳನಾಡು ಪ್ರದೇಶ, ಪಶ್ಚಿಮ ಆಂಧ್ರ ಪ್ರದೇಶ ಮತ್ತು ಮಧ್ಯ ಮಹಾರಾಷ್ಟ್ರವನ್ನು ಒಳಗೊಂಡಿದೆ. ಮಾನ್ಸೂನ್ ಆಗಮನದಲ್ಲಿ ಆಗುವ ತಡ ಮತ್ತು ಅನಿಶ್ಚಿತ ಮಳೆಯಿಂದಾಗೆ ಈ ಭಾಗವು ಆಗಾಗ ಬರ ತುತ್ತಾಗುತ್ತದೆ. ಭಾರತದ ಪಶ್ಚಿಮದ ಭಾಗದ ಗುಜರಾತ್ ನಲ್ಲಿ ವಾಯುಗುಣ ವೈವಿಧ್ಯಮಯವಾಗಿದೆ. ಚಳಿಗಾಲದಲ್ಲಿ ಹಗಲಿನ ತಾಪಮಾನ ಸರಾಸರಿ ೨೯°C (೮೪°F) ಆಗಿದ್ದು, ರಾತ್ರಿಯಲ್ಲಿ ಉಷ್ಣತೆ ೧೨°C (೫೪°F)ನ ಆಸುಪಾಸು ಇರುತ್ತದೆ. ಆಕಾಶವು ಹಗಲು ಮತ್ತು ರಾತ್ರಿ ಮೋಡಗಳಿಲ್ಲದೆ ಶುಭ್ರವಾಗಿರುತ್ತವೆ. ಬೇಸಿಗೆಯಲ್ಲಿ ಹಗಲಗಳು ಬಿಸಿ ಮತ್ತು ಶುಷ್ಕವಾಗಿದ್ದು ಸರಾಸರಿ ತಾಪಮಾನ ೪೧ ° C (೧೦೬ ° F) ಇರುತ್ತದೆ. ರಾತ್ರಿಗಳಲ್ಲಿ ಉಷ್ಣತೆ ೨೯ ° C (೮೪ ° F) ಗಿಂತ ಅಧಿಕವಾಗಿರುತ್ತದೆ. ಮಾನ್ಸೂನ್ ಬರುವಿಗೂ ಮೊದಲು ತಾಪಮಾನ ಬೇಸಿಗೆಗಿಂತ ಬೇರೆಯಾಗಿರದಿದ್ದರೂ, ಅತಿಯಾದ ಆರ್ದ್ರತೆಯಿಂದಾಗಿ ವಾತಾವರಣ ಅಹಿತಕರವಾಗಿರುತ್ತದೆ. ಮಾನ್ಸೂನಿನ ಆಗಮನದಿಂದ ಉಷ್ಣತೆ ಕಡಿಮೆ ಮತ್ತು ತೇವಾಂಶ ಅಧಿಕವಾಗುತ್ತದೆ; ಹಗಲಿನಲ್ಲಿ ತಾಪಮಾನ ಸರಾಸರಿ ೩೫°C (೯೫°F) ಮತ್ತು ರಾತ್ರಿ ೨೭°C (೮೧°F) ಇರುತ್ತದೆ. ಈ ಮಳೆ ಋತುವಿನಲ್ಲಿ ಸಂಭವಿಸುತ್ತದೆ ಮತ್ತು ಕೆಲವೊಮ್ಮೆ ತೀವ್ರ ಪ್ರವಾಹಗಳು ಕಂಡುಬರುತ್ತವೆ. ಥಾರ್ ಮರುಭೂಮಿಯ ಪೂರ್ವದಲ್ಲಿರುವ ಪಂಜಾಬ್, ಹರ್ಯಾಣ ಮತ್ತು ಆಸುಪಾಸಿನ ಭಾಗಗಳಲ್ಲಿ ಉಷ್ಣವಲಯದ ಸ್ಟೆಪ್ಪಿ ವಾಯುಗುಣ ಕಂಡುಬರುತ್ತದೆ. ಈ ಭಾಗಗಳಲ್ಲಿನ ತಾಪಮಾನ ಬೇಸಿಗೆಯಲ್ಲಿ ೫೦°C ಇಂದ ಛಳಿಗಾಲದಲ್ಲಿ -೨°C ಗಳಷ್ಟು ಬದಲಾವಣೆ ಕಂಡುಬರುತ್ತದೆ.

ಮರುಬೂಮಿ (ಶುಷ್ಕ) ವಾಯುಗುಣ

ಬದಲಾಯಿಸಿ

ರಾಜಸ್ಥಾನದ ಬಹುತೇಕ ಭಾಗಗಳು ಉಷ್ಣವಲಯದ ಶುಷ್ಕ ವಾಯುಗುಣಕ್ಕೆ ಒಳಪಟ್ಟಿವೆ. ಇಲ್ಲಿ ವಾರ್ಷಿಕ ಸರಾಸರಿ ೩೦೦ ಮಿ.ಮೀ ಗಿಂತಲೂ ಕಡಿಮೆ ಮಳೆ ಉಂಟಾಗುತ್ತದೆ. ಇಲ್ಲಿ ಬಹುಭಾಗ ಮಳೆ ಜೂನ್ ನಿಂದ ಸೆಪ್ಟಂಬರ್ ತಿಂಗಳುಗಳ ಮಧ್ಯ ಉಂಟಾಗುವ ಮೋಡಗಳ ಸ್ಫೋಟ(cloud burst)ದಿಂದ ಉಂಟಾಗುತ್ತದೆ. ಇಂಥ ಮಳೆ ಅನಿರ್ದಿಷ್ಟವಾಗಿದ್ದು, ಒಂದು ವರ್ಷ ಮಳೆ ಬಂದರೆ ಮತ್ತೆರೆಡು ವರ್ಷ ಮಳೆ ಕಾಣದಿರಬಹುದು. ಗಾಳಿಯಲ್ಲಿ ನಿರಂತರವಾಗಿ ಉಂಟಾಗುವ ಕೆಳಮುಖ ವಾಯು ಪ್ರವಾಹ ಮತ್ತು ಇತರೆ ಕಾರಣಗಳು ವಾತಾವರಣದಲ್ಲಿರುವ ತೇವಾಂಶ ಮಳೆಯಾಗಿ ಸುರಿಯದಂತೆ ತಡೆಯುತ್ತವೆ. ಬೇಸಿಗೆಯ ತಿಂಗಳುಗಳಾದ ಮೇ ಮತ್ತು ಜೂನ್ ನಲ್ಲಿ ಉಷ್ಣತೆ ಅತ್ಯಂತ ಹೆಚ್ಚಾಗಿರುತ್ತದೆ, ಸರಾಸರಿ ಮಾಸಿಕ ಉಷ್ಣತೆ ೩೫°C (೧೨೨°F) ಆಸುಪಾಸು ಇರುತ್ತದೆ. ಕೆಲವು ದಿನಗಳಲ್ಲಿ ಗರಿಷ್ಥ ತಾಪಮಾನ ೫೦°C (೧೨೨°F) ಗಿಂತಲೂ ಹೆಚ್ಚಾಗಿರುತ್ತದೆ. ಮಧ್ಯ ಏಷ್ಯಾದಿಂದ ಬೀಸುವ ಶೀತಲ ಮಾರುತಗಳಿಂದ ಛಳಿಗಾಲದಲ್ಲಿ ಕೆಲವೊಮ್ಮೆ ಉಷ್ಣತೆ ಸೊನ್ನೆ ಡಿಗ್ರಿಗಿಂತಲೂ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ದೈನಂದಿನ ಉಷ್ಣತೆಯ ಶ್ರೇಣಿ ೧೪°C (೨೫.೨°F) ಗಿಂತಲೂ ಅಧಿಕವಾಗಿದ್ದು, ಅದು ಛಳಿಗಾಲದಲ್ಲಿ ಇನ್ನೂ ಹೆಚ್ಚಾಗುತ್ತದೆ.

ಉಪ ಉಷ್ಣವಲಯದ ಮಳೆಬೀಳುವ ವಾಯುಗುಣ

ಬದಲಾಯಿಸಿ

ಬಹುತೇಕ ಈಶಾನ್ಯ ಭಾರತ ಮತ್ತು ಉತ್ತರ ಭಾರತದ ಬಹುಭಾಗ ಉಪ ಉಷ್ಣವಲಯದ ಮಳೆಬೀಳುವ ವಾಯುಗುಣ ಹೊಂದಿವೆ. ಈ ಭಾಗಗಳಲ್ಲಿ ಬೇಸಿಗೆ ಕಡುವಾದರೂ ಚಳಿಗಾಲದಲ್ಲಿ ಕನಿಷ್ಟ ತಾಪಮಾನ ೦°C (೩೨°F) ಗಿಂತಲೂ ಕಡಿಮೆ ಆಗಬಹುದು. ಸಾಕಷ್ಟು ಮಾನ್ಸೂನ್ ಮಳೆಯ ಕಾರಣ, ಕೋಪೆನ್ ಪದ್ಧತಿಯ ಪ್ರಕಾರ ಈ ಹವಾಮಾನದ ಉಪಮಾದರಿ ಕೇವಲ ಭಾರತದಲ್ಲಿ ಮಾತ್ರ ಕಂಡು ಬರುತ್ತದೆ. ಶಕ್ತಿಶಾಲಿ ಪ್ರತಿಚಕ್ರವಾತ ಮತ್ತು ಮಧ್ಯ ಏಷ್ಯಾದ ಎತ್ತರದ ಪ್ರದೇಶಗಳಿಂದ ಬೀಸುವ ಶೀತಲ ಮಾರುತಗಳಿಂದಾಗಿ ಚಳಿಗಾಲದಲ್ಲಿ ಅತಿ ಕಡಿಮೆ ಮಳೆ ಬೀಳುತ್ತದೆ. ಚಳಿಗಾಲದಲ್ಲಿ ಮೆಡಿಟರೇನಿಯನ್ ಪ್ರದೇಶದಿಂದ ಬೀಸುವ ಆವರ್ತಮಾರುತಗಳಿಂದ (Western Disturbances) ಕೆಲವೊಮ್ಮೆ ಮಳೆ ಮತ್ತು ಹಿಮಪಾತ ಉಂಟಾಗುತ್ತವೆ. ಬೇಸಿಗೆಯಲ್ಲಿ ಬಹುಪಾಲು ಮಳೆ ಪ್ರಬಲ ಗುಡುಗು ಮಿಂಚುಗಳಿಂದ ಕೂಡಿದ ಬಿರುಗಾಳಿ ಮಳೆಯಿಂದಾಗಿ ಸಂಭವಿಸುವುದು. ಮುಖ್ಯವಾಗಿ ಮನ್ಸೂನ್ ಮಾರುತಗಳಿಂದಾಗಿ ಈ ಭಾಗದ ಪಶ್ಚಿಮದಲ್ಲಿ ೧,೦೦೦ ಮಿ.ಮೀ ನಿಂದ ಈಶಾನ್ಯದಲ್ಲಿ ೨,೫೦೦ ಮಿ.ಮೀ ವಾರ್ಷಿಕ ಮಳೆ ಬೀಳುತ್ತದೆ. ಈ ಪ್ರದೇಶದ ಸಮುದ್ರದಿಂದ ಅತ್ಯಂತ ದೂರ ಇದ್ದು, ಖಂಡಾತರ ಹವಾಮಾನವನ್ನು ಹೊಂದಿದೆ. ಆದ್ದರಿಂದ ಇಲ್ಲಿ ಸರಾಸರಿ ತಾಪಮಾನದಲ್ಲಿ ೨೭°C (೮೧°F) ನಷ್ಟು ವ್ಯತ್ಯಾಸ ಕಂಡುಬರುತ್ತದೆ.

ಆಲ್ಪೈನ್ (ಪರ್ವತ ಮಾದರಿ) ವಾಯುಗುಣ

ಬದಲಾಯಿಸಿ

ಭಾರತದ ಉತ್ತರದ ತುದಿಯ ಹಿಮಾಲಯ ಶ್ರೇಣಿಗಳಲ್ಲಿ ಪರ್ವತೀಯ ಅಥವಾ ಆಲ್ಪೈನ್ ವಾಯುಗುಣ ಕಂಡುಬರುತ್ತದೆ. ಸೂರ್ಯನ ನೇರ ಕಿರಣ ಬೀಳುವ ಮತ್ತು ಸೂರ್ಯನ ನೆರಳಿಗೆ ಒಳಪಡುವ ಇಳಿಜಾರು ಪ್ರದೇಶಗಳ ಮಧ್ಯದ ತಾಪಮಾನದ ವ್ಯತ್ಯಾಸ, ತಾಪಮಾನದಲ್ಲಿ ಉಂಟಾಗುವ ದೈನಿಂದನ ಏರಿಳಿತ, ಮತ್ತು ಪರ್ವತದ ಎತ್ತರದ ಮೇಲೆ ಅವಲಂಬಿತ ಮಳೆಯಿಂದಾಗಿ ಹಿಮಾಲಯ ಪರ್ವತಗಳಲ್ಲಿ ಕೆಲವೇ ಕಿಲೋಮೀಟರ್ ಗಳ ಅಂತರದಲ್ಲಿ ಅತಿ ಹೆಚ್ಛು ತಾಪಮಾನದ ವ್ಯತ್ಯಾಸ ಕಂಡುಬರುತ್ತದೆ. ಉತ್ತರ ಹಿಮಾಲಯದ ವಾಯುಗುಣ ವಣ ಹವೆ ಹೊಂದಿರುವ ತಂಪು ಮರುಭೂಮಿಯಾಗಿದೆ. ಇಲ್ಲಿ ಕೇವಲ ಹಿಮಪಾತದ ರೂಪದಲ್ಲಿ ಮಳೆ ಉಂಟಾಗುತ್ತದೆ. ಆದರೆ, ಹಿಮಾಲಯದ ದಕ್ಷಿಣ ಭಾಗಗಳು ಮಾನ್ಸೂನಿನಿಂದ ಪ್ರಭಾವಿತವಾಗಿದ್ದು, ಇಲ್ಲಿ ಮಳೆ ಉಂಟಾಗುತ್ತದೆ.

ಋತುಗಳು

ಬದಲಾಯಿಸಿ

ಭಾರತೀಯ ಹವಾಮಾನ ಇಲಾಖೆ (IMD)ಯ ಪ್ರಕಾರ ಭಾರತದ ವಾರ್ಷಿಕ ವಾಯುಗುಣವನ್ನು ನಾಲ್ಕು ಅಧಿಕೃತ ಋತುಗಳನ್ನಾಗಿ ವಿಂಗಡಿಸಲಾಗಿದೆ. (ಕ)ಚಳಿಗಾಲ: ಜನವರಿ-ಫೆಬ್ರವರಿ (ಖ) ಬೇಸಿಗೆಕಾಲ : ಮಾರ್ಚ - ಮೇ (ಗ) ನೈಋತ್ಯ ಮಾನ್ಸೂನ್ ಅಥವಾ ಮುಂಗಾರು ಮಳೆಗಾಲ (ಘ) ಈಶಾನ್ಯ ಮಾನ್ಸೂನ್ ಅಥವಾ ಹಿಂಗಾರು ಮಳೆಗಾಲ.

ಚಳಿಗಾಲ

ಬದಲಾಯಿಸಿ

ಡಿಸೆಂಬರ್ ನಿಂದ - ಫೆಬ್ರವರಿವರೆಗೆ ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಓರೆಯಾಗಿ ಬೀಳುವದರಿಂದ, ಬಹುಪಾಲು ಭಾರತದಲ್ಲಿ ತಂಪಾದ ಹವಾಮಾನ ಕಂಡುಬರುತ್ತದೆ. ಈ ಋತುವಿನಲ್ಲಿ ಹಿಮಾಲಯ ಪ್ರದೇಶದಲ್ಲಿ ಸರಾಸರಿ ತಾಪಮಾನ ೧೦–೧೫°C (೫೦–೫೯°F) ನಷ್ಟು ಇದ್ದು, ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಇದು ೨೦-೨೫°C (೬೮–೭೭°F) ಆಸುಪಾಸಿನಲ್ಲಿರುತ್ತದೆ. ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ (ಪಂಜಾಬ್, ಹರ್ಯಾಣ, ದೆಹಲಿ) ಸರಾಸರಿ ಗರಿಷ್ಠ ತಾಪಮಾನ ೧೬ - ೨೧°C (೬೧ - ೭೦°F) ಇದ್ದು, ಸರಾಸರಿ ಕನಿಷ್ಠ ತಾಪಮಾನ ೨-೮°C (೩೬-೪೬°F) ನಷ್ಟಿರುತ್ತದೆ. ಈ ಭಾಗದಲ್ಲಿ ಕೆಲವೊಮ್ಮೆ ಸೊನ್ನೆಗಿಂತಲೂ ಕಡಿಮೆ ತಾಪಮಾನ ಕಂಡು ಬರುತ್ತದೆ. ಅಮೃತಸರದಲ್ಲಿ ಇದು -೬°C (೨೧°F) ನಷ್ಟು ಕಡಿಮೆ ದಾಖಲಾಗಿದೆ. ಹಿಮಾಲಯ ಶ್ರೇಣಿಗಳು, ಉತ್ತರದ ಸೈಬೀರಿಯಾ ಪ್ರಾಂತದಿಂದ ಬರುವ ಶೀತಲ ಮಾರುತಗಳನ್ನು ತಡೆಯುವದರಿಂದ ದಕ್ಷಿಣ ಏಷ್ಯಾದಲ್ಲಿ ಚಳಿಗಾಲದ ತಾಪಮಾನವು ಇದೇ ರೇಖಾಂಶದಲ್ಲಿರುವ ಇತರೆ ಪ್ರದೇಶಗಳಿಗಿಂತ ಸಾಕಷ್ಟು ಬೆಚ್ಚಗಿರುತ್ತದೆ.

ಬೇಸಿಗೆಕಾಲ

ಬದಲಾಯಿಸಿ

ಸೂರ್ಯನ ನೇರವಾದ ಕಿರಣಗಳು ಕರ್ಕಾಟಕ ಸಕ್ರಾಂತಿ ವೃತ್ತದೆಡೆಗೆ ಸಂಚರಿಸಲು ಪ್ರಾರಂಭಿಸುವದರಿಂದ, ಉತ್ತರ ಭಾರತದಲ್ಲಿನ ತಾಪಮಾನ ಹೆಚ್ಚುತ್ತ ಹೋಗುತ್ತದೆ. ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಅತ್ಯಧಿಕ ತಾಪಮಾನ ಏಪ್ರಿಲ್ ತಿಂಗಳಲ್ಲಿ ಕಂಡುಬಂದರೆ, ಉತ್ತರ ಭಾರತದಲ್ಲಿ ಮೇ ತಿಂಗಳಿನಲ್ಲಿ ಕಂಡುಬರುತ್ತದೆ. ಮೇ ತಿಂಗಳಿನಲ್ಲಿ ದೇಶದ ಒಳಭಾಗದ ಪ್ರದೇಶಗಳಲ್ಲಿನ ಸರಾಸರಿ ತಾಪಮಾನ ೩೨°C (೯೦°F)ತಲುಪುತ್ತದೆ ಮತ್ತು ಗರಿಷ್ಠ ತಾಪಮಾನ ೪೦°C (೧೦೪°F)ಗಿಂತಲೂ ಹೆಚ್ಚಾಗಿರುತ್ತದೆ. ಕರಾವಳಿ ಪ್ರದೇಶಗಳಲ್ಲಿ ತಾಪಮಾನ ೩೬°C (೯೭°F) ಆಸುಪಸಿನಲ್ಲಿ ಇದ್ದು, ತೇವಾಂಶ ಹೆಚ್ಚುತ್ತ ಹೋಗುತ್ತದೆ. ಪರ್ವತೀಯ ಪ್ರದೇಶಗಳನ್ನು ಹೊರತುಪಡಿಸಿ, ಉತ್ತರ ಭಾರತದ ಬಹುತೇಕ ಪ್ರದೇಶಗಳಲ್ಲಿ ಅತ್ಯಂತ ಬೆಚ್ಚಗಿನ ತಾಪಮಾನ ಅಂದರೆ ಸರಾಸರಿ ೩೨°C (೯೦°F) ನಷ್ಟು ಕಂಡುಬರುತ್ತದೆ. ಉತ್ತರ ಮತ್ತು ಪಶ್ಚಿಮ ಭಾರತದ ಬಯಲು ಪ್ರದೇಶಗಲ್ಲಿ ಹಗಲಿನ ತಾಪಮಾನ ೪೫°C (೧೧೩°F) ತಲುಪಿ, ಬಿಸಿ ಗಾಳಿಯಿಂದ ಕೂಡಿದ ಲೂ ಎಂದು ಕರೆಯಲ್ಪಡುವ ಮಾರುತಗಳು ಕಂಡುಬರುತ್ತವೆ. ಇದು ಹಾನಿಕಾರಕವಾಗಿದ್ದು, ಜನ ಮತ್ತು ಜಾನುವಾರಗಳು ಬಿಸಿಲಿನ ಹೊಡೆತಕ್ಕೆ (sunstroke) ಈಡಾಗಬಹುದು.

ಈ ಕಾಲದಲ್ಲಿ ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳ ಮೂಲಕ western disturbance ಎಂದು ಕರೆಯಲ್ಪಡುವ ಪಶ್ಚಿಮ ಮಾರುತಗಳು ಹಾದುಹೋಗುತ್ತವೆ. ಇವುಗಳಿಂದಾಗಿ ಬಯಲು ಪ್ರದೇಶಗಳಲ್ಲಿ ಮಳೆ ಮತ್ತು ಪರ್ವತೀಯ ಪ್ರದೇಶಗಳಲ್ಲಿ ಹಿಮ ಉಂಟಾಗುತ್ತದೆ. ಬೇಸಿಗೆ ಮುಂದುವರಿದಂತೆ ಈ ಪಶ್ಚಿಮ ಮಾರುತಗಳ ಆವರ್ತನ ಕಡಿಮೆಯಾಗುತ್ತ ಹೋಗುತ್ತದೆ. ಉತ್ತರ ಮತ್ತು ಪೂರ್ವ ಭಾರತದ ಕೆಲ ಭಾಗಗಳಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಬಿರುಗಾಳಿ ಮಳೆ ಉಂಟಾಗುತ್ತದೆ. ಇವನ್ನು ಪಶ್ಚಿಮ ಬಂಗಾಳದಲ್ಲಿ ಕಾಲ್ ಬೈಸಾಖಿ ಎಂದು ಕರೆಯುತ್ತಾರೆ ಮತ್ತು ಹವಾಮಾನ ವಿಜ್ನ್ಯಾನಿಗಳು Norvester ಎಂದು ಕರೆಯುತ್ತಾರೆ. ಉತ್ತರ ಮತ್ತು ಪಶ್ಚಿಮ ಭಾರತದ ಬಯಲು ಪ್ರದೇಶಗಳಲ್ಲಿ ಲೂ ಎಂದು ಕರೆಯಲ್ಪಡುವ ಪ್ರಬಲವಾದ, ಉಷ್ಣ ಮತ್ತು ಒಣ ಗಾಳಿ ಬೀಸುತ್ತದೆ. ಈ ಗಾಳಿ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಶಾಖದ ಹೊಡೆತಕ್ಕೊಳಗಾಗಿ ಹಲವಾರು ಜನ ಪ್ರಾಣ ಕಳೆದುಕೊಳ್ಳುವಂತಾಗುತ್ತದೆ.

ನೈಋತ್ಯ ಮಾನ್ಸೂನ್ ಅಥವಾ ಮಳೆಗಾಲ

ಬದಲಾಯಿಸಿ

ಜೂನ್ ನಿಂದ ಸೆಪ್ಟಂಬರ್ ವರೆಗೆ ಉಂಟಾಗುವ ನೈರುತ್ಯ ಮಾನ್ಸೂನ್ ಕಾಲ ಜಗತ್ತಿನ ಅತ್ಯಂತ ಮಳೆ ಬೀಳುವ ಕಾಲವಾಗಿದೆ.