ಪಾರ್ಶ್ವನಾಥ ಜಿನೇಶ ದಿಗಂಬರ ಜೈನ ಬಸದಿ, ಜಲವಳ್ಳಿ

ಈ ದಿಗಂಬರ ಜೈನ ಬಸದಿಯು ಹೊನ್ನಾವರ ತಾಲೂಕಿನ ಜಲವಳ್ಳಿ ಗ್ರಾಮದ ಜೈನಕೇರಿ ಎಂಬಲ್ಲಿದೆ. ಹೊನ್ನಾವರ-ಗೇರುಸೊಪ್ಪೆ-ಬೆಂಗಳೂರು ಮಾರ್ಗದಲ್ಲಿ ೧೮ ಕಿಲೋಮೀಟರ್ ಸಾಗಿ ಆಗ ಸಿಗುವ ಸುಳಗೋಡು ಕ್ರಾಸ್‌ನಿಂದ ಬಲಗಡೆಯಲ್ಲಿರುವ ಜಳವಳ್ಳಿಗೆ ಹೋಗುವ ರಸ್ತೆಯಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ಮುಂದುವರಿದಾಗ ಈ ಬಸದಿಯ ಸ್ಥಳವು ಸಿಗುತ್ತದೆ. ಇನ್ನೂ ಅರ್ಧ ಕಿಲೋಮೀಟರ್ ಮುಂದುವರಿದರೆ ದೂರದಲ್ಲಿ ನೀರು ತುಂಬಿರುವ ಶರಾವತಿ ನದಿ ಇದೆ. ಬಸದಿಗೆ ಹೋಗುತ್ತಿರುವಾಗ ಸರಕಾರಿ ಪ್ರೌಢ ಶಾಲೆ, ಸಹಕಾರಿ ಬ್ಯಾಂಕ್ ಮತ್ತು ಕೆಲವು ಅಂಗಡಿಗಳು ಸಿಗುತ್ತವೆ. ಇಲ್ಲಿಗೆ ಸರಕಾರಿ ಬಸ್ ಮತ್ತು ಖಾಸಗಿ ವಾಹನಗಳ ಸೇವಾ ಸೌಕರ್ಯವಿದೆ. ಆದ್ದರಿಂದ ತಾಲೂಕು ಕೇಂದ್ರ ಹೊನ್ನಾವರದಿಂದ ಒಟ್ಟು ೨೩ ಕಿಲೋಮೀಟರ್ ದೂರ. ಜಲವಳ್ಳಿಗೆ ಹೋಗುವ ಈ ರಸ್ತೆಯ ಬಲಬದಿಯ ತಗ್ಗು ಪ್ರದೇಶದಲ್ಲಿ ಈ ಬಸದಿಯ ನಿವೇಶನವಿದೆ.

ಪೂಜಾ ಕಾರ್ಯ

ಬದಲಾಯಿಸಿ

ಇಲ್ಲಿ ಬಸದಿಯ ಕಟ್ಟಡವಿಲ್ಲ. ದೈನಂದಿನ ಪೂಜೆ ಪುರಸ್ಕಾರಾದಿಗಳೂ ನಡೆಯುವುದಿಲ್ಲ. ಪ್ರಾಂಗಣದಲ್ಲಿರುವ ಕ್ಷೇತ್ರಪಾಲ (ಜಟ್ಟಿಗ)ನಿಗೆ ಎಲ್ಲಾ ಧರ್ಮೀಯರು ನಡೆದುಕೊಳ್ಳುತ್ತಾರೆ. []

ಸ್ಥಳ ವಿಶೇಷತೆ

ಬದಲಾಯಿಸಿ

ಈ ಬಸದಿ ಇದ್ದ ನಿವೇಶನದ ಮಧ್ಯದಲ್ಲಿ ಎತ್ತರವಾದ ದಿನ್ನೆಯ ಮೇಲೆ ನಾಲ್ಕು ಕಂಬಗಳಿರುವ ಒಂದು ಮಂಟಪವಿದೆ. ಮೇಲ್ಗಡೆ ಮಾಡು ಇಲ್ಲ. ಆದರೆ ಮಧ್ಯದಲ್ಲಿ ಸಂಹ ಮತ್ತು ಪದ್ಮದ ಆಕೃತಿ ಇರುವ ಸಿಂಹ ಪೀಠವಿದೆ. ಅದಕ್ಕೆ ತೀರ್ಥದ್ವಾರ ಜೋಡಿಸಲ್ಪಟ್ಟಿದೆ. ಇದು ಬಸದಿಯ ಗರ್ಭಗೃಹವಾಗಿದ್ದು, ಅದರ ಎದುರುಗೆ ಶುಕನಾಸಿ, ಪ್ರಾರ್ಥನಾ ಮಂಟಪ, ನವರಂಗ, ಘಂಟಾಮAಟಪಗಳು ಇರಬಹುದಾಗಿದ್ದ ಸ್ಥಳವಿದೆ. ಗೋಡೆಗಳಾಗಲೀ ಕಂಬಗಳಾಗಲೀ ಇಲ್ಲ. ಪಂಚಾAಗ ಮಾತ್ರವಿದೆ. ಆದರೆ ಅಧೋಮುಖ ಕಮಲಗಳಿರುವ ಒಂದೆರಡು ಶಿಲಾ ಖಂಡಗಳು ಬಿದ್ದುಕೊಂಡಿವೆ. ಎಲ್ಲಕ್ಕಿಂತ ಎದುರಲ್ಲಿ ಬಸದಿಗೆ ಪ್ರವೇಶ ಮಾಡುವ ಸೋಪಾನ ಮತ್ತು ಆನೆ ಕಲ್ಲುಗಳಿವೆ. ಇಲ್ಲಿ ಕೆಲವು ಆಸಕ್ತ ಬಂಧುಗಳು ಒಂದು ದೀಪವನ್ನು ಹಚ್ಚಿ ಇಡುತ್ತಾರಂತೆ. ಎದುರಿನ ಪ್ರಾಂಗಣದಲ್ಲಿ ಒಂದು ಬದಿಯಲ್ಲಿ ತೀರ್ಥಬಾವಿ ಇತ್ತಂತೆ. ಆದರೆ ಈಗ ಅದು ಮುಚ್ಚಿ ಹೋಗಿದೆ. ಇನ್ನೊಂದು ಬದಿಯಲ್ಲಿ ಜಿನೇಶ್ವರ ಪೂಜೆಗೆ ಉಪಯೋಗಿಸುವ ರೆಂಜೆ (ಎಜ್ಜಲ) ಹೂವಿನ ದೊಡ್ಡದಾದ ಒಂದು ಮರವಿದೆ. ಬಸದಿಯ ಪ್ರಾಂಗಣದ ಇನ್ನೊಂದು ಮೂಲೆಯಲ್ಲಿ ಸುಮಾರು ಮೂರು ಅಡಿ ಎತ್ತರದ ಒಂದು ಶಿಲಾಶಾಸನವಿದೆ.

ಈ ಶಾಸನದ ಅನುಸಾರ ಗೇರುಸೊಪ್ಪೆಯ ಅರಸ ಕೃಷ್ಣಭೂಪನು ಕ್ರಿ.ಶ. ೧೫೪೫ರಲ್ಲಿ ಜಲವಳ್ಳಿಯ ಈ ಪಾರ್ಶ್ವನಾಥ ಸ್ವಾಮಿ ಬಸದಿಯ ನಿತ್ಯಾನುಷ್ಠಾನಗಳನ್ನು ನಡೆಸಿಕೊಂಡು ಹೋಗಲಿಕ್ಕಾಗಿ ನಾಗಪ್ಪ ಶೆಟ್ಟಿ ಎಂಬವರಿಗೆ ಭೂದಾನ ಮಾಡಿದ್ದ. ಈ ನಾಗಪ್ಪ ಶೆಟ್ಟಿ ಯಾರೆಂಬುದರ ಕುರಿತು ಹೆಚ್ಚು ತಿಳಿದು ಬಾರದಿದ್ದರೂ, ಸ್ವಲ್ಪ ದೂರದಲ್ಲಿ ಶ್ರೀ ಪಾಯಪ್ಪ ಶೆಟ್ಟಿ(ಅವರ ಮಗ ನಾಗರಾಜ ಶೆಟ್ಟಿ) ಎಂಬವರ ಮನೆಯಿದೆ. ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗು ಪದ್ಮಾವತಿಯನ್ನು ಒಂದು ಬಸದಿಯಲ್ಲಿರುವಂತೆ ತನ್ನ ಮನೆಯಲ್ಲಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಹಲವು ಪರ್ವಗಳನ್ನು, ಜಯಂತಿ ಉತ್ಸವಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇವರಿಗೆ ಸರಕಾರದಿಂದ ತಸ್ತೀಕ್ ಬರುತ್ತಿದೆ. ಇಲ್ಲಿ ಪದ್ಮಾಸನಸ್ಥ ಶ್ರೀ ಪಾರ್ಶ್ವನಾಥ ಸ್ವಾಮಿಯ, ಶ್ರೀ ಪದ್ಮಾವತಿ ದೇವಿಯ ಹಾಗು ಇನ್ನೂ ಕೆಲವು ಪಂಚಲೋಹದ ಮೂರ್ತಿಗಳನ್ನು ಪೂಜಿಸಲಾಗುತ್ತಿದೆ. ಆದರೆ ಬಸದಿಯಲ್ಲಿದ್ದ ಮೂಲ ನಾಯಕ ಬಿಂಬವು ಕಾಣೆಯಾಗಿದೆ. ಜ್ಯೋತಿಷಿಗಳ ಅಭಿಪ್ರಾಯದಂತೆ ಅದು ಯಾವುದೋ ಇನ್ನೊಂದು ಬಸದಿಯಲ್ಲಿ ಪೂಜಿಸಲ್ಪಡುತ್ತಿದೆ.

ಉಲ್ಲೇಖಗಳು

ಬದಲಾಯಿಸಿ
  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂ ಶ್ರೀ ಪ್ರಿಂಟರ್ಸ್. pp. ೩೯೪.