ಭಗವಾನ್ ಪುಷ್ಪದಂತ ಸ್ವಾಮಿ ಬಸದಿ, ಪೆರಿಂಜೆ
ಪೆರಿಂಜೆಯ ಭಗವಾನ್ ಪುಷ್ಪದಂತ ಸ್ವಾಮಿ ಬಸದಿಯು ಕರ್ನಾಟಕ ಜೈನ ಬಸದಿಗಳಲ್ಲಿ ಒಂದು
ಸ್ಥಳ
ಬದಲಾಯಿಸಿಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯು ಬೆಳ್ತಂಗಡಿ ಪೇಟೆಯಿಂದ ಸುಮಾರು 21 ಕಿ.ಮೀ ದೂರದಲ್ಲಿದೆ. ಬೆಳ್ತಂಗಡಿ, ಗುರುವಾಯನಕೆರೆ, ವೇಣೂರು ಮಾರ್ಗವಾಗಿ ವೇಣೂರಿನಿಂದ ಮೂಡಬಿದಿರೆಯ ಕಡೆಗೆ 8 ಕಿ.ಮೀ. ದೂರ ಕ್ರಮಿಸಿದಾಗ ಈ ಬಸದಿ ಸಿಗುತ್ತದೆ. ಇದು ವೇಣೂರಿನ ಪೆರಿಂಜೆ ಎಂಬ ಊರಿನಲ್ಲಿದೆ. ಶಿಲಾ ಶಾಸನಗಳಲ್ಲಿ ಇದನ್ನು ಸೊಪ್ಪಿನ ಗುಂಡಿ ಎಂದು ಕರೆಯಲಾಗಿದೆ. ೯ನೇ ತೀರ್ಥಂಕರರಾದ ಭಗವಾನ್ ಪುಷ್ಪದಂತ ಸ್ವಾಮಿ ಇಲ್ಲಿ ಪೂಜೆಗೊಳ್ಳುವ ಮೂಲ ನಾಯಕರು.[೧]
ಕಲಾ ವಿನ್ಯಾಸ
ಬದಲಾಯಿಸಿಶ್ರೀ ಪುಷ್ಪದಂತ ಸ್ವಾಮಿಯ ಮೂರ್ತಿಯು ಬಿಳಿ ಶಿಲೆಯದ್ದಾಗಿದೆ. ಪ್ರಭಾವಲಯವು ಕಂಚಿನದಾಗಿದ್ದು ಮತ್ತು ಇದಕ್ಕೆ ಮಕರ ತೋರಣದ ಅಲಂಕಾರವಿದೆ. ಮೂರ್ತಿಯು ಖಡ್ಗಾಸನ ಭಂಗಿಯಲ್ಲಿದೆ. ಪದ್ಮ ಪೀಠವು ಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಮೇಲ್ಗಡೆ ಕಂಚಿನ ಕವಚವನ್ನು ಹೊಂದಿದೆ. ಸ್ವಾಮಿಯ ಯಕ್ಷ ಅಜಿತ ಮತ್ತು ಯಕ್ಷಿ ಮಹಾಕಾಳಿ ಇವರ ಕೈಯಲ್ಲಿ ಶಾಸ್ತ್ರೋಕ್ತವಾದ ಆಯುಧಗಳಿವೆ. ತೀಥರ್ಂಕರರ ಮೂರ್ತಿಯ ಕೆಳಗೆ ಮಕರ ಲಾಂಛನವಿದೆ. ಮೂರ್ತಿಯು ಬಹು ಸುಂದರವಾಗಿದ್ದು, ಪ್ರಸನ್ನ ಮುಖದಿಂದ ನಗೆ ಸೂಸುವಂತಿದೆ. ಅಷ್ಟಮಹಾ ಪ್ರಾತಿಹಾರ್ಯಗಳ ಪೈಕಿ ಮುಕ್ಕೊಡೆ ಮತ್ತು ದಿವ್ಯ ಧ್ವನಿ ಕಂಡುಬರುತ್ತದೆ.
ಪೂಜಾ ವಿಧಾನ
ಬದಲಾಯಿಸಿ"ಮೂಲಾಭಂ ಮಕರಧ್ವಜೋ ಜನಹಿತ ಸುಗ್ರೀವಾನಾಮಾಂಬಿಕ……"ಎಂಬ ಮಂತ್ರದಿಂದ ತೀಥರ್ಂಕರರನ್ನು ಸ್ತುತಿಸಲಾಗುತ್ತದೆ. ಜಲ,ಕ್ಷೀರ, ಪಂಚಾಮೃತ , ಸೀಯಾಳ ಇತ್ಯಾದಿಗಳಿಂದೆಲ್ಲ ಅಭಿಷೇಕವನ್ನು ಮಾಡಲಾಗುತ್ತದೆ. ಈ ಬಸದಿಯಲ್ಲಿ ಮೂರುಜನ ಪುರೋಹಿತರು. ಧರಣೇಂದ್ರ ಇಂದ್ರ, ಪದ್ಮಪ್ರಸಾದ್ ಇಂದ್ರ ಮತ್ತು ಜಿನಚಂದ್ರ ಇಂದ್ರ ಎಂಬ ಮೂವರು ವರ್ಷಕ್ಕೊಮ್ಮೆ ಒಬ್ಬರಂತೆ ಪೂಜೆಯನ್ನು ಮಾಡುತ್ತಾರೆ. ಇಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಅಭಿಷೇಕ -ಪೂಜೆಗಳು ನಡೆಯುತ್ತವೆ. ಅಗತ್ಯವಿದ್ದರೆ ಮಧ್ಯಾಹ್ನವೂ ಅಭಿಷೇಕ ಪೂಜೆ ನಡೆಸಲಾಗುತ್ತದೆ.
ಇತಿಹಾಸ
ಬದಲಾಯಿಸಿಸುಮಾರು ೬೦೦ ರಿಂದ ೭೦೦ ವರ್ಷಗಳ ಹಿಂದಿನ ಇತಿಹಾಸವನ್ನು ಈ ಬಸದಿಯು ಹೊಂದಿದೆ.ಬಸದಿಯ ಗಂಧ ಕುಟಿಯಲ್ಲಿ ಶ್ರುತ,ಗಣಧರಪಾದ ,ಚವೀಸ,ತೀರ್ಥಂಕರರು,ಸರ್ವಾಹ್ಣ ಯಕ್ಷ ಮತ್ತು ಬಾಹುಬಲಿ ಸ್ವಾಮಿಯ ಮೂರ್ತಿಗಳಿವೆ. ಇವುಗಳ ಮೇಲೆ ಬರವಣಿಗೆಗಳು ಇರುವುದಾಗಿ ಪಡ್ಯೋಡಿಗುತ್ತು ಶ್ರೀ ಜೀವಂಧರ್ ಕುಮಾರ್ ತಿಳಿಸಿದ್ದಾರೆ. ಅವುಗಳ ಅನುಸಾರ ವಿಜಯನಗರ ಸಾಮ್ರಾಜ್ಯದ ಪ್ರಾರಂಭ ಕಾಲದಲ್ಲಿ ಸುಮಾರು ಕ್ರಿಸ್ತ.ಶಕ 1430 ರ ಸಮಯದಲ್ಲೇ ಈ ಬಸದಿಯು ಉತ್ತಮ ಸ್ಥಿತಿಯಲ್ಲಿತ್ತು. ಅಂದರೆ ಮೂಡಬಿದ್ರೆ ಸಾವಿರಕಂಬದ ಬಸದಿಯ ನಿರ್ಮಾಣಕ್ಕಿಂತ ಸ್ವಲ್ಪ ಮೊದಲು ಇದು ನಿರ್ಮಾಣಗೊಂಡಿತ್ತು.
ಪದ್ಮಾವತಿ ಅಮ್ಮನವರು
ಬದಲಾಯಿಸಿಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿರುವಂತಹ ಪದ್ಮಾವತಿ ಅಮ್ಮನವರ ಮೂರ್ತಿಯಿದೆ.ಇದು ಜೀವಕೋಷ್ಟದಲ್ಲಿದೆ. ಪದ್ಮಾವತಿ ಅಮ್ಮನವರಿಗೆ ಸೀರೆ ಉಡಿಸಿ,ಬಳೆ,ಆಭರಣ ಮುಂತಾದವುಗಳಿಂದ ಶೃಂಗರಿಸಲಾಗುತ್ತದೆ.ಕ್ರಮದಂತೆ ಶುಕ್ರವಾರ ಮತ್ತು ಮಂಗಳವಾರ ವಿಶೇಷ ಪೂಜಾ ದಿನಗಳಾಗಿವೆ. ಹೂವು ಹಾಕಿ ನೋಡುವ ಕ್ರಮ ಇದೆ.ಪೂಜೆಯಲ್ಲಿ ಪದ್ಮಾವತಿ ದೇವಿಗೆ ನೈವೇದ್ಯ,ಚರು ಅಥವಾ ಫಲವಸ್ತುಗಳನ್ನು ಸಮರ್ಪಿಸಲಾಗುತ್ತದೆ. ದೇವಿಗೆ ಹರಕೆಗಳನ್ನು ಹೇಳಲಾಗುತ್ತದೆ. ಮಾಹಿತಿಗಳ ಪ್ರಕಾರ ಹರಕೆ ಹೇಳಿ ಈಡೇರಿದ ಬಯಕೆಗಳು,ಘಟನೆಗಳು ಇಲ್ಲಿ ತುಂಬಾ ಇವೆ.
ಪ್ರಾಂಗಣ
ಬದಲಾಯಿಸಿಕುದುರೆಯ ಮೇಲೆ ಕುಳಿತಿರುವ ಭಂಗಿಯಲ್ಲಿ ಬ್ರಹ್ಮದೇವರ ಮೂರ್ತಿ ಇದೆ. ಈ ಬ್ರಹ್ಮದೇವರ ಆವೇಶವು ಯಾರ ಮೇಲೂ ಬರುವುದಿಲ್ಲ. ಈ ಬಸದಿಯು ಗರ್ಭಗ್ರಹದಿಂದ ಹೊರಗೆ ಬರುತ್ತಾ ಇರುವಂತೆ ಸುಕನಾಸಿ,ಯೆಡೆನಾಳಿ,ಗಂಧಕುಟಿ,ತೀರ್ಥ ಮಂಟಪ, ಘಂಟಾಮಂಟಪ ಮತ್ತು ಪ್ರಾರ್ಥನ ಮಂಟಪಗಳು ಇವೆ. ಘಂಟಾಮಂಟಪದಲ್ಲಿ ಹೋಮ-ಹವನಗಳನ್ನು ನಡೆಸಲಾಗುತ್ತದೆ. ಕಂಬಗಳು ಹಳೆಯಕಾಲದ ಬೋದಿಗೆಯಿಂದ ಕೂಡಿದೆ. ಈ ಮಂಟಪದ ನೆಲವು ಆಕರ್ಷಕ ಸ್ವಚ್ಛ ಹಾಲಿನ ಕೆನೆಯ ಬಣ್ಣದ ಟೈಲ್ಸ್ ನಿಂದ ಮಾಡಲ್ಪಟ್ಟಿದೆ. ಹೊರಗೆ ಜಗಲಿಯಿದೆ. ಇಲ್ಲಿ ಎರಡೂ ಕಡೆ ಸುಂದರವಾದ ದ್ವಾರಪಾಲಕರ ಬಣ್ಣದ ನೂತನ ಚಿತ್ರಗಳಿವೆ. ಬಸದಿಯಲ್ಲಿ ಎದುರು ಗೋಪುರವಿದೆ. ಗರ್ಭಗೃಹದ ಮೇಲೆ ಮೇಗಿನ ನೆಲೆಯಿದೆ. ಇಲ್ಲಿ ಭಗವಾನ್ ವೃಷಭನಾಥ ತೀರ್ಥಂಕರರು ಪೂಜಿಸಲಾಗುತ್ತದೆ. ಗರ್ಭಗೃಹದ ಸುತ್ತಲೂ ಅಂಗಳವಿದೆ.ಬಸದಿಯ ಬಲಗಡೆಯ ಹಿಂಭಾಗದಲ್ಲಿ ಕ್ಷೇತ್ರಪಾಲನ ಸನ್ನಿಧಾನವಿದೆ. ಇಲ್ಲಿ ಒಂದು ದೊಡ್ಡ ಶಿಲಾಫಲಕ ಮತ್ತು ನಾಗನ ಮೂರ್ತಿ ಇದೆ. ಗಂಡುಕಲ್ಲು,ತ್ರಿಶೂಲ ಮುಂತಾದ ವಸ್ತುಗಳಿವೆ. ಕ್ಷೇತ್ರಪಾಲನ ಕಾರಣಿಕ ಅಪಾರವಾದದ್ದು,ಬಲಿಕಲ್ಲುಗಳು ,ದಶಕಾಲ್ಪಕರ ನಡೆಯುತ್ತಿವೆ. ಮುಖ್ಯವಾಗಿ ಈ ಬಸದಿಯಲ್ಲಿ ಎರಡು ಶಿಲಾಶಾಸನಗಳು ಇತರ ಇತಿಹಾಸಕ್ಕೆ ಆಧಾರವಾಗಿ ಸಿಗುತ್ತವೆ. ಅವು ವಿಜಯನಗರ ಪೂರ್ವಕಾಲದ ಶಿಲಾಶಾಸನಗಳಾಗಿವೆ.
ಜೀರ್ಣೋದ್ದಾರ
ಬದಲಾಯಿಸಿ೨೦೧೩ ರಲ್ಲಿ ಶ್ರೀಪುಷ್ಪಾಂಜಲಿ ಎಂಬ ಸ್ಮರಣ ಸಂಚಿಕೆಯನ್ನು ಪ್ರಕಟಿಸಲಾಗಿದೆ. ಈ ಬಸದಿಯು ತೀರಾ ಹಳೆಯ ಸ್ಥಿತಿಯಲ್ಲಿತ್ತು. ಈಗ ಜೀರ್ಣೊದ್ದಾರವಾಗಿದ್ದು ಪುನರ್ ವ್ಯವಸ್ಥೆ ಕಾರ್ಯವು ನಡೆಯುತ್ತಿವೆ.ಶ್ರಾವಕರು ಮತ್ತು ಊರಿನ ಗ್ರಾಮಸ್ಥರು ಜೀರ್ಣೋದ್ಧಾರ ಕಾರ್ಯವನ್ನು ಬಹಳ ಶ್ರದ್ಧೆಯಿಂದ ನಡೆಸಿದ್ದಾರೆ. ಇನ್ನು ಬಸದಿಯಲ್ಲಿ ಹಿಂದಿಗಿಂತ ಹೆಚ್ಚು ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಅಭಿಷೇಕ ಪೂಜೆಗಳು ನಡೆಯಲಿವೆ.ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಇಲ್ಲಿಗೆ ಕಾರ್ಕಳದ ಶ್ರೀ ಸ್ವಾಮಿಗಳು, ಮೂಡುಬಿದರೆಯ ಭಟ್ಟಾರಕರು ಮುಂತಾದ ಗಣ್ಯರು ಭೇಟಿ ನೀಡಿದ್ದಾರೆ. ಇದು ಮೂಡಬಿದ್ರೆ ಮಠಕ್ಕೆ ಸೇರಿದುದಾಗಿದೆ .ಮುನಿಗಳಾದ ರಯಣ ಸಾಗರ್ ಜೀ ಯವರು ಇಲ್ಲಿಗೆ ಬಂದು ಇಲ್ಲಿ ಚಾತುರ್ಮಾಸವನ್ನು ಮಾಡಿದ್ದರು. ಈ ಬಸದಿಗೆ ಸುವ್ಯವಸ್ಥಿತವಾದ ಆಡಳಿತ ಮಂಡಳಿಯನ್ನು ಮಾಡಿಕೊಂಡಿದ್ದು ಇದರ ಆಡಳಿತ ಮೊಕ್ತೇಸರರು, ಪೆರಿಂಜೆ ಗುತ್ತು ಡಾ.ಶ್ರೀಧರ ಕಂಬಳಿಯವರು.ಮುಖ್ಯವಾದ ಆದಾಯವು ಪೂಜಾವಿಧಿಯಿಂದ ಬರುತ್ತದೆ.
ಐದು ಗ್ರಾಮಗಳ ಸಹಕಾರದಿಂದ ಈ ಬಸದಿಯು ನಡೆಯುತ್ತಿದೆ. ಹಿಂದೆ ತಸ್ದಿಕ್ ಬಂದಿರುತ್ತದೆ. ಬಸದಿಯ ವೈಶಿಷ್ಟ್ಯವೇನೆಂದರೆ ಇದು ಶುಕ್ರದೆಸೆಯೆ ದೋಷ ಪರಿಹಾರಕ್ಕೆ ಆರಾಧನೆ ಮಾಡಬೇಕಾದ ಶ್ರೀ ಪುಷ್ಪದಂತ ಸ್ವಾಮಿಯ ಬಸದಿ ಆದುದರಿಂದ ಅದನ್ನು ಬಯಸುವ ಭಕ್ತರು ಈ ಬಸದಿಗೆ ಬಂದು ಪೂಜಾ ಕೈಂಕರ್ಯವನ್ನು ಕೈಗೊಳ್ಳುತ್ತಾರೆ.ಪರಿಸರದ ಜೀರ್ಣೋದ್ಧಾರ, ಸಭಾಮಂಟಪದ ರಚನೆ ಹಾಗೆಯೇ ಈ ಬಸದಿಗೆ ವಿಸ್ತಾರವಾದ ಮಾರ್ಗದ ರಚನೆ ಮತ್ತು ವಾಹನ ನಿಲುಗಡೆಗೆ ಬೇಕಾದ ವ್ಯವಸ್ಥೆ ಇವುಗಳು ಇಲ್ಲಿನ ಜನರ ಮತ್ತು ಆಡಳಿತ ಮಂಡಳಿಯ ಆಶಯಗಳಗಿವೆ.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೨೦೦-೨೦೧.