ಬೈಕಣತಿಕಾರಿ ಬಸದಿ, ಮೂಡಬಿದಿರೆ

ಶ್ರೀ ಅನಂತನಾಥ ಸ್ವಾಮಿಯ ಬೈಕಣತಿಕಾರಿ ಬಸದಿಯು ಕರಾವಳಿ ಭಾಗದ ಜೈನ ಬಸದಿಗಳಲ್ಲೊಂದಾಗಿದೆ.

ಮೂಡಬಿದಿರೆಯ ಸುಂದರವಾದ ಊರಿನ ಹಚ್ಚ ಹಸುರಿನ ಪ್ರಕೃತಿಯ ನಡುವಿನ, ಬಯಲು ಪ್ರದೇಶದಲ್ಲಿ ಅತಿ ಸುಂದರವಾಗಿ ಕಂಗೊಳಿಸುತ್ತಿರುವುದು ಈ ಬೈಕಣತಿಕಾರಿ ಬಸದಿ. ಈ ಬಸದಿಯಲ್ಲಿ ಪೂಜೆಗೊಳ್ಳುವ ಮೂಲ ನಾಯಕ ಶ್ರೀ ಅನಂತನಾಥ ಸ್ವಾಮಿ ಶ್ರೀ ಅನಂತನಾಥ ಸ್ವಾಮಿ. ಈ ಬಸದಿಯನ್ನು ಬೆಂಕಿ ಬಸದಿ ಎಂದೂ ಕರೆಯುತ್ತಾರೆ.[]

ಇತಿಹಾಸ

ಬದಲಾಯಿಸಿ

ಈ ಜಿನಾಲಯವು ಬಹಳ ಪುರಾತನವಾದ ಜಿನಾಲಯ ಎಂದು ಹೇಳಲಾಗುತ್ತದೆ. ಸುಮಾರು ಇನ್ನೂರು ಮುನ್ನೂರು ವರ್ಷಗಳ ಹಿಂದೆ ಬೈಕಣತಿಕಾರಿ ಎಂಬ ವ್ಯಕ್ತಿ ಕಟ್ಟಿದ್ದರು. ಈ ಬಸದಿಯು ೧೯೮೦ ರಿಂದ ೧೯೯೦ ರವರೆಗೆ ಜೀರ್ಣೋದ್ಧಾರಗೊಂಡಿದೆ.

ಕಲಾಕೃತಿ, ಧಾರ್ಮಿಕ ಆಚರಣೆ

ಬದಲಾಯಿಸಿ

ಈ ಬಸದಿಯಲ್ಲಿ ಮೂಲ ನಾಯಕನ ಮೂರ್ತಿಯು ಕಪ್ಪು ಶಿಲೆಯಿಂದ ನಿರ್ಮಿಸಿದ್ದಾಗಿದೆ. ಇದು ಮೂರು ಅಡಿ ಎತ್ತರ ಇದೆ. ಈ ಮೂರ್ತಿಯ ಸುತ್ತಲೂ ಪ್ರಭಾವಲಯದಲ್ಲಿ ತೀರ್ಥಂಕರರ ವಿಗ್ರಹಗಳಿವೆ. ಬಸದಿಯ ಗಂಧಕುಟಿಯಲ್ಲಿ ಬೇರೆ ಬೇರೆ ಮೂರ್ತಿಗಳಿವೆ. ಆದರೆ ಅವುಗಳ ಮೇಲೆ ಯಾವುದೇ ರೀತಿಯಾದಂತಹ ಬರವಣಿಗೆಗಳು ಕಾಣಿಸುವುದಿಲ್ಲ. ಇವುಗಳ ಪೈಕಿ ಶ್ರೀ ಅನಂತನಾಥ ಸ್ವಾಮಿ ಮೂರ್ತಿಗೆ ಅಭಿಷೇಕ ನಡೆಯುತ್ತದೆ. ಇಲ್ಲಿ ಮಾತೆ ಪದ್ಮಾವತಿ ಅಮ್ಮನವರ ಮೂರ್ತಿ ಪೂರ್ವಕ್ಕೆ ಮುಖ ಮಾಡಿ ಇದೆ. ಬ್ರಹ್ಮ ದೇವರ ಮೂರ್ತಿ ಗಂಗಾಧರ ಪಾದ ಶ್ರುತ ಮೂರ್ತಿ ಕೂಡ ಇದೆ. ಇಲ್ಲಿರುವ ಯಕ್ಷ ಪಾತಾಳ ಯಕ್ಷಿ ಅನಂತಮತಿ. ಈ ಬಸದಿಯಲ್ಲಿ ದಿನಕ್ಕೆ ಒಂದು ಸಲ ಅಂದರೆ ಬೆಳಿಗ್ಗೆ ಮಾತ್ರವೇ ಅಭಿಷೇಕ ಪೂಜೆ ನಡೆಯುತ್ತದೆ. ನಾವು ಗರ್ಭಗುಡಿಯಿಂದ ಹೊರ ಬರುತ್ತಿರುವಂತೆಯೇ ತೀರ್ಥ ಮಂಟಪ, ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇದೆ. ನವರಾತ್ರಿಯಲ್ಲಿ ಹೂವಿನ ಅಲಂಕಾರದೊಂದಿಗೆ ಸರಸ್ವತಿಗೆ ಪೂಜೆ ನಡೆಯುತ್ತದೆ. ಬಸದಿಯ ಹೊರಗಡೆ ಬರುತ್ತಿರುವಂತೆ ನಾವು ಗೋಪುರವನ್ನು ಕಾಣುತ್ತೇವೆ. ಅಲ್ಲಿ ಕಲ್ಲಿನ ಸುಂದರ ಕಂಬಗಳನ್ನು ಕಾಣಬಹುದು ಆದರೆ ಅದರ ಮೇಲೆ ಯಾವುದೇ ರೀತಿಯ ಕೆತ್ತಿದ ಕೆತ್ತನೆಗಳಿಲ್ಲ. ಇದರ ಗೋಡೆಗಳ ಮೇಲೆ ಯಾವುದೇ ರೀತಿಯ ಚಿತ್ರಗಳು ಇಲ್ಲ. ಈ ಬಸದಿಗೆ ಮೇಗಿನ ನೆಲೆ ಇಲ್ಲ. ಸುತ್ತಲೂ ಸುಂದರವಾದ ಸ್ವಚ್ಛ ಅಂಗಳವಿದೆ. ಬಸದಿಯಲ್ಲಿ ಕ್ಷೇತ್ರಪಾಲನ ಸನ್ನಿಧಾನವೂ ಇದೆ. ಪಕ್ಕದಲ್ಲಿ ನಾಗನ ಮೂರ್ತಿಯನ್ನು ಕಾಣಬಹುದು. ಶಿಲೆಯ ಕುಕ್ಕಟ ಸರ್ಪಗಳಿವೆ. ಬಸದಿಯು ಜೀರ್ಣೋದ್ಧಾರಗೊಂಡು ಬಹು ಸುಂದರವಾಗಿ ಪ್ರಕೃತಿಯ ಮಧ್ಯೆ ಕಂಗೊಳಿಸುತ್ತಾ ಪ್ರೇಕ್ಷಣೀಯವಾಗಿದೆ.[]

ಉಲ್ಲೇಖಗಳು

ಬದಲಾಯಿಸಿ
  1. https://www.jainheritagecentres.com/jainism-in-india/karnataka/moodabidri/
  2. ಶೆಣೈ, ವೈ. ಉಮಾನಾಥ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ.: ಮಂಜುಶ್ರೀ ಪ್ರಿಂಟರ್ಸ್.