ಬೆಟ್ಟದ ಮಲ್ಲೇಶ್ವರ ದೇವಸ್ಥಾನ
ಬೆಟ್ಟದ ಮಲ್ಲೇಶ್ವರ ದೇವಸ್ಠಾನವು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿದೆ. ತಾಲೂಕು ಕೇಂದ್ರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಹಡಗಲಿಯಿಂದ ಹರಪನಹಳ್ಳಿಗೆ ಹೋಗುವ ಮಾರ್ಗದಲ್ಲಿ ಕೊಮಾರನಹಳ್ಳಿ ತಾಂಡ ದಿಂದ ಎಡಕ್ಕೆ ಸುಮಾರು ೪ ಕಿ.ಮೀ ಸಾಗಿದರೆ ಶ್ರೀ ಬೆಟ್ಟದ ಮಲ್ಲೇಶ್ವರ ಸುಕ್ಶೇತ್ರ ದರ್ಶನವಾಗುತ್ತದೆ.
ದಟ್ಟ ಕಾನನದ ನಡುವೆ ಪ್ರಕೃತಿಯ ಮಡಿಲಲ್ಲಿ ಈ ದೇಗುಲ ನಿರ್ಮಾಣಗೊಂಡಿದೆ. ಬೆಟ್ಟದ ಮಲ್ಲೇಶ್ವರ ಶಿಖರವು ಬಳ್ಳಾರಿ ಜಿಲ್ಲೆಯಲ್ಲಿ ೩ನೇ ಅತಿ ದೊಡ್ಡ ಶಿಖರವೆಂದು ದಾಖಲಾಗಿದೆ. ಈ ಬೆಟ್ಟದ ತುದಿಯಿಂದ ರಾಯದುರ್ಗದ ಸುಂದರವಾದ ಬೆಟ್ಟಗಳ ಸಾಲುಗಳನ್ನು ವೀಕ್ಶಿಸಬಹುದು. ಬೆಟ್ಟದ ಮೇಲೆ ನಿಂತು ನೋಡುವ ದೃಶ್ಯ ಕಣ್ಣಿಗೆ ಆನಂದವನ್ನುಂಟು ಮಾಡುತ್ತದೆ.
ಬೆಟ್ಟದ ತುದಿಯಲ್ಲಿ ನಿರ್ಮಾಣಗೊಂಡಿರುವ ೩೦ ಅಡಿ ಆಳದ ಗುಹೆಯಲ್ಲಿ ಮುದಿಮಲ್ಲಪ್ಪ ದೇವರ ಪ್ರತಿಮೆ ಇಡಲಾಗಿದೆ. ಇದನ್ನು ಈ ಭಾಗದ ಜನ "ಮ್ಯಾಗಳ ಮಲ್ಲಣ್ಣ " ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಬಹಳ ಹಿಂದೆಯೇ ಅಚ್ಚುಕಟ್ಟಾಗಿ ಎರಡು ಕುಡಿಯುವ ನೀರಿನ ಬಾವಿಗಳನ್ನು ನಿರ್ಮಿಸಲಾಗಿದೆ. ಈ ಭಾಗದ ಬಹುತೇಕ ರೈತ ಕುಟುಂಬಗಳು ಮುಂಗಾರು ಬಿತ್ತನೆಗೆ ಮುನ್ನ ಈ ಬೆಟ್ಟದ ಮಲ್ಲಣ್ಣನಿಗೆ ಹೋಳಿಗೆ ಎಡೆ ನೈವೇದ್ಯ ಮಾಡಿ ಅರ್ಪಿಸಿ ಬೇಡಿಕೊಳ್ಳುವುದು ವಾಡಿಕೆಯಾಗಿದೆ.
ಬೆಟ್ಟದ ಮಲ್ಲೇಶ್ವರನ ಗರ್ಭಗುಡಿ ಪ್ರಾಚೀನ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು ಎಂದು ತಿಳಿದುಬರುತ್ತದೆ. ನಂತರ ದೇವಸ್ಥಾನವು ಹರಪನಹಳ್ಳಿಯ ಪಾಳೇಗಾರ ರಾಜಾ ಸೋಮಶೇಖರ ನಾಯಕ ಕಾಲದಲ್ಲಿ ನಿರ್ಮಾಣಗೊಂಡಿರಬಹುದೆಂದು ತಿಳಿದುಬರುತ್ತಿದೆ. ಶ್ರೀ ಬಿ.ಎಂ.ಶ್ರೀಕಂಠಶಾಸ್ತ್ರಿಗಳು ಈ ಹಿಂದೆ ರಚಿಸಿದ 'ಶ್ರೀ ಬೆಟ್ಟದ ಮಲ್ಲೇಶ್ವರ ಶತಕ' ಎಂಬ ಗ್ರಂಥ ದಲ್ಲಿ ದೇವಸ್ಥಾನ ಚರಿತ್ರೆ ಬಗ್ಗೆ ಉಲ್ಲೇಖವಿದೆ.