ಬೆಂಜಮಿನ್ ಗೈ ಹಾರ್ನಿಮನ್

ಬೆಂಜಮಿನ್ ಗೈ ಹಾರ್ನಿಮನ್,(1873–1948) [] ಒಬ್ಬ ಬ್ರಿಟಿಷ್ ಪತ್ರಿಕೋದ್ಯಮಿ, ಭಾರತದ ಪ್ರಜೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡುತ್ತಿದ್ದ ಸಮಯದಲ್ಲಿ ಭಾರತದ ಪರವಾಗಿ ಹೋರಾಡಿ ತಮ್ಮ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದು ಒಂದು ಹೊಸ ಅಧ್ಯಾಯವನ್ನು ಸ್ಥಾಪಿಸಿದರು. ಹಲವು ವಿದೇಶೀಯರು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಆಂದೋಲನಕ್ಕೆ ಪರೋಕ್ಷವಾಗಿ ಸಹಾಯಮಾಡಿದರು :

  • ಅಲನ್ ಆಕ್ಟೇವಿಯೋ ಹ್ಯೂಮ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಮಾಡಿದರು.
  • ಹೆನ್ರಿ ಕಾಟನ್, ವೆಡ್ಡರ್ ಬರ್ನ್
  • ಡಾ. ಅನಿಬೆಸೆಂಟ್ (ಹೋಮ್ ರೂಲ್ ಚಳುವಳಿಯ ಸ್ಥಾಪಕಿ) ಈ ಐರಿಷ್ ಮಹಿಳೆ ಭಾರತದ ಮೊದಲ ರಾಷ್ಟ್ರೀಯ ಪತ್ರಿಕೋದ್ಯಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು.

ಜನನ, ವಿದ್ಯಾಭ್ಯಾಸ

ಬದಲಾಯಿಸಿ

ಬೆಂಜಮಿನ್ ಗೈ ಹಾರ್ನಿಮನ್, ಇಂಗ್ಲೆಂಡ್ ನಲ್ಲಿ ೧೮೭೩ ರಲ್ಲಿ ಜನಿಸಿದರು. ತಂದೆ ವಿಲಿಯಮ್ ಗೈ ಹಾರ್ನಿಮನ್ ಬ್ರಿಟಿಷ್ ನೌಕಾದಳದಲ್ಲಿ ಒಬ್ಬ ಉನ್ನತ ಅಧಿಕಾರಿ. ತಾಯಿ ಸರಾ ಎಸ್ತರ್, ಉತ್ತಮ ಕುಟುಂಬದಿಂದ ಬಂದ ಸದ್ಗೃಹಸ್ತೆ. ಆಕೆಯ ತಂದೆ, ಥಾಮಸ್ ಫಾಸ್ಟರ್, ಗ್ರೀಕ್ ನೌಕಾದಳದಲ್ಲಿ ಮುಖ್ಯ ಇಂಜಿನಿಯರ್ ಆಗಿದ್ದರು. ಮಗ, ಹಾರ್ನಿಮನ್ ನನ್ನು ಸೈನ್ಯಾಧಿಕಾರಿಯನ್ನಾಗಿ ಮಾಡಲು ತಂದೆ-ತಾಯಿಗಳು ಆಶೆಪಟ್ಟಿದ್ದರು. ತಾಯಿ ಸರಾ, ಮೊದಲ ಗುರು.ಇಂಗ್ಲೀಷ್, ಲ್ಯಾಟಿನ್, ಫ್ರೆಂಚ್, ಗಣಿತ, ಸಂಗೀತ ಕಲಿಸಿದರು. ಮುಂದೆ 'ಪೋರ್ಟ್ಸ್ಮತ್ ಗ್ರಾಮರ್ ಶಾಲೆ'ಯಲ್ಲಿ ಮುಂದುವರೆಸಿದರು. 'ಕ್ವೀನ್ಸ್ ಸರ್ವೀಸ್ ಹೌಸ್', ಮತ್ತು, 'ಪೂಲ್ವಿಚ್ ನ ರಾಯಲ್ ಮಿಲಿಟರಿ ಅಕಾಡೆಮಿ'ಯಲ್ಲಿ ಸೈನಿಕ ತರಬೇತಿ ಪಡೆದರು. ಮೊದಲಿನಿಂದಲೂ ಹಾರ್ನಿಮನ್ ರಿಗೆ ಪತ್ರಿಕೋದ್ಯಮ ಪ್ರಿಯವಾದ ವಿಷಯವಾಗಿತ್ತು. ತನ್ನ ೨೧ ನೆಯ ವಯಸ್ಸಿನಲ್ಲೇ ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶ, ಪೋರ್ಸ್ ಮತ್ ನಗರದ 'ಸದರ್ನ್ ಡೈಲಿ ಮೇಲ್ ಪತ್ರಿಕೆಯ ವರದಿಗಾರ'ನಾಗಿ ಪ್ರಾರಂಭಮಾಡಿದರು. ೧೮೯೭ ರಲ್ಲಿ ಸಹಾಯಕ ಸಂಪಾದಕನಹುದ್ದೆಗೆ ಏರಿದರು. ೧೯೦೦ ರಲ್ಲಿ ಲಂಡನ್ ನಗರದ 'ಮಾರ್ನಿಂಗ್ ಲೀಡರ್' ಪತ್ರಿಕೆಗೆ ಸಹಾಯಕ ಸಂಪಾದಕರಾದರು. ಮತ್ತಿತರ ಪತ್ರಿಕೆಗಳಲ್ಲಿ ಕೆಲಸಮಾಡಿದರು.

  • 'ಎಕ್ಸ್ ಪ್ರೆಸ್',
  • 'ಡೈಲಿ ಕ್ರಾನಿಕಲ್',
  • 'ಮ್ಯಾನ್ ಚೆಸ್ಟರ್ ಗಾರ್ಡಿಯನ್,' ಸುಪ್ರಸಿದ್ಧ ಪತ್ರಕರ್ತ ಸಿ.ಪಿ.ಸ್ಕಾಟ್ ರವರಮಾರ್ಗದರ್ಶನದಲ್ಲಿ ಕೆಲಸಮಾಡಿದರು.

ಹಾರ್ನಿಮನ್ ಮಾನವ ಜನಾಂಗದ ಹಿತಾಸಕ್ತರು

ಬದಲಾಯಿಸಿ

ಹಾರ್ನಿಮನ್ ರಿಗೆ, ಮಾನವ ಜನಾಂಗವೇ ಒಂದು, ಎಲ್ಲರಿಗೂ ಸ್ವಾತಂತ್ರ್ಯ ದೊರಕಬೇಕು ಎನ್ನುವ ತತ್ವ ಬಹಳವಾಗಿ ಹಿಡಿಸಿತು. ಅದಕ್ಕಾಗಿ ಅವರು ತಮ್ಮ ಪೂರ್ಣ ಜೀವನವನ್ನು ಮುಡಿಪಾಗಿಟ್ಟರು. ೧೯೦೬ ರಲ್ಲಿ ತಮ್ಮ ೩೩ ನೆಯ ವಯಸ್ಸಿನಲ್ಲಿ ಭಾರತಕ್ಕೆ ಬಂದು ಭಾರತೀಯರಾದರು. ಕಲ್ಕತ್ತೆಯ ಸುಪ್ರಸಿದ್ಧ ಪತ್ರಿಕೆ 'ಸ್ಟೇಟ್ಸ್ ಮನ್' ಸಹಸಂಪಾದಕರಾಗಿ ಪತ್ರಿಕಾ ವ್ಯವಸಾಯ ಆರಂಭಿಸಿದರು. ಆಗ ಸ್ವಾತಂತ್ರ್ಯ ಸಂಗ್ರಾಮದ ಕಾವು ರಾಷ್ಟ್ರವನ್ನೆಲ್ಲಾ ವ್ಯಾಪಿಸಿತ್ತು. ಸ್ವಾತಂತ್ರ್ಯ ಆಂದೋಳನದ ಮಹಾತ್ಮ ಗಾಂಧಿಯವರ ತತ್ವಗಳನ್ನು ಕುಲಂಕುಷವಾಗಿ ಪರಿಶೀಲಿಸಿದರು. ಅಹಿಂಸಾತ್ಮಕ ಆಂದೋಳನ ಅವರಿಗೆ ಪ್ರಿಯವಾಯಿತು. ವಸಾಹತುವಾದ ಅವರಿಗೆ ಹಿಡಿಸಲಿಲ್ಲ. ಭಾರತೀಯರಂತೆ ಉಡುಪು ಧರಿಸಿ, ಬರಿಗಾಲಿನಲ್ಲಿ ನಡೆದರು. ವಿಶಿಷ್ಟ ಶೈಲಿ ಭಾರತೀಯ ದಂಡ ಸಂಹಿತ (ಇಂಡಿಯನ್ ಪೀನಲ್ ಕೋಡ್) ಹಾಗೂ ರಾಜ್ಯದ್ರೋಹ ಕಾನೂನಿನ ಮೇಲೆ ಅಧಿಕಾರಯುತ ಪರಿಶ್ರಮ ಗಳಿಸಿದ್ದರು. ಭಾರತೀಯರ ಸಮಸ್ಯೆಗಳನ್ನು ಅರ್ಥಮಾಡಿಕೊಂಡರು ೧೮೫೭ ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವೈಫಲ್ಯತೆ ಅರಿತರು. ಮಾನವಹಕ್ಕುಗಳ ರಕ್ಷಣೆಗಾಗಿ ಇಂಗ್ಲೆಂಡ್ ನಲ್ಲಿದ್ದಾಗಲೇ ಬರವಣಿಗೆಯ ಮೂಲಕ ವಿರೋಧಿಸಿದ್ದರು. ಭಾರತದ ರಾಷ್ಟ್ರೀಯವಾದಿಗಳ ಸಂಪರ್ಕದಿಂದ ಪ್ರಭಾವಿತರಾದರು. ಆಗಿನ ಸಮಯದಲ್ಲಿ ದೇಶದ ನೇತಾರಗಾಗಿದ್ದ, ಸಿ.ಆರ್.ದಾಸ್, ಫಿರೋಜ್ ಶಾ ಮೆಹ್ತ, ಮತ್ತಿತರೊಡನೆ ವಿಷದವಾಗಿ ಚರ್ಚಿಸಿದರು. ಭಾರತೀಯ ಸಮಸ್ಯೆಗಳನ್ನು ಚೆನ್ನಾಗಿ ಅಭ್ಯಾಸಮಾಡಿದರು. ಸರ್. ಫಿರೋಜ್ ಷಾ ಮೆಹ್ತಾ, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್, ಸರ್ ದಿನ್ ಷಾ ವಾಚಾ, ಮತ್ತು ಡಾಕ್ಟರ್ ದಾದಾಭಾಯಿ ನವರೋಜಿ ಜನತೆಯ ಮನಸ್ಸನ್ನು ಸೂರೆಗೊಂಡಿದ್ದ ಭಾರತೀಯ ನಾಯಕರಾಗಿದ್ದರು. ಇವರ ವರ್ಚಸ್ಸು ಮುಂಬಯಿ ನಗರದಲ್ಲಿ ಅಗಾಧವಾಗಿದ್ದು, ರಾಷ್ಟ್ರೀಯ ಚಳವಳಿ ನೇತೃತ್ವ ವಹಿಸಿದ್ದರು. ಅವರಲ್ಲಿ ಫಿರೋಜ್ ಷಾ ಮೆಹ್ತಾ, ಅಗ್ರಗಣ್ಯ ಧುರೀಣರಾಗಿದ್ದರು.

ಬಾಂಬೆ ಕ್ರಾನಿಕಿಲ್”ನ ಸಂಪಾದಕತ್ವ

ಬದಲಾಯಿಸಿ

ಆಗ ಮುಂಬಯಿ ನಗರದಲ್ಲಿದ್ದ ಇಂಗ್ಲಿಷ್ ದಿನಪತ್ರಿಕೆಗಳಾದ “ಟೈಮ್ಸ್ ಆಫ್ ಇಂಡಿಯ' “ಬಾಂಬೆ ಗೆಜೆಟ್” ಮತ್ತು “ಅಡ್ವೋಕೇಟ್ ಆಫ್ ಇಂಡಿಯಾ” ಬ್ರಿಟಿಷ್ ಮಾಲಿಕತ್ವದಲ್ಲಿ ಇದ್ದವು. ಇವು ಫಿರೋಜ್ ಷಾ ಮೆಹ್ತಾ ಅವರನ್ನು ಕಟುವಾಗಿ ಟೀಕಿಸುತ್ತಿದ್ದವು. ಅವುಗಳ ನೀತಿ ಸದಾ ಭಾರತೀಯರ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸುವುದೇ ಆಗಿತ್ತು. ತಮ್ಮ ಅಭಿಪ್ರಾಯಗಳನ್ನು ದೇಶಬಾಂಧವರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕಾದರೆ ತಮ್ಮದೇ ಆದ ಪತ್ರಿಕೆಯೊಂದರ ಅಗತ್ಯವಿದೆ ಎನ್ನವುದನ್ನು ಅವರು ಮನಗಂಡರು.ಅವರ ಈ ಯೋಜನೆಯ ಫಲವಾಗಿ ಮುಂಬಯಿ ನಗರದಿಂದ ೧೯೧೩ ರ ಮಾರ್ಚ್ ೩ ರಂದು “ಬಾಂಬೆ ಕ್ರಾನಿಕಲ್” ಎಂಬ ಇಂಗ್ಲಿಷ್ ದೈನಿಕ ಹೊರಟಿತು. ಪತ್ರಿಕೆ ಆರಂಭಿಸುವ ಮುನ್ನ ಅದಕ್ಕೆ ಸರಿಯಾದ ಸಂಪಾದಕರನ್ನು ಫಿರೋಜ್ ಷಾ ಮೆಹ್ತಾ ಹುಡುಕುತ್ತಿದ್ದರು. ಅವರ ದೃಷ್ಟಿ ಮೊಟ್ಟಮೊದಲು ಬಿದ್ದದು “ಟೈಮ್ಸ್ ಆಫ್ ಇಂಡಿಯಾ” ಪತ್ರಿಕೆಯಲ್ಲಿ ಕೆಲಸಮಾಡಿ ಹೆಸರು ಪಡೆದಿದ್ದ ಇಂಗ್ಲಿಷ್ ಪತ್ರಕರ್ತ ಪ್ಯಾಟ್ ಲೊವೆಟ್. ಆದರೆ ಕಲ್ಕತ್ತ ನಗರದ ಪತ್ರಿಕೋದ್ಯಮದಲ್ಲಿ ಸೇರಿಹೋಗಿದ್ದ ಲೊವೆಟ್ ಕಲ್ಕತ್ತೆಯಿಂದ ಮುಂಬಯಿಗೆ ಬರಲು ಒಪ್ಪಲಿಲ್ಲ. ಅನಂತರ ಮೆಹ್ತಾ, ಅಲಹಾಬಾದಿನಲ್ಲಿ “ಲೀಡರ್” ಪತ್ರಿಕೆಯ ಸಂಪಾದಕರಾಗಿದ್ದ ಸಿ. ವೈ. ಚಿಂತಾಮಣಿ ಅವರನ್ನು ಆಹ್ವಾನಿಸಿದರು. ಚಿಂತಾಮಣಿಯವರು ಸಹಿತ ಬರಲಾಗಲಿಲ್ಲ. ಅಂತಿಮವಾಗಿ ಫಿರೋಜ್ ಷಾ ಮೆಹ್ತಾ, 'ಮಿನ್ ಹಾರ್ನಿಮನ್' ರನ್ನು “ಬಾಂಬೆ ಕ್ರಾನಿಕಲ್” ಪತ್ರಿಕೆಯ ಸಂಪಾದಕರಾಗಲು ಕೇಳಿಕೊಂಡರು. ಹಾರ್ನೀಮನ್ ಒಪ್ಪಿಕೊಂಡು ಕಲ್ಕತ್ತೆಯಿಂದ ಮುಂಬಯಿಗೆ ಬಂದರು. ಹೀಗೆ ಅವರ ರಾಷ್ಟ್ರೀಯ ವಾದಿ ಪತ್ರಿಕೋದ್ಯಮ ಆರಂಭವಾಯಿತು. ಪತ್ರಿಕೆ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನೊಡನೆ ತಾನೂ ಒಂದೆನ್ನುವಂತೆ ನಡೆದುಕೊಂಡಿತು. “ಬಾಂಬೆ ಕ್ರಾನಿಕಲ್” ಮುಂಬಯಿ ನಗರದ ಜನತೆಯನ್ನು ಆಶ್ಚರ್ಯಗೊಳಿಸಿತು. ಆಗಿನ ಇತರ ಪತ್ರಿಕೆಗಳ ಬೆಲೆ ನಾಲ್ಕು ಆಣೆ ಆಗಿದ್ದರೆ, ಇದರ ಬೆಲೆ ಕೇವಲ ಒಂದು ಆಣೆ. ಆದರೆ ಇತರ ಪತ್ರಿಕೆಗಳಷ್ಟೇ ಸುದ್ದಿ ವಿಷಯಗಳು ಇರುತ್ತಿದ್ದವು. ಈ ಕಡಿಮೆ ದರ ಸಹ “ಬಾಂಬೆ ಕ್ರಾನಿಕಲ್” ಬಹುಬೇಗ ಜನಪ್ರಿಯವಾಗಲು ಕಾರಣವಾಯಿತು.

ರಾಷ್ರೀಯ ವಾದಿಗಳಿಗೆ ಬೆಂಬಲ

ಬದಲಾಯಿಸಿ

ಪತ್ರಿಕೆಯ ನಿರ್ದೇಶಕರ ಮಂಡಳಿಯಲ್ಲಿ ಒಂದಲ್ಲ ಒಂದು ಬಾರಿ ನಿರ್ದೆಶಕರಾಗಿದ್ದವರು :

  1. ಆಗಿನಕಾಲದಲ್ಲಿ ಧುರೀಣರಾಗಿದ್ದ ಉಮರ್ ಸೋಬಾನಿ,
  2. ಮೊಹಮ್ಮದ್ ಅಲಿಜಿನ್ನಾ,
  3. ಮೋತಿಲಾಲ್ ನೆಹರು,
  4. ಚಿಮನ್ ಲಾಲ್ ಸೆಟಲ್‌ವಾಡ್,
  5. ಕೆ.ಎಫ್. ನಾರಿಮನ್,

ಫಿರೋಜ್ ಷಾ ಮೆಹ್ತಾ, ತಮ್ಮ ಪತ್ರಿಕೆಯ ಸಂಪಾದಕರಾಗಿದ್ದ ಹಾರ್ನಿಮನ್ ರವರಿಗೆ ಪರಮಾವಧಿ ಸಂಪಾದಕೀಯ ಸ್ವಾತಂತ್ರ್ಯ ನೀಡಿದ್ದರು. ದೈನಂದಿನ ಪತ್ರಿಕಾ ವಿಷಯಗಳಲ್ಲಿ ಅವರು ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಇಬ್ಬರ ನಂಬಿಕೆ, ಧ್ಯೇಯ ಮತ್ತು ತತ್ವಗಳು ಒಂದೇ ಆಗಿದ್ದವು. ಈ ಅವಕಾಶವನ್ನು ಹಾರ್ನಿಮನ್ ಪೂರ್ಣವಾಗಿ ಬಳಸಿಕೊಂಡರು. ಪತ್ರಿಕೆಯಲ್ಲಿನ ತಮ್ಮ ಬರಹಗಳಿಂದ ಇಂಗ್ಲಂಡಿನ ತಮ್ಮ ದೇಶಬಾಂಧವರ ಗಮನವನ್ನು ಭಾರತದ ಸ್ವಾತಂತ್ರ್ಯದತ್ತ ಹೊರಳಿಸಬಹುದು ಎಂದು ಅವರು ಭಾವಿಸಿದ್ದರು. ರಾಷ್ಟ್ರೀಯವಾದಿಗಳ ಚಟುವಟಿಕೆಗಳಿಗೆ ಈ ಪತ್ರಿಕೆಯಲ್ಲಿ ಸತತವಾಗಿ ಪ್ರಚಾರ ದೊರಕಿತು. ಹಾರ್ನಿಮನ್ ರವರ ಲೇಖನ ನಾಮ “ಅಟ್ರೋಪಸ್” ಎಂದು. ಬ್ರಿಟಿಷ್ ಅಧಿಕಾರಿಗಳ ಬರ್ಬರ ಕೃತ್ಯಗಳ ಮೇಲೆ ಬೆಳಕು ಚೆಲ್ಲಿದರು. ೧೯೧೯ ರಲ್ಲಿ ಡಾಕ್ಟರ್ ಆನಿಬೆಸೆಂಟ್ ಹೋಮ್ ರೂಲ್ ಚಳವಳಿಯನ್ನು ಆರಂಭಿಸಿದಾಗ ಹಾರ್ನಿಮನ್ ರ ಉಪಾಧ್ಯಕ್ಷರಾದರು. ಬಾಲಗಂಗಾಧರ್ ತಿಲಕ್ ಮತ್ತು ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ರಾಷ್ಟ್ರದಾದ್ಯಂತ ನಡೆಸಿದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇರವಾಗಿ ಭಾಗವಹಿಸಿದ್ದರು. ಬರಿಗಾಲಿನಲ್ಲಿ ನಡೆಯುತ್ತಿದ್ದುದರಿಂದ ಅವರನ್ನು “ಬರಿಗಾಲು ಸಂಫಾದಕ” ಎಂದು ಜನರು ಪ್ರೀತಿಯಿಂದ ಕರೆಯುತ್ತಿದ್ದರು.

ಬ್ರಿಟಿಷ್ ಸರಕಾರ ಅವರ ನೀತಿಯನ್ನು ಒಪ್ಪಲಿಲ್ಲ

ಬದಲಾಯಿಸಿ

ತಮ್ಮವರ ವಿರುದ್ಧವೇ ಹಾರ್ನಿಮನ್ ಲೇಖನ ಯುದ್ಧ ಆರಂಭಿಸಿದ್ದು ಬ್ರಿಟಿಷರಿಗೆ ವಿಚಿತ್ರವೆನಿಸಿತು. ತಿರಸ್ಕಾರ ಪೂರ್ಣ ದೃಷ್ಟಿಯಿಂದ ಕಂಡರು. ಹಾರ್ನಿಮನ್ ಸರಕಾರದ ವಿರುದ್ಧ ಅವರ ಆಡಳಿತದ ಅಪಪ್ರಚಾರದ ಸಮರ ಆರಂಭವಾಯಿತು.

ರೌಲತ್ ಆಕ್ಟ್

ಬದಲಾಯಿಸಿ

ಬ್ರಿಟಿಷ್ ಸರಕಾರ “ರೌಲತ್ ಶಾಸನ” ಎಂಬ ಕಾಯಿದೆಯನ್ನು ಮಾಡಿತು. ಇದರ ಪ್ರಕಾರ ಯಾರಾದರೂ ಸರಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆಂದು ಸರಕಾರಕ್ಕೆ ಅನುಮಾನ ಬಂದರೆ ಅವರನ್ನು ಬಂಧಿಸಿ ವಿಚಾರಣೆ ಇಲ್ಲದೆಯೇ ಸೆರೆಮನೆಯಲ್ಲಿ ಇಡಬಹುದಾಗಿತ್ತು. ಸರಕಾರ ಯಾರ ಮೇಲಾದರೂ ಮೊಕದ್ದಮೆ ಹೂಡಿದರೆ ವಿಚಾರಣೆಗೆ ಒಳಗಾದವನು ತನ್ನ ಪರವಾಗಿ ವಕೀಲರನ್ನು ನೇಮಿಸುವಂತಿರಲಿಲ್ಲ. ಹಾರ್ನಿಮನ್ ತಮ್ಮ ಲೇಖನಿಯ ಮೂಲಕ ಖಂಡಿಸಿದರು. ಈ ಕರಾಳ ಶಾಸನವನ್ನು ವಿರೋಧಿಸಿ ಮುಂಬಯಿ ನಗರದ ಚೌಪಾಟಿ ಮೈದಾನದಲ್ಲಿ ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ಲಕ್ಷಾಂತರ ಮಂದಿ ಸಭೆ ಸೇರಿ ಪ್ರತಿಭಟನೆ ವ್ಯಕ್ತಪಡಿಸಿದಾಗ ಹಾರ್ನೀಮನ್ ಕೂಡಾ ಅವರಲ್ಲಿ ಪಾಲುಗೊಂಡರು.

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ

ಬದಲಾಯಿಸಿ

ಬ್ರಿಟಿಷ್ ಸರ್ಕಾರದ ಅಸಹನೆ ಹೆಚ್ಚಾಗಿ, ೧೯೧೯ರ ಏಪ್ರಿಲ್ ೧೩ ರಂದು ಪಂಜಾಬಿನಲ್ಲಿ ಅಮೃತಸರದ ಚಿನ್ನದ ದೇವಾಲಯದ ಬಳಿ ಇದ್ದ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ಮಕ್ಕಳು, ಮಹಿಳೆಯರು, ಮತ್ತು ಪುರುಷರು ಬ್ರಿಟಿಷ್ ಆಡಳಿತದ ವಿರುದ್ಧ ರಾಷ್ಟ್ರೀಯ ಪ್ರತಿಭಟಿಸಲು ಸೇರಿದ್ದರು. ಇದನ್ನು ಕಂಡ ಬ್ರಿಟಿಷ್ ಸೈನ್ಯಾಧಿಕಾರಿ ಜನರಲ್ ಓಡ್ವಯರ್, ಗೋಡೆಗಳಿಂದ ಸುತ್ತುವರೆಯಲ್ಪಟ್ಟಿದ್ದ ಈ ಮೈದಾನಕ್ಕೆ ತನ್ನ ಸೈನಿಕರೊಡನೆ ಲಗ್ಗೆ ಹಾಕಿ ಸಹಸ್ರಾರು ಮಂದಿ ಮುಗ್ಧ ನಾಗರಿಕರ ಹತ್ಯೆ ಮಾಡಿದನು. ಬ್ರಿಟಿಷ್ ಸರಕಾರ ಪಂಜಾಬಿನಲ್ಲಿ ಸೈನಿಕ ಆಡಳಿತವನ್ನು ಹೊರಿಸಿತು. ಪತ್ರಿಕೆಗಳು ಯಾವುದೇ ಸುದ್ದಿಯನ್ನು ಪ್ರಕಟಿಸುವ ಮೊದಲು ಸರಕಾರಿ ಅಧಿಕಾರಿಗೆ ಒಪ್ಪಿಸಬೇಕು. ಅವನ ಅನುಮತಿಯ ಬಳಿಕವೇ ಪ್ರಕಟಿಸಬೇಕು ಎಂದು ಸರಕಾರ ಆಜ್ಞೆ ಮಾಡಿತು. “ಬಾಂಬೆ ಕ್ರಾನಿಕಲ್” ಪತ್ರಿಕೆಯ ಸಂಪಾದಕ ಹಾರ್ನಿಮನ್‌ರು ತಮ್ಮ ಪತ್ರಿಕೆಯ ಸುದ್ದಿಗಳನ್ನು ಸರಕಾರಿ ಅಧಿಕಾರಿಗೆ ಕಳುಹಿಸುತ್ತಿದ್ದರು. ಅಧಿಕಾರಿ ಅನೇಕ ಪದಗಳನ್ನೂ, ವಾಕ್ಯಗಳನ್ನೂ ಹೊಡೆದು ಹಾಕಿ ಹಿಂತಿರುಗಿಸುತ್ತಿದ್ದ. ಹಾರ್ನಿಮನ್ ರು ಅಧಿಕಾರಿ ತೆಗೆದು ಹಾಕಿದ ಶಬ್ದಗಳ ಮತ್ತು ವಾಕ್ಯಗಳ ಸ್ಥಳಗಳನ್ನು ಖಾಲಿ ಬಿಟ್ಟು ಅಚ್ಚು ಮಾಡುತ್ತಿದ್ದರು. ಓದುವವರಿಗೂ ಇದರಿಂದ, ಇಲ್ಲಿ ಜನರಿಗೆ ತಿಳಿಯಬಾರದೆಂದು ಸರಕಾರ ತೆಗೆದು ಹಾಕಿದ್ದ ಸುದ್ದಿ ಇತ್ತು ಎಂದು ತಿಳಿಯುತ್ತಿತ್ತು.

ಅನೇಕ ಚಳವಳಿಗಳು

ಬದಲಾಯಿಸಿ

೧೯೧೭ರಲ್ಲಿ ಮದರಾಸಿನಲ್ಲಿ ಸರಕಾರ ಅನಿಬೆಸೆಂಟ್ ಅವರನ್ನು ಬಂಧಿಸಿದಾಗ ಅವರ “ನ್ಯೂ ಇಂಡಿಯಾ” ಪತ್ರಿಕೆ ಸಂಕಷ್ಟಕ್ಕೆ ಒಳಗಾಯಿತು. ಪತ್ರಿಕೆಯಿಂದ ಭಾರೀ ಮೊತ್ತದ ಭದ್ರತಾ ಠೇವಣಿಯನ್ನು ವಸೂಲು ಮಾಡಲಾಯಿತು. ಇದೇ ರೀತಿಯಾಗಿ ಬಂಗಾಳದ ವಿಭಜನೆಯಾದಾಗ ಅದನ್ನು ಬಂಗಾಳಿ ಜನರೊಡನೆ ಸೇರಿ ಹಾರ್ನಿಮನ್ ವಿರೋಧಿಸಿದರು.ಹೀಗೆ ಹಾರ್ನಿಮನ್ ಅವರ ರಾಜಕೀಯ ಹಾಗೂ ಪತ್ರಿಕಾ ಚಟುವಟಿಕೆಗಳು ಹೆಚ್ಚಾದಂತೆ, ಸರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿ ಭಾರತದ ರಕ್ಷಣಾ ಕಾಯಿದೆಯ ಪ್ರಕಾರ ಹಾರ್ನಿಮನ್ನರನ್ನು ಗಡಿಪಾರು ಮಾಡುವ ಆಜ್ಞೆ ಸಿದ್ಧವಾಯಿತು.

ಗಡೀಪಾರು

ಬದಲಾಯಿಸಿ

೧೯೧೯ರ ಏಪ್ರೀಲ್ ೨೬ರ ಮಧ್ಯಾಹ್ನ ಮೂರು ಗಂಟೆ. ಹಾರ್ನಿಮನ್ ಗಡಿಪಾರಿನ ಆಜ್ಞೆಯನ್ನು ಅವರ ಕೈಗಿಡಲಾಯಿತು.[] ಅವರನ್ನು ಯಾವ ಸ್ನೇಹಿತರನ್ನೂ ಭೇಟಿ ಮಾಡಿ ಈ ವಿಚಾರವನ್ನು ತಿಳಿಸಲೂ ಅವಕಾಶ ನೀಡದೆ ನೇರವಾಗಿ ಬಂದರಿನಿಂದ ಕರೆದೊಯ್ಯಲಾಯಿತು. ಏಪ್ರಿಲ್ ೨೭ರಂದು ಹಾರ್ನಿಮನ್ ಅವರನ್ನು ಹೊತ್ತ ಎಸ್.ಎಸ್.ಟಕಾಡ ಹಡಗು, ಮುಂಬಯಿ ಸಮುದ್ರ ತೀರವನ್ನು ಬಿಟ್ಟಿತು. ತೀವ್ರವಾದ ಸಾರ್ವಜನಿಕ ಪ್ರತಿಕ್ರಿಯೆ ದೇಶದಾದ್ಯಂತ ಮೊಳಗಿತು. ಈ ಗಡಿಪಾರಿನ ನ್ಯಾಯ ಬದ್ಧತೆಯನ್ನು ೧೯೧೯ರ ಮೇ ೨೨ರಂದು ಬ್ರಿಟಿಷ್ ಪಾರ್ಲಿಮೆಂಟಿನ ಕೆಳಮನೆಯಾದ ಕಾಮನ್ಸ್ ಸಭೆಯಲ್ಲಿ ಪ್ರಶ್ನಿಸಲಾಯಿತು. ಬ್ರಿಟಿಷ್ ಸರಕಾರದ ನಿಲುವನ್ನು ಸಮರ್ಥಿಸುತ್ತ ವಿದೇಶಮಂತ್ರಿ ಮಾಂಟೆಗ್ಯು ಹೀಗೆ ತಮ್ಮ ವಾದವನ್ನು ಮಂಡಿಸಿದ್ದರು.

“ನಾವು ಇಲ್ಲಿಗೆ ಹಾರ್ನೀಮನ್ನರ ಬಗ್ಗೆ ಸಹನೆಯಿಂದಲೇ ಇದ್ದೇವೆ. ರಾಜಕೀಯದ ವೈಪರೀತ್ಯ ನಂಬಿಕೆಗಳಲ್ಲಿ ಮಧ್ಯೆ ಪ್ರವೇಶಿಸುವ ಇಚ್ಛೆ ನಮಗಿಲ್ಲ, ಎನ್ನುವುದಕ್ಕೆ ಇದಕ್ಕಿಂತ ಉತ್ತಮವಾದ ಉದಾಹರಣೆ ಮತ್ತೊಂದು ಯಾವುದೇ ಸಂದರ್ಭದಲ್ಲೂ ಇಲ್ಲ. ಆದರೆ ಈ ಮಹಾಶಯ, ಗಲಭೆಗಳು ನಡೆಯುತ್ತಿದ್ದಾಗ ಮತ್ತಷ್ಟು ಕಿಚ್ಚೆಬ್ಬಿಸಲು ಪತ್ರಿಕೆಯನ್ನು ಬಳಸಿದ. ಮತ್ತು ದೆಹಲಿಯ ರಸ್ತೆಗಳಲ್ಲಿ ಬ್ರಿಟಿಷ್ ಸೈನಿಕರು ಮೆತ್ತನೆಯ ಗುಂಡುಗಳನ್ನು ಬಳಸುತ್ತಿದ್ದಾರೆ, ಎಂದು ಆಪಾದಿಸಲು ಪತ್ರಿಕೆಯ ಅಂಕಣವನ್ನು ತೆರೆದಿಟ್ಟಾಗ, ಹಾಗೂ ಮುಂಬಯಿಯಲ್ಲಿ ಇರುವ ಬ್ರಿಟಿಷ್ ಸೈನಿಕರಲ್ಲಿ ವಿರೋಧಿಭಾವನೆ ಮತ್ತು ಅವಿಧೇಯತೆಯನ್ನು ಪ್ರಚೋದಿಸುವ ದೃಷ್ಟಿಯಿಂದ ಆತನ ಪತ್ರಿಕೆಯ ಪ್ರತಿಗಳನ್ನು ಉಚಿತವಾಗಿ ಹಂಚಿದಾಗ, ಆತ ಭಾರತವನ್ನು ಬಿಡಲು ಇದೇ ಸೂಕ್ತ ಸಮಯವೆಂದು ನಾನು ಹೇಳುತ್ತೇನೆ”. ಆಗ ಕರ್ನಲ್ ವೆಡ್ಜ್ ವುಡ್ ಕೇಳಿದರು : “ಅವರನ್ನು ವಿಚಾರಣೆಗೆ ಏಕೆ ಗುರಿಪಡಿಸಬಾರದು?”

ಈ ರೀತಿ ಭಾರತದಲ್ಲಿ ನಡೆಯುವ ಗಲಭೆಗಳಿಗೆ ಹಾರ್ನಿಮನ್ ರೇ ಕಾರಣ. ಅವರ ಬ್ರಿಟಿಷ್ ನೀತಿಯ ಟೀಕೆಯೇ ಇದಕ್ಕೆ ಹಿನ್ನೆಲೆಯಾಗಿದ್ದರಿಂದ ಈ ಆಪಾದನೆಗಳಿಗೆ ಹಾರ್ನಿಮನ್ “ಮಾಂಚೆಸ್ಟರ್ ಗಾರ್ಡಿಯನ್” ಪತ್ರಿಕೆಯ ಮೂಲಕ ಜುಲೈ ೧೧ ರಂದು ಸರಿಯಾದ ಉತ್ತರ ನೀಡಿದರು. ಮಾಂಟೆಗ್ಯೂ ಅವರ ಅಸ್ಪಷ್ಟ, ಕಲ್ಪಿತ ಹಾಗೂ ಸುಳ್ಳು ಆರೋಪಗಳನ್ನು ಬಯಲಿಗೆ ಎಳೆದರು. ಅಹಿಂಸಾತ್ಮಕ ಚಳವಳಿ ಹಾಗೂ ಸತ್ಯಾಗ್ರಹದ ಉದ್ದೇಶಗಳನ್ನು ಅವಿವರವಾಗಿ ಸ್ಪಷ್ಟೀಕರಿಸಿದರು. ಮುಗ್ಧ ಹಾಗೂ ನಿರಪರಾಧಿ ಜನರ ಗುಂಪುಗಳ ಮೇಲೆ ಬಾಂಬುಗಳನ್ನು ಎಸೆಯುವುದು ಮತ್ತು ಗುಂಡಿನ ಮಳೆಗರೆಯುವುದು, ಕೊಲ್ಲುವುದು; ಇವನ್ನೆಲ್ಲಾ ಖಂಡಿಸಿದರು. ಬ್ರಿಟಿಷ್ ಸರಕಾರದ ಇಂತಹ ಕ್ರಮಗಳನ್ನು ಟೀಕಿಸುವುದು ಸೂಕ್ತವಾಗಿದೆ" ಎಂದರು.

ಹಾರ್ನಿಮನ್ ಗಡಿಪಾರ್ ಅಗಿ ಹೋದಾಗ

ಬದಲಾಯಿಸಿ

ಹಾರ್ನಿಮನ್ನರನ್ನು ಗಡಿಪಾರು ಮಾಡಿದ ಮೇಲೆ 'ಬಾಂಬೆ ಕ್ರಾನಿಕಲ್ ಪತ್ರಿಕೆ'ಯ ಸಾರಥ್ಯವನ್ನು ಮಾರ್ಮಡ್ಯೂಕ್ ಪಿಕ್‌ಥಾಲ್. ವಹಿಸಿಕೊಂಡರು ಸೈಯ್ಯದ ಅಬ್ದುಲ್ಲಾಬ್ರೆಲ್ಲಿ ಸಹ ಸಂಪಾದಕರಾಗಿ ಸಹಕಾರ ನೀಡಿದರು. ಭಾರತೀಯ ಪತ್ರಿಕೆಗಳ ಮೇಲೆ ಪೂರ್ವ ಪರಿಶೀಲನೆಯನ್ನು (ಸೆನ್ಸಾರ್ ಷಿಫ್) ವಿಧಿಸಲಾಯಿತು. ಪತ್ರಿಕೆಗಳು ಇದನ್ನು ವಿರೋಧಿಸಿದವು. ಸ್ವಲ್ಪ ಕಾಲಾನಂತರ ಪೂರ್ವ ಪರಿಶೀಲನೆಯನ್ನು ಸರಕಾರ ಹಿಂತೆಗೆದುಕೊಂಡಿತು. ಸುಮಾರು ಒಮದು ತಿಂಗಳು ಬಾಂಬೆ ಕ್ರಾನಿಕಲ್ ತನ್ನ ಪ್ರಕಟಣೆಯನ್ನು ನಿಲ್ಲಿಸಿತು. ಪೂರ್ವಪರಿಶೀಲನೆ ರದ್ದಾದ ಮೇಲೆ ಪತ್ರಿಕೆ ಪ್ರಕಟಣೆಯನ್ನು ಆರಂಭಿಸಿತು. ಆದರೆ ಅದರಿಂದ ೫೦೦೦ ರೂಪಾಯಿಗಳನ್ನು ಭದ್ರತಾ ಠೇವಣಿಗಳನ್ನುಮೊದಲು ನಂತರ ೧೦,೦೦೦ ರೂಪಾಯಿಗೆ ಕೇಳಲಾಯಿತು.

ಮುಂಬಯಿಯಲ್ಲಿ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ೧೯೧೯ರ ಜೂನ್ ೨೫ ರಂದು ನಡೆದ ಭಾರೀ ಸಭೆಯು ಹಾರ್ನಿಮನ್ ರ ಮೇಲಿನ ಗಡಿಪಾರು ಆಜ್ಞೆಯನ್ನು ಸರಕಾರ ಹಿಂದಕ್ಕೆ ನೆಗೆದುಕೊಳ್ಳಲು ಒಂದು ಠರಾವನ್ನು ಅಂಗೀಕರಿಸಿತು. ದೀನ್ ಷಾಪೆಟಿಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ನಿರ್ಣಯವೊಂದನ್ನು ಸ್ವೀಕರಿಸಿತು. ಯಾವುದೇ ಕಾನೂನು ಭಂಗದ ಸಾಕ್ಷ್ಯವಿಲ್ಲದೆ ಹಾರ್ನಿಮನ್ ಅವರನ್ನು ದೇಶದ ಹೊರಗೆ ಕಳುಹಿಸಲಾಗಿದೆ. ಪ್ರತಿಯೊಬ್ಬ ಪುರುಷನಿಗೆ ಅಥವಾ ಮಹಿಳೆಗೆ ಆಗಲಿ ಬಹಿರಂಗ ವಿಚಾರಣೆಯ ಮತ್ತು ಅದರಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಅವಕಾಶ ಇರಬೇಕು. ಇಂತಹ ವಿಚಾರಣೆಯಲ್ಲಿ ತಪ್ಪು ಎಸಗಿದವರಿಗೆ ತಕ್ಕ ಶಿಕ್ಷೆ ವಿಧಿಸುವುದನ್ನು ಯಾವ ಬುದ್ಧಿವಂತ ಮನುಷ್ಯನೂ ವಿರೋಧಿಸಲಾರ, ಎಂದು ಹೇಳಲಾಯಿತು.

ಕ್ಯಾಥೊಲಿಕ್ ಹೆರಾಲ್ಡ್ ಪತ್ರಿಕೆ

ಬದಲಾಯಿಸಿ

೧೯೨೧ರಲ್ಲಿ “ಕ್ಯಾಥೋಲಿಕ್ ಹೆರಾಲ್ಡ್” ಪತ್ರಿಕೆಯಲ್ಲಿ ಭಾರತಕ್ಕೆ ಸ್ವಾತಂತ್ರ ನೀಡಬೇಕಾದ ಅಗತ್ಯವನ್ನುಪ್ರಶ್ನಿಸಿದ್ದರು. ಇದನ್ನು ಹಾರ್ನಿಮನ್ ಪ್ರಬಲವಾಗಿ ವಿರೋಧಿಸಿ, “ಕ್ಯಾಥೋಲಿಕ್ ಹೆರಾಲ್ಡ್” ಪತ್ರಿಕೆ,ಹಾರ್ನಿಮನ್ ರನ್ನು ಪರಿಚಯಿಸುತ್ತ, ಅವರನ್ನು ಭಾರತದ ರಾಷ್ಟ್ರೀಯ ಚಳವಳಿಗಾರರ ಪರವಾಗಿ ಹೋರಾಡುತ್ತಿದ್ದಾರೆ" ಎಂದು ವರದಿಮಾಡಿತು.

ಬ್ರಿಟಿಷ್ ಸರಕಾರ “ಕ್ಯಾಥೋಲಿಕ್ ಹೆರಾಲ್ಡ್” ಪತ್ರಿಕೆಯ ಪ್ರತಿಗಳು ಭಾರತಕ್ಕೆ ರವಾನೆಯಾಗುವುದನ್ನು ನಿಲ್ಲಿಸಿತು. ಭಾರತದಲ್ಲಿದ್ದ ಸ್ನೇಹಿತರಿಗೆ ವೈಯಕ್ತಿಕ ಪತ್ರಗಳನ್ನು ಬರೆದು ಲೇಖನಗಳನ್ನು ಅವುಗಳ ಜೊತೆಯಲ್ಲಿ ಕಳುಹಿಸಿದರು. ಹೀಗೆ, ಆಗ “ಬಾಂಬೆ ಕ್ರಾನಿಕಲ್” ಪತ್ರಿಕೆಯ ಸಂಪಾದಕರಾಗಿದ್ದ ಮಾರ್ಮಡ್ಯೂಕ್ ಪಿಕ್‌ಥಾಲ್ ಅವರ ಲೇಖನಗಳು ತಲುಪಿದವು. ಅವನ್ನು ಪತ್ರಿಕೆಯಲ್ಲಿ ಪೂರ್ಣವಾಗಿ ಪುನರ್ ಮುದ್ರಿಸಲಾಯಿತು.

ಕಾಂಗ್ರೆಸ್ ಪಕ್ಷದ ಜೊತೆ ಒಡನಾಟದಿಂದ “ಬಾಂಬೆ ಕ್ರಾನಿಕಲ್” ಪತ್ರಿಕೆಯು ಆರ್ಥೀಕವಾಗಿ ಭಾರೀ ನಷ್ಟವನ್ನು ಅನುಭವಿಸಬೇಕಾಯಿತು. ಸರಕಾರ ೧೯೩೦ರಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಪತ್ರಿಕೆಗಳು ಪ್ರಕಟಿಸದಂತೆ ನಿಷೇಧಿಸಿತು. ಮುದ್ರಕರು ಮತ್ತು ಪ್ರಕಾಶರಿಂದ ೩,೦೦೦ ರುಪಾಯಿ ಠೇವಣಿ ಕೇಳಲಾಯಿತು. ಸ್ವಲ್ಪ ಸಮಯದ ನಂತರ ಅದನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿತು. ಕರ್ನಾಟಕದ ಧಾರವಾಡದಲ್ಲಿ ಸರಕಾರ ನಡೆಸಿದ ಗೋಲಿಬಾರಿನ ಹತ್ಯೆಗಳನ್ನು ಪತ್ರಿಕೆ ಖಂಡಿಸಿತು. ಆಗ “ಬಾಂಬೆ ಕ್ರಾನಿಕಲ್” ಪತ್ರಿಕೆಯನ್ನು ಎಂ. ಎಚ್. ಬೆಳಗಾಂವಾಲಾ ಕೊಂಡುಕೊಂಡು ಅದನ್ನು ಲಿಮಿಟೆಡ್ ಕಂಪನಿಯನ್ನಾಗಿ ಪರಿವರ್ತಿಸಿದರು. ಪತ್ರಿಕೆ ೧೯೩೩ರಲ್ಲಿ ಎಂ.ಎನ್. ಕಾಮಾ ಅವರ ಕೈ ಸೇರಿತು.

ಹಾರ್ನಿಮನ್ ಭಾರತಕ್ಕೆ ವಾಪಸ್ಸಾದರು

ಬದಲಾಯಿಸಿ

ಇಂಗ್ಲಂಡಿನಲ್ಲಿ ಇದ್ದಾಗ ಸಹ ಹಾರ್ನಿಮನ್ ಅವರು ಗಾಂಧಿಜಿ ಮತ್ತು ಇತರ ಭಾರತೀಯ ನಾಯಕರೊಡನೆ ಸತತವಾಗಿ ಸಂಪರ್ಕ ಇರಿಸಿಕೊಂಡಿದ್ದರು. ಗಡಿಪಾರು ಆಜ್ಞೆಯನ್ನು ಸರಕಾರ ಹಿಂತೆಗೆದುಕೊಳ್ಳದೆ ಇದ್ದರೂ ಹಾರ್ನಿಮನ್ ೧೯೨೬ರಲ್ಲಿ ಭಾರತಕ್ಕೆ ಮರಳಿದರು. “ಬಾಂಬೆ ಕ್ರಾನಿಕಲ್” ಸಂಪಾದಕತ್ವವನ್ನು ಮತ್ತೆ ವಹಿಸಿಕೊಂಡರು. ಮೋತಿಲಾಲ್ ನೆಹರು ತಮ್ಮ ಆಸಕ್ತಿಯನ್ನು ತೋರಿಸಿದರು. ಹೀಗಾಗಿ ಇದರ ಅಕ್ರಮ ಗಡಿಪಾರು ಆಜ್ಞೆ ಮುರಿದುಬಿತ್ತು. ಮುಂದಿನ ಇಪ್ಪತ್ತು ವರ್ಷಗಳ ಕಾಲ ಹಾರ್ನಿಮನ್ ಭಾರತ ರಾಷ್ಟ್ರೀಯ ಆಂದೋಲನದಲ್ಲಿ ಮುಳುಗಿ ಹೋದರು. ಸತ್ವಶಾಲಿ ಸಂಪಾದಕರಾಗಿದ್ದ ಅವರು ಗಾಂಧಿಜಿಯವರ ಆದರ್ಶ ತತ್ವಗಳನ್ನು ಪ್ರಚಾರಮಾಡಿ ಭಾರತದ ಸ್ವಾತಂತ್ರ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸಿದರು.ಮಾಂಟೆಗ್ಯೂ ಚೆಲ್ಮ್ಸ್ ಫರ್ಡ್ ಸುಧಾರಣೆಗಳನ್ನು ತೀವ್ರವಾಗಿ ಟೀಕಿಸದರು. ಮೊದಲನೆಯ ದುಂಡು ಮೇಜಿನ ಪರಿಷತ್ತು ೧೭೩೦ರಲ್ಲಿ ಲಂಡನಿನಲ್ಲಿ ಸೇರಿದಾಗ ಅದನ್ನು ವರದಿ ಮಾಡಲು “ಬಾಂಬೆ ಕ್ರಾನಿಕಲ್” ತನ್ನ ಪ್ರತಿನಿಧಿಯನ್ನು ಕಳುಹಿಸಿತ್ತು. ಗೋಪಾಲಕೃಷ್ಣ ಗೋಖಲೆ, ಹಾರ್ನಿಮನ್ ಅವರು ತಮಗೆ ನೀಡಿದ ಸಹಾಯವನ್ನು ಸ್ಮರಿಸಿದರು. ಮಹಾತ್ಮಾಗಾಂಧಿ ಅವರ ಬಗ್ಗೆ ಹೀಗೆ ಹೇಳಿದರು.

“ಶ್ರೀ ಹಾರ್ನಿಮನ್ ಧೈರ್ಯಶಾಲಿ ಹಾಗೂ ಉದಾರವಾದಿ ಇಂಗ್ಲಿಷ್ ಪ್ರಜೆ. ಅವರು ನಮಗೆ ನೀಡಿರುವ ಮಂತ್ರ ಸ್ವಾತಂತ್ರ್ಯ”. ಅಲಹಾಬಾದಿನ ಲೀಡರ್ ಪತ್ರಿಕೆ ೧೯೩೩ರಲ್ಲಿ ಶ್ರೀ ಹಾರ್ನಿಮನ್ ವೃತ್ತಿಯ ಏರುಪೇರುಗಳನ್ನು ಧೀಮಂತಿಕೆಯಿಂದ ಅನುಭವಿಸಿದ ಪ್ರಯತ್ನಶೀಲ, ಹಾಗೂ ಎಂದಿಗೂ ಕುಂದದ ಉತ್ಸಾಹದ ಪತ್ರಕರ್ತ ಮತ್ತು ಅನುಭವಿ ವ್ಯಕ್ತಿ” ಎಂದು ಬರೆಯಿತು. ಶಂಕರ್ಸ್ ವೀಕ್ಲಿ “ಭಾರತಕ್ಕೆ ಇಂಗ್ಲೆಂಡ್ ನೀಡಿದ ಅತ್ಯಂತ ಭಾರೀ ಹಾಗೂ ನಿಜವಾದ ಕಾಣಿಕೆ” ಎಂದು ಹಾರ್ನಿಮನ್ ಅವರನ್ನು ಪ್ರಶಂಸಿಸಿತು. "ಭಾರತಕ್ಕೆ ಸ್ವಾತಂತ್ರ್ಯ ಸಿಗುವವರೆವಿಗೂ ನನ್ನ ಲೇಖನಿಗೆ ವಿರಾಮವಿಲ್ಲ್" ಇದು, ಹಾರ್ನಿಮನ್ ರ, ಘೋಷವಾಕ್ಯವಾಗಿತ್ತು.

ಇಂಡಿಪೆಂಡೆಂಟ್ ಪತ್ರಿಕೆ

ಬದಲಾಯಿಸಿ

೧೯೪೧ ರಲ್ಲಿ ಹಾರ್ನಿಮನರು, ಮುಂಬಯಿನಗರದಲ್ಲಿ, ರೂಸಿ ಕಾರಂಜಿಯ ಮತ್ತು ದಿನ್ಕರ್ ನಾಡಕರ್ಣಿ ಜೊತೆಗೂಡಿ 'ಬ್ಲಿಜ಼್' ಪತ್ರಿಕೆಯನ್ನು ಸ್ಥಾಪಿಸಿದರು. ಈ ಪತ್ರಿಕೆ ೧೯೬೦ ರ ವರೆಗೆ ಚೆನ್ನಾಗಿ ನಡೆಯಿತು. ಮೊತಿಲಾಲ್ ನೆಹರು “ಇಂಡಿಪೆಂಡೆಂಟ್” ಎಂಬ ಪತ್ರಿಕೆಯನ್ನು ಆರಂಭಿಸಿದಾಗ ಅದರ ಮೇಲ್ವಿಚಾರಣೆಯನ್ನು ನೋಡಿಕೊಂಡರು. “ಬಾಂಬೆ ಕ್ರಾನಿಕಲ್” ಪತ್ರಿಕೆಗೆ ಪೂರಕವಾಗಿ ಹಾರ್ನಿಮನ್ ಅವರ ನೇತೃತ್ವದಲ್ಲಿ “ಬಾಂಬೆ ಸೆಂಟಿನೆಲ್” ಎಂಬ ಸಂಜೆ ಪತ್ರಿಕೆ ಹೊರಟಿತು. ಎರಡೂ ಪತ್ರಿಕೆಗಳೂ ಒಟ್ಟಿಗೆ ೧೯೫೯ ರಲ್ಲಿ ಮುಚ್ಚಿಹೋದವು.

ಬಿ.ಜಿ.ಹಾರ್ನಿಮನ್ ಅವರು ಭಾರತಕ್ಕೆ ಸಲ್ಲಿಸಿದ ಸೇವೆಯ ನೆನಪಿಗೆ ಮುಂಬಯಿ ನಗರದ ಮಹಾಜನತೆ ೩೫,೦೦೦ ರೂಪಾಯಿ ಕಾಣಿಕೆಯನ್ನು ಅರ್ಪಿಸಿತು. ತೀವ್ರವಾದ 'ಡಯೋರಿಯಾ' ಕಾಯಿಲೆಯಿಂದ ಸ್ವಲ್ಪಕಾಲ ಅಸ್ವಸ್ಥರಾದ ಹಾರ್ನಿಮನ್ ಮರೀನಾ ಆಸ್ಪತ್ರೆಯಲ್ಲಿ ೧೯೪೮ ರ ಅಕ್ಟೋಬರ್, ೧೬ ರಂದು ನಿಧನರಾದರು. ಆಸ್ಪತ್ರೆಯ ಖರ್ಚುಗಳನ್ನು ನಿಭಾಯಿಸಲೂ ಅವರ ಬಳಿ ಹಣವಿರಲಿಲ್ಲ. ಆಗ ಅವರ ವಯಸ್ಸು ೭೫ ವರ್ಷವಾಗಿತ್ತು. ಅವರು ಬರೆದಿದ್ದ ಪುಸ್ತಕ "50 years of Journalism"ಇನ್ನೂ ಪ್ರಕಟಣೆಗೊಂಡಿರಲಿಲ್ಲ.[]

ಉಲ್ಲೇಖಗಳು

ಬದಲಾಯಿಸಿ
  1. Benjamin Horniman, famous British journalist and India's freedom fighter
  2. B.G.Horniman supports Gandhi
  3. Role of press and Indian freedom struggle- all through Gandhian era: by A.S.Iyengar (2001),A.P.H.Publishers

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  1. Selections from speeches and Writings of B.G.Horniman, Amazon, 29.Aig. 2016
  2. A friend of India, Selection from the Speeches and writings of B.G.Horniman, 20th, Aug, 1918