ಬಿ.ಎಲ್ರೈಸ್
This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಕನ್ನಡ ಭಾಷೆ, ಸಾಹಿತ್ಯ, ಶಾಸನ ಎಂದೊಡನೆ ತಟ್ಟನೆ ನೆನಪಿಗೆ ಬರುವ ಹೆಸರು ಬೆಂಜಮಿನ್ ಲೂಯಿ. ರೈಸ್‌ಅವರದು. ಅವರು ನಮ್ಮ ನಾಡಿನ ಹಳೆಯ ಮೈಸೂರು ಪ್ರಾಂತ್ಯದ ಶಾಸನಶಾಸ್ತ್ರದ ಪಿತಾಮಹ ಎನ್ನಬಹುದು. ಶಾಸನಗಳ ಸಂಶೋಧನೆಯನ್ನು ಮೂಲಾಧಾರವಾಗಿಸಿಕೊಂಡು ಸಾಹಿತ್ಯ ಮತ್ತು ಇತಿಹಾಸಗಳಿಗೆ ನಿಖರರೂಪ ನೀಡಿದವರಲ್ಲಿ ಇವರು ಪ್ರಮುಖರು. ಇವರಿಗಿಂತ ತುಸು ಮುಂಚೆ ಜಾನ್ ಫ್ಲೀಟರು ಉತ್ತರ ಕರ್ನಾಟಕದ ಪ್ರದೇಶದಲ್ಲಿ ಕ್ಷೇತ್ರಕಾರ್ಯಕೈಕೊಂಡು ಶಾಸನ ಸಂಗ್ರಹಕ್ಕೆ ಮೊದಲುಮಾಡಿದರೂ, ಪುಸ್ತಕರೂಪದಲ್ಲಿ ಅನೇಕ ಸಂಪುಟಗಳನ್ನು ಪ್ರಕಟಿಸಿದವರು ಮಾತ್ರ ಬೆಂಜಮಿನ್‌ರೈಸ್. ತಮ್ಮೆಲ್ಲ ಅನ್ವೇಣೆಗಳನ್ನೂ "ಎಪಿಗ್ರಾಫಿಕಾ ಕರ್ನಾಟಿಕಾ" ಎಂಬ ಬೃಹತ್‌ಸಂಪುಟಗಳಲ್ಲಿ ದಾಖಲಿಸಿ ಕನ್ನಡ ನಾಡಿನ ಸಂಶೋಧನಾ ಲೋಕಕ್ಕೆ ಭದ್ರ ತಳಪಾಯ ಹಾಕಿದರು. ಅದರ ಜೊತೆಗೆ ಸಾಹಿತ್ಯ ಲೋಕದಲ್ಲೇ ಆದಿಕವಿಯ ಮತ್ತು ಅನನ್ಯ ಪುರಾತನ ಗ್ರಂಥಗಳನ್ನು ಸಂಪಾದನೆ ಮಾಡಿದರು. ಪಂಪ ಭಾರತವನ್ನು ಲೋಕಕ್ಕೆ ಪರಿಚಯಿಸಿದ ಕೀರ್ತಿ ಅವರದು.ಪರಾಮರ್ಶನ ಗ್ರಂಥವಾದ ಸಮಗ್ರ ಕನ್ನಡ ಕವಿ ಚರಿತ್ರೆಯನ್ನು ಆರ್.ನರಸಿಂಹಾಚಾರ್ಯರ ಇಂಗ್ಲೀಷ್‌ನಲ್ಲಿ ಅನುವಾದಿಸುವ ಯೋಚನೆ ಇದ್ದಿತು ಅವರು ಮೊದಲಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ತಮ್ಮ ನಿವೃತ್ತಿಯವರೆಗೂ ಸಂಶೋಧನೆಯನ್ನೇ ತಮ್ಮ ಪೂರ್ಣಾವಧಿ ಕೆಲಸವಾಗಿಸಿಕೊಂಡವರು ನಿವೃತ್ತರಾಗಿ ಇಂಗ್ಲೆಂಡಿಗೆ ಹೋದ ಮೇಲೂ ಕನ್ನಡದ ಕೆಲಸ ಮುಂದುವರಿಸಿ ಕೊನೆಯುಸಿರು ಇರುವವರೆಗೂ ತಮ್ಮ ಕಾಣಿಕೆ ಸಲ್ಲಿಸಿದರು. ಕನ್ನಡದ ಕಟ್ಟಾಳು ಬಿ.ಎಲ್ ರೈಸ್‌ರವರ ಕನ್ನಡದ ಸಂಬಂಧ ಒಂದು ತಲೆ ಮಾರಿಗಿಂತಲೂ ಮುಂಚಿನದು.ಬೆಂಜಮಿನ್ ಜನಿಸುವ ಮೊದಲೇ ಅವರ ತಂದೆ ಕರ್ನಾಟಕದಲ್ಲಿ ನೆಲಸಿದ್ದರು, ತಂದೆ ಕ್ರೈಸ್ತ ಮಿಶನರಿಯಾಗಿ ಭಾರತೀಯರಲ್ಲಿ ಧರ್ಮಪ್ರಚಾರಕ್ಕೆ ಬಂದವರು. ಈಗಲೂ ಅವೆನ್ಯೂ ರೋಡ್‌ನಲ್ಲಿ ರೈಸ್ ಸ್ಮಾರಕ ಚರ್ಚು ಇದೆ. ಬಂದಕೂಡಲೇ ಜನಸಾಮಾನ್ಯರೊಡನೆ ಸುಲಭವಾಗಿ ಬೆರೆತು ಮುಕ್ತವಾಗಿ ಸಂವಹನ ನಡೆಸಲು ಕನ್ನಡ ಭಾಷೆ ಕಲಿತಿದ್ದರು.ಅಷ್ಟೇ ಅಲ್ಲ, ಕಲಿಸಲು ಕನ್ನಡದಲ್ಲಿ ಪಠ್ಯ ಪುಸ್ತಕಗಳು ಇಲ್ಲವೆಂದು ತಾವೇ ಶಾಲಾಮಕ್ಕಳ ಉಪಯೋಗಕ್ಕೆ ಕನ್ನಡದಲ್ಲಿ ಪುಸ್ತಕ ಬರೆದರು ರೈಸ್ ಅವರ ತಾಯಿ ಗಂಡನ ಕೆಲಸದಲ್ಲಿ ಸಹಕರಿಸಲು ತಾವೂ ಕನ್ನಡ ಕಲಿತು ಸ್ಥಳೀಯ ಹೆಣ್ಣು ಮಕ್ಕಳ ಜೊತೆ ಸರಳವಾಗಿ ಬೆರೆಯುತ್ತಿದ್ದರು.ಅಕ್ಕಪಕ್ಕದ ಮಕ್ಕಳನ್ನು ಸೇರಿಸಿ ಅವರಿಗೆ ಕನ್ನಡ ಅಕ್ಷರಾಭ್ಯಾಸ ಮಾಡಿಸುತಿದ್ದರು. ಹೀಗೆ ಮನೆಯಲ್ಲಿ ಸಂಪೂರ್ಣ ಕನ್ನಡದ ವಾತಾವರಣದಲ್ಲಿಯೇ ಬಿ. ಎಲ್.ರೈಸ್‌ರ ಜನನವಾಯಿತು ಆದ್ದರಿಂದ ರೈಸ್ ಕುಟುಂಬದ ಕನ್ನಡನಾಡಿನೊಡನೆ ಅನೇಕ ದಶಕಗಳ ಒಡನಾಟ ಅವರಿಗೆ ಭಾಷೆಯಮೇಲೆ ಅಭಿಮಾನ ಮೂಡಿಸಿತ್ತು. ಬಿ.ಎಲ್.ರೈಸ್ ಮೂಲತಃ ಬೆಂಗಳೂರಿಗರು ಎನ್ನಬಹುದು. ಅವರ ತಂದೆ ಬೆಂಜಮಿನ್ ಹೋಲ್ಟ್ ರೈಸರು ಇಂಗ್ಲೆಂಡಿನಿಂದ ಭಾರತಕ್ಕೆ ಬಂದಿದ್ದು ಧರ್ಮೋಪದೇಶಕರಾಗಿ. ಅವರ ಕಾರ್ಯಕ್ಷೇತ್ರ ಹಳೇ ಮೈಸೂರು ಪ್ರಾಂತ್ಯ. ಮನೆ ಮಾಡಿ ನೆಲಸಿದ್ದು ಬೆಂಗಳೂರಿನಲ್ಲಿ. ಅವರ ಮಗ ಬೆಂಜಮಿನ್‌೧೮೩೭ರಲ್ಲಿ ಬೆಂಗಳೂರಿನಲ್ಲೇ ಜನಿಸಿದ. ಕನ್ನಡ ಪರಿಸರದಲ್ಲಿ ಮಗು ಬೆಳೆಯಿತು. ಬಿ.ಎಲ್. ರೈಸ್ ಬಾಲ್ಯವೆಲ್ಲಾ ಬೆಂಗಳೂರಿನಲ್ಲಿಯೇ ಹಾಗಾಗಿ ಕನ್ನಡವನ್ನು ಅವರು ಇಂಗ್ಲಿಷ್‌ಗಿಂತ ಚೆನ್ನಾಗಿ ಮಾತನಾಡಬಲ್ಲವರಾಗಿದ್ದರು. ಅವರು ಶಿಕ್ಷಣ ಪಡೆದಿದ್ದು ತಮ್ಮ ಮೂಲಸ್ಥಳನವಾಗಿದ್ದ ಇಂಗ್ಲಂಡಿನ ಹ್ಯಾರೋ ನಗರದಲ್ಲಿ. ಆದರೆ ಮತ್ತೆ ಕನ್ನಡನಾಡಿಗೆ ಮರಳುವ ಆಶೆ ಪ್ರಬಲವಾಗಿ ಇತ್ತು. ಪದವಿಧರರಾದ ಮೇಲೆ ಕೆಲಕಾಲ ಅಲ್ಲಿಯೇ ಕೆಲಸ ಮಾಡುತ್ತಾ ಐಸಿಎಸ್ ಪರೀಕ್ಷೆಗೆ ತಯಾರಿ ನಡೆಸಿದರು. ಆಗಲೇ ಅವರಿಗೆ ಉದ್ಯೋಗದ ಆಹ್ವಾನ ಬೆಂಗಳೂರಿನಿಂದ ಬಂದಿತು.ಅದರ ಮೇರೆಗೆ ಅವರು ೧೮೬೦ ರಲ್ಲಿ ಬೆಂಗಳೂರಿಗೆ ಬರಬೇಕಾಯಿತು. ಮೈಸೂರು ರಾಜ್ಯ ಶಿಕ್ಷಣ ಇಲಾಖೆಯಲ್ಲಿ ಅವರಿಗೆ ಉದ್ಯೋಗದ ದೊರಕಿತು. ಬೆಂಗಳೂರಿನ ಸೆಂಟ್ರಲ್‌ಹೈಸ್ಕೂಲಿನಲ್ಲಿ ಅವರ ೨೩ ನೇ ಎಳೆವಯಸ್ಸಿನಲ್ಲೇ ಮುಖ್ಯೋಪಾಧ್ಯಾಯ ಹುದ್ದೆ ಅವರದಾಯಿತು. ಸೇವೆಯನ್ನು ಕುರಿತ ಅವರ ಬದ್ದತೆ ಅಪಾರ. ಜನಸಂಪರ್ಕದ ಮಹತ್ವ ಅರಿತ ಅವರು ತಮ್ಮ ಕಾರ್ಯ ಕ್ಷೇತ್ರದ ಜನರ ಭಾಷೆಯಮೇಲಿನ ಪ್ರಭುತ್ವದ ಅಗತ್ಯವನ್ನು ಮನಗಂಡರು. ಭಾರತಕ್ಕೆ ಬಂದಾಗಲೇ ಅವರಿಗೆ ಕನ್ನಡ ಬರುತಿತ್ತು ಆದರೆ ಅದನ್ನು ಅಧಿಕೃತವಾಗಿ ಕಲಿಯಲು ಮನಮಾಡಿದರು. ಬಂದ ಒಂದೇ ವರ್ಷದಲ್ಲಿ ಹೈಯರ್‌ಸೆಕೆಂಡರಿ ಕನ್ನಡ ಪರೀಕ್ಷೆಗೆ ಕುಳಿರು. ಸುಲಭ ವಾಗಿ ಉತ್ತೀರ್ಣರೂ ಆದರು.ಅವರ ಕನ್ನಡ ಕಲಿಕೆ ಬರಿ ಇಲಾಖಾ ಪರೀಕ್ಷೆಗೆ ಸೀಮಿತವಾಗಿರಲಿಲ್ಲ. ಅವರು ಅತೀವ ಆಸಕ್ತಿಯಿಂದ ಕನ್ನಡದ ಅಧ್ಯಯನ ಮುಂದುವರಿಸಿದರು.ತಮ್ಮಲ್ಲಿನ ಕನ್ನಡ ಪಂಡಿತರೊಡನೆ ಮುಕ್ತವಾಗಿ ಸಂವಹನ ನಡೆಸಿದರು. ಅವರಿಗೆ ೧೮೬೫ ರಿಂದ ಮೂರು ವರ್ಷಗಳ ಕಾಲ ಮೈಸೂರು ಮತ್ತು ಕೊಡಗು ಸೀಮೆಯ ಶಾಲಾ ಇನಸ್ಪೆಕ್ಟರ್ ಆಗಿ ನೇಮಕಾತಿ ಆಯಿತು. ಆಗ ಮುಖ್ಯ ಕಮಿಷನರ್ ಆಗಿದ್ದ ಬೌರಿಂಗ್ ಹಲವು ಶಾಸನಗಳ ಛಾಯಾಚಿತ್ರ ತೆಗೆಸಿದ್ದರು. ಅದೇ ಸಮಯದಲ್ಲಿ ಮೇಜರ್‌ಡಿಕ್ಸನ್ ಹಲವು ಶಾಸನಗಳ ಭಾವಚಿತ್ರ ನೀಡಿ ಬಿಡುವಾದಾಗ ಭಾಷಾಂತರ ಮಾಡಲು ಕೋರಿದರು. ಅವರ ಶಾಸನ ಅಧ್ಯಯನಕ್ಕೆ ಅದು ನಾಂದಿಯಾಯಿತು.ಅವರು ಹೈಗ್ರೌಂಡಿನಲ್ಲಿದ್ದ ನಿವೇಶನದಲ್ಲಿ ತಮ್ಮವಾಸಕ್ಕಾಗಿ ಸುಸಜ್ಜಿತ ಮನೆ ನಿರ್ಮಿಸಿಕೊಂಡರು ಅವರ ಮನೆ ಈಗಿನ ಸ್ಯಾಂಕಿರೋಡನಲ್ಲಿ ವಂಡ್ಸರ್‌ಮ್ಯಾನರ್ ಹೋಟೆಲ್ ಎದುರು ಇತ್ತು . ಅವರ ಮೊದಲ ಮಗು ಅಲ್ಲಿಯೇ ಜನಿಸಿತು.ಆ ಅವಧಿಯಲ್ಲಿಯೇ ಅವರ ಶಾಸನ ಸಂಗ್ರಹದ ಆಸಕ್ತಿ ಚಿಗುರೊಡೆಯಿತು ಹೋದ ಊರುಗಳಲ್ಲೆಲ್ಲ ಶೈಕ್ಷಣಿಕ ತಪಾಸಣೆ ಜತೆ ಹಸ್ತ ಪ್ರತಿ ಸಂಗ್ರಹ, ಶಾಸನಗಳ ಸಮೀಕ್ಷೆ, ಅಧ್ಯಯನ ಮೊದಲುಮಾಡಿದರು. ಕನ್ನಡ ನುಡಿಗೆ ಅವರು ಸಲ್ಲಿಸಲಿದ್ದ ಮಹಾನ್ ಕೊಡುಗೆಗೆ ಈ ಕೆಲಸವೇ ಮುನ್ನುಡಿ ಬರೆಯಿತು. ತಮ್ಮ ಆಸಕ್ತಿಯ ಫಲವಾಗಿ ಅವರು ಅಧಿಕಾರದ ಏಣಿಯನ್ನು ಬಹು ಬೇಗ ಹತ್ತಿದರು.ನಂತರ ೧೫ ವರ್ಷಗಳ ಕಾಲ ಮೈಸೂರು ಸಂಸ್ಥಾನದ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಆಗಂತೂ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳಲ್ಲಿ ಶಾಸನ ಮತ್ತು ಹಸ್ತಪ್ರತಿಗಳನ್ನು ಹುಡುಕುವುದೇ ಆದ್ಯ ಕೆಲಸವಾಯಿತು. ಆ ಸಮಯದಲ್ಲಿ ಹಳೆಗನ್ನಡದಲ್ಲಿದ್ದ ಶಾಸನಗಳ ಅಧ್ಯಯನವನ್ನು ವಿದ್ವಾಂಸರ ಸಹಾಯದಿಂದ ಮಾಡಿದರು. ಅವುಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಮೊದಲು ಮಾಡಿದರು.ಅವರ ಶಿಕ್ಷಣಾಸಕ್ತಿಯನ್ನು ಮತ್ತು ಶಿಕ್ಷಣ ಕ್ಷೇತ್ರದ ಪರಿಣತೆಯನ್ನೂ ಗಮನಿಸಿದ ಬ್ರಿಟಿಷ್ ಸಮಗ್ರ ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾಣೆ ತರುವ ಉದ್ದೇಶದಿಂದ ಹಂಟರ್ ಶಿಕ್ಷಣ ಆಯೋಗದ ರಚಿಸಿತು. ರೈಸ್ ಅವರಿಗೆ ಆಯೋಗದ ಕಾರ್ಯದರ್ಶಿ ಸ್ಥಾನ ಕೊಡಲಾಯಿತು. ಒಂದೇ ವರ್ಷದಲ್ಲಿ ಶಿಕ್ಷಣ ವರದಿ ಸಿದ್ಧವಾಯಿತು. ಆ ಕೆಲಸ ಮುಗಿದ ಕೂಡಲೇ ಮೈಸೂರು ಸಂಸ್ಥಾನದಲ್ಲಿ ಹೊಸದಾಗಿ ಪ್ರಾರಂಭಗೊಂಡ ಪುರಾತತ್ವ ಇಲಾಖೆಯ ನಿರ್ದೇಶಕರಾಗಿ ವಿದ್ಯಾಇಲಾಖೆಯ ಹೊಣೆಯ ಜೊತೆಯಲ್ಲಿಯೇ ಪ್ರಭಾರಿಯಾಗಿ ನೋಡಿಕೊಳ್ಳಲು ನೇಮಕಗೊಂಡರು. ಹೊಸ ಹುದ್ದೆಯ ಕಾರ್ಯವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು.ಅವರ ಕಾರ್ಯತತ್ಪರತೆಯಿಂದ ಈ ಇಲಾಖೆಯ ಮಹತ್ವವನ್ನು ಮನಗಂಡ ಸರ್ಕಾರವು ಅವರನ್ನು ಪುರಾತತ್ವ ಇಲಾಖೆಗೆ ಪೂರ್ಣಾವಧಿ ನಿರ್ದೇಶಕರಾಗಿ ೧೮೯೦ರಲ್ಲಿ ನೇಮಿಸಿತು. ಅಲ್ಲಿಂದ ೧೬ ವರ್ಷಗಳ ಕಾಲ ಅವರು ನಿವೃತ್ತಿಯಾಗುವವರೆಗೂ ಅವಿರತವಾಗಿ ದುಡಿದು ಅಮೂಲ್ಯ ಕೊಡುಗೆ ನೀಡಿದರು. ಅವರು ಒಟ್ಟು ೮೮೬೯ ಶಾಸನಗಳನ್ನು ಸಂಗ್ರಹಿಸಿದರು, ಅವುಗಳ ಅಧ್ಯಯನ ಕಾರ್ಯವನ್ನೂ ಜೊತೆ ಜೊತೆಗೆ ಮುಂದುವರಿಸಿದರು., ಅದರ ಫಲವಾಗಿ , “ ಎಪಿಗ್ರಾಫಿಯಾ ಕರ್ಣಾಟಕ” ಎಂಬ ಹೆಸರಿನ ೧೨ ಸಂಪುಟಗಳನ್ನು ಹೊರತಂದರು. ಅದರಲ್ಲಿನ ಮೊದಲ ಸಂಪುಟ ಕೊಡಗಿನದು. ,೨ನೇ ಸಂಪುಟವು ಶಾಸನಗಳ ಆಗರವಾದ ಶ್ರವಣಬೆಳಗೊಳಕ್ಕೆ ಮೀಸಲಾಯಿತು. ಅದರಲ್ಲಿ ೧೪೪ ಶಾಸನಗಳು ಪ್ರಕಟಗೊಂಡಿದ್ದವು. ಅದು ಶ್ರವಣಬೆಳಗೊಳದಲ್ಲಿ ಇರುವ ೬೦೦ಕ್ಕೂ ಹೆಚ್ಚು ಶಾಸನಗಳ ಸಂಪಾದನೆಮತ್ತು ಅಧ್ಯಯನಕಾರ್ಯಕ್ಕೆ ಅಡಿಪಾಯವಾಯಿತು.ನಂತರ ಮೈಸೂರುಜಿಲ್ಲೆ , ಹಾಸನ ಜಿಲ್ಲೆ , ಕಡೂರಜಿಲ್ಲೆ ಇತ್ಯಾದಿ ಹನ್ನೆರಡು ಜಿಲ್ಲೆಗಳ ಶಾಸನ ಸಂಪುಟಗಳನ್ನು ಪ್ರಕಟಿಸಿದರು. ಇವರು ಈಗಾಗಲೇ "ಮೈಸೂರು ಇನಸ್ಕ್ರಿಪ್ಷನ್” ಎಂಬ ಶಾಸನ ಕುರಿತಾದ ಕೃತಿ ಪ್ರಕಟಿಸಿದ್ದರು.ಮೈಸೂರು ಮತ್ತು ಕೊಡಗು ಸೀಮೆಯ ಗೆಜೆಟಿಯರ್‌ಗಳನ್ನು ಮೂರು ಸಂಪುಟಗಳಲ್ಲಿ ೧೮೮೭ರಲ್ಲಿಯೇ ಸಿದ್ಧಪಡಿಸಿ ಪ್ರಕಟಿಸಿದ್ದರು. ಸರ್ಕಾರವು ಜನಗಣತಿ ಕಾರ್ಯವನ್ನು ಕೈಗೆತ್ತಿಕೊಂಡಿತು. ಅದರ ತಯಾರಿಯ ಕೆಲಸ ರೈಸ್‌ರ ಪಾಲಿಗೆ ಬಂದಿತು. ಪ್ರಥಮ ಜನಗಣತಿ ವರದಿಯನ್ನು ಸಿದ್ಧಪಡಿಸಿದರು. ನಂತರ ಇವರ ಸೇವೆ ಗೆಜೆಟಿಯರ್‌ಗಳ ಪ್ರಕಟನೆಗೆ ಬಳಸಲಾಯಿತು. ಇವರು ಸಿದ್ಧಪಡಿಸಿದ ಗೆಜೆಟಿಯರ್‌ಗಳು ಬರಿ ಅಂಕೆ ಸಂಖ್ಯೆಗಳ ದಾಖಲೆಗಳಾಗಿರದೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನೂ ಒಳಗೊಂಡು ಓದುಗರ ಆಸಕ್ತಿ ಕೆರಳಿಸುವಂತೆ ಇವೆ. ಆದ್ದರಿಂದ ಅವು ಇಂದಿಗೂ ಆಡಳಿತ ಸಂಶೋಧನೆಯ ಉತ್ತಮ ಮಾದರಿಗಳಾಗಿವೆ ಎನ್ನಬಹುದು. ಸಂಶೋಧನೆಯಲ್ಲಿ ಇವರದು ಮುಕ್ತ ಮನಸ್ಸು. ತಮ್ಮ ಸಮಕಾಲೀನರಾದ ವಿದ್ವಾಂಸರೊಡನೆ ಈ ಕುರಿತು ಅವರು ಸಮಾಲೋಚನೆ ನಡೆಸಲು ಹಿಂದು ಮುಂದು ನೋಡುತ್ತಿರಲಿಲ್ಲ. ಮುಂಬಯಿ ಪ್ರಾಂತ್ಯದಲ್ಲಿ ತಮಗಿಂತ ಮೊದಲೇ ಶಾಸನ ಸಂಶೋಧನೆಯ ಕಾರ್ಯ ಕೈಗೊಂಡಿದ್ದ ಜಾನ್‌ಫ್ಲೀಟ್‌ಅವರೊಡನೆ ಈ ವಿಷಯದಲ್ಲಿ ಪತ್ರ ವ್ಯವಹಾರ ಮಾಡುತಿದ್ದರು. ಅಗತ್ಯ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತಿದ್ದರು.ಅನೇಕ ಬಾರಿ ಭಿನ್ನಾಭಿಪ್ರಾಯ ಬಂದರೂ ಸತ್ಯವನ್ನು ಒಪ್ಪಿಕೊಳ್ಳಲು ಹಿಂಜರಿಕೆ ಇರಲಿಲ್ಲ. ಶಾಸನ ಸಂಗ್ರಹದ ಬಗ್ಗೆ ಮಾತ್ರ ಗಮನ ಕೊಡದೆ ಶಾಸನಗಳ ಸಂರಕ್ಷಣೆಯ ಕಡೆಗೂ ಕಾಳಜಿ ವಹಿಸಿದರು. ಆವರ ಕಾಲದಲ್ಲೇ ಬೆಳಕಿಗೆ ಬಂದ ಅಶೋಕನ ಶಾಸನಗಳ ಸಂರಕ್ಷಣೆಗಾಗಿ ಸರ್ಕಾರಕ್ಕೆ ಒತ್ತಡ ಹಾಕಿದರು. ಅವರ ಆಗ್ರಹಕಕ್ಕೆ ಮಣಿದು ಸರ್ಕಾರವು ಲೋಕೋಪಯೋಗಿ ಇಲಾಖೆಯ ಮೂಲಕ ಅಶೋಕ ಸಿದ್ದಾಪುರ ಮತ್ತು ಇತರೆಡ ಶಾಸನಗಳ ಸುತ್ತಲೂ ಗೋಡೆ ಕಟ್ಟಿಸಿದಾಗ ಮತ್ತೊಮ್ಮೆ ಭೇಟಿ ನೀಡಿ ಅಲ್ಲಿರುವ ಅವೈಜ್ಞಾನಿಕ ರಚನೆಗಳನ್ನು ವಿರೋಧಿಸಿ ಪತ್ರ ಬರೆದರು. ಆಗ ಸರ್ಕಾರವು ಪುರಾತತ್ವ ಸ್ಮಾರಕಗಳಲ್ಲಿ ಯಾವುದೇ ಕಾಮಗಾರಿ ಮಾಡುವಾಗ ರೈಸ್ ಅವರ ಪೂರ್ವಾನುಮತಿ ಪಡೆದು ಅವರ ಸಲಹೆಯಂತೆ ಕೆಲಸ ಮಾಡಲು ಇಲಾಖೆಗೆ ಪುರಾತನ ದಾಖಲೆಗಳಿಂದ ಕಂಡು ಬರುವುದು.ಇವರ ಶಾಸನಗಳ ಶೋಧನೆಯಿಂದ ಕರ್ನಾಟಕದ ಇತಿಹಾಸವೇ ಬದಲಾಯಿತು.ಅಶೋಕನ ಬ್ರಹ್ಮಗಿಗಿರ ಶಾಸನ, ಬನವಾಸಿಯ ತಾಳಗುಂದದ ಸ್ತಂಭ ಶಾಸನ, ಶ್ರವಣಬೆಳಗೊಳದ ಶಾಸನಗಳು ಬಹಳ ಮಹತ್ವ ಪಡೆದಿವೆ. ಶಾಸನಗಳ ಪಾಠ ಸಿದ್ದತೆ ಮತ್ತು ಪರಿಷ್ಕರಣೆಯಲ್ಲಿ ಸ್ಥಳೀಯ ವಿದ್ವಾಂಸರ ಸಹಾಯ ಪಡೆಯುತಿದ್ದರು.ಸೋಸಲೇಅಯ್ಯಾ ಶಾಸ್ತ್ರಿ, ಚಿಂಚೊಳಿ ವೆಂಕಣ್ಣಾಚಾರ್ಯ,ಗೌಡ ಗೆರೆಯ ವೆಂಕಟರಮಣಾಚಾರ್ಯ, ತಮಿಳು ವಿದ್ವಾಂಸ ಪರಮ ಶಿವ ಅಯ್ಯರ್,ಪಂಡಿತ ನಟೇಶ ಶಾಸ್ತ್ರಿ ಮೊದಲಾದವರ ಸಹಾಯ ಪಡೆದರು. ರೈಸರು ತಮ್ಮ ಮಾಹಿತಿಯನ್ನು ಸಂಗ್ರಹಿಸಲು ಸ್ಥಳೀಯ ಅಧಿಕಾರಿಗಳನ್ನೂ ಬಳಸಿಕೊಳ್ಳುತಿದ್ದರು. ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ತಹಸೀಲ್ದಾರರಿಗೆ ಅವರ ವ್ಯಾಪ್ತಿಯಲ್ಲಿ ಇರಬಹುದಾದ ಪುರಾತತ್ವ ವಸ್ತುಗಳ ಬಗ್ಗೆ ಪ್ರಶ್ನಾವಳಿ ಕಳುಹಿಸುತಿದ್ದರು. ನಂತರ ತಮ್ಮ ಬಿಳಿ ಕುದುರೆ ಏರಿ ಪ್ರವಾಸ ಕ್ಕೆ ಹೊರಡುವರು. ಆಗ ಅವುಗಳ ಪರಿಶೀಲನೆ ಮಾಡುವರು.ಅವರು ಅರೆ ಕಾಲಿಕ ಪುರಾತತ್ವ ನಿರ್ದೇಶಕರಾಗಿದ್ದಾಗಲೇ ಒಂದು ವರ್ಷದಲ್ಲಿ ೨೪೫ ದಿನಪ್ರವಾಸ ಮಾಡಿ ೬೫೪ ಐತಿಹಾಸಿಕ ಪ್ರಾಮುಖ್ಯತೆ ಇರುವ ಪಟ್ಟಣ ಮತ್ತು ಗ್ರಾಮಗಳಿಗೆ ಭೇಟಿ ನೀಡಿದ್ದರು.ಈ ಕೆಲಸ ನಂತರ ಇನ್ನೂ ತೀವ್ರಗತಿಯಲ್ಲಿ ನಡೆಸಿದರು ಅವರ ಹೆಂಡತಿ ಸೋಫಿಯಾ ಮೇರಿ ಗ್ಯಾರೆಟ್ ಅವರಿಗೆ ತುಂಬ ಸಹಕಾರ ನೀಡುತಿದ್ದರು. ಅವರದು ಹತ್ತು ಮಕ್ಕಳ ತುಂಬು ಸಂಸಾರ ತಾವೇ ನಿರ್ವಹಿಸಿ ಕಾರ್ಯ ತತ್ಪರ ಗಂಡನಿಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುತಿದ್ದರು. ಇವರು ಬರಿ ಗೆಜೆಟಿಯರ್‌ಮತ್ತು ಶಾಸನ ಸಂಪುಟಗಳ ರಚನೆಗೆ ಮಾತ್ರ ತಮ್ಮ ಆಸಕ್ತಿಯನ್ನು ಸೀಮಿತಗೊಳಿಸದೆ ಕನ್ನಡ ಹಸ್ತಪ್ರತಿಗಳ ಸಂಗ್ರಹಣ,ಸೂಚೀಕರಣ, ಹಾಗೂ ಸಂಪಾದನೆಯ ಕಡೆಗೂ ಗಮನ ಹರಿಸಿದ್ದರು. ಪುರಾತನ ಸಾಹಿತ್ಯದಲ್ಲೂ ಆಸಕ್ತಿ ತೋರಿದರು. ಸಾಹಿತ್ಯೋಪಾಸನೆಗೆ ಉಪಯುಕ್ತವಾದ “ಬಿಬ್ಲಿಯೋಥಿಕಾ ಕರ್ಣಾಟಿಕಾ” ಎಂಬ ಗ್ರಂಥ ಮಾಲೆಪ್ರಾರಂಭಿಸಿ, ಅದರಲ್ಲಿ ’ಪಂಪ ರಾಮಾಯಣ, ಕರ್ನಾಟಕ ಭಾಷಾಭೂಷಣ, ಪಂಪಭಾರತ, ಶಬ್ದಾನುಶಾಸನ,ಅಮರಕೋಶ, ಕವಿರಾಜಮಾರ್ಗ ಮೊದಲಾದ ಕೃತಿಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಮತ್ತು ಇತಿಹಾಸ ಅಧ್ಯಯನಕ್ಕೆ ಈ ಕೃತಿಗಳು ಅಡಿಪಾಯ ಹಾಕಿದವು. ಅವರು ತಮ್ಮ ೭೦ನೇ ವಯಸ್ಸಿನಲ್ಲಿ ನಿವೃತ್ತರಾಗಿ ಇಂಗ್ಲೆಂಡಿಗೆ ಹೋಗಿ ಹ್ಯಾರೋದಲ್ಲಿ ನೆಲಸಿದರು. ಅಲ್ಲಿಯೂ ಕನ್ನಡ ಸೇವೆ ಮುಂದುವರಿಸಿದರು. ನಿವೃತ್ತರಾದ ಮೂರುವರ್ಷದ ನಂತರ ತಮ್ಮ ಅಧ್ಯಯನದ ಫಲವಾದ “ಮೈಸೂರು ಅಂಡ್ ಕೂರ್ಗ್ ಇನ್ಸ್ಕ್ರಿಪ್ಷನ್ಸ್” ಕೃತಿ ಪ್ರಕಟಿಸಿದರು. ಅದನ್ನು ದಕ್ಷಿಣ ಕರ್ನಾಟಕದ ಅಧಿಕೃತ ಚಾರಿತ್ರಿಕ ಕೃತಿ ಎನ್ನಬಹುದು. ತಮ್ಮ ೭೮ನೇ ವಯಸ್ಸಿನಲ್ಲೂ “ ಎಪಿಗ್ರಾಫಿಯಾ ಕರ್ನಾಟಕ” ದ ಮೊದಲನೆ ಸಂಪುಟವನ್ನು ಭಾರತ ಸರ್ಕಾರದ ಮನವಿಯ ಮೇರೆಗೆ ಪರಿಷ್ಕರಿಸಿ ಕೊಟ್ಟರು. ಲಂಡನ್ ವಿಶ್ವವಿದ್ಯಾಲಯ ಕನ್ನಡ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯನ್ನು ಅವರೇ ಸಿದ್ಧಪಡಿಸಿ ನಂತರ ಉತ್ತರ ಪತ್ರಿಕೆಗಳನ್ನೂ ಮೌಲ್ಯಮಾಪನ ಮಾಡುತಿದ್ದರು. ಅವರು ತಮ್ಮ ಕೆಲಸ ಮುಂದುವರಿಸಿದ ತಮ್ಮ ಆತ್ಮೀಯ ಶಿಷ್ಯ ಆರ್. ನರಸಿಂಹಾಚಾರ್ಯ ಜೊತೆ ಸತತ ಸಂಪರ್ಕದಲ್ಲಿದ್ದರು. ೧೯೨೩ ರಲ್ಲಿ ಬರೆದ ಪತ್ರದಲ್ಲಿ ಮೈಸೂರಿನ ಬಗೆಗಿನ ತಮ್ಮ ಅತೀವ ಅಭಿಮಾನವನ್ನು ವ್ಯಕ್ತ ಪಡಿಸಿ ಎಲ್ಲ ಪರಿಚಿತರ ಬಗ್ಗೆ ವಿಚಾರಿಸಿದ್ದರು. ಅಷ್ಟು ಗಾಢವಾಗುತ್ತ ಅವರ ಕನ್ನಡ ನಾಡಿನೊಡಗಿನ ಅವರ ನಂಟು. ಅವರು ಕಾಲವಾಗುವ ಕೆಲವೇ ಸಮಯದ ಮುಂಚೆ ಬ್ರಿಟನ್‌ನ ವೆಂಬರ್ಲಿಯಲ್ಲಿ ನಡೆದ ಅಂತರಾಷ್ಟ್ರೀಯ ವಸ್ತು ಪ್ರದರ್ಶನದ ನಡೆಯಿತು. ಅಲ್ಲಿ ಕರ್ನಾಟಕದ ಕನ್ನಡ ಮಳಿಗೆಗೆ ಇರುವುದನ್ನು ಅರಿತು, ಅಲ್ಲಿಗೆ ತಮ್ಮಇಳಿವಯಸ್ಸಿನಲ್ಲೂ ಮಕ್ಕಳ ಸಹಾಯ ಪಡೆದು ಭೇಟಿ ನೀಡಿದ್ದರು. ಅಲ್ಲಿರುವ ಕರ್ನಾಟಕದ ಪ್ರತಿನಿಧಿಯಾದ ಸೋಸಲೆ ಗರಳೆಪುರಿ ಶಾಸ್ತ್ರಿಗಳು ಅವರನ್ನು ಸಂತೋಷದಿಂದ ಸ್ವಾಗತಿಸಿದರು., ಅವರೊಡನೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಲು ಮೊದಲುಮಾಡಿದರು,ರೈಸ್‌ಅವರು ಶಾಸ್ತ್ರಿಗಳನ್ನು ಮಧ್ಯದಲ್ಲಿಯೇ ತಡೆದು “ ಅಯ್ಯಾ, ಕನ್ನಡದಲ್ಲಿ ಮಾತನಾಡೋಣವೇ,? ಮುದ್ದಾದ ಕನ್ನಡ ಕಿವಿಯ ಮೇಲೆ ಬಿದ್ದು ತುಂಬ ದಿನಗಳಾದವು ಕನ್ನಡ ಮಾತನ್ನು ಕೇಳಲೆಂದೆ ನಾನು ಇಲ್ಲಿಗೆ ಬಂದಿರುವೆ ಕನ್ನಡದಲ್ಲೇ ಮಾತನಾಡಿ” ಎಂದು ಮನವಿಮಾಡಿಕೊಂಡು ನಂತರ .ಅಲ್ಲಿದ್ದ ಕನ್ನಡಿಗರ ಜತೆ ಕನ್ನಡದಲ್ಲೆ ಗಂಟೆಗಟ್ಟಲೇ ಬಾಯ್ತುಂಬ ಮಾತನಾಡಿದರಂತೆ. ಕುವೆಂಪು ಅವರು “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ’.ಎಂದು ಬರೆಯುವ ಅನೇಕ ದಶಕಗಳ ಮೊದಲೇ ಅದರಂತೆ ಬಾಳಿ ಬದುಕಿದ ಹಿರಿಯ ಜೀವ ಅವರದು. ಈ ಘಟನೆ ಅವರ ಅಪಾರ ಕನ್ನಡಾಭಿಮಾನದ ಪ್ರತೀಕ. ಅದಕ್ಕಾಗಿಯೇ ಅವರು ಗತಿಸಿ ನೂರಾರು ವರ್ಷಗಳಾದರೂ ಕನ್ನಡಿಗರಿಗೆ ಪ್ರಾಥಃಸ್ಮರಣೀಯರಾದ ಅನೇಕ ಮಹನೀಯರಲ್ಲಿ ಅವರೂ ಒಬ್ಬರಾಗಿರುವರು. ತೊಂಬತ್ತು ವರ್ಷದ ತುಂಬು ಜೀವನ ನಡೆಸಿ ೧೯೨೭ರಲ್ಲಿ ಕಾಲವಶರಾದು. ಅವರ ಹೆಸರು ಕರ್ನಾಟಕದ ಜನರ ಹೃದಯಲ್ಲಿ ಚಿರಸ್ಥಾಯಿಯಾಗಿದೆ