ಬಿಂಬಿ
ಇವೊಂದು ಕೀಟ. ಕೆಂಪು, ಹಳದಿ, ಕಂದು ಮೊದಲಾದ ಬಣ್ಣಗಳಿಂದ ಕಂಡು ಬರುತ್ತವೆ. ಕೆಂಪು ಬಿಂಬಿ ನೋಡಲು ತುಂಬ ಸುಂದರ. ಗುಂಡಗಿನ ಕಣ್ಣು, ನಯವಾದ ರೆಕ್ಕೆ, ಉದ್ದನೆಯ ಬಾಲ, ಮೂರು ಜೋಡಿ ಕಾಲು ದೇಹದ ಬಹು ಭಾಗ ಕೆಂಪಗಿರುತ್ತದೆ. ಹೊಳೆ, ಹಳ್ಳ, ಕೆರೆ, ತೊರೆಗಳು ಇವುಗಳ ಾಶ್ರಯ ತಾಣ. ನೀರಿನ ಮೇಲೆ ಹಾರಾಡುವ ಪುಟಾಣಿ ಕೀಟಗಳನ್ನು ಇವು ಹಾರುತ್ತಲೆ ಹಿಡಿಯುತ್ತವೆ. ಹಿಡಿದ ಕೀಟವನ್ನು ಪದೇ ಪದೆ ಒಂದೇ ಜಾಗದಲ್ಲಿ ಕುಳಿತು ತಿನ್ನುತ್ತವೆ. ಗಂಡು ಹೆಣ್ಣಿನಲ್ಲಿ ಬದಲಾವಣೆಗಳಿದ್ದು ಹೆಣ್ಣು ಬಿಂಬಿ ಹಳದಿ ಬಣ್ಣ ಹೊಂದಿರುತ್ತದೆ. ಲೈಂಗಿಕ ಸಂಪರ್ಕದ ನಂತರ ನೀರಿನಲ್ಲಿ ಮೊಟ್ಟೆ ಹಾಕುತ್ತದೆ. ಅದು ಹಾಗೆ ಮೊಟ್ಟೆ ಹಾಕುವಾಗ ಗಂಡು ಬಿಂಬಿ ಕಾವಲಿರುತ್ತದೆ. ನಂತರ ಹೆಣ್ಣು ಗಂಡು ದೂರವಾಗುತ್ತವೆ. ಹೆಣ್ಣು ಕರೆ, ತೊರೆಗಳ ಹತ್ತಿರದಲ್ಲಿ ಕಾಣಿಸಿಕೊಳ್ಳದೆ ಸ್ವಲ್ಪ ದೂರದ ಪೊದೆಗಳಲ್ಲಿ ಬದುಕುತ್ತದೆ. ನೀರಿಗೆ ಬಿದ್ದ ಮೊಟ್ಟೆಗಳು ಅಲ್ಲೇ ಮರಿಗಳಾಗುತ್ತವೆ. ಮರಿಗಳು ನೀರಿನಲ್ಲಿ ಸಿಗುವ ಹುಳುಗಳನ್ನು ತಿಂದು ನೀರಿನಲ್ಲೇ ಬೆಳೆಯುತ್ತವೆ. ಹಾಗೆ ಬೆಳೆದ ನಂತರ ಮುಂದೊಂದು ದಿನ ನೀರಿನಿಂದ ಹೊರಗೆ ಬರುತ್ತವೆ. ಅಲ್ಲಿ ತಮ್ಮ ಬೆನ್ನಿನ ಭಾಗವನ್ನು ಸೀಳಿಕೊಂಡು ಹೊರ ಜಾರಿ ಚಂದದ ಬಿಂಬಿಗಳಾಗುತ್ತವೆ. ಇವನ್ನು ಕನ್ನಡದಲ್ಲಿ ಬಿಂಬಿಯೆಂದಷ್ಟೇ ಅಲ್ಲದೆ ಪಿಟಿ ಹುಳು, ಕೊಡತಿ ಹುಳು, ದೊಡ್ಡ ನೊಣ, ಏರೋ ಪ್ಲೇನ್ ಚಿಟ್ಟೆ ಮುಂತಾದ ಹೆಸರುಗಳಿಂದಲೂ ಕರೆಯುತ್ತಾರೆ ಇಂಗ್ಲೀಷಿನಲ್ಲಿ dragon fly ಎನ್ನುತ್ತಾರೆ. ಇವು ಒಂದೇ ಥರ ಇರುವುದಿಲ್ಲ. ಬೇರೆ ಬೇರೆ ಬಣ್ಣದವು ಬೇರೆ ಬೇರೆ ಗಾತ್ರಗಳಲ್ಲಿ ಕಾಣ ಸಿಗುತ್ತವೆ. ಕೆಲವು ಜಾತಿಯವು ಗುಡ್ಡ ಬೆಟ್ಟ ಬಯಲಿನಲ್ಲೆಲ್ಲ ವಾಸವಿರುತ್ತವೆ.