ಬಾಳಾಶಾಸ್ತ್ರಿ ಜಾಂಬೇಕರ್
ಬಾಳಾಶಾಸ್ತ್ರಿ ಜಾಂಬೇಕರ್ (1812-1846) ಮರಾಠಿ ಲೇಖಕ, ಶಿಕ್ಷಣ ತಜ್ಞ, ಪತ್ರಿಕೋದ್ಯಮಿ ಮತ್ತು ಸಮಾಜಸುಧಾರಕರು.
ಬದುಕು
ಬದಲಾಯಿಸಿಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ದೇವಗಢ ತಾಲ್ಲೂಕಿನ ಪೋಂಭುರ್ಲೆ ಹಳ್ಳಿಯಲ್ಲಿ ಜನಿಸಿದರು. ತಂದೆ ಗಂಗಾಧರ ಶಾಸ್ತ್ರಿ, ತಾಯಿ ಸುಗುಣಾಬಾಯಿ. ಜಾಂಭೇಕರರು ಪ್ರಾಥಮಿಕ ಶಿಕ್ಷಣ ಪಡೆದದ್ದು ತಮ್ಮ ತಂದೆಯಿಂದ. ಅನಂತರ ಮುಂಬಯಿ ದೇಶೀಯ ಶಿಕ್ಷಣ ಸಂಘದಲ್ಲಿ (ನೇಟಿವ್ ಎಜುಕೇಷನ್ ಸೊಸೈಟಿ) ಇವರು ವ್ಯಾಸಂಗ ಮಾಡಿದರು.
ಜಾಂಭೇಕರರು 1830ರಲ್ಲಿ ಮುಂಬಯಿಯ ದೇಶೀಯ ಶಿಕ್ಷಣ ಸಂಘದಲ್ಲಿ ಡೆಪ್ಯುಟಿನೇಟಿವ್ ಕಾರ್ಯದರ್ಶಿಯಾಗಿ ನೇಮಕವಾದರು. 1834ರಲ್ಲಿ ಇವರು ಎಲ್ಫಿನ್‍ಸ್ಟನ್ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕರಾದರು. ಸ್ವಲ್ಪಕಾಲ ಸ್ಥಾನಾಪನ್ನ (ಆಕ್ಟಿಂಗ್) ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದರು. ಮುಂಬಯಿ ಪ್ರಾಂತ್ಯದ ಮುಖ್ಯ ವಿಭಾಗಗಳೊಂದರಲ್ಲಿ ಶಾಲೆಗಳ ಕಾರ್ಯಭಾರೀ (ಇನ್-ಚಾರ್ಜ್) ಅಧೀಕ್ಷಕರಾಗಿ (ಸೂಪರಿಂಟೆಂಡೆಂಟ್) ಕೆಲಸ ಮಾಡಿದರು. ಈ ಎರಡು ಹುದ್ದೆಗಳನ್ನು ನಿರ್ವಹಿಸಿದ ಪ್ರಥಮ ಭಾರತೀಯರು ಇವರು. ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿದ್ದಾಗ ಇವರು ಖಗೋಳಶಾಸ್ತ್ರ ಬೋಧಕರಾಗಿಯೂ ಇದ್ದರು. ಜಾಂಭೇಕರರು ಪ್ರಪ್ರಥಮ ಸಮಾಜಸುಧಾರಕರಲ್ಲಿ ಒಬ್ಬರು. 1832ರ ಜನವರಿಯಲ್ಲಿ ದರ್ಪಣ ಎಂಬ ಇಂಗ್ಲಿಷ್-ಮರಾಠಿ ಪತ್ರಿಕೆಯನ್ನು ಅನಂತರ ದಿಗ್ದರ್ಶನ್ ಎಂಬ ನಿಯತಕಾಲಿಕವನ್ನು ಪ್ರಾರಂಭಿಸಿದರು..
ಇವರು ಬಾಲ್ಯವಿವಾಹ, ಸತಿ ಮುಂತಾದವನ್ನು ತಮ್ಮ ಬರವಣಿಗೆ ಮತ್ತು ಭಾಷಣಗಳ ಮೂಲಕ ಖಂಡಿಸಿದರು. ವಿಧವಾವಿವಾಹವನ್ನು ಪ್ರೋತ್ಸಾಹಿಸಿದರು. ಶಿಕ್ಷಣದ ಬೆಳವಣಿಗೆಯೇ ಸಮಾಜ ಸುಧಾರಣೆಯನ್ನು ಸಾಧಿಸಲು ಅತ್ಯುತ್ತಮ ಸಾಧನವೆಂದು ಇವರು ನಂಬಿದ್ದರು. 1845ರಲ್ಲಿ ಇವರು ದೇಶೀಯ ಸಾರ್ವಜನಿಕ ಗ್ರಂಥಾಲಯವನ್ನೂ (ನೇಟಿವ್ ಜನರಲ್ ಲೈಬ್ರರಿ) ದೇಶೀಯ ಶ್ರೇಯಃ ಸಂಘವನ್ನೂ (ನೇಟಿವ್ ಇಂಪ್ರೂವ್‍ಮೆಂಟ್ ಸೊಸೈಟಿ) ಮುಂಬೈಯಲ್ಲಿ ಸ್ಥಾಪಿಸಿದರು.
ಜಾಂಭೇಕರರದು ತುಂಬ ಉದಾರದೃಷ್ಟಿ. ಕ್ರೈಸ್ತ ಮತಕ್ಕೆ ಪರಿವರ್ತನೆ ಹೊಂದಿದ್ದ ಹಿಂದುವೊಬ್ಬನನ್ನು ಇವರು ಮತ್ತೆ ಹಿಂದುವಾಗಿ ಪರಿವರ್ತಿಸಲು ಯತ್ನಿಸಿದಾಗ ಸನಾತನಿಗಳೆನಿಸಿಕೊಂಡವರಿಂದ ಬಂದ ವಿರೋಧವನ್ನು ಧೈರ್ಯವಾಗಿ ಎದುರಿಸಿದರು.
ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಸರ್ಕಾರ ಗಮನಿಸದಿರಲಿಲ್ಲ. 1840ರಲ್ಲಿ ಸರ್ಕಾರ ಇವರನ್ನು ಜಸ್ಟಿಸ್ ಆಫ್ ದಿ ಪೀಸ್ ಆಗಿ ನೇಮಿಸಿತು. ಜಾಂಭೇಕರರು ಬಹುಭಾಷಾಪ್ರವೀಣರಾಗಿದ್ದರು. ಭಾಷಾ ಶಿಕ್ಷಣಕ್ಕೆ ಇವರು ಸೇವೆ ಸಲ್ಲಿಸಿದ್ದಾರೆ. ಜಾಂಭೇಕರರಿಗೆ ಪಾಶ್ಚಾತ್ಯ ಶಿಕ್ಷಣ ಪದ್ಧತಿಯಲ್ಲಿ ಅಭಿಮಾನವೂ ಪ್ರಜಾಪ್ರಭುತ್ವದಲ್ಲಿ ವಿಶೇಷವಾದ ಗೌರವವೂ ನ್ಯಾಯಬದ್ಧ ಸರ್ಕಾರದಲ್ಲಿ ನಿಷ್ಠೆಯೂ ಇದ್ದುವು. ಆಧುನಿಕ ಅರ್ಥದಲ್ಲಿ ರಾಷ್ಟ್ರೀಯತೆ ಆ ಕಾಲದ ಜನಕ್ಕೆ ಇನ್ನೂ ಗೊತ್ತಿರಲಿಲ್ಲ. ಆದರೆ ದೇಶದ ವಿಷಯದಲ್ಲಿ ತಮ್ಮ ಕರ್ತವ್ಯವೆನೆಂಬುದರ ಪ್ರಜ್ಞೆ ಅವರಿಗೆ ಚೆನ್ನಾಗಿ ಇತ್ತು. ಜಾಂಭೇಕರರು ಮರಾಠಿಯಲ್ಲಿ ಸರಳವಾಗಿ ನಿರರ್ಗಳವಾಗಿ ಬರೆಯುತ್ತಿದ್ದರು. ಹಲವು ವಿಷಯಗಳನ್ನು ಕುರಿತು ಅವರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ.