ಬಾಬು ಕೃಷ್ಣಮೂರ್ತಿ


ಬಾಬು ಕೃಷ್ಣಮೂರ್ತಿ (ಮೇ ೧೧, ೧೯೪೪) ಕನ್ನಡದ ಸುಪ್ರಸಿದ್ಧ ಬರಹಗಾರರು ಮತ್ತು ಪತ್ರಿಕಾ ಸಂಪಾದಕರು. ಅಂದರೆ ಅಗಾಧತೆಯ ಒಂದು ಮೂರ್ತಿ ಕಣ್ಣಿಗೆ ಕಟ್ಟಿದಂತಾಗುತ್ತದೆ. ಅದೆಂದರೆ ಚಂದ್ರಶೇಖರ ಆಜಾದರದ್ದು. ಚಂದ್ರಶೇಖರ ಆಜಾದರ ಕುರಿತಾದ ಬಾಬು ಕೃಷ್ಣಮೂರ್ತಿಯವರ ‘ಅಜೇಯ’ ಕೃತಿ ನಮ್ಮ ಕಾಲದ ಪೀಳಿಗೆಗೆ ದೇಶ ಅಂದರೇನು, ದೇಶ ಭಕ್ತಿ ಅಂದರೇನು, ಸ್ವಾತಂತ್ರ್ಯ ಹೋರಾಟದ ನಿಜವಾದ ಅರ್ಥವೇನು ಇವನ್ನೆಲ್ಲಾ ಇನ್ನಿಲ್ಲದಂತೆ ಹೃದಯಕ್ಕೆ ಮೀಟಿದಂತಹ ಕೃತಿ.

ಬಾಬು ಕೃಷ್ಣಮೂರ್ತಿ
ಜನನಮೇ ೧೧, ೧೯೪೪
ಬೆಂಗಳೂರು
ವೃತ್ತಿಸಾಹಿತಿ, ಪತ್ರಿಕಾ ಸಂಪಾದಕರು, ಚರಿತ್ರಕಾರರು
ರಾಷ್ಟ್ರೀಯತೆಭಾರತೀಯರು

ಸಾಹಿತ್ಯ, ಪತ್ರಿಕೋದ್ಯಮ, ಈ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾಗಿರುವ ಬಾಬು ಕೃಷ್ಣಮೂರ್ತಿಯವರು ಮೇ ೧೧, ೧೯೪೪ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ವೆಂಕಟೇಶ ಶಾಸ್ತ್ರಿಗಳು ಮತ್ತು ತಾಯಿ ಸೀತಮ್ಮನವರು. ತಮ್ಮ ವಿದ್ಯಾಭ್ಯಾಸವನ್ನೆಲ್ಲಾ ಬೆಂಗಳೂರಿನಲ್ಲೇ ನಡೆಸಿದ ಕೃಷ್ಣಮೂರ್ತಿಯವರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಪಡೆದರು.

ಪತ್ರಿಕೋದ್ಯಮದಲ್ಲಿ

ಬದಲಾಯಿಸಿ

ಸಾಹಿತ್ಯ ಮತ್ತು ಪತ್ರಿಕೋದ್ಯಮಗಳಲ್ಲಿ ಅತೀವ ಆಸಕ್ತರಾಗಿದ್ದ ಬಾಬು ಕೃಷ್ಣಮೂರ್ತಿಯವರು ಆಯ್ದುಕೊಂಡ ಕ್ಷೇತ್ರವೂ ಪತ್ರಿಕೋದ್ಯಮವೇ. ೧೯೬೮ರಿಂದ ೧೯೭೨ರವರೆಗೆ ಲೇಖನ ಕಾವೇರಿಯ ಸಹ ಸಂಪಾದಕರಾಗಿ ವೃತ್ತಿ ಆರಂಭಿಸಿದ ಇವರು ನಂತರ ಸೇರಿದ್ದು ಕೊಟ್ಟಾಯಂನ ಮಂಗಳಂ ಪ್ರಕಾಶನದ ಮಂಗಳ ಸಾಪ್ತಾಹಿಕದ ಸಂಪಾದಕರಾಗಿ. ಇವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ) ಮುಂತಾದ ನಿಯತಕಾಲಿಕೆಗಳು ಹೊರಬಂದುವು. ಕಳೆದ ಹಲವು ವರ್ಷಗಳಲ್ಲಿ ಅವರು ‘ಕರ್ಮವೀರ’ ಪತ್ರಿಕೆಯ ಸಂಪಾದಕರಾಗಿ ದುಡಿದಿದ್ದಾರೆ.

ಚಂದ್ರಶೇಖರ ಆಜಾದ್ ಕುರಿತ 'ಅಜೇಯ

ಬದಲಾಯಿಸಿ

ಬಾಬು ಕೃಷ್ಣಮೂರ್ತಿಗಳು ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದರನ್ನು ಕುರಿತು ಆರು ವರ್ಷಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಆ ಕೃತಿಯನ್ನು ಓದಿದವರಿಗೆ ಅದೊಂದು ತಪಸ್ಸು ಎಂದೆನಿಸೀತು. ಈ ಕೃತಿ ಪಡೆದ ಜನಪ್ರಿಯತೆ ಅಪಾರವಾದುದು.

ಇನ್ನಿತರ ದೇಶಭಕ್ತಿ ಕಥನಗಳು

ಬದಲಾಯಿಸಿ

ಇದಾದ ನಂತರ ಬರೆದದ್ದು ‘ಅದಮ್ಯ’. ಈ ಕೃತಿ ಮತ್ತೊಬ್ಬ ದೇಶಪ್ರೇಮಿ ವಾಸುದೇವ ಬಲವಂತ ಫಡ್ಕೆ ಅವರನ್ನು ಕುರಿತದ್ದು. ‘ಸಿಡಿಮದ್ದು ನೆತ್ತರು ನೇಣುಗಂಬ’ ಹದಿನೆಂಟು ಸ್ವಾತಂತ್ರ್ಯಯೋಧರ ಕುರಿತಾದ ವ್ಯಕ್ತಿಚಿತ್ರಗಳು. ೧೮೮೫ರಿಂದ ೧೯೧೫ರವರೆಗೆ ನಡೆದ ಸ್ವಾತಂತ್ರ್ಯ ಸಂಗ್ರಾಮದ ಸಮಗ್ರ ಚಿತ್ರಣ ನೀಡುವ ಪುಸ್ತಕ ‘ರುದ್ರಾಭಿಷೇಕ’ ಇವರ ಮತ್ತೊಂದು ಮಹತ್ವದ ಕೃತಿ. ಇದಲ್ಲದೆ ಮಕ್ಕಳಿಗಾಗಿ ‘ಮಿಲ್ಟ್ರಿ ತಾತ ಕಥೆ ಹೇಳ್ತಾರೆ’, ಅಲ್ಲೂರಿ ಸೀತಾರಾಮರಾಜು, ಚಂದ್ರಶೇಖರ ಆಜಾದ್, ಭಗತ್‌ಸಿಂಗ್, ಶ್ರೀಅರವಿಂದರು, ಮೇಡಂ ಕಾಮ, ಡಾ. ಸಿ.ಜಿ. ಶಾಸ್ತ್ರಿ : ಒಂದು ಯಶೋಗಾಥೆ ಮುಂತಾದ ಅನೇಕ ಕೃತಿಗಳ ರಚನೆ ಮಾಡಿದ್ದಾರೆ. ಇಸ್ಕಾನ್ ‘ಭಕ್ತಿ ವೇದಾಂತ ದರ್ಶನ’ಕ್ಕಾಗಿ, ಭಕ್ತಿವೇದಾಂತ ಪ್ರಭುಪಾದರ ಬಗ್ಗೆ ಧಾರಾವಾಹಿಯಾಗಿ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾದ್ದಾರೆ. ಕಳೆದ ವರ್ಷ ‘ಭಾರತ ಸ್ವಾತಂತ್ರ್ಯ ಸಂಗ್ರಾಮದ’ ಕುರಿತಾದ ಅವರ ಗ್ರಂಥ ಕೂಡಾ ಬಿಡುಗಡೆಯಾಗಿದೆ.

ಚಲನಚಿತ್ರ ಮತ್ತು ಕಿರುತೆರೆಗಳಲ್ಲಿ

ಬದಲಾಯಿಸಿ

ಬಾಬು ಕೃಷ್ಣಮೂರ್ತಿಯವರಿಗೆ ದೂರದರ್ಶನ . ಹಾಗೂ ಚಿತ್ರರಂಗದಲ್ಲೂ ದುಡಿದ ಅನುಭವವಿದೆ. ಕನ್ನಡದ ಚಲನಚಿತ್ರ ‘ರಾಘವೇಂದ್ರ ವೈಭವ’ (೧೯೮೧) ನಿರ್ದೇಶಕರಾಗಿ, ಪಡುವಾರಹಳ್ಳಿ ಪಾಂಡವರು, ನಿಗೂಢ ರಾತ್ರಿಗಳು, ಘರ್ಷಣೆ ಚಿತ್ರಕ್ಕಾಗಿ ಚಿತ್ರಕಥೆ, ಸಂಭಾಷಣೆ ರಚನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಹಿಂದಿ ಚಿತ್ರ ‘ಶಹೀದ್-೧೯೩೧’ ಚಿತ್ರಕ್ಕಾಗಿ ಚಿತ್ರಕಥೆ, ವಸ್ತ್ರ ವಿನ್ಯಾಸದ ಸಲಹೆಗಾರರಾಗಿ ದುಡಿದಿದ್ದಾರೆ.

ವ್ಯಂಗ್ಯಚಿತ್ರ ಮತ್ತು ಇತರೆ

ಬದಲಾಯಿಸಿ

ಇವರು ಸ್ವತಃ ವ್ಯಂಗ್ಯ ಚಿತ್ರಕಾರರೂ ಹೌದು. ಕೆಲಕಾಲ ಉದಯ ಕಲಾ ನಿಕೇತನದ ಗೌರವ ಪ್ರಾಂಶುಪಾಲರಾಗಿ ಮತ್ತು ಉಪಾಧ್ಯಕ್ಷರಾಗಿ ಸಹಾ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ಬಾಬು ಕೃಷ್ಣಮೂರ್ತಿಯವರಿಗೆ ದೊರೆತ ಗೌರವ ಪ್ರಶಸ್ತಿಗಳು ಹಲವಾರು. ೧೯೭೧ರಲ್ಲಿ ‘ಮಿಲ್ಟ್ರಿ ತಾತ ಕಥೆ ಹೇಳ್ತಾರೆ’ ಕೃತಿಗೆ ರಾಜ್ಯ ಸರಕಾರದ ಪ್ರಶಸ್ತಿ, ೧೯೭೪ರಲ್ಲಿ ‘ಅಜೇಯ’ ಮತ್ತು ೧೯೮೪ರಲ್ಲಿ ‘ಅದಮ್ಯ’ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೯೫ರಲ್ಲಿ ವಿಶ್ವೇಶ್ವರಯ್ಯ ಎಂಜನಿಯರಿಂಗ್ ಪ್ರತಿಷ್ಠಾನ ಪ್ರಶಸ್ತಿ, ಪತ್ರಿಕೋದ್ಯಮದ ಸೇವೆಗಾಗಿ ಕರ್ನಾಟಕ ಜ್ಯೋತಿ ಪ್ರಶಸ್ತಿ, ಶಿವಮೊಗ್ಗದ ‘ನಾವಿಕ’ ದಿನಪತ್ರಿಕೆಯ ರಜತ ಮಹೋತ್ಸವ ಪ್ರಶಸ್ತಿ, ರಂಗಭೂಮಿ ಕೊಡುಗೆಗಾಗಿ ಉದಯಕಲಾನಿಕೇತನದಿಂದ ಸನ್ಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಅನೇಕ ಗೌರವಗಳು ಅವರಿಗೆ ಸಂದಿವೆ.

ಚಿಂತನೆಗಳು

ಬದಲಾಯಿಸಿ

ಪತ್ರಿಕಾ ಸಮಾರಂಭವೊಂದರಲ್ಲಿ ಬಾಬು ಕೃಷ್ಣಮೂರ್ತಿಯವರು ನುಡಿದ ಮಾತುಗಳು ನಮ್ಮ ಇಂದಿನ ಪರಿಸ್ಥಿತಿಯ ಚಿತ್ರಣದಂತಿವೆ. “ಇಂದಿನ ಪತ್ರಿಕೋದ್ಯಮ ತೀರಾ ಬದಲಾಗಿದ್ದು ಸತ್ಯ, ನಿಷ್ಠೆ, ಪ್ರಾಮಾಣಿಕತೆ ಎನ್ನುವುದು ಹಣದ ಹೊಳೆಯಲ್ಲಿ ತೇಲಿ ಹೋಗುತ್ತಿದೆ. ಪತ್ರಿಕೋದ್ಯಮ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಹಣವಿದ್ದರೆ ಏನು ಬೇಕಾದರೂ ಮಾಡಬಹುದೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಗೆ 35 ಸಾವಿರ ಕೋಟಿ ರೂ. ಕೂಡಿಟ್ಟರೆ ಪ್ರಧಾನಿಯಾಗಬಹುದೆಂಬುವಷ್ಟರ ಮಟ್ಟಿಗೆ ವ್ಯವಸ್ಥೆ ಬಂದಿದೆ. ಪತ್ರಿಕೋದ್ಯಮ ಕೇವಲ ಹೊಟ್ಟೆಪಾಡಿನದಾಗಬಾರದು. ಸಮಾಜವನ್ನು ಸರಿದಾರಿಗೆ ತರುವಲ್ಲಿ ಪತ್ರಿಕೆಗಳು ಸಮಾಜ ಹಾಗೂ ವ್ಯಕ್ತಿಗಳ ನಡುವಿನ ಸೇತುವೆಯಾಗಿ ಕೆಲಸ ಮಾಡಬೇಕು” ಎನ್ನುತ್ತಾರೆ ಬಾಬು ಕೃಷ್ಣಮೂರ್ತಿ.

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ