ಬಾಗಲಕೋಟೆ ತಾಲೂಕು ಕಾವ್ಯ ಪರಂಪರೆಯು ತುಂಬಾ ಮೌಲಿಕವಾಗಿ ಒಡಮೂಡಿದೆ.ಜಾನಪದ,ವಚನ,ಸೂಫಿ ಪರಂಪರೆಯಿಂದ ಆಧುನಿಕ ಕಾವ್ಯದ ಅಪರೂಪದ ಮಾದರಿಗಳನ್ನು ಕನ್ನಡಕ್ಕೆ ನೀಡಿದ ಕೊಡುಗೆ ಈ ನೆಲದ್ದು.ಘಟಪ್ರಭೆಯ ಒಳ ಸೆಳವು,ಕೃಷ್ಣೆಯ ಸೀಮಾ ಪ್ರವಹಿಸುವಿಕೆಯ ವಿಶಿಷ್ಟ ನದಿ ಸಂಸ್ಕøತಿಯ ಪ್ರತೀಕವಾಗಿ ಇಲ್ಲಿನ ಕಾವ್ಯ ಮೈದೋರಿದೆ.ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಜನಪದ ಗೀತೆಗಳನ್ನು ಹಾಡಿಕೊಂಡು ಬರುವ ಜನಪದರಿದ್ದಾರೆ,ವಚನ ಪರಂಪರೆಗೆ ಸಾಕ್ಷಿಯಾಗಿ ಇಲ್ಲಿಯ ಹಲವು ನೆಲೆಗಳು ಪುನೀತವಾಗಿವೆ. ಶಿರೂರಿನ ಶಾಸನ ಕವಿ ಹಬ್ಬಣ್ಣ ನಾಯಕ ಕೀರ್ತಿವಂತ ಕವಿ.ಕನ್ನಡ ದಾಸ ಪರಂಪರೆಯ ಶ್ರೀಮಂತಿಕೆಗೆ ಪ್ರಸನ್ನ ವೆಂಕಟದಾಸರು ಬಾಗಲಕೋಟೆಯನ್ನು ತಮ್ಮ ನೆಲೆಯಾಗಿಸಿಕೊಂಡಿದ್ದರು. ಅನುಭಾವಿ ವರಕವಿ ಮಧುರಚೆನ್ನರಿಗೆ ಜ್ಞಾನ ದೀಕ್ಷೆಯನ್ನು ನೀಡಿದ್ದು ಬಾಗಲಕೋಟೆ.ಆಧ್ಯಾತ್ಮದ ಕಾವ್ಯ ಸರಳತೆಯ ಪ್ರತೀಕವಾಗಿದ್ದ ಜೀವಣ್ಣ ಮಸಳಿ,ಕನ್ನಡ ನವ್ಯ ಕಾವ್ಯದ ಅಪರೂಪದ ಕೃಷಿಗೈದ ಆನಂದ ಝುಂಜರವಾಡ,ದಲಿತ ಬಂಡಾಯದ ಘಟ್ಟಿ ಧ್ವನಿಯಾದ ಡಾ.ಸತ್ಯಾನಂದ ಪಾತ್ರೋಟ, ಆಧುನಿಕ ಕಾವ್ಯಕ್ಕೆ ದೇಸಿಯತೆ ತುಂಬಿದ ಡಾ.ಪ್ರಕಾಶ ಖಾಡೆ, ಸಹೃದಯ ಸಹಬಾಳ್ವೆಯ ಕವಿ ಡಾ.ಮೈನುದ್ದೀನ ರೇವಡಿಗಾರ,ಪ್ರೀತಿ ಬದುಕಿನ ಕಾವ್ಯ ಕಟ್ಟಿದ ಅಬ್ಬಾಸ ಮೇಲಿನಮನಿ, ಮಾನವೀಯ ಸಂಬಂಧಗಳನ್ನು ಹೆಣೆದ ಬಸವರಾಜ ಹೂಗಾರ,ತ್ರಿಪದಿಗಳ ಕಾವ್ಯ ಸೊಗಸು ಚೆಲ್ಲಿದ ಗುರುಸ್ವಾಮಿ ಗಣಾಚಾರಿ,ಚುಟುಕು ಕಾವ್ಯಕ್ಕೆ ಚುರುಕು ತಂದ ಶ್ಯಾಮ ಹುದ್ದಾರ ಮತ್ತು ಪ್ರಲ್ಹಾದ ಹುದ್ದಾರ ಬಾಗಲಕೋಟೆ ತಾಲೂಕಿಗೆ ಸೇರಿದವರೆಂಬುದು ಹೆಮ್ಮೆಯ ಸಂಗತಿ.

ಘಟ್ಟೆಯ ದಂಡೆಯ ಕಬ್ಬಿನ ರಸವು
ಬೆಲ್ಲದ ಅಚ್ಚು ಬಲು ಮೆಚ್ಚು ಮಾಲಿಂಗೇಶಗೆ
ಹಾಸಿದ ಪಟ್ಟಿ ಝಾಡಿಯಂದವ ನೋಡಿರಯ್ಯ
ಸೋನೆ ಮಳೆ ನಡುಗುವ ಚಳಿಗೆ
ಬೆಚ್ಚನ್ನ ಕುಂದರಗಿ ಕಂಬಳಿ ಹೊದಿಯಿರಯ್ಯ
ತುಳಸಿಗಿರಿಯಗ ನಮಿಸಿ ಕಲಾದಗಿ ಚಿಕ್ಕು ಸವಿಯಿರಯ್ಯ.

ಕವಿಹನಮಂತ ತಾಸಗಾಂವಕರ ಅವರ ಈ ಸಾಲುಗಳು ಬಾಗಲಕೋಟ ಜಿಲ್ಲೆಯ ವೈಶಿಷ್ಟ್ಯವನ್ನು ಚಿತ್ರಿಸುತ್ತವೆ.ದಲಿತ ಬಂಡಾಯ ಮನೋಭಾವದ ಕವಿತೆಗಳಿಂದ ಕನ್ನಡ ಕಾವ್ಯಕ್ಕೆ ಪ್ರೀತಿ ಸ್ಪರ್ಷ ನೀಡಿದ ಡಾ.ಸತ್ಯಾನಂದ ಪಾತ್ರೋಟ ಅವರ ಜಾಜಿ ಮಲ್ಲಿಗೆ ಕವನ ಅತ್ಯಂತ ಜನಪ್ರಿಯವಾಗಿದೆ.

ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ
ಮನಸು ಕನಸುಗಳಲ್ಲಿ ಜಾಜಿ ಮಲ್ಲಿಗೆ
ಸತ್ತ ನರಗಳ ಸುತ್ತ ಹಸಿದ ಹಾವುಗಳಿಲ್ಲ
ಟೊಂಗೆ ಟೊಂಗೆಯ ತುಂಬ ಬಿರಿವ ಮೊಗ್ಗು.

ಹೀಗೆ ಅವರ ಕಾವ್ಯ ಧ್ವನಿ ರೂಪಿತವಾಗಿದೆ.ನವ್ಯ ನವೋದಯ ಕಾವ್ಯದ ಬೆರೆಕೆಯಲ್ಲಿ ಬರೆಯುತ್ತಿರುವ ಆನಂದ ಝುಂಜರವಾಡ ಕನ್ನಡದ ಮುಖ್ಯ ಕವಿ.

ನನ್ನ ರಸಿಕನಿಗೆ ತಬ್ಬಲು ಮುಗಿಲಂಗಳಕೆ
ನಿಲುಕದ ಸೂಚೀಪರ್ಣ ತೋಳುಗಳೀರಲಿ
ತನ್ನ ಚಿತೆಯ ಕಾವಿನಲ್ಲೂ ನಲ್ಲೆಯ ಮೊಲೆಗಾವು
ಹುಡುಕುವ ನಲ್ಲನ ಉನ್ಮತ್ತ ವಾಂಛೆ ಇರಲಿ
ತನ್ನೇಲ್ಲ ಶೂನ್ಯ ಏಕಾಂತಗಳನ್ನೂ ನಡು-ಸರೋವರದಲ್ಲಿ
ಅಡಗಿ ಗೆಲ್ಲುವೆನೆಂಬ ಪ್ರಾಕೃತಿಕ ಛಲವಿರಲಿ.

ಝುಂಜರವಾಡರ ಈ ಕವಿತೆಯ ಸಾಲುಗಳು ಅವರ ಕಾವ್ಯ ಶಕ್ತಿಯನ್ನು ಪ್ರಕಟಪಡಿಸುತ್ತವೆ.ಅವರ ‘ಕವಿತಾನ..ಮರತವ್ರಿಗೆ ಕವೀನ್ನ ಮರೀಲಿಕ್ಕೆಷ್ಟೊತ್ತು.’ಎಂಬ ಕಾವ್ಯ ಧ್ವನಿಯ ಹಿಂದಿನ ನೋವು ಸೃಜನತೆಯ ನಿರ್ಲಕ್ಷತೆಗೆ ಸಾಕ್ಷಿಯಾಗಿದೆ. ನವೋದಯೋತ್ತರ ಕಾವ್ಯದ ಬಿರುಸಿನಲ್ಲಿ ಬರೆಯಲಾರಂಭಿಸಿದ ಡಾ.ಪ್ರಕಾಶ ಖಾಡೆ ಸಂಕೀರ್ಣ ಕಾವ್ಯದ ವಿಶಿಷ್ಟಾಭಿವ್ಯಕ್ತಿ ರಚನೆಗಳನ್ನು ನೀಡಿದ್ದಾರೆ.

ನಾವೂ ಜೋರು ಮಾಡಬಹುದು
ಸಿಕ್ಕವರ ಮೇಲೆ
ಏನು ಉಳಿಯುತ್ತದೆ ಹೇಳಿ
ಇಲ್ಲಿ ಪ್ರೀತಿ ಇರದ ಮೇಲೆ.

ಪ್ರೀತಿಯ ಅರ್ಥವನ್ನು ವಿಸ್ತರಿಸಿದ ಡಾ.ಖಾಡೆ ಅವರ ಈ ಸಾಲುಗಳು ಮಾನವೀಯತೆಯನ್ನು ಸಾರುತ್ತವೆ.ಆಧುನಿಕ ವಚನಗಳನ್ನು ರಚಿಸಿ ಹೆಸರಾದ ಗುರುಸ್ವಾಮಿ ಗಣಾಚಾರಿ ಅವರು

ಭಾವವಿಲ್ಲದ ಕಾವ್ಯ ಜೀವವಿಲ್ಲದ ದೇಹ
ಹಾವ ಭಾವರಿಯದ ನರ್ತಕಿ ನಟನೆ ಪರಿ
ಕಾವ್ಯ ರಸಹೀನ ಗುರುಲಿಂಗ.
ಎಂದು ಕಾವ್ಯ ಕುರಿತು ಹೇಳುತ್ತರೆ.ಗೇಯತೆ,ಪ್ರಾಸಬದ್ಧತೆ,ಲಾಲಿತ್ಯ,ಸುಂದರ ಪದಪುಂಜಗಳು ಇವರ ಕವಿತೆಗಳ ವಿಶೇಷ.ಕವಿ ಅಬ್ಬಾಸ ಮೇಲಿನಮನಿ ಅವರ ಕವಿತೆಗಳು ಜೀವದ್ರವ್ಯದ ಸೆಳಕುಗಳಾಗಿವೆ.
ಗಿಡದ ಟೊಂಗೆ ಟೊಂಗೆಗೂ
ಕಾಳಿಂಗ ಹರಿದಾಡುತ್ತಿದ್ದರೂ
ಹಕ್ಕಿ ಗೂಡು ಕಟ್ಟದೆ
ಬಿಡುವುದಿಲ್ಲ,ನಿಲ್ಲಿಸುವುದಿಲ್ಲ
ಜೀವದೊಲವಿನ ಹಾಡು.

ಮೂರು ಗಳಿಗೆ ಧಾವಂತದಲ್ಲಿ ಬದುಕು ರೂಪಿಸಿಕೊಳ್ಳುವ ಮನುಷ್ಯನ ತುಡಿತಕ್ಕೆ ನಿತಾಂತ ಸಂಭ್ರಮವಿದೆ.ನಾವೇ ಹುಟ್ಟುಹಾಕಿದ ಜಾತಿ,ಸ್ವಜನ ಪಕ್ಷಪಾತ,ಗುಂಪುಗಾರಿಕೆ,ಸ್ವಾರ್ಥ,ದ್ವೇಷ,ಕೌರ್ಯಗಳ ಗೆಲ್ಲಲು ಎದೆಗಾರಿಕೆಯ ವಿಶ್ವಾಸ ಬೇಕಾಗಿದೆ.ಮುಳ್ಳುಗಳ ನಡುವೆ ಅರಳಿಕೊಳ್ಳುವ ಗುಲಾಬಿಯ ಪ್ರೀತಿಯೇ ಅದಕ್ಕೆ ಸಾಕಾಗಿದೆ ಎನ್ನುತ್ತಾರೆ ಕವಿ ಅಬ್ಬಾಸ ಮೇಲಿನಮನಿ.ನವ್ಯ ಕಾವ್ಯದ ಬರವಣಿಗೆಯನ್ನು ಇಂದಿಗೂ ಉಳಿಸಿಕೊಂಡು ಬಂದ ಕವಿ ಅಂಬಾದಾಸ ವಡೆ ಕಾವ್ಯವನ್ನು ಜನಮುಖಿಯಾಗಿಸಿದ್ದಾರೆ.

ಕಾಗಿ ನಿನ್ನ ಮ್ಯಾಲ ಹಾಡ ಕಟ್ಟೊದು
ಹಾಡ ಕಟ್ಟಿ ಹಾಡೂದಂದ್ರ
ಎಂಥಾ ಹಾಸ್ಯಾಸ್ಪದ ಹೌದಲ್ಲೋ
ನಿನ್ನ ಕರೆ ಬಣ್ಣಕ್ಕ ,ಕೆಟ್ಟ ಸ್ವರಕ್ಕ,
ನಿನ್ನ ಖಾಯಂ ಕತ್ತಲಗವ್ಯಾಗಿಟ್ಟ ನನ್ನ ಹಿರ್ಯಾರು
ನಿನ್ನ ಮ್ಯಾಲಿನ ನನ್ನ ಹಾಡಕ್ಕ ಖೊಳ್ಳಂತ ನಗೋದೆನು
ಆಶ್ಚರ್ಯವಿಲ್ಲ ಬಿಡು..

ಹೀಗೆ ವಡೆಯವರು ಕಾವ್ಯದ ವಸ್ತು ಆಯ್ಕೆಯಲ್ಲಿ ಹೊಸತನ ಹುಡುಕುತ್ತಾರೆ. ಕವಿಗಳಾದ ಡಾ.ವಿಜಯಕುಮಾರ ಕಟಗಿಹಳ್ಳಿಮಠ,ಡಾ.ಬಿ.ಕೆ.ಹಿರೇಮಠ,ಪಿ.ವೈ.ಗಿರಿಸಾಗರ,ಮಲ್ಲಿಕಾರ್ಜುನ ಯಾಳವಾರ,ಧೃವಾಚಾರ್ ಕಾಖಂಡಕಿ,ಸಂಗು ಕೋಟಿ,ಉಮೇಶ ತಿಮ್ಮಾಪುರ,ಗಂಗಾಧರಯ್ಯ ಜಾಲಿಬೆಂಚಿ,ಎಸ್.ಎಸ್.ಹಳ್ಳೂರ,ಬೀರಪ್ಪ ಹಳಮನಿ,ರಾಜು ಯಾದವ, ನಾರಾಯಣ ಯಳ್ಳಿಗುತ್ತಿ,ಮಹಾಬಳೇಶ್ವರ ಗುಡಗುಂಟಿ,ವೀರೇಶ ಖೋತ,ಎಚ್ಕೆ ಆವಟಿ, ಡಾ.ವೀರೇಶ ಬಡಿಗೇರ, ಶಂಕರ ಲಮಾಣಿ,ಶ್ರೀನಿವಾಸ ಅಧ್ಯಾಪಕ ,ದೊಡ್ಡಣ್ಣ ಗದ್ದನಕೇರಿ,ನಾಗರಾಜ ಪೂಜಾರ,ಕೃಷ್ಣ ಕೋರಾ,ಸುಭಾಸ್ಚಂದ್ರ ಜಾಧವ,ಸಿದ್ದರಾಜ ಸೊನ್ನದ, ಶಂಕರ ಹೂಗಾರ,ಮೊದಲಾದವರು ತಾಲೂಕಿನ ಜನಪ್ರಿಯ ಕವಿಗಳು,ಬಾಗಲಕೋಟ ತಾಲೂಕಿನ ಮಹಿಳಾ ಕಾವ್ಯವು ಚೆಲುವಾಗಿ ಚೆಲ್ಲುವರಿದಿದೆ.ಶಾಂತಾಬಾಯಿ ಸಾಬಾದಿ,ರೇಖಾ ಕಾಖಂಡಕಿ,ವೀಣಾ ಶಾಂತೇಶ್ವರ,ಡಾ,ಶಕುಂತಲಾ ದುರ್ಗಿ,ಡಾ.ಮಲ್ಲಿಕಾ ಘಂಟಿ,ಡಾ.ಸರೋಜಿನಿ ಪಾವಟೆ,ಡಾ.ಶಶಿಕಲಾ ಮರಿಬಾಶೆಟ್ಟಿ,ಸುಮಂಗಲಾ ಬಾದಾಮಿ,ರುದ್ರಮ್ಮ ಕೋರಿ,ಎನ್,ರಾಜೇಶ್ವರಿ,ಮಹೇಶ್ವರಿ ಕೋಟಿ,ಸುನಂದಾ ಕನಮಡಿ,ಜಾಸ್ಮೀನ್ ಕಿಲ್ಲೆದಾರ,ಜಯಶ್ರೀ ದೇಶಪಾಂಡೆ,ಸುರೇಖಾ ದತ್ತಾತ್ರೇಯ,ಹೇಮಾ ದೇಸಾಯಿ,ಮಂಜುಳಾತಾಯಿ ಅಂಗಡಿ,ರಾಜೇಶ್ವರಿ ಕಂಠಿ,ಗೌರಿ ಕಂಠಿ, ಗುರಮ್ಮ ಸಂಕೀನ,ಸಂಗೀತಾ ಸಿಕ್ಕೇರಿ,ಮೀನಾಕ್ಷಿ ಮುಂಡಗನೂರ,ವೀರಮ್ಮ ಪಾಟೀಲ,ಮಹಾದೇವಿ ಹೊಸಮನಿ ಮೊದಲಾದವರು ಕಾವ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.ಒಟ್ಟಾರೆ ಘಟಪ್ರಭೆಯ ತಟದ ಬಾಗಿಲು ಕೋಟೆಗೆ ಸಮಕಾಲೀನ ಕಾವ್ಯ ತೋರಣ ಹಚ್ಚ ಹಸುರಿನಿಂದ ಕೂಡಿದೆ. #