ಬಲ್ಮಠ ಕೈಗಾರಿಕಾ ಕೆಲಸಗಾರರ ಸಹಕಾರ ಸಂಘ ನಿಯಮಿತ

ಬಲ್ಮಠ ಕೈಗಾರಿಕಾ ಕೆಲಸಗಾರರ ಸಹಕಾರ ಸಂಘ ನಿಯಮತ- ಇದು ಮಂಗಳೂರಿನ ಬಲ್ಮಠ ನ್ಯೂರೋಡ್‍ನಲ್ಲಿ 1957 ರಲ್ಲಿ ಸ್ಥಾಪನೆಯಾದಂತ ಒಂದು ಸಹಕಾರಿ ಸಂಘ. . 1834ರಲ್ಲಿ ಭಾರತಕ್ಕೆ ಬಂದ ಬಾಸೆಲ್ ಮಿಶನರಿಗಳು ಮಂಗಳೂರಿನಲ್ಲಿ 1844ರಲ್ಲಿ ಸ್ಥಾಪಿಸಿದ ಹೊಸೈರಿ/ ನೇಯಿಗೆ ವಿಭಾಗವು 1914ರಲ್ಲಿ ನಡೆದ ಪ್ರಥಮ ಮಹಾ ಯುದ್ಧ ಸಂದರ್ಭದಲ್ಲಿ ಕಾಮನ್‍ವೆಲ್ತ್ ಪಾಲಾಯಿತು. ದೇಶೀಯ ನಾಯಕರುಗಳ ನಾಯಕತ್ವದಲ್ಲಿ ಬಾಸೆಲ್ ಮಿಶನರಿಗಳ ಸೇವೆಯ ಮುಂದುವರಿಕೆಯೋ ಎಂಬಂತೆ ಕಾರ್ಯಾರಂಭಗೊಂಡ ಒಳ ಉಡುಪು ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಯು ಪ್ರಾರಂಭಗೊಂಡು ಬಲ್ಮಠದಲ್ಲಿ ಕಾರ್ಯವೆಸಗುತ್ತಿದೆ.

1844ರಲ್ಲಿ ಬಾಸೆಲ್ ಮಿಶ್ಯನ್ ಸಂಘವು ನೇಯಿಗೆ ಕಾರ್ಖಾನೆಯೊಂದನ್ನು ಆರಂಭಿಸಿತು. 1851ರಲ್ಲಿ ಕೈಮಗ್ಗ ಕಾರ್ಖಾನೆಯೂ ಕಾರ್ಯವೂ ಆರಂಭವಾಯಿತು.. ಇದೇ ಕಾರ್ಖಾನೆಯಿಂದ ಖಾಕಿ ಬಣ್ಣ ಕಂಡು ಹಿಡಿಯಲ್ಪಟ್ಟು ಇಂದು ದೇಶದಾದ್ಯಂತ ಖಾಕಿ ಬಣ್ಣದ ಬಟ್ಟೆಯ ಜನಕ ಬಾಸೆಲ್ ಮಿಶನ್ ಎಂದಾಯಿತು. ನೇಯಿಗೆ ಎರಡು ಶಾಖೆಗಳು ಮಡಿಕೇರಿಗುಡ್ಡೆ ಮತ್ತು ಮುಲ್ಕಿಯಲ್ಲಿತ್ತು. ಮುಲ್ಕಿ ಮಿಶನ್ ಶಾಲೆಯಲ್ಲಿ ಮಗ್ಗದ ತರಬೇತಿಯನ್ನು ಕೊಡುವ ವಿಭಾಗವೂ ಇತ್ತು. ಇವಲ್ಲದೆ ಬಲ್ಮಠ, ಬೊಕ್ಕಪಟ್ನ, ಮುಲ್ಕಿ, ಉಚ್ಚಿಲ, ಪಾಂಗಾಳ ಗುಡ್ಡೆ, ಕೊರಂಕ್ರಪಾಡಿ, ಮಲ್ಪೆ, ಉಡುಪಿ ಮುಂತಾದ ಕ್ರೈಸ್ತ ಸಭೆಗಳ ಸದಸ್ಯರು ಮನೆಯಲ್ಲಿಯೇ ಮಗ್ಗಗಳನ್ನು ಹೊಂದಿ ಉದ್ಯೋಗವನ್ನು ಮಾಡುವ ಕಾರ್ಯಕ್ಕಾಗಿ ಪ್ರೋತ್ಸಾಹ ಮಾಡಲಾಗುತ್ತಿತ್ತು. 1914ರ ನಂತರ ಕೋಮನ್‍ವೆಲ್ತ್ ಪಾಲಾದ ಈ ಸಂಸ್ಥೆ ಹೊಸೈರಿ ಫ್ಯಾಕ್ಟರಿ, ಜಾಡುಕೋಣೆ ಎಂಬ ಹೆಸರಿನಲ್ಲಿ ಬಲ್ಮಠದಲ್ಲಿ ಪ್ರಚಲಿತದಲ್ಲಿದ್ದು 1968ರತನಕ ಕಾರ್ಯವೆಸಗುತ್ತಿತ್ತು. ಇಲ್ಲಿ ತಯಾರಿಸಲ್ಪಡುತ್ತಿದ್ದ ಬನಿಯನುಗಳು, ಹೊದಿಕೆ, ಸೀರೆ, ಒಳ ಉಡುಪುಗಳು, ಕಾರ್‍ಪೆಟ್ ಮುಂತಾದ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿತ್ತು.

ಸ್ವಾವಲಂಭನೆ ಮತ್ತು ದೇಶೀಯ ಕ್ರೈಸ್ತರು

ಬದಲಾಯಿಸಿ

1928 ಸತ್ಯವೃತ ಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಸ್ವಾವಲಂಭನೆ/ ವಿದ್ಯಾನಿಧಿ ವಿಚಾರದಲ್ಲಿ ಬರೆದ ಮಾತುಗಳು ಹೀಗಿವೆ: “ಸಮಾಜಿಕರು ಪ್ರಥಮತಾ ನಮ್ಮ ಸಮಾಜ ನಮ್ಮ ಸಭೆ- ನಮ್ಮ ಜನರು ಎಂಬುದನ್ನು ತಿಳಕೊಳ್ಳಬೇಕು. ನಮ್ಮ ಸಭೆ ಎಂದು ತಿಳಕೊಳ್ಳುವಂಥಾ ಒಂದು ಕ್ರೈಸ್ತ ಸಮಾಜವಾದರೂ ಕಾಣುವುದಿಲ್ಲ. ವಿದೇಶಿಯರ ಗಂಜಿಗೆ ಕೈ ನೀಡಿ ನಮ್ಮ ಸಭೆ ಎಂದು ಹಿಗ್ಗಿಕೊಳ್ಳಬಹುದಲ್ಲದೆ ಒಂದೇ ಸ್ವತಂತ್ರ ಸಭೆಯಾದರೂ ನಮ್ಮಲ್ಲಿ ಇಲ್ಲ. ಇಂಥಾ ಸ್ಥಿತಿಯು ಎಷ್ಟರ ತನಕ ಕ್ರೆ ೈಸ್ತ ಸಮಾಜದಲ್ಲಿ ಇದೆಯೋ ಅಷ್ಟರ ತನಕ ನಮ್ಮ ಸಮಾಜದ ಶಿಕ್ಷಿತ ವರ್ಗಕ್ಕೆ ಉಳಿಗಾಲವಿಲ್ಲ. ಇಂಥಾ ಸ್ಥಿತಿಯನ್ನು ಹೋಗಲಾಡಿಸಬೇಕಾದರೆ ನಮ್ಮಲ್ಲಿ ಉದ್ಯೋಗ ಕಲಾನಿಪುಣರು- ವೈದ್ಯರು ಮೊದಲಾದವರು ಹುಟ್ಟಿ ಬರಬೇಕು. ಇಂಥಾ ಸುಶಿಕ್ಷಿತರಾದ ಯುವಕರನ್ನು ಸಮಾಜದ ಮುಂದಿನ ಏಳಿಗೆಗೆ ಸರಿಯಾಗಿ ತರಬೇತು ಮಾಡಲಿಕ್ಕೆ ಬೇಕಾದ ವಿದ್ಯಾಫಂಡುಗಳನ್ನು ತೆರೆಯಬೇಕು. ದೇಶ ಪ್ರೀತಿ, ಬಂಧುಪ್ರೇಮ, ಕಾರ್ಯ ದುರಂಧರತೆಯೇ ಮೊದಲಾದ ಸದ್ಗುಣಗಳು ಟೊಳ್ಳಾಗಿ ಹೋಗಿರುವ ನಮ್ಮ ಸಮಾಜವು ಎಷ್ಟರ ತನಕ ವಿದೇಶಿ ಮಿಶ್ಯನುಗಳ ಮೇಲೆ ಕೈ ನೀಡಿ ನಿಂತುಕೊಳ್ಳುವುದೋ ಅಷ್ಟರ ತನಕ ಸಮಾಜವು ಲೌಕಿಕ ರೀತಿಯಾಗಿಯೂ ಪಾರಾಮಾರ್ಥಿಕವಾಗಿಯೂ ಏಳಿಗೆಯನ್ನು ಹೊಂದಲಾರದು”.

1934ರಲ್ಲಿ ಮಂಗಳೂರಿನ ಜಪ್ಪು ಸಭೆಯ ಸಭಾಪಾಲಕರಾಗಿದ್ದ ರೆವೆ. ಪೌಲ್ ಸೋನ್ಸ್‍ರವರು ಬಾಸೆಲ್ ಹೋಮ್ ಬೋರ್ಡಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಬಾಸೆಲ್ ಮಿಶನ್ ಅದ್ಯಕ್ಷರು ಮತ್ತು ಖಜಾಂಜಿ ಮೂಲಕ ಪತ್ರವೊಂದನ್ನು ಹೀಗೆ ಬರೆಯುತ್ತಾರೆ. “ ಬಾಸೆಲ್ ಮಿಶನರಿಗಳಿಂದ ಮಂಗಳೂರಿನಲ್ಲಿ ಸಭೆಗಳು ಸ್ಥಾಪನೆ ಇಲ್ಲಿ ಹಲವರು ನಿರ್ಗತಿಕರು, ನಿರಾಶ್ರಿತರು, ಅನಾಥರು ಇದ್ದರು. “ಇವರಿಗೆ ನೀವೇ ಊಟಕ್ಕೆ ಕೊಡಿರಿ” ಎಂಬ ಸತ್ಯವೇದದ ಮಾತಿನಂತೆ ಕೈಕಸಬು ಹಂಚಿನ ಕಾರ್ಖಾನೆ, ನೇಯಿಗೆ ಉದ್ಯಮ ಮುಂತಾದ ಘಟಕಗಳನ್ನು ನಿರ್ಮಿಸಿ ಉದ್ಯೋಗಗಳನ್ನು ಸೃಷ್ಟಿಸಿ ಬದುಕಲು ಅನುವು ಮಾಡಿಕೊಟ್ಟರು. ಮಹಾಯುದ್ದದ ನಂತರ ಮಿಶನ್ ಸಹಾಯದಿಂದ ಮುನ್ನಡೆಯುತ್ತಿದ್ದ ಶಾಲೆ, ಆನಾಥ ಶಾಲೆಗಳಿಗೆ ಬರುವ ದೇಣಿಗೆಗಳು ನಿಂತು ಹೋದವು. ಕಾರ್ಖಾನೆಗಳು ಕಾಮನ್‍ವೆಲ್ತ್ ಪಾಲಾಯಿತು, ಕಾರ್ಖಾನೆಗಳಲ್ಲಿದ್ದ ಹಲವು ವಿಭಾಗಗಳು ಮುಚ್ಚಲ್ಪಟ್ಟಿತು. ಇದರಿಂದ ಹಲವಾರು ಮಂದಿ ಕೆಲಸ ಕಳೆದುಕೊಂಡರು. 1914ರಲ್ಲಿ ಜೆಪ್ಪು ಟೈಲ್ ಫ್ಯಾಕ್ಟ್ರಿಯಲ್ಲಿದ್ದ 300ರಷ್ಟಿದ್ದ ಸಂಖ್ಯೆ 1934ರಲ್ಲಿ 125 ಆಯಿತು. ಸಿಕ್ಕ್‍ಫಂಡ್, ರೈಸ್‍ಫಂಡ್, ಪೆನ್ಶನ್‍ಫಂಡ್‍ಗಳು ನಿಂತು ಹೋಯಿತು. ಇದರಿಂದ ಹಲವಾರು ಮಂದಿ ಕೆಲಸವಿಲ್ಲದೆ ದಿನ ಕಳೆಯಬೇಕಾಗಿದೆ. ಹೇಗೆ ನಾವು ಇವರಿಗೆ ಊಟಕ್ಕೆ ಕೊಡಲಿ. ಇವರಲ್ಲಿ ನುರಿತ ಕೆಲಸದವರಿದ್ದಾರೆ ಈ ಹಿಂದೆ ಬಾಸೆಲ್ ಮಿಶನ್ ಮಾಡುತ್ತಿದ್ದ ಕಾಮನ್‍ವೆಲ್ತ್ ನಡೆಸದೇ ಇರುವ ಮಡಿಕೆ ಮಾಡುವ ಕೆಲಸವನ್ನು ನಮ್ಮವರಿಂದ ಆರಂಭಿಸಬೇಕೆಂದಿದ್ದೇವೆ. ಇದಕ್ಕಾಗಿ ತಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ.

1943ರಲ್ಲಿ ಪ್ರೊಟೆಸ್ಟಂಟ್ ಕ್ರಿಶ್ಚ್ಯನ್ ಕೋ ಅಪರೇಟಿವ್ ಸೋಸೈಟಿಯು ತನ್ನ 25ನೇ ವಾರ್ಷಿಕೋತ್ಸವ ಸಂಧರ್ಭದಲ್ಲಿ ಹೊರತಂದ ಸ್ಮರಣ ಸಂಚಿಕೆಯಲ್ಲಿ ಸಂಘ ಸ್ಥಾಪನೆಯ ಬಗ್ಗೆ ಈ ರೀತಿ ವರದಿ ಮಾಡಿದ್ದಾರೆ. “ನಮ್ಮ ಮನೋದೃಷ್ಟಿಯು 1914-1918ರಲ್ಲಿ ನಡೆದಿದ್ದ ಮಹಾಯುದ್ಧ ಕಡೆಗೆ ಸೆಳೆಯಲ್ಪಡುತ್ತದೆ. ಆ ಯುದ್ದದ ದೆಸೆಯಿಂದ ಬಾಸೆಲ್ ಮಿಶ್ಯನ್ ಜರ್ಮನ್ ಮಿಶ್ಯನರಿಗಳು ತಮ್ಮ ಅಧೀನದಲ್ಲಿದ್ದ ಇಲ್ಲಿಯ ಕಾರ್ಯಕ್ಷೇತ್ರಗಳನ್ನು ಬಿಟ್ಟು ಸ್ವದೇಶಕ್ಕೆ ತೆರಳುವ ನಿರ್ಭಂದಕ್ಕೊಳಗಾದ್ದರಿಂದ, ಅವರಿಂದ ಸ್ಥಾಪಿತವಾದ ಸಭೆಗಳು ಆ ಕಾಲದಲ್ಲಿ ಅವರಿಂದ ಹೊಂದುತಿದ್ದ ಸಹಾಯವನ್ನೂ ನಾಯಕತ್ವವನ್ನೂ ಕಳಕೊಂಡವು. ಆದ್ಯ ಮಿಶನರಿಗಳು ನಮಗೆ ಸ್ವಾಮಿ ಕ್ರಿಸ್ತನ ಸುವಾರ್ತೆಯನ್ನು ತಂದುಕೊಟ್ಟದ್ದು ಮಾತ್ರವಲ್ಲದೆ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಸಹ ನಮ್ಮ ಹಿತಚಿಂತಕರಾಗಿದ್ದು ನಮಗೆ ಬೆನ್ನಾಸರೆಯಾಗಿರುತ್ತಿದ್ದರು. ಇದರ ಪಲಿತಾಂಶ ಎಂಬಂತೆ ನಮ್ಮ ಜನರು ಆಪತ್ತು ವಿಪತ್ತಿನ ಕಾಲಗಳಲ್ಲಿ ಹಾಗೂ ಇನ್ನಿತರ ಯಾವದೊಂದು ಸಹಾಯವು ಬೇಕಿದ್ದರೂ ಕೂಡಾ ಮಿಶನರಿಗಳ ಕೈಕಾಯುವ ಚಟಕ್ಕೊಳಬೀಳುವವರಾದರು. ಆದರೆ ಯುದ್ದದಿಂದ ಪರಿಣಮಿಸಿದ ನವೀನ ಪರಿಸ್ಥಿತಿಯಲ್ಲಿ ಇವೆಲ್ಲವೂ ಮಾರ್ಪಾಟವಾಗಿ, ನಮ್ಮ ಜನರು ಸಹಾಯದ ಹೊಸ ದಾರಿಗಳನ್ನು ಕಂಡುಹಿಡಿಯುವುದೂ ಸ್ವಾವಲಂಬನೆಯನ್ನು ಕಲಿಯುವುದೂ ಅವಶ್ಯವೆನಿಸಿತು. ಈ ಸಂದಿಗ್ದ ಪರಿಸ್ಥಿತಿಯಲ್ಲಿ ನಮ್ಮಲ್ಲಿದ್ದ ಸಮಾಜ ಹಿತಚಿಂತಕರಾಗದ ವಿಚಾರಶೀಲರಲ್ಲನೇಕರು, ಆ ಕಾಲದಲ್ಲಿ ನಮ್ಮ ಸಂಸ್ಥಾನದಲ್ಲಿ ಸರಕಾರದವರಿಂದ ಸ್ಥಾಪಿಸಲ್ಪಟ್ಟಿದ್ದ ಸಹಕಾರ ಚಳವಳವು ಕೆಲಮಟ್ಟಿಗಾದರೂ ನಮ್ಮ ಜನರಿಗೆ ಸಹಾಯ ಮಾಡಲಿಕ್ಕೆ ತಕ್ಕುದಾದ ಒಂದು ಸಾದನವಾಗುವದೆಂದು ಮನಗಂಡರು. ಈ ಸಂದರ್ಭದಲ್ಲಿ ನಮ್ಮ ಪ್ರೊಟೆಸ್ಟಾಂಟ್ ಕ್ರೈಸ್ತರ ಪರಿಸ್ಥಿತಿಯನ್ನು ಕುರಿತು ಒಂದೆರಡು ಮಾತುಗಳನ್ನು ಹೇಳಬೇಕಾಗಿದೆ. ಮಂಗಳೂರಿನಲ್ಲಿರುವ ನಮ್ಮ ಸಭೆಯವರಲ್ಲಿ ಅನೇಕರು ಹಂಚಿನ, ಕಬ್ಬಿಣ, ನೇಯುವ ಮತ್ತು ಇನ್ನಿತರ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ದಿನಕೂಲಿಯವರು. ಇನ್ನು ಅನೇಕರು ಉಪದೇಶಕ, ಉಪಾಧ್ಯಾಯ ಮತ್ತು ಕಾರಕೂನ ಮೊದಲಾದ ವೃತ್ತಿನಲ್ಲಿ ಇರುವವರು. ಸಾಹುಕಾರರೂ ಜಮೀನುದಾರರೂ ಶ್ರೀಮಂತರೂ ನಮ್ಮಲ್ಲಿ ಕಡಿಮೆ. ನಿಜವಸ್ತು ಸ್ಥಿತಿಯು ಹೀಗಿರುವುದರಿಂದ ನಮ್ಮಲ್ಲಿದ್ದ ಸಾಹಸಿಗಳು ಯಾವದೊಂದು ಸ್ವತಂತ್ರ ವೃತ್ತಿಯನ್ನು ಹೊಸದಾಗಿ ಪ್ರಾರಂಭಿಸಬೇಕೆಂದಿದ್ದರೆ, ಇಲ್ಲವೆ ಉದ್ದಿಮೆ ಸ್ಥಾಪಿಸುವುದು, ಮನೆಕಟ್ಟಲು ಬಯಸುವುದಾದರೆ ಅವರಿಗೆ ದ್ರವ್ಯಾನುಕೂಲತೆಗಳು ಒದಗಿಸಿ ಕೊಡಲಿಕ್ಕೆ ನೆರೆವಾಗಲು ಮುಂದೆ ಬರುವಂತವರು ಸಿಗುವುದು ಕೇವಲ ದುಸ್ತರವು. ಆದರೆ ಧನೈಶ್ಚರ್ಯಗಳು ಇಲ್ಲದಿದ್ದಾಗ್ಯೂ ನಮ್ಮ ಸಭಿಕರನೇಕರಲ್ಲಿ ಕಾರ್ಯದಕ್ಷತೆ, ಪ್ರಾಮಾಣಿಕತನ ಎಂಬೀ ಸೊತ್ತು ಇರುತ್ತದೆ. ಈ ಲಕ್ಷಣಗಳು ಸಹಕಾರದ ದೃಷ್ಟಿಯಿಂದ ಅತ್ಯಮೂಲವಾದವುಗಳಾಗಿದ್ದು, ಸಹಕಾರ ಸಂಘಗಳ ಉನ್ನತಿಅವನತಿಗಳು ಬಹುಮಟ್ಟಿಗೆ ಅವುಗಳ ಭಾವಾಭಾವಗಳನ್ನು ಹೊಂದಿಕೊಂಡಿರುವುದರಿಂದ ಮಂಗಳೂರಿನ ನಮ್ಮ ಕ್ರೈಸ್ತ ಸಮಾಜಿಕರಿಗೆ ಒಂದು ಸಹಕಾರ ಸಂಘವನ್ನು ಸ್ಥಾಪಿಸಬೇಕೆಂಬ ಯೋಚನೆಯು ಬಹುಮಂದಿಯಲ್ಲಿ ಬೇರೂರುವದಾಯಿತು. “

ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿಯೊಂದಿಗೆ ಶಿಕ್ಷಣ ಮತ್ತು ಬಾಸೆಲ್ ಮಿಶನ್

ಬದಲಾಯಿಸಿ

1836ರಲ್ಲಿ ಬಾಸೆಲ್ ಮಿಶನ್ ಮಂಗಳೂರಿನಲ್ಲಿ ಕನ್ನಡ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರೂ ಹೆಣ್ಣು ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ. ಹೆಣ್ಣು ಮಕ್ಕಳನ್ನು ಶಿಕ್ಷಣ ವ್ಯವಸ್ಥೆಯೆಡೆಗೆ ಸೇರಿಸಲು ಮೊದಲು ಹೊಲಿಗೆ ಕೇಂದ್ರಗಳನ್ನು ತೆರೆದು ಕೈಕಸಬನ್ನು ಕಲಿಸುವ ವ್ಯವಸ್ಥೆ ಕಲ್ಪಿಸಿ ಇದಕ್ಕಾಗಿ ಅಕ್ಷರ ಜ್ಞಾನದ ಅವಶ್ಯಕತೆ ತೋರಿಬಂದು ಹೆಣ್ಣು ಮಕ್ಕಳು ಮುಂದೆ ಬಂದುದರಿಂದ 1842ರಲ್ಲಿ ಹೊಲಿಗೆ ತರಬೇತಿ ಮತ್ತು ಪ್ರಾಥಮಿಕ ಶಿಕ್ಷಣ ಒಂದೇ ಸೂರಿನಡಿ ಪ್ರಾರಂಭವಾಗಿ ಹೆಣ್ಣು ಮಕ್ಕಳು ವಿದ್ಯೆ ಕಲಿಯುವಂತಾಯಿತು. ಅನಾಥ ಹೆಣ್ಣು ಮಕ್ಕಳಿಗಾಗಿ 1856ರಲ್ಲಿ ಬೋರ್ಡಿಂಗ್ ಹೋಮ್ ಸ್ಥಾಪಿಸಲ್ಪಟ್ಟು 1863ರಲ್ಲಿ ಮುಲ್ಕಿಗೆ ಸ್ಥಳಾಂತರಗೊಂಡಿತು. ಈಗಲೂ ಬೋರ್ಡಿಂಗ್ ಹೋಮ್ ನಡೆಯುತ್ತಿದೆ. ಇಲ್ಲಿ ಹೊಲಿಗೆ, ಬೇಸಾಯ, ಕೈಕಸಬುಗಳನ್ನು ಕಲಿಸಲಾಗುತ್ತಿತ್ತು. ಉಡುಪಿ, ಮಂಗಳೂರು, ಕಾರ್ಕಳ ಹಾಗೂ ಉತ್ತರ ಕರ್ನಾಟಕದಲ್ಲಿ ಬ್ರಾಹ್ಮಣ ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸಲಾಗಿತ್ತು. ಹೆಣ್ಣು ಮಕ್ಕಳ ಶಿಕ್ಷಣ ಮುಂದುವರಿಕೆಯಿಂದ 1900ರಲ್ಲಿ ಪ್ರಾಥಮಿಕ ಶಾಲೆಯಲ್ಲಿ ಸ್ತ್ರೀ ಶಿಕ್ಷಕರು ಸೇರ್ಪಡೆಯಾದರು. 1868ರಲ್ಲಿ ಸ್ಥಾಪನೆಯಾದ ಸರಕಾರಿ ಕಾಲೇಜಿನಲ್ಲಿ 1901ರಿಂದ ಹೆಣ್ಣು ಮಕ್ಕಳು ಪದವಿ ಶಿಕ್ಷಣಕ್ಕೆ ಸೇರುವಂತಾಯಿತು. 1918ರಲ್ಲಿ ಹೆಣ್ಣು ಮಕ್ಕಳ ಕನ್ನಡ ಮೊದಲನೇ ಪುಸ್ತಕವೊಂದು ಪಠ್ಯವಾಗಿತ್ತು. ಇದರಲ್ಲಿ, ಸಂಸಾರ, ಕೈಕಸಬು, ಆರೋಗ್ಯ, ಮುಂತಾದ ವಿಭಾಗಗಳಿದ್ದವು. ಮಂಗಳೂರಿನ ಶಾಂತಿ ದೇವಾಲಯಲ್ಲಿ ‘ಶಾಂತಿ ಸಭಾ ಮಹಿಳಾಭ್ಯುದಯ ಸೇವೆ’ ಎಂಬ ಸಂಸ್ಥೆಯೊಂದು ಪ್ರಾರಂಭಗೊಂಡು ಮಹಿಳೆಯರ ಮದ್ಯೆ ಸೇವೆ ನಡೆಸುತ್ತಿತ್ತು. 1923ರಲ್ಲಿ ಪ್ರಾರಂಭವಾದ ವೈ.ಡಬ್ಲ್ಹೂ.ಸಿ.ಎ. ( ಯಂಗ್ ವುಮೆನ್ಸ್ ಕ್ರಿಶ್ಚ್ಯನ್ ಎಸೋಸಿಯೇಷನ್) ಮಹಿಳೆಯರ ಮದ್ಯೆ ಸೇವೆ ನಡೆಸುತ್ತಿತ್ತು. ತಿಂಗಳ ಒಂದು ವಾರ ಹೊಲಿಗೆ ತರಬೇತಿ ನೀಡುತ್ತಿತ್ತು. ಮತ್ತೊಂದು ವಾರ ಕಾರ್ಖಾನೆಯಲ್ಲಿ ದುಡಿಯುವ ಹೆಣ್ಣು ಮಕ್ಕಳಿಗಾಗಿ ತರಗತಿಗಳನ್ನು ನಡೆಸಲಾಗುತ್ತು. ಇವುಗಳ ಸ್ಥಾಪನೆಗಾಗಿ ಮಹಿಳಾ ಮಿಶನರಿಗಳೊಂದಿಗೆ ದೇಶೀಯ ಮಹಿಳೆಯರೂ ನಾಯಕತ್ವ ವಹಿಸಿಕೊಂಡಿರುತ್ತಾರೆ. ರಲ್ಲಿ ಶ್ರೀಮತಿ ಎ. ಶೋಸ್ಸರ್ ನಾಯಕತ್ವದಿಂದ ಬಾಸೆಲ್ ಮಿಶನ್ ಹೋಮ್ ಇಂಡಸ್ಟ್ರಿ & ಕ್ರಾಸ್ ಸ್ಟಿಚ್ ಇಂಡಸ್ಟ್ರಿ ತೆರೆಯಲಾಗಿದ್ದು ಮಹಿಳಾ ಮಿಶನರಿಗಳೇ ಇದನ್ನು ನಡೆಸುತ್ತಿದ್ದರು.

1847ರಲ್ಲಿ ಬಾಸೆಲ್ ಮಿಶನರಿಗಳಿಂದ ಬಲ್ಮಠದಲ್ಲಿ ಪ್ರಾರಂಭವಾದ ಬಾಸೆಲ್ ಇವ್ಯಾಂಜಿಲಿಕಲ್ ಮಿಶನ್ ತಿಯೊಲಾಜಿಕಲ್ ಸೆಮಿನೆರಿ ಮತ್ತು ವೆಸ್ಲಿಯನ್ ಮಿಶನ್‍ನವರು ತುಮಕೂರಿನಲ್ಲಿ ಸ್ಥಾಪಿಸಿದ ಯೂನಿಯನ್ ತಿಯೋಲಾಜಿಕಲ್ ಸೆಮಿನೆರಿಯು 1965 ಒಂದಾಗಿ ಕರ್ನಾಟಕದಲ್ಲಿರುವ ಏಕೈಕ ಕನ್ನಡ ಮಾಧ್ಯಮದ ದೈವಜ್ಞಾನ ತರಬೇತಿ ಕೆಂದ್ರವಾಗಿ ಮುಂದುವರಿಯಿತು.1969ರಲ್ಲಿ ಸೆಮಿನೆರಿಯನ್ನು ಕೇಂದ್ರವಾಗಿರಿಸಿಕೊಂಡು ಇತರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ಬಾಸೆಲ್ ಮಿಶನ್ ಪ್ರಾರಂಭಿಸಿದ ಸೇವೆಯನ್ನು ಮುಂದುವರಿಸಲೋ ಎಂಬತೆ ಕಾಸೆಸ್ ಸಂಸ್ಥೆ ಉಗಮವಾಯಿತು. 1972 ರಲ್ಲಿ ಡಾ. ಸಿ.ಡಿ. ಜತ್ತನ್ನರವರ ನಾಯಕತ್ವದಲ್ಲಿ ಕಾಸೆಸ್ ಸಂಸ್ಥೆಯ ಅಡಿದಾವರೆಯಲ್ಲಿ ಬಲ್ಮಠ ಸರ್ವೀಸ್ ಲೀಗ್ ಎಂಬ ಸಂಸ್ಥೆಯೊಂದು ಪ್ರಾರಂಭಗೊಂಡು ಇದರ ಒಂದು ವಿಭಾಗವಾಗಿ 1974ರಲ್ಲಿ ಬಲ್ಮಠ ಸ್ಟಿಚ್‍ಕ್ರಾಪ್ಟ್ ಸಂಸ್ಥೆಯು ಪ್ರಾರಂಭವಾಗಿ ಹೊಲಿಗೆ, ಎಂಬ್ರಾಯಿಡರಿ ತರಬೇತಿ ನೀಡುವ ಸಂಸ್ಥೆಯಾಗಿ ಮುಂದುವರಿದು ಪ್ರಸ್ತುತ ಕಾಸೆಸ್ ಐ.ಟಿಐ. ಹೊಲಿಗೆ ತರಬೇತಿ ಕೇಂದ್ರವಾಗಿ ಮುಂದುವರಿಯುತ್ತಿದೆ. ಕಳೆದ 44 ವರ್ಷಗಳಿಂದ ಮುನ್ನಡೆಯುತ್ತಿದ್ದು ಸಾವಿರಾರು ಹೆಣ್ಣುಮಕ್ಕಳು, ಹೊಲಿಗೆ ಶಿಕ್ಷಕಿಯರಾಗಿ, ಸ್ವಂತ ದುಡಿಮೆಯನ್ನು ಪ್ರಾರಂಭಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಸಾರಿಫಾಲ್, ಸಾರಿಗೊಂಡಿ, ಬ್ಲೌಸ್ ಮೇಕಿಂಗ್, ಎಂಬ್ರಾಯ್ಡರಿ, ಕ್ಲರ್ಜಿ ಸ್ಟೋಲ್ ತಯಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ.

ಜಿಲ್ಲೆಯಲ್ಲಿ ದೇಶೀಯ ಕ್ರೈಸ್ತರ ನಾಯಕತ್ವದಲ್ಲಿ ಸಹಾಯಕ ಸಂಘಗಳು

ಬದಲಾಯಿಸಿ

1900ರಿಂದಲೇ ಮಿಶನರಿಗಳು ಸ್ಥಾಪಿಸಿದ ಸಂಘ ಸಂಸ್ಥೆಗಳು ಮುನ್ನಡೆಯಲು ಪಣತೊಟ್ಟ ಹಲವು ದೇಶೀಯ ನಾಯಕರುಗಳಲ್ಲಿ ನಾವು ಸ್ಥಳೀಕವಾಗಿಯೇ ವಿದೇಶಿ ನೆರವಿಲ್ಲದೆ ಬದುಕಲು ಕಲಿಯಬೇಕು ನಮ್ಮಿಂಲೇ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ಸಿಗಬೇಕು ಎನ್ನುವ ಛಲ ಇತ್ತು. 1886ರಲ್ಲಿ ಕೆನರಾ ಕ್ರಿಶ್ಯನ್ ಪ್ರೊವಿಡೆಂಟ್ ಫಂಡ್ ಎಂಬ ಸಂಸ್ಥೆಯೊಂದು ಸ್ಥಾಪನೆಯಾಗಿ ಸುಮಾರು 50 ವರ್ಷಗಳವರೆಗೆ ಮುನ್ನಡೆಯುತ್ತಿತ್ತು. ಮರಣ ಸಂದರ್ಭದಲ್ಲಿ, ಅಸೌಖ್ಯದಲ್ಲಿದ್ದಾಗ ನೆರವು ನೀಡುವುದಕ್ಕಾಗಿಈ ಸಂಸ್ಥೆಯಲ್ಲಿ ವ್ಯವಸ್ಥೆಯಿತ್ತು. ತುಳುನಾಡಿನ (ದ.ಕ. ಮತ್ತು ಉಡುಪಿ ) ಸುಮಾರು 500 ಮಂದಿ ಸದಸ್ಯರಿದ್ದರು. ಕೆಲಸ ಮಾಡುವವರು ರೂಪಾಯಿ ಒಂದರಂತೆ ಶುಲ್ಕ ತೆರಬೇಕಿತ್ತು. ಮಂಗಳೂರಿನಲ್ಲಿ ಕೆನರಾ ಕ್ರೈಸ್ತ ಉಪಾದ್ಯಯರ ಕುಟುಂಬ ಸಹಾಯಕ ಸಂಘ(1915) ಕೆನರಾ ಕ್ರೈಸ್ತ ವಿದ್ಯಾನಿಧಿ ( 1928) ಬಲ್ಮಠ ಕ್ರೈಸ್ತ ಬಡವರ ಸಂಘ(1951) ಮುಂತಾದವುಗಳು ಸ್ಥಾಪೆನೆಗೊಂಡು ಕ್ರೈಸ್ತರಿಗೆ ಸಹಾಯಕವಾಗಿದ್ದವು. ಈಗ ಮುನ್ನಡೆಯುತ್ತಿರುವ ಕ್ರೈಸ್ತ ಉತ್ತರಕ್ರೀಯೆ ಸಹಾಯಕ ಸಂಘ, ಜೆಪ್ಪು (1901) ಮಂಗಳೂರು ಪ್ರೊಟೆಸ್ಟಂಟ್ ಕ್ರಿಶ್ಚ್ಯನ್ ಫ್ರೆಂಡ್ ಇನ್ ನೀಡ್ ಸೊಸೈಟಿ(1911) ಪ್ರೊಟೆಸ್ಟಂಟ್ ಕ್ರಿಶ್ಚ್ಯನ್ ಕೋ ಅಪರೇಟಿವ್ ಸೊಸೈಟಿ(1918) ಜಪ್ಪು ಕ್ರಿಶ್ಚ್ಯನ್ ಬರಿಯೆಲ್ ಎಯಿಡ್ ಸೊಸೈಟಿ(1951) ಬಲ್ಮಠ ಕ್ರೈಸ್ತ ಬಡವರ ಸಂಘ(1951) ಮುಂತಾದವುಗಳು ಈಗಲೂ ಸಭಾ ಆಡಳಿತದಿಂದ ಹೊರಗಿದ್ದುಕೊಂಡು ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. 1914ರ ಮಹಾಯುದ್ದದ ಸಂದರ್ಭದಲ್ಲಿ ಉಂಟಾದ ಸಂಕಷ್ಟಕ್ಕಿಂತ ಮೊದಲೇ ಸಭಾ ಆಡಳಿತಕ್ಕಿಂತ ಹೊರಗೆ ಇದ್ದು ಸಮಾಜದ ಏಳಿಗೆಗಾಗಿ ಹಲವಾರು ದೇಶೀಯ ನಾಯಕರು ಪಣತೊಟ್ಟಿರುವ ನಿದರ್ಶನಗಳ ಉಲ್ಲೇಖಗಳು ಮಿಶನ್ ವರದಿಗಳಲ್ಲಿ ಸಿಗುತ್ತವೆ.

ದೇಶೀಯ ಕ್ರೈಸ್ತರು ಮತ್ತು ಹೊಸೈರಿ ಕ್ಷೇತ್ರ

ಬದಲಾಯಿಸಿ

ಕ್ರಿಶ್ಚ್ಯನ್ ನಿಟ್ಟಿಂಗ್ ವಕ್ರ್ಸ್: ಮಡಿಕೇರಿ ಗುಡ್ಡೆಯಲ್ಲಿದ್ದ ಶ್ರೀ ಮಿಕಾಯೇಲ್ ಮಾಬೆನ್‍ರವರು 17ಕ್ಕೂ ಮಿಕ್ಕಿ ಮಗ್ಗಗಳನ್ನು ಸ್ಥಾಪಿಸಿ ನೇಯಿಗೆ ಕೆಲಸ ಮಾಡಿಸುತ್ತಿದ್ದರು. 1920 ರಲ್ಲಿ ಅದೇ ಪರಿಸರದಲ್ಲಿ “ಕ್ರಿಶ್ಚ್ಯನ್ ನಿಟ್ಟಿಂಗ್ ವಕ್ರ್ಸ್” ಎಂದ ಸಿದ್ಧ ಉಡುಪುಗಳ ತಯಾರಿಕಾ ಘಟಕವನ್ನು ಪ್ರಾರಂಭಿಸಿ 1942 ತನಕ ನಡೆಸುತ್ತಿದ್ದರು. 20ಕ್ಕೂ ಹೆಚ್ಚು ಮಂದಿ ನೌಕರರಿದ್ದರು. 4 ಮಂದಿ ಮಾರಾಟ ಪ್ರತಿನಿಧಿಗಳು ಉತ್ಪನ್ನಗಳನ್ನು ದಕ್ಷಿಣ ಕನ್ನಡ, ಕಾಸರಗೋಡು, ಕಣ್ಣೂರು, ಕೋಜಿಕೊಡ್ ಮುಂತಾದ ಕಡೆಗಳಿಗೆ ಮಾರಾಟ ಮಾಡುತ್ತಿದ್ದು ಜಿಲ್ಲೆಯಲ್ಲಿಯೇ 2ನೇಯ ಬನಿಯನ್ ಉತ್ಪಾದನಾ ಘಟಕವೆಂಬ ಹೆಸರು ಪಡೆದಿತ್ತು. (ನೋಡಿ ಪ್ರತ್ಯೇಕ ಲೇಖನ) ಪ್ರೊಟೆಸ್ಟಾಂಟ್ ಕ್ರಿಶ್ಚ್ಯನ್ ಕೋ ಅಪರೇಟಿವ್ ಸೊಸೈಟಿ ಸ್ಥಾಪಿಸಿದ ಕೈಗಾರಿಕಾ ಶಾಖೆ :1918 ರಲ್ಲಿ ಮಂಗಳೂರಿನ ಬಲ್ಮಠ ಮಿಶನ್ ಕಂಪೌಂಡ್‍ನಲ್ಲಿ ಪ್ರಾರಂಭಗೊಂಡ ಪ್ರೊಟೆಸ್ಟಾಂಟ್ ಕ್ರಿಶ್ಚ್ಯನ್ ಕೋ ಅಪರೇಟಿವ್ ಸೊಸೈಟಿ ಬ್ಯಾಕಿಂಗ್ ವ್ಯವಹಾರವನ್ನು ಮಾತ್ರ ನಡೆಸುತ್ತಿತ್ತು. 1939 ಸಂಘದ ಸದಸ್ಯರಿಗೆ ಮತ್ತು ಸಮಾಜ ಬಾಂದವರಿಗೆ ಕೆಲಸವನ್ನು ಕಲ್ಪಿಸಿಕೊಟು ನಿರುದ್ಯೋಗವನ್ನು ಸಮಸ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗಾರಿಕಾ ಶಾಖೆಯನ್ನು ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಿಸಿತು. ಸಂಘವು ಬರೇ ಸಾಲವನ್ನು ಕೊಡುವ ಸಂಸ್ಥೆಯಾಗಿ ಮುಂದುವರಿದರೆ ಸಾಲದು ಅದರ ಕಾರ್ಯಕ್ಷೇತ್ರವನ್ನು ವಿಸ್ತರಿಸಬೇಕೆಂಬ ಉದ್ದೇಶದಿಂದ ಪ್ರಾರಂಭವಾದ ಈ ಸಂಸ್ಥೆಯಿಂದ ಬನಿಯನುಗಳನ್ನು ತಯಾರಿಸುವ ಕಾರ್ಯಾಚರಣೆ ಆರಂಭವಾಯಿತು. ಇದಕ್ಕೆ ಪ್ರತ್ಯೇಕ ಪಾಲುದಾರರ ವ್ಯವಸ್ತೆ ಮಾಡಲಾಗಿದ್ದು ಅದಲ್ಲದೆ ಕೈಗಾರಿಕಾ ವಿಭಾಗವು ಆರ್ಥಿಕ ಸ್ಥಿತಿ ಬಲಗೊಳ್ಳುವವರೆಗೆ ಸುಮಾರು 25ರಿಂದ 30 ಕೆಲಸಗಾರರಿಗೆ ವೇತನ ನೀಡುವ ವ್ಯವಸ್ಥೆಯನ್ನು ಸಂಘವೇ ಬರಿಸಿತು. ಬಾಸೆಲ್ ಮಿಶನ್‍ನವರಿಂದ ಮಂಗಳೂರಿನಲ್ಲಿ ಪ್ರಾರಂಭಿಸಲ್ಪಟ್ಟ ನೇಯಿಗೆ ಕಾರ್ಖಾನೆಯನ್ನು 1914ರ ಮಹಾಯುದ್ದದ ನಂತರ ಕಾಮನ್‍ವೆಲ್ತ್ ಸಂಸ್ಥೆಯು ನಡೆಸುತ್ತಿತ್ತು. ಕಾಮನ್‍ವೆಲ್ತ್ ಈ ಕ್ಷೇತ್ರವನ್ನು ಕೈಗೆತ್ತಿಕೊಂಡಾಗ ಹಲವಾರು ಕೆಲಸಗಾರರು ಇಲ್ಲಿ ಕೆಲಸ ಕಳಕೊಂಡಿದ್ದರು ಇಲ್ಲವೇ ವೈಯಕ್ತಿಕ ಕಾರಣಗಳಿಂದ ಸೇವೆಯನ್ನು ಬಿಟ್ಟಿದ್ದರು. ಇವರಲ್ಲಿ ಹಲವರು ಬನಿಯನು ತಯಾರಿಸುವಲ್ಲಿ ಹಾಗೂ ಹೊಲಿಗೆಯಲ್ಲಿ ಪರಿಣಿತರಾಗಿದ್ದ ಸ್ತ್ರೀ ಪುರಷರು ಇದ್ದುದರಿಂದ ಅವರನ್ನೇ ಇಲ್ಲಿ ಕೆಲಸಕ್ಕೆ ಬಳಸಿಕೊಂಡದ್ದರಿಂದ ನೌಕರರ ಸಮಸ್ಯೆ ಬರದೆ ಅನುಕೂಲವೂ ಆಯಿತು. ಆದರೆ ಉತ್ಸಾಹದಿಂದ ಆರಂಭವಾದ ಕೈಗಾರಿಕಾ ಶಾಖೆಯು ಆರಂಭದ ಮೂರು ವರ್ಷಗಳಲ್ಲಿ ಅತ್ಯಂತ ಚಿಂತೆಗೆ ಗುರಿ ಮಾಡಿತು. ಭಾರತದಲ್ಲಿ ನಡೆಯುತ್ತಿದ್ದ ಬೀಕರ ಯುದ್ಧದ ಪರಿಣಾಮದಿಂದ ನೂಲಿನ ಕ್ರಯವು ಮಿತಿ ಮೀರಿದ್ದು ಮಾತ್ರವಲ್ಲದೆ ಖರೀದಿದಾರರು ಸೂಕ್ತ ಸಮಯಕ್ಕೆ ದೊರೆಯದೆ ಹೋದದ್ದು ಹಾಗೂ ಯಂತ್ರಗಳಿಗೆ ಅವಶ್ಯವಾದ ಸೂಜಿ ಮೊದಲಾದ ಉಪಕರಣಗಳು ಸಿಗದೆ ಇದ್ದು ಹಲವು ಸಂಕಷ್ಟಗಳಿಗೆ ಒಳಗಾಗಬೇಕಾಯಿತು. ಆರಂಭದ ಮೂರು ವರ್ಷಗಳಲ್ಲಿ ನಷ್ಟವೂ ಉಂಟಾಯಿತು. ಆದರೆ ಕೈಗಾರಿಕಾ ಕ್ಷೇತ್ರದಲ್ಲಿ ನುರಿತ ಅನುಭವವನ್ನು ಪಡೆದಿರುವುದರಿಂದ ಸ್ವಲ್ಪ ಮಟ್ಟಿನ ಪರಿಹಾರ ಕಂಡುಕೊಂಡು ಉತ್ಪಾದನೆಯನ್ನು ಮುಂದುವರಿಸುತ್ತಿತ್ತು. ಆ ಸಮಯದಲ್ಲಿ ಈ ಶಾಖೆಯಲ್ಲಿ 23 ಮಂದಿ ಸ್ತ್ರೀ ಪುರುಷ ನೌಕರರಿದ್ದರು. ಬಟ್ಟೆಗಳಿಗೆ ಬಣ್ಣಹಾಕಲು ಬೇಕಾದ ಸಿಮೆಂಟಿನಿಂದ ನಿರ್ಮಿಸಿದ ಟ್ಯಾಂಕ್‍ಗಳು ಇದ್ದವು . 1942ರಿಂದ ಸಂಘವು ಸ್ವಂತ ಸ್ಥಳಕ್ಕೆ ಸ್ಥಳಾಂತರವಾದಾಗ ಕೈಗಾರಿಕಾ ಶಾಖೆಯೂ ಇಲ್ಲಿಯೇ ಕಾರ್ಯವೆಸಗತೊಡಗಿತು.

ಕೈಗಾರಿಕಾ ವಿಭಾಗಕ್ಕೆ ಪ್ರತ್ಯೇಕ 7 ಮಂದಿಯ ಸಮಿತಿ ರಚನೆ ಮಾಡಲಾಗಿದ್ದು ಸಂಘಕ್ಕೆ ಮತ್ತು ಈ ವಿಭಾಗಕ್ಕೆ ಒಬ್ಬರೆ   ಅಧ್ಯಕ್ಷರಾಗಿದ್ದು 7 ನಿರ್ದೇಶಕರಲ್ಲಿ 3 ಮಂದಿ ನಿರ್ದೇಶಕರು ಸಂಘದಿಂದ ಮತ್ತು ಕೈಗಾರಿಕಾ ವಿಭಾಗದ ಐದಕ್ಕಿಂತ ಹೆಚ್ಚು ಪಾಲು ಬಂಡವಾಳ ಹೊಂದಿದ ಮೂವರು ಸದಸ್ಯರು ಇದರ ನಿರ್ದೇಶಕರಾಗಿದ್ದರು. ಸಂಸ್ಥೆಯನ್ನು ಮದ್ರಾಸಿನ ಹ್ಯಾಂಡ್‍ಲೂಮ್ ವೀವರ್ಸ್ ಪ್ರೊವಿನ್ಶಿಯಲ್ ಕೋ-ಒಪರೇಟಿವ್ ಸೊಸೈಟಿಗೆ ಸಂಯೋಜಿಸಿದ್ದು ಮದ್ರಾಸ್‍ನಿಂದ ನೂಲು, ಬಟ್ಟೆ ಇತರ ಸಾಮಾಗ್ರಿಗಳನ್ನು ರಿಯಾಯತಿ ದರದಲ್ಲಿ ಪಡೆದುಕೊಳ್ಳುತ್ತಿತ್ತು   1947ರಲ್ಲಿ  ಸಂಘದ ಚಟುವಟಿಕೆ ಹಾಗೂ ಕೈಗಾರಿಕಾ ಘಟಕದ ಕಾರ್ಯಚಟುವಟಿಕೆಗಳ ನಿಮಿತ್ತವಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಬಲ್ಮಠದಲ್ಲಿದ್ದ ಮಿಶನ್ ಶಾಲೆಯ ಪಕ್ಕದಲ್ಲಿದ್ದ ಕೋಣೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ಮುಂದುವರಿಸುತ್ತಿದ್ದರೂ ಈ ಸಂಸ್ಥೆ 1954ರಲ್ಲಿ ಸ್ಥಗಿತಗೊಂಡಿತು. 
 

ಸ್ಟ್ಯಾನ್ಲಿ ಹೊಸೈರಿ: ಕಂಕನಾಡಿಯಲ್ಲಿ ವಾಸವಾಗಿದ್ದ ಶ್ರೀಯುತ ಸ್ಟ್ಯಾನ್ಲಿ ಜಾಕೋಬ್ ಬಂಗೇರರವರು ತಮ್ಮ ಮನೆಯಲ್ಲಿ “ಸ್ಟ್ಯಾನ್ಲಿ ಹೊಸೈರಿ” ಎಂಬ ಹೆಸರಿನಲ್ಲಿ 1965ರಲ್ಲಿ ಒಳ ಉಡುಪುಗಳ ಉತ್ಪಾದನಾ ಘಟಕವನ್ನು ಪ್ರಾರಂಬಿಸಿದರು. ತಿರುಪುರದಿಂದ ಬಟ್ಟೆಗಳನ್ನು ಖರೀದಿಸಿ ಬನಿಯನ್, ಶಾಟ್ರ್ಸ್, ಸ್ಪೋಟ್ಸ್ ಬ್ರಾಗಳನ್ನು ತಯಾರಿಸುತ್ತಿದ್ದರು. 15 ವರ್ಷಗಳ ಕಾಲ ಉತ್ಪಾದನೆ ಮಾಡುತ್ತಿದ್ದ ಈ ಸಂಸ್ಥೆ ನೌಕರರ/ಕಚ್ಚಾಮಾಲುಗಳ ಕೊರತೆಗಳ ಸಮಸ್ಯೆಯಿಂದ ಉತ್ಪಾದನೆ ಮಾಡುವುದನ್ನು ನಿಲ್ಲಿಸಿ ತಿರುಪುರದಲ್ಲಿ ತಯಾರಿಸಿದ ಒಳುಡುಪುಗಳನ್ನು ತರಿಸಿ ಸ್ಟ್ಯಾನ್ಲಿ ಹೊಸೈರಿ ಹೆಸರಿನಲ್ಲಿ ಮಾರಾಟ ಮಾಡಲು ಪ್ರಾರಂಭವಾಯಿತು. 1985ರಲ್ಲಿ ಸ್ಥಾಪಕರು ನಿಧನರಾದೂ ಅವರ ಪತ್ನಿ ಉಳ್ಳಾಲ ಬಿ.ಇ.ಎಂ.ಶಾಲೆಯಲ್ಲಿ ಶಿಕ್ಷಕಿ/ ಮುಖ್ಯೋಪಾದ್ಯಾಯಿನಿ ಆಗಿದ್ದ ರಾಷ್ಟ್ರ ಪ್ರಶಸ್ಥಿ ವಿಜೇತೆ ಶ್ರೀಮತಿ ಲೆಟಿಶಿಯಾ ಇವಾಂಜಲಿನ್‍ರವರು ಒಂದೆರಡು ನೌರಕರರ ಮೂಲಕ ಆಮದು ಮಾಡಿಕೊಂಡ ಉತ್ಪನ್ನಗಳನ್ನು 2000 ತನಕವೂ ಮಾರಾಟ ಮಾಡುವ ವ್ಯವಸ್ಥೆ ಮಾಡುತ್ತಿದ್ದರು. ಬಲ್ಮಠ ಹೊಸೈರಿ: 1970ರಲ್ಲಿ ಕೋಮನ್‍ವೆಲ್ತ್‍ನವರು ನಡೆಸುತ್ತಿದ್ದ ಹೊಸೈರಿ ಸಂಸ್ಥೆ ಮುಚ್ಚಲ್ಟಟ್ಟು ಪ್ರಸ್ತುತ ಕುಮುದಾವತಿ ಕಟ್ಟಡವಿರುವ ಸ್ಥಳದಲ್ಲಿದ್ದ ಜಾಡುಕೋಣೆ ಎಂಬ ಹೆಸರಿನ ಕಟ್ಟಡವನ್ನೂ ಮತ್ತು ಈ ಪ್ರೆಸ್ ಇರುವ 1907ರಲ್ಲಿ ನಿರ್ಮಿಸಲ್ಪಟ್ಟ ನೆಯಿಗೆ ಕಾರ್ಖಾನೆಯ ಕಟ್ಟಡ ಸೇರಿ 3.50 ಎಕ್ರೆ ಸ್ಥಳವನ್ನು ರೆವೆ. ಸಿ.ಡಿ. ಜತ್ತನ್ನರವರ ನಾಯಕತ್ವದಲ್ಲಿ ಕಾಸೆಸ್ ಸಂಸ್ಥೆ ಪಡೆದುಕೊಂಡು ಅದೇ ಕಟ್ಟಡದಲ್ಲಿ 1978ರಿಂದ ‘ಬಲ್ಮಠ ಹೊಸೈರಿ’ ಎಂಬ ಸಂಸ್ಥೆಯೊಂದನ್ನು ಪ್ರಾರಂಭಿಸಿ ಒಳ ಉಡುಪುಗಳನ್ನೂ ಮಗ್ಗದ ಸೀರೆ, ದೋತಿಗಳನ್ನು ತಯಾರು ಮಾಡುತ್ತಿತ್ತು. ಬನಿಯನ್ ತಯಾರಿಸುವ ಮಿಶನ್‍ಗಳು, ಎರಡು ಮಗ್ಗಗಳು ಇದ್ದವು. ಇಲ್ಲಿ ತಯಾರಾಗುವ ಉತ್ಪನ್ನಗಳನ್ನು ಮಾರಾಟ ಮಾಡಲು ಬಲ್ಮಠ ಗಾರ್ಮೆಂಟ್ ಶಾಪ್ ವ್ಯವಸ್ಥೆ ಇತ್ತು.

ಬಲ್ಮಠ ಕೈಗಾರಿಕಾ ಕೆಲಸಗಾರರ ಸಹಕಾರ ಸ್ಥಾಪನೆ

ಬದಲಾಯಿಸಿ

ಪ್ರೊಟೆಸ್ಟಂಟ್ ಕ್ರಿಶ್ಚ್ಯನ್ ಸಹಕಾರ ಸಂಘವು 1939ರಲ್ಲಿ ಪ್ರಾರಂಭ ಮಾಡಿದ ಕೈಗಾರಿಕಾ ವಿಭಾಗವು 1954ರಿಂದ ಸ್ಥಗಿತಗೊಂಡಿತು. ಮಿಶನರಿಗಳ ಸೇವೆಯ ಮುಂದುವರಿಕೆಯಾದ ಸಂಸ್ಥೆಯು ಮುಚ್ಚಿದ್ದರಿಂದ ಬಲ್ಮಠದಲ್ಲಿರುವ ಹಲವು ಸಹೃದಯರು ಸೇರಿ ಹಲವು ಬಾರಿ ಚರ್ಚಿಸಿ ಯಾಕೆ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಕಾರ್ಖಾನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ನಾವೆಲ್ಲರೂ ಸೇರಿ ಒಂದು ಸಹಕಾರ ಸಂಘವನ್ನು ಸ್ಥಾಪಿಸಬಾರದೆಂಬ ನಿರ್ಧಾರಕ್ಕೆ ಬಂದರು. ಹಲವರ ಪ್ರಯತ್ನದಿಂದ ಈ ಸಂಘ ಸ್ಥಾಪನೆಯ ರೂಪುರೇಷೆಗಳನ್ನು ನಿರ್ಮಿಸಿ ಈ ಸಂಘಕ್ಕೆ “ಮಂಗಳೂರು ಕೈಗಾರಿಕ ಕೆಲಸಗಾರರ ಸಹಕಾರ ಸಂಘ’ ಎಂಬ ಹೆಸರಿನಿಂದ 6-12-1957 ಸರಕಾರದಿಂದ ನೊಂದಣಿ ಮಾಡಲಾಯಿತು. 12-1-1958 ಬೆಳಿಗ್ಗೆ 11.00 ಘಂಟೆಗೆ ಸಂಘದ ಕಾರ್ಯಚಟುವಟಿಕೆಗಳನ್ನು ಅನುಷ್ಟಾನಕ್ಕೆ ತರಲು ಬಲ್ಮಠ ಸಭೆಯ ಸದಸ್ಯರ ಸಮಾಲೋಚನ ಕೂಟವೊಂದು ಬಲ್ಮಠದ ಮಿಶನ್ ಶಾಲೆಯ ಕೊಠಡಿಯೊಂದರಲ್ಲಿ ಡಾ. ಕ್ರಿಶ್ಚ್ಯನ್ ಅರ್ನೆಸ್ಟ್‍ರವರ ನಾಯಕತ್ವದಲ್ಲಿ ಜರಗಿತು. ಈ ಕೂಟದಲ್ಲಿ ಇಮ್ಮಾನುವೆಲ್ ಸಾಮುವೇಲ್, ಎಲ್. ಸಾಲಿನ್ಸ್, ಜಿ. ಎಚ್. ಮುತ್ತು, ಜೆ. ಡಿ. ಸೋನ್ಸ್, ಐ.ಎನ್. ಗೋಜರ್, ವಿಲಿಯಂ ವಾಟ್ಸನ್, ಜಾರ್ಜ್ ವರ್ಗೀಸ್, ಸೊಲೊಮನ್ ಎಫ್ರಾಯಿಮ್, ಚಿನ್ನಪ್ಪ ಕರ್ಕಡ ಜಿ. ಎಸ್. ಆಂಡ್ರೂ, ಎಲಿಯೇಜರ್ ಪ್ರಮೋದನ್, ವೀರಮ್ಮ ಸೈಮನ್, ಹೆಬ್ಸೀಬ ಅಮ್ಮನ್ನ, ಐ.ಇ. ಪಿಲಿಪ್ಸ್, ಎಬ್ನೇಜರ್ ಅಮ್ಮನ್ನ, ಜೆ. ಬಿ. ಕರ್ಕಡ ಮುಂತಾದ 17 ಮಂದಿ ಸದಸ್ಯರಿದ್ದರು ಕೂಟದಲ್ಲಿ ಡಾ. ಕ್ರಿಶ್ಚ್ಯನ್ ಅರ್ನೆಸ್ಟ್ . ಎಲ್. ಸಾಲಿನ್ಸ್. ಜಿ. ಎಚ್. ಮುತ್ತು, ಜೆ.ಎಸ್. ಆಂಡ್ರೂಸ್, ಜೆ.ಡಿ. ಸೋನ್ಸ್ , ಐ.ಎನ್ ಗೋಜರ್ , ಇಮ್ಮಾನುವೇಲ್ ಸಾಮುವೇಲ್ ಆಡಳಿತ ಮಂಡಳಿಗೆ ಆಯ್ಕೆ ಯಾದರು.



1961ರಿಂದ ಕ್ರಮಪ್ರಕಾರವಾಗಿ ಬಲ್ಮಕೋ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆಯಾಯಿತು. ಕಛೇರಿ ಸಿಬಂಧಿ, ಕಟ್ಟಿಂಗ್ ಮತ್ತು ವಿನ್ಯಾಸಕ್ಕೆ ಕಾಮವೆಲ್ತ್‍ನಲ್ಲಿದ್ದ ಶ್ರೀ ಎಲಿಯೇಜರ್ ಪ್ರಮೋದನ್ ಮತ್ತು 4 ಮಂದಿ ಮಹಿಳಾ ಹೊಲಿಗೆಯವರನ್ನು ನೇಮಿಸಿಲಾಯಿತು. 1962ರಿಂದ ಮಂಗಳೂರು, ಬೆಂಗಳೂರು, ಮೈಸೂರು ಕಡೆಗಳಿಗೆ ಉತ್ಪನ್ನಗಳ ಸರಬರಾಜು ಪ್ರಾರಂಭವಾದದ್ದಿನಿಂದ ಮಾರಟ ಪ್ರತಿನಿಧಿಯನ್ನು ನೇಮಿಸಲಾಯತು. ಉತ್ಪನ್ನಗಳ ಹೆಚ್ಚಳ, ಹೆಚ್ಚು ಕೆಲಸಗಾರರು, ಹೆಚ್ಚು ಮೆಷಿನ್‍ಗಳ ಸೇರ್ಪಡೆಯಾಗಿ ಸ್ಥಳವಕಾಶದ ಕೊರತೆಯಾಯಿತು. ಬಾಡಿಗೆಗಿದ್ದ ಕಟ್ಟಡದ ಆವರಣದಲ್ಲಿದ್ದ ಮನೆಯೊಂದು ಕಾಲಿಯಾದದ್ದರಿಂದ ಅದನ್ನೂ 40 ರುಪಾಯಿ ಬಾಡಿಗೆಗೆ ಪಡೆದುಕೊಳ್ಳಲಾಯಿತು.


1965 ಕಾಮನ್‍ವೆಲ್ತ್ ಕಾರ್ಖಾನೆ ಮತ್ತು ತಿರುಪುರ, ಲೂದಿಯಾನದಿಂದ ಬಟ್ಟಿಗಳನ್ನು ಪಡೆದುಕೊಳ್ಳುತ್ತಿತ್ತು. ಕಾಮನ್‍ವೆಲ್ತ್ ಘಟಕ ಮುಚ್ಚುವ ತನಕ ಬ್ಲೀಚ್ ಆಗುತ್ತಿದ್ದ ಬಟ್ಟೆಗಳೇ ಇಲ್ಲಿ ಸಿಗುತ್ತಿದ್ದವು. ಅನಂತರ ಬೇರೆ ಕಡೆಗಳಿಂದ ಬಟ್ಟೆಗಳನ್ನು ತರಿಸಲಾಗುತ್ತಿದ್ದು ಸಂಘದಲ್ಲಿ ಬ್ಲೀಚಿಂಗ್ ವ್ಯವಸ್ಥೆ ಇಲ್ಲದ್ದರಿಂದ ತಿರುಪುರಕ್ಕೆ ಕಳುಹಿಸಿ ಬ್ಲೀಚ್ ಮಾಡಿಸಿ ತರಲಾಗುತ್ತಿತ್ತು.

1967 ರಿಂದ ಹಲವು ವರ್ಷಗಳ ಕಾಲ ನೆಹರೂ ಮೈದಾನದಲ್ಲಿ ಡಿಸೆಂಬರ್- ಜನವರಿಯಲ್ಲಿ 20 ದಿವಸಗಳ ಕಾಲ ನಡೆಯುತ್ತಿದ್ದ ಅಖಿಲ ಭಾರತ ಕೈಗಾರಿಕೆ ಮತ್ತು ಕೃಷಿ ಪ್ರದರ್ಶನದಲ್ಲಿ ಸ್ಟಾಲ್ ಹಾಕಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಲಾಭಾಂಶದಲ್ಲಿ ನಡೆಯುತ್ತಿದ್ದುರಿಂದ ಬಂಡವಾಳದಾರರಿಗೆ 6.1/4 ಡಿವಿಡೆಂಟ್ ನೌಕರರಿಗೆ 12% ಬೋನಸ್ ಕೊಡಲಾಗುತ್ತಿತ್ತು.

1969 ಕಾಮನ್‍ವೆಲ್ತ್ ಸಂಸ್ಥೆ ಮುಚ್ಚಿದ್ದು ಅದರಲ್ಲಿದ್ದ ಫ್ರೆಬ್ರಿಕ್ಸ್‍ಗಳನ್ನೂ, ನಿಟ್ಟಿಂಗ್ ಮೆಷಿನ್‍ಗಳನ್ನೂ ಕ್ರಯಕ್ಕೆ ಪಡೆದುಕೊಳ್ಳಲಾಯಿರು. ಅಲ್ಲಿ ಸೇವೆಯಲ್ಲಿದ್ದ ಇಬ್ಬರು ನೌಕರರು ಇಲ್ಲಿ ಸೇವೆಗೆ ಸೇರಿದರು. ಕಾಮನ್‍ವೆಲ್ತ್ ಅದೀನದಲ್ಲಿದ್ದ ಈಗ ಬಲ್ಮಠ ಪ್ರೆಸ್ ಇರುವ ಪರಿಸರದ 3.50 ಎಕ್ರೆ ಸ್ಥಳ ಮತ್ತು ಕಾರ್ಖಾನೆಯಿದ್ದ ಕಟ್ಟಡಗಳನ್ನು ಕಾಸೆಸ್ ಸಂಸ್ಥೆ ಕ್ರಯಕ್ಕೆ ಕೊಂಡುಕೊಂಡಾಗ ಸಂಘದ ಚಟುವಟಿಕೆಗಳು ಪ್ರಗತಿಯಲ್ಲಿ ಸಾಗುತ್ತಿದ್ದು ಸೂಕ್ತ ಸ್ಥಳವಕಾಶದ ಕೊರತೆ ಇದ್ದದ್ದರಿಂದ ಆ ಕಟ್ಟಡದಲ್ಲಿ ಬಲ್ಮಕೊಗೆ ಸ್ಥಳವಕಾಶಕ್ಕೆ ಪ್ರಯತ್ನಿಸಲಾಯಿತು.


1981-1984 ಕಚೇರಿಗೆ ಟೆಲಿಫೋನ್ ಅಳವಡಿಕೆ. 1982 ಬೆಳ್ಳಿ ಹಬ್ಬ ಆಚರಣೆ, ಹೆಚ್ಚು ಸೇವೆ ಸಲ್ಲಿಸಿದ ನೌಕರರಿಗೆ ಸನ್ಮಾನ ಮಾಡಲಾಗಿತ್ತು. 1983-84ರಿಂದ ವರ್ಷಕ್ಕೊಮ್ಮೆ ನಡೆಯುವ ಆಡಳಿತ ಮಂಡಳಿ ಚುನಾವಣೆಯು ಮೂರು ವರ್ಷಗಳಿಗೊಮ್ಮೆ ನಡೆಸಲು ಪ್ರಾರಂಭಿಸಲಾಯಿತು. ತಿರುಪುರದಲ್ಲಿ ಬಟ್ಟೆ ಗಿರಣಿಗಳ ಚಳವಳಿಯಿಂದ ಬಟ್ಟೆ ಬರುವುದಕ್ಕೆ ತೊಂದರೆಯುಂಟಾಗಿ ಉತ್ಪಾದನೆ ಕುಗ್ಗಿತು. ಕೆಲಸಗಾರರು ವಾರಕ್ಕೆ ಮೂರು ದಿನ ಮಾತ್ರ ಕೆಲಸ ಮಾಡಬೇಕಾಯಿತು. ದಾಸ್ತಾನು ಬಂಡವಾಳಕ್ಕಾಗಿ ಸದಸ್ಯರಿಂದ ಠೇವಣಿಗಳನ್ನು ಪಡೆದುಕೊಳ್ಳಲಾಗುತ್ತಿದ್ದು 12% ರಿಂದ 14% ಬಡ್ಡಿ ನೀಡಲಾಗುತ್ತಿತ್ತು. ಲಾಭಾಂಶವಿದ್ದ ವರ್ಷಗಳಲ್ಲಿ 1 ತಿಂಗಳ ಸಂಭಳ ಕ್ರಿಸ್ಮಸ್ ಗಿಪ್ಟ್, ಈಷ್ಟರ್ ಹಬ್ಬದ ಕೊಡುಗೆ, ರಜೆ ಸಂಬಳ, ಬೋನಸ್ ಕೊಡುವ ಪದ್ದತಿ ಇತ್ತು.


1992-1993 ಮಾರಟ ಕುಂಠಿತಗೊಂಡು ಕೆಲಸ ಕಮ್ಮಿಯಾಯಿತು. ಟೀ ಶರ್ಟ್‍ಗಳನ್ನು ತಯಾರಿಸಲಾಗುತ್ತಿತ್ತು. ಜಿಲ್ಲಾ ಪರಿಷತ್ ವತಿಯಿಂದ 17-4-1993ರಿಂದ 10 ದಿನಗಳ ಕಾಲ ನಡೆದ ಕರಾವಳಿ ಉತ್ಸವದಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. ಬಂಡವಾಳ ಕೊರತೆ ಆದಾಗ ಜಿಲ್ಲಾ ಪರಿಷತ್ ವತಿಯಿಂದ ವರ್ಕಿಂಗ್ ಕ್ಯಾಪಿಟಲ್ ಲೋನ್ ವ್ಯವಸ್ಥೆ ಇದ್ದುದರಿಂದ ಬಂಡವಾಳಕ್ಕಾಗಿ ಮುಂಗಡ ಪಡೆದುಕೊಳ್ಳಲಾಗುತ್ತಿತ್ತು.


2010-2012- ಅಮೇರಿಕದಲ್ಲಿ ನೆಲೆಸಿರುವ ರೈಟ್ ರೆವೆ. ಡಾ. ಸುದರ್ಶನ್ ದೇವದಾರ್ ನಾಯಕತ್ವದಲ್ಲಿ ಅಮೇರಿಕದ ಯುನೈಟೆಡ್ ಮೆಥೊಡಿಸ್ಟ್ ಚರ್ಚ್ ಸಭಿಕರು ನೀಡಿದ ದೇಣಿಗೆ ಹಂತ ಹಂತವಾಗಿ ಬಂದ ಆರ್ಥಿಕ ನೆರವಿನಿಂದ ಸಂಘವು ವಿವಿಧ ಅಭಿವೃದ್ದಿಯನ್ನು ಕಂಡಿತು. ಜರ್ಮನಿ ನಿರ್ಮಿತ ಮತ್ತು ತಿರುಪುರದಿಂದ ತರಿಸಲಾಯಿತು. 6 ಹೊಲಿಗೆ ಮೆಶಿನ್‍ಗಳು, ಹೊಸ ಜನರೇಟರ್, ಕಟ್ಟಡ ವಿಸ್ತರೀಕರಣ, ಶೌಚಾಲಯ ನಿರ್ಮಾಣ, ಬಟ್ಟೆ ಖರೀದಿಗೆ ಮುಂಗಡಕ್ಕಾಗಿ ಅವರ ದೇಣಿಗೆಗಳನ್ನು ಬಳಸಲಾಗಿತ್ತು. ಈ ಅಬಿವೃದ್ಧಿ ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿ ಹೆಚ್ಚು ವರ್ಷ ಸಂಘದಲ್ಲಿ ಸೇವೆ ಸಲ್ಲಿಸಿದ್ದ ನೌಕರರನ್ನು ಸನ್ಮಾನಿಸಲಾಗಿತ್ತು.


1957ರಲ್ಲಿ 27 ಪಾಲು ಬಂಡವಾಳದಾರÀರನ್ನು ಹೊಂದಿ ಸ್ಥಾಪನೆಯಾದ ಈ ಸಂಸ್ಥೆಗೆ 60 ಸಂವತ್ಸರಗಳು ತುಂಬಿವೆ.ಪ್ರಸ್ತುತ 230 ಪಾಲು ಬಂಡವಾಳದಾರರು ಇದ್ದಾರೆ. ಏಳು ಬೀಳುಗಳ ಮದ್ಯೆ 60 ವರ್ಷಗಳಲ್ಲಿ ಹಲವಾರು ಮಹಿಳೆಯರು, ಪಾಲುದಾರರು, ನಿರ್ದೇಶಕರುಗಳು, ಉಪಾಧ್ಯಕ್ಷರುಗಳು, ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ನೌಕರರು, ಖರೀದಿದಾರರು, ಮಾರಾಟ ಪ್ರತಿನಿಧಿಗಳು ಈ ಸಂಸ್ಥೆಯ ಏಳಿಗೆಗಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಂಘದಲ್ಲಿ 8 ಮಂದಿ ಸದಸ್ಯರಿರುವ ಆಡಳಿತ ಮಂಡಳಿ, ಮತ್ತು 5 ಮಂದಿ ಉದ್ಯೋಗಿಗಳಿದ್ದು ಉತ್ಪನ್ನಗಳಾದ ಬನಿಯನು, ಸ್ಲಿಪ್, ಸ್ಕರ್ಟ್, ಟೈಟ್ಸ್, ನುಸಿ ಪರದೆಗಳನ್ನು ಉತ್ಪಾದಿಸಿಕೊಂಡು ವರ್ಷಕ್ಕೆ ಸುಮಾರು 18 ಲಕ್ಷದ ವಹಿವಾಟಿನೊಂದಿಗೆ ಮುನ್ನಡೆಯುತ್ತಿದ್ದು ಸಹಕಾರ ಸಂಘದ ಅನುಮತಿಯೊಂದಿಗೆ ಬ್ಯಾಂಕ್ಯಿಂಗ್ ವ್ಯವಹಾರವನ್ನೂ ಆರಂಭಿಸಿಸಲಾಗಿದೆ.