ಬಂಜೆತನ- ಸಂಭೋಗದ ಫಲವಾಗಿ ಸಂತಾನಪ್ರಾಪ್ತಿ ಎಂದೂ ಆಗದಿರುವ ಸ್ಥಿತಿ (ಸ್ಟರಿಲಿಟಿ, ಇನ್‍ಫರ್ಟಿಲಿಟಿ). ಬಂಜೆತನ ಗಂಡಿಗೂ ಇರಬಹುದು. ಹೆಣ್ಣಿಗೂ ಇರಬಹುದು.

ಇತಿವೃತ್ತ

ಬದಲಾಯಿಸಿ
  • ಪುರುಷ ಮತ್ತು ಸ್ತ್ರೀ ಇಬ್ಬರೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಸಂಭೋಗದ ಫಲವಾಗಿ ಅವರಿಗೆ ಮಕ್ಕಳಾಗಲು ಸಾಧ್ಯ. ಗರ್ಭಧಾರಣೆ ಆಗಬೇಕಾದರೆ ಗಂಡಿನ ವೀರ್ಯದಲ್ಲಿ ಸಾಕಷ್ಟು ಸುಪುಷ್ಟ ವೀರ್ಯಾಣುಗಳಿರಬೇಕು.
  • ಇವು ಶಿಶ್ನದ ಮುಖಾಂತರ ಹೆಣ್ಣಿನ ಯೋನಿಯಲ್ಲಿ ಚೆಲ್ಲಲ್ಪಟ್ಟು ಅಲ್ಲಿ ಶೇಖರವಾಗಬೇಕು. ಹೆಣ್ಣಿನ ಗರ್ಭದ್ವಾರ, ಗರ್ಭಕೋಶ, ಡಿಂಬನಳಿಕೆಗಳಲ್ಲಿ ಅಡಚಣೆಯೇನೂ ಇರಬಾರದು. ಇಷ್ಟು ಮಾತ್ರವಲ್ಲ, ಅಂಡಾಣುವೂ ಆರೋಗ್ಯಕರವಾಗಿರಬೇಕು.
  • ಭ್ರೂಣ ಬೆಳೆಯಲು ಗರ್ಭಕೋಶದ ಒಳಪದರ ವಿಶಿಷ್ಟ ರೀತಿಯ ಮಾರ್ಪಾಡು ಹೊಂದಿ ದಪ್ಪಗಿರಬೇಕು. ಇವುಗಳಲ್ಲಿ ಯಾವುದೊಂದರ ಕೊರತೆಯಿದ್ದರೂ ಅಂಥ ಸ್ತ್ರೀ ಪುರುಷರ ಸಂಭೋಗದಿಂದ ಮಕ್ಕಳಾಗುವುದಿಲ್ಲ.

ಗಂಡಿನ ಬಂಜೆತನಕ್ಕೆ ಕಾರಣಗಳು

ಬದಲಾಯಿಸಿ
  • ಗಂಡಿನ ಬಂಜೆತನಕ್ಕೆ ಕಾರಣಗಳು ಹಲವಾರು. ವೃಷಣದ ಹಾಲೆಗಳಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳು ಎಪಿಡಿಡಿಮಸಿನಲ್ಲಿ ಶೇಖರವಾಗಿದ್ದು ಸಂಭೋಗ ಕಾಲದಲ್ಲಿ ವಾಹಕನಾಳವನ್ನು ಸೇರುವುವು.
  • ಅಲ್ಲಿಂದ ಇವು ವೀರ್ಯಕೋಶ ಮತ್ತು ಪ್ರಾಸ್ಟೇಟ್ ಗ್ರಂಥಿಗಳ ಸ್ರಾವದ ಜೊತೆಗೂಡಿ ವೀರ್ಯವಾಗಿ ಇದು ಮೂತ್ರನಾಳ ತಲಪುತ್ತದೆ. ಬಳಿಕ ಶಿಶ್ನದ ಮುಖಾಂತರ ಈ ಸ್ರಾವ ಹೊರಕ್ಕೆ ದಾಟುತ್ತದೆ.
  • ಆದ್ದರಿಂದ ಮೇಲಿನ ಯಾವುದೇ ಅವಯವಗಳಲ್ಲಿ ಏನು ತೊಂದರೆಯಾಗಿ ವೀರ್ಯಾಣುಗಳ ಉತ್ಪಾದನೆಗೆ ಮತ್ತು ವಾಹಕತೆಗೆ ತೊಂದರೆ ಉಂಟಾದರೂ ಪುರುಷನಿಗೆ ಬಂಜೆತನ ಪ್ರಾಪ್ತವಾಗುತ್ತದೆ. ವೃಷಣದ ಸೋಂಕಾದರೆ ವೀರ್ಯಾಣುಗಳ ಉತ್ಪತ್ತಿ ಕುಗ್ಗುತ್ತದೆ.
  • ಪಿಟ್ಯುಟರಿ ಮತ್ತು ತೈರಾಯಿಡ್ ಗ್ರಂಥಿಗಳ ಶೋಭೆ, ಪೋಷಕಗಳ ಕೊರತೆ, ಲೈಂಗಿಕ ಅವಯವಗಳ ಸೋಂಕು ಮುಂತಾದವು ವೀರ್ಯಾಣು ಉತ್ಪಾದನೆಯನ್ನು ತಗ್ಗಿಸಬಹುದು.
  • ಗದ್ದಗಟ್ಟು, ಸಿಫಿಲಿಸ್, ಗಾನೊರೀಯಾ ಮತ್ತು ಕ್ಷಯರೋಗಗಳಲ್ಲಿ ವೃಷಣದ ಸೋಂಕು ಉಂಟಾಗಿ ವೀರ್ಯಾಣುಗಳು ಇಳಿಮುಖವಾಗುತ್ತವೆ. ಕೆಲವು ಆಜನ್ಮ ದೋಷಗಳಲ್ಲಿ ವೃಷಣದಿಂದ ವೀರ್ಯಾಣು ಉತ್ಪಾದನೆಯೇ ಆಗುವುದಿಲ್ಲ.
  • ವೀರ್ಯವನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ಪರೀಕ್ಷಿಸಿ ವೀರ್ಯಾಣುಗಳ ಸಂಖ್ಯೆ ಹಾಗೂ ಚಲನೆಯನ್ನು ಗುರುತಿಸುವುದು ಸಾಧ್ಯ. ಗರ್ಭಧಾರಣೆ ಆಗಬೇಕಾದರೆ ಒಂದು ಘನ ಸೆಂಟಿಮೀಟರಿನಲ್ಲಿ 50-100 ದಶಲಕ್ಷ ವೀರ್ಯಾಣುಗಳಾದರೂ ಇರಬೇಕು.
  • ವೀರ್ಯಾಣುವಿನ ಮಿಲನ ಸಾಮರ್ಥ್ಯದ ದ್ಯೋತಕವೇ ಚಲನೆ. ಒಟ್ಟು ವೀರ್ಯಾಣುಗಳಲ್ಲಿ ಚೆನ್ನಾಗಿ ಚಲಿಸುವವು 80% ಇದ್ದರೆ ಅಂಡಾಣು ವಿನೊಡನೆ ವೀರ್ಯಾಣು ಮಿಲನವಾಗಿ ಗರ್ಭಧಾರಣೆಯಾಗಲು ಸಹಕಾರಿ.
  • ಚಲನೆ ಕಡಿಮೆ ಇರುವ ಮತ್ತು ಅಪಕ್ವ ವೀರ್ಯಾಣುಗಳೂ ಅಸಹಜ ವೀರ್ಯಾಣುಗಳೂ ಇದ್ದರೆ ಹಾಗೂ ವೀರ್ಯಾಣು ಸಂಖ್ಯೆ 50 ದಶಲಕ್ಷಕ್ಕಿಂತ ಕಡಿಮೆಯಿದ್ದರೆ ಬಂಜೆತನ ಉಂಟಾಗುತ್ತದೆ. ಸೋಂಕಿನಿಂದ ಉಂಟಾದ ಉರಿಯೂತ, ಅಪಘಾತಗಳು, ವಾಹಕ ನಾಳದಲ್ಲಿ ಅಡಚಣೆ ಮಾಡಬಹುದು. * ಹೀಗಾದಾಗಲೂ ವೀರ್ಯಾಣುವಿಗೆ ತಡೆ ಉಂಟಾಗುವುದರಿಂದ ಬಂಜೆತನ ಸಂಭವಿಸುತ್ತದೆ. ಒಂದು ವೇಳೆ ಗಂಡು ಆರೋಗ್ಯವಂತ ವೀರ್ಯಾಣು ಗಳನ್ನು ಉತ್ಪಾದನೆ ಮಾಡಿದರೂ, ಶಿಶ್ನದ ನಿಮಿರಿಕೆಯ ತೊಂದರೆಯಿದ್ದರೆ ಅವು ಹೆಣ್ಣಿನ ಯೋನಿಯನ್ನು ಸೇರಲಾರವು.
  • ಹಾರ್ಮೋನುಗಳ ಕೊರತೆ ಹಾಗೂ ಮಿದುಳಿನ ಕಾಯಿಲೆಗಳಾದಾಗ ಶಿಶ್ನದ ನಿಮಿರುವಿಕೆಯೇ ಇರುವುದಿಲ್ಲ. ಪುಂಸತ್ವ ಕಡಿಮೆ ಇರುವವರಿಗೆ ಶಿಶ್ನ ನಿಮಿರಿದರೂ ಅದನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
  • ವಾಸ್ತವವಾಗಿ ಇದು ನಪುಂಸಕತ್ವ. ನಿಜವಾಗಿ ಈ ವ್ಯಕ್ತಿ ಬಂಜೆ (ಸ್ಪರೈಲ್) ಅಲ್ಲ.ಗಂಡಿನಲ್ಲಿ ಬಂಜೆತನಕ್ಕೆ ಕಾರಣ ಅರಿತರೆ ಚಿಕಿತ್ಸೆಯೂ ಸುಲಭ. ಹಾರ್ಮೋನು ಹಾಗೂ ಪೋಷಕಗಳ ಕೊರತೆ ಇದ್ದರೆ ಅದನ್ನು ಸರಿಪಡಿಸಬೇಕು.
  • ಸಿಫಿಲಿಸ್, ಗಾನೋರೀಯಾ ಮುಂತಾದ ಮೇಹರೋಗಗಳ ಚಿಹ್ನೆ ಕಂಡು ಬಂದೊಡನೆ ಅದಕ್ಕೆ ಯುಕ್ತ ಚುಚ್ಚುಮದ್ದು ತೆಗೆದುಕೊಳ್ಳಬೇಕು. ವಾಹಕ ನಾಳದ ಅಡಚಣೆಯನ್ನು ಶಸ್ತ್ರಕ್ರಿಯೆಯಿಂದ ನಿವಾರಿಸಲು ಸಾಧ್ಯ.
  • ನಿಮಿರಿಕೆಯ ತೊಂದರೆ ಇರುವವರು ಯೋಗ್ಯ ವ್ಯಾಯಾಮಗಳನ್ನು ಮಾಡಿ ತಮ್ಮ ದೇಹ ತ್ರಾಣವನ್ನು ವೃದ್ಧಿಪಡಿಸಿಕೊಳ್ಳಬೇಕು. ವೃಷಣ ವೀರ್ಯಾಣುಗಳನ್ನೇ ಉತ್ಪತ್ತಿ ಮಾಡದಿದ್ದರೆ ಅದಕ್ಕೆ ಯಾವ ಚಿಕಿತ್ಸೆಯೂ ಇಲ್ಲ. ಅಂಥ ದಂಪತಿ ಅನ್ಯವೀರ್ಯದಾನದ ಮೊರೆಹೊಗಬೇಕಾದೀತು.

ಹೆಣ್ಣಿನ ಬಂಜೆತನಕ್ಕೆ ಕಾರಣಗಳು

ಬದಲಾಯಿಸಿ
  • ಹೆಣ್ಣಿನ ಬಂಜೆತನಕ್ಕೂ ಹಲವಾರು ಕಾರಣಗಳಿವೆ. ಸ್ತ್ರೀಯಲ್ಲಿ ಗರ್ಭಧಾರಣೆಯಾಗಬೇಕಾದರೆ ಅಂಡಾಣು ಆರೋಗ್ಯವಂತರಾಗಬೇಕು. ಗರ್ಭಕೋಶ ಅಥವಾ ಡಿಂಬನಳಿಕೆಗಳಲ್ಲಿ ಎಲ್ಲೂ ಅಡಚಣೆ ಇರಬಾರದು ಮತ್ತು ಭ್ರೂಣದ ನೆಲಸುವಿಕೆಗಾಗಿ ಗರ್ಭಕೋಶದ ಒಳಪದರ ಚೆನ್ನಾಗಿ ಬೆಳವಣಿಗೆ ಯಾಗಬೇಕು.
  • ಮೇಲಿನ ಯಾವುದೊಂದರ ದೋಷವಿದ್ದರೂ ಅಂಥ ಸ್ತ್ರೀಗೆ ಬಂಜೆತನ ಉಂಟಾಗುತ್ತದೆ. ತಿಂಗಳಿಗೊಂದರಂತೆ ಅಂಡಾಣು ಪಕ್ವವಾಗಿ ಅಂಡಾಶಯ ದಿಂದ ಹೊರಬರುತ್ತದೆ. ಡಿಂಬನಳಿಕೆಯ ಚಾಚು ಬೆರಳುಗಳಲ್ಲಿರುವ ಲೋಮಗಳು ಅಂಡಾಣುವನ್ನು ಆಕರ್ಷಿಸಿ ನಾಳದೊಳಗೆ ಎಳೆದುಕೊಳ್ಳುತ್ತದೆ.
  • ಯೋನಿಯ ಮುಖಾಂತರ ಗರ್ಭಕೋಶವನ್ನು ಹಾದು ಡಿಂಬನಳಿಕೆಗೆ ವೀರ್ಯಾಣು ಬಂದರೆ ಅಂಡಾಣು ವೀರ್ಯಾಣುಗಳು ಪರಸ್ಪರ ಮಿಲಾಯಿಸಿ ಒಂದಾಗುತ್ತವೆ. ಇದೇ ಯುಗ್ಮ.
  • ಹೀಗೆ ಫಲಿತ ಡಿಂಬ ಅಥವಾ ಯುಗ್ಮ ಅನಂತರ ಗರ್ಭಕೋಶಕ್ಕೆ ಚಲಿಸಿ ಅಲ್ಲಿ ನೆಲೆಗೊಂಡು ಭ್ರೂಣವಾಗಿ ಮಗುವಾಗುತ್ತದೆ. ಹಾರ್ಮೋನಿನ ದೋಷವಿರುವ ಸ್ತ್ರೀಯರಲ್ಲಿ ಅಂಡಾಣು ಪಕ್ವವಾಗಿ ಹೊರಬರುವುದೇ ಇಲ್ಲ. ಅಂಡಾಣುವೇ ಇಲ್ಲದಿದ್ದ ಮೇಲೆ ಮಗುವಾಗುವುದೂ ಸಾಧ್ಯವಿಲ್ಲ.
  • ಜನನೇಂದ್ರೀಯಗಳ ಸೋಂಕಿದ್ದರೆ ವೀರ್ಯಾಣು ಮುಂದೆ ಚಲಿಸಲು ಅವಕಾಶವಿರುವುದಿಲ್ಲ. ಯೋನಿ ಸೋಂಕಿನಲ್ಲಿ ಸಂಭೋಗವೇ ಕಷ್ಟವಾಗುತ್ತದೆ. ಗರ್ಭದ್ವಾರದ ಸೋಂಕಾದರೆ ರಂಧ್ರ ಮುಚ್ಚಿಕೊಳ್ಳುವುದು.
  • ಅಂಜಿಕೆಯ ಸ್ವಭಾವದ ಹೆಂಗಸರಿಗೆ ಯೋನಿ ಸ್ನಾಯುಗಳು ವಿಪರೀತ ಸಂಕೋಚಿಸಿಕೊಳ್ಳುವುದರಿಂದ ಸಂಭೋಗ ಸಫಲವಾಗದೆ ಬಂಜೆತನ ಉಂಟಾಗುತ್ತದೆ. ಯೋನಿ ಹಾಗೂ ಗರ್ಭಕೋಶಗಳ ಆಜನ್ಮ ದೋಷಗಳಲ್ಲಿ ಯೋನಿ ಅಥವಾ ಗರ್ಭಕೋಶ ಪೂರ್ಣ ಬೆಳೆವಣಿಗೆಗೊಂಡಿರುವುದಿಲ್ಲ.
  • ಅನೇಕ ಬಾರಿ ಯೋನಿ ಅಥವಾ ಗರ್ಭಕೋಶದ ಮಧ್ಯೆ ಸ್ನಾಯುಗೋಡೆಗಳು ಉಳಿದು ಬಿಟ್ಟಿರುತ್ತವೆ. ಇವೂ ಬಂಜೆತನಕ್ಕೆ ಮೂಲ. ಗರ್ಭಕೋಶದಲ್ಲಿ ಗಡ್ಡೆಯಿದ್ದರೆ ಭ್ರೂಣ ನೆಲೆಗೊಳ್ಳಲು ಜಾಗವೇ ಇರುವುದಿಲ್ಲವಾದುದರಿಂದ ಬಂಜೆತನ ಸಹಜ.
  • ಡಿಂಬನಳಿಕೆಯ ಸೋಂಕು ಇರುವಾಗ ನಾಳದಲ್ಲಿ ಅಡಚಣೆ ಉಂಟಾಗುತ್ತದೆ. ತತ್ವರಿಣಾಮವಾಗಿ ವೀರ್ಯಾಣು ಅಥವಾ ಅಂಡಾಣು ಚಲನೆಗೆ ಅವಕಾಶವಿಲ್ಲ, ಕ್ಷಯ, ಸಿಫಿಲಿಸ್, ಗಾನೊರೀಯಾ, ಸ್ಟ್ರೆಪ್ಟೊಕಾಕಸ್ ಮತ್ತು ಸ್ಟೆಫಲೋಕಾಕಸ್ ಕ್ರಿಮಿಗಳ ಸೋಂಕು ಇಲ್ಲಿ ಪ್ರಮುಖವಾದವು.
  • ಬಂಜೆಯಲ್ಲಿ ಪ್ರತಿ ತಿಂಗಳೂ ಅಂಡಾಣು ಪಕ್ವವಾಗುವುದೋ ಇಲ್ಲವೋ ಎಂಬುದನ್ನು ತಿಳಿಯಲು ಉಷ್ಣತಾ ಮಾಪಕ ಪಟ್ಟಿಯೊಂದನ್ನು ಇಟ್ಟು ಪರೀಕ್ಷಿಸಬಹುದು. ಮುಟ್ಟಾದ ಮೊದಲ ಹದಿನಾಲ್ಕು ದಿವಸಗಳು ಮುಂಜಾನೆ ಎಚ್ಚರಾದ ಕೂಡಲೆ ಸ್ತ್ರೀಯ ದೇಹದ ಉಷ್ಣತೆ 97(-98(ಈ ಇರುತ್ತದೆ.
  • ಅಂಡಾಣು ಪಕ್ವಗೊಂಡು ಹೊರಬೀಳುವ ಸಮಯದಲ್ಲಿ ದೇಹದ ಉಷ್ಣತೆ 98(-99(ಈ ವರೆಗೆ ಏರುತ್ತದೆ. ಒಂದು ವೇಳೆ ಇಡೀ ತಿಂಗಳು ದೇಹದ ಉಷ್ಣತೆಯಲ್ಲಿ ಈ ರೀತಿಯ ಏರುವಿಕೆ ಕಾಣದೆ ಹೋದರೆ ಆ ತಿಂಗಳು ಅಂಡಾಣು ಪಕ್ವವಾಗಿ ಹೊರಬಂದಿಲ್ಲ ಎಂದು ಅರ್ಥ.
  • ಅಂಡಾಣು ಪಕ್ವವಾಗಿದೆ ಎಂದು ತಿಳಿದರೆ ಆ ಬಳಿಕ ಒಂದೆರಡು ದಿವಸಗಳಲ್ಲಿ ದಂಪತಿ ಸಂಭೋಗಿಸಿದರೆ ಮಗುವಾಗುವ ಸಾಧ್ಯತೆ ಉಂಟು.

ಡಿ ಅಂಡ್ ಸಿ ಶಸ್ತ್ರಚಿಕಿತ್ಸೆಯೂ ಅನೇಕ ಬಂಜೆಯರಿಗೆ ಸಹಾಯ ಮಾಡುತ್ತದೆ.

  • ಗರ್ಭದ್ವಾರವನ್ನು ಹಿಗ್ಗಿಸಿ ಗರ್ಭಕೋಶವನ್ನು ಕೆರೆಯುವುದೇ ಇದರ ಉದ್ದೇಶ. ಸಾಧಾರಣವಾಗಿ ಹೆಣ್ಣು ಮುಟ್ಟಾದ ಮೂರನೆಯ ವಾರ ಈ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಗರ್ಭಕೋಶದ ಒಳಪದರವನ್ನು ಕೆರೆದು ಸೂಕ್ಷ್ಮದರ್ಶಕದ ಕೆಳಗೆ ಪರೀಕ್ಷಿಸಿದಾಗ ಪ್ರೊಜೆಸ್ಟಿರಾನ್ ಹಾರ್ಮೋನ್ ಸ್ರಾವವಾಗಿದೆಯೇ ಇಲ್ಲವೇ ಎಂಬುದು ತಿಳಿಯುತ್ತದೆ.
  • ಪ್ರೊಜೆಸ್ಟಿರಾನ್ ಸ್ರಾವ ಸಾಲದಿದ್ದರೆ ಗರ್ಭಕೋಶ ಗರ್ಭ ತಾಳಲಾರದು. ಯೋನಿ, ಗರ್ಭಕೋಶ ಡಿಂಬನಳಿಕೆಗಳ ಸೋಂಕನ್ನು ಪ್ರತಿಜೈವಿಕಗಳ ನೆರವಿನಿಂದ ಪೂರ್ಣ ಹತೋಟಿಗೆ ತಂದುಕೊಳ್ಳಬಹುದು.
  • ಸೋಂಕಿನಿಂದ ಡಿಂಬನಳಿಕೆ ಮುಚ್ಚಿಕೊಂಡಿದ್ದರೆ ಶಸ್ತ್ರಕ್ರಿಯೆಯಿಂದ ಆ ಅಡಚಣೆಯನ್ನು ನಿವಾರಿಸಬೇಕು. ಡಿಂಬನಳಿಕೆ ಮುಚ್ಚಿಕೊಂಡಿದೆಯೇ ಇಲ್ಲವೇ ಎಂಬುದನ್ನು ಅರಿಯಲು ಎರಡು ವಿಧಾನಗಳಿವೆ: ಎಕ್ಸ್‍ಕಿರಣ ಪರೀಕ್ಷಣೆ ಮತ್ತು ನಳಿಕೆ ಪರೀಕ್ಷಣೆ (ಟ್ಯೂಬ್ ಟೆಸ್ಟಿಂಗ್).
  • ಎಕ್ಸ್‍ಕಿರಣಕ್ಕೆ ಪಾರದರ್ಶಕವಲ್ಲದ ಡಯಡೋನ್ ಎಂಬ ದ್ರವವನ್ನು ಗರ್ಭದ್ವಾರದ ಮುಖಾಂತರ ಗರ್ಭಕೋಶದೊಳಗೆ ತೂರಿಸಿ ಎಕ್ಸ್‍ಕಿರಣ ಚಿತ್ರ ತೆಗೆಯಬೇಕು. ಇದರಿಂದ ಗರ್ಭಕೋಶ ಹಾಗೂ ಡಿಂಬನಳಿಕೆಗಳ ಚಿತ್ರ ಕಾಣಸಿಗುತ್ತದೆ.
  • ಡಿಂಬನಳಿಕೆಯಲ್ಲಿ ಅಡಚಣೆಯಿದ್ದರೆ ದ್ರವ ಮುಂದೆ ಹೋಗದೆ ಅಲ್ಲೇ ನಿಲ್ಲುತ್ತದೆ. ನಳಿಕೆ ಪರೀಕ್ಷಣೆಯಲ್ಲಿ ಗರ್ಭದ್ವಾರದ ಮುಖಾಂತರ ವಾಯು ತೂರಿಸಿ ಅದು ಎರಡೂ ಡಿಂಬನಳಿಕೆಗಳ ಮೂಲಕ ಹೊರಗೆ ಬರುವುದೋ ಇಲ್ಲವೋ ಎಂಬುದನ್ನು ಗಮನಿಸುತ್ತಾರೆ.
  • ಎಷ್ಟೋ ಸಲ ಈ ಪರೀಕ್ಷೆ ಮಾಡುವಾಗಿನ ವಾಯು ಒತ್ತಡದಿಂದಾಗಿಯೇ ಮುಚ್ಚಿಕೊಂಡಿರುವ ನಳಿಕೆ ತೆರೆದುಕೊಳ್ಳುವುದುಂಟು. ಗಂಡಿನಲ್ಲಿ ಶಿಶ್ನ ನಿಮಿರಿಕೆಯ ತೊಂದರೆಯಿದ್ದರೆ ಕೃತಕ ವೀರ್ಯಾದಾನ ಅಗತ್ಯವಾಗುತ್ತದೆ.
  • ಗಂಡಿನ ಶಿಶ್ನ ನಿಮಿರದೆ ಹೋದಾಗ, ಪುಂಸತ್ತ್ವ ಕಡಿಮೆ ಇದ್ದಾಗ ಅಥವಾ ಬೇಗ ವೀರ್ಯಾಪತನವಾದರೆ ಆತ ವೀರ್ಯಾಣುಗಳನ್ನು ಹೆಣ್ಣಿನ ಯೋನಿಯಲ್ಲಿಡಲು ಅಸಮರ್ಥನಾಗುತ್ತಾನೆ.
  • ಆಗ ಆತನ ವೀರ್ಯವನ್ನು ಸಂಗ್ರಹಿಸಿ ಸಿರಿಂಜಿನ ಮೂಲಕ ಆತನ ಪತ್ನಿಯ ಯೋನಿಯೊಳಗೆ ಹಾಕುವಿಕೆ ಕೃತಕ ವೀರ್ಯದಾನ. ಹೆಂಡತಿಯ ಅಂಡಾಣು ಹೊರಬರುವ ವೇಳೆಯನ್ನು ತಿಳಿದುಕೊಂಡು ಇಂಥ ವೀರ್ಯದಾನ ಮಾಡಬೇಕು.
  • ಒಂದು ವೇಳೆ ಗಂಡನ ವೀರ್ಯದಲ್ಲಿ ವೀರ್ಯಾಣುಗಳು ಇಲ್ಲದಿದ್ದರೆ, ಪರಪುರುಷನ ವೀರ್ಯ ಸಂಗ್ರಹಿಸಿ ಅದನ್ನು ಹೆಣ್ಣಿನ ಯೋನಿಯೊಳಗೆ ಹಾಕುವುದು ಅಗತ್ಯ. ಆದರೆ ಇಂಥ ಸನ್ನಿವೇಶಗಳು ಹಲವಾರು ಮಾನವೀಯ ಹಾಗೂ ನೈತಿಕ ಸಮಸ್ಯೆಗಳಿಗೆ ಕಾರಣವಾಗುತ್ತವೆ.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಬಂಜೆತನ&oldid=847475" ಇಂದ ಪಡೆಯಲ್ಪಟ್ಟಿದೆ