ಬಂಗಾರಪೇಟೆ
ಬಂಗಾರಪೇಟೆ ಕರ್ನಾಟಕ ರಾಜ್ಯದ, ಕೋಲಾರ ಜಿಲ್ಲೆಯ ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ. ಇದು ಜಿಲ್ಲೆಯ ದಕ್ಷಿಣ ಭಾಗದಲ್ಲಿ, ಕೋಲಾರ ಉಪವಿಭಾಗದಲ್ಲಿ ಇದೆ. ಉತ್ತರಕ್ಕೆ ಕೋಲಾರ ಮುಳಬಾಗಿಲು ತಾಲ್ಲೂಕುಗಳು. ಪಶ್ಚಿಮಕ್ಕೆ ಮಾಲೂರು ತಾಲ್ಲೂಕು, ದಕ್ಷಿಣಕ್ಕೆ ತಮಿಳುನಾಡು ರಾಜ್ಯ, ಪೂರ್ವಕ್ಕೆ ಆಂಧ್ರಪ್ರದೇಶ ರಾಜ್ಯ ಇವೆ. ರಾಬರ್ಟ್‍ಸನ್‍ಪೇಟೆ, ಬಂಗಾರಪೇಟೆ, ಕ್ಯಾಸಂಬಳ್ಳಿ, ಬೇತಮಂಗಲ, ಕಾಮಸಂದ್ರ, ಬೂದಿಕೋಟೆ ಇವು ಈ ತಾಲ್ಲೂಕಿನ ಹೋಬಳಿಗಳು. ಇದರಲ್ಲಿ ಎರಡು ಪಟ್ಟಣಗಳಿವೆ. ಗ್ರಾಮಗಳ ಸಂಖ್ಯೆ 389. ತಾಲ್ಲೂಕಿನ ವಿಸ್ತೀರ್ಣ 868 ಚ. ಕಿಮೀ. ಜನಸಂಖ್ಯೆ 4,21,058 (2001).
ಬಂಗಾರಪೇಟೆ
ಬಂಗಾರಪೇಟೆ | |
---|---|
city | |
Population (2001) | |
• Total | ೩೮,೬೮೪ |
ಇದರ ಹಿಂದಿನ ಹೆಸರು ಮರಮೂಟ್ಲು ಎಂದಾಗಿದ್ದು ನಂತರ ಬೌರಿಂಗ್‌ಪೇಟೆ ಎಂದು ಬದಲಾಯಿಸಲಾಯಿತು. ಇದು ಆಂಧ್ರ ಪ್ರದೇಶ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಗಡಿಯನ್ನು ಹೊಂದಿದೆ.
ಭೌಗೋಳಿಕ ಮಾಹಿತಿ
ಬದಲಾಯಿಸಿತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಹಲವು ಸಣ್ಣ ಗುಡ್ಡಗಳಿವೆ. ಇಲ್ಲಿಯ ಮುಖ್ಯ ನದಿ ಪಾಲಾರ್. ಇದು ದಕ್ಷಿಣ ಮತ್ತು ಆಗ್ನೇಯ ದಿಕ್ಕುಗಳಿಗೆ ಹರಿದು ಬೇತಮಂಗಲ ಮತ್ತು ರಾಮಸಾಗರ ಕೆರೆಗಳಿಗೆ ನೀರು ಒದಗಿಸುತ್ತದೆ. ಇದು ಗುಂಡಲಪಲ್ಲಿಯ ಬಳಿಯಲ್ಲಿ ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯನ್ನು ಪ್ರವೇಶಿಸುತ್ತದೆ. ವಕ್ಕಲಗೇರಿ ಬೆಟ್ಟದ ನೈಋತ್ಯಕ್ಕೆ ಒಂದು ತೊರೆ ಹುಟ್ಟುತ್ತದೆ. ಮಾಲೂರು ತಾಲ್ಲೂಕಿನ ಟೇಕಲ್ ಬೆಟ್ಟದಲ್ಲಿ ಇನ್ನೊಂದು ಉಗಮಿಸುತ್ತದೆ. ಇವೆರಡೂ ಬೂದಿಕೋಟೆಯ ಬಳಿ ಕೂಡುತ್ತವೆ. ಒಂದಾದ ನದಿಗೆ ಮಾರ್ಕಂಡೇಯ ಎಂದು ಹೆಸರು. ಇದು ತಾಲ್ಲೂಕಿನ ದಕ್ಷಿಣದಲ್ಲಿ ಪ್ರವಹಿಸುತ್ತದೆ. ವಕ್ಕಲಗೇರಿ ಬೆಟ್ಟದಲ್ಲಿ ಹುಟ್ಟುವ ವೃಷಭಾವತಿ ನದಿ ದಕ್ಷಿಣ ದಿಕ್ಕಿಗೆ ಹರಿದು ಕೊಪ್ಪ ದೊಡ್ಡ ಕೆರೆಗೆ ನೀರನ್ನು ಒದಗಿಸುತ್ತದೆ. ಇದು ಕಡನಟ್ಟದ ಬಳಿ ತಮಿಳುನಾಡನ್ನು ಪ್ರವೇಶಿಸುತ್ತದೆ. ತಾಲ್ಲೂಕಿನಲ್ಲಿ ವರ್ಷಕ್ಕೆ ಸರಾಸರಿ 689 ಮಿಮೀ. ಮಳೆಯಾಗುತ್ತದೆ.
ತಾಲ್ಲೂಕಿನ ಮಣ್ಣು ಕೆಂಪುಜೇಡಿ, ದಪ್ಪ ಮರಳು ಮತ್ತು ನುರುಜುನಿಂದ ಕೂಡಿದ್ದು. ಒಟ್ಟು 86,224 ಹೆಕ್ಟೇರ್ ನೆಲದಲ್ಲಿ 2,711 ಹೆಕ್ಟೇರ್ ಅರಣ್ಯ, 18,494 ಹೆಕ್ಟೇರ್ ಹುಲ್ಲುಗಾವಲು ಸಾಗುವಳಿಗೆ ಒಳಪಟ್ಟ ನೆಲ 31,245 ಹೆಕ್ಟೇರ್. ಪಾಲಾರ್ ನದಿಯಿಂದ ಪೋಷಿತವಾಗುವ ಬೇತಮಂಗಲ ಮತ್ತು ರಾಮಸಾಗರ ಕೆರೆಗಳೂ ವೃಷಭಾವತಿಯಿಂದ ತುಂಬುವ ಕಾಮಸಂದ್ರ ಕೆರೆಯೂ ಹಲವಾರು ಸಣ್ಣ ಕೆರೆಗಳೂ ನೀರಾವರಿಗೆ ಉಪಯುಕ್ತವಾಗಿವೆ. ಬಾವಿಗಳೂ ಬೇಸಾಯಕ್ಕೆ ನೀರೊದಗಿಸುತ್ತವೆ. ತಾಲ್ಲೂಕಿನ ಬೆಳೆಗಳು ರಾಗಿ, ಬತ್ತ, ನೆಲಗಡಲೆ, ಮೆಣಸಿನಕಾಯಿ, ಈರುಳ್ಳಿ ಮತ್ತು ಬೇಳೆಕಾಳುಗಳು. ಮಾವು, ದ್ರಾಕ್ಷಿ, ತರಕಾರಿಗಳು ಬೆಳೆಯುತ್ತವೆ. ತಾಲ್ಲೂಕಿನಲ್ಲಿ ಹಲಗೆ, ಬಳಪ, ಸಿಮೆಂಟ್ ಕೊಳವೆ, ಸಾಮೂನು, ಹುಣಿಸೆ ಬೀಜದ ಪುಡಿ, ಕೈಮಗ್ಗದ ಬಟ್ಟೆ ತಯಾರಾಗುತ್ತದೆ. ಬೆಂಗಳೂರು-ಮದರಾಸ್ ಬ್ರಾಡ್‍ಗೇಜ್ ರೈಲುಮಾರ್ಗ ಈ ತಾಲ್ಲೂಕಿನ ಮೂಲಕ ಹಾದುಹೋಗುತ್ತದೆ. ತಾಲ್ಲೂಕಿನಲ್ಲಿ ಒಳ್ಳೆಯ ರಸ್ತೆಗಳಿವೆ.
ಐತಿಹಾಸಿಕ ಮತ್ತು ಪುರಾತನ ಸ್ಥಳಗಳು
ಬದಲಾಯಿಸಿಬೇತಮಂಗಲ, ಬೂದಿಕೋಟೆ, ಹುನಕುಂದ ಇವು ತಾಲ್ಲೂಕಿನ ಐತಿಹಾಸಿಕ ಮತ್ತು ಪುರಾತನ ಸ್ಥಳಗಳು.
ಬೇತಮಂಗಲ ಕೋಲಾರಕ್ಕೆ 29 ಕಿಮೀ. ದಕ್ಷಿಣದಲ್ಲಿ ಪಾಲಾರ್ ನದಿಯ ಬಲದಂಡೆಯ ಮೇಲಿದೆ. ಇದೊಂದು ಪ್ರವಾಸಿ ಕೇಂದ್ರ. ಇಲ್ಲಿರುವ ದೊಡ್ಡ ಕೆರೆಯ ಮೇಲೆ ದೋಣಿ ವಿಹಾರ ಸೌಕರ್ಯವಿದೆ. 1864ರವರೆಗೆ ಈ ಊರೇ ತಾಲ್ಲೂಕಿನ ಮುಖ್ಯಸ್ಥಳವಾಗಿತ್ತು. ಬಂಗಾರಪೇಟೆ-ಮುಳಬಾಗಿಲು ರಸ್ತೆ ಈ ಊರಿನ ಮೂಲಕ ಸಾಗುತ್ತದೆ. ಬಾಣ ದೊರೆ ಬಹುಶಃ ಸ್ಥಾಪಿಸಿದ ವಿಜಯಾದಿತ್ಯಮಂಗಲವೇ ಬೇತಮಂಗಲವಾಗಿದೆಯೆನ್ನಲಾಗಿದೆ. ನೊಳಂಬರ ಕಾಲದ ಎರಡು ಶಿಲಾಶಾಸನಗಳು ಇಲ್ಲಿಯ ಗಂಗಮ್ಮ ದೇವಾಲಯದಲ್ಲಿವೆ. ಇಲ್ಲಿರುವ ಕೆರೆ ಯಾವಾಗ ನಿರ್ಮಾಣವಾಯಿತೆಂಬುದು ಗೊತ್ತಿಲ್ಲ. ಇರಿವ ನೊಳಂಬ 950ರಲ್ಲಿ ಇದನ್ನು ದುರಸ್ತು ಮಾಡಿಸಿದ. ಕೋಲಾರ ಚಿನ್ನದ ಗಣಿಗೆ ಇಲ್ಲಿಂದ ನೀರು ಪೂರೈಕೆಯಾಗುತ್ತದೆ. ವಿಜಯೇಂದ್ರ ದೇವಾಲಯ ಇಲ್ಲಿಯ ಪ್ರಮುಖ ದೇವಸ್ಥಾನ.
ಬೂದಿಕೋಟೆ ಬಂಗಾರಪೇಟೆಗೆ 13 ಕಿಮೀ. ದಕ್ಷಿಣದಲ್ಲಿದೆ. ಇದು ಮಾರ್ಕಂಡೇಯ ನದಿಯ ಎರಡು ಕವಲುಗಳ ನಡುವೆ ಇದೆ. ಇದೊಂದು ಹೋಬಳಿ ಕೇಂದ್ರ. ಸಂಸ್ಕøತದ ವಿಭೂತಿಪುರ ಎಂಬುದು ಬೂದಿಕೋಟೆ ಎಂದಾಗಿದೆಯೆನ್ನಲಾಗಿದೆ. ಇಲ್ಲಿ 8ನೆಯ ಶತಮಾನದ ಬಾಣನ ಶಾಸನವಿದೆ. ಇದು ಹೈದರ್ ಅಲಿಯ ಜನ್ಮಸ್ಥಳ. ಹೈದರನ ತಂದೆ ಫತೆ ಮಹಮ್ಮದನಿಗೆ ಇದು ಜಹಗೀರಾಗಿತ್ತು. ಶಿರಾದ ಸುಬೇದಾರನಿಂದ ಘೌಜುದಾರನಾಗಿ ನೇಮಕಗೊಂಡಾಗ ಅವನಿಗೆ ಈ ಜಹಗೀರನ್ನು ನೀಡಲಾಗಿತ್ತು. ಕೋಟೆಯೊಳಗೆ ಒಂದು ತಿಳಿನೀರಿನ ತೊರೆಯಿದೆ. ಇಲ್ಲಿ ವೆಂಕಟರಮಣ ಮತ್ತು ಸೋಮೇಶ್ವರ ದೇವಾಲಯಗಳಿವೆ. ಬಂಗಾರಪೇಟೆಗೆ 13 ಕಿಮೀ ಈಶಾನ್ಯದಲ್ಲಿರುವ ಹುನಕುಂದದಲ್ಲಿ ಅನೇಕ ಶಾಸನಗಳಿವೆ. ಊರಿನ ಬಳಿಯ ಗುಡ್ಡದ ಮೇಲೆ ಶಿವನ ದೇಗುಲವಿದೆ. ಬಂಗಾರಪೇಟೆಯ ಉತ್ತರದಲ್ಲಿರುವ ಯಲಬುರ್ಗಿಯಲ್ಲಿ ವೆಂಕಟರಮಣ ದೇವಾಲಯವಿದೆ.
ತಾಲ್ಲೂಕಿನಲ್ಲಿರುವ ಎರಡು ಪಟ್ಟಣಗಳು
ಬದಲಾಯಿಸಿರಾಬರ್ಟ್ಸನ್ ಪೇಟೆ
ಬದಲಾಯಿಸಿಜನಸಂಖ್ಯೆ 1,41,294 (20001). ಇದು 1964ರವರೆಗೂ ಕೋಲಾರ ಚಿನ್ನದ ಗಣಿ ಸ್ಯಾನಿಟರಿ ಬೋರ್ಡಿನ ಆಡಳಿತಕ್ಕೊಳಪಟ್ಟಿತ್ತು-ಆ ವರ್ಷ ಇದನ್ನು ಪ್ರತ್ಯೇಕಗೊಳಿಸಿ ಇದಕ್ಕೊಂದು ಪುರಸಭೆಯನ್ನು ಸ್ಥಾಪಿಸಲಾಯಿತು. ಉರಿಗಾಂ ಚಿನ್ನದ ಗಣಿಪ್ರದೇಶವೂ ಈ ಪುರಸಭೆಯ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ ಹೊಯ್ಸಳ ದೊರೆ ರಾಮನಾಥನ (13ನೆಯ ಶತಮಾನ) ತಮಿಳು ಶಾಸನಗಳಿವೆ. ಆ ಶಾಸನಗಳಲ್ಲಿ ಇದರ ಹೆಸರನ್ನು ಉರಿಗೈಯಮ್ ಎಂದು ಹೇಳಲಾಗಿದೆ. ಇಲ್ಲಿ 1875ರಲ್ಲಿ ಚಿನ್ನದ ಅದಿರು ತೆಗೆಯಲು ಮೊದಲನೆಯ ಸುರಂಗವನ್ನು ಕೊರೆಯಲಾಯಿತು. ಇಲ್ಲಿ ಪ್ರಥಮ ದರ್ಜೆಯ ಕಾಲೇಜೂ, ಶಾಲೆ, ಆಸ್ಪತ್ರೆಗಳೂ ಇವೆ.
ಬಂಗಾರಪೇಟೆ
ಬದಲಾಯಿಸಿಬಂಗಾರಪೇಟೆ ಪಟ್ಟಣ ಈ ತಾಲ್ಲೂಕಿನ ಮುಖ್ಯ ಸ್ಥಳ. ಬೆಂಗಳೂರಿಗೆ 78 ಕಿ.ಮೀ. ಪೂರ್ವದಲ್ಲಿ ಕೋಲಾರಕ್ಕೆ 18 ಕಿ.ಮೀ. ದಕ್ಷಿಣದಲ್ಲಿರುವ ಬಂಗಾರಪೇಟೆಗೆ 1948ರವರೆಗೆ ಬೌರಿಂಗ್ ಪೇಟೆ ಎಂಬ ಹೆಸರಿತ್ತು. ಇದರ ಜನಸಂಖ್ಯೆ 38,684 (2001). ಬೆಂಗಳೂರು-ಮದರಾಸ್ ಮತ್ತು ಬೆಂಗಳೂರು-ಕೋಲಾರ ರೈಲುಮಾರ್ಗಗಳ ಮೇಲೆ ಇದೊಂದು ನಿಲ್ದಾಣ. ಬಂಗಾರಪೇಟೆಯಿಂದ ಉರಿಗಾಂ ಚಿನ್ನದ ಗಣಿ ಪ್ರದೇಶಕ್ಕೆ ರೈಲುಮಾರ್ಗವಿದೆ. ಇಲ್ಲಿಂದ ಸುತ್ತಣ ಪಟ್ಟಣಗಳಿಗೆ ಒಳ್ಳೆಯ ರಸ್ತೆ ಸಂಪರ್ಕವುಂಟು. ಶಾಲಾಕಾಲೇಜುಗಳಿವೆ. ಹಲವು ಸಣ್ಣ ಕೈಗಾರಿಕೆಗಳುಂಟು. ಭಾನುವಾರ ಸಂತೆಯ ದಿನ. ಇಲ್ಲಿ ಪುರಸಭೆ ಇದೆ.