ಬಂಗಾರದ ಕುಸುಮ ಜಲಪಾತ

ಉತ್ತರಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ಶಿಖರ ಶ್ರೇಣಿಗಳು ಹಲವು ಜಲಪಾತಗಳಿಂದ ಕೂಡಿದೆ. ಕೆಲವು ದೊಡ್ಡ ಜಲಪಾತಗಳಾಗಿದ್ದರೆ ಇನ್ನು ಕೆಲವು ಚಿಕ್ಕ ಜಲಪಾತಗಳಾಗಿವೆ. ಬಹು ಜನರಿಗೆ ಪರಿಚಿತವಿರುವ ಜಲಪಾತಗಳಿಗೆ ಪ್ರವಾಸಿಗರು ನಿತ್ಯವೂ ಭೇಟಿ ನೀಡಿ ಜಲಪಾತದ ದೃಶ್ಯ ಸವಿಯುತ್ತಾರೆ. ಹೆದ್ದಾರಿ ಮತ್ತು ಸಂಪರ್ಕ ರಸ್ತೆಯಿಂದ ದೂರದಲ್ಲಿರುವ ಅದೆಷ್ಟೋ ಜಲಪಾತಗಳು ಇಂದಿಗೂ ಪ್ರವಾಸಿಗರಿಗೆ ಪರಿಚಯವಿಲ್ಲದೆ ಉಳಿದಿವೆ. ಇಂತಹ ಅಪರೂಪದ ಜಲಪಾತಗಳಲ್ಲಿ ಗೇರುಸೊಪ್ಪ ಸಮೀಪದ ಬಂಗಾರದ ಕುಸುಮ ಜಲಪಾತ ಅತ್ಯಂತ ರಮಣೀಯ ಜಲಪಾತವಾಗಿದೆ.

ಹೊನ್ನಾವರದಿಂದ ಬೆಂಗಳೂರಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಹೊನ್ನಾವರ ತಾಲೂಕು ಕೇಂದ್ರದಿಂದ ಸುಮಾರು ೩೨ ಕಿ.ಮೀ.ದೂರದಲ್ಲಿ ಈ ಜಲಪಾತವಿದೆ. ಗೇರುಸೊಪ್ಪೆಯಿಂದ ಸುಮಾರು ೨ ಕಿ.ಮೀ.ದೂರದಲ್ಲಿ ಮಾಸ್ತಿಕಾಂಬಾ ದೇವಾಲಯದ ಬಳಿ ಈ ಜಲಪಾತ ತಲುಪಲು ಕಾಲು ದಾರಿಯಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹನೇಹಳ್ಳ ಸೇತುವೆಯ ಪಕ್ಕದಿಂದ ಸುಮಾರು ೧ ಕೀ.ಮೀ ದೂರದವರೆಗೆ ಕಾಲು ನಡಿಗೆಯ ಮೂಲಕ ಸಾಗಿದರೆ ಈ ಜಲಪಾತ ತಲುಪಬಹುದು.

ಶರಾವತಿ ವಿದ್ಯುತ್ ಯೋಜನೆಯ ಕೊನೆಯ ಹಂತವಾದ ಶರಾವತಿ ಟೇಲರೇಸ್ ಡ್ಯಾಮ ನಿರ್ಮಿಸುವಾಗ ಮಣ್ಣು ಮತ್ತು ಕಚ್ಚಾ ಜೆಲ್ಲಿ ಕಲ್ಲು ಸಾಗಿಸಲು ಈ ಜಲಪಾತದ ಮಡಿಲವರೆಗೆ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಈಗ ಈ ರಸ್ತೆ ಸಂಪೂರ್ಣ ಶಿಥಿಲವಾಗಿ ಪಳೆಯುಳಿಕೆ ಮಾತ್ರ ಗೋಚರಿಸುವಂತಿದೆ. ೨೦೦೮ ರಲ್ಲಿ ಗೇರುಸೊಪ್ಪೆಯ ಬಂಗಾರಮಕ್ಕಿಯ ಶ್ರೀವೀರಾಂಜನೇಯ ದೇಗುಲದ ಧರ್ಮದರ್ಶಿ ಶ್ರೀಮಾರುತಿ ಗುರೂಜಿ ಈ ಜಲಪಾತಕ್ಕೆ ಭೇಟಿ ನೀಡಿದಾಗ ಈ ಜಲಪಾತಕ್ಕೆ ಬಂಗಾರದ ಕುಸುಮ ಎಂದು ನಾಮಕರಣ ಮಾಡಲಾಯಿತು. ಅಲ್ಲಿಯವರೆಗೂ ಇದಕ್ಕೆ ಚಿಕ್ಕ ಜಲಪಾತ ಎಂದು ಕರೆಯುವ ವಾಡಿಕೆ ಇತ್ತು.

ಸಿದ್ದಾಪುರದ ಒಳ ಭಾಗದ ಲಂಬಾಪುರ ಮತ್ತು ಇಟಗಿಯಿಂದ ಹರಿದು ಬರುವ ಹೊಳೆ ಇಲ್ಲಿ ಜಲಪಾತವಾಗಿ ಧುಮಕಿ ಉಕ್ಕುತ್ತದೆ. ಪಶ್ಚಿಮಘಟ್ಟದ ದಟ್ಟಾರಣ್ಯದಲ್ಲಿ ಧುಮುಕುವ ಈ ಹೊಳೆ ಮಧ್ಯೆ ತಡೆದು ಬಂದು ಎರಡು ಹಂತಗಳಲ್ಲಿ ಇಲ್ಲಿ ಜಲಪಾತವಾಗಿದೆ. ಈ ಜಲಪಾತಕ್ಕೆ ಕೆಪ್ಪ ಜೋಗ ಎಂಬ ಹೆಸರು ಹಿಂದಿನಿಂದ ರೂಢಿಯಿದೆ. ಬೆಂಗಳೂರಿಗೆ ತಲುಪುವ ಹೆದ್ದಾರಿಯಲ್ಲಿ ಬಹು ದೂರದಿಂದ ಈ ಜಲಪಾತ ಸುಂದರವಾಗಿ ಗೋಚರಿಸುತ್ತದೆ. ಕೊನೆಯ ಹಂತದಲ್ಲಿ ಧುಮುಕುವ ಭಾಗವೇ ಈ ಬಂಗಾರದ ಕುಸುಮ ಜಲಪಾತ.

ಎತ್ತರದಿಂದ ಧುಮುಕಿ ಹರಿದು ಬರುವ ಈ ಜಲಪಾತ ಎರಡನೇ ಹಂತದಲ್ಲಿ ಶಿಲೆಯ ಬಂಡೆಗಳ ನಡುವೆ ಭೋರ್ಗರೆದು ಧುಮುಕುತ್ತದೆ. ಮಳೆಗಾಲದ ಆರಂಭದಿಂದ ಸುಮಾರು ಜನವರಿ ತಿಂಗಳ ಅಂತ್ಯದವರೆಗೆ ಈ ಜಲಪಾತವನ್ನು ವೀಕ್ಷಿಸಬಹುದು. ಕಾಡಿನ ದಾರಿಯಲ್ಲಿ ಕಾಲ್ನಡಿಗೆ ಮೂಲಕ ನಡೆದು ಬರುವಾಗ ಈ ಹಳ್ಳದ ಝರಿ ಅಲ್ಲಲ್ಲಿ ಸುಂದರವಾಗಿ ಕಾಣುತ್ತದೆ. ಎಡಗಡೆ ಕಾಡಿನ ವಿವಿಧ ತಳಿಯ ಮರಗಿಡ ಬಳ್ಳಿಗಳು ಅಪರೂಪದ ವನಸ್ಪತಿಯ ಸಸ್ಯಗಳು ಗೋಚರಿಸುತ್ತವೆ. ಚಾರಣದ ಮೂಲಕ ಬಂದು ತಲುಪಿದಾಗ ವಿಶಾಲವಾದ ಬಯಲು ಮತ್ತು ವಿವಿಧ ಆಕೃತಿಯ ಬಂಡೆಗಲ್ಲುಗಳು ಪುಳಕ ನೀಡುತ್ತವೆ. ಈ ಜಲಪಾತಕ್ಕೆ ಮೈಯೊಡ್ಡಿ ಸ್ನಾನ ಮಾಡಿ ಸಂತಸ ಪಡಬಹುದು. ನೀರು ಸಹ ಕಡಿಮೆ ಆಳವಿದ್ದು ಯಾವುದೇ ಪ್ರಾಣಾಪಾಯ ಇಲ್ಲವಾಗಿದೆ. ಪ್ರವಾಸಿಗರು ಈ ಸ್ಥಳದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಊಟ ಉಪಾಹಾರ ಸೇವಿಸಲು ಸಹ ಸಾಕಷ್ಟು ಸ್ಥಳಾವಕಾಶವಿದೆ. ಜಲಪಾತದ ಸಮೀಪದಲ್ಲೇ ಬಂಡೆಗಲ್ಲುಗಳನ್ನು ಏರಿ ಜಲಪಾತದ ತುದಿಯನ್ನು ಸಹ ಸಾಹಸದಿಂದ ತಲುಪಲು ಸಾಧ್ಯವಿದೆ. ಜೋಗದಂತಹ ದೊಡ್ಡ ಜಲಪಾತಗಳನ್ನು ದೂರದಿಂದಲೇ ಸವಿದು ಹಿಂತಿರುಗುವ ಬದಲು ಈ ಜಲಪಾತದಲ್ಲಿ ನೀರಿನಲ್ಲಿ ಆಟವಾಡಿ ಮೋಜು ಮಸ್ತಿ ಮಾಡಿ ಖುಷಿಪಡಲು ಸಾಧ್ಯವಿದೆ.