ಫ್ರೆಡರಿಕ್ ಏಬರ್ಹಾರ್ಟ್ ಟ್ಸೊಯಿನರ್
ಫ್ರೆಡರಿಕ್ ಏಬರ್ಹಾರ್ಟ್ ಟ್ಸೊಯಿನರ್ (1905-1963) ಜರ್ಮನಿಯಲ್ಲಿ ಯಹೂದ್ಯ ಕುಲದಲ್ಲಿ ಹುಟ್ಟಿದ ಈತ ಆಫ್ರಿಕದಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿ ಅಲ್ಲಿಯ ಪ್ರಾಗೈತಿಹಾಸಿಕ ನಿವೇಶನಗಳನ್ನೆಲ್ಲ ಸಂದರ್ಶಿಸಿದನಾದರೂ ವಿಶೇಷವಾಗಿ ಯೂರೋಪ್ ಹಾಗೂ ಇಂಗ್ಲೆಂಡಿನ ಪ್ರಾಗೈತಿಹಾಸಿಕ ಮಾನವನಿಗೆ ಸಂಬಂಧಿಸಿದಂತೆ, ವಾಯುಗುಣ, ಪರಿಸರ ಹಾಗೂ ಭೂ ಅಧ್ಯಯನ ಕ್ಷೇತ್ರಗಳಿಗೆ ನೀಡಿರುವ ಮೌಲಿಕ ಕಾಣಿಕೆಗಳಿಗಾಗಿ ಅತ್ಯಂತ ಪ್ರಸಿದ್ಧನಾಗಿದ್ದಾನೆ.
ಬದುಕು ಮತ್ತು ಸಾಧನೆ
ಬದಲಾಯಿಸಿಯುದ್ಧ ಕಾಲದಲ್ಲಿ ಈತ ಇಂಗ್ಲೆಂಡಿಗೆ ವಲಸೆ ಹೋಗಿ ಆಂಗ್ಲ ಪ್ರಜೆಯಾಗಿ ನಿವಾಸೀ ಪೌರತ್ವವನ್ನು ಗಳಿಸಿದ. ಗೋರ್ಡನ್ ಚೈಲ್ಡ್ ನಿರ್ದೇಶಕರಾಗಿದ್ದ ಅವಧಿಯಲ್ಲಿ ಹಾಗೂ ಅದಕ್ಕೂ ಮುಂಚೆ ಲಂಡನ್ ವಿಶ್ವವಿದ್ಯಾಲಯದ ಪುರಾತತ್ವಶಾಸ್ತ್ರ ಸಂಸ್ಥೆಯ ಪರಿಸರ ಪುರಾತತ್ವಶಾಸ್ತ್ರ ಅಥವಾ ಭೂಕಾಲಮಾನಶಾಸ್ತ್ರ ವಿಭಾಗದ ಮುಖ್ಯಸ್ಥನಾಗಿ ಕೆಲಸಮಾಡಿದ. ಭೂವಿಜ್ಞಾನ ಹಾಗೂ ಪ್ರಾಣಿವಿಜ್ಞಾನ ಸಂಘಗಳ ಸಮ್ಮಾನಿತ ಸದಸ್ಯನಾದ. ಈತ ಕೈಗೊಂಡು ನಡೆಸಿದ ವಿವಿಧ ಕಾರ್ಯಗಳಲ್ಲಿ ಈತನ ದೃಷ್ಟಿಯ ಬಹುಮುಖತೆಯನ್ನೂ ಅನುಭವ ತೀವ್ರತೆಯನ್ನೂ ಕಾಣಬಹುದು. ಯೂರೋಪ್ ಮತ್ತು ಇಂಗ್ಲೆಂಡಿನ ವಿದ್ವತ್ ಪತ್ರಿಕೆಗಳಲ್ಲಿ ಅನೇಕ ಭಾಷೆಗಳಲ್ಲಿ ಈತನ ಹತ್ತಾರು ಪ್ರಮುಖ ಕ್ಷೇತ್ರ ಪ್ರಬಂಧಗಳು ಪ್ರಕಟವಾಗಿವೆ.
ಈತನ ಅತ್ಯಂತ ಗಮನಾರ್ಹ ಕೃತಿಯಾದ ಡೇಟಿಂಗ್ ದಿ ಪಾಸ್ಟ್-ಇದು ವಾಸ್ತವವಾಗಿ ಈತನ ಸಂಶೋಧನೆಗಳ ಸಾರರೂಪವಾಗಿದೆ-ಮೊದಲು ಪ್ರಕಟವಾದದ್ದು 1946ರಲ್ಲಿ. ಇದು ಎರಡನೆಯ ಆವೃತ್ತಿಯನ್ನೂ ಕಂಡಿದೆ.
ಭಾರತದಲ್ಲಿ
ಬದಲಾಯಿಸಿ1949-50ರ ನಡುವಣ ಅವಧಿಯಲ್ಲಿ ಎರಡು ಬಾರಿಯೂ ಅಲಹಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸುವ ಸಲುವಾಗಿ ಒಮ್ಮೆಯೂ (1960-61ರಲ್ಲಿ) ಈತ ಭಾರತಕ್ಕೆ ಭೇಟಿ ಕೊಟ್ಟಿದ್ದ. ಈ ಎರಡು ಭೇಟಿಗಳ ಅವಧಿಯಲ್ಲಿ ಅಖಿಲ ಭಾರತೀಯ ಪ್ರಾಗೈತಿಹಾಸಿಕ ಅನ್ವೇಷಣ ಚಟುವಟಿಕೆಗಳನ್ನು ಪ್ರಾರಂಭಿಸಲು ನೆರವಾದ. ಅಷ್ಟೇ ಅಲ್ಲ. ಗುಜರಾತಿನ ನರ್ಮದಾ ಕಣಿವೆಯಲ್ಲಿ ಇತರರೊಂದಿಗೆ ಸಂಶೋಧನೆಗಳನ್ನು ನಡೆಸಿದ. ಮುಂದೆ ಬರೋಡದ ಮರಾಠವಾಡ ರಾಜ್ಯ ವಿಶ್ವವಿದ್ಯಾಲಯ ಈ ಸಂಶೋಧನೆಗಳ ಬಗ್ಗೆ ಗ್ರಂಥವೊಂದನ್ನು ಪ್ರಕಟಿಸಿತು.