ಫ್ರಾನ್ಸ್ ಕಾರ್ನೇಲಿಯಸ್ ಡಾನ್‍ಡರ್ಸ್

ಫ್ರಾನ್ಸ್ ಕಾರ್ನೇಲಿಯಸ್ ಡಾನ್‍ಡರ್ಸ್ (1818-1889) 19ನೆಯ ಶತಮಾನದ ಪ್ರಮುಖ ಡಚ್ ವೈದ್ಯ; ಶರೀರಕ್ರಿಯಾ ವಿಜ್ಞಾನಿ; ನೇತ್ರಶಾಸ್ತ್ರಜ್ಞ. ಮೊತ್ತಮೊದಲು ವೈಜ್ಞಾನಿಕವಾಗಿ ದೃಷ್ಟಿಪರೀಕ್ಷೆಯನ್ನು ಪ್ರಾರಂಭಿಸಿದಾತ.

ಬದುಕು ಮತ್ತು ಸಾಧನೆ ಬದಲಾಯಿಸಿ

1818ರ ಮೇ 27ರಂದು ಟಿಲ್‍ಬರ್ಗಿನಲ್ಲಿ ಇವನ ಜನನ. ಯುಟ್ರೆಕ್ಟಿನಲ್ಲಿ ವಿದ್ಯಾಭ್ಯಾಸ ಮುಗಿದ ಮೇಲೆ ಅಲ್ಲೇ ಸೈನ್ಯದಲ್ಲಿ ಶಸ್ತ್ರವೈದ್ಯನಾಗಿ ವೃತ್ತಿ ಪ್ರಾರಂಭಿಸಿದ.

1847ರಲ್ಲಿ ಅಂಗಶಾಸ್ತ್ರ ಪ್ರಾಧ್ಯಾಪಕನಾಗಿ ನೇಮಕಗೊಂಡ ಬಳಿಕ ಈತ ನೇತ್ರಕ್ರಿಯೆಗಳಲ್ಲಿ ಕಂಡುಬರುವ ಅನೇಕ ಆಕ್ರಮಗಳ ವಿಷಯವಾಗಿ ಅಧ್ಯಯನಗಳನ್ನು ಕೈಗೊಂಡ. ಕಣ್ಣುಗಳ ಮುಂದೆ ನೊಣಗಳು ಹಾರಾಡುವಂತೆ ಭ್ರಮೆ (ಮಸ್ಕೆ ವಾಲಿಟಾನ್‍ಟಿಸ್-1847), ದೃಷ್ಟಿ ಅಕ್ಷಗಳ ಅಭಿಸರಣೆ (ಕನ್‍ವರ್ಜೆನ್ಸ್) ಮತ್ತು ವಿವಿಧ ದೂರದೃಷ್ಟಿಯ ಹವಣಿಕೆ (ಅಕಾಮಡೇಷನ್) ಇವುಗಳಿಗಿರುವ ಸಂಬಂಧ (1848), ಚಾಳೀಸು (1858), ದೃಷ್ಟಿಮಾಂದ್ಯ (ಎಮೆಟ್ರೋಪಿಯ ಮತ್ತು ಆಸ್ಟಿಗ್ಮಾಟಿಸಮ್ 1860-62) ಮುಂತಾದುವು ಇವನ ಕೆಲವು ವ್ಯಾಸಂಗ ಕ್ಷೇತ್ರಗಳು. ಕಣ್ಣು ರೋಗಗಳಿಗಾಗಿಯೇ ಒಂದು ಆಸ್ಪತ್ರೆಯನ್ನು ಡಾನ್‍ಡರ್ಸ್ 1851ರಲ್ಲಿ ಸ್ಥಾಪಿಸಿದ. ದೃಷ್ಟಿಮಾಂದ್ಯವನ್ನು ಪರೀಕ್ಷಿಸುವ ವಿಧಾನ (ರಿಫ್ರ್ಯಾಕ್ಷನ್), ಅಕ್ಷಿಪಟಲವನ್ನು (ರೆಟಿನ) ಪರೀಕ್ಷಿಸುವ ಸಲಕರಣೆ ನೇತ್ರದರ್ಶಕ (ಆಫ್ತಾಲ್‍ಮಾಸ್ಕೋಪ್), ದೃಷ್ಟಿಮಾಂದ್ಯವನ್ನು ಪರಿಹರಿಸುವ ಸ್ತಂಭಮಸೂರ (ಸಿಲಿಂಡ್ರಿಕಲ್ ಲೆನ್ಸ್) ಮತ್ತು ಅಶ್ರಕೀಯ ಮಸೂರ (ಪ್ರಿಸ್ಮ್ಯಾಟಿಕ್ ಲೆನ್ಸ್) - ಇವು ಡಾನ್‍ಡರ್ಸನ ಆವಿಷ್ಕರಣಗಳು. 1864ರಲ್ಲಿ ವಕ್ರೀಕರಣ ಮತ್ತು ದೃಷ್ಟಿಹೊಂದಾಣಿಕೆಯ ವಿಕಾರಗಳು (ದಿ ಅನಾಮಲೀಸ್ ಆಫ್ ರಿಫ್ರ್ಯಾಕ್ಷನ್ ಅಂಡ್ ಅಕಾಮಡೇಷನ್) ಎಂಬ ಪುಸ್ತಕವನ್ನು ಡಾನ್‍ಡರ್ಸ್ ಇಂಗ್ಲೆಂಡಿನಲ್ಲಿ ಪ್ರಚುರಪಡಿಸಿದ.

1889ನೆಯ ಮೇ 24ರಂದು ಇವನ ಮರಣ ಸಂಭವಿಸಿತು.