ಪ್ರೇಮ ಕಾರಂತ

ಬದಲಾಯಿಸಿ

ಪ್ರೇಮ ಕಾರಂತ್ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಕನ್ನಡ ಸಿನಿಮಾದ ಮೊಟ್ಟ ಮೊದಲ ಮಹಿಳಾ ಚಲನಚಿತ್ರ ನಿರ್ದೇಶಕರಾಗಿದ್ದಾರೆ. ಎಂ.ಕೆ ಇಂದಿರಾ ಅವರ ಕಾದಂಬರಿಯನ್ನು ಆಧರಿಸಿದ ಫಣಿಯಮ್ಮ ಚಲನಚಿತ್ರವನ್ನು ೧೯೮೩ ರಲ್ಲಿ ನಿರ್ದೇಶಿಸಿದಾಗ ಕನ್ನಡ ಸಿನಿಮಾದ ಮೊದಲ ಮಹಿಳೆ ನಿರ್ದೇಶಕರಾದರು.

ಆಗಸ್ಟ್ ೧೫, ೧೯೩೬ ರಲ್ಲಿ ಭದ್ರಾವತಿಯ ಬಡ ಕುಟುಂಬದಲ್ಲಿ ಜನಿಸಿದರು. ತಂದೆ ತಾಯಿಯನ್ನು ಬಾಲ್ಯದಲ್ಲೆ ಕಳೆದುಕೊಂಡರು. ತಂದೆ ದೇವೋಜಿರಾವ್ ಮತ್ತು ತಾಯಿ ಕಮಲಮ್ಮನವರು. ಪ್ರೇಮಾ ಅವರು ತಮ್ಮ ಅಜ್ಜಿ ತಾತಂದಿರ ಪೋಷಣೆಯಲ್ಲಿ ಕೋಲಾರ ಜಿಲ್ಲೆಯ ಶಿಡ್ಲೆಘಟ್ಟದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದರು. ನಂತರ ಬೆಂಗಳೂರಿನ ಸೇಂಟ್ ತೆರೇಸಾ ಕಾನ್ವೆಂಟಿನಲ್ಲಿ ಶಿಕ್ಷಕ ತರಬೇತಿ ಮುಗಿಸಿ, ಅದೇ ಸಂಸ್ಥೆಯಲ್ಲಿ ಪ್ರೈಮರಿ ಶಾಲಾ ಮಕ್ಕಳಿಗೆ ಶಿಕ್ಷಕಿಯಾದರು. ಈ ಸಂಧರ್ಭದಲ್ಲಿ ಸಣ್ಣ ನಾಟಕಗಳನ್ನು ಮಕ್ಕಳಿಗಾಗಿ ಮಾಡುತ್ತಿದ್ದರು. ನಂತರ ೧೯೫೮ ರಲ್ಲಿ ಬಿ.ವಿ ಕಾರಂತರನ್ನು ಪ್ರೇಮಿಸಿ ವಿವಾಹ ಮಾಡಿಕೊಂಡರು. ನಂತರ ವಾರಾಣಾಸಿಯಲ್ಲಿ ದಂಪತಿಗಳು ತಮ್ಮ ಜೀವನವನ್ನು ನಡೆಸಿದರು. ಬನಾರಾಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಪ್ರೇಮಾ ಕಾರಂತರು ಹೆಚ್ಚಿನ ವಿಧ್ಯಾಭ್ಯಾಸವನ್ನು ನಡೆಸಿದರು. ಬಿ.ವಿ ಕಾರಂತರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ಸೇರಿದರು. ಪ್ರೇಮಾ ಅವರು ಅಲ್ಲಿಯೇ ಅರವಿಂದ ಆಶ್ರಮದಲ್ಲಿ ಶಿಕ್ಷಕಿಯಾದರು. ಶಿಕ್ಷಣದಲ್ಲಿ ನಾಟಕವನ್ನು ಪ್ರಯೋಗಿಸುವ ಉದ್ದೇಶದಿಂದ ನಾಟಕಗಳನ್ನು ಬಳಸಿಕೊಂಡು ಇತಿಹಾಸ ಮತ್ತು ಗಣಿತಶಾಸ್ತ್ರದಂತಹ ವಿಷಯಗಳನ್ನು ಕಲಿಸಲು ಪ್ರಾರಂಭಿಸಿದರು. ಬಿ.ವಿ ಕಾರಂತರ ಒತ್ತಾಯಕ್ಕೆ ಮಣಿದು ನ್ಯಾಷ್‍ನಲ್ ಸ್ಕೂಲ್ ಆಫ್ ಡ್ರಾಮಾ ಸೇರಿ ಪದವಿಯನ್ನು ಪೂರ್ಣಗೊಳಿಸಿದರು. ಓಂಪುರಿ, ಸಾಯಿ ಪರಾಂಜಪೆ ಮುಂತಾದವರು ಇವರ ಸಹಪಾಠಿಗಳಾಗಿದ್ದರು. ಪದವಿಯ ನಂತರ ಎರಡು ವರ್ಷಗಳ ಕಾಲ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ರೆಪರ್ಟರಿಯಲ್ಲಿ ಎರಡು ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು.

ನಾಟಕ ರಂಗ

ಬದಲಾಯಿಸಿ

ರಂಗಭೂಮಿಯಲ್ಲಿ ನಾಟಕಕಾರರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಹೆಡ್ಡಾಯಣ, ದೈತ್ಯ, ಬಂದ ಬಂದ ಗುಣವಂತ, ಜಿಯಂಟ್ ಮಾಮಾ, ನಕ್ಕಳಾ ರಾಜಕುಮಾರಿ, ಶೆಟ್ಟಿ ಕಥೆ, ನಿರುಪಮಾ ಮುಂತಾದ ಮಕ್ಕಳ ನಾಟಕಗಳನ್ನು ಮಾಡಿದರು. ಈ ನಾಟಕಗಳು ಮುಖ್ಯವಾಗಿ ಕನ್ನಡ ಅನುವಾದಗೊಂಡು ಭಾರತೀಯ ಇತರ ಭಾಷೆಗಳಲ್ಲಿ ಬರೆಯಲ್ಪಟ್ಟಿದ್ದವು. ಮಕ್ಕಳಿಗಾಗಿ ಬೆನಕ ಮಕ್ಕಳ ಕೇಂದ್ರ ಎಂಬ ರೆಪರ್ಟರಿ ಆರಂಭಿಸಿ, ಮಕ್ಕಳಿಗೆ ರಂಗಕಲೆಯನ್ನು ಭೋಧಿಸಿದರು. ರೆಪರ್ಟರಿಯೂ ೧೯೭೯ ರಲ್ಲಿ ‘ಅಳಿಲು ರಾಮಾಯಣ’ ಎಂಬ ಪ್ರಥಮ ಪ್ರದರ್ಶನವನ್ನು ನೀಡಿತು. ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಆಗಿ ಹೊರಹೊಮ್ಮಿದರು. ಹಯವದನ, ಈಡಿಪಸ್, ಓಥೆಲೋ, ಕಿಂಗ್ ಲಿಯರ್, ಜೋಕುಮಾರಸ್ವಾಮಿ, ಸಂಕ್ರಾಂತಿ, ಮ್ಯಾಕ್ ಬೆತ್ ಮುಂತಾದ ಪ್ರಸಿದ್ಧ ನಾಟಕಗಳಲ್ಲಿ ಕಾರ್ಯನಿರ್ವಹಿಸಿದ್ದರು. ೧೨೦ ಕ್ಕೂ ಹೆಚ್ಚು ನಾಟಕಗಳಲ್ಲಿ ಕಲಾ ವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ೧೯೭೯ ಆಲಿಬಾಬಾ ಎಂಬ ಹೆಸರಿನ ನಾಟಕವನ್ನು ಪ್ರದರ್ಶಿಸಿದರು. ನಂತರ ಪಂಜಾಬಿಯ ‘ಧರ್ತಿ ದೇಶ್ ಪಂಜಾಬದ ದಿ’ ಹಿಂದಿಯ ಚಂದ್ರಗುಪ್ತ, ಸ್ಕಂದ ಗುಪ್ತ ಮುಂತಾದ ಅನೇಕ ನಾಟಕಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರೇಮಾ ಕಾರಂತರು ದೇಶದಾದ್ಯಂತ ಹಲವಾರು ರಂಗಕಮ್ಮಟಗಳನ್ನು ನಡೆಸಿದ್ದಾರೆ.[]

ಚಲನಚಿತ್ರ ರಂಗ

ಬದಲಾಯಿಸಿ

ಜಿ.ವಿ ಅಯ್ಯರ್ ಅವರ ಪ್ರಸಿದ್ಧ ಚಿತ್ರವಾದ ‘ಹಂಸಗೀತೆ’ಯ ವೇಷಭೂಷಣಗಳ ವಿನ್ಯಾಸಕಿಯಾಗಿ ಚಲನಚಿತ್ರರಂಗಕ್ಕೆ ಕಾಲಿಟ್ಟರು. ೧೯೭೭ ರಲ್ಲಿ “ಕುದುರೆ ಮುಟ್ಟೆ” ಚಿತ್ರಕ್ಕೆ ಕಲಾ ನಿರ್ದೇಶಕಿಯಾದರು. ನಂತರ ಕಲಾತ್ಮಕ ಚಿತ್ರದ ನಿರ್ದೇಶಕಿಯಾಗಿ ಎಂ.ಕೆ ಇಂದಿರಾ ಅವರ ‘ಪಣಿಯಮ್ಮ’ ಕಥೆಯನ್ನು ಆಯ್ಕೆ ಮಾಡಿಕೊಂಡು ನಿರ್ದೇಶನಕ್ಕೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆಯ ಪ್ರಶಸ್ತಿಯನ್ನು ಪಡೆದರು. ಕನ್ನಡ ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿಯಾಗಿ ಗುರುತಿಸಿಕೊಂಡರು. ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾಗಿರುವ ಒಬ್ಬ ಹುಡುಗಿಯ ಕಥೆ ಮತ್ತು ಪುರುಷ ಪ್ರಾಬಲ್ಯದ ಸಮಾಜದಲ್ಲಿ ಕಳಂಕವನ್ನು ಜಯಿಸುವ ಹೋರಾಟ ಮತ್ತು ಧೈರ್ಯ ಬಗ್ಗೆ ಈ ಚಿತ್ರವು ಮೂಡಿಬಂದಿದೆ. ನಂತರ ನಕ್ಕಳಾ ರಾಜಕುಮಾರಿ, ಲಕ್ಷ್ಮೀ ಕಟಾಕ್ಷ, ಅಬ್ದುಲ್ಲಾ ಗೋಪಾಲ ಮತ್ತು ಹಿಂದಿಯಲ್ಲಿ ‘ಬಂದ್ ಝರೋಕೆ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು. ಮಣಿಪುರ್ ದಿ ಲ್ಯಾಂಡ್ ಜ್ಯೂಯಲ್ಸ್, ಅಪ್ಪಿಕೋ, ಸ್ವಪ್ನ ಹೂವಿ ಸಾಕಾರ್, ಛಲೋ ಹಂಬಿ ಬಗೇ, ವಿಕ್ರಾಂತ್ ಮೈ ಫ್ರೆಂಡ್, ಆರ್ ನಾಗರತ್ನಮ್ಮ ಮುಂತಾದ ಸಾಕ್ಷ್ಯಾ ಚಿತ್ರಗಳನ್ನು ನಿರ್ದೇಶಿಸಿದರು. ‘ಸೋಲಿಸಬೇಡ ಗೆಲಿಸಯ್ಯ’ ಎಂಬ ಪ್ರೇಮಾ ಕಾರಂತರ ಪ್ರಸಿದ್ಧ ಆತ್ಮಚರಿತ್ರೆಯಾಗಿದೆ. ಈ ಕೃತಿಯಲ್ಲಿ ಅವರು ಬದುಕಿನಲ್ಲಿ ಎದುರಿಸಿದ ಸಂಕಷ್ಟ-ಸವಾಲುಗಳನ್ನು ಯಾವ ರೀತಿ ಎದುರಿಸಿದರು ವಿವರಿಸಿದ್ದಾರೆ. ಅಕ್ಟೋಬರ್ 29,2007ರಲ್ಲಿ ನಿಧನರಾದರು.[]

ಉಲ್ಲೇಖಗಳು

ಬದಲಾಯಿಸಿ