ಪ್ರಾಣ್ (ಫೆಬ್ರುವರಿ ೧೨,೧೯೨೦ - ಜುಲೈ ೧೨, ೨೦೧೩) ಎಂದು ಭಾರತೀಯ ಚಿತ್ರರಂಗದಲ್ಲಿ ಹೆಸರಾದ 'ಪ್ರಾಣ್ ಕೇವಲ್ ಕ್ರಿಶನ್ ಸಿಕಂದ್' ಒಬ್ಬ ಮಹಾನ್ ಕಲಾವಿದರು. ಹಿಂದಿಚಲನ ಚಿತ್ರರಂಗದ ನಾಯಕನಟರಾಗಿ, ಖಳ ನಟರಾಗಿ, ಪೋಷಕ ನಟರಾಗಿ ಅವರು ಸಲ್ಲಿಸಿದ ಐದು ದಶಕಗಳಿಗೂ ಹೆಚ್ಚಿನ ಸೇವೆ ಅವಿಸ್ಮರಣೀಯವಾದುದು. ಅವರು ನಟಿಸಿದ ಚಿತ್ರಗಳ ಸಂಖ್ಯೆ ೩೫೦ಕ್ಕೂ ಹೆಚ್ಚಿನದು. ಪ್ರಾಣ್ ಅವರಿಗೆ ೨೦೧೨ನೇ ವರ್ಷದ ಸಾಲಿಗಾಗಿ ಭಾರತೀಯ ಚಿತ್ರರಂಗದಲ್ಲಿನ ಶ್ರೇಷ್ಠ ಸಾಧನೆಗಾಗಿ ನೀಡುವ '೪೪ ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಘೋಷಿಸಲಾಗಿದೆ.

ಪ್ರಾಣ್
Pran 90th bday.jpg
ಜನ್ಮನಾಮ
ಪ್ರಾಣ್ ಕ್ರಿಶನ್ ಸಿಕಂದ್

ಫೆಬ್ರುವರಿ ೧೨, ೧೯೨೦
ನವ ದೆಹಲಿ
ಮರಣಜುಲೈ ೧೨, ೨೦೧೩
ಬೇರೆ ಹೆಸರುಗಳುಪ್ರಾಣ್ ಸಾಹಾಬ್
ವೃತ್ತಿಚಲನಚಿತ್ರ ನಟರು
ಸಕ್ರಿಯ ವರ್ಷಗಳು೧೯೪೦-೨೦೦೭
ಬಾಳ ಸಂಗಾತಿ(ಗಳು)ಶುಕ್ಲ ಸಿಕಂದ್ (1945–present)
ಮಕ್ಕಳುಅರವಿಂದ್ ಸಿಕಂದ್
ಸುನಿಲ್ ಸಿಕಂದ್
ಪಿಂಕಿ ಸಿಕಂದ್
ಜಾಲತಾಣhttp://www.pransikand.com

ಜೀವನಸಂಪಾದಿಸಿ

ಪ್ರಾಣ್ ಅವರು ಫೆಬ್ರುವರಿ ೧೨, ೧೯೨೦ರ ವರ್ಷದಲ್ಲಿ ಹಳೆಯ ದಿಲ್ಲಿಯ ಬಡಾವಣೆಯ ಪಂಜಾಬಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಪ್ರಾಣರ ಅಂದಿನ ಹೆಸರು 'ಪ್ರಾಣ್ ಕ್ರಿಶನ್ ಸಿಕಂದ್'. ಅವರ ತಂದೆ 'ಕೇವಲ್ ಕ್ರಿಶನ್ ಸಿಕಂದರು' ವೃತ್ತಿಯಲ್ಲಿ ಸಿವಿಲ್ ಇಂಜಿನಿಯರರಾಗಿದ್ದು ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಾಗಿದ್ದರು. ಅವರ ತಾಯಿಯ ಹೆಸರು 'ರಾಮೇಶ್ವರಿ'. ಈ ದಂಪತಿಗಳಿಗೆ ಮೂರು ಗಂಡು ಮಕ್ಕಳೂ ಮೂರು ಹೆಣ್ಣು ಮಕ್ಕಳೂ ಇದ್ದರು. ಪ್ರಾಣ್, ಸನ್.೧೯೪೫ ರಲ್ಲಿ 'ಶುಕ್ಲಾ ಅಹ್ಲೂವಾಲಿಯ'ರನ್ನು ಮದುವೆಯಾದರು. ಇವರಿಗೆ, ಎರಡು ಗಂಡುಮಕ್ಕಳು, ಅರವಿಂದ್, ಸುನಿಲ್, ಮತ್ತು ಒಬ್ಬ ಮಗಳು ಪಿಂಕಿ ಭಲ್ಲಾ.

ಓದಿನಲ್ಲಿ ಅದರಲ್ಲೂ ಗಣಿತದಲ್ಲಿ ಪ್ರಾಣ್ ಅತಿ ಪ್ರತಿಭಾಶಾಲಿಯಾಗಿದ್ದರು. ಅವರ ತಂದೆಯವರಿಗೆ ಬೇರೆ ಬೇರೆ ಊರಿಗೆ ವರ್ಗವಾಗುತ್ತಿದ್ದುದರಿಂದ ಹಲವಾರು ಊರುಗಳಲ್ಲಿ ಅವರ ಶಿಕ್ಷಣ ನಡೆದು 'ರಾಂಪುರದಲ್ಲಿನ ರಝಾ ಹೈಸ್ಕೂಲಿ'ನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದೆ ಅವರು ಛಾಯಾಗ್ರಾಹಕನಾಗಬೇಕೆಂಬ ಆಶಯದಿಂದ ದೆಹಲಿಯಲ್ಲಿ 'ಎ. ದಾಸ್ ಅಂಡ್ ಕಂಪೆನಿ'ಯಲ್ಲಿ ತರಬೇತಿ ಅಭ್ಯರ್ಥಿಯಾಗಿ ಸೇರಿಕೊಂಡರು. ಆದರೆ ಅವರು ರೂಪುಗೊಂಡಿದ್ದು ಕಲಾವಿದನಾಗಿ. ತಮ್ಮ ಕೆಲಸದ ನಿಮಿತ್ತ ಸಿಮ್ಲಾಗೆ ಹೋದಾಗ ಪ್ರಾಣ್, ನಟ ಮದನ್ ಪುರಿ ಅವರು ರಾಮನಾಗಿ ಅಭಿನಯಿಸಿದ್ದ ರಾಮಲೀಲಾ ನಾಟಕದಲ್ಲಿ ಸೀತೆಯ ಪಾತ್ರಧಾರಿಯಾಗಿ ಅಭಿನಯಿಸಿದರು.

ಚಿತ್ರರಂಗದಲ್ಲಿ ನಾಯಕನಟನಾಗಿಸಂಪಾದಿಸಿ

ಮುಂದೆ ಪ್ರಾಣ್ ಲಾಹೋರಿಗೆ ಭೇಟಿ ಕೊಟ್ಟಾಗ, ಪ್ರಸಿದ್ಧ ಬರಹಗಾರ ವಲಿ ಮಹಮ್ಮದ್ ವಲಿ ಅವರೊಡನೆ ಒದಗಿದ ಅನಿರೀಕ್ಷಿತ ಭೇಟಿ ಅವರನ್ನು ಚಿತ್ರರಂಗದಲ್ಲಿ ನಾಯಕನಟನನ್ನಾಗಿಸಿತು. ಹೀಗೆ ಅವರು ನಟಿಸಿದ ಪ್ರಥಮ ಚಿತ್ರ ೧೯೪೦ರ ವರ್ಷದಲ್ಲಿ ತಯಾರಾದ, ಪಂಚೋಲಿ ಅವರ ಪಂಜಾಬಿ ಚಿತ್ರ ‘ಯಮ್ಲಾ ಜಾತ್’. ಮುಂದೆ ೧೯೪೧ರ ವರ್ಷದಲ್ಲಿ ಅವರು ‘ಚೌಧರಿ’, ‘ಖಜಾಂಚಿ’ ಎಂಬ ಚಿತ್ರಗಳಲ್ಲಿ ಪುಟ್ಟ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರು. ೧೯೪೨ರ ವರ್ಷದಲ್ಲಿ ತಯಾರಾದ ‘ಖಾಂದಾನ್’ ಚಿತ್ರದಲ್ಲಿ ಪ್ರಾಣ್ ನೂರ್ ಜೆಹಾನ್ ಜೊತೆಯಲ್ಲಿ ಪ್ರಣಯರಾಜನಾಗಿ ಅಭಿನಯಿಸಿದರು. ಹೀಗೆ ಪ್ರಾಣ್ ೧೯೪೯ರ ವರ್ಷದವರೆಗೆ ‘ಕೈಸೆ ಕಹೂಂ’, ‘ಕಾಮೋಶ್ ನ ಗಹೇನ್’ ಮುಂತಾದ ೨೨ ಚಿತ್ರಗಳ ನಾಯಕನಟರಾಗಿ ಅಭಿನಯಿಸಿದರು. ಹೀಗೆ ಪ್ರಾಣ್ ಅವರು ಈ ಅವಧಿಯಲ್ಲಿ ನಟಿಸಿದ್ದ ಚಿತ್ರಗಳಲ್ಲಿ ೧೮ಚಿತ್ರಗಳು ಲಾಹೋರಿನಲ್ಲೇ ತಯಾರಾಗಿದ್ದವು. ೧೯೪೭ರ ದೇಶ ವಿಭಜನೆಯ ಸಮಯದಲ್ಲಿ ಭಾರತಕ್ಕೆ ಬರಬೇಕಾದ ಅನಿವಾರ್ಯತೆಯಿದ್ದ ಪ್ರಾಣ್ ಅವರ ವೃತ್ತಿ ಗೆ ಅಲ್ಪಕಾಲದ ವಿರಾಮ ಉಂಟಾಯಿತು. ೧೯೪೭ರ ಸಮಯದಲ್ಲಿ ತಯಾರಾದ ಅವರು ‘ತರಾಷ್’, ‘ಖಾನಾಬಾದೋಷ್’ ಮುಂತಾದ ಚಿತ್ರಗಳು ಸ್ವಾತಂತ್ರ್ಯಾನಂತರದಲ್ಲಿ ಪಾಕಿಸ್ತಾನದಲ್ಲಿ ಮಾತ್ರ ಬಿಡುಗಡೆಯಾದವು.

ಸ್ವಾತಂತ್ರ್ಯಾನಂತರ ೧೯೪೮-೬೬ರ ಅವಧಿಯಲ್ಲಿಸಂಪಾದಿಸಿ

ಮುಂದೆ ಅವರು ಲಾಹೋರಿನಿಂದ ಮುಂಬಯಿಗೆ ವಲಸೆ ಬಂದಾಗ ಕೈಯಲ್ಲಿ ಕೆಲಸವಿಲ್ಲದೇ ಅಭಿನಯಕ್ಕಾಗಿ ಅವಕಾಶಗಳನ್ನು ಅರಸುವುದರೊಂದಿಗೆ ಹೊಟ್ಟೆಪಾಡಿಗಾಗಿ ಇತರ ಕಾಯಕಗಳನ್ನೂ ಮಾಡ ತೊಡಗಿದರು. ಈ ಸಮಯದಲ್ಲಿ ಅವರು ಮೆರಿನ್ ಡ್ರೈವ್ ಪ್ರದೇಶದಲ್ಲಿರುವ ಡೆಲ್ಮಾರ್ ಹೋಟೆಲಿನಲ್ಲಿ ಎಂಟುತಿಂಗಳುಗಳ ಕಾಲ ಕೆಲಸಮಾಡಿದರು. ೧೯೪೮ರ ವರ್ಷದಲ್ಲಿ ಬರಹಗಾರ ಸಾದತ್ ಹಸನ್ ಮಾಂಟೋ ಮತ್ತು ನಟ ಶ್ಯಾಮ್ ಅವರ ಸಹಾಯದಿಂದ ಚಲನಚಿತ್ರರಂಗದಲ್ಲಿ ಪುನಃ ಮೊದಲಿನಿಂದ ತಮ್ಮ ವೃತ್ತಿಯನ್ನು ಆರಂಭಿಸಿದರು. ಬಾಂಬೆ ಟಾಕೀಸ್ ಚಿತ್ರ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿದ ಅವರು, ದೇವಾನಂದ್ ಮತ್ತು ಕಾಮಿನಿ ಕೌಶಲ್ ನಟಿಸಿದ ‘ಜಿದ್ದಿ’ ಚಿತ್ರದಲ್ಲಿ ಅಭಿನಯಿಸಿದರು. ಇದು ದೇವಾನಂದ್ ಅವರಿಗೆ ದೊಡ್ಡ ರೀತಿಯಲ್ಲಿ ಬ್ರೇಕ್ ನೀಡಿದ ಚಿತ್ರ. ಈ ಚಿತ್ರದ ನಂತರ ಪ್ರಾಣ್ ಅವರು ಹಿಂದಿರುಗಿ ನೋಡಲೇ ಇಲ್ಲ. ೧೯೫೦ರ ವೇಳೆಗೆ ಕ್ರಮೇಣವಾಗಿ ಅವರು ಚಿತ್ರರಂಗದಲ್ಲಿ ಖಳಪಾತ್ರಧಾರಿಯಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ‘ಜಿದ್ದಿ’ ಚಿತ್ರ ಯಶಸ್ಸಾದ ಒಂದು ವಾರದ ಒಳಗೆ ಅವರು ಮೂರು ಚಿತ್ರಗಳಲ್ಲಿ ಸಹಿ ಮಾಡಿದ್ದರು. ಅವರುಗಳಲ್ಲಿ ಎಸ್ ಎಮ್ ಯೂಸುಫ್ ಅವರ ‘ಗೃಹಸ್ಥಿ’ ವಜ್ರಮಹೋತ್ಸವ ಆಚರಿಸಿತು. ಪ್ರಭಾತ್ ಫಿಲಂಸ್ನ ಅಪರಾಧಿ ಮತ್ತು ವಾಲೀ ಮೊಹಮದ್ ಅವರ ಪುತ್ಲಿ ಮತ್ತೆರಡು ಚಿತ್ರಗಳು. ಇದೇ ವೇಳೆಗೆ ಪ್ರಾಣ್ ಅವರಿಗೆ ಪ್ರೇರೇಪಣೆ ನೀಡಿದ್ದ ಮಹಮದ್ ಅವರು ತಮ್ಮದೇ ಆದ ತಯಾರಿಕಾ ಸಂಸ್ಥೆಯನ್ನು ಮುಂಬಯಿನಲ್ಲಿ ಪ್ರತಿಷ್ಟಾಪಿಸಿದ್ದರು. ೧೯೫೦ರ ಶೀಷ್ ಮಹಲ್, ೧೯೫೫ರ ಜಶಾನ್, ೧೯೫೮ರ ಅದಾಲತ್ ಮುಂತಾದ ಚಿತ್ರಗಳು ಪ್ರಾಣ್ ಅವರ ಸಂಭಾಷಣೆಯ ಕುಶಲತೆ ಮತ್ತು ಅಭಿನಯದ ಶ್ರೇಷ್ಠತೆಗಳಿಗೆ ಪ್ರಸಿದ್ಧವಾದವು.

ಪ್ರಾಣ್ ಅವರಿಗೆ ೫೦-೬೦ರ ದಶಕದ ಎಲ್ಲ ಪ್ರಸಿದ್ಧ ಹೀರೋಗಳಾದ ದಿಲೀಪ್ ಕುಮಾರ್, ದೇವಾನಂದ್ ಮತ್ತು ರಾಜ್ ಕಫೂರ್ ಮುಂತಾದವರ ಚಿತ್ರಗಳಲ್ಲೆಲ್ಲಾ ಖಳನಟ ಪಾತ್ರಗಳು ನಿರಂತರವಾಗಿ ದೊರಕಲಾರಂಭಿಸಿದ್ದವು. ಅಂದಿನ ಪ್ರಸಿದ್ಧ ನಿರ್ದೇಶಕರುಗಳಾದ ಎಂ. ವಿ. ರಾಮನ್, ನಾನಾ ಭಾಯ್ ಭಟ್, ಕಾಳಿದಾಸ್, ರವೀಂದ್ರ ಧಾವೆ, ಐ ಎಸ್ ಜೋಹರ್, ಬಿಮಲ್ ರಾಯ್ ಮುಂತಾದವರು ಪ್ರಾಣ್ ಅವರಿಗೆ ೧೯೫೦ರಿಂದ ೧೯೬೯ರ ವರೆಗಿನ ತಮ್ಮ ಎಲ್ಲ ಚಿತ್ರಗಳಲ್ಲೂ ವಿಧ ವಿಧದ ಖಳ ಪಾತ್ರಗಳನ್ನು ನೀಡಿದ್ದರು. ೧೯೬೮-೧೯೮೨ರ ಕಾಲದಲ್ಲಿ ಪ್ರಾಣ್ ಅವರು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಪೋಷಕ ಪಾತ್ರಧಾರಿಯಾಗಿದ್ದರು. ಹೀಗಾಗಿ ಹಳೆಯ ಕಾಲದ ನಿರ್ಮಾಪಕರುಗಳಿಗೆ ಪ್ರಾಣ್ ಕೈಗೆಟುಕದ ಕಲಾವಿದರಾಗಿದ್ದರು. ಹೀಗಾಗ್ಯೂ ಹೊಸ ಪೀಳಿಗೆಯ ಬಹುತೇಕ ತರುಣ ನಿರ್ಮಾಪಕ ನಿರ್ದೇಶಕರು ಪ್ರಾಣ್ ಅವರನ್ನೇ ತಮ್ಮ ಚಿತ್ರಗಳಿಗೆ ಬಯಸುತ್ತಿದ್ದರು.

ಪ್ರಾಣ್ ಅವರ ದಿಲೀಪ್ ಕುಮಾರ್ ಅಭಿನಯದ ‘ಆಜಾದ್’, ‘ಮಧುಮತಿ’, ‘ದೇವದಾಸ್’, ‘ದಿಲ್ ದಿಯಾ ದರ್ದ್ ಲಿಯಾ’, ‘ರಾಮ್ ಔರ್ ಶ್ಯಾಮ್’ ಮತ್ತು ‘ಆದ್ಮಿ’ ಮುಂತಾದ ಚಿತ್ರಗಳಲ್ಲಿ ಖಳ ಪಾತ್ರಗಳು ಮತ್ತು ‘ಜಿದ್ದಿ’, ‘ಮುನಿಮ್ಜಿ’, ‘ಅಮರ್ ದೀಪ್’, ‘ಜಬ್ ಪ್ಯಾರ್ ಕಿಸೀಸೆ ಹೋತಾ ಹೈ’ ಮುಂತಾದ ಚಿತ್ರಗಳ ಸಹ ಪಾತ್ರಗಳು; ರಾಜ್ ಕಪೂರ್ ಜೊತೆಗಿನ ‘ಆನ್’, ‘ಚೋರಿ ಚೋರಿ’, ‘ಜಾಗತೇ ರಹೋ’, ‘ಚಾಲಿಯ’, ‘ಜಿಸ್ ದೇಶ್ ಮೇ ಗಂಗಾ ಬೆಹ್ತೀ ಹೈ’, ‘ದಿಲ್ ಹಿ ತೋಹ್ ಹೈ’ ಮುಂತಾದವು ಅಪಾರ ಮೆಚ್ಚುಗೆ ಪಡೆದವು. ೧೯೫೬ರಲ್ಲಿ ಅವರು ಪ್ರಧಾನ ಪಾತ್ರಧಾರಿಯಾಗಿದ್ದ ‘ಪಿಲ್ ಪಿಲಿ ಸಾಹೇಬ್’, ‘ಹಲಾಕು’ ಸಹಾ ಭರ್ಜರಿ ಜನಪ್ರಿಯತೆ ಗಳಿಸಿದ್ದವು. ೧೯೫೨ರ ‘ಸಿಂದಾಬಾದ್ ದಿ ಸೈಲರ್’ ಮತ್ತು ೧೯೫೮ರ ‘ಡಾಟರ್ ಆಫ್ ಸಿಂದಾಬಾದ್’ ಚಿತ್ರದ ಕಳ್ಳನ ಪಾತ್ರಗಳು ಹಾಗೂ ೧೯೫೫ರ ‘ಆಜಾದ್’; ಚರಿತ್ರಾರ್ಹ ಚಿತ್ರಗಳಾದ ೧೯೫೨ರ ‘ಆನ್’, ೧೯೫೮ರ ‘ರಾಜ್ ತಿಲಕ್’; ಸಾಮಾಜಿಕ ಚಿತ್ರಗಳಾದ ೧೯೫೫ರ ‘ಬರದಾರಿ’; ಪ್ರೇಮ ಚಿತ್ರಗಳಾದ ೧೯೫೫ ರ ‘ಮುನಿಮ್ಜಿ’ ಮತ್ತು ೧೯೫೭ರ ‘ಆಶಾ’ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯವಂತೂ ಅವರ ಸಾಮರ್ಥ್ಯಕ್ಕೆ ಪುಟವನ್ನಿಟ್ಟಹಾಗಿದ್ದವು.

೧೯೬೦-೭೦ರ ದಶಕದಲ್ಲಿ ಪ್ರಾಣ್ ನಲವತ್ತರ ವಯಸ್ಸಿನ ಗಡಿ ದಾಟಿದ್ದರೂ ತಮ್ಮ ದೇಹದಾರ್ಡ್ಯವನ್ನು ಸಮರ್ಥವಾಗಿರಿಸಿಕೊಂಡು ೨೫-೩೦ರ ವಯಸ್ಸಿನ ಪಾತ್ರಗಳನ್ನೇ ಅಂದಿನ ಹೀರೋಗಳಾದ ಶಮ್ಮಿ ಕಫೂರ್, ಜಾಯ್ ಮುಖರ್ಜಿ, ರಾಜೇಂದ್ರ ಕುಮಾರ್, ಧರ್ಮೇಂದ್ರ ಮುಂತಾದವರೊಡನೆ ಅಭಿನಯಿಸುತ್ತಿದ್ದರು.

೧೯೫೦-೭೦ರ ಸಮಯದಲ್ಲಿ ಪ್ರಾಣ್ ಅಂದರೆ ಅವರು ಅಭಿನಯಿಸುತ್ತಿದ್ದ ಖಳ ಪಾತ್ರಗಳನ್ನು ನೆನೆದರೆ ಎಲ್ಲರಿಗೂ ಒಂದು ರೀತಿಯ ಭಯ ಹುಟ್ಟುತ್ತಿತ್ತು. ೧೯೬೪ರ ‘ಪೂಜಾ ಕೆ ಫೂಲ್’, ‘ಕಾಶ್ಮೀರ್ ಕಿ ಕಲಿ’ ಮುಂತಾದ ಚಿತ್ರಗಳಲ್ಲಿನ ಪ್ರಾಣ್ ಅವರ ಖಳ ಪಾತ್ರ ನಿರ್ವಹಣೆಯಲ್ಲಿ ಕೊಂಚ ಮಟ್ಟಿನ ನಗೆಲೇಪನ ಸಹಾ ಜೊತೆಗೂಡತೊಡಗಿತು. ೧೯೭೦ರ ಸಮಯದಲ್ಲಿ, ೧೯೬೦ರ ದಶಕದ ಹೀರೋಗಳಾದ ದಿಲೀಪ್ ಕುಮಾರ್, ರಾಜ್ ಕಫೂರ್ ಅಂತಹವರು ದಪ್ಪಗಾಗಿದ್ದರಿಂದ ಅವರ ಮಾರುಕಟ್ಟೆ ಇಳಿದು ಹೋಗಿತ್ತು. ನಂತರದ ತಲೆಮಾರಿನವರಾದ ಶಮ್ಮಿ ಕಫೂರ್, ರಾಜೇಂದ್ರ ಕುಮಾರ್ ಅವರ ಮಾರುಕಟ್ಟೆ ಕೂಡಾ ೧೯೭೩ರ ವೇಳೆಗೆ ತಣ್ಣಗಾಗಿ ಹೋಗಿತ್ತು. ಆದರೆ ೧೯೪೮ರಲ್ಲಿ ಜೊತೆಗೂಡಿದ್ದ ಚಿರಯೌವನಿಗರಂತಿದ್ದ ದೇವಾನಂದ್, ಪ್ರಾಣ್ ಒಡನಾಟ ಮಾತ್ರ ೧೯೭೦ – ೧೯೮೦ರ ದಶಕದಲ್ಲೂ ಜಾನಿ ಮೇರಾ ನಾಮ್, ಯೇಹ್ ಗುಲಿಸ್ತಾನ್ ಹಮಾರ, ಜೋಶಿಲಾ, ವಾರಂಟ್ , ದೇಶ್ ಪರದೇಶ್ ಮುಂತಾದ ಚಿತ್ರಗಳ ಮೂಲಕ ನಿರಂತರವಾಗಿ ಮುಂದುವರೆದಿತ್ತು.

ಕಿಶೋರ್ ಕುಮಾರ್ ಮೆಹಮೂದ್ ಅವರುಗಳ ಹಾಸ್ಯಪ್ರಧಾನ ಚಿತ್ರಗಳಲ್ಲಿ ಪ್ರಾಣ್ ಅವರಿಗೆ ಕೂಡಾ ಗಣನೀಯ ಪಾತ್ರಗಳು ದೊರೆತವು. ‘ಚಂ ಚಮಾ ಚಂ’, ‘ಪೆಹ್ಲಿ ಝಲಕ್’, ‘ನಯಾ ಅಂದಾಜ್’, ‘ಆಶಾ’, ‘ಬೇವಫಾ’, ‘ಏಕ್ ರಾಜ್’, ‘ಜಾಲ್ ಸಾಜ್’, ‘ಹಾಲ್ಫ್ ಟಿಕೆಟ್’, ‘ಮನ್-ಮೌಜಿ’, ‘ಸಾಧು ಔರ್ ಸೈತಾನ್’, ‘ಲಾಕೊನ್ ಕೆ ಏಕ್’ ಹೀಗೆ ಇವರ ಒಟ್ಟುಗಾರಿಕೆ ಬಹುಕಾಲವಿತ್ತು.

ಚಿತ್ರರಂಗದ ಉತ್ತರಾರ್ಧ ೧೯೬೭-೧೯೯೦ರ ಅವಧಿಸಂಪಾದಿಸಿ

೧೯೬೭ರ ಮನೋಜ್ ಕುಮಾರ್ ಅವರ ಪ್ರಸಿದ್ಧ ‘ಉಪಕಾರ್’ ಚಿತ್ರದಲ್ಲಿ ‘ಮಾಲಂಗ್ ಚಾಚಾ’ಪಾತ್ರಧಾರಿಯಾಗಿ ಪ್ರಾಣ್ ಅವರಿಗೆ ಸಕಾರಾತ್ಮಕ ಪಾತ್ರ ದೊರಕಿದುದರ ಜೊತೆ ಕಲ್ಯಾಣ್ ಜಿ ಆನಂದಜಿ ಅವರ ಪ್ರಸಿದ್ಧ ಗೀತೆ ‘ಕಸ್ಮೆ ವಾದೇ ಪ್ಯಾರ್ ವಫಾ’ದಂತಹ ಹಾಡಿನ ಅಭಿನಯ ಕೂಡಾ ಮೂಡಿಬಂತು. ಮನೋಜ್ ಕುಮಾರ್ ಅವರ ಇನ್ನಿತರ ಚಿತ್ರಗಳಾದ ಶಹೀದ್, ಪೂರಬ್ ಔರ್ ಪಶ್ಚಿಮ್, ಬೇ-ಇಮಾನ್, ಸನ್ಯಾಸಿ, ದಸ್ ನಂಬರಿ, ಪತ್ತರ್ ಕೆ ಸನಮ್ ಮುಂತಾದ ಚಿತ್ರಗಳಲ್ಲೂ ಪ್ರಾಣ್ ಅವರಿಗೆ ಪ್ರಮುಖ ಪಾತ್ರಗಳಿದ್ದವು. 1960ರ ದಶಕದಲ್ಲಿ ಪ್ರಾಣ್ ಅವರು ಕೆಲವೊಂದು ಬೆಂಗಾಲಿ ಚಿತ್ರಗಳಲ್ಲೂ ಅಭಿನಯಿಸಿದ್ದರು.

೧೯೬೭ರಿಂದ ೧೯೯೭ರ ಅವಧಿಯಲ್ಲಿ ಪ್ರಾಣ್ ಅವರು ‘ಹಂಜೋಲಿ’, ‘ಪರಿಚಯ್’, ‘ಅಂಕೋಂ ಅಂಕೋಂ ಮೇ’, ‘ಜೀಲ್ ಕೆ ಉಸ್ ಪಾರ್’, ‘ಜಿಂದಾ ದಿಲ್ ಜ್ಹೆಹ್ರಿಲಾ ಇನ್ಸಾನ್’, ‘ಹತ್ಯಾರಾ’, ‘ಚೋರ್ ಹೋ ತೋ ಐಸಾ’, ‘ದಾನ್ ದೌಲತ್’, ‘ಜಾನ್ವಾರ್’, ‘ರಾಜ್’, ‘ತಿಲಕ್’, ‘ಬೆವಫಾಯಿ’, ‘ಇಮಾನ್ದಾರ್’, ‘ಸನಮ್ ಬೇವಫಾ’, ‘1942-ಎ ಲವ್ ಸ್ಟೋರಿ’, ‘ತೇರೇ ಮೇರೇ ಸಪ್ನೆ’, ‘ಲವ್ ಕುಶ್’ ಮುಂತಾದ ಹಲವಾರು ಚಿತ್ರಗಳಲ್ಲಿನ ಉತ್ತಮ ಪೋಷಕ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದರು. ಶಶಿಕಫೂರ್ ಅವರೊಡನೆ ಏಳು ಜನಪ್ರಿಯ ಚಿತ್ರಗಳಾದ ‘ಬಿರದಾರಿ’, ‘ಚೋರಿ ಮೇರಾ ಕಾಮ್’, ‘ಪ್ಹಾನ್ಸಿ’, ‘ಶಂಕರ್ ದಾದ’. ‘ಚಕ್ಕರ್ ಪೆ ಚಕ್ಕರ್’, ‘ರಾಹು ಕೇತು’, ‘ಮಾನ ಗಯೇ ಉಸ್ತಾದ್’ ಮತ್ತು ಎರಡು ಸೋತ ಚಿತ್ರಗಳಾದ ‘ಅಪ್ನಾ ಖೂನ್’ ಮತ್ತು ‘ದೋ ಮುಸಾಫಿರ್’ ಚಿತ್ರಗಳಲ್ಲಿ ಪ್ರಾಣ್ ಅವರಿಗೆ ಪ್ರಮುಖ ಪಾತ್ರವಿತ್ತು.

೧೯೬೯ರ ನಂತರದಲ್ಲಿ ಪ್ರಾಣ್ ಅವರಿಗೆ ‘ನನ್ಹಾ ಫ್ಹರಿಶ್ತಾ’, ‘ಧರ್ಮ’, ‘ಏಕ್ ಕುನ್ವರಿ ಏಕ್ ಕುನ್ವರ’, ‘ಜಂಗಲ್ ಮೇ ಮಂಗಲ್’, ‘ರಾಹು ಕೇತು’ ಮುಂತಾದ ಚಿತ್ರಗಳಲ್ಲಿ ಪ್ರಧಾನ ಪಾತ್ರಗಳು ದೊರೆತವು. ೧೯೫೧ರ ವರ್ಷದ ‘ಆಫ್ಸಾನಾ’ದಿಂದ ಮೊದಲ್ಗೊಂಡು ೧೯೮೦ರ ದಶಕದವರೆಗೆ ಪ್ರಾಣ್ ಅವರು ಅಶೋಕ್ ಕುಮಾರ್ ಅವರೊಡಗೂಡಿ ಅಭಿನಯಿಸಿದ ಸಂದರ್ಭದಲ್ಲೆಲ್ಲಾ ಅವರ ಸ್ನೇಹಿತನಾಗಿಯೋ ಇಲ್ಲವೇ ಅವರ ಪ್ರಧಾನ ಪಾತ್ರಕ್ಕೆ ಪೂರಕವಾದಂತಹ ಪಾತ್ರಗಳಲ್ಲೇ ನಟಿಸಿದ್ದರೆಂಬುದು ಒಂದು ವಿಶೇಷ. ಈ ಈರ್ವರೂ ಜೀವನ ಮತ್ತು ವೃತ್ತಿಗಳೆರಡರಲ್ಲೂ ಆಪ್ತ ಸ್ನೇಹಿತರಾಗಿದ್ದು ಒಟ್ಟು ೨೭ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಅಂತದ್ದೇ ಸ್ನೇಹವನ್ನು ಕಿಶೋರ್ ಕುಮಾರರೊಂದಿಗೆ ಸಹಾ ಪ್ರಾಣ್ ಹೊಂದಿದ್ದರು. ಪ್ರಾಣ್ ಅವರ ಮೇಲೆ ಚಿತ್ರಣಗೊಂಡ ಕಿಶೋರ್ ಕುಮಾರ್ ಮತ್ತು ಮಹೇಂದ್ರ ಕುಮಾರ್ ಅವರು ಹಾಡಿದ ಚಿತ್ರಗಳೆಲ್ಲಾ ಜನಪ್ರಿಯಗೊಂಡವು.

೧೯೬೯-೮೨ರ ಕಾಲ ಪ್ರಾಣ್ ಅವರ ಚಿತ್ರಜೀವನದ ಉಚ್ಛ್ರಾಯ ಮಟ್ಟದಲ್ಲಿದ್ದು ಈ ಸಂದರ್ಭದಲ್ಲಿ ಅವರು ತಮ್ಮ ಚಿತ್ರಗಳಲ್ಲಿ ನಾಯಕನಟರುಗಳಾಗಿದ್ದ ವಿನೋದ್ ಖನ್ನ, ಅಮಿತಾಬ್ ಬಚ್ಚನ್, ಶತ್ರುಗನ್ ಸಿನ್ಹಾ, ನವೀನ್ ನಿಶ್ಚಲ್, ರಣಧೀರ್ ಕಫೂರ್ ಮತ್ತು ರಿಷಿ ಕಫೂರ್ ಇವರುಗಳಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಆ ಕಾಲದಲ್ಲಿ ಪ್ರಾಣ್ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಏಕ ಮಾತ್ರ ನಟನೆಂದರೆ ರಾಜೇಶ್ ಖನ್ನಾ ಮಾತ್ರ. ಹೀಗಾಗಿ ಇವರಿಬ್ಬರನ್ನೂ ಒಟ್ಟುಗೂಡಿಸಿದರೆ ಚಿತ್ರದ ಬಂಡವಾಳ ಮಿತಿಮೀರಿ ಹೋಗುತ್ತದೆ ಎಂಬ ಕಾರಣದಿಂದ ಈ ಈರ್ವರೂ ಒಟ್ಟಿಗೆ ನಟಿಸುತ್ತಿದ್ದ ಚಿತ್ರಗಳೇ ಕಡಿಮೆಯಾಗಿದ್ದವು. ೧೯೬೭ರಲ್ಲಿ ಮೂಡಿ ಬಂಡ ಔರತ್ ಚಿತ್ರದಲ್ಲಿ ಪ್ರಾಣ್ ಪ್ರಧಾನ ಪಾತ್ರದಲ್ಲಿ ಪದ್ಮಿನಿಯೊಂದಿಗೆ ನಟಿಸಿದರೆ, ರಾಜೇಶ್ ಖನ್ನಾ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರದಲ್ಲಿ ಈ ಈರ್ವರೂ ‘ಜಾನ್ವಾರ್’, ‘ಔರತ್’, ‘ಮರ್ಯಾದಾ’, ‘ಸೌತೆನ್’, ‘ಬೇವಫಾಯಿ’ ಮತ್ತು ‘ದುರ್ಗಾ’ ಎಂಬ ಯಶಸ್ವೀ ಚಿತ್ರಗಳಲ್ಲಿ ಜೊತೆಗೂಡಿ ಅಭಿನಯಿಸಿದ್ದರು.

ಮುಂಬಂದ ವರ್ಷಗಳಲ್ಲಿ ಪ್ರಾಣ್ ಅವರು ಸಾಹಸ ದೃಶ್ಯಗಳು ಕಡಿಮೆ ಇದ್ದ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ನಿರ್ಮಾಪಕರಿಗೆ ತಮ್ಮ ಸಂಭಾವನೆ ಹೆಚ್ಚು ಹೊರೆಯಾಗದಂತೆ ನಿಗಾ ವಹಿಸಿದ್ದರು. ಅಮಿತಾಬ್ ಬಚ್ಚನ್ ಅವರನ್ನು ಪ್ರಕಾಶ್ ಮೆಹ್ರಾ ಅವರಿಗೆ ಪರಿಚಯಿಸಿ ‘ಜಂಜೀರ್’ ಚಿತ್ರದ ವಿಜಯ್ ಪಾತ್ರ ದೊರಕುವ ಹಾಗೆ ಮಾಡಿದವರು ಪ್ರಾಣ್. ಈ ಪಾತ್ರವನ್ನು ದೇವಾನಂದ್ ಮತ್ತು ಧರ್ಮೇಂದ್ರ ಅವರಿಗೆ ಹೇಳಿದಾಗ ಈ ಈರ್ವರೂ ಇದನ್ನು ತಿರಸ್ಕರಿಸಿದ್ದರಂತೆ. ಪ್ರಾಣ್ ಮತ್ತು ಅಮಿತಾಬ್ ಒಟ್ಟು ೧೪ ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದರು. ‘ಮಜಬೂರ್’, ‘ಜಂಜೀರ್’, ‘ಕಸೌತಿ’, ‘ಡಾನ್’ ಚಿತ್ರಗಳಲ್ಲಿ ಅಮಿತಾಬರಿಗಿಂತ ಪ್ರಾಣ್ ಹೆಚ್ಚಿನ ಸಂಭಾವನೆ ಪಡೆದಿದ್ದರು. ಉಳಿದ ೯ ಚಿತ್ರಗಳಾದ ಅಮರ್ ಅಕ್ಬರ್ ಆಂತೋನಿ, ನಾಸ್ತಿಕ್, ದೋಸ್ತಾನ, ನಸೀಬ್, ಕಾಲಿಯಾ, ಶರಾಬಿ ಮುಂತಾದ ಚಿತ್ರಗಳಲ್ಲಿ ಪ್ರಾಣ್ ಅವರಿಗಿದ್ದದ್ದು ಸಾಹಸ ದೃಶ್ಯಗಳು ಹೆಚ್ಚಿಲ್ಲದ ಪೋಷಕ ಪಾತ್ರಗಳು. ಹೀಗಾಗಿ ಅವರು ಈ ಪಾತ್ರಗಳನ್ನು ಕಡಿಮೆ ಸಂಭಾವನೆಗೆ ನಿರ್ವಹಿಸಿದರು.

ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅಶೋಕ್ ಕುಮಾರ್ ಮತ್ತು ಪ್ರಾಣ್ ಇಬ್ಬರು ಮಾತ್ರವೇ ಅತೀ ಹೆಚ್ಚಿನ ಗಲ್ಲಾ ಪೆಟ್ಟಿಗೆ ಯಶಸ್ಸು ಮತ್ತು ಇಳಿಮುಖವಿಲ್ಲದಂತಹ ಬೇಡಿಕೆ ಉಳಿಸಿಕೊಂಡಿದ್ದ ಕಲಾವಿದರು. ಎಪ್ಪತ್ತು, ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಪ್ರಾಣ್ ಕಡಿಮೆ ಸಂಖ್ಯೆಯಲ್ಲಿ ಖಳ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದರು. ೧೯೮೬ ಮತ್ತು ೯೦ರಲ್ಲಿ ಅವರು ಎರಡು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದರು. ೧೯೯೧ರಲ್ಲಿ ಕನ್ನಡದಲ್ಲಿ ‘ಹೊಸ ರಾಗ’ ಎಂಬ ಚಿತ್ರದಲ್ಲಿ ನಟಿಸಿದರು.

ಪ್ರಸಿದ್ಧ ನಿರ್ದೇಶಕ ಪ್ರಕಾಶ್ ಮೆಹ್ರಾ ಅವರು ತಮ್ಮ ೯ ಜನಪ್ರಿಯ ಚಿತ್ರಗಳಾದ ‘ಏಕ್ ಕುನ್ವರಿ ಏಕ್ ಕುನ್ವರ’, ‘ಜಂಜೀರ್’, ‘ಆನ್ ಬಾನ್’, ‘ಖಲೀಫಾ’, ‘ಜ್ವಾಲಾಮುಖಿ’, ‘ಶರಾಭಿ’, ‘ಮುಖದ್ದರ್ ಕಾ ಸಿಖಂದರ್’, ‘ಮೊಹಬ್ಬತ್ ಕೆ ದುಷ್ಮನ್’, ‘ಜಾದುಗರ್’ಗಳಲ್ಲಿ ಪ್ರಾಣ್ ಅವರನ್ನು ಬಳಸಿದ್ದರು. ಮನಮೋಹನ್ ದೇಸಾಯಿ ಅವರಿಗಂತೂ ಪ್ರಾಣ್ ಅಂದರೆ ಪ್ರಾಣ. ಅವರ ‘ಚಾಲಿಯಾ’, ‘ಬ್ಲಫ್ ಮಾಸ್ಟರ್’, ‘ಧರಂ ವೀರ್’, ‘ನಸೀಬ್’, ‘ಅಮರ್ ಅಕ್ಬರ್ ಆಂತೋನಿ’ ಚಿತ್ರಗಳಲ್ಲಿ ಪ್ರಾಣ್ ಇದ್ದರು. ಸುಭಾಷ್ ಘೈ ಅವರ ‘ವಿಶ್ವನಾಥ್’, ‘ಕರ್ಜ್’, ‘ಕ್ರೋಧಿ’ ಚಿತ್ರಗಳಲ್ಲೂ ಪ್ರಾಣ್ ಇದ್ದರು.

೧೯೯೦ರ ನಂತರದಲ್ಲಿ ಪ್ರಾಣ್ ತಮ್ಮ ಆರೋಗ್ಯದ ದೃಷ್ಟಿಯಿಂದ ಪಾತ್ರಗಳನ್ನು ತಿರಸ್ಕರಿಸುತ್ತಾ ಬಂದರು. ಅಮಿತಾಬ್ ಬಚ್ಚನ್ನರು ಚಿತ್ರರಂಗದಲ್ಲಿ ಅಪಾರ ಸೋಲಿನಿಂದ ಹತಾಶೆಗೊಂಡಿದ್ದ ದಿನಗಳಲ್ಲಿ ಪ್ರಾಣ್, ಅಮಿತಾಬರ ಸ್ವಯಂ ನಿರ್ಮಾಣದ ‘ಮೃತ್ಯುದಾತಾ’ ಮತ್ತು ‘ತೇರೇ ಮೇರೇ ಸಪನೇ’ ಚಿತ್ರಗಳನ್ನು ಒಪ್ಪಿಕೊಂಡು ನಟಿಸಿದರು. ಇದರ ಹೊರತಾಗಿ ಅವರು ಇನ್ಯಾವುದೇ ಆಹ್ವಾನಗಳನ್ನೂ ಒಪ್ಪಿಕೊಳ್ಳಲಿಲ್ಲ. ೨೦೦೦ದ ವರ್ಷದ ನಂತರದಲ್ಲಿ ಅವರು ಕೆಲವೊಂದು ಗೌರವ ಅತಿಥಿ ಪಾತ್ರಗಳಲ್ಲಿ ದರ್ಶನ ನೀಡಿದ್ದುಂಟು.

ಪ್ರಾಣ್ ಎಂಬ ಸ್ವರೂಪಸಂಪಾದಿಸಿ

ಮಕ್ಕಳು ಗಲಾಟೆ ಮಾಡಿದರೆ 'ಪ್ರಾಣ್ ಬಂದ್ರು' ಎಂದು ಪೋಷಕರು ಹೆದರಿಸುತ್ತಿದ್ದ ಕಥೆ ಒಂದು ರೀತಿಯದ್ದಾದರೆ, ಇಡೀ ಚಿತ್ರರಂಗದಲ್ಲಿ ‘ಪ್ರಾಣ್ ಸಾಹೇಬ್’ ಅಂದರೆ ಒಂದು ಗೌರವಾನ್ವಿತ ವ್ಯಕ್ತಿತ್ವ. ಪ್ರಾಣ್ ತಮ್ಮ ಪಾತ್ರಗಳಲ್ಲಿ ಅಭಿನಯಿಸುವಾಗ ಒಂದು ಚಿತ್ರದಲ್ಲಿ ಹೇಳುವ 'ಬರ್ಕ್ಹುರ್ದಾರ್', ಎನ್ನುವ ಡಯಲಾಗ್, ಅತ್ಯಂತ ಜನಪ್ರಿಯತೆ ಗಳಿಸಿದೆ.ಪ್ರಾಣ್ ಮಾತನಾಡುವಾಗ ಅವರ ಧ್ವನಿ ಹೃದಯದಿಂದ ಬರುತ್ತಿತ್ತು. ಮಾತಿನಲ್ಲಿ ಒಂದು ಗತ್ತು ಇತ್ತು. ಅವರ ಮಾತಿನ ಧಾಟಿಯನ್ನು ನಾವು,'ಜಂಜೀರ್' ಚಿತ್ರದಲ್ಲಿ ಕಾಣಬಹುದು : "ಈಸ್ ಇಲಾಖೆ ಮೇ ನಯೇ ಆಯೆ ಹೊ ಸಾಹೇಬ್; ವರ್ನಾ ಶೇರ್ ಖಾನ್ ಕೊ ಕೌನ್ ನಹಿ ಜಾನ್ತಾ" ಹಾಗೂ 'ಜಿಸ್ ದೇಸ್ ಮೇ ಗಂಗಾ ಬೆಹ್ತಿ ಹೈ' ಚಿತ್ರದಲ್ಲಿ, "ತುಮ್ಹಾರ ಬಾಪ್ ರಾಕಾ",

ಪ್ರಾಣ್ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಗಳುಸಂಪಾದಿಸಿ

 • ಪ್ರಾಣ್ ಮೊಟ್ಟಮೊದಲು ಮುಂಬಯಿಗೆ ಬಂದಾಗ, 'ತಾಜ್ ಮಹಲ್ ಹೋಟೆಲ್' ನಲ್ಲಿ ವಾಸವಾಗಿದ್ದರು. ಮುಂಬಯಿನಲ್ಲಿ ಆಗ ಅವರು ನಿರುದ್ಯೊಗಿಯಾಗಿದ್ದರು.ಊರಿನಿಂದ ತಂದ ಹಣ ಬೇಗ ವ್ಯಯವಾಗಿ, ಚಿಕ್ಕ ಹೋಟೆಲ್ ಗಳಲ್ಲಿ ಗೆಸ್ಟ್ ಹೌಸ್ ಗಳಲ್ಲಿ ಇರಬೇಕಾಗಿ ಬಂತು. ಸನ್. ೧೯೫೪ ರ ವರೆಗೆ ಬಾಡಿಗೆ ಮನೆಗಳಲ್ಲಿ ವಾಸ್ತವ್ಯ. 'ಪಾಲಿ ಹಿಲ್' ನಲ್ಲಿ ೨ ಬೆಡ್ ರೂಂ ಫ್ಲಾಟ್ ಬಾಡಿಗೆಗೆ ಗೊತ್ತುಮಾಡಿಕೊಂಡರು. ನಂತರ 'ಮಝಗಾಂ'(ಸೆಂಟ್ರೆಲ್ ಮುಂಬಯಿ)ನಲ್ಲಿ ವಾಸವಾಗಿದ್ದರು. ಕಿರಿಯ ಮಗಳು 'ಪಿಂಕಿ,' ೩ ವರ್ಷದವಳಿದ್ದಾಗ,'ಬಾಂದ್ರದ ಯೂನಿಯನ್ ಪಾರ್ಕ್' ನಲ್ಲಿ ಒಂದು 'ಬಂಗಲೆ' ಖರೀದಿಸಿದರು.
 • ಪ್ರಾಣ್ ಖರೀದಿಸಿದ ಮೊದಲ ಕಾರು,'ಹಿಲ್ಮನ್'.
 • 'ಜಂಗಲ್ ಮೇ ಮಂಗಲ್' ಎಂಬ ಚಿತ್ರದಲ್ಲಿ ಮೊಟ್ಟಮೊದಲು 'ಡಬಲ್ ರೋಲ್' ನಲ್ಲಿ ಕಾಣಿಸಿಕೊಂಡರು.
 • ೧೯೪೯ ರಲ್ಲಿ 'ಬಡಿ ಬೆಹೆನ್' ಎಂಬ ಚಿತ್ರದಲ್ಲಿ ನಟಿಸುವಾಗ ಸಿಗರೆಟ್ ಸೇದಿ, ರಿಂಗ್ ತರಹ ಹೊಗೆ ಬಿಡುವ ಅಭ್ಯಾಸ ಮಾಡಿಕೊಂಡರು.
 • ೧೯೫೦ ರಿಂದ ೧೯೯೦ ರ ತನಕ ಹಲವು ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಆ ತರಹ ಸಿಗರೇಟ್ ಸೇದಿ ಹೊಗೆ ರಿಂಗ್ ಬಿಡಲು ಬೇಡಿಕೆ ನೀಡಿದರು.
 • ಸ್ಮೋಕ್ ಪೈಪ್ ಅವರಿಗೆ ಬಹಳ ಪ್ರಿಯ-ಸಂಗ್ರಹಗಳಲ್ಲೊಂದು. 'ವಾಕಿಂಗ್ ಸ್ಟಿಕ್ಸ್ ಸಂಗ್ರಹ' ಮತ್ತು 'ನಾಯಿಗಳ ಸಂಗ್ರಹ'.
 • ೧೯೭೮ ರಲ್ಲಿ 'ಡಾನ್' ಚಿತ್ರದಲ್ಲಿ ಅಮಿತಾಬ್ ಜೊತೆ ನಟಿಸಿದಾಗ, ಅವರ ಸಂಭಾವನೆ, ೭.೫ ಲಕ್ಷ ರೂಪಾಯಿಗಳು. ಅಮಿತಾಬ್ ರವರ ಸಂಭಾವನೆ, ೨.೫ ಲಕ್ಷ ರೂಪಾಯಿಗಳು.
 • ೧೯೭೦ ರಲ್ಲಿ ತಮ್ಮದೇ ಆದ 'ವಿತರಣ ಸಂಸ್ಥೆ'ಯನ್ನು ದೆಹಲಿಯಲ್ಲಿ ಸ್ಥಾಪಿಸಿದ್ದರು.
 • 'ಸಬ್ ಸೆ ಬಡಾ ರುಪಯ್ಯಾ' ಎಂಬ ದೂರದರ್ಶನದ ಟೆಲಿವಿಶನ್ ಧಾರಾವಾಹಿಯಲ್ಲಿ ಅಭಿನಯಿಸಿದರು.
 • ರಾಜ್ಕಪೂರ್ ನಿರ್ಮಿಸಿದ 'ಬಾಬಿ' ಚಿತ್ರದಲ್ಲಿ 'ಪ್ರಾಣ್' ಅವರು ಮಾಡಿದ ಪಾತ್ರಕ್ಕೆ ಆಗಿನ ಅವರ ಫೀಸ್ ಕೊಡುವ ಸಾಮರ್ಥ್ಯವಿರದೆ ರಾಜ್ಕಪೂರ್ ಪೇಚಾಡಿಕೊಂಡಾಗ, ಕೇವಲ ಒಂದು ರೂಪಾಯಿ ಮಾತ್ರ ತೆಗೆದುಕೊಂಡರು.
 • ಒಂದು ಸಮಯದಲ್ಲಿ, ಪ್ರಾಣ್, ಅಮಿತಾಬ್, ವಿನೋದ್ ಖನ್ನ, ನವೀನ್ ನಿಶ್ಚಲ್, ಶತ್ರುಘ್ನ ಸಿಂಹ, ರಣ್ಧೀರ್ ಕಪೂರ್, ರಿಷಿ ಕಪೂರ್, ರವರಿಗಿಂತ ಅಧಿಕ ಸಂಭಾವನೆಗಳಿಸುತ್ತಿದ್ದರು.೧೯೭೦-೧೯೮೨ ರಲ್ಲಿ, ಕೇವಲ ರಾಜೇಶ್ ಖನ್ನ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಸನ್.೧೯೭೦-೧೯೮೯ ಸಮಯದಲ್ಲಿ, ಪ್ರಾಣ್ ರವರಿಗೂ ಸಂಜೀವ್ ಕುಮಾರ್ ಧರ್ಮೇಂದ್ರ,ಶಶಿಕಪೂರ್, ಒಟ್ಟಿಗೆ ಅಭಿನಯಿಸಿದಾಗ, ಅವರಷ್ಟೇ ಹಣ ಪಡೆಯುತ್ತಿದ್ದರು.
 • ೨ ತೆಲುಗು ಚಿತ್ರಗಳಲ್ಲಿ, ೧ ೯ ೮ ೬,ರಲ್ಲಿ, 'ತಂದ್ರ ಪಾಪರಾಯುಡು', ೧೯೯೦ ರಲ್ಲಿ ಚಿರಂಜೀವಿ ಜೊತೆಗೆ, 'ಕೊಡಮ ಸಿಂಹಂ' ಎಂಬ ಚಿತ್ರಗಳಲ್ಲಿ ಅಭಿನಯಿಸಿದರು. ಸನ್.೧೯೯೧ ರಲ್ಲಿ 'ಹೊಸರಾಗ'ವೆಂಬ ಕನ್ನಡ ಚಿತ್ರದಲ್ಲಿ ಅಭಿನಯಿಸಿದರು.

ಪ್ರಶಸ್ತಿ ಗೌರವಗಳುಸಂಪಾದಿಸಿ

ಪ್ರಾಣ್ ಅವರಿಗೆ ಸಂದ ಗೌರವಗಳು ಅನೇಕವಾದವು.

 • ೧೯೬೭, ೧೯೬೯, ೧೯೭೨ರ ವರ್ಷಗಳಲ್ಲಿ 'ಫಿಲಂ ಫೇರ್ ಪತ್ರಿಕೆಯ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ',
 • ಸನ್. ೧೯೯೭ ರಲ್ಲಿ 'ಫಿಲ್ಮ್ ಫೇರ್ ಪತ್ರಿಕೆಯ ಜೀವಮಾನ ಸಾಧನೆಯ ಪ್ರಶಸ್ತಿಗಳು',
 • ಸನ್. ೨೦೦೦ ವರ್ಷದಲ್ಲಿ 'ಸ್ಟಾರ್ ಡಸ್ಟ್ ಪತ್ರಿಕೆಯ ಶತಮಾನದ ಶ್ರೇಷ್ಠ ಖಳ ನಟರೆಂಬ ಗೌರವ',
 • ಸನ್. ೨೦೦೧ರ ವರ್ಷದಲ್ಲಿ 'ಭಾರತ ಸರ್ಕಾರದ ಪದ್ಮಭೂಷಣ ಗೌರವ'ಗಳು ಸಂದಿವೆ.
 • ಸನ್. ೨೦೧೦ ರಲ್ಲಿ, 'ಅಮೆರಿಕದ ಸಿ.ಎನ್.ಎನ್ ಟೆಲಿವಿಶನ್ ನ, ಏಷ್ಯಾದ ೨೫ ಶ್ರೇಷ್ಠ ಕಲಾವಿದರಲ್ಲಿ ಪ್ರಾಣ್ ಒಬ್ಬರು'; ಎಂಬ ಅಂತರರಾಷ್ಟ್ರೀಯ ಸಮೀಕ್ಷೆ,
 • ಸನ್. ೨೦೧೨ ರ, ಭಾರತೀಯ ಚಿತ್ರರಂಗದ ಶ್ರೇಷ್ಠ ಗೌರವವಾದ 'ವರ್ಷ ೪೪ ರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'ಯ ಘೋಷಣೆ,
 • 'ಪ್ರಾಣ್ ರವರ ಆತ್ಮಕಥೆಯ ಹೆಸರು'-'ಪ್ರಾಣ್' ಎಂದು.

ಬೇರೆ ಹಲವು ಪ್ರಶಸ್ತಿಗಳುಸಂಪಾದಿಸಿ

 • ದ ಶಿರೋಮಣಿ ಅವಾರ್ಡ್,
 • ೪ ಪ್ರಶಸ್ತಿಗಳು ಶಾಮಾ ಸುಷ್ಮಾ ಗ್ರುಪ್
 • ಸ್ಕ್ರೀನ್ ವಿಡಿಯೋಕಾನ್ ಪ್ರಶಸ್ತಿ
 • ಸಿನಿಮಾ ವಲಯದಲ್ಲಿ ಉತ್ಕ್ರುಷ್ಟತೆಗಾಗಿ ಲಕ್ಸ್ ಜೀ ಸಿನೆಮಾ ಅವಾರ್ಡ್,
 • ಆಂಧ್ರ ಪ್ರದೇಶ್ ಫಿಲ್ಮ್ ಜರ್ನಲಿಸ್ಟ್ಸ್ ಅಸೋಸಿಯೇಶನ್
 • ಉತ್ತರ ಪ್ರದೇಶ್ ಫಿಲ್ಮ್ ಜರ್ನಲಿಸ್ಟ್ಸ್ ಅಸೋಸಿಯೇಶನ್
 • ಪಂಜಾಬ್ ಕಲಾ ಸಂಘಮ್
 • ಇಂಡಿಯನ್ ಮೋಶನ್ ಪಿಚರ್ಸ್ ಪ್ರಾದ್ಯುಸರ್ಸ್ ಅಸೋಸಿಯೇಶನ್ ಅವಾರ್ಡ್,
 • ದ ಲೈಯನ್ಸ ಕ್ಲಬ್ ಅವಾರ್ಡ್,

ಹವ್ಯಾಸಗಳುಸಂಪಾದಿಸಿ

ಪ್ರಾಣ್ ರವರ ಪ್ರಮುಖ ಹವ್ಯಾಸಗಳಲ್ಲಿ ಫುಟ್ಬಾಲ್ ಹಾಕಿ ಕ್ರಿಕೆಟ್,ಕ್ರೀಡೆಗಳನ್ನು ವೀಕ್ಷಿಸುವುದು,ಪುಸ್ತಕ ಓದುವುದು,ಸಾಕುನಾಯಿಗಳನ್ನು ನೋಡಿ,ಆಡಿಸಿ ಅವುಗಳ ಜೊತೆ ಇರುವುದು, ಮೊದಲಾದವುಗಳು. ತಾವು ಒಳ್ಳೆಯ ಆಟಗಾರ, ಸದಾ ಸ್ಪೋರ್ಟ್ಸ್ ಬಗ್ಗೆ ಆಸಕ್ತರಾದ ಪ್ರಾಣ್,ಸನ್.೧೯೫೦ ರಲ್ಲಿ ತಮ್ಮದೇ ಆದ 'ಡೈನಮೊಸ್ ಫುಟ್ಬಾಲ್ ಕ್ಲಬ್' ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಹಲವು ಸ್ಪೋರ್ಟ್ಸ್ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ದುಡಿದರು. ಅವುಗಳಲ್ಲಿ ಮುಖ್ಯವಾದದ್ದು :

 • 'ಪಂಜಾಬ್ ಅಸೋಸಿಯೇಶನ್, ಮುಂಬಯಿ',
 • 'ಸಿ.ಸಿ.ಐ. ಕ್ಲಬ್ ಮುಂಬಯಿ',
 • 'ಬಾಂಬೆ ಪ್ರಾವಿನ್ಸ್ಹಿಯಲ್ ಹಾಕಿ ಅಸೋಸಿಯೇಶನ್',
 • 'ವೆಸ್ಟೆರ್ನ್ ಇಂಡಿಯನ್ ಫುಟ್ಬಾಲ್ ಅಸೋಸಿಯೇಶನ್ ಮುಂಬಯಿ,'
 • 'ಚೆಲ್ಮ್ಸ್ ಫೋರ್ಡ್ ಕ್ಲಬ್, ದೆಹಲಿ',
 • 'ಪ್ರೆಸ್ ಕ್ಲಬ್ ಆಫ್ ಇಂಡಿಯ ದೆಹಲಿ',
 • 'ದ ಒಟ್ಟರ್ಸ್ ಕ್ಲಬ್ ಬಾಂಬೆ',

ಸಮಾಜ ಸೇವೆಯಲ್ಲಿಸಂಪಾದಿಸಿ

ತಮ್ಮ ಪ್ರಮುಖ ವೃತ್ತಿಯಾದ,ಸಿನಿಮಾ ವಲಯದಲ್ಲಿ ತಮ್ಮ ಹೆಚ್ಚುಸಮಯ ಕಳೆದರೂ, ಇತರ ಸಮಾಜಸೇವಾ ಕಾರ್ಯಕ್ರಮಗಳಲ್ಲೂ ಆಸಕ್ತಿ ವಹಿಸುತ್ತಿದ್ದರು.

 • ಚೀಫ್ ಮಿನಿಸ್ಟರ್ಸ್ ರಿಲೀಫ್ ಫಂಡ್,
 • ಮರಾಠಿ ಶಿಕ್ಷಣ್ ಸಂಸ್ಥ,
 • ದ ಫಿಲ್ಮ್ ಇಂಡಸ್ಟ್ರಿಸ್ ವೆಲ್ಫೇರ್ ಟ್ರಸ್ಟ್,
 • ಹಲವಾರು ಚಾರಿಟಿ ಇವೆಂಟ್ಸ್ ಆಯೊಜಿಸಿದ್ದಾರೆ. ಕ್ರಿಕೆಟ್ ಮ್ಯಾಚ್, ಮತ್ತು ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸಮಾಡುವ ಜನರಿಗಾಗಿ, 'ಹೋಪ್-೮೬' ಮತ್ತು 'ಹೋಪ್-೮೭' ಗಳು.
 • 'ದಿವಂಗತ ನವಾಬ್ ಆಲಿ ಯವರ ಜಂಗ್' ಜೊತೆ ಸೇರಿ ಅನೇಕ ಧರ್ಮಾರ್ಥ-ಸಹಾಯ ನಿಧಿಗಳು. 'ಬಂಗ್ಲಾ ದೇಶ್ ಶರಣಾರ್ಥಿಗಳಿಗಗಾಗಿ', 'ಕಿವುಡರು ಮತ್ತು ಮೂಕರ ಸಹಾಯ'ಕ್ಕಾಗಿ ದುಡಿಯುತ್ತಿದ್ದಾರೆ.

ಪ್ರಥಮಬಾರಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಮನೆಯಲ್ಲಿಸಂಪಾದಿಸಿ

ಚಿತ್ರ:P.014402513.jpg
'ಪ್ರಾಣ್ ಜೊತೆ ಅವರ ಪರಿವಾರ'

ಸನ್.೧೯೯೭ ರ ಚಿತ್ರೀಕರಣದ ಸಮಯದಲ್ಲೇ ಅವರಿಗೆ ಮೊಣಕಾಲು ಚಿಪ್ಪಿನ ನೋವು ಹೆಚ್ಚಾಯಿತು. ಬಹಳ ಕಾಲದಿಂದ ಅದರ ನೋವನ್ನು ಅನುಭವಿಸುತ್ತಿದ್ದಾರೆ. 'ವೀಲ್ ಛೇರ್' ನಲ್ಲೇ ಕುಳಿತು ಕೆಲವು ಚಿತ್ರಗಳಲ್ಲಿ ಅತಿಥಿನಟನಾಗಿ ನಟಿಸಿದ್ದಾರೆ. ಅವರಿಗೆ ಈಗಾಗಲೇ ಸಂದಿರುವ ಚಿತ್ರರಂಗದ ಶ್ರೇಷ್ಠ ಗೌರವವಾದ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ಸನ್. ೨೦೧೩ ರ, ಮೇ ತಿಂಗಳ ೩ ರಂದು ;ಭಾರತೀಯ ಚಲನಚಿತ್ರರಂಗದ ನೂರನೆಯ ವರ್ಷದ ಆಚರಣೆಯ ಶುಭ ಸಂದರ್ಭ;ದಲ್ಲಿ ದೆಹಲಿಗೆ ಪ್ರಯಾಣಿಸಿ, 'ರಾಷ್ಟ್ರಪತಿ ಪ್ರಣಬ್ ಮುಖರ್ಜಿ'ಯವರ ಹಸ್ತದಿಂದ ಪಡೆಯಲು ಸಾಧ್ಯವಾಗಲಿಲ್ಲ. ೨೦೧೩ ರ, ಮೇ, ೧೦, ಶುಕ್ರವಾರ, ದೆಹಲಿಯಿಂದ 'ವಾರ್ತೆ ಹಾಗೂ ಪ್ರಸಾರಾಂಗ ಖಾತೆಯ ಮಂತ್ರಿ, ಮನೀಷ್ ತಿವಾರಿ, ಸಚಿವ ಉದಯಕುಮಾರ್ ವರ್ಮಾ ಹಾಗೂ ಸಚಿವಾಲಯದ ಫಿಲ್ಮೋತ್ಸವದ ಡೆಲಿಗೇಶನ್ ಜೊತೆ, ನವದೆಹಲಿಯಿಂದ ಮುಂಬಯಿನ 'ಪ್ರಾಣ್ ರವರ ನಿವಾಸಕ್ಕೆ ಬಂದು ಈಗಾಗಲೇ ಘೋಶಿಸಿರುವ 'ಡಾ. ಬಾಬಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪ್ರದಾನಮಾಡಲಾಯಿತು. ಪುತ್ರಿ, 'ಪಿಂಕಿ ಭಲ್ಲಾ' ಮತ್ತು ಮನೆಯ ಸದಸ್ಯರೆಲ್ಲರ ಸಮ್ಮುಖದಲ್ಲಿ ಪ್ರಥಮಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಮಾಡಿರುವುದು ಒಂದು ದಾಖಲೆಯಾಗಿದೆ. 'ಸ್ವರ್ಣ ಕಮಲ', 'ಸ್ಮೃತಿ ಫಲಕ', 'ಶಾಲು', ಹಾಗೂ '೧೦ ಲಕ್ಷ ರೂಗಳ ನಕದು ಬಹುಮಾನ'ವೂ ಇದರ ಜೊತೆ ಸೇರಿದೆ.

ವಿದಾಯಸಂಪಾದಿಸಿ

ಸನ್. ೨೦೧೩ ರ, ಜುಲೈ ೧೨, ಶುಕ್ರವಾರದಂದು ಮುಂಬಯಿನ ಲೀಲಾವತಿ ಆಸ್ಪತ್ರೆಯಲ್ಲಿ ಸುಮಾರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಹಿಂದಿ ಚಿತ್ರರಂಗದ ಖಳನಾಯಕ ಪ್ರಾಣ್, ಕೊನೆಯುಸಿರೆಳೆದರು. ಅವರ ಅಂತ್ಯ ಕ್ರಿಯೆ, ಮುಂಬಯಿನ ಶಿವಾಜಿಪಾರ್ಕ್ ನಲ್ಲಿರುವ ಚಿತಾಗಾರದಲ್ಲಿ ಬಾಲಿವುಡ್ ನ, ಅಪಾರ ಸ್ನೇಹಿತರು, ಬಂಧುವರ್ಗ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ೨೦೧೩ ರ ಜುಲೈ, ೧೩, ಶನಿವಾರ, ಮಧ್ಯಾನ್ಹ ಜರುಗಿತು.[೧]

ಉಲ್ಲೇಖಗಳುಸಂಪಾದಿಸಿ