ಪ್ರಕಟನೆ ಎಂದರೆ ಮರೆಯಾಗಿರುವುದನ್ನು ಬೆಳಕಿಗೆ ತರುವುದು. ಧರ್ಮಶಾಸ್ತ್ರದಲ್ಲಿ ದೈವಿಕವಾಗಿ ಅಥವಾ ಅಪೌರುಷೇಯವಾಗಿ ಮನುಷ್ಯನಿಗೆ ವ್ಯಕ್ತವಾಗುವ ಜ್ಞಾನವನ್ನು ಈ ಹೆಸರಿನಿಂದ (ರೆವಲೇಷನ್) ಕರೆಯಲಾಗಿದೆ.[೧] ಪ್ರಾಟೆಸ್ಟಂಟ್ ಪಂಗಡಕ್ಕೆ ಸೇರಿದ ಕ್ರೈಸ್ತರು ಬೈಬಲ್‍ನಲ್ಲಿ ದೇವರ ವಿಷಯದಲ್ಲಿ ಮಾನವರು ತಿಳಿಯಬೇಕಾದದ್ದೆಲ್ಲವೂ ಸಿಕ್ಕುತ್ತದೆಂದು ನಂಬುತ್ತಾರೆ. ಆದರೆ ರೋಮನ್ ಕ್ಯಾತೊಲಿಕರು ಇದು ಮಾತ್ರವಲ್ಲದೆ ಕ್ರೈಸ್ತ ಸಭೆಯ ಸಂಪ್ರದಾಯದ ಮೂಲಕವೂ ದೈವ ಪ್ರಕಟನೆ ಉಂಟಾಗುತ್ತದೆಂದು ನಂಬುತ್ತಾರೆ. ದೇವರು ಮುಖ್ಯವಾಗಿ ಮಾನವ ಜಾತಿಯ ರಕ್ಷಣಾರ್ಥವಾಗಿ ಯೇಸುವಿನಲ್ಲಿ ತನ್ನನ್ನು ಪ್ರಕಟಿಸಿಕೊಂಡನೆಂತಲೂ ಕ್ರೈಸ್ತ ಮತವೆಂದರೆ ದೇವರ ಕೃಪೆ ಹೇಗೆ ಚಾರಿತ್ರಿಕವಾದ ಯೇಸುವಿನ ವ್ಯಕ್ತಿತ್ವದಲ್ಲಿ ಮಾನವರಿಗೆ ಕೊಡಲ್ಪಟ್ಟಿತೆಂಬುದರ ವಿವರವೆಂತಲೂ ಅವರ ಮತ.

ಬೈಬಲ್‍ನ ಕಡೆಯ ಪುಸ್ತಕಕ್ಕೆ ಪ್ರಕಟನೆ (ಅಪೋಕಲಿಪ್ಸ್) ಎಂದು ಹೆಸರು. ಭವಿಷ್ಯತ್ತಿನಲ್ಲಿ ಕ್ರೈಸ್ತ ಸಭೆಗೂ ಪ್ರಪಂಚಕ್ಕೂ ಸಂಭವಿಸಲಿಕ್ಕಿರುವ ವಿಷಯಗಳನ್ನು ಇದು ತಿಳಿಸುತ್ತದೆ. ಆದ್ದರಿಂದ ಇದನ್ನು ಭವಿಷ್ಯ ದರ್ಶನ ಅಥವಾ ಕಾಲಜ್ಞಾನ ಎನ್ನಬಹುದು. ಇದರ ಕರ್ತನಾರೆಂಬುದು ಚರ್ಚಾಸ್ಪದವಾಗಿದೆ. ಜನ ಪ್ರಾರಂಭದಿಂದ ಈವರೆಗೂ ಇದನ್ನು ಯೇಸುವಿನ ಶಿಷ್ಯರಲ್ಲಿ ಒಬ್ಬನಾದ ಯೋಹಾನನೇ ಬರೆದನೆಂದು ನಂಬುತ್ತಾರೆ. ಇದನ್ನು ಬರೆದಾತ ದಿವ್ಯದರ್ಶನಗಳ ಮೂಲಕ ತನಗೆ ಪ್ರಕಟವಾದಂತೆ, ನೀತಿಗೂ ಅನೀತಿಗೂ ನಡೆಯುವ ಹೋರಾಟವನ್ನು ಕುರಿತು ಸಾಂಕೇತಿಕ ಪದ್ಧತಿಯನ್ನನುಸರಿಸಿ ಬರೆದಿರುತ್ತಾನೆ. ಈ ಗ್ರಂಥದಲ್ಲಿ ಬರೆದಿರುವ ವಿಷಯಗಳ ಮೇಲೆ ಬಗೆಬಗೆಯ ವ್ಯಾಖ್ಯಾನಗಳಿವೆ.

ಕೆಲವರು ಇದರಲ್ಲಿ ಚಾರಿತ್ರಿಕ ಸಭೆಯ ನಿರ್ನಾಮದ ಬಗ್ಗೆ ಧರ್ಮವಿರೋಧಿಯಾದವರು ಮಾಡುವ ಪ್ರಯತ್ನಗಳು ವಿವರಿಸಲ್ಪಟ್ಟಿರುವುದೆಂತಲೂ ಕೆಲವರು ಕ್ರಿ.ಶ. ಮೊದಲನೆಯ ಶತಮಾನದಲ್ಲಿ ಕ್ರೈಸ್ತ ಸಭೆಗೆ ಉಂಟಾದ ಕಷ್ಟಗಳನ್ನೇ ಇದು ಸೂಚಿಸುತ್ತದೆಂತಲೂ ಹೇಳುತ್ತಾರೆ. ಹೇಗಿದ್ದರೂ ವರ್ತಮಾನ ಭವಿಷ್ಯತ್ ಪರಿಸ್ಥಿತಿಗಳೆರಡನ್ನೂ ಅನುಸರಿಸಿ ಅರ್ಥ ಮಾಡದಿದ್ದರೆ ಇದರಲ್ಲಿನ ವಿಷಯ ಪರಿಷ್ಕಾರವಾಗಲಾರದು.

ಗ್ರಂಥದ ವಿವರಗಳು ಹೀಗಿವೆ : 1. ಪೀಠಿಕೆ (ಸಂಧಿ 1) 2. ಏಳು ಸಭೆಗಳಿಗೆ ಆತ್ಮನ ಸಂದೇಶ (ಸಂಧಿ 2), 3. ಹೋರಾಟದ ಕಾಲ ಮತ್ತು ಶ್ರಮ (ಸಂಧಿ 4 ರಿಂದ 7) 4. ಮೆಸ್ಸೀಯನ ಅಂತ್ಯ ಹೋರಾಟ (ಸಂಧಿ 8 ರಿಂದ 14) 6. ಮೆಸ್ಸೀಯನ ಜಯ (ಸಂಧಿ 15 ರಿಂದ 20) 6. ಮೆಸ್ಸೀಯನ ರಾಜ್ಯದ ದರ್ಶನ (ಸಂಧಿ 21 ರಿಂದ 22), 7. ಕಡೇ ಮಾತುಗಳು (ಸಂಧಿ 22 ರಿಂದ 23).

ಉಲ್ಲೇಖಗಳು ಬದಲಾಯಿಸಿ

  1. "What is revelation". Archived from the original on 2019-05-13. Retrieved 2019-05-13.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪ್ರಕಟನೆ&oldid=1056498" ಇಂದ ಪಡೆಯಲ್ಪಟ್ಟಿದೆ