ಪೌರಶಾಸ್ತ್ರ
ಪೌರಶಾಸ್ತ್ರವು (ಪೌರನೀತಿ) ಪೌರತ್ವ, ಸರಕಾರ, ಸಂವಿಧಾನ ಮುಂತಾದ ವಿಷಯಗಳನ್ನು ಕುರಿತ ಅಧ್ಯಯನ ಕ್ಷೇತ್ರ (ಸಿವಿಕ್ಸ್).[೧] ಪ್ರಾಥಮಿಕ ಹಾಗೂ ದ್ವಿತೀಯಕ (ಸೆಕಂಡರಿ) ಶಾಲೆಗಳಲ್ಲಿ ಪೌರಶಾಸ್ತ್ರವನ್ನು ಒಂದು ಅಧ್ಯಯನ ವಿಷಯವಾಗಿ ಗೊತ್ತು ಪಡಿಸುವ ಪದ್ಧತಿ ಇದೆ. ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಸಾಮಾಜಿಕ ಮನೋವಿಜ್ಞಾನ, ಅಂತರರಾಷ್ಟೀಯ ವೈವಹಾರಗಳು, ಸಾಮಾಜಿಕ ನೀತಿಶಾಸ್ತ್ರ, ಕಸುಬುಗಳು ಹಾಗೂ ವೃತ್ತಿಗಳು ಮುಂತಾದವನ್ನೂ ಪೌರಶಾಸ್ತ್ರದ ವ್ಯಾಸಂಗ ಕ್ರಮದಲ್ಲಿ ಸೇರಿಸುವುದುಂಟು. ಈ ಎಲ್ಲ ವಿಷಯಗಳನ್ನೂ ಚರಿತ್ರೆಯನ್ನೂ ಸೇರಿಸಿ ಸಮಾಜ ಪಾಠಗಳು ಎಂದು ಕರೆಯುತ್ತಾರೆ. ನಾನಾ ಸರ್ಕಾರ ಪದ್ಧತಿಗಳು ಮತ್ತು ಅವುಗಳ ಸಂಘಟನೆ, ಅವು ಕೆಲಸಮಾಡುವ ಬಗ್ಗೆ. ಅವುಗಳ ಕಾರ್ಯಭಾರಗಳು, ಪೌರರ ಹಕ್ಕುಗಳು, ಕರ್ತವ್ಯಗಳು, ಪೌರತ್ತ್ವಪ್ರಜ್ಞೆ, ರಾಷ್ಟ್ರೀಯತ್ವ, ವಿಶ್ವ ಸರ್ಕಾರ ಮುಂತಾದ ವಿಚಾರಗಳನ್ನು ಕುರಿತಂತೆ ಮಕ್ಕಳಲ್ಲಿ ಯುಕ್ತವಾದ ಪರಿಕಲ್ಪನೆಗಳನ್ನು ಮೂಡಿಸುವುದು ಪೌರಶಾಸ್ತ್ರ ಭೋದನೆಯ ಉದ್ದೇಶವಾಗಿರುತ್ತದೆ.
ಪೌರಶಾಸ್ತ್ರ ತುಂಬ ಈಚಿನ ಅಧ್ಯಯನ ಕ್ಷೇತ್ರ: ಆಧುನಿಕ ಸರ್ಕಾರಗಳ ವಿಕಾಸದೊಂದಿಗೆ ಇದೂ ಬೆಳೆಯಿತು. ರಾಷ್ತ್ರೀಯತ್ವ ಪರಿಕಲ್ಪನೆ ಮೂಡುವುದಕ್ಕೆ ಹಿಂದೆ ವ್ಯಕ್ತಿಯ ಮನಸ್ಸಿನ ಮೇಲೆ ಧರ್ಮದ ಒಡೆತನವೇ ಸಂಪೂರ್ಣವಾಗಿತ್ತು. ಪ್ರಜಾಪ್ರಭುತ್ವದ ವಿಕಾಸದೊಂದಿಗೆ ಪ್ರಜೆಗಳ ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳನ್ನು ತರ್ಕಸಮ್ಮತವಾಗಿ ರೂಪಿಸುವ ಅವಶ್ಯಕತೆ ಸುವ್ಯಕ್ತವಾಯಿತು. ಒಂದನೆಯ ಮಹಾಯುದ್ಧದ ಫಲವಾಗಿ ರಾಷ್ಟ್ರೀಯತ್ವದ ಜೊತೆಗೆ ವಿಶ್ವ ಪ್ರಜೆತನದ ಪರಿಕಲ್ಪನೆಯೂ ಮೂಡಿತು. ರಾಷ್ಟ್ರದ ಸುಭದ್ರತೆಗಾಗಿ ಪೌರಶಾಸ್ತ್ರವನ್ನು ಮಕ್ಕಳಿಗೆ ಬೋಧಿಸುವ ಅಗತ್ಯದ ಮನವರಿಕೆ ಸ್ಥಿರವಾಯಿತು.
ಭಾರತದಲ್ಲೀ ಬ್ರಿಟಿಷರ ಆಡಳಿತ ಕಾಲದಲ್ಲಿ ಪ್ರಚಾರಕ್ಕೆ ಬಂದ ಅನೇಕ ಅಧ್ಯಯನ ವಿಷಯಗಳ ಪ್ಯೆಕಿ ಪೌರಶಾಸ್ತ್ರವೂ ಒಂದು. ನಾಗರಿಕ ಜೀವನವನ್ನು ಭೋಧಿಸುವುದರ ಜೊತೆಗೆ ಬ್ರಿಟಿಷ್ ಪ್ರಭುತ್ವಕ್ಕೆ ವಿಧೇಯತೆಯನ್ನೂ ಆಗ ಮಕ್ಕಳಿಗೆ ಭೋಧಿಸಲಾಗುತ್ತಿತ್ತು. ಸ್ವತಂತ್ರ ಭಾರತದಲ್ಲಿ ಪೌರ ಹಕ್ಕು ಹಾಗೂ ಕರ್ತವ್ಯಗಳ ಜೊತೆಗೆ ಪ್ರಜಾತಂತ್ರಾತ್ಮಕ ವ್ಯವಸ್ಥೆಯ ಅಧ್ಯಯನಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಪ್ರಜಾಸತ್ತಾತ್ಮಕ ವಿಧಾನದ ಮೂಲಕ ಸಮಾಜವಾದ ಸ್ಥಾಪನೆಯ ಗುರಿಯನ್ನುಳ್ಳ ಭಾರತ ಸಂವಿಧಾನದ ವ್ಯೆಶಿಷ್ಟ್ಯದ ಕಡೆಗೆ ವಿದ್ಯಾರ್ಥಿಗಳ ಮನಸ್ಸನ್ನು ತಿರುಗಿಸಲಾಗಿದೆ. ಜಾತ್ಯತೀತ ಅಥವಾ ಲೌಕಿಕ ಪರಿಕಲ್ಪನೆ ಇಲ್ಲಿ ಪ್ರಧಾನ.
ಪೌರಶಾಸ್ತ್ರದ ಅಧ್ಯಯನದಲ್ಲಿ ಆಯಾ ದೇಶದ ಆಡಳಿತ ಪದ್ದತಿಯನ್ನೇ ಪ್ರಧಾನವಾಗಿ ಎತ್ತಿ ಹಿಡಿಯುವುದು ಸಾಮಾನ್ಯ. ಸರ್ವಾಧಿಕಾರಿ ಅಥವಾ ಸಮಾಜವಾದಿ ಸರ್ಕಾರ ಇರುವ ದೇಶದಲ್ಲಿ ಆ ಸರಕಾರ ಪ್ರತಿನಿಧಿಸುವ ಮೌಲ್ಯಗಳನ್ನೇ ವಿಶಿಷ್ಟವಾಗಿ ಬೋಧಿಸಲಾಗುತ್ತದೆ. ಆದಾಗ್ಯೂ ನಾಗರಿಕ ವ್ಯಕ್ತಿಯ ಸಂಘಜೀವನ, ಅವನ ಹೊಣೆಗಳು ಹಾಗೂ ಕರ್ತವ್ಯಗಳು ಮುಂತಾದ ವಿಚಾರಗಳು ಎಲ್ಲ ದೇಶಗಳ ಪೌರಶಾಸ್ತ್ರ ವ್ಯಾಸಂಗ ಕ್ರಮಗಳಲ್ಲಿಯೂ ಸಾಮಾನ್ಯವಾಗಿರುವುದುಂಟು.
ಉಲ್ಲೇಖಗಳು
ಬದಲಾಯಿಸಿ- ↑ Kennedy, Kerry (1997). Citizenship Education And The Modern State. Washington, D.C: Taylor & Francis. p. 6. ISBN 978-1-136-36864-6. OCLC 820719540. Retrieved 1 December 2018.